21. Al Anbiya

21. ಅಲ್ ಅಂಬಿಯಾ (ಪ್ರವಾದಿಗಳು)

ವಚನಗಳು -112, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಜನರ ವಿಚಾರಣೆಯ ಸಮಯವು ಹತ್ತಿರವೇ ಇದೆ. ಆದರೂ ಅವರು ನಿಶ್ಚಿಂತರಾಗಿದ್ದಾರೆ ಮತ್ತು ಕಡೆಗಣಿಸುತ್ತಿದ್ದಾರೆ.

2. ಅವರ ಒಡೆಯನ ಕಡೆಯಿಂದ ಅವರ ಬಳಿಗೆ ಪ್ರತಿಯೊಂದು ಹೊಸ ಉಪದೇಶ ಬಂದಾಗಲೂ ಅವರು ಅದನ್ನು ಕೇಳಿ ಗೇಲಿ ಮಾಡಿದ್ದಾರೆ.

3. ಅವರ ಮನಸ್ಸುಗಳು (ಆ ಕುರಿತು) ನಿರಾತಂಕವಾಗಿವೆ. ಮತ್ತು ಅಕ್ರಮಿಗಳು ಗುಟ್ಟಾಗಿ ಪರಸ್ಪರ (ಹೀಗೆಂದು) ಮಾತನಾಡಿಕೊಳ್ಳುತ್ತಿದ್ದಾರೆ;‘‘ಅವನು (ಮುಹಮ್ಮದ್.ಸ.) ನಿಮ್ಮಂತಹ ಒಬ್ಬ ಮಾನವನಲ್ಲದೆ ಬೇರೇನಾದರೂ ಆಗಿರುವನೇ? ನೀವೇನು ಕಣ್ಣಾರೆ ಕಂಡೂ, ಮಾಟದ ಬಳಿಗೆ ಬರುವಿರಾ?’’

4. ಅವರು (ದೂತರು) ಹೇಳಿದರು; ನನ್ನ ಒಡೆಯನು ಆಕಾಶ ಹಾಗೂ ಭೂಮಿಯಲ್ಲಿನ ಪ್ರತಿಯೊಂದು ಮಾತನ್ನೂ ಬಲ್ಲನು. ಅವನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ.

 5. ‘‘ಇವೆಲ್ಲಾ ಕೇವಲ ವಿಕೃತ ಕನಸುಗಳು. ನಿಜವಾಗಿ ಇವುಗಳನ್ನೆಲ್ಲಾ ಸ್ವತಃ ಅವನೇ ರಚಿಸಿ ತರುತ್ತಾನೆ. ಅವನು ಕವಿಯಾಗಿದ್ದಾನೆ. ಗತಕಾಲದಲ್ಲಿ ಕಳಿಸಲ್ಪಟ್ಟವರು (ದೂತರು) ತಂದಂತೆ ಅವನು ಏನಾದರೂ ಪುರಾವೆಯನ್ನು ತರಲಿ’’ ಎಂದು ಅವರು ಹೇಳುತ್ತಾರೆ.

6. ನಾವು ನಾಶ ಮಾಡಿದ, ಅವರಿಗಿಂತ ಹಿಂದಿನ ಯಾವುದೇ ನಾಡಿನವರು (ಪುರಾವೆಯನ್ನು ಕಂಡ ಬಳಿಕವೂ) ನಂಬಿರಲಿಲ್ಲ. ಹೀಗಿರುವಾಗ ಅವರು ನಂಬುವರೇ?

7. (ದೂತರೇ,) ನಿಮಗಿಂತ ಮುಂಚೆಯೂ ನಾವು (ದೂತರಾಗಿ) ಮಾನವರನ್ನು ಮಾತ್ರ ಕಳುಹಿಸಿದ್ದೆವು. ನಾವು ಅವರಿಗೆ ದಿವ್ಯವಾಣಿಯನ್ನು ತಲುಪಿಸಿದ್ದೆವು. (ಜನರೇ) ನಿಮಗೆ ತಿಳಿದಿಲ್ಲವಾದರೆ ಬಲ್ಲವರೊಡನೆ ಕೇಳಿರಿ.

8. ಆಹಾರ ಸೇವಿಸದ ಶರೀರವನ್ನೇನೂ ನಾವು ಅವರಿಗೆ ನೀಡಿರಲಿಲ್ಲ ಮತ್ತು ಅವರು ಶಾಶ್ವತ ಜೀವಿಗಳೂ ಆಗಿರಲಿಲ್ಲ.

9. ನಾವು ಅವರಿಗೆ ನೀಡಿದ್ದ ವಚನಗಳನ್ನು ಸತ್ಯವಾಗಿಸಿದೆವು ಮತ್ತು ನಾವು ಅವರನ್ನೂ ನಾವಿಚ್ಛಿಸಿದ ಇತರರನ್ನೂ ಸಂರಕ್ಷಿಸಿದೆವು ಮತ್ತು ನಾವು, ಎಲ್ಲೆ ಮೀರುವವರನ್ನು ನಾಶ ಮಾಡಿದೆವು.

10. ನಾವಿದೋ ನಿಮ್ಮೆಡೆಗೆ ನಿಮ್ಮ ಪ್ರಸ್ತಾಪವಿರುವ ಒಂದು ಗ್ರಂಥವನ್ನು (ಕುರ್‌ಆನ್)ಇಳಿಸಿರುವೆವು. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ?

11. ಅದೆಷ್ಟು ನಾಡುಗಳನ್ನು ನಾವು ನಾಶಮಾಡಿ ಬಿಟ್ಟೆವು! ಅವು ಅಕ್ರಮಿ ನಾಡುಗಳಾಗಿದ್ದವು. ಅವರ ಬಳಿಕ ನಾವು ಬೇರೆ ಜನಾಂಗಗಳನ್ನು ಹುಟ್ಟಿಸಿದೆವು.

12. ನಮ್ಮ ಶಿಕ್ಷೆಯ ಸಪ್ಪಳ ಕೇಳಿಸಿದಾಗ ಅವರು ಅಲ್ಲಿಂದ ಓಡತೊಡಗಿದರು.

13.‘‘ಓಡಬೇಡಿ! ನಿಮ್ಮ ವಿಚಾರಣೆ ನಡೆಯುವಂತಾಗಲು, ನೀವೀಗ ನಿಮ್ಮ ಸುಖ ಭೋಗದ ಸ್ಥಳಕ್ಕೆ ಮತ್ತು ನಿಮ್ಮ ನಿವಾಸಗಳಿಗೆ ಮರಳಿರಿ’’ (ಎಂದು ಅವರೊಡನೆ ಹೇಳಲಾಯಿತು).

14. ಅವರು ಹೇಳಿದರು; ಅಯ್ಯೋ ನಮ್ಮ ದೌರ್ಭಾಗ್ಯವೇ! ನಾವು ಖಂಡಿತ ಅಕ್ರಮಿಗಳಾಗಿದ್ದೆವು.

15. ನಾವು ಅವರನ್ನು ಫಸಲು ಕೊಯ್ದ ಹೊಲವಾಗಿ ಮತ್ತು ಕಿಡಿ ಆರಿದ ಬೂದಿಯ ರಾಶಿಯಾಗಿ ಮಾರ್ಪಡಿಸುವ ತನಕವೂ ಅವರ ಈ ರೋದನವು ಮುಂದುವರಿದಿತ್ತು.

16. ಆಕಾಶವನ್ನು ಮತ್ತು ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಕೇವಲ ಮೋಜಿಗಾಗಿ ಸೃಷ್ಟಿಸಿಲ್ಲ.

17. ಒಂದು ವೇಳೆ ನಮಗೆ ಮೋಜು ಮಾಡಬೇಕಿದ್ದರೆ, (ಮತ್ತು) ನಿಜಕ್ಕೂ ನಾವು ಹಾಗೆ ಮಾಡ ಬಯಸಿದ್ದರೆ, ನಾವು ಅದನ್ನು ನಮ್ಮಲ್ಲೇ ಮಾಡಿಕೊಳ್ಳುತ್ತಿದ್ದೆವು.

18. ನಾವು ಸತ್ಯವನ್ನು ಮಿಥ್ಯದ ಮೇಲೆ ಅಪ್ಪಳಿಸಿದಾಗ ಅದು (ಸತ್ಯವು) ಅದನ್ನು (ಮಿಥ್ಯವನ್ನು) ಹೊಸಕಿ ಹಾಕುತ್ತದೆ ಮತ್ತು ಅದು (ಮಿಥ್ಯವು) ನುಚ್ಚು ನೂರಾಗಿ ಬಿಡುತ್ತದೆ. ನೀವು ರಚಿಸಿಕೊಂಡವುಗಳಿಂದಾಗಿ (ನಿಮ್ಮ ಮಿಥ್ಯ ನಂಬಿಕೆಗಳಿಂದಾಗಿ) ನಿಮಗೆ ವಿನಾಶ ಕಾದಿದೆ.

19. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನಿಗೇ ಸೇರಿರುವರು. ಇನ್ನು, ಅವನ ಬಳಿ ಇರುವವರಂತು, ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ ಮತ್ತು ಅವರು ದಣಿಯುವುದೂ ಇಲ್ಲ.

20. ಅವರು ಇರುಳಲ್ಲೂ ಹಗಲಲ್ಲೂ ಅವನ ಪಾವಿತ್ರವನ್ನು ಜಪಿಸುತ್ತಿರುತ್ತಾರೆ ಮತ್ತು ಅವರು ಆಲಸ್ಯ ತೋರುವುದಿಲ್ಲ.

21. ಅವರು ಭೂಮಿಯಿಂದ ಆರಿಸಿ ಕೊಂಡಿರುವ ದೇವರುಗಳು, (ಸತ್ತವರನ್ನು) ಮತ್ತೆ ಜೀವಂತಗೊಳಿಸಬಲ್ಲರೇ?

22. ಒಂದು ವೇಳೆ ಅವುಗಳಲ್ಲಿ (ಭೂಮಿ – ಆಕಾಶಗಳಲ್ಲಿ) ಅಲ್ಲಾಹನ ಹೊರತು ಬೇರೆ ದೇವರುಗಳು ಇದ್ದಿದ್ದರೆ ಅವೆರಡೂ ಅಸ್ತವ್ಯಸ್ತವಾಗಿ ಬಿಡುತ್ತಿದ್ದವು. ವಿಶ್ವಸಿಂಹಾಸನದ ಒಡೆಯನಾದ ಅಲ್ಲಾಹನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನು.

23. ಅವನ ಯಾವುದೇ ಕೃತ್ಯದ ಕುರಿತು ಯಾರೂ ಅವನನ್ನು ವಿಚಾರಿಸಲಾರರು. ಅದರೆ ಅವರ (ಇತರೆಲ್ಲರ) ವಿಚಾರಣೆ ಖಂಡಿತ ನಡೆಯುವುದು.

24. ಅವರೇನು, ಅವನ (ಅಲ್ಲಾಹನ) ಹೊರತು ಇತರರನ್ನು ದೇವರಾಗಿಸಿಕೊಂಡಿರುವರೇ? ಹೇಳಿರಿ; ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು (ಕುರ್‌ಆನ್) ನನ್ನ ಬಳಿ ಇರುವ ಉಪದೇಶವೂ ಇದುವೇ ಮತ್ತು ನನ್ನ ಹಿಂದಿನವರ ಬಳಿ ಇದ್ದ ಉಪದೇಶವೂ ಇದುವೇ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಬಲ್ಲವರಲ್ಲ. ಆದ್ದರಿಂದಲೇ ಅವರು ಮುಖ ತಿರುಗಿಸಿಕೊಂಡಿದ್ದಾರೆ.

25. (ದೂತರೇ,) ನಾವು ನಿಮಗಿಂತ ಮುಂಚೆ ಕಳಿಸಿದ್ದ ಎಲ್ಲ ದೂತರಿಗೂ, – ನನ್ನ ಹೊರತು ಬೇರೆ ದೇವರಿಲ್ಲ. ಆದ್ದರಿಂದ ನನ್ನನ್ನು ಮಾತ್ರ ಆರಾಧಿಸಿರಿ – ಎನ್ನುವ ದಿವ್ಯಸಂದೇಶವನ್ನೇ ಕಳಿಸಿದ್ದೆವು.

26. ಆ ಪರಮ ದಯಾಮಯನಿಗೊಬ್ಬ ಪುತ್ರನಿದ್ದಾನೆ ಎಂದು ಅವರು ಹೇಳುತ್ತಾರೆ. ಅವನು ಪರಮ ಪಾವನನು. ಅವರು (ಮಲಕ್‌ಗಳು) ಅವನ ಗೌರವಾನ್ವಿತ ದಾಸರು.

27. ಅವರೆಂದೂ ಅವನಿಗೆದುರಾಗಿ ಮಾತನಾಡುವುದಿಲ್ಲ ಮತ್ತು ಅವನು ಆದೇಶಿಸಿದ್ದನ್ನೇ ಅವರು ಮಾಡುತ್ತಾರೆ.

28. ಅವನಂತು ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಬಲ್ಲನು. ಅವನು (ಅಲ್ಲಾಹನು) ಮೆಚ್ಚುವವರ ಹೊರತು ಬೇರೆ ಯಾರ ಪರವಾಗಿಯೂ ಅವರು ಶಿಫಾರಸು ಮಾಡಲಾರರು. ಸ್ವತಃ ಅವರೇ ಅವನ ಭಯದಿಂದ ನಡುಗುತ್ತಿರುವರು.

29. ಅವರ ಪೈಕಿ ಯಾರಾದರೂ ಅವನ (ಅಲ್ಲಾಹನ) ಜೊತೆಗೆ ತಾನೂ ದೇವರು – ಎಂದು ಹೇಳಿದರೆ, ನಾವು ಆತನಿಗೆ ನರಕದ ಶಿಕ್ಷೆಯನ್ನು ನೀಡುವೆವು. ಇದುವೇ ಅಕ್ರಮಿಗಳಿಗಾಗಿ ನಮ್ಮಲ್ಲಿರುವ ಪ್ರತಿಫಲ.

 30. ಧಿಕ್ಕಾರಿಗಳು ಅರಿತಿಲ್ಲವೇ, ಆಕಾಶಗಳು ಮತ್ತು ಭೂಮಿ ಕೂಡಿಕೊಂಡಿದ್ದವು. ಕೊನೆಗೆ ನಾವು ಅವೆರಡನ್ನೂ ಬೇರ್ಪಡಿಸಿದೆವು. ಇನ್ನು ಪ್ರತಿಯೊಂದು ಜೀವಂತ ವಸ್ತುವನ್ನೂ ನಾವು ನೀರಿನಿಂದ ಸೃಷ್ಟಿಸಿರುವೆವು. ಅವರೇನು ನಂಬುವುದಿಲ್ಲವೇ?

31. ಭೂಮಿಯು ಅವರೊಂದಿಗೆ ವಾಲಿ ಬಿಡಬಾರದೆಂದು ನಾವು ಅದರಲ್ಲಿ ಪರ್ವತಗಳನ್ನು ಇಟ್ಟಿರುವೆವು ಮತ್ತು ಅವರಿಗೆ ದಾರಿ ಸಿಗಲೆಂದು ನಾವು ಅದರಲ್ಲಿ, ವಿಶಾಲವಾದ ಮಾರ್ಗಗಳನ್ನು ಇಟ್ಟಿರುವೆವು.

32. ಇನ್ನು, ಆಕಾಶವನ್ನು ನಾವು ಸುಭದ್ರ ಚಪ್ಪರವಾಗಿಸಿರುವೆವು. ಆದರೆ ಅವರು ನಮ್ಮ ಎಲ್ಲ ಪುರಾವೆಗಳನ್ನು ಕಡೆಗಣಿಸುತ್ತಿದ್ದಾರೆ.

33. ರಾತ್ರಿಯನ್ನೂ ಹಗಲನ್ನೂ ಸೂರ್ಯನನ್ನೂ ಚಂದ್ರನನ್ನೂ ಸೃಷ್ಟಿಸಿದವನು ಅವನೇ. ಅವೆಲ್ಲವೂ ತಮ್ಮ ನಿರ್ದಿಷ್ಟ ದಾರಿಯಲ್ಲೇ ಚಲಿಸುತ್ತಿವೆ.

34. (ದೂತರೇ) ನಿಮಗಿಂತ ಮುಂಚೆಯೂ ನಾವು ಯಾವುದೇ ಮನುಷ್ಯನಿಗೆ ಶಾಶ್ವತ ಬದುಕನ್ನು ನೀಡಿರಲಿಲ್ಲ. ಇದೀಗ (ಅವರು ಬಯಸುವಂತೆ) ನೀವು ಮೃತರಾದರೆ ಅವರೇನು ಶಾಶ್ವತವಾಗಿ ಉಳಿಯುವರೇ?

35. ಪ್ರತಿಯೊಂದು ಜೀವವೂ ಮರಣದ ರುಚಿಯನ್ನು ಸವಿಯಲೇಬೇಕು. ಇನ್ನು ನಾವು ಕೆಡುಕುಗಳ ಮತ್ತು ಒಳಿತುಗಳ ಮೂಲಕ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಇರುವೆವು. ಕೊನೆಗಂತು ನೀವು ನಮ್ಮ ಕಡೆಗೇ ಮರಳಿ ಬರುವಿರಿ.

36. (ದೂತರೇ,) ಧಿಕ್ಕಾರಿಗಳು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಕೇವಲ ತಮಾಷೆಯಾಗಿ ಪರಿಗಣಿಸುತ್ತಾರೆ. ಮತ್ತು ‘‘ನಿಮ್ಮ ದೇವರುಗಳ ಕುರಿತು ಮಾತನಾಡುತ್ತಿದ್ದವನು ಇವನೇ ತಾನೇ?’’ ಎನ್ನುತ್ತಾರೆ. ನಿಜವಾಗಿ ಅವರು ಆ ಪರಮ ದಯಾಮಯನ ಪ್ರಸ್ತಾಪವನ್ನೇ ಧಿಕ್ಕರಿಸುತ್ತಾರೆ.

37. ಮನುಷ್ಯನನ್ನು ಆತುರ ಜೀವಿಯಾಗಿಯೇ ಸೃಷ್ಟಿಸಲಾಗಿದೆ. ನಾನು ನಿಮಗೆ ನನ್ನ ಪುರಾವೆಗಳನ್ನು ತೋರಿಸಲಿದ್ದೇನೆ. ಆದ್ದರಿಂದ ನೀವು ಆತುರ ಪಡಬೇಡಿ.

38. ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನಿತ ಸಮಯ ಬರುವುದು ಯಾವಾಗ? ಎಂದು ಅವರು ಕೇಳುತ್ತಾರೆ.

39. ಆ ಸಮಯದ ಕುರಿತು ಧಿಕ್ಕಾರಿಗಳು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು. ಅಂದು ತಮ್ಮ ಮುಖಗಳನ್ನಾಗಲಿ ಬೆನ್ನುಗಳನ್ನಾಗಲಿ ಬೆಂಕಿಯಿಂದ ರಕ್ಷಿಸಿಕೊಳ್ಳಲು ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಯಾವುದೇ ಸಹಾಯವೂ ಸಿಗದು.

40. ನಿಜವಾಗಿ, ಅದು ಹಠಾತ್ತನೆ ಅವರ ಮೇಲೆ ಬಂದೆರಗುವುದು ಮತ್ತು ಅವರು ಆಘಾತಕ್ಕೆ ಒಳಗಾಗುವರು. ಅದನ್ನು ನಿವಾರಿಸಲಿಕ್ಕೂ ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಹೆಚ್ಚಿನ ಕಾಲಾವಕಾಶವೂ ಸಿಗದು.

41. ನಿಮಗಿಂತ ಮುಂಚೆಯೂ ದೇವದೂತರನ್ನು ಗೇಲಿ ಮಾಡಲಾಗಿದೆ. ಕೊನೆಗೆ, ಅವರ ಪೈಕಿ ಗೇಲಿ ಮಾಡುತ್ತಿದ್ದವರನ್ನು, ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಆವರಿಸಿ ಬಿಟ್ಟಿತು.

  42. ಹೇಳಿರಿ; ಇರುಳಲ್ಲೂ ಹಗಲಲ್ಲೂ ಆ ದಯಾಮಯನಿಂದ ನಿಮ್ಮನ್ನು ಕಾಪಾಡುತ್ತಿರುವವನು ಯಾರು? ಇಷ್ಟಾಗಿಯೂ ಅವರು ತಮ್ಮ ಒಡೆಯನನ್ನು ಸ್ಮರಿಸುವ ವಿಷಯದಲ್ಲಿ ನಿರಾಸಕ್ತರಾಗಿದ್ದಾರೆ.

 43. ಅವರನ್ನು ರಕ್ಷಿಸಲು ಅವರ ಬಳಿ ನಾವಲ್ಲದೆ ಬೇರೆ ದೇವರುಗಳಿದ್ದಾರೆಯೇ? ನಿಜವಾಗಿ ಅವರು (ಆ ದೇವರುಗಳು), ಸ್ವತಃ ತಮ್ಮ ನೆರವಿಗೂ ಅಶಕ್ತರಾಗಿದ್ದಾರೆ ಮತ್ತು ನಮಗೆದುರಾಗಿ ಅವರಿಗೆ ನೆರವಾಗಲು ಯಾರಿಗೂ ಸಾಧ್ಯವಿಲ್ಲ.

44. ನಾವು ಅವರಿಗೂ ಅವರ ಪೂರ್ವಜರಿಗೂ ಧಾರಾಳ ಸಂಪತ್ತನ್ನು ದಯಪಾಲಿಸಿದ್ದೆವು. ಅವರು ಬಹುಕಾಲ ಅದೇ (ಸಂಪನ್ನ) ಸ್ಥಿತಿಯಲ್ಲಿದ್ದರು. ನಾವು (ಅವರ ಪಾಲಿಗೆ) ಭೂಮಿಯನ್ನು ಅದರ ಎಲ್ಲ ಮೂಲೆಗಳಿಂದಲೂ ಸಂಕುಚಿತಗೊಳಿಸುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಅವರೇನು ವಿಜಯಿಗಳಾಗಬಲ್ಲರೇ?

45. (ದೂತರೇ,) ಹೇಳಿರಿ; ನಾನು, ದಿವ್ಯವಾಣಿಯ ಮೂಲಕ ನಿಮನ್ನು ಎಚ್ಚರಿಸುವವನು ಮಾತ್ರ. ಆದರೆ ಕಿವುಡರನ್ನು ಎಚ್ಚರಿಸಲಾದಾಗ, ಅವರು ಯಾವ ಕರೆಯನ್ನೂ ಕೇಳುವುದಿಲ್ಲ.

46. ಕೊನೆಗೆ ನಿಮ್ಮ ಒಡೆಯನ ಶಿಕ್ಷೆಯ ಒಂದು ಪುಟ್ಟ ಅಲೆಯು ಅವರನ್ನು ಮುಟ್ಟಿದಾಗ ಅವರು, ‘‘ಅಯ್ಯೋ ನಮ್ಮ ದೌರ್ಭಾಗ್ಯವೇ, ನಾವು ಖಂಡಿತ ಅಕ್ರಮಿಗಳಾಗಿದ್ದೆವು’’ ಎನ್ನುವರು.

47. ಪುನರುತ್ಥಾನ ದಿನ ನಾವು ನ್ಯಾಯದ ತಕ್ಕಡಿಯನ್ನು ಸ್ಥಾಪಿಸುವೆವು. (ಅಂದು) ಯಾರ ಮೇಲೂ ಕಿಂಚಿತ್ತೂ ಅಕ್ರಮ ನಡೆಯದು. (ಕರ್ಮವು) ಕೇವಲ ಒಂದು ಸಾಸಿವೆ ಕಾಳಿನಷ್ಟಿದ್ದರೂ ನಾವು ಅದನ್ನು ಮುಂದೆ ತರುವೆವು. ವಿಚಾರಣೆಗೆ ನಾವೇ ಸಾಕು.

48. ನಾವು ಮೂಸಾ ಮತ್ತು ಹಾರೂನರಿಗೆ ಅಲ್‌ಫುರ್‌ಕಾನ್ ಅನ್ನು (ಸತ್ಯ – ಮಿಥ್ಯಗಳನ್ನು ಪ್ರತ್ಯೇಕಿಸಿ ತಿಳಿಸುವ ಗ್ರಂಥವನ್ನು) ಮತ್ತು ಸತ್ಯನಿಷ್ಠರ ಪಾಲಿಗೆ ಜ್ಯೋತಿ ಹಾಗೂ ಉಪದೇಶವನ್ನು ನೀಡಿದೆವು.

49. ಕಣ್ಣಾರೆ ಕಾಣದೆಯೇ ತಮ್ಮ ಒಡೆಯನಿಗೆ ಅಂಜುತ್ತಿರುವವರು ಹಾಗೂ ಆ ಅಂತಿಮ ಕ್ಷಣದ ಕುರಿತು ಜಾಗೃತರಾಗಿರುವವರಿಗಾಗಿ.

50. ಇದು, ನಾವು ಇಳಿಸಿಕೊಟ್ಟಿರುವ ಸಮೃದ್ಧ ಬೋಧನೆ. ನೀವು ಇದನ್ನು ತಿರಸ್ಕರಿಸುವಿರಾ?

51. ಈ ಹಿಂದೆ ನಾವು ಇಬ್ರಾಹೀಮರಿಗೆ ವಿಶೇಷ ವಿವೇಕವನ್ನು ನೀಡಿದ್ದೆವು ಮತ್ತು ಆ ಕುರಿತು ನಾವು ಬಲ್ಲವರಾಗಿದ್ದೆವು.

52. ಅವರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ, ‘‘ನೀವು ಇದೆಂತಹ ವಿಗ್ರಹಗಳನ್ನು ನಂಬಿಕೊಂಡು ತೃಪ್ತರಾಗಿರುವಿರಿ?’’ ಎಂದು ಕೇಳಿದರು.

53. ಅವರು ಹೇಳಿದರು; ನಮ್ಮ ಪೂರ್ವಜರು ಅವುಗಳನ್ನೇ ಪೂಜಿಸುವುದನ್ನು ನಾವು ಕಂಡಿದ್ದೇವೆ.

54. ಅವರು (ಇಬ್ರಾಹೀಮ್) ಹೇಳಿದರು; ಖಂಡಿತವಾಗಿಯೂ ನೀವು ಮತ್ತು ನಿಮ್ಮ ಪೂರ್ವಜರು ಸ್ಪಷ್ಟವಾಗಿ ತಪ್ಪು ದಾರಿಯಲ್ಲಿರುವಿರಿ.

55. ಅವರು (ಜನಾಂಗದವರು) ಹೇಳಿದರು; ನೀವೇನು ನಮ್ಮ ಬಳಿಗೆ ಸತ್ಯವನ್ನು ತಂದಿರುವಿರಾ? ಅಥವಾ ನೀವು ಕೇವಲ ತಮಾಷೆ ಮಾಡುತ್ತಿರುವಿರಾ?

56. ಅವರು ಹೇಳಿದರು; ಆಕಾಶಗಳ ಹಾಗೂ ಭೂಮಿಯ ಒಡೆಯನು ಹಾಗೂ ಅವುಗಳಿಗೆ ರೂಪ ನೀಡಿದವನೇ ನಿಜವಾಗಿ ನಿಮ್ಮ ಒಡೆಯನು. ಇದಕ್ಕೆ ನಿಮ್ಮ ಮುಂದೆ ನಾನೇ ಒಬ್ಬ ಸಾಕ್ಷಿಯಾಗಿದ್ದೇನೆ.

  57. ಅಲ್ಲಾಹನಾಣೆ, ನೀವು ಇಲ್ಲಿಂದ ಹೊರಟುಹೋದ ಬಳಿಕ ಈ ನಿಮ್ಮ ವಿಗ್ರಹಗಳ ಕುರಿತಂತೆ (ಏನು ಮಾಡಬೇಕೆಂದು) ನಾನು ಒಂದು ಯೋಜನೆ ಹಾಕಿಕೊಂಡಿದ್ದೇನೆ.

 58. ಕೊನೆಗೆ ಅವರು ಅವೆಲ್ಲವನ್ನೂ ನುಚ್ಚುನೂರು ಮಾಡಿಬಿಟ್ಟರು. ಆದರೆ ಜನರೆಲ್ಲಾ ಅದರ ಬಳಿಗೆ ಮರಳಲೆಂದು ದೊಡ್ಡದೊಂದನ್ನು ಬಿಟ್ಟು ಬಿಟ್ಟರು.

59. ಅವರು (ಊರವರು), ‘‘ನಮ್ಮ ದೇವರುಗಳಿಗೆ ಹೀಗೆಲ್ಲಾ ಮಾಡಿದವನು ಯಾರು? ಅವನು ಖಂಡಿತ ಅಕ್ರಮಿ’’ ಎಂದರು.

60. ಕೆಲವರು, ‘‘ಇಬ್ರಾಹೀಮ್ ಎಂಬೊಬ್ಬ ಯುವಕನು ಅವುಗಳ ಕುರಿತು ಮಾತನಾಡುವುದನ್ನು ನಾವು ಕೇಳಿದ್ದೇವೆ’’ ಎಂದರು.

 61. ಅವರು, ‘‘ಅವನನ್ನು ಜನರ ಮುಂದೆ ತನ್ನಿರಿ. ಅವರು ಕಣ್ಣಾರೆ ಕಾಣಲಿ’’ಎಂದು ಘೋಷಿಸಿದರು.

62.‘‘ಓ ಇಬ್ರಾಹೀಮ್, ನಮ್ಮ ದೇವರುಗಳಿಗೆ ಈ ಗತಿ ಒದಗಿಸಿದ್ದು ನೀನೇ?’’ ಎಂದು ಅವರು ವಿಚಾರಿಸಿದರು.

63. ಅವರು (ಇಬ್ರಾಹೀಮ್) ಹೇಳಿದರು; ‘‘ಅವರ (ಆ ವಿಗ್ರಹಗಳ) ಹಿರಿಯನಾದ ಅವನೇ ಈ ಕೃತ್ಯವನ್ನು ಎಸಗಿರುವನು. ಅವುಗಳಿಗೆ ಮಾತನಾಡುವ ಶಕ್ತಿ ಇದ್ದರೆ ನೀವು ಅವುಗಳೊಡನೆ ಕೇಳಿ ನೋಡಿರಿ.’’

64. ಆಗ ಅವರು ಸ್ವತಃ ತಮ್ಮನ್ನುದ್ದೇಶಿಸಿ, ‘‘ನಿಜಕ್ಕೂ ನೀವೇ ಅಕ್ರಮಿಗಳು’’ ಎಂದು ಹೇಳಿಕೊಂಡರು.

 65. ಆ ಬಳಿಕ ತಲೆ ತಗ್ಗಿಸಿ ‘‘ಅವುಗಳು ಮಾತನಾಡುವುದಿಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲಾ?’’ ಎಂದರು.

66. ಅವರು (ಇಬ್ರಾಹೀಮ್) ಹೇಳಿದರು; ನೀವೇನು, ಅಲ್ಲಾಹನನ್ನು ಬಿಟ್ಟು, ನಿಮಗೆ ಯಾವುದೇ ಲಾಭವನ್ನಾಗಲಿ ನಷ್ಟವನ್ನಾಗಲಿ ಮಾಡಲಾಗದವರನ್ನು ಪೂಜಿಸುತ್ತೀರಾ?

67. ನಿಮಗೂ ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುವ ಎಲ್ಲವುಗಳಿಗೂ ಧಿಕ್ಕಾರ. ನೀವೇನು ಆಲೋಚಿಸುವುದಿಲ್ಲವೇ?

68. ಅವರು (ಪರಸ್ಪರ) ಹೇಳಿದರು; ನಿಮ್ಮ ದೇವರುಗಳಿಗೆ ನೆರವಾಗಲು ನೀವೇನಾದರೂ ಮಾಡುವವರಾಗಿದ್ದರೆ, ಅವನನ್ನು ಸುಟ್ಟು ಬಿಡಿರಿ.

69. ‘‘ಓ ಅಗ್ನಿ, ನೀನು ಇಬ್ರಾಹೀಮರ ಪಾಲಿಗೆ ತಣ್ಣಗಾಗು ಹಾಗೂ ಕ್ಷೇಮವಾಗಿಬಿಡು’’ ಎಂದು ನಾವು ಆದೇಶಿಸಿದೆವು.

70. ಅವರು (ಊರವರು) ಅವರಿಗೆ (ಇಬ್ರಾಹೀಮರಿಗೆ) ಹಾನಿ ಮಾಡಲು ಯೋಜಿಸಿದ್ದರು. ಆದರೆ ನಾವು ಅವರನ್ನು (ಊರವರನ್ನು) ಸಂಪೂರ್ಣ ಸೋಲಿಸಿಬಿಟ್ಟೆವು.

71. ಮತ್ತು ನಾವು ಅವರನ್ನು (ಇಬ್ರಾಹೀಮರನ್ನು) ಹಾಗೂ ಲೂತ್‌ರನ್ನು ರಕ್ಷಿಸಿ, ಲೋಕದವರಿಗೆಲ್ಲಾ ನಾವು ಶುಭವನ್ನಿಟ್ಟಿರುವ ನಾಡಿಗೆ ಕಳಿಸಿದೆವು.

72. ನಾವು ಅವರಿಗೆ (ಇಬ್ರಾಹೀಮರಿಗೆ) ಇಸ್‌ಹಾಕ್‌ರನ್ನು ನೀಡಿದೆವು ಮತ್ತು ಹೆಚ್ಚುವರಿಯಾಗಿ (ಮೊಮ್ಮಗನಾಗಿ) ಯಅ್ಕೂಬ್‌ರನ್ನು ನೀಡಿದೆವು. ಮತ್ತು ನಾವು ಅವರೆಲ್ಲರನ್ನೂ ಸಜ್ಜನರಾಗಿಸಿದ್ದೆವು.

 73. ನಾವು ಅವರನ್ನು, ನಮ್ಮ ಆದೇಶ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ನಾಯಕರಾಗಿ ಮಾಡಿದೆವು ಮತ್ತು ನಾವು ಅವರಿಗೆ, ಸತ್ಕರ್ಮಗಳನ್ನು ತಿಳಿಸುವ ಮತ್ತು ನಮಾಝನ್ನು ಪಾಲಿಸಬೇಕು ಹಾಗೂ ಝಕಾತನ್ನು ಪಾವತಿಸಬೇಕೆನ್ನುವ ದಿವ್ಯವಾಣಿಯನ್ನು ಕಳಿಸಿದ್ದೆವು. ಅವರು ನಮ್ಮನ್ನೇ ಆರಾಧಿಸುವವರಾಗಿದ್ದರು.

74. ಇನ್ನು ಲೂತ್‌ರಿಗೆ ನಾವು ಅಧಿಕಾರವನ್ನೂ ಜ್ಞಾನವನ್ನೂ ನೀಡಿದ್ದೆವು ಮತ್ತು ತೀರಾ ಅಶ್ಲೀಲ ಕೃತ್ಯಗಳನ್ನು ಎಸಗುತ್ತಿದ್ದವರ ನಾಡಿನಿಂದ ನಾವು ಅವರನ್ನು ರಕ್ಷಿಸಿದೆವು. ಖಂಡಿತವಾಗಿಯೂ ಅದು ಒಂದು ದುಷ್ಟ ಜನಾಂಗವಾಗಿತ್ತು.

75. ಅವರನ್ನು (ಲೂತ್‌ರನ್ನು) ನಾವು ನಮ್ಮ ಅನುಗ್ರಹದ ವ್ಯಾಪ್ತಿಗೆ ಸೇರಿಸಿಕೊಂಡೆವು. ಅವರು ಖಂಡಿತ ಒಬ್ಬ ಸಜ್ಜನರಾಗಿದ್ದರು.

76. ಈ ಹಿಂದೆ ನೂಹರು ನಮ್ಮನ್ನು ಕರೆದು ಪ್ರಾರ್ಥಿಸಿದಾಗ, ನಾವು ಅವರಿಗೆ ಉತ್ತರಿಸಿದ್ದೆವು ಮತ್ತು ನಾವು ಅವರನ್ನು ಹಾಗೂ ಅವರ ಕಡೆಯವರನ್ನು ಒಂದು ಘೋರ ವಿಪತ್ತಿನಿಂದ ರಕ್ಷಿಸಿದೆವು.

77. ನಮ್ಮ ವಚನಗಳನ್ನು ಸುಳ್ಳೆಂದ ಜನಾಂಗದವರ ವಿರುದ್ಧ ನಾವು ಅವರಿಗೆ ನೆರವಾದೆವು. ಅದು ಖಂಡಿತ ಬಹಳ ದುಷ್ಟ ಜನಾಂಗವಾಗಿತ್ತು. ನಾವು ಅವರೆಲ್ಲರನ್ನೂ ಮುಳುಗಿಸಿ ಬಿಟ್ಟೆವು.

78. ಇನ್ನು, ದಾವೂದ್ ಮತ್ತು ಸುಲೈಮಾನರು. ಅವರಿಬ್ಬರೂ ಒಂದು ಹೊಲದ ಕುರಿತು ತೀರ್ಪು ನೀಡಲು ಹೊರಟಿದ್ದರು. ರಾತ್ರಿಯ ವೇಳೆ ಕೆಲವರ ಆಡುಗಳು ಅಲ್ಲಿ (ಆ ಹೊಲದಲ್ಲಿ) ಮೆದ್ದಿದ್ದವು ಮತ್ತು ಅವರ ತೀರ್ಪಿಗೆ ನಾವು ಸಾಕ್ಷಿಗಳಾಗಿದ್ದೆವು.

79. ನಾವು ಸುಲೈಮಾನರಿಗೆ ಅದರ ವಾಸ್ತವವನ್ನು ಸೂಚಿಸಿದೆವು ಮತ್ತು ನಾವು ಅವರಿಬ್ಬರಿಗೂ ಜಾಣ್ಮೆಯನ್ನು ಹಾಗೂ ಜ್ಞಾನವನ್ನು ನೀಡಿದ್ದೆವು ಮತ್ತು ನಾವು ದಾವೂದರ ಜೊತೆ (ನಮ್ಮ) ಪಾವಿತ್ರವನ್ನು ಜಪಿಸುವಂತೆ ಪರ್ವತಗಳನ್ನು ಹಾಗೂ ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದ್ದೆವು. ಇದನ್ನೆಲ್ಲಾ ನಾವೇ ಮಾಡಿದ್ದೆವು.

 80. ನಿಮಗಾಗಿ, ನಿಮ್ಮ ಯುದ್ಧಗಳಲ್ಲಿ ನಿಮ್ಮನ್ನು ರಕ್ಷಿಸುವ (ಉಕ್ಕಿನ) ಕವಚವನ್ನು ನಿರ್ಮಿಸುವ ಕಲೆಯನ್ನು ನಾವು ಅವರಿಗೆ ಕಲಿಸಿದೆವು. (ಇನ್ನಾದರೂ) ನೀವು ಕೃತಜ್ಞರಾಗುವಿರಾ?

 81. ಮತ್ತು ನಾವು ಬಿರುಗಾಳಿಯನ್ನು ಸುಲೈಮಾನರಿಗೆ ಅಧೀನಗೊಳಿಸಿದೆವು. ಅದು ಅವರ ಆದೇಶದಂತೆ, ನಾವು ಸಮೃದ್ಧಿಯನ್ನಿಟ್ಟಿರುವ ನೆಲದೆಡೆಗೆ ಚಲಿಸುತ್ತಿತ್ತು. ನಾವಂತು ಎಲ್ಲವನ್ನೂ ಬಲ್ಲವರಾಗಿದ್ದೇವೆ.

82. ಶೈತಾನರ (ಜಿನ್ನ್‌ಗಳ) ಪೈಕಿ ಅವರಿಗಾಗಿ (ಸುಲೈಮಾನರಿಗಾಗಿ, ಸಾಗರದಲ್ಲಿ) ಮುಳುಗಿ ಬರುವ ಹಾಗೂ ಇತರ ಕೆಲಸಗಳನ್ನೂ ಮಾಡುವ ಕೆಲವರಿದ್ದರು. ನಾವೇ ಅವರ ರಕ್ಷಕರಾಗಿದ್ದೆವು.

83. ಮತ್ತು ಅಯ್ಯೂಬರು ‘‘ನಾನು ಭಾರೀ ಸಂಕಷ್ಟದಲ್ಲಿದ್ದೇನೆ ಮತ್ತು ನೀನು ಅತ್ಯಧಿಕ ಕರುಣೆ ತೋರುವವನಾಗಿರುವೆ’’ ಎಂದು ತಮ್ಮ ಒಡೆಯನನ್ನು ಕೂಗಿ ಪ್ರಾರ್ಥಿಸಿದ್ದರು.

84. ಕೊನೆಗೆ ನಾವು ಅವರಿಗೆ ಉತ್ತರ ನೀಡಿದೆವು, ಅವರ ಸಂಕಷ್ಟವನ್ನು ನಿವಾರಿಸಿದೆವು. ಮತ್ತು ನಾವು ಅವರಿಗೂ ಅವರ ಮನೆಯವರಿಗೂ, ಅವರ ಜೊತೆಗಿದ್ದ ಅವರಂತಹ ಇತರರಿಗೂ ನಮ್ಮ ಕಡೆಯಿಂದ ವಿಶೇಷ ಅನುಗ್ರಹವನ್ನು ಹಾಗೂ ಭಕ್ತರಿಗಾಗಿ ಉಪದೇಶವನ್ನು ಕರುಣಿಸಿದೆವು.

85. ಹಾಗೆಯೇ ಇಸ್ಮಾಈಲ್ ಹಾಗೂ ಇದ್ರೀಸ್ ಹಾಗೂ ಝುಲ್‌ಕಿಫ್ಲ್. ಅವರೆಲ್ಲರೂ ಸಹನಶೀಲರಾಗಿದ್ದರು.

86. ನಾವು ಅವರನ್ನು ನಮ್ಮ ಅನುಗ್ರಹದ ವ್ಯಾಪ್ತಿಗೆ ಸೇರಿಸಿದೆವು. ಅವರು ಖಂಡಿತ ಸಜ್ಜನರಾಗಿದ್ದರು.

87. ಇನ್ನು ಮೀನಿನವರು (ಯೂನುಸ್), ತಾನು ಕೋಪಗೊಂಡು ಹೊರಟು ಬಿಟ್ಟಾಗ, ನಾವು ಅವರನ್ನು ಹಿಡಿಯಲಾರೆವೆಂದು ಭಾವಿಸಿದ್ದರು. ಕೊನೆಗೆ ಅವರು ಕತ್ತಲುಗಳೊಳಗಿಂದ, ‘‘(ಓ ಅಲ್ಲಾಹ್) ನಿನ್ನ ಹೊರತು ಬೇರೆ ದೇವರಿಲ್ಲ. ನೀನು ಪರಮ ಪಾವನನು. ಖಂಡಿತವಾಗಿಯೂ ನಾನೇ ಅಕ್ರಮಿಯಾಗಿದ್ದೆ’’ ಎಂದು ಮೊರೆ ಇಟ್ಟಿದ್ದರು.

88. ನಾವು ಅವರಿಗೆ ಉತ್ತರಿಸಿದೆವು ಮತ್ತು ಅವರನ್ನು ಸಂಕಟದಿಂದ ಪಾರುಗೊಳಿಸಿದೆವು. ಈ ರೀತಿ ನಾವು ವಿಶ್ವಾಸಿಗಳನ್ನು ಕಾಪಾಡುವೆವು.

 89. ಮತ್ತು ಝಕರಿಯ್ಯ, ‘‘ನನ್ನೊಡೆಯಾ, ನನ್ನನ್ನು ನೀನು ಒಂಟಿಯಾಗಿ ಬಿಟ್ಟು ಬಿಡಬೇಡ. ನಿಜವಾಗಿ ನೀನೇ ಅತ್ಯುತ್ತಮ ಉತ್ತರಾಧಿಕಾರಿ’’ ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟಿದ್ದರು.

90. ನಾವು ಅವರಿಗೆ ಉತ್ತರ ನೀಡಿದೆವು ಮತ್ತು ನಾವು ಅವರಿಗೆ ಯಹ್ಯಾರನ್ನು ದಯಪಾಲಿಸಿದೆವು ಹಾಗೂ ಅವರಿಗಾಗಿ ಅವರ ಪತ್ನಿಯನ್ನು ಗುಣಪಡಿಸಿದೆವು. ಅವರೆಲ್ಲಾ ಸತ್ಕಾರ್ಯಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸುವವರು ಮತ್ತು ನಿರೀಕ್ಷೆಯೊಂದಿಗೂ ಭಯದೊಂದಿಗೂ ನಮ್ಮನ್ನು ಪ್ರಾರ್ಥಿಸುವವರಾಗಿದ್ದರು. ಅವರು ನಮ್ಮೆದುರು ತುಂಬಾ ವಿನಯಶೀಲರಾಗಿದ್ದರು.

91. ಮತ್ತು ನಾವು ಮಾನ ಸಂರಕ್ಷಿಸಿದಾಕೆ (ಮರ್ಯಮ್). ಆಕೆಯೊಳಗೆ ನಾವು ನಮ್ಮ ಆತ್ಮದ ಅಂಶವನ್ನು ಊದಿದೆವು ಮತ್ತು ಆಕೆಯನ್ನೂ ಆಕೆಯ ಪುತ್ರನನ್ನೂ ಸರ್ವಲೋಕಗಳ ಪಾಲಿಗೆ ದೃಷ್ಟಾಂತವಾಗಿಸಿದೆವು.

92. ಈ ನಿಮ್ಮ (ಮಾನವರ) ಸಮುದಾಯವು ಒಂದೇ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಒಡೆಯನು. ನೀವು ನನ್ನನ್ನೇ ಆರಾಧಿಸಿರಿ.

 93. ಜನರು ತಮ್ಮ ನಡುವೆ ತಮ್ಮ ಧರ್ಮವನ್ನು ಛಿದ್ರಗೊಳಿಸಿ ಬಿಟ್ಟಿದ್ದಾರೆ. (ಕೊನೆಗೆ) ಎಲ್ಲರೂ ನಮ್ಮೆಡೆಗೇ ಮರಳಬೇಕಾಗಿದೆ.

94. ಸತ್ಕರ್ಮವನ್ನು ಮಾಡಿದವನು ವಿಶ್ವಾಸಿಯಾಗಿದ್ದರೆ ಅವನ ಶ್ರಮವು ವ್ಯರ್ಥವಾಗದು. ನಾವು ಎಲ್ಲವನ್ನೂ ದಾಖಲಿಸಿಡುತ್ತಿದ್ದೇವೆ.

 95. ನಾವು ನಾಶಪಡಿಸಿರುವ ನಾಡುಗಳ ಜನರು ಮರಳಿ ಬರಲಾರರು –

96. ಯಅ್ಜೂಜ್ ಮತ್ತು ಮಅ್ಜೂಜ್‌ಗಳು ಬಿಡುಗಡೆಗೊಂಡು ಎಲ್ಲ ದಿಣ್ಣೆಗಳಿಂದ ಇಳಿದು ಬರುವ ತನಕ.

  97. ಖಚಿತ ವಾಗ್ದಾನದ ಸಮಯವು (ಪುನರುತ್ಥಾನ ದಿನವು) ಹತ್ತಿರ ಬಂದಾಗ, ಧಿಕ್ಕಾರಿಗಳ ಕಣ್ಣುಗಳು ದಿಗ್ಭ್ರಮೆಗೊಳ್ಳುವವು. ‘‘ಅಯ್ಯೋ ನಮ್ಮ ದುಸ್ಥಿತಿ! ಈ ಕುರಿತು ನಾವು ನಿರ್ಲಕ್ಷದಲ್ಲಿದ್ದೆವು. ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ (ಎಂದು ಅವರು ಹೇಳುವರು).

98. ಖಂಡಿತವಾಗಿಯೂ ನೀವು ಹಾಗೂ ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿದ್ದ ವಸ್ತುಗಳೆಲ್ಲಾ ನರಕದ ಇಂಧನಗಳು. ನೀವು ಅದರೊಳಗೆ ಹೋಗುವಿರಿ.

99. ಅವುಗಳೆಲ್ಲಾ ನಿಜಕ್ಕೂ ದೇವರುಗಳಾಗಿದ್ದರೆ ಅದರೊಳಗೆ ಹೋಗುತ್ತಿರಲಿಲ್ಲ. ಅವು ಸದಾಕಾಲ ಅಲ್ಲೇ ಇರುವವು.

100. ಅಲ್ಲಿ (ನರಕದಲ್ಲಿ) ಅವರ ಚೀರಾಟವೇ ಮೆರೆದಿರುವುದು . ಅವರಿಗೆ ಅದರಲ್ಲಿ ಬೇರೇನೂ ಕೇಳಿಸದು.

101. ಅತ್ತ, ನಮ್ಮ ಕಡೆಯಿಂದ ಯಾರ ಪರವಾಗಿ ಹಿತದ ನಿರ್ಧಾರವಾಗಿರುವುದೋ ಅವರನ್ನು ಅದರಿಂದ (ನರಕದಿಂದ) ದೂರವಿಡಲಾಗುವುದು.

102. ಅದರ ಸಪ್ಪಳ ಕೂಡಾ ಅವರಿಗೆ ಕೇಳಿಸದು. ಅವರು ತಮಗಿಷ್ಟವಿರುವಲ್ಲಿ ಸದಾಕಾಲ ಇರುವರು.

 103. (ಅಂದಿನ) ಮಹಾ ಚಿಂತೆಯು ಅವರನ್ನು ಕಾಡದು ಮತ್ತು ‘‘ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ದಿನ’’ ಎನ್ನುತ್ತಾ ಮಲಕ್‌ಗಳು ಅವರನ್ನು ಸ್ವಾಗತಿಸುವರು .

104. ಅಂದು ನಾವು ಕಾಗದದ ಪುಟಗಳನ್ನು ಮಡಚಿದಂತೆ ಆಕಾಶವನ್ನು ಮಡಚಿ ಬಿಡುವೆವು. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ಆ (ಸೃಷ್ಟಿ) ಕಾರ್ಯವನ್ನು ಪುನರಾವರ್ತಿಸುವೆವು. ಇದು ನಮ್ಮ ಕರ್ತವ್ಯವಾಗಿರುವ ವಾಗ್ದಾನ. ನಾವು ಖಂಡಿತ ಅದನ್ನು ಮಾಡಿಯೇ ಬಿಡುವೆವು.

105. ನಾವು ಝಬೂರ್‌ನಲ್ಲಿ ಉಪದೇಶದ ಬಳಿಕ, ‘‘ನನ್ನ ಸಜ್ಜನ ದಾಸರೇ ಭೂಮಿಯ ಉತ್ತರಾಧಿಕಾರಿಗಳಾಗುವರು’’ ಎಂದು ಬರೆದಿರುವೆವು.

 106. ಭಕ್ತ ಜನರಿಗೆ ಇದರಲ್ಲಿ ಖಂಡಿತ ಶುಭವಾರ್ತೆ ಇದೆ.

 107. (ದೂತರೇ,) ನಾವು ನಿಮ್ಮನ್ನು ಸರ್ವಲೋಕಗಳಿಗೆ ಅನುಗ್ರಹವಾಗಿ ಕಳಿಸಿರುವೆವು.

108. ಹೇಳಿರಿ; ಏಕಮಾತ್ರ ದೇವನೇ ನಿಮ್ಮ ದೇವನೆಂದು ನನ್ನ ಕಡೆಗೆ ದಿವ್ಯವಾಣಿಯನ್ನು ರವಾನಿಸಲಾಗಿದೆ. ಇನ್ನಾದರೂ ನೀವು ಶರಣಾಗುವಿರಾ?

 109. (ದೂತರೇ,) ಅವರು ನಿರ್ಲಕ್ಷಿಸಿದರೆ ಹೇಳಿರಿ; ನಾನಂತು ಸಮಾನವಾಗಿ ನಿಮಗೆಲ್ಲಾ ಎಚ್ಚರಿಕೆ ನೀಡಿದ್ದೇನೆ. ನಿಮಗೆ ವಾಗ್ದಾನ ಮಾಡಲಾಗಿರುವ ದಿನವು (ಲೋಕಾಂತ್ಯವು) ಹತ್ತಿರವಿದೆಯೋ ದೂರವಿದೆಯೋ ಎಂಬುದು ನನಗೆ ತಿಳಿಯದು.

110. ಅವನು, ಗುಟ್ಟಿನ ಮಾತುಗಳನ್ನೂ ನೀವು ಅಡಗಿಸಿಡುವ ವಿಷಯಗಳನ್ನೂ ಖಂಡಿತ ಬಲ್ಲನು.

111. ನನಗೆ ತಿಳಿಯದು; ಅದು (ಲೋಕಾಂತ್ಯದಲ್ಲಿನ ವಿಳಂಬವು) ನಿಮ್ಮ ಪಾಲಿಗೆ ಪರೀಕ್ಷೆಯಾಗಿರಬಹುದು ಅಥವಾ ಒಂದು ನಿರ್ದಿಷ್ಟ ಕಾಲದ ವರೆಗಿನ, ವಿಸ್ತರಣೆಯೂ ಆಗಿರಬಹುದು.

112. ಅವರು (ದೂತರು) ಹೇಳಿದರು; ನನ್ನೊಡೆಯಾ, ನೀನು ನ್ಯಾಯದೊಂದಿಗೆ ತೀರ್ಮಾನಿಸಿಬಿಡು. ನಮ್ಮ ಒಡೆಯನು ಪರಮ ದಯಾಳುವಾಗಿದ್ದಾನೆ. ನೀವು ಆಡುವ ಎಲ್ಲ ಮಾತುಗಳ ಕುರಿತಂತೆ ಅವನಿಂದಲೇ ನೆರವನ್ನು ಬೇಡಲಾಗುತ್ತದೆ.