1. ಮಾನವರೇ, ನಿಮ್ಮ ಒಡೆಯನಿಗೆ ಅಂಜಿರಿ. ಅಂತಿಮ ಘಳಿಗೆಯ ಆ ಕಂಪನವು ನಿಜಕ್ಕೂ ಮಹಾ ಘಟನೆಯಾಗಿರುವುದು.
2. ಅಂದು ನೀವು ಕಾಣುವಿರಿ; ಹಾಲುಣಿಸುವ ಪ್ರತಿಯೊಬ್ಬಳು (ತಾಯಿ) ತಾನು ಹಾಳುಣಿಸುತ್ತಿದ್ದುದನ್ನು (ತನ್ನ ಮಗುವನ್ನು) ಮರೆತು ಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯು ತನ್ನ ಗರ್ಭವನ್ನು ಬೀಳಿಸುವಳು ಮತ್ತು ನಿಮಗೆ, ಜನರು ಅಮಲಿನಲ್ಲಿರುವಂತೆ ಕಾಣುವರು. ಆದರೆ ಅವರು ಅಮಲಿನಲ್ಲಿರಲಾರರು. ನಿಜವಾಗಿ ಅಲ್ಲಾಹನ ಶಿಕ್ಷೆಯು ಅಷ್ಟು ಕಠೋರವಾಗಿರುವುದು.
3. ಜನರಲ್ಲಿ ಕೆಲವರು ಜ್ಞಾನವೇನೂ ಇಲ್ಲದೆ, ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ ಮತ್ತು ಪ್ರತಿಯೊಬ್ಬ ವಿದ್ರೋಹಿ ಶೈತಾನನನ್ನು ಅನುಕರಿಸುತ್ತಾರೆ.4. ಅವನ (ಶೈತಾನನ) ಕುರಿತು, ಅವನು ತನ್ನ ಮಿತ್ರರಾಗುವ ಎಲ್ಲರನ್ನೂ ದಾರಿಗೆಡಿಸುವನು ಮತ್ತು ಅವರನ್ನು ನರಕದ ಶಿಕ್ಷೆಯೆಡೆಗೆ ಮುನ್ನಡೆಸುವನು ಎಂದು ವಿಧಿಸಲಾಗಿದೆ.
5. ಮಾನವರೇ, ಮತ್ತೆ ಜೀವಂತವಾಗುವ ಕುರಿತು ನಿಮಗೆ ಸಂಶಯವಿದ್ದರೆ (ನಿಮಗೆ ತಿಳಿದಿರಲಿ); ನಿಮಗೆ (ನಮ್ಮ ಸಾಮರ್ಥ್ಯವನ್ನು) ವಿವರಿಸಲಿಕ್ಕಾಗಿ, ನಾವು ನಿಮ್ಮನ್ನು ಮಣ್ಣಿನಿಂದ, ಆ ಬಳಿಕ ವೀರ್ಯದಿಂದ, ಆ ಬಳಿಕ ರಕ್ತಪಿಂಡದಿಂದ ಮತ್ತು ಆ ಬಳಿಕ ಮಾಂಸಪಿಂಡದಿಂದ, ಪೂರ್ಣವಾಗಿಯೂ ಅಪೂರ್ಣವಾಗಿಯೂ ಸೃಷ್ಟಿಸಿರುವೆವು. ನಾವು, ನಾವಿಚ್ಛಿಸಿದ್ದನ್ನು ಒಂದು ನಿರ್ದಿಷ್ಟ ಕಾಲದ ವರೆಗೆ ಗರ್ಭಗಳೊಳಗೆ ತಡೆದಿಡುತ್ತೇವೆ. ತರುವಾಯ, ನಿಮ್ಮನ್ನು ಶಿಶುಗಳಾಗಿ ಹೊರ ತರುತ್ತೇವೆ (ಮತ್ತು) ನೀವು ನಿಮ್ಮ ಯವ್ವನವನ್ನು ತಲುಪುವಂತೆ (ಮಾಡುತ್ತೇವೆ). ಅನಂತರ ನಿಮ್ಮಲ್ಲಿ ಕೆಲವರು ಮೃತರಾಗುತ್ತಾರೆ ಮತ್ತು ಕೆಲವರು, ಬಹಳಷ್ಟು ಅರಿತ ಬಳಿಕ ಮತ್ತೆ ಏನನ್ನೂ ಅರಿತಿಲ್ಲದ, ಅತಿ ವೃಧ್ಧಾಪ್ಯದ ಸ್ಥಿತಿಗೆ ತಲುಪುತ್ತಾರೆ. ಮತ್ತು ನೀವು ಒಣಗಿದ ನೆಲವನ್ನು ಕಾಣುತ್ತೀರಿ. ನಾವು ಅದರ ಮೇಲೆ ನೀರನ್ನು ಸುರಿಸಿದಾಗ ಅದು ಜೀವಂತವಾಗಿ ಅರಳತೊಡಗುತ್ತದೆ ಮತ್ತು ಅದು ಎಲ್ಲ ತರದ ಮುದ್ದಾದ ಬೆಳೆಗಳನ್ನು ಬೆಳೆಯುತ್ತದೆ.
6. ಏಕೆಂದರೆ, ಅಲ್ಲಾಹನೇ ಸತ್ಯವಾಗಿದ್ದಾನೆ ಮತ್ತು ಅವನೇ ನಿರ್ಜೀವಿಗಳನ್ನು ಜೀವಂತಗೊಳಿಸುವವನು ಮತ್ತು ಅವನೇ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.
7. ಆ ನಿರ್ಣಾಯಕ ಘಳಿಗೆಯು ಖಂಡಿತ ಬರಲಿದೆ. ಅದರಲ್ಲಿ ಸಂದೇಹವೇ ಇಲ್ಲ. ಇನ್ನು, ಗೋರಿಗಳೊಳಗೆ ಇರುವವರನ್ನೆಲ್ಲಾ ಅಲ್ಲಾಹನು ಮತ್ತೆ ಜೀವಂತಗೊಳಿಸಿ ಎಬ್ಬಿಸಲಿರುವನು.
8. ಜನರಲ್ಲಿ ಕೆಲವರು, ಯಾವುದೇ ಜ್ಞಾನವಾಗಲಿ ಮಾರ್ಗದರ್ಶನವಾಗಲಿ, ಉಜ್ವಲ ಗ್ರಂಥವಾಗಲಿ ಇಲ್ಲದೆಯೇ ಅಲ್ಲಾಹನ ಕುರಿತು ಜಗಳಾಡುತ್ತಾರೆ.
9. ಅಹಂಕಾರದಿಂದ ಕೊರಳು ಸೆಟೆದುಕೊಂಡಿರುವ ಅವರು, ಜನರನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಲು ಶ್ರಮಿಸುತ್ತಾರೆ. ಅಂಥವನಿಗೆ ಈ ಲೋಕದಲ್ಲೂ ಅಪಮಾನವಿದೆ ಮತ್ತು ಪುನರುತ್ಥಾನ ದಿನ ನಾವು ಅವನಿಗೆ ಭುಗಿಲೇಳುವ ಬೆಂಕಿಯ ರುಚಿ ಉಣಿಸಲಿದ್ದೇವೆ.
10. ‘‘ನಿನ್ನ ಕೈಗಳು ಮುಂದೆ ಕಳಿಸಿದ ಕರ್ಮಗಳೇ ಇದಕ್ಕೆ ಕಾರಣ. ಅಲ್ಲಾಹನು ಖಂಡಿತ ತನ್ನ ದಾಸರ ಮೇಲೆ ಅಕ್ರಮ ವೆಸಗುವವನಲ್ಲ’’ (ಎಂದು ಅವನೊಡನೆ ಹೇಳಲಾಗುವುದು).
11. ಜನರಲ್ಲೊಬ್ಬನು ಅಂಚಿನಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುತ್ತಾನೆ. ಅದರಿಂದ ಅವನಿಗೇನಾದರೂ ಹಿತವಾದರೆ ಅಷ್ಟಕ್ಕೇ ತೃಪ್ತನಾಗಿ ಬಿಡುತ್ತಾನೆ. ಆದರೆ ಅವನಿಗೇನಾದರೂ ಪರೀಕ್ಷೆ ಎದುರಾದರೆ ಅವನು (ಅಲ್ಲಾಹನಿಂದ) ಮುಖ ತಿರುಗಿಸಿ ನಿಲ್ಲುತ್ತಾನೆ. ಅವನು ಇಹಲೋಕವನ್ನೂ ಕಳೆದುಕೊಂಡನು, ಪರಲೋಕವನ್ನೂ ಕಳೆದುಕೊಂಡನು. ಅತ್ಯಂತ ಸ್ಪಷ್ಟ ನಷ್ಟವಿದು.
12. (ತರುವಾಯ) ಅವನು, ಅಲ್ಲಾಹನನ್ನು ಬಿಟ್ಟು, ತನಗೆ ಯಾವುದೇ ನಷ್ಟವನ್ನುಂಟು ಮಾಡಲಾಗದವರನ್ನು ಹಾಗೂ ತನಗೆ ಯಾವುದೇ ಲಾಭವನ್ನು ಮಾಡಲಾಗದವರನ್ನು ಕರೆದು ಪ್ರಾರ್ಥಿಸಲಾರಂಭಿಸುತ್ತಾನೆ. ಇದು ತೀರಾ ನಿಕೃಷ್ಟ ಮಟ್ಟದ ದಾರಿಗೇಡಿತನ.
13. ಹಾಗೆಯೇ ಅವನು, ಯಾರ ಲಾಭಕ್ಕಿಂತ ನಷ್ಟವು ಹೆಚ್ಚು ನಿಕಟವಾಗಿದೆಯೋ ಅಂಥವನಿಗೆ ಮೊರೆ ಇಡುತ್ತಾನೆ. ಅವರು ಎಷ್ಟೊಂದು ಕೆಟ್ಟ ಪೋಷಕರು ಮತ್ತು ಅವರು ಎಷ್ಟೊಂದು ಕೆಟ್ಟ ಸಂಗಾತಿಗಳು!
14. ಸತ್ಯದಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವರನ್ನು ಅಲ್ಲಾಹನು ಖಂಡಿತವಾಗಿಯೂ ಸ್ವರ್ಗಗಳೊಳಗೆ ಸೇರಿಸುವನು. ಅವುಗಳ ತಳದಲ್ಲಿ ನದಿಗಳು ಹರಿಯುತ್ತಿರುವವು. ಅಲ್ಲಾಹನಂತು ತಾನಿಚ್ಛಿಸಿದ್ದನ್ನು ಮಾಡಬಲ್ಲನು.
15. ಈ ಲೋಕದಲ್ಲೂ ಪರಲೋಕದಲ್ಲೂ ಅಲ್ಲಾಹನು ತನಗೆ ನೆರವಾಗಲಾರನೆಂದು ತೀರ್ಮಾನಿಸಿಕೊಂಡವನು, ಆಕಾಶಕ್ಕೆ ಒಂದು ಹಗ್ಗವನ್ನು ಕಟ್ಟಿ ಅದನ್ನು ಕಡಿದು ಹಾಕಲಿ ಮತ್ತು ತನ್ನ (ಈ) ಕಾರ್ಯಾಚರಣೆಯು ತನ್ನ ಹತಾಶೆಯನ್ನು ನಿವಾರಿಸುವುದೋ ಎಂದು ನೋಡಲಿ.
16. ಈ ರೀತಿ ನಾವು ಇದನ್ನು (ಕುರ್ಆನನ್ನು) ಸುಸ್ಪಷ್ಟ ವಚನಗಳೊಂದಿಗೆ ಇಳಿಸಿ ಕೊಟ್ಟಿರುವೆವು. ಮಾರ್ಗದರ್ಶನವನ್ನು ಅಲ್ಲಾಹನೇ ತಾನಿಚ್ಛಿಸಿದವರಿಗೆ ನೀಡುತ್ತಾನೆ.
17. ಖಂಡಿತವಾಗಿಯೂ ವಿಶ್ವಾಸಿಗಳು, ಯಹೂದಿಗಳು, ಸಬಯನರು (ಯಹ್ಯಾರ ಸಮುದಾಯ), ನಸಾರಾಗಳು (ಕ್ರೈಸ್ತರು), ಮಜೂಸರು (ಅಗ್ನಿ ಪೂಜಕರು) ಮತ್ತು ಬಹುದೇವಾರಾಧಕರು – ಅವರೆಲ್ಲರ ನಡುವೆ ಅಲ್ಲಾಹನು ಪುನರುತ್ಥಾನ ದಿನ ತೀರ್ಪು ನೀಡುವನು. ಅಲ್ಲಾಹನು ಖಂಡಿತವಾಗಿಯೂ ಎಲ್ಲ ವಿಷಯಗಳಿಗೆ ಸ್ವತಃ ಸಾಕ್ಷಿಯಾಗಿರುವನು.
18.ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ – ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ಗಿಡಮರಗಳು, ಜಾನುವಾರುಗಳು ಮತ್ತು ಹೆಚ್ಚಿನ ಮಾನವರು ಅಲ್ಲಾಹನಿಗೇ ಸಾಷ್ಟಾಂಗವೆರಗುತ್ತಾರೆಂಬುದನ್ನು ನೀವು ನೋಡಲಿಲ್ಲವೇ? ಹಲವರ ಮೇಲೆ ಶಿಕ್ಷೆಯು (ಈಗಾಗಲೇ) ಕಡ್ಡಾಯವಾಗಿ ಬಿಟ್ಟಿದೆ. ಅಲ್ಲಾಹನು ಅಪಮಾನಿಸಿದವನನ್ನು ಗೌರವಾನ್ವಿತನಾಗಿಸಬಲ್ಲವರು ಯಾರೂ ಇಲ್ಲ. ಅಲ್ಲಾಹನು ತಾನಿಚ್ಛಿಸಿದ್ದನ್ನೇ ಮಾಡುತ್ತಾನೆ.
19. (ನೋಡಿರಿ;) ಆ ಎರಡು ಗುಂಪುಗಳು ತಮ್ಮ ಒಡೆಯನ ವಿಷಯದಲ್ಲಿ ಜಗಳಾಡಿದವು. (ಅವರ ಪೈಕಿ) ಧಿಕ್ಕಾರಿಗಳಿಗಾಗಿ ನರಕಾಗ್ನಿಯ ಉಡುಗೆಯನ್ನು ಕತ್ತರಿಸಿಡಲಾಗಿದೆ. ಕುದಿಯುವ ನೀರನ್ನು ಅವರ ತಲೆಗಳ ಮೇಲೆ ಸುರಿಯಲಾಗುವುದು.
20. ಅದರಿಂದಾಗಿ ಅವರ ಹೊಟ್ಟೆಗಳಲ್ಲಿರುವ ಎಲ್ಲವೂ ಮತ್ತು ಅವರ ಚರ್ಮಗಳೂ ಸುಟ್ಟು ಹೋಗುವವು.
21. ಅವರಿಗಾಗಿ ಉಕ್ಕಿನ ಸುತ್ತಿಗೆಗಳಿವೆ.
22. ಅಲ್ಲಿನ ಸಂಕಟ ಸಹಿಸಲಾಗದೆ ಅವರು ಅಲ್ಲಿಂದ ಹೊರ ಬರಲು ಹೊರಟಾಗಲೆಲ್ಲಾ ‘‘ಸುಡುವ ಶಿಕ್ಷೆಯನ್ನು ಸವಿಯಿರಿ’’ (ಎನ್ನುತ್ತಾ) ಅವರನ್ನು ಮತ್ತೆ ಅಲ್ಲಿಗೇ ಮರಳಿಸಲಾಗುವುದು.
23. ವಿಶ್ವಾಸಿಗಳನ್ನು ಹಾಗೂ ಸತ್ಕರ್ಮಿಗಳನ್ನು ಅಲ್ಲಾಹನು ಖಂಡಿತವಾಗಿಯೂ, ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿಗೆ ಸೇರಿಸುವನು. ಅದರಲ್ಲಿ ಅವರಿಗೆ ಚಿನ್ನದ ಹಾಗೂ ಮುತ್ತಿನ ಬಳೆಗಳನ್ನು ತೊಡಿಸಲಾಗುವುದು. ಅಲ್ಲಿ ಅವರ ಉಡುಗೆಯು ರೇಶ್ಮೆಯದ್ದಾಗಿರುವುದು.
24. ಅವರಿಗೆ ಶುದ್ಧ ಮಾತಿನೆಡೆಗೆ ಮಾರ್ಗದರ್ಶನ ನೀಡಲಾಗಿತ್ತು ಮತ್ತು ಪ್ರಶಂಸಾರ್ಹನಾದವನ (ಅಲ್ಲಾಹನ) ಮಾರ್ಗದೆಡೆಗೆ ಅವರನ್ನು ಮುನ್ನಡೆಸಲಾಗಿತ್ತು.
25. ಧಿಕ್ಕಾರಿಗಳು ಮತ್ತು ಅಲ್ಲಾಹನ ಮಾರ್ಗದಿಂದಲೂ, ಮಸ್ಜಿದುಲ್ ಹರಾಮ್ನಿಂದಲೂ ಜನರನ್ನು ತಡೆಯುವವರು (ಶಿಕ್ಷಾರ್ಹರು). ಅದರಲ್ಲಿ (ಮಸ್ಜಿದುಲ್ ಹರಾಮ್ನಲ್ಲಿ), ಅದರೊಳಗೆ ತಂಗಿರುವವರೂ ಹೊರಗಿನಿಂದ ಬರುವ ಎಲ್ಲ ಜನರೂ ಸಮಾನರು ಎಂದು ನಾವು ವಿಧಿಸಿರುವೆವು. ಅಲ್ಲಿ ಅಕ್ರಮವಾಗಿ ಅಧರ್ಮವನ್ನು ಆಚರಿಸಲು ಹೊರಟವನಿಗೆ ನಾವು ಯಾತನಾಮಯ ಶಿಕ್ಷೆಯ ರುಚಿ ಉಣಿಸಲಿದ್ದೇವೆ.
26. ಮತ್ತು ನಾವು ಆ ಭವನ (ಕಾಬಾ)ವನ್ನು ಇಬ್ರಾಹೀಮರ ನೆಲೆಯಾಗಿಸಿದಾಗ (ಅವರಿಗೆ ಹೀಗೆಂದು ಆದೇಶಿಸಿದ್ದೆವು); ನೀವು ಏನನ್ನೂ ನನ್ನ ಜೊತೆ ಪಾಲುಗೊಳಿಸಬಾರದು ಮತ್ತು ಪ್ರದಕ್ಷಿಣೆ ಮಾಡುವವರಿಗಾಗಿ, (ಪ್ರಾರ್ಥನೆಗೆಂದು) ನಿಲ್ಲುವವರಿಗಾಗಿ, ಬಾಗುವವರಿಗಾಗಿ ಮತ್ತು ಸಾಷ್ಟಾಂಗ ಎರಗುವವರಿಗಾಗಿ ನನ್ನ ಭವನವನ್ನು ಶುಚಿಯಾಗಿಡಿರಿ.
27. ಮತ್ತು ನೀವು ಜನರಿಗೆ ‘ಹಜ್ಜ್’ನ ಕರೆ ನೀಡಿರಿ. ಅವರು ನಡೆಯುತ್ತಲೂ, ದೂರದ ದಾರಿಗಳನ್ನು ಕ್ರಮಿಸಿ ಬರುವ ಕ್ಷೀಣ ಒಂಟೆಗಳನ್ನೇರಿಯೂ ನಿಮ್ಮ ಬಳಿಗೆ ಬರುವರು –
28. – ತಮಗೆ ಲಾಭದಾಯಕವಾದವುಗಳನ್ನು ಕಾಣಲಿಕ್ಕಾಗಿ ಹಾಗೂ ಅವರಿಗೆ ನಾವು ದಯಪಾಲಿಸಿರುವ ಜಾನುವಾರುಗಳನ್ನು, ಕೆಲವು ನಿರ್ದಿಷ್ಟ ದಿನಗಳಲ್ಲಿ, ಅಲ್ಲಾಹನ ಹೆಸರಲ್ಲಿ ಬಲಿಯರ್ಪಿಸಲಿಕ್ಕಾಗಿ. ಅದರಿಂದ ನೀವೂ ತಿನ್ನಿರಿ ಮತ್ತು ಬಡ ಬಗ್ಗರಿಗೂ ತಿನ್ನಿಸಿರಿ.
29. ತರುವಾಯ ಅವರು ತಮ್ಮ ಮಾಲಿನ್ಯಗಳಿಂದ ಮುಕ್ತರಾಗಲಿ, ತಮ್ಮ ಹರಕೆಗಳನ್ನು ಪೂರ್ತಿಗೊಳಿಸಲಿ ಮತ್ತು ಅತ್ಯಂತ ಪ್ರಾಚೀನವಾದ ಆ ಭವನದ ಪ್ರದಕ್ಷಿಣೆ ಮಾಡಲಿ.
30. ಇದುವೇ (ದೇವಾದೇಶ). ಅಲ್ಲಾಹನ ಸಂಕೇತಗಳನ್ನು ಗೌರವಿಸುವಾತನ ಪಾಲಿಗೆ, ಅವನ ಒಡೆಯನ ಬಳಿ ಅದುವೇ ಉತ್ತಮವಾಗಿರುವುದು. (ನಿಷಿದ್ಧವೆಂದು) ನಿಮಗೆ ಓದಿ ತಿಳಿಸಲಾದವುಗಳ ಹೊರತು ಉಳಿದೆಲ್ಲ ಜಾನುವಾರುಗಳನ್ನು ನಿಮಗೆ ಸಮ್ಮತಗೊಳಿಸಲಾಗಿದೆ. ನೀವು ವಿಗ್ರಹಗಳ ಮಾಲಿನ್ಯದಿಂದ ದೂರವಿರಿ ಮತ್ತು ಸುಳ್ಳು ಮಾತಿನಿಂದ ದೂರವಿರಿ.
31. ಅಲ್ಲಾಹನಿಗೆ ಸಂಪೂರ್ಣ ನಿಷ್ಠರಾಗಿರಿ ಮತ್ತು ಯಾರನ್ನೂ ಅವನ ಪಾಲುದಾರರಾಗಿಸಬೇಡಿ. ಅಲ್ಲಾಹನ ಜೊತೆಗೆ ಇತರರನ್ನು ಪಾಲುದಾರರಾಗಿಸಿದವನ ಸ್ಥಿತಿಯು ಬಾನಿನಿಂದ ಬಿದ್ದು ಬಿಟ್ಟವನಂತಿರುತ್ತದೆ. ಹದ್ದುಗಳು ಅವನನ್ನು ಹೆಕ್ಕಿಕೊಂಡು ಹೋಗುತ್ತವೆ ಅಥವಾ ಗಾಳಿಯು ಅವನನ್ನು ಯಾವುದಾದರೂ ದೂರದ ಪ್ರದೇಶಕ್ಕೆ ಎಸೆದು ಬಿಡುತ್ತದೆ.
32. ಇದುವೇ (ದೇವಾದೇಶ). ಅಲ್ಲಾಹನ ಸಂಕೇತಗಳನ್ನು ಗೌರವಿಸುವುದು, ಮನದೊಳಗಿನ ಧರ್ಮನಿಷ್ಠೆಯ ಭಾಗವಾಗಿದೆ.
33. ಒಂದು ನಿರ್ದಿಷ್ಟ ಕಾಲದ ವರೆಗೆ ಅವು (ಆ ಜಾನುವಾರು)ಗಳಿಂದ ನೀವು ಲಾಭ ಪಡೆಯಬಹುದು. ಆ ಬಳಿಕ, (ಅಲ್ಲಾಹನ) ಪ್ರಾಚೀನ ಭವನವೇ ಅವುಗಳ ನೆಲೆಯಾಗಿದೆ.
34. ನಾವು ಅವರಿಗೆ ದಯಪಾಲಿಸಿರುವ ಜಾನುವಾರುಗಳನ್ನು ಅವರು ಅಲ್ಲಾಹನ ನಾಮದಲ್ಲಿ ಬಲಿಯರ್ಪಿಸಬೇಕೆಂದು, ನಾವು ಪ್ರತಿಯೊಂದು ಸಮುದಾಯಕ್ಕೂ ಬಲಿದಾನದ ಒಂದು ನಿಯಮವನ್ನು ನಿಶ್ಚಯಿಸಿರುವೆವು. ಆ ಏಕಮಾತ್ರ ದೇವನೇ ನಿಮ್ಮ ದೇವನು. ನೀವು ಅವನಿಗೇ ಶರಣಾಗಿರಿ ಮತ್ತು ಮನಸಾರೆ (ಅಲ್ಲಾಹನ ಮುಂದೆ) ತಲೆಬಾಗುವವರಿಗೆ ಶುಭವಾರ್ತೆ ನೀಡಿರಿ.
35. ಅವರ ಮುಂದೆ ಅಲ್ಲಾಹನನ್ನು ಪ್ರಸ್ತಾಪಿಸಿದೊಡನೆ ಅವರ ಮನಸ್ಸುಗಳು ನಡುಗುತ್ತವೆ ಮತ್ತು ತಮಗೆ ವಿಪತ್ತುಗಳು ಎದುರಾದಾಗ ಅವರು ಸಹನಶೀಲರಾಗಿರುತ್ತಾರೆ. ಅವರು ನಮಾಝ್ಅನ್ನು ಪಾಲಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದನ್ನು ಖರ್ಚುಮಾಡುತ್ತಾರೆ.
36. ಇನ್ನು, ಬಲಿದಾನದ ಒಂಟೆಗಳನ್ನು ನಾವು ನಿಮ್ಮ ಪಾಲಿಗೆ ಅಲ್ಲಾಹನ ಸಂಕೇತಗಳಾಗಿ ಮಾಡಿರುವೆವು. ಅವುಗಳಲ್ಲಿ ನಿಮಗೆ ಹಿತವಿದೆ. ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಿರಿ (ಅವನ ನಾಮದಲ್ಲಿ ಅವುಗಳನ್ನು ಬಲಿ ನೀಡಿರಿ). ಕೊನೆಗೆ, ಅವುಗಳು ಕುಸಿದು ಬಿದ್ದಾಗ ಅವುಗಳಿಂದ ನೀವೂ ತಿನ್ನಿರಿ ಮತ್ತು ಬಡವರಿಗೂ ಭಿಕ್ಷುಕರಿಗೂ ತಿನ್ನಿಸಿರಿ. ಈ ರೀತಿ, ನೀವು ಕೃತಜ್ಞರಾಗಬೇಕೆಂದು, ನಾವು ಅವುಗಳನ್ನು ನಿಮಗೆ ಅಧೀನಗೊಳಿಸಿರುವೆವು.
37. ಅವುಗಳ (ಬಲಿಪ್ರಾಣಿಗಳ) ಮಾಂಸವಾಗಲಿ ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು (ನಿಮ್ಮ) ಧರ್ಮನಿಷ್ಠೆ ಮಾತ್ರ. ಈ ರೀತಿ, ನಿಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನೀವು ಅಲ್ಲಾಹನ ಮಹಿಮೆಯನ್ನು ಕೊಂಡಾಡಬೇಕೆಂದು, ನಾವು ಅವುಗಳನ್ನು ನಿಮಗೆ ಅಧೀನಗೊಳಿಸಿರುವೆವು. ಸತ್ಕರ್ಮಿಗಳಿಗೆ ಶುಭವಾರ್ತೆ ನೀಡಿರಿ.
38. ಖಂಡಿತವಾಗಿಯೂ, ವಿಶ್ವಾಸಿಗಳ ಪರವಾಗಿ ರಕ್ಷಣಾಕಾರ್ಯವನ್ನು ಅಲ್ಲಾಹನೇ ಮಾಡುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಯಾವುದೇ ವಂಚಕ, ಕೃತಘ್ನನನ್ನು ಮೆಚ್ಚುವುದಿಲ್ಲ.
39. ಯಾರ ವಿರುದ್ಧ ಯುದ್ಧ ಹೂಡಲಾಗಿತ್ತೋ ಅವರಿಗೆ (ಯುದ್ಧ ಹೂಡುವ) ಅನುಮತಿ ನೀಡಲಾಗಿದೆ. ಏಕೆಂದರೆ ಅವರ ಮೇಲೆ ಅಕ್ರಮ ನಡೆದಿದೆ. ಅವರಿಗೆ ನೆರವಾಗಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ.
40. ಅವರು, ‘‘ಅಲ್ಲಾಹನೇ ನಮ್ಮೊಡೆಯ’’ ಎಂದಷ್ಟೇ ಹೇಳಿದ ಕಾರಣಕ್ಕಾಗಿ, ಅನ್ಯಾಯವಾಗಿ ಅವರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಒಂದು ವೇಳೆ ಅಲ್ಲಾಹನು ಕೆಲವು ಜನರ ಮೂಲಕ ಮತ್ತೆ ಕೆಲವರನ್ನು ತೊಲಗಿಸದೆ ಇದ್ದಿದ್ದರೆ (ವಿರಕ್ತರ) ಆಶ್ರಮಗಳನ್ನು, (ಕ್ರೈಸ್ತರ) ಇಗರ್ಜಿಗಳನ್ನು, (ಯಹೂದ್ಯರ) ಪ್ರಾರ್ಥನಾಲಯಗಳನ್ನು ಮತ್ತು ಧಾರಾಳವಾಗಿ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವ ಮಸೀದಿಗಳನ್ನು ಕೆಡವಿ ಹಾಕಲಾಗುತ್ತಿತ್ತು. ತನಗೆ ನೆರವಾಗುವಾತನಿಗೆ ಅಲ್ಲಾಹನು ಖಂಡಿತ ನೆರವಾಗುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ತುಂಬಾ ಶಕ್ತಿಶಾಲಿಯೂ ಪ್ರಬಲನೂ ಆಗಿದ್ದಾನೆ.
41. ನಾವು ಅವರಿಗೆ (ನಿಷ್ಠ ದಾಸರಿಗೆ) ಭೂಮಿಯಲ್ಲಿ ಅಧಿಕಾರ ನೀಡಿದರೆ, ಅವರು ನಮಾಝ್ಅನ್ನು ಪಾಲಿಸುವರು, ಝಕಾತನ್ನು ಪಾವತಿಸುವರು, ಒಳಿತನ್ನು ಆದೇಶಿಸುವರು ಮತ್ತು ಕೆಡುಕಿನಿಂದ ತಡೆಯುವರು. ಎಲ್ಲ ವಿಷಯಗಳಲ್ಲೂ ಅಂತಿಮ ತೀರ್ಮಾನವು ಅಲ್ಲಾಹನದೇ.
42. (ದೂತರೇ,) ಅವರು ನಿಮ್ಮನ್ನು ಸುಳ್ಳುಗಾರನೆನ್ನುತ್ತಿದ್ದರೆ (ನಿಮಗೆ ತಿಳಿದಿರಲಿ;) ಅವರಿಗಿಂತ ಮುಂಚೆ ನೂಹರ ಜನಾಂಗದವರೂ, ಆದ್ ಮತ್ತು ಸಮೂದ್ ಜನಾಂಗದವರೂ ಹಾಗೆಯೇ ಹೇಳಿದ್ದರು.
43. ಇಬ್ರಾಹೀಮರ ಜನಾಂಗ ಹಾಗೂ ಲೂತ್ರ ಜನಾಂಗವೂ ಅಷ್ಟೇ.
44. ಮದ್ಯನ್ನವರೂ ಅಷ್ಟೇ. ಅತ್ತ, ಮೂಸಾರನ್ನೂ ಸುಳ್ಳುಗಾರನೆನ್ನಲಾಗಿತ್ತು. ನಾನು ಧಿಕ್ಕಾರಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಿ, ಆ ಬಳಿಕ ಅವರನ್ನು ಹಿಡಿದು ಬಿಟ್ಟೆನು. ನನ್ನನ್ನು ತಿರಸ್ಕರಿಸಿದ್ದರ ಪರಿಣಾಮವನ್ನು ನೋಡಿರಿ!
45. ಅಕ್ರಮಿಗಳ ಅದೆಷ್ಟೋ ನಾಡುಗಳನ್ನು ನಾವು ನಿರ್ನಾಮಗೊಳಿಸಿ ಬಿಟ್ಟೆವು. (ಇಂದು) ಅವು ತಮ್ಮದೇ ಚಪ್ಪರಗಳ ಮೇಲೆ (ಕವಚಿ) ಬಿದ್ದು ಕೊಂಡಿವೆ ಮತ್ತು ಅದೆಷ್ಟೋ ಬಾವಿಗಳು ಹಾಗೂ ಭದ್ರಕೋಟೆಗಳು ಪಾಳು ಬಿದ್ದಿವೆ.
46. ಅವರೇನು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಅವರ ಬಳಿ ಆಲೋಚಿಸುವ ಮನಸ್ಸುಗಳಿಲ್ಲವೇ? ಆಲಿಸುವ ಕಿವಿಗಳಿಲ್ಲವೇ? ನಿಜವಾಗಿ ಅವರ ಕಣ್ಣುಗಳು ಕುರುಡಾಗಿರುವುದಿಲ್ಲ – ಅವರ ಎದೆಗಳಲ್ಲಿರುವ ಹೃದಯಗಳು ಕುರುಡಾಗಿ ಬಿಟ್ಟಿವೆ.
47. ಅವರು ನಿಮ್ಮೊಡನೆ ಶಿಕ್ಷೆಗಾಗಿ ಆತುರ ಪಡುತ್ತಾರೆ. ಅಲ್ಲಾಹನು ಎಂದೂ ತಾನು ಕೊಟ್ಟ ಮಾತನ್ನು ತಪ್ಪುವುದಿಲ್ಲ. ಆದರೆ ನಿಮ್ಮ ಒಡೆಯನ ಬಳಿ ಒಂದು ದಿನವೆಂಬುದು ನಿಮ್ಮ ಎಣಿಕೆಯ ಸಾವಿರ ವರ್ಷಗಳಿಗೆ ಸಮಾನವಾಗಿದೆ.
48. ಅಕ್ರಮಿಗಳಾಗಿದ್ದ ಅದೆಷ್ಟೋ ನಾಡುಗಳಿಗೆ ನಾವು ಕಾಲಾವಕಾಶ ನೀಡಿದ್ದೆವು. ಆ ಬಳಿಕ ನಾವು ಅವರನ್ನು ಹಿಡಿದುಕೊಂಡೆವು. (ಕೊನೆಗೆ ಎಲ್ಲರೂ) ನನ್ನೆಡೆಗೇ ಮರಳಬೇಕು.
49. ಹೇಳಿರಿ; ಮಾನವರೇ, ನಾನು ನಿಮಗೆ ಸ್ಪಷ್ಟ ಎಚ್ಚರಿಕೆ ನೀಡುವವನಾಗಿದ್ದೇನೆ.
50. ಧರ್ಮದಲ್ಲಿ ನಂಬಿಕೆ ಉಳ್ಳವರು ಮತ್ತು ಸತ್ಕರ್ಮಮಾಡುವವರಿಗೆ ಕ್ಷಮೆ ಹಾಗೂ ಗೌರವಾನ್ವಿತ ಲೌಕಿಕ ಸಂಪತ್ತೂ ಸಿಗಲಿದೆ.
51. ನಮ್ಮ ವಚನಗಳನ್ನು ಸೋಲಿಸಲು ಹೆಣಗಾಡಿದವರು ನರಕವಾಸಿಗಳಾಗುವರು.
52. ನಿಮಗಿಂತ ಮುಂಚೆಯೂ ನಾವು ಕಳಿಸಿದ್ದ ದೇವ ದೂತರು ಹಾಗೂ ಪ್ರವಾದಿಗಳು ಏನಾದರೂ ಅಪೇಕ್ಷಿಸಿದಾಗಲೆಲ್ಲಾ ಶೈನಾನನು ಅವರ ಅಪೇಕ್ಷೆಗಳ ಜೊತೆ ಸಂಶಯವನ್ನು ಸೇರಿಸಿದ್ದಿದೆ. ಆದರೆ ಶೈತಾನನು ಸೇರಿಸಿದ್ದನ್ನು ಅಲ್ಲಾಹನು ಅಳಿಸಿಹಾಕುತ್ತಾನೆ ಮತ್ತು ಆ ಬಳಿಕ ಅಲ್ಲಾಹನು, (ಅವರ ಮನಸ್ಸುಗಳಲ್ಲಿ) ತನ್ನ ವಚನಗಳನ್ನು ಸ್ಥಿರಗೊಳಿಸುತ್ತಾನೆ. ಅಲ್ಲಾಹನು ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.
53. ಶೈತಾನನು ಬಿತ್ತಿದ್ದನ್ನು ಅವನು (ಅಲ್ಲಾಹನು) ಮನಸ್ಸುಗಳಲ್ಲಿ ರೋಗವಿರುವವರ ಹಾಗೂ ಕಠೋರ ಮನಸ್ಸಿನವರ ಪಾಲಿಗೆ ಪರೀಕ್ಷೆಯಾಗಿಸುತ್ತಾನೆ. ಖಂಡಿತವಾಗಿಯೂ ಅಕ್ರಮಿಗಳು ತಮ್ಮ ಉದ್ಧಟತನದಲ್ಲಿ ಬಹಳ ದೂರ ಸಾಗಿಬಿಟ್ಟಿದ್ದಾರೆ.
54. ಜ್ಞಾನವುಳ್ಳವರು, ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ ಎಂಬುದನ್ನು ಅರಿತು ಇದರಲ್ಲಿ ನಂಬಿಕೆ ಇಡಲಿ ಹಾಗೂ ಅವರ ಮನಸ್ಸುಗಳು ಇದರ ಪರ ಒಲಿಯಲಿ (ಎಂಬ ಉದ್ದೇಶದಿಂದ ಇದನ್ನೆಲ್ಲಾ ತಿಳಿಸಲಾಗುತ್ತಿದೆ). ಖಂಡಿತವಾಗಿಯೂ ಅಲ್ಲಾಹನೇ ವಿಶ್ವಾಸಿಗಳಿಗೆ ನೇರ ದಾರಿ ತೋರುವವನಾಗಿದ್ದಾನೆ.
55. ಆ (ಅಂತಿಮ) ಘಳಿಗೆಯು ಹಠಾತ್ತನೆ ತಮ್ಮ ಮೇಲೆ ಬಂದೆರಗುವ ತನಕ, ಅಥವಾ ಆ ಅನಿಷ್ಟ ದಿನದ ಶಿಕ್ಷೆಯು ತಮಗೆ ಎದುರಾಗಿ ಬಿಡುವ ತನಕ ಧಿಕ್ಕಾರಿಗಳು ಈ ವಿಷಯದಲ್ಲಿ ಸಂಶಯ ಪೀಡಿತರಾಗಿಯೇ ಇರುವರು.
56. ಅಂದು ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿರುವುದು. ಅವನು ಅವರ ನಡುವೆ ನ್ಯಾಯ ತೀರ್ಮಾನ ಮಾಡುವನು. ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನು ಮಾಡಿದವರು ಅನುಗ್ರಹ ಭರಿತ ತೋಟಗಳಲ್ಲಿರುವರು.
57. ಇನ್ನು ಧಿಕ್ಕಾರಿಗಳು ಮತ್ತು ನಮ್ಮ ವಚನಗಳನ್ನು ಸುಳ್ಳೆಂದವರು.ಅವರಿಗೆ, ಅಪಮಾನಾತ್ಮಕ ಶಿಕ್ಷೆ ಇದೆ.
58. ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದ ಹಾಗೂ ಆ ಬಳಿಕ ಹತರಾದ ಅಥವಾ ಮೃತರಾದವರಿಗೆ ಅಲ್ಲಾಹನು ಅತ್ಯುತ್ತಮ ಆಹಾರ ನೀಡಲಿದ್ದಾನೆ. ಖಂಡಿತವಾಗಿಯೂ ಅಲ್ಲಾಹನೇ ಅತ್ಯುತ್ತಮ ಅನ್ನದಾತನಾಗಿದ್ದಾನೆ.
59. ಅವನು ಅವರನ್ನು ಅವರು ಮೆಚ್ಚುವಲ್ಲಿಗೆ ತಲುಪಿಸುವನು. ಖಂಡಿತವಾಗಿಯೂ ಅಲ್ಲಾಹನು ಬಲ್ಲವನು ಮತ್ತು ಸಂಯಮಿಯಾಗಿದ್ದಾನೆ.
60. ಇದು (ಅವರ ವಿಷಯ). ಇನ್ನು, ತನಗೆ ನೀಡಲಾದಷ್ಟೇ ಹೊಡೆತವನ್ನು ತಿರುಗಿ ನೀಡಿದವನನ್ನು ಆ ಬಳಿಕ ಮತ್ತೆ ಮರ್ದಿಸಲಾದರೆ – ಅವನಿಗೆ ಅಲ್ಲಾಹನು ಖಂಡಿತ ನೆರವಾಗುವನು. ಅಲ್ಲಾಹನು ಖಂಡಿತ ಮನ್ನಿಸುವವನು ಹಾಗೂ ಕ್ಷಮಿಸುವವನಾಗಿದ್ದಾನೆ.
61. ಏಕೆಂದರೆ ಅಲ್ಲಾಹನು ಇರುಳನ್ನು ಹಗಲೊಳಗೆ ಸೇರಿಸುವವನು ಹಾಗೂ ಹಗಲನ್ನು ಇರುಳಿನೊಳಗೆ ಸೇರಿಸುವವನಾಗಿದ್ದಾನೆ. ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ.
62. ಹಾಗೆಯೇ, ಅಲ್ಲಾಹನೇ ಪರಮ ಸತ್ಯವಾಗಿದ್ದಾನೆ ಮತ್ತು ಅವರು ಅವನ ಹೊರತು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಾರೋ ಅವೆಲ್ಲಾ ಕೇವಲ ಮಿಥ್ಯಗಳು. ಅಲ್ಲಾಹನಂತು ಉನ್ನತ ಹಾಗೂ ಮಹಾನನಾಗಿದ್ದಾನೆ.
63. ನೀವು ಕಾಣಲಿಲ್ಲವೇ, ಅಲ್ಲಾಹನು ಆಕಾಶದಿಂದ ನೀರನ್ನು ಇಳಿಸಿದನು. ಅದರಿಂದ ಭೂಮಿಯು ಅರಳಿ ಹಸಿರಾಯಿತು. ಖಂಡಿತವಾಗಿಯೂ ಅಲ್ಲಾಹನು ಪರಮ ಉದಾರಿ ಹಾಗೂ ಸದಾ ಜಾಗೃತನಾಗಿದ್ದಾನೆ.
64. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನಿಗೇ ಸೇರಿದೆ. ಖಂಡಿತವಾಗಿಯೂ ಅಲ್ಲಾಹನು ನಿರಪೇಕ್ಷ ಹಾಗೂ ಪ್ರಶಂಸಾರ್ಹನಾಗಿದ್ದಾನೆ.
65. ನೀವು ಕಾಣಲಿಲ್ಲವೇ, ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ನಿಮಗೆ ಅಧೀನಗೊಳಿಸಿರುವನು ಮತ್ತು ಕಡಲಲ್ಲಿ ಹಡಗುಗಳು ಅವನ ಆದೇಶ ಪ್ರಕಾರವೇ ಚಲಿಸುತ್ತವೆ. ಅವನ ಅನುಮತಿ ಇಲ್ಲದೆ ಭೂಮಿಯ ಮೇಲೆ ಬೀಳದಂತೆ ಆಕಾಶವನ್ನು ಅವನೇ ಹಿಡಿದಿಟ್ಟಿರುವನು. ಖಂಡಿತವಾಗಿಯೂ ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರಿ ಹಾಗೂ ಕರುಣಾಳುವಾಗಿದ್ದಾನೆ.
66. ಅವನೇ ನಿಮ್ಮನ್ನು ಜೀವಂತಗೊಳಿಸಿರುವನು, ಅವನೇ ನಿಮ್ಮನ್ನು ಸಾಯಿಸುವನು ಮತ್ತು ಅವನೇ ನಿಮ್ಮನ್ನು ಪುನಃ ಜೀವಂತಗೊಳಿಸುವನು. ಮನುಷ್ಯನು ಖಂಡಿತ ಕೃತಘ್ನನು.
67. ನಾವು ಪ್ರತಿಯೊಂದು ಸಮುದಾಯಕ್ಕೂ ಒಂದು ಆರಾಧನಾ ಕ್ರಮವನ್ನು ನಿಶ್ಚಯಿಸಿರುವೆವು. ಅವರು ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ಅವರು ನಿಮ್ಮೊಡನೆ ಜಗಳಾಡದಿರಲಿ. ನೀವು (ಜನರನ್ನು) ನಿಮ್ಮ ಒಡೆಯನೆಡೆಗೆ ಕರೆಯಿರಿ. ನೀವು ಖಂಡಿತ ಸ್ಥಿರವಾದ ನೇರಮಾರ್ಗದಲ್ಲಿರುವಿರಿ.
68. ಅವರು ನಿಮ್ಮೊಡನೆ ಜಗಳಾಡಿದರೆ ‘‘ನೀವು ಮಾಡುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು’’ ಎನ್ನಿರಿ.
69. ನೀವು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲೂ ಪುನರುತ್ಥಾನ ದಿನ ಅಲ್ಲಾಹನು ನಿಮ್ಮ ನಡುವೆ ತೀರ್ಮಾನ ಮಾಡುವನು.
70. ನಿಮಗೆ ತಿಳಿದಿಲ್ಲವೇ, ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ಬಲ್ಲನು. ಇದು ಖಂಡಿತ ಒಂದು ಗ್ರಂಥದಲ್ಲಿದೆ. ಅಲ್ಲಾಹನಿಗೆ ಇದು ಖಂಡಿತ ಸುಲಭವಾಗಿದೆ.
71. ಅವರು ಅಲ್ಲಾಹನನ್ನು ಬಿಟ್ಟು, ಅವನು ಯಾರ ಪರವಾಗಿ ಯಾವುದೇ ಪುರಾವೆಯನ್ನಿಳಿಸಿಲ್ಲವೋ ಅವರನ್ನು ಮತ್ತು ತಮಗೆ ಯಾವುದೇ ತಿಳುವಳಿಕೆ ಇಲ್ಲದವರನ್ನು ಆರಾಧಿಸುತ್ತಾರೆ. (ಇಂತಹ) ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ.
72. ಧಿಕ್ಕಾರಿಗಳಿಗೆ ನಮ್ಮ ಸುಸ್ಪಷ್ಟವಾದ ವಚನಗಳನ್ನು ಓದಿ ಕೇಳಿಸಲಾದಾಗ ಅವರ ಮುಖಗಳಲ್ಲಿ ನೀವು ತಿರಸ್ಕಾರವನ್ನು ಕಾಣುತ್ತೀರಿ. ಅವರು, ತಮಗೆ ನಮ್ಮ ವಚನಗಳನ್ನು ಓದಿಕೇಳಿಸುತ್ತಿರುವವರ ಮೇಲೆಯೇ ಮುಗಿದು ಬೀಳುವರೋ ಎಂಬಂತಿರುತ್ತಾರೆ. ಹೇಳಿರಿ; ನಾನು ನಿಮಗೆ ಇದಕ್ಕಿಂತ ಕೆಟ್ಟದ್ದನ್ನು ತಿಳಿಸಲೇ? ನರಕಾಗ್ನಿ! ಅಲ್ಲಾಹನು ಧಿಕ್ಕಾರಿಗಳಿಗೆ ಅದನ್ನೇ ವಾಗ್ದಾನ ಮಾಡಿರುತ್ತಾನೆ. ಅದು ತೀರಾ ಕೆಟ್ಟ ನೆಲೆಯಾಗಿದೆ.
73. ಮಾನವರೇ, ನಿಮಗೊಂದು ಉದಾಹರಣೆ ನೀಡಲಾಗುತ್ತಿದೆ. ಅದನ್ನು ಆಲಿಸಿರಿ; ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಕೂಗಿ ಪ್ರಾರ್ಥಿಸುತ್ತೀರೋ ಅವರು ಖಂಡಿತ ಒಂದು ನೊಣವನ್ನು ಕೂಡಾ ಸೃಷ್ಟಿಸಲಾರರು. ಅದಕ್ಕಾಗಿ ಅವರೆಲ್ಲರೂ ಒಂದುಗೂಡಿದರೂ ಸರಿಯೇ. ಇನ್ನು, ಒಂದು ನೊಣವು ಅವರಿಂದ ಏನನ್ನಾದರೂ ಕಿತ್ತುಕೊಂಡರೆ ಅದನ್ನು ಅದರಿಂದ ಬಿಡಿಸಿಕೊಳ್ಳುವುದಕ್ಕೂ ಅವರಿಂದ ಸಾಧ್ಯವಿಲ್ಲ. ಅಪೇಕ್ಷಿಸುವವರೂ ದುರ್ಬಲರು ಮತ್ತು ಯಾರಿಂದ ಅಪೇಕ್ಷಿಸಲಾಗುತ್ತಿದೆಯೋ ಅವರೂ ದುರ್ಬಲರು.
74. ಅವರು ಗುರುತಿಸಬೇಕಾದ ರೀತಿಯಲ್ಲಿ ಅಲ್ಲಾಹನನ್ನು ಗುರುತಿಸಲಿಲ್ಲ. ಅಲ್ಲಾಹನು ಖಂಡಿತ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಬಲನಾಗಿದ್ದಾನೆ.
75. ಅಲ್ಲಾಹನು ಮಲಕ್ಗಳಿಂದಲೂ ಮಾನವರಿಂದಲೂ ದೂತರನ್ನು ಆರಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ.
76. ಅವರ ಮುಂದಿರುವ ಎಲ್ಲವನ್ನೂ ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಅಂತಿಮವಾಗಿ ಎಲ್ಲ ವಿಷಯಗಳು ಅಲ್ಲಾಹನೆಡೆಗೇ ಮರಳುತ್ತವೆ.
77. ವಿಶ್ವಾಸಿಗಳೇ, ನಿಮ್ಮ ಒಡೆಯನಿಗೆ ಬಾಗಿರಿ, ಸಾಷ್ಟಾಂಗವೆರಗಿರಿ ಹಾಗೂ ಅವನನ್ನು ಆರಾಧಿಸಿರಿ ಮತ್ತು ಸತ್ಕರ್ಮಗಳನ್ನು ಮಾಡಿರಿ. ನೀವು ವಿಜಯಿಗಳಾಗಬಹುದು.
78. ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ನಿಮ್ಮನ್ನು ಆರಿಸಿರುವನು ಮತ್ತು ಅವನು ಧರ್ಮದಲ್ಲಿ ನಿಮಗೆ ಯಾವುದೇ ಇಕ್ಕಟ್ಟನ್ನು ಇಟ್ಟಿಲ್ಲ. (ಅದುವೇ) ನಿಮ್ಮ ತಾತ ಇಬ್ರಾಹೀಮರ ಪಂಥ. ಅವನು (ಅಲ್ಲಾಹನು) ನಿಮ್ಮನ್ನು ಮುಸ್ಲಿಮರು ಎಂದು ಹೆಸರಿಸಿರುವನು. ಹಿಂದೆಯೂ, ಇದರಲ್ಲೂ (ಈ ಗ್ರಂಥದಲ್ಲೂ ಇದೇ ನಿಮ್ಮ ಹೆಸರು). ದೂತರು ನಿಮ್ಮ ಕುರಿತು ಸಾಕ್ಷಿಯಾಗಬೇಕು ಮತ್ತು ನೀವು ಮಾನವಕುಲದ ಕುರಿತು ಸಾಕ್ಷಿಯಾಗಬೇಕು. ನೀವಿನ್ನು ನಮಾಝನ್ನು ಪಾಲಿಸಿರಿ ಮತ್ತು ಝಕಾತನ್ನು ಪಾವತಿಸಿರಿ ಮತ್ತು ಪ್ರಬಲವಾಗಿ ಅಲ್ಲಾಹನನ್ನು ಅವಲಂಬಿಸಿರಿ. ಅವನೇ ನಿಮ್ಮ ಸಂರಕ್ಷಕನು. ಅವನು ಅತ್ಯುತ್ತಮ ಸಂರಕ್ಷಕನು ಮತ್ತು ಅತ್ಯುತ್ತಮ ಸಹಾಯಕನು.