24. An Nur

24. ಅನ್ನೂರ್ (ಪ್ರಕಾಶ)

ವಚನಗಳು – 64, ಮದೀನಃ

ಅಲ್ಲಾಹನ ಹೆಸರಿಂದ, ಅವನು ಅಪಾರ ದಯಾಳು, ಕರುಣಾಮಯಿ.

1.ಇದು ನಾವು (ಅಲ್ಲಾಹ್) ಇಳಿಸಿಕೊಟ್ಟಿರುವ ಒಂದು ಅಧ್ಯಾಯ. ನಾವೇ ಇದನ್ನು ವಿಧಿಸಿರುವೆವು. ಮತ್ತು ನೀವು ಚೆನ್ನಾಗಿ ನೆನಪಿಡಬೇಕೆಂದು ಇದರಲ್ಲಿ ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿಕೊಟ್ಟಿರುವೆವು.

  2. ವ್ಯಭಿಚಾರವೆಸಗಿದ ಸ್ತ್ರೀ ಮತ್ತು ವ್ಯಭಿಚಾರವೆಸಗಿದ ಪುರುಷ – ಅವರಲ್ಲಿ ಪ್ರತಿಯೊಬ್ಬರಿಗೂ ತಲಾ ನೂರು ಛಡಿ ಏಟುಗಳನ್ನು ಹೊಡೆಯಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅವರ ಮೇಲಿನ ಸಹಾನುಭೂತಿಯು ಅಲ್ಲಾಹನ ಧರ್ಮದ ವಿಷಯದಲ್ಲಿ ನಿಮ್ಮನ್ನು ತಡೆಯದಿರಲಿ ಮತ್ತು ಅವರ ಶಿಕ್ಷೆಯನ್ನು ವಿಶ್ವಾಸಿಗಳ ಒಂದು ಗುಂಪು ನೋಡಲಿ.

3. ವ್ಯಭಿಚಾರಿ ಪುರುಷನು ವ್ಯಭಿಚಾರಿ ಸ್ತ್ರೀಯನ್ನು ಅಥವಾ ಬಹುದೇವಾರಾಧಕಿಯನ್ನು ಮಾತ್ರ ವಿವಾಹವಾಗಲಿ. ಹಾಗೆಯೇ, ವ್ಯಭಿಚಾರಿ ಸ್ತ್ರೀಯನ್ನು ಒಬ್ಬ ವ್ಯಭಿಚಾರಿ ಪುರುಷನು ಅಥವಾ ಒಬ್ಬ ಬಹುದೇವಾರಾಧಕನು ಮಾತ್ರ ವಿವಾಹವಾಗಲಿ. ವಿಶ್ವಾಸಿಗಳ ಪಾಲಿಗೆ ಅದು (ವ್ಯಭಿಚಾರಿಗಳೊಂದಿಗೆ ವಿವಾಹ) ನಿಷಿದ್ಧವಾಗಿದೆ.

4. ಸುಶೀಲ ಸ್ತ್ರೀಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು, ಆ ಕುರಿತು ನಾಲ್ಕು ಮಂದಿ ಸಾಕ್ಷಿಗಳನ್ನು ತರದಿದ್ದರೆ, ಅವರಿಗೆ (ಆರೋಪ ಹೊರಿಸಿದವರಿಗೆ) ಎಂಭತ್ತು ಛಡಿಯೇಟುಗಳನ್ನು ಹೊಡೆಯಿರಿ ಮತ್ತು ಮುಂದೆಂದೂ ಅವರ ಸಾಕ್ಷವನ್ನು ಅಂಗೀಕರಿಸಬೇಡಿ. ಅವರು ಅವಿಧೇಯರು.

 5. ಆ ಬಳಿಕ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

6. ಇನ್ನು, ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸಿದವರ ಬಳಿ ಸ್ವತಃ ತಮ್ಮ ಹೊರತು ಬೇರೆ ಸಾಕ್ಷಿಗಳಿಲ್ಲದಿದ್ದರೆ ಅಂತಹ ಪ್ರತಿಯೊಬ್ಬನು, ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ತಾನು ಖಂಡಿತ ಸತ್ಯವಂತನೆಂದು ಸಾಕ್ಷಿ ಹೇಳಬೇಕು.

7. ಮತ್ತು ಐದನೆಯ ಬಾರಿ, ತಾನು ಸುಳ್ಳು ಹೇಳುತ್ತಿದ್ದರೆ ತನ್ನ ಮೇಲೆ ಅಲ್ಲಾಹನ ಶಾಪ ಎರಗಲಿ ಎನ್ನಬೇಕು.

8. ಇನ್ನು, ಆಕೆಯ ಮೇಲಿನ ಶಿಕ್ಷೆಯನ್ನು ನಿವಾರಿಸಲು, ಆಕೆಯು ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ಆತನು ಖಂಡಿತ ಸುಳ್ಳುಗಾರನೆಂದು ಸಾಕ್ಷಿ ಹೇಳಬೇಕು.

9. ಮತ್ತು ಐದನೆಯ ಬಾರಿ, ತಾನು ಸುಳ್ಳು ಹೇಳುತ್ತಿದ್ದರೆ ತನ್ನ ಮೇಲೆ ಅಲ್ಲಾಹನ ಶಾಪ ಎರಗಲಿ ಎನ್ನಬೇಕು.

10. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಅವನ ಕರುಣೆ ಇಲ್ಲದೆ ಇದ್ದಿದ್ದರೆ (ಈ ಮಾರ್ಗದರ್ಶನವು ನಿಮಗೆ ಸಿಗುತ್ತಿರಲಿಲ್ಲ). ಮತ್ತು ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು ಹಾಗೂ ಯುಕ್ತಿವಂತನಾಗಿದ್ದಾನೆ.

11. ಆ ದೊಡ್ಡ ಸುಳ್ಳಾರೋಪವನ್ನು ನಿಮ್ಮೊಳಗೇ ಇರುವ ಒಂದು ಗುಂಪು ಸೃಷ್ಟಿಸಿದೆ. ಅದು ನಿಮ್ಮ ಪಾಲಿಗೆ ಕೆಟ್ಟದೆಂದು ನೀವು ಭಾವಿಸಬೇಡಿ. ನಿಜವಾಗಿ, ಅದು ನಿಮ್ಮ ಪಾಲಿಗೆ ಒಳ್ಳೆಯದೇ ಆಗಿದೆ. ಅವರ ಪೈಕಿ ಪ್ರತಿಯೊಬ್ಬರಿಗೂ ಆತನು ಮಾಡಿದಷ್ಟು ಪಾಪದ ಪಾಲು ಸಿಗಲಿದೆ. ಇನ್ನು ಅವರಲ್ಲಿ ದೊಡ್ಡ ಪಾತ್ರ ವಹಿಸಿದವನಿಗಂತೂ ಘೋರ ಶಿಕ್ಷೆ ಕಾದಿದೆ.

12. ನೀವು ಅದನ್ನು (ಸುಳ್ಳಾರೋಪವನ್ನು) ಕೇಳಿದಾಗ, ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರೆಲ್ಲಾ ತಮ್ಮವರ ಕುರಿತು ಒಳ್ಳೆಯ ಅಭಿಪ್ರಾಯವನ್ನು ತಾಳಿ, ‘‘ಇದು ಶುದ್ಧ ಸುಳ್ಳಾರೋಪ ’’ ಎಂದೇಕೆ ಹೇಳಲಿಲ್ಲ?

13. ಅವರು (ಆರೋಪ ಹೊರಿಸಿದವರು) ಆ ಕುರಿತು ನಾಲ್ವರು ಸಾಕ್ಷಿಗಳನ್ನೇಕೆ ತರಲಿಲ್ಲ? ಈ ರೀತಿ ಅವರು ಸಾಕ್ಷಿಗಳನ್ನು ತರದಿದ್ದಾಗ ಅಲ್ಲಾಹನ ದೃಷ್ಟಿಯಲ್ಲಿ ಅವರೇ ಸುಳ್ಳುಗಾರರಾಗಿರುತ್ತಾರೆ.

14. ನಿಮ್ಮ ಮೇಲೆ ಇಹಲೋಕದಲ್ಲೂ ಪರಲೋಕದಲ್ಲೂ ಅಲ್ಲಾಹನ ಕೃಪೆ ಇಲ್ಲದೆ ಇದ್ದಿದ್ದರೆ, ನೀವು ನಿರತರಾಗಿದ್ದ ಕ್ರಿಯೆಯಿಂದಾಗಿ ಒಂದು ಘೋರ ಶಿಕ್ಷೆಯು ನಿಮ್ಮ ಮೇಲೆ ಬಂದೆರಗುತ್ತಿತ್ತು.

15. ನೀವು ಅದನ್ನು ಚರ್ಚಿಸುತ್ತಿದ್ದಾಗ ಮತ್ತು ನಿಮಗೆ ತಿಳಿಯದೆ ಇದ್ದ ವಿಷಯದ ಕುರಿತು ನೀವು ಮಾತನಾಡುತ್ತಿದ್ದಾಗ, ನೀವು ಅದನ್ನು ಒಂದು ಹಗುರ ವಿಚಾರವೆಂದು ಭಾವಿಸಿದ್ದಿರಿ. ಆದರೆ ಅಲ್ಲಾಹನ ದೃಷ್ಟಿಯಲ್ಲಿ ಅದು ಭಾರೀ ದೊಡ್ಡ ವಿಚಾರವಾಗಿತ್ತು.

16. ನೀವು ಅದನ್ನು ಕೇಳಿದಾಗಲೇ, ‘‘ನಾವು ಇಂತಹ ಮಾತುಗಳನ್ನಾಡುವುದು ನಮಗೆ ಭೂಷಣವಲ್ಲ. (ಓ ಅಲ್ಲಾಹ್) ನೀನು ದೋಷರಹಿತನು – ಇದು ಘೋರ ಸುಳ್ಳಾರೋಪವಾಗಿದೆ’’ ಎಂದೇಕೆ ಹೇಳಿ ಬಿಡಲಿಲ್ಲ?

17. ನೀವು ವಿಶ್ವಾಸಿಗಳಾಗಿದ್ದರೆ ಇಂತಹ ಕೃತ್ಯವನ್ನು ಮತ್ತೆಂದೂ ಮಾಡಬೇಡಿ ಎಂದು ಅಲ್ಲಾಹನು ನಿಮಗೆ ಉಪದೇಶಿಸುತ್ತಾನೆ.

18. ಅಲ್ಲಾಹನು ನಿಮಗೆ (ತನ್ನ) ವಚನಗಳನ್ನು ವಿವರಿಸುತ್ತಾನೆ. ಅಲ್ಲಾಹನು ಬಲ್ಲವನು ಮತ್ತು ಯುಕ್ತಿವಂತನಾಗಿದ್ದಾನೆ.

 19. ವಿಶ್ವಾಸಿಗಳ ನಡುವೆ ಅನೈತಿಕತೆಯನ್ನು ಹರಡಬಯಸುವವರಿಗೆ ಖಂಡಿತವಾಗಿಯೂ ಈ ಲೋಕದಲ್ಲೂ ಪರಲೋಕದಲ್ಲೂ ಯಾತನಾಮಯ ಶಿಕ್ಷೆ ಇದೆ. ಅಲ್ಲಾಹನು ಬಲ್ಲನು. ನೀವು ಬಲ್ಲವರಲ್ಲ.

20. ಅಲ್ಲಾಹನ ಅನುಗ್ರಹ ಮತ್ತು ಅವನ ಕರುಣೆಯು ನಿಮ್ಮ ಮೇಲೆ ಇಲ್ಲದೆ ಇದ್ದಿದ್ದರೆ (ನಿಮಗೆ ಈ ಮಾರ್ಗದರ್ಶನವು ಸಿಗುತ್ತಿರಲಿಲ್ಲ). ಮತ್ತು ಅಲ್ಲಾಹನು ತುಂಬಾ ವಾತ್ಸಲ್ಯಮಯಿ ಮತ್ತು ಕರುಣಾಳುವಾಗಿದ್ದಾನೆ.

 21. ವಿಶ್ವಾಸಿಗಳೇ, ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸಬೇಡಿ. ಶೈತಾನನು ತನ್ನ ಹೆಜ್ಜೆಗುರುತುಗಳನ್ನು ಅನುಸರಿಸುವವರಿಗೆ ಅನೈತಿಕ ಹಾಗೂ ದುಷ್ಟ ಕೆಲಸಗಳನ್ನು ಆದೇಶಿಸುತ್ತಾನೆ. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಹಾಗೂ ಅವನ ಕೃಪೆ ಇಲ್ಲದೆ ಇದ್ದಿದ್ದರೆ, ನಿಮ್ಮಲ್ಲಿ ಯಾರೊಬ್ಬರೂ ಎಂದಿಗೂ ಶುದ್ಧ ಶೀಲದವರಾಗಿ ಉಳಿದಿರುತ್ತಿರಲಿಲ್ಲ. ನಿಜವಾಗಿ ಅಲ್ಲಾಹನೇ ತಾನಿಚ್ಛಿಸಿದವರನ್ನು ಶುದ್ಧವಾಗಿಡುತ್ತಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ಬಲ್ಲವನಾಗಿದ್ದಾನೆ.

22. ನಿಮ್ಮಲ್ಲಿನ ಸ್ಥಿತಿವಂತರು ಹಾಗೂ ಅನುಕೂಲಸ್ಥರು ಯಾರೂ, ಬಂಧುಗಳಿಗೆ ಬಡವರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋದವರಿಗೆ ಏನನ್ನೂ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬಾರದು. ಅವರು ಕ್ಷಮಿಸಬೇಕು ಮತ್ತು (ಇತರರ ತಪ್ಪುಗಳನ್ನು) ಕಡೆಗಣಿಸಬೇಕು. ನೀವೇನು, ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ಅಪೇಕ್ಷಿಸುವುದಿಲ್ಲವೇ? ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

23. ಮಾನವಂತ, ಮುಗ್ಧ, ವಿಶ್ವಾಸಿ ಮಹಿಳೆಯರ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವರು ಖಂಡಿತ ಇಹಲೋಕದಲ್ಲೂ ಪರಲೋಕದಲ್ಲೂ ಶಾಪಗ್ರಸ್ತರಾಗಿರುತ್ತಾರೆ ಮತ್ತು ಅವರಿಗೆ ಘೋರ ಶಿಕ್ಷೆ ಸಿಗಲಿದೆ.

24. ಅವರು ಏನೆಲ್ಲಾ ಮಾಡುತ್ತಿದ್ದರೆಂದು ಅವರದೇ ನಾಲಿಗೆಗಳು, ಅವರದೇ ಕೈಗಳು ಮತ್ತು ಅವರದೇ ಕಾಲುಗಳು ಅವರ ವಿರುದ್ಧ ಸಾಕ್ಷ ಹೇಳುವ ದಿನ (ಖಂಡಿತ ಬರಲಿದೆ).

25. ಆ ದಿನ ಅಲ್ಲಾಹನು ಅವರಿಗೆ ಅವರ ಸಂಪೂರ್ಣ ಪ್ರತಿಫಲವನ್ನು ನ್ಯಾಯೋಚಿತವಾಗಿ ನೀಡುವನು ಮತ್ತು ಅಲ್ಲಾಹನೇ ಅತ್ಯಂತ ವ್ಯಕ್ತ ಸತ್ಯ ಎಂಬುದನ್ನು ಅಂದು ಅವರು ಅರಿಯುವರು.

26. ನೀಚ ಸ್ತ್ರೀಯರು ಇರುವುದೇ ನೀಚ ಪುರುಷರಿಗಾಗಿ ಮತ್ತು ನೀಚ ಪುರುಷರು ಇರುವುದೇ ನೀಚ ಸ್ತ್ರೀಯರಿಗಾಗಿ. ಇನ್ನು, ಸುಶೀಲ ಸ್ತ್ರೀಯರು ಇರುವುದು ಸುಶೀಲ ಪುರುಷರಿಗಾಗಿ ಮತ್ತು ಸುಶೀಲ ಪುರುಷರು ಇರುವುದು ಸುಶೀಲ ಸ್ತ್ರೀಯರಿಗಾಗಿ. ಜನರು ಆಡುವ ಎಲ್ಲ ಮಾತುಗಳಿಂದ ಅವರು ಮುಕ್ತರಾಗಿರುತ್ತಾರೆ. ಅವರಿಗೆ ಕ್ಷಮೆ ಹಾಗೂ ಗೌರವಯುತವಾದ ಸಂಪನ್ನತೆ ದೊರೆಯಲಿದೆ.

27. ವಿಶ್ವಾಸಿಗಳೇ, ನಿಮ್ಮದಲ್ಲದ ಮನೆಯನ್ನು, ಪೂರ್ವಾನುಮತಿ ಪಡೆಯದೆ ಹಾಗೂ ಆ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬಾರದು. ನೀವು ಉಪದೇಶ ಸ್ವೀಕರಿಸುವವರಾಗಿದ್ದರೆ ಇದುವೇ ನಿಮ್ಮ ಪಾಲಿಗೆ ಉತ್ತಮ ಕ್ರಮವಾಗಿದೆ.

28. ಒಂದು ವೇಳೆ ಅಲ್ಲಿ ನಿಮಗೆ ಯಾರೂ ಕಾಣಸಿಗದಿದ್ದರೆ, ಆಗಲೂ ಅನುಮತಿ ಇಲ್ಲದೆ ಅದರೊಳಗೆ ಪ್ರವೇಶಿಸಬೇಡಿ. ಇನ್ನು, ಮರಳಿ ಹೋಗಿರೆಂದು ನಿಮ್ಮೊಡನೆ ಹೇಳಲಾದರೆ ಮರಳಿ ಹೋಗಿರಿ. ನಿಮ್ಮ ಪಾಲಿಗೆ ಅದುವೇ ಹೆಚ್ಚು ಪರಿಶುದ್ಧ ಕ್ರಮವಾಗಿದೆ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲನು.

29. ಜನವಾಸ ಇಲ್ಲದ ಮತ್ತು ನಿಮಗೇನಾದರೂ ಲಾಭವಿರುವ ಮನೆಗಳನ್ನು ನೀವು ಪ್ರವೇಶಿಸಿದರೆ ಮಾತ್ರ ನಿಮ್ಮ ಮೇಲೆ ಪಾಪವೇನಿಲ್ಲ. ನೀವು ಪ್ರಕಟಿಸುವ ಮತ್ತು ನೀವು ಬಚ್ಚಿಡುವ ಎಲ್ಲವನ್ನೂ ಅಲ್ಲಾಹನು ಬಲ್ಲನು.

30. ವಿಶ್ವಾಸಿ ಪುರುಷರೊಡನೆ, ತಮ್ಮ ದೃಷ್ಟಿಗಳನ್ನು ತಗ್ಗಿಸಿಡಲು ಹಾಗೂ ತಮ್ಮ ಮಾನಗಳನ್ನು ಕಾಪಾಡಿಕೊಳ್ಳಲು ಹೇಳಿರಿ. ಇದು ಅವರ ಪಾಲಿಗೆ ಹೆಚ್ಚು ಶುದ್ಧ ಕ್ರಮವಾಗಿದೆ. ಅವರು ಮಾಡುತ್ತಿರುವ ಸಕಲವನ್ನೂ ಅಲ್ಲಾಹನು ಖಂಡಿತ ಅರಿತಿರುತ್ತಾನೆ.

31. ವಿಶ್ವಾಸಿ ಸ್ತ್ರೀಯರೊಡನೆ ಹೇಳಿರಿ; ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಡಲಿ, ತಮ್ಮ ಮಾನಗಳನ್ನು ಕಾಪಾಡಿಕೊಳ್ಳಲಿ ಮತ್ತು ಅವರು ತಮ್ಮ ಶೃಂಗಾರವನ್ನು ಪ್ರದರ್ಶಿಸದಿರಲಿ – ಆ ಪೈಕಿ ಸಹಜವಾಗಿ ಪ್ರಕಟವಾಗುವುದರ ಹೊರತು. ಮತ್ತು ಅವರು ತಮ್ಮ ಹೊದಿಕೆಗಳನ್ನು ತಮ್ಮ ಎದೆಯ ಮೇಲೆ ಹೊದ್ದುಕೊಂಡಿರಲಿ. ಮತ್ತು ಅವರು ತಮ್ಮ ಶೃಂಗಾರವನ್ನು ಪ್ರದರ್ಶಿಸಬಾರದು – ತಮ್ಮ ಪತಿ ಅಥವಾ ತಮ್ಮ ತಂದೆ, ಅಥವಾ ತಮ್ಮ ಪತಿಯ ತಂದೆ ಅಥವಾ ತಮ್ಮ ಪುತ್ರರು ಅಥವಾ ತಮ್ಮ ಪತಿಯ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಸಹೋದರರ ಪುತ್ರರು ಅಥವಾ ತಮ್ಮ ಸಹೋದರಿಯರ ಪುತ್ರರು ಅಥವಾ ತಮಗೆ ಆಪ್ತರಾಗಿರುವ ಸ್ತ್ರೀಯರು ಅಥವಾ ತಮ್ಮ ದಾಸಿಯರು ಅಥವಾ ತೀರಾ ನಿರಾಸಕ್ತರಾಗಿರುವ ಸೇವಕ ಪುರುಷರು ಅಥವಾ ಮಹಿಳೆಯರ ಗುಟ್ಟುಗಳ ಅರಿವೇ ಇಲ್ಲದ ಮಕ್ಕಳ ಹೊರತು ಇತರರಿಗೆ. ಮತ್ತು ಅವರು, ತಾವು ಅಡಗಿಸಿಟ್ಟ ಶೃಂಗಾರವು ಪ್ರಕಟವಾಗುವ ರೀತಿಯಲ್ಲಿ ತಮ್ಮ ಕಾಲುಗಳನ್ನು ಅಪ್ಪಳಿಸುತ್ತಾ ನಡೆಯಬಾರದು. ವಿಶ್ವಾಸಿಗಳೇ, ನೀವೆಲ್ಲರೂ ಸೇರಿ ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಿರಿ. ನೀವು ವಿಜಯಿಗಳಾಗಬಹುದು.

32. ನೀವು ನಿಮ್ಮಲ್ಲಿನ ವಿಧವೆಯರು ಹಾಗು ವಿಧುರರಿಗೆ, ನಿಮ್ಮ ಸಜ್ಜನ ದಾಸರಿಗೆ ಮತ್ತು ನಿಮ್ಮ ದಾಸಿಯರಿಗೆ ವಿವಾಹ ಮಾಡಿಸಿರಿ. ಅವರು ಬಡವರಾಗಿದ್ದರೆ ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನರಾಗಿಸುವನು. ಅಲ್ಲಾಹನು ವಿಶಾಲನೂ ಜ್ಞಾನಿಯೂ ಆಗಿದ್ದಾನೆ.

33. ಇನ್ನು ವಿವಾಹವಾಗಲು ಸಾಧ್ಯವಾಗದವರು, ಅಲ್ಲಾಹನು ತನ್ನ ಅನುಗ್ರಹದಿಂದ ತಮ್ಮನ್ನು ಸಂಪನ್ನಗೊಳಿಸುವ ತನಕ ತಮ್ಮನ್ನು ನಿಯಂತ್ರಿಸಿಕೊಂಡಿರಲಿ. ನಿಮ್ಮ ದಾಸ್ಯದಲ್ಲಿರುವವರ ಪೈಕಿ (ಬಿಡುಗಡೆಯ) ಒಪ್ಪಂದ ಮಾಡಿಕೊಳ್ಳಲು ಬಯಸುವವರಲ್ಲಿ ಏನಾದರೂ ಒಳಿತು ಇದೆ ಎಂದು ನಿಮಗೆ ತಿಳಿದಿದ್ದರೆ ನೀವು ಅವರ ಜೊತೆ ಒಪ್ಪಂದ ಮಾಡಿಕೊಳ್ಳಿರಿ ಮತ್ತು ಅಲ್ಲಾಹನು ನಿಮಗೆ ಕೊಟ್ಟಿರುವ ಸಂಪತ್ತಿನ ಒಂದು ಭಾಗವನ್ನು ಅವರಿಗೆ ಕೊಡಿರಿ. ಮತ್ತು ನಿಮ್ಮ ದಾಸಿಯರು ಸುಶೀಲೆಯರಾಗಿರಲು ಬಯಸುತ್ತಿರುವಾಗ ನೀವು ಕೇವಲ ಲೌಕಿಕ ಬದುಕಿನ ಲಾಭಕ್ಕಾಗಿ ಅವರನ್ನು ಅನೈತಿಕ ಕೃತ್ಯಕ್ಕೆ ಬಲವಂತ ಪಡಿಸಬೇಡಿ. ಇನ್ನು ಯಾರಾದರೂ ಅವರ ಮೇಲೆ ಬಲವಂತ ನಡೆಸಿದರೆ, ಆ ಬಳಿಕ (ಆ ದಾಸಿಯರ ಪಾಲಿಗೆ) ಅಲ್ಲಾಹನು ಖಂಡಿತವಾಗಿಯೂ ಕ್ಷಮಾಶೀಲನೂ ಕರುಣಾಳುವೂ ಆಗಿರುತ್ತಾನೆ.

34. ಸ್ಪಷ್ಟವಾದ ವಚನಗಳನ್ನೂ, ನಿಮಗಿಂತ ಹಿಂದೆ ಗತಿಸಿ ಹೋದವರ ಉದಾಹರಣೆಗಳನ್ನೂ, ಧರ್ಮನಿಷ್ಠರಿಗಾಗಿ ಬೋಧನೆಗಳನ್ನೂ ನಾವು ನಿಮ್ಮೆಡೆಗೆ ಇಳಿಸಿ ಕೊಟ್ಟಿರುವೆವು.

35. ಅಲ್ಲಾಹನೇ ಆಕಾಶಗಳ ಮತ್ತು ಭೂಮಿಯ ಪ್ರಕಾಶ. ಅದರ ಉದಾಹರಣೆ ಹೀಗಿದೆ; ಗೋಡೆ ಗೂಡಿನಲ್ಲಿ ಒಂದು ದೀಪವಿದೆ. ದೀಪವು ಗಾಜಿನೊಳಗಿದೆ. ಗಾಜು ಮಿನುಗುವ ನಕ್ಷತ್ರದಂತಿದೆ. ಪೂರ್ವದ್ದಾಗಲಿ ಪಶ್ಚಿಮದ್ದಾಗಲಿ ಅಲ್ಲದ ಸಮೃದ್ಧ ಝೈತೂನ್ ಮರದಿಂದ (ಅದರ ಎಣ್ಣೆ.ಯಿಂದ) ಅದನ್ನು ಬೆಳಗಲಾಗಿದೆ. ಅದು ಬೆಂಕಿ ತಗುಲದಿದ್ದರೂ ಉರಿದು ಬೆಳಗುವಂತಿದೆ, ಪ್ರಕಾಶದ ಮೇಲೆ ಮತ್ತೆ ಪ್ರಕಾಶ. ಅಲ್ಲಾಹನೇ ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ನಡೆಸುತ್ತಾನೆ. ಹೀಗೆ ಅಲ್ಲಾಹನು ಮಾನವರಿಗಾಗಿ ಉದಾಹರಣೆಗಳನ್ನು ಮುಂದಿಡುತ್ತಾನೆ. ಅಲ್ಲಾಹನಂತು ಎಲ್ಲವನ್ನೂ ಬಲ್ಲವನಾಗಿದ್ದಾನೆ.

36. ಆ ಭವನಗಳಲ್ಲಿ (ಮಸೀದಿಗಳಲ್ಲಿ) ತನ್ನ ಹೆಸರನ್ನು ಮೊಳಗಿಸುತ್ತಾ ತನ್ನನ್ನು ಪ್ರಸ್ತಾಪಿಸುತ್ತಿರಬೇಕು ಮತ್ತು ಮುಂಜಾನೆಯಲ್ಲೂ ಸಂಜೆಯ ಹೊತ್ತಿನಲ್ಲೂ ತನ್ನ ಪಾವಿತ್ರವನ್ನು ಜಪಿಸುತ್ತಿರಬೇಕು ಎಂದು ಅಲ್ಲಾಹನು ಆದೇಶಿಸಿರುತ್ತಾನೆ.

37. (ಅಲ್ಲಿರುವವರು ಎಂಥವರೆಂದರೆ,) ಅವರ ವ್ಯಾಪಾರವಾಗಲಿ ವ್ಯವಹಾರವಾಗಲಿ ಅವರನ್ನು ನಮಾಝ್‌ನ ಪಾಲನೆಯಿಂದ ಮತ್ತು ಝಕಾತ್‌ಅನ್ನು ಪಾವತಿಸುವುದರಿಂದ ತಡೆಯುವುದಿಲ್ಲ. ಹೃದಯಗಳು ಹಾಗೂ ದೃಷ್ಟಿಗಳು ಹೊರಳಿ ಬಿಡುವ ಒಂದು ದಿನದ ಕುರಿತು ಅವರು ಅಂಜುತ್ತಿರುತ್ತಾರೆ.

38. ಏಕೆಂದರೆ ಅಲ್ಲಾಹನು ಅವರಿಗೆ ಅವರ ಅತ್ಯುತ್ತಮ ಕರ್ಮಕ್ಕನುಸಾರವಾದ ಪ್ರತಿಫಲ ನೀಡಲಿದ್ದಾನೆ. ಮಾತ್ರವಲ್ಲ, ಅವನು ತನ್ನ ಅನುಗ್ರಹದಿಂದ ಅವರಿಗೆ ಇನ್ನೂ ಹೆಚ್ಚಿನದನ್ನು ನೀಡಲಿದ್ದಾನೆ. ಅಲ್ಲಾಹನಂತು ತಾನಿಚ್ಛಿಸಿದವರಿಗೆ ಎಣಿಕೆ ಇಲ್ಲದಷ್ಟು ದಯಪಾಲಿಸುತ್ತಾನೆ.

 39. ಧಿಕ್ಕಾರಿಗಳ ಕರ್ಮಗಳೆಲ್ಲಾ ಬಟ್ಟ ಬಯಲಲ್ಲಿರುವ ಮರೀಚಿಕೆಯಂತಿರುತ್ತವೆ. ದಾಹಿಯು, ಅದುವೇ ನೀರೆಂದು ಭ್ರಮಿಸುತ್ತಾನೆ. ಕೊನೆಗೆ ಅವನು ಅದರ ಹತ್ತಿರ ಹೋದಾಗ ಅಲ್ಲಿ ಅವನು ಏನನ್ನೂ ಕಾಣುವುದಿಲ್ಲ. ನಿಜವಾಗಿ ಅವನು ತನ್ನ ಬಳಿ ಅಲ್ಲಾಹನನ್ನು ಕಾಣುತ್ತಾನೆ ಮತ್ತು ಅವನು (ಅಲ್ಲಾಹನು) ಆತನ ವಿಚಾರಣೆಯನ್ನು ಮುಗಿಸಿ ಬಿಡುತ್ತಾನೆ. ಅಲ್ಲಾಹನಂತು ಬಹಳ ವೇಗವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.

  40. ಅಥವಾ ಅವರ (ಕರ್ಮಗಳ) ಸ್ಥಿತಿಯು, ಕಡಲಿನ ಆಳದಲ್ಲಿರುವ ಕತ್ತಲೆಯಂತಿದೆ. ಅದನ್ನು ಮುಚ್ಚಿಡಲು ಅದರ ಮೇಲೆ ಒಂದು ಅಲೆ ಮತ್ತು ಆ ಅಲೆಯ ಮೇಲೆ ಮತ್ತೊಂದು ಅಲೆ ಇರುತ್ತದೆ ಮತ್ತು ಅದರ ಮೇಲೆ ಮೋಡ ಕವಿದಿರುತ್ತದೆ. ಕತ್ತಲ ಮೇಲೆ ಕತ್ತಲು. ಎಷ್ಟೆಂದರೆ, ಅಲ್ಲಿ ಯಾರಾದರೂ ತನ್ನ ಕೈಯನ್ನು ಹೊರ ಚಾಚಿದರೆ ಅದನ್ನು ಕಾಣಲು ಅವನಿಗೆ ಸಾಧ್ಯವಾಗದು. ಯಾರಿಗೆ ಅಲ್ಲಾಹನು ಪ್ರಕಾಶವನ್ನು ನೀಡಲಿಲ್ಲವೋ ಅವನಿಗೆ ಪ್ರಕಾಶವೇ ಇಲ್ಲ.

41. ನೀವು ನೋಡಲಿಲ್ಲವೇ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಮತ್ತು ರೆಕ್ಕೆ ಹರಡಿಕೊಂಡಿರುವ ಹಕ್ಕಿಗಳೂ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಿವೆ. ಪ್ರತಿಯೊಬ್ಬರಿಗೂ ಅವನನ್ನು ನಮಿಸುವ ಮತ್ತು ಅವನ ಮಹಿಮೆಯನ್ನು ಕೊಂಡಾಡುವ ವಿಧಾನ ತಿಳಿದಿದೆ. ಅಲ್ಲಾಹನಂತು ಅವರು ಮಾಡುತ್ತಿರುವ ಎಲ್ಲವನ್ನೂ ಬಲ್ಲನು.

42. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವು ಅಲ್ಲಾಹನಿಗೇ ಸೇರಿದೆ. ಎಲ್ಲರೂ ಅಲ್ಲಾಹನೆಡೆಗೇ ಮರಳುವರು.

43. ನೀವು ನೋಡಲಿಲ್ಲವೇ, ಅಲ್ಲಾಹನು ಮೋಡಗಳನ್ನು ಚಲಾಯಿಸುತ್ತಾನೆ. ಆ ಬಳಿಕ ಅವನು ಅವುಗಳನ್ನು ಪರಸ್ಪರ ಜೋಡಿಸುತ್ತಾನೆ. ತರುವಾಯ ಅವನು ಅವುಗಳನ್ನು ಪದರಗಳಾಗಿಸುತ್ತಾನೆ. ಅನಂತರ ಅದರೊಳಗಿಂದ ಮಳೆಯು ಹೊರಡುವುದನ್ನು ನೀವು ಕಾಣುತ್ತೀರಿ. ಮತ್ತು ಆಕಾಶದಿಂದ ಹಿಮ ತುಂಬಿದ ಪರ್ವತಗಳೇ ಇಳಿಯತೊಡಗುತ್ತವೆ. ಆಮೂಲಕ ಅವನು ತಾನಿಚ್ಛಿಸಿದವರನ್ನು ವಿಪತ್ತಿಗೆ ಸಿಲುಕಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅದರಿಂದ ರಕ್ಷಿಸುತ್ತಾನೆ. ಅದರ ಮಿಂಚಿನ ಹೊಳಪು ಕಣ್ಣುಗಳನ್ನು ಕುರುಡಾಗಿಸುವಂತಿರುತ್ತದೆ.

44. ಅಲ್ಲಾಹನೇ, ಇರುಳು ಮತ್ತು ಹಗಲುಗಳನ್ನು ಪರಿವರ್ತಿಸುತ್ತಿರುವವನು. ಕಾಣಬಲ್ಲವರಿಗೆ (ಬುದ್ಧಿವಂತರಿಗೆ) ಇದರಲ್ಲಿ ಖಂಡಿತ ಪಾಠವಿದೆ.

45. ಅಲ್ಲಾಹನು ಎಲ್ಲ ಜೀವಿಗಳನ್ನು ನೀರಿನಿಂದ ಸೃಷ್ಟಿಸಿರುವನು. ಅವುಗಳಲ್ಲಿ ಕೆಲವು ತಮ್ಮ ಹೊಟ್ಟೆಗೆ ಒರಗಿಕೊಂಡು ಚಲಿಸುತ್ತವೆ, ಕೆಲವು ಎರಡು ಕಾಲುಗಳಲ್ಲಿ ನಡೆಯುತ್ತವೆ ಮತ್ತು ಕೆಲವು ನಾಲ್ಕು ಕಾಲುಗಳಲ್ಲಿ ನಡೆಯುತ್ತವೆ. ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.

46. ನಾವು ಬಹಳ ಸ್ಪಷ್ಟವಾದ ವಚನಗಳನ್ನು ಇಳಿಸಿರುತ್ತೇವೆ. ಇನ್ನು ಅಲ್ಲಾಹನೇ ತಾನಿಚ್ಛಿಸಿದವರನ್ನು ಸ್ಥಿರವಾದ ನೇರಮಾರ್ಗದೆಡೆಗೆ ಮುನ್ನಡೆಸುತ್ತಾನೆ.

47. ನಾವು ಅಲ್ಲಾಹನನ್ನೂ ಅವನ ದೂತರನ್ನೂ ನಂಬಿರುವೆವು ಮತ್ತು ನಾವು (ಅವರ) ಆದೇಶಪಾಲಿಸಿದೆವು ಎಂದು ಅವರು ಹೇಳುತ್ತಾರೆ. ಆ ಬಳಿಕ ಅವರಲ್ಲಿನ ಒಂದು ಗುಂಪು ತಿರುಗಿ ನಿಲ್ಲುತ್ತದೆ. ಅವರು ವಿಶ್ವಾಸಿಗಳಲ್ಲ.

48. ಅವರ ನಡುವೆ ನ್ಯಾಯ ತೀರ್ಮಾನ ಕೈಗೊಳ್ಳುವುದಕ್ಕಾಗಿ ಅವರನ್ನು ಅಲ್ಲಾಹ್ ಮತ್ತು ಅವನ ದೂತರೆಡೆಗೆ ಕರೆದಾಗ ಅವರಲ್ಲಿನ ಒಂದು ಗುಂಪು ಜಾರಿ ಕೊಳ್ಳುತ್ತದೆ.

49. ಒಂದು ವೇಳೆ ಅವರಿಗೇನಾದರೂ ಹಕ್ಕು ಸಿಗಲಿಕ್ಕಿದ್ದರೆ, (ಆಗ ಮಾತ್ರ) ಅವರು ವಿನಯ ಶೀಲರಾಗಿ ನಿಮ್ಮ ಬಳಿಗೆ ಬರುತ್ತಾರೆ.

50. ಅವರ ಮನಗಳಲ್ಲೇನು ರೋಗವಿದೆಯೇ? ಅಥವಾ ಅವರು ಸಂಶಯ ಪೀಡಿತರಾಗಿದ್ದಾರೆಯೇ? ಅಥವಾ ಅಲ್ಲಾಹ್ ಮತ್ತು ಅವನ ದೂತರು ಅವರ ಮೇಲೆ ಅಕ್ರಮವೆಸಗುವರೆಂದು ಅವರು ಅಂಜುತ್ತಿದ್ದಾರೆಯೇ? ನಿಜವಾಗಿ ಅವರೇ ಅಕ್ರಮಿಗಳಾಗಿದ್ದಾರೆ.

 51. (ಆದರೆ) ವಿಶ್ವಾಸಿಗಳನ್ನು ಅವರ ನಡುವಣ ನ್ಯಾಯ ತೀರ್ಮಾನಕ್ಕೆಂದು ಅಲ್ಲಾಹ್ ಮತ್ತು ಆತನ ದೂತರ ಕಡೆಗೆ ಕರೆಯಲಾದಾಗ ಅವರು, ನಾವು ಕೇಳಿದೆವು ಮತ್ತು ಅನುಸರಿಸಿದೆವು ಎಂದು ಬಿಡುತ್ತಾರೆ. ಅವರೇ ವಿಜಯಿಗಳು.

 52. ಅಲ್ಲಾಹ್ ಮತ್ತವನ ದೂತರ ಆಜ್ಞೆ ಪಾಲಿಸುವವನು, ಅಲ್ಲಾಹನ ಭಯ ಉಳ್ಳವನು ಮತ್ತು ಅವನಿಗೆ ಸದಾ ನಿಷ್ಠನಾಗಿರುವವನು – ಅವರೇ ಜಯಶಾಲಿಗಳು.

 53. ನೀವು ಆದೇಶಿಸಿದರೆ ಖಂಡಿತವಾಗಿಯೂ ತಾವು (ಹೋರಾಟಕ್ಕೆ) ಹೊರಟು ಬಿಡುವೆವು ಎಂದು ಅವರು ಜೋರಾಗಿ ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ಹೇಳಿರಿ; ಆಣೆಗಳನ್ನು ಹಾಕಬೇಡಿ. (ನಿಮ್ಮ) ಆಜ್ಞಾಪಾಲನೆ ಎಂತಹದೆಂಬುದು ಎಲ್ಲರಿಗೂ ಗೊತ್ತಿದೆ. ನೀವು ಮಾಡುತ್ತಿರುವುದೆಲ್ಲವೂ ಅಲ್ಲಾಹನಿಗೆ ತಿಳಿದಿದೆ.

54. ಹೇಳಿರಿ; ಅಲ್ಲಾಹನ ಆಜ್ಞೆಗಳನ್ನು ಪಾಲಿಸಿರಿ ಮತ್ತು ದೇವದೂತರ ಆಜ್ಞೆಗಳನ್ನು ಪಾಲಿಸಿರಿ. ನೀವು ಅದನ್ನು ಕಡೆಗಣಿಸಿದರೆ (ನಿಮಗೆ ತಿಳಿದಿರಲಿ) ಅವರ ಮೇಲಿರುವ ಕರ್ತವ್ಯಕ್ಕೆ ಮಾತ್ರ ಅವರು ಹೊಣೆಗಾರರಾಗಿರುತ್ತಾರೆ ಮತ್ತು ನಿಮ್ಮ ಮೇಲಿರುವ ಕರ್ತವ್ಯಕ್ಕೆ ನೀವೇ ಹೊಣೆಯಾಗಿರುವಿರಿ. ನೀವು ಅವರ ಆಜ್ಞೆಗಳನ್ನು ಪಾಲಿಸಿದರೆ ನೇರ ಮಾರ್ಗದಲ್ಲಿರುವಿರಿ. ದೇವದೂತರ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊಣೆ ಮಾತ್ರ.

 55. ನಿಮ್ಮ ಪೈಕಿ ವಿಶ್ವಾಸಿಗಳಾಗಿದ್ದು ಸತ್ಕರ್ಮ ಮಾಡುತ್ತಿರುವವರಿಗೆ, ಅವರ ಹಿಂದಿನವರಂತೆ ಅವರನ್ನು ತಾನು ಭೂಮಿಯಲ್ಲಿ ಆಡಳಿತಗಾರರಾಗಿ ಮಾಡುವೆನೆಂದು ಹಾಗೂ ತಾನು ಅವರ ಪಾಲಿಗೆ ಮೆಚ್ಚಿರುವ ಅವರ ಧರ್ಮವನ್ನು ಅವರಿಗಾಗಿ ಸ್ಥಿರಗೊಳಿಸುವೆನೆಂದು ಮತ್ತು ಅವರ ಭಯದ ಸ್ಥಿತಿಯನ್ನೇ ತಾನು ಆ ಬಳಿಕ ಶಾಂತಿಯ ಸ್ಥಿತಿಯಾಗಿ ಬದಲಿಸುವೆನೆಂದು ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನೇ ಪೂಜಿಸಲಿ ಮತ್ತು ನನ್ನ ಜೊತೆ ಏನನ್ನೂ ಸೇರಿಸದಿರಲಿ (ಎಂದು ಅವನು ಆದೇಶಿಸಿರುವನು). ಇಷ್ಟಾದ ಬಳಿಕವೂ ಕೃತಘ್ನತೆ ತೋರುವವರೇ ಅವಿಧೇಯರು.

56. ನೀವು (ಅಲ್ಲಾಹನ) ಕರುಣೆಗೆ ಪಾತ್ರರಾಗಲಿಕ್ಕಾಗಿ ನಮಾಝನ್ನು ಪಾಲಿಸಿರಿ, ಝಕಾತನ್ನು ಪಾವತಿಸಿರಿ ಮತ್ತು ದೇವದೂತರ ಆದೇಶಗಳನ್ನು ಪಾಲಿಸಿರಿ.

57. ಧಿಕ್ಕಾರಿಗಳು, ಭೂಮಿಯಲ್ಲಿ ತಾವು (ಸತ್ಯವನ್ನು) ಸೋಲಿಸಬಲ್ಲೆವೆಂದು ಭಾವಿಸದಿರಲಿ. ನರಕವೇ ಅವರ ಅಂತಿಮ ನೆಲೆಯಾಗಿದೆ. ಮತ್ತು ಅದು ತೀರಾ ಕೆಟ್ಟ ನೆಲೆಯಾಗಿದೆ.

 58. ವಿಶ್ವಾಸಿಗಳೇ, ನಿಮ್ಮ ದಾಸರು ಮತ್ತು ನಿಮ್ಮ ಪೈಕಿ ಇನ್ನೂ ಪ್ರಬುದ್ಧ ವಯಸ್ಸನ್ನು ತಲುಪಿಲ್ಲದವರು, ಮೂರು ಹೊತ್ತು ನಿಮ್ಮ ಅನುಮತಿ ಪಡೆದು ನಿಮ್ಮಲ್ಲಿಗೆ ಬರಲಿ – ಮುಂಜಾವಿನ ನಮಾಝ್‌ಗೆ ಮುನ್ನ, ಹಾಗೂ ಮಧ್ಯಾಹ್ನ, ನೀವು ನಿಮ್ಮ ಮೇಲುಡುಗೆಗಳನ್ನು ಇಳಿಸಿಡುವ ಹೊತ್ತಿನಲ್ಲಿ ಮತ್ತು ಇಶಾ (ರಾತ್ರಿ) ನಮಾಝ್‌ನ ಬಳಿಕ. ಇವು ನಿಮ್ಮ ಪಾಲಿಗೆ ಮರೆಯಲ್ಲಿರುವ (ವಿರಾಮದ) ಸಮಯಗಳು. ಈ ಸಮಯಗಳು ಕಳೆದ ಬಳಿಕ (ಅವರು ಅನುಮತಿ ಪಡೆಯದೆ ಬಂದರೆ) ನಿಮ್ಮ ಮೇಲಾಗಲಿ ಅವರ ಮೇಲಾಗಲಿ ಪಾಪವೇನಿಲ್ಲ. ನೀವು ಪರಸ್ಪರರ ಸುತ್ತಮುತ್ತಲೇ ಇರಬೇಕಾಗುತ್ತದೆ. ಈ ರೀತಿ ಅಲ್ಲಾಹನು (ತನ್ನ) ಆದೇಶಗಳನ್ನು ನಿಮಗೆ ವಿವರಿಸುತ್ತಾನೆ. ಅಲ್ಲಾಹನು ಬಲ್ಲವನು ಹಾಗೂ ಯುಕ್ತಿವಂತನಾಗಿದ್ದಾನೆ.

 59. ಇನ್ನು ನಿಮ್ಮಲ್ಲಿನ ಮಕ್ಕಳು ಪ್ರಬುದ್ಧರಾದಾಗ, ಅವರೂ ತಮ್ಮ ಹಿರಿಯರಂತೆ (ಎಲ್ಲ ವೇಳೆಗಳಲ್ಲೂ) ಅನುಮತಿ ಪಡೆಯಲಿ. ಈ ರೀತಿ ಅಲ್ಲಾಹನು ನಿಮಗೆ ತನ್ನ ವಚನಗಳನ್ನು ವಿವರಿಸುತ್ತಾನೆ. ಅಲ್ಲಾಹನು ಎಲವನ್ನೂ ಬಲ್ಲ ಯುಕ್ತಿವಂತನಾಗಿದ್ದಾನೆ.

60. ವಿವಾಹವಾಗುವ ನಿರೀಕ್ಷೆ ಇಲ್ಲದೆ ಮನೆಯಲ್ಲೇ ಉಳಿದುಕೊಂಡಿರುವ (ವೃದ್ಧ) ಮಹಿಳೆಯರು ತಮ್ಮ ಶೃಂಗಾರವನ್ನು ಪ್ರದರ್ಶಿಸದೆ ತಮ್ಮ ಹೊರ ಹೊದಿಕೆಯನ್ನು ಕಳಚಿಟ್ಟರೆ ಅದು ತಪ್ಪಲ್ಲ. ಅವರು ಮಾನವಂತರಾಗಿ ಉಳಿದರೆ ಅದು ಅವರಿಗೇ ಉತ್ತಮ. ಅಲ್ಲಾಹನಂತು ಎಲ್ಲವನ್ನೂ ಕೇಳುತ್ತಾನೆ ಮತ್ತು ಎಲ್ಲವನ್ನೂ ಅರಿತಿರುತ್ತಾನೆ.

61. ಕಣ್ಣು ಕಾಣಿಸದವನಾಗಿರಲಿ, ನಡೆಯಲಾಗದವನಾಗಿರಲಿ, ರೋಗಪೀಡಿತನಾಗಿರಲಿ ಅಥವಾ ನೀವೇ ಆಗಿರಲಿ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ತಂದೆ-ತಾತಂದಿರ ಮನೆಯಲ್ಲಿ, ನಿಮ್ಮ ತಾಯಿಯ ಮನೆಯಲ್ಲಿ, ನಿಮ್ಮ ಸಹೋದರರ ಮನೆಯಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಯಲ್ಲಿ ಅಥವಾ ನಿಮ್ಮ ತಂದೆಯ ಸಹೋದರರ ಮನೆಯಲ್ಲಿ ಅಥವಾ ನಿಮ್ಮ ತಂದೆಯ ಸಹೋದರಿಯರ ಮನೆಯಲ್ಲಿ ಅಥವಾ ನಿಮ್ಮ ತಾಯಿಯ ಸಹೋದರರ ಮನೆಯಲ್ಲಿ ಅಥವಾ ನಿಮ್ಮ ತಾಯಿಯ ಸಹೋದರಿಯರ ಮನೆಯಲ್ಲಿ ಅಥವಾ ಯಾವ ಮನೆಗಳ ಚಾವಿಗಳು ನಿಮ್ಮ ಕೈಯಲ್ಲಿವೆಯೋ ಆ ಮನೆಗಳಲ್ಲಿ ಅಥವಾ ನಿಮ್ಮ ಮಿತ್ರರ ಮನೆಗಳಲ್ಲಿ ನೀವು ಭೋಜನ ಮಾಡುವುದರಲ್ಲಿ ತಪ್ಪೇನಿಲ್ಲ. ನೀವು ಸಾಮೂಹಿಕವಾಗಿ ಭೋಜನ ಮಾಡಿದರೂ ಒಂಟಿಯಾಗಿ ಮಾಡಿದರೂ ತಪ್ಪೇನಿಲ್ಲ. ನೀವು ಮನೆಯನ್ನು ಪ್ರವೇಶಿಸುವಾಗ ನಿಮ್ಮವರಿಗೆ ಸಲಾಮ್ ಹೇಳಿರಿ. ಇದು ಅಲ್ಲಾಹನ ಕಡೆಯಿಂದ ಕಲಿಸಲಾಗಿರುವ ಸಮೃದ್ಧಿದಾಯಕವಾದ, ಶುದ್ಧವಾದ ಶುಭ ಹಾರೈಕೆಯಾಗಿದೆ. ನೀವು ಅರ್ಥ ಮಾಡಿ ಕೊಳ್ಳಬೇಕೆಂದು, ಈ ರೀತಿ ಅಲ್ಲಾಹನು ನಿಮಗೆ (ತನ್ನ) ವಚನಗಳನ್ನು ವಿವರಿಸುತ್ತಾನೆ.

62. ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟವರು ಮತ್ತು ಯಾವುದೇ ಸಾಮೂಹಿಕ ಕಾರ್ಯಾಚರಣೆಯಲ್ಲಿ ಅವರ (ದೂತರ) ಜೊತೆಗಿರುವಾಗ ಅವರ ಅನುಮತಿ ಪಡೆಯದೆ ಹೊರಟು ಹೋಗದವರೇ ನಿಜವಾದ ವಿಶ್ವಾಸಿಗಳು. ಖಂಡಿತವಾಗಿಯೂ ನಿಮ್ಮೊಡನೆ (ದೂತರೊಡನೆ) ಅನುಮತಿ ಕೇಳುವವರೇ ನಿಜವಾಗಿ ಅಲ್ಲಾಹ್ ಮತ್ತು ಅವನ ದೂತರಲ್ಲಿ ನಂಬಿಕೆ ಉಳ್ಳವರು. ಅವರು ನಿಮ್ಮ (ದೂತರ) ಬಳಿಗೆ ಬಂದು ತಮ್ಮ ಯಾವುದಾದರೂ (ಖಾಸಗಿ) ಕೆಲಸಕ್ಕಾಗಿ ನಿಮ್ಮೊಡನೆ ಅನುಮತಿ ಕೇಳಿದರೆ, ನೀವು ಅವರ ಪೈಕಿ ನೀವಿಚ್ಛಿಸುವವರಿಗೆ ಅನುಮತಿ ನೀಡಿರಿ. ಮತ್ತು ಅವರ ಕ್ಷಮೆಗಾಗಿ ಅಲ್ಲಾಹನೊಡನೆ ಪ್ರಾರ್ಥಿಸಿರಿ. ಅಲ್ಲಾಹನು ಖಂಡಿತವಾಗಿಯೂ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.

63. ನೀವು ನಿಮ್ಮ ನಡುವೆ, ದೇವದೂತರ ಕರೆಯನ್ನು, ನೀವು ಪರಸ್ಪರರಿಗೆ ನೀಡುವ ಕರೆಯಂತೆ ಪರಿಗಣಿಸಬೇಡಿ. ನಿಮ್ಮ ಪೈಕಿ ಗುಟ್ಟಾಗಿ ತಪ್ಪಿಸಿಕೊಳ್ಳುವವರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವನ ಆದೇಶಕ್ಕೆ ವಿರುದ್ಧವಾಗಿ ನಡೆಯುವವರು ಜಾಗೃತರಾಗಿರಲಿ. ಅವರ ಮೇಲೆ ವಿಪತ್ತೇನಾದರೂ ಬಂದೆರಗಬಹುದು ಅಥವಾ ಯಾತನಾಮಯ ಶಿಕ್ಷೆಗೆ ಅವರು ತುತ್ತಾಗಬಹುದು.

64. ನಿಮಗೆ ತಿಳಿದಿರಲಿ! ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿ ಇರುವುದೆಲ್ಲವೂ ಅಲ್ಲಾಹನಿಗೇ ಸೇರಿದೆ. ನೀವು ಯಾವ ಸ್ಥಿತಿಯಲ್ಲಿ ಇರುವಿರೆಂಬುದನ್ನು ಅವನು ಖಚಿತವಾಗಿ ಬಲ್ಲನು. ಅವರು ಅವನೆಡೆಗೆ ಮರಳುವ ದಿನ, ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಅವರಿಗೆ ತಿಳಿಸುವನು. ಅಲ್ಲಾಹನು ಎಲ್ಲವನ್ನೂ ಬಲ್ಲವನಾಗಿದ್ದಾನೆ.