35. Fatir

35. ಫಾತಿರ್ (ನಿರ್ಮಾಪಕ)

ವಚನಗಳು – 45, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಎಲ್ಲ ಹೊಗಳಿಕೆಗಳು ಅಲ್ಲಾಹನಿಗೆ. ಆಕಾಶಗಳನ್ನು ಹಾಗೂ ಭೂಮಿಯನ್ನು ನಿರ್ಮಿಸಿದವನು (ಮತ್ತು) ತಲಾ ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳಿರುವ ಮಲಕ್‌ಗಳನ್ನು ದೂತರಾಗಿ ಕಳಿಸಿದವನು ಅವನೇ. ಅವನು ತನ್ನ ಸೃಷ್ಟಿಯಲ್ಲಿ ತಾನಿಚ್ಛಿಸಿದ್ದನ್ನು ಹೆಚ್ಚಿಸುತ್ತಾನೆ. ಅಲ್ಲಾಹನು ಖಂಡಿತ ಎಲ್ಲವನ್ನೂ ಮಾಡಬಲ್ಲವನಾಗಿದ್ದಾನೆ.

2. ಅಲ್ಲಾಹನು ಮಾನವರ ಪಾಲಿಗೆ ತೆರೆದುಕೊಟ್ಟ ಅನುಗ್ರಹವನ್ನು ತಡೆಯಬಲ್ಲವರು ಯಾರೂ ಇಲ್ಲ. ಇನ್ನು, ಅವನು ಏನನ್ನಾದರೂ ತಡೆದಿಟ್ಟರೆ, ಅದನ್ನು ಕೊಡಿಸಬಲ್ಲವರುಯಾರೂ ಇಲ್ಲ. ಮತ್ತು ಅವನು, ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.

3. ಮಾನವರೇ, ಅಲ್ಲಾಹನು ನಿಮಗೆ ನೀಡಿರುವ ಅನುಗ್ರಹಗಳನ್ನು ನೆನಪಿಸಿಕೊಳ್ಳಿರಿ. ನಿಮಗೇನು, ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತನಿದ್ದಾನೆಯೇ? ಅವನು ನಿಮಗೆ ಆಕಾಶಗಳಿಂದಲೂ ಭೂಮಿಯಿಂದಲೂ ಆಹಾರವನ್ನು ಒದಗಿಸುತ್ತಾನೆ. ಅವನ ಹೊರತು ಪೂಜಾರ್ಹರು ಬೇರಿಲ್ಲ. ಹೀಗಿರುತ್ತಾ, ನೀವು ಅದೆಲ್ಲಿ ಅಲೆಯುತ್ತಿರುವಿರಿ?

4. (ದೂತರೇ,) ಅವರು ನಿಮ್ಮನ್ನು ತಿರಸ್ಕರಿಸುತ್ತಿದ್ದರೆ (ನಿಮಗೆ ತಿಳಿದಿರಲಿ), ನಿಮಗಿಂತ ಹಿಂದಿನ ದೂತರುಗಳನ್ನೂ ತಿರಸ್ಕರಿಸಲಾಗಿತ್ತು. ಕೊನೆಗೆ, ಎಲ್ಲ ವಿಷಯಗಳೂ (ತೀರ್ಪಿಗಾಗಿ) ಅಲ್ಲಾಹನ ಬಳಿಗೇ ಮರಳಲಿವೆ.

5. ಮಾನವರೇ, ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯವಾಗಿದೆ. ಇನ್ನು, ಇಹಲೋಕದ ಬದುಕು ನಿಮ್ಮನ್ನು ಮೋಸಗೊಳಿಸದಿರಲಿ. ಹಾಗೆಯೇ, ವಂಚಿಸುವವನು ಅಲ್ಲಾಹನ ವಿಷಯದಲ್ಲಿ ನಿಮ್ಮನ್ನು ವಂಚಿಸದಿರಲಿ.

6. ಶೈತಾನನು ಖಂಡಿತ ನಿಮ್ಮ ಶತ್ರುವಾಗಿದ್ದಾನೆ. ಆದ್ದರಿಂದ ನೀವು ಅವನನ್ನು ಶತ್ರುವೆಂದೇ ಪರಿಗಣಿಸಿರಿ. ತನ್ನ ಪಗಂಡದವರೆಲ್ಲಾ ನರಕವಾಸಿಗಳಾಗಿ ಬಿಡಲೆಂದು ಅವನು ಅವರನ್ನು (ಅದರೆಡೆಗೆ) ಕರೆಯುತ್ತಲೇ ಇರುತ್ತಾನೆ.

7. ಧಿಕ್ಕರಿಸಿದವರಿಗೆ ಕಠಿಣ ಶಿಕ್ಷೆ ಕಾದಿದೆ. ಇನ್ನು, ವಿಶ್ವಾಸಿಗಳಾಗಿದ್ದು, ಸತ್ಕರ್ಮಗಳನ್ನು ಮಾಡಿದವರಿಗೆ ಕ್ಷಮೆ ಹಾಗೂ ದೊಡ್ಡ ಪ್ರತಿಫಲವಿದೆ.

8. ಯಾರಿಗೆ ತನ್ನ ದುಷ್ಟ ಕೆಲಸಗಳನ್ನು ಚಂದಗಾಣಿಸಿ ಬಿಡಲಾಗಿದೆಯೋ ಅವನು ಅವುಗಳನ್ನು ಸತ್ಕಾರ್ಯಗಳಾಗಿಯೇ ಕಾಣುತ್ತಾನೆ. ಖಂಡಿತವಾಗಿಯೂ ಅಲ್ಲಾಹನೇ ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಚಿಸಿದವರಿಗೆ ಸರಿದಾರಿಯನ್ನು ತೋರಿಸುತ್ತಾನೆ. ನೀವು ಅವರ (ಧಿಕ್ಕಾರಿಗಳ) ಕುರಿತು ನೊಂದುಕೊಳ್ಳಬೇಡಿ. ಅವರು ಮಾಡುತ್ತಿರುವ ಎಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು.

9. ಅಲ್ಲಾಹನೇ ಮಾರುತಗಳನ್ನು ಕಳಿಸುತ್ತಾನೆ. ಅವು ಮೋಡಗಳನ್ನು ಹೊತ್ತು ಸಾಗುತ್ತವೆ. ಆ ಬಳಿಕ ನಾವು ಅದನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಹಾಗೂ ಭೂಮಿಯನ್ನು ಅದರ ಮರಣಾನಂತರ ಮತ್ತೆ ಜೀವಂತಗೊಳಿಸುತ್ತೇವೆ ಹೀಗೆಯೇ ಇರುತ್ತದೆ, (ಮರಣಾನಂತರದ) ಪುನರುಜ್ಜೀವನ.

 10. ಗೌರವ ಬಯಸುವವನು (ತಿಳಿದಿರಲಿ), ಗೌರವವೆಲ್ಲವೂ ಅಲ್ಲಾಹನಿಗೇ ಸೇರಿದೆ. ಶುದ್ಧ ವಚನವು ಅವನೆಡೆಗೆ ಏರಿ ಹೋಗುತ್ತದೆ ಮತ್ತು ಸತ್ಕಾರ್ಯವು ಅದನ್ನು ಮೇಲೇರಿಸುತ್ತದೆ. ದುಷ್ಟ ಕೃತ್ಯಗಳಿಗಾಗಿ ಸಂಚು ಹೂಡುತ್ತಿರುವವರಿಗೆ ತೀವ್ರವಾದ ಶಿಕ್ಷೆ ಕಾದಿದೆ ಮತ್ತು ಅವರ ಸಂಚುಗಳೆಲ್ಲಾ ನಾಶವಾಗಲಿವೆ.

11. ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಮತ್ತು ಆ ಬಳಿಕ ವೀರ್ಯದಿಂದ ಸೃಷ್ಟಿಸಿದನು ಮತ್ತು ನಿಮ್ಮನ್ನು ಜೊತೆಗಳಾಗಿ ಮಾಡಿದನು. ಅವನ ಅರಿವಿನಲ್ಲಿಲ್ಲದೆ ಯಾವ ಹೆಣ್ಣೂ ಗರ್ಭ ಧರಿಸುವುದಿಲ್ಲ, ಹೆರುವುದೂ ಇಲ್ಲ. ಒಬ್ಬ ವ್ಯಕ್ತಿಯ ವಯಸ್ಸಿನಲ್ಲಿ ಆಗುವ ಹೆಚ್ಚಳವಿರಲಿ, ಅವನ ವಯಸ್ಸಿನಲ್ಲಾಗುವ ಕಡಿತವಿರಲಿ, ಎಲ್ಲವೂ ಒಂದು ಗ್ರಂಥದಲ್ಲಿ ದಾಖಲಾಗಿದೆ. ಇದೆಲ್ಲವೂ ಅಲ್ಲಾಹನ ಪಾಲಿಗೆ ಖಂಡಿತ ಸುಲಭವಾಗಿದೆ.

12. ಎರಡು ಕಡಲುಗಳು ಒಂದೇ ತೆರನಾಗಿಲ್ಲ. ಒಂದು ಸಿಹಿಯಾಗಿದ್ದು ದಾಹ ತಣಿಸುವಂತಿದೆ ಮತ್ತು ಕುಡಿಯಲು ಹಿತಕರವಾಗಿದೆ. ಇನ್ನೊಂದು ಖಾರವಾಗಿ ಕಹಿಯಾಗಿದೆ. ಆದರೆ ನೀವು ಅವೆರಡರಿಂದಲೂ (ವಿವಿಧ ಮೀನುಗಳ) ತಾಜಾ ಮಾಂಸವನ್ನು ತಿನ್ನುತ್ತೀರಿ ಮತ್ತು ನೀವು ಧರಿಸುವ (ಮುತ್ತಿನ) ಆಭರಣಗಳನ್ನು ಅವುಗಳಿಂದ ಹೊರತೆಗೆಯುತ್ತೀರಿ. ಮತ್ತು ನೀವು ಅವನ (ಅಲ್ಲಾಹನ) ಅನುಗ್ರಹಗಳನ್ನು ಅರಸುತ್ತಾ ಕೃತಜ್ಞತೆ ಸಲ್ಲಿಸುತ್ತಿರಲಿಕ್ಕಾಗಿ, ಅದರಲ್ಲಿ ಹಡಗುಗಳು (ನೀರನ್ನು) ಸೀಳುತ್ತಾ ಸಾಗುವುದನ್ನು ನೀವು ಕಾಣುತ್ತೀರಿ.

 13. ಅವನೇ ಹಗಲಿನೊಳಗೆ ರಾತ್ರಿಯನ್ನು ಪೋಣಿಸುವವನು ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವವನು ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದವನು. ಎಲ್ಲವೂ ಒಂದು ನಿರ್ದಿಷ್ಟ ಅವಧಿಯ ತನಕ ಚಲಿಸುತ್ತಿರುತ್ತದೆ. ಆ ಅಲ್ಲಾಹನೇ ನಿಮ್ಮ ಒಡೆಯನು. ವಿಶ್ವ ಸಾಮ್ರಾಜ್ಯವು ಅವನಿಗೇ ಸೇರಿದೆ. ಅತ್ತ, ಅವನ ಹೊರತು ನೀವು ಪ್ರಾರ್ಥಿಸುವ ಬೇರೆ ಯಾರೂ ಒಂದು ಖರ್ಜೂರದ ಬೀಜದ ತೊನ್ನಿಗೂ ಮಾಲಕರಲ್ಲ.

14. ನೀವು ಅವರಿಗೆ ಮೊರೆ ಇಟ್ಟರೆ ನಿಮ್ಮ ಮೊರೆ ಅವರಿಗೆ ಕೇಳಿಸುವುದಿಲ್ಲ. ಒಂದು ವೇಳೆ ಅವರು ಅದನ್ನು ಕೇಳಿಸಿಕೊಂಡರೂ ನಿಮಗೆ ಉತ್ತರ ನೀಡಲು ಅವರಿಗೆ ಸಾಧ್ಯವಿಲ್ಲ. ಮುಂದೆ, ಪುನರುತ್ಥಾನದ ದಿನ ಅವರು, ನೀವು ಅವರನ್ನು (ದೇವತ್ವದಲ್ಲಿ) ಪಾಲುದಾರರಾಗಿಸಿದ್ದ ವಿಷಯವನ್ನೇ ನಿರಾಕರಿಸಿಬಿಡುವರು. ಆ ಬಲ್ಲವನು (ಅಲ್ಲಾಹನು) ಎಚ್ಚರಿಸುವಂತೆ ನಿಮ್ಮನ್ನು ಎಚ್ಚರಿಸುವವನು ಬೇರಾರೂ ಇಲ್ಲ.

15. ಮಾನವರೇ, ನೀವು ಅಲ್ಲಾಹನ ನೆರವನ್ನು ಅವಲಂಬಿಸಿರುವಿರಿ. ಆದರೆ ಅಲ್ಲಾಹನು ಎಲ್ಲ ಅವಲಂಬನೆಗಳಿಂದ ಮುಕ್ತನಾಗಿದ್ದಾನೆ ಮತ್ತು ಹೊಗಳಿಕೆಗೆ ಅರ್ಹನಾಗಿದ್ದಾನೆ.

16. ಅವನು ಬಯಸಿದರೆ, ನಿಮ್ಮನ್ನು ತೊಲಗಿಸಿ ಹೊಸತೊಂದು ಸೃಷ್ಟಿಯನ್ನು ತರಬಲ್ಲನು.

17. ಅಲ್ಲಾಹನ ಮಟ್ಟಿಗೆ ಅದು ಕಷ್ಟವೇನಲ್ಲ.

 18. (ಪುನರುತ್ಥಾನ ದಿನ) ಯಾವ ಹೊರೆ ಹೊರುವಾತನೂ ಇನ್ನೊಬ್ಬರ ಹೊರೆಯನ್ನು ಹೊರಲಾರನು. (ಪಾಪಗಳ) ಹೊರೆ ಹೊತ್ತವನು, ತನ್ನ ಹೊರೆಯೆಡೆಗೆ (ಅದನ್ನು ಹಂಚಿಕೊಳ್ಳಲು) ಯಾರನ್ನಾದರೂ ಕರೆದರೆ, ಯಾರೂ ಅದರ ಸಣ್ಣ ಭಾಗವನ್ನೂ ಹೊರಲಾರರು – ಅವನು ಅವರ ಹತ್ತಿರದ ಬಂಧುವಾಗಿದ್ದರೂ ಸರಿಯೇ! ತಮ್ಮ ಒಡೆಯನನ್ನು ಕಾಣದೆಯೇ ಅವನಿಗೆ ಅಂಜುತ್ತಿರುವವರನ್ನು ಹಾಗೂ ನಮಾಝನ್ನು ಪಾಲಿಸುತ್ತಿರುವವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಶುದ್ಧನಾಗಿರುವವನು ಸ್ವತಃ ತನ್ನ ಹಿತಕ್ಕಾಗಿ ಶುದ್ಧನಾಗುತ್ತಾನೆ. ಅಂತಿಮವಾಗಿ (ಎಲ್ಲರೂ) ಅಲ್ಲಹನೆಡೆಗೇ ಮರಳ ಬೇಕಾಗಿದೆ.

19. ಕುರುಡನು ಮತ್ತು ಕಾಣುವವನು ಸಮಾನರಲ್ಲ.

20. ಕತ್ತಲುಗಳು ಮತ್ತು ಬೆಳಕು ಸಮಾನವಲ್ಲ.

21. ನೆರಳು ಮತ್ತು ಸುಡು ಬಿಸಿಲು ಒಂದಲ್ಲ.

22. ಜೀವಂತರು ಹಾಗೂ ಸತ್ತವರು ಸಮಾನರಲ್ಲ. ಅಲ್ಲಾಹನು ತಾನಿಚ್ಛಿಸಿದವರಿಗೆ ಖಂಡಿತ ಕೇಳಿಸಬಲ್ಲನು. ಆದರೆ ಗೋರಿಗಳಲ್ಲಿರುವವರಿಗೆ ಕೇಳಿಸಲು ನಿಮಗೆ ಸಾಧ್ಯವಾಗದು.

23. ನೀವು ಎಚ್ಚರಿಸುವವರು ಮಾತ್ರ.

24. (ದೂತರೇ,) ನಾವು ಖಂಡಿತ ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ, ಸತ್ಯದೊಂದಿಗೆ ಕಳಿಸಿರುವೆವು. ನಿಜವಾಗಿ, ಎಚ್ಚರಿಸುವವನೊಬ್ಬನು ಬಂದಿಲ್ಲದ ಯಾವ ಸಮುದಾಯವೂ ಇಲ್ಲ.

25. ಅವರು ನಿಮ್ಮನ್ನು (ದೇವದೂತರನ್ನು) ತಿರಸ್ಕರಿಸುತ್ತಾರೆಂದಾದರೆ, (ನಿಮಗೆ ತಿಳಿದಿರಲಿ), ಅವರ ಹಿಂದಿನವರೂ ತಿರಸ್ಕರಿಸಿದ್ದಾರೆ. ಅವರ (ಕಾಲದ) ದೂತರು, ಸ್ಪಷ್ಟ ಪುರಾವೆಗಳೊಂದಿಗೆ, ದಾಖಲೆಗಳೊಂದಿಗೆ ಹಾಗೂ ಉಜ್ವಲ ಗ್ರಂಥದೊಂದಿಗೆ ಅವರ ಬಳಿಗೆ ಬಂದಿದ್ದರು.

26. ಕೊನೆಗೆ ನಾನು ಧಿಕ್ಕಾರಿಗಳನ್ನು ದಂಡಿಸಿದೆನು. (ನೋಡಿರಿ) ನನ್ನ ಶಿಕ್ಷೆ ಹೇಗಿತ್ತೆಂದು.

27. ನೀವು ನೋಡಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸುತ್ತಾನೆ. ಅದರ ಮೂಲಕ ನಾವು ವಿವಿಧ ಬಣ್ಣದ ಫಲಗಳನ್ನು ಬೆಳೆಸುತ್ತೇವೆ. ಅತ್ತ ಪರ್ವತಗಳಲ್ಲಿ ವಿವಿಧ ಘಟ್ಟಗಳಿವೆ. ಅವು ಬಿಳಿ, ಕೆಂಪು ಹಾಗೂ ವಿವಿಧ ಬಣ್ಣಗಳಲ್ಲಿರುತ್ತವೆ. ಕೆಲವು ಗಾಢವಾದ ಕಪ್ಪು ಬಣ್ಣದ್ದಾಗಿರುತ್ತವೆ.

28. ಜನರಲ್ಲಿ, ವಿವಿಧ ಜಂತುಗಳಲ್ಲಿ ಮತ್ತು ಜಾನುವಾರುಗಳಲ್ಲಿ ಅನೇಕರ ಬಣ್ಣಗಳು ಭಿನ್ನವಾಗಿರುತ್ತವೆ. ದಾಸರ ಪೈಕಿ ಜ್ಞಾನವುಳ್ಳವರು ಮಾತ್ರ ಅಲ್ಲಾಹನಿಗೆ ಅಂಜುತ್ತಾರೆ. ಅಲ್ಲಾಹನು ಖಂಡಿತ, ಪ್ರಚಂಡನೂ ಕ್ಷಮಿಸುವವನೂ ಆಗಿದ್ದಾನೆ.

29. ಅಲ್ಲಾಹನ ಗ್ರಂಥವನ್ನು ಓದುವವರು, ನಮಾಝನ್ನು ಪಾಲಿಸುವವರು ಮತ್ತು ನಾವು ತಮಗೆ ನೀಡಿರುವುದನ್ನು ಗುಟ್ಟಾಗಿಯೂ ಬಹಿರಂಗವಾಗಿಯೂ (ಸತ್ಕಾರ್ಯಕ್ಕೆ) ಖರ್ಚು ಮಾಡುವವರು ಖಂಡಿತ, ನಷ್ಟವಿಲ್ಲದ ವ್ಯವಹಾರವೊಂದರ ನಿರೀಕ್ಷೆಯಲ್ಲಿದ್ದಾರೆ.

30. ಅವನು (ಅಲ್ಲಾಹನು) ತಮಗೆ ತಮ್ಮ ಪ್ರತಿಫಲವನ್ನು ನೀಡುವನೆಂದು ಹಾಗೂ ಅವನು ತನ್ನ ಅನುಗ್ರಹದಿಂದ ಇನ್ನಷ್ಟು ಹೆಚ್ಚಿಸಿ ನೀಡುವನೆಂದು (ಅವರು ನಿರೀಕ್ಷಿಸುತ್ತಿದ್ದಾರೆ). ಅವನು ಖಂಡಿತ ಕ್ಷಮಿಸುವವನು ಮತ್ತು ಪುರಸ್ಕರಿಸುವವನಾಗಿದ್ದಾನೆ.

31. (ದೂತರೇ,) ನಾವು ನಿಮಗೆ ಇಳಿಸಿಕೊಟ್ಟಿರುವ ಗ್ರಂಥವೇ ಸತ್ಯವಾಗಿದೆ. ಅದು, ಈಗಾಗಲೇ ಅವರ ಬಳಿ ಇರುವುದನ್ನು ಸಮರ್ಥಿಸುತ್ತದೆ. ಅಲ್ಲಾಹನು ಖಂಡಿತವಾಗಿಯೂ ತನ್ನ ದಾಸರ ಕುರಿತು ಅರಿವುಳ್ಳವನು ಹಾಗೂ ಎಲ್ಲವನ್ನೂ ನೋಡುತ್ತಿರುವವನಾಗಿದ್ದಾನೆ.

32. ಮುಂದೆ, ನಮ್ಮ ದಾಸರ ಪೈಕಿ ನಾವು ಆರಿಸಿದವರನ್ನು ನಾವು ಗ್ರಂಥದ ಉತ್ತರಾಧಿಕಾರಿಗಳಾಗಿಸಿದೆವು. ಇದೀಗ ಅವರಲ್ಲಿ ಕೆಲವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುವವರಾಗಿದ್ದಾರೆ. ಅವರಲ್ಲಿ ಮಧ್ಯಮ ನಿಲುವಿನವರೂ ಇದ್ದಾರೆ ಮತ್ತು ಅವರಲ್ಲಿ ಅಲ್ಲಾಹನ ಆದೇಶದಂತೆ ಸತ್ಕಾರ್ಯಗಳಲ್ಲಿ ಸ್ಪರ್ಧಿಸಿ ಮುನ್ನಡೆಯುವವರೂ ಇದ್ದಾರೆ. ಇದು (ಉತ್ತರಾಧಿಕಾರವು) ಮಹಾ ಔದಾರ್ಯವಾಗಿದೆ.

33. ಅವರು ಶಾಶ್ವತವಾದ ತೋಟಗಳನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಬಂಗಾರ ಮತ್ತು ಮುತ್ತಿನ ಕಂಕಣಗಳನ್ನು ತೊಡಿಸಲಾಗುವುದು ಹಾಗೂ ಅಲ್ಲಿ ಅವರ ಉಡುಗೆಯು ರೇಶ್ಮೆಯದ್ದಾಗಿರುವುದು.

 34. ಅವರು ಹೇಳುವರು; ನಮ್ಮ ಸಂಕಟವನ್ನು ನಿವಾರಿಸಿದ ಅಲ್ಲಾಹನಿಗೆ ಪ್ರಶಂಸೆಗಳು ಸಲ್ಲಲಿ, ಖಂಡಿತವಾಗಿಯೂ ನಮ್ಮೊಡೆಯನು ಕ್ಷಮಿಸುವವನು ಹಾಗೂ ಪುರಸ್ಕರಿಸುವವನಾಗಿದ್ದಾನೆ.

35. ಅವನೇ, ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತವಾದ ನಿವಾಸಗಳಲ್ಲಿ ನೆಲೆಸಿದವನು. ಇಲ್ಲಿ ಯಾವ ಸಂಕಟವೂ ನಮ್ಮನ್ನು ಬಾಧಿಸಲಾರದು ಮತ್ತು ಇಲ್ಲಿ ಯಾವ ದಣಿವೂ ನಮಗೆ ತಟ್ಟದು.

36. ಅತ್ತ, ಧಿಕ್ಕಾರಿಗಳಿಗೆ ನರಕದ ಬೆಂಕಿ ಸಿಗಲಿದೆ. ಅಲ್ಲಿ ಅವರಿಗೆ ಸಾವನ್ನೂ ವಿಧಿಸಲಾಗದು ಮತ್ತು ಅವರ ಶಿಕ್ಷೆಯಲ್ಲಿ ಕಿಂಚಿತ್ ಕಡಿತವನ್ನೂ ಮಾಡಲಾಗದು. ಹೀಗಿರುವುದು, ಪ್ರತಿಯೊಬ್ಬ ಕೃತಘ್ನನಿಗೆ ನಾವು ನೀಡುವ ಪ್ರತಿಫಲ.

37. ಅವರು ಅದರೊಳಗೆ ಚೀತ್ಕರಿಸುವರು; ನಮ್ಮೊಡೆಯಾ! ನಮ್ಮನ್ನು (ಇಲ್ಲಿಂದ) ಹೊರತೆಗೆ, ನಾವು ಈ ಹಿಂದೆ ಮಾಡಿದ್ದಕ್ಕಿಂತ ಭಿನ್ನವಾದ, ಸತ್ಕರ್ಮಗಳನ್ನು ಮಾಡುವೆವು. (ಅವರೊಡನೆ ಹೇಳಲಾಗುವುದು); ನಾವು ನಿಮಗೊಂದು ಆಯುಷ್ಯವನ್ನು ನೀಡಿರಲಿಲ್ಲವೇ? (ಅದರಲ್ಲಿ) ಉಪದೇಶ ಸ್ವೀಕರಿಸುವವನು ಉಪದೇಶ ಸ್ವೀಕರಿಸಬಹುದಿತ್ತು. ಮತ್ತು ಎಚ್ಚರಿಸುವವರೂ ನಿಮ್ಮ ಬಳಿಗೆ ಬಂದಿದ್ದರು. ಇದೀಗ ಸವಿಯಿರಿ, ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ.

38. ಅಲ್ಲಾಹನು, ಆಕಾಶಗಳ ಹಾಗೂ ಭೂಮಿಯ ಎಲ್ಲ ಗುಪ್ತ ವಿಷಯಗಳನ್ನೂ ಖಂಡಿತ ಬಲ್ಲನು. ಅವನಂತು ಮನಸ್ಸಿನೊಳಗಿನ ವಿಚಾರಗಳನ್ನೂ ಖಚಿತವಾಗಿ ಬಲ್ಲನು.

39. ಅವನೇ, ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ನೇಮಿಸಿದವನು. ಧಿಕ್ಕರಿಸಿದವನು ತನ್ನ ಧಿಕ್ಕಾರದ ಫಲವನ್ನು ತಾನೇ ಅನುಭವಿಸುವನು. ಇನ್ನು, ಧಿಕ್ಕಾರಿಗಳ ಧಿಕ್ಕಾರವು ಅವರ ಒಡೆಯನ ಕ್ರೋಧವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ. ಹಾಗೆಯೇ, ಧಿಕ್ಕಾರಿಗಳ ಧಿಕ್ಕಾರವು ನಷ್ಟವನ್ನಲ್ಲದೆ ಬೇರೇನನ್ನೂ ಹೆಚ್ಚಿಸುವುದಿಲ್ಲ.

40. ಹೇಳಿರಿ; ಅಲ್ಲಾಹನನ್ನು ಬಿಟ್ಟು ನೀವು ಪ್ರಾರ್ಥಿಸುವ ಆ ನಿಮ್ಮ ಪಾಲುದಾರರನ್ನು ನೀವು ನೋಡಿದಿರಾ? ಅವರು ಭೂಮಿಯಲ್ಲಿನ ಏನನ್ನು ಸೃಷ್ಟಿಸಿದ್ದಾರೆ ಎಂಬುದನ್ನು ನನಗೆ ತೋರಿಸಿರಿ. ಅಥವಾ ಆಕಾಶಗಳಲ್ಲಿ ಅವರಿಗೇನಾದರೂ ಪಾಲಿದೆಯೇ? ಅವರು ಅಧಿಕೃತ ದಾರಿಯಲ್ಲಿದ್ದಾರೆನ್ನುವುದಕ್ಕೆ ಪುರಾವೆಯಾಗಿ ನಾವೇನು ಅವರಿಗೆ ಗ್ರಂಥವನ್ನು ನೀಡಿದ್ದೇವೆಯೇ? ನಿಜವಾಗಿ ಅಕ್ರಮಿಗಳು ಪರಸ್ಪರರಿಗೆ ನೀಡುವ ಆಶ್ವಾಸನೆಗಳೆಲ್ಲಾ ಕೇವಲ ಮೋಸಗಳಾಗಿರುತ್ತವೆ.

41. ಖಂಡಿತ ಅಲ್ಲಾಹನೇ ಆಕಾಶಗಳನ್ನು ಹಾಗೂ ಭೂಮಿಯನ್ನು, ಅವು ಸರಿದು ಹೋಗದಂತೆ ನಿಯಂತ್ರಿಸಿಟ್ಟಿರುವನು. ಒಂದು ವೇಳೆ ಅವು ಸರಿದು ಬಿಟ್ಟರೆ ಆ ಬಳಿಕ ಅವುಗಳನ್ನು ನಿಯಂತ್ರಿಸಬಲ್ಲವರು ಯಾರೂ ಇಲ್ಲ. ಅವನು ಖಂಡಿತ ಅತ್ಯಂತ ಸಂಯಮಿ ಹಾಗೂ ಕ್ಷಮಾಶೀಲನಾಗಿದ್ದಾನೆ.

42. ಎಚ್ಚರಿಸುವ ದೂತರು ನಮ್ಮ ಬಳಿಗೆ ಬಂದರೆ, ನಾವು ಇತರೆಲ್ಲ ಸಮುದಾಯಗಳಿಗಿಂತ ಹೆಚ್ಚು ಸನ್ಮಾರ್ಗಿಗಳಾಗುವೆವು ಎಂದು ಅವರು ಅಲ್ಲಾಹನ ಹೆಸರಲ್ಲಿ ಭಾರೀ ಆಣೆಗಳನ್ನು ಹಾಕಿ ಹೇಳುತ್ತಿದ್ದರು. ಕೊನೆಗೆ, ಎಚ್ಚರಿಸುವ ದೂತರು ಅವರ ಬಳಿಗೆ ಬಂದಾಗ, ತೀವ್ರವಾಗಿ ಬಿಟ್ಟದ್ದು ಅವರ ಜಿಗುಪ್ಸೆ ಮಾತ್ರ.

43. (ಅವರು) ಭೂಮಿಯಲ್ಲಿ ಮೆರೆದ ಅಹಂಕಾರ ಹಾಗೂ (ಅವರ) ದುಷ್ಟಸಂಚುಗಳೇ ಅದಕ್ಕೆ ಕಾರಣವಾಗಿದ್ದವು. ದುಷ್ಟ ಸಂಚುಗಳು, ಅವುಗಳನ್ನು ರಚಿಸುವವರ ಪಾಲಿಗೇ ಘಾತಕವಾಗಿರುತ್ತವೆ. ಅವರು, ಕಾಯುತ್ತಿರುವುದು ಗತ ಕಾಲದವರಿಗೆ ಅನ್ವಯಿಸಲಾದ ಸಂಹಿತೆಗಾಗಿಯೇ ತಾನೇ? ಅಲ್ಲಾಹನ ಸಂಹಿತೆಯಲ್ಲಿ ನೀವು ಯಾವುದೇ ಬದಲಾವಣೆಯನ್ನು ಕಾಣಲಾರಿರಿ. ಮತ್ತು ನೀವು ಅಲ್ಲಾಹನ ನಿಯಮದಲ್ಲಿ ಯಾವುದೇ ಪರಿವರ್ತನೆಯನ್ನು ಕಾಣಲಾರಿರಿ.

44. ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದು ಅವರಿಗೆ ಕಾಣುವಂತಾಗಲು ಅವರೇನು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಅವರಂತು ಇವರಿಗಿಂತ ತುಂಬಾ ಶಕ್ತಿಶಾಲಿಗಳಾಗಿದ್ದರು. ಆದರೆ ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಮಣಿಸಬಲ್ಲ ಯಾವ ವಸ್ತುವೂ ಇಲ್ಲ. ಖಂಡಿತವಾಗಿಯೂ ಅವನು ಎಲ್ಲವನ್ನೂ ಬಲ್ಲ ಸರ್ವಶಕ್ತನಾಗಿದ್ದಾನೆ.

45. ಒಂದು ವೇಳೆ ಅಲ್ಲಾಹನು ಮನುಷ್ಯರನ್ನು ಅವರ ಕೃತ್ಯಗಳಿಗಾಗಿ (ತಕ್ಷಣವೇ) ಶಿಕ್ಷಿಸುವುದಾಗಿದ್ದರೆ, ಅವನು ಇದರ (ಭೂಮಿಯ) ಮೇಲೆ ಒಬ್ಬ ಜೀವಿಯನ್ನೂ ಉಳಿಸುತ್ತಿರಲಿಲ್ಲ. ನಿಜವಾಗಿ ಅವನು ಅವರಿಗೆ ಒಂದು ನಿಗದಿತ ಸಮಯದ ತನಕ ಕಾಲಾವಕಾಶ ನೀಡುತ್ತಾನೆ. ಕೊನೆಗೆ ಆ ನಿಗದಿತ ಸಮಯವು ಬಂದು ಬಿಟ್ಟಾಗ (ಶಿಕ್ಷೆ ಆರಂಭವಾಗುತ್ತದೆ). ಅಲ್ಲಾಹನು ಖಂಡಿತ ತನ್ನ ದಾಸರನ್ನು ನೋಡುತ್ತಿರುತ್ತಾನೆ.