26. Ash Shuara

26. ಅಶ್ಶುಅರಾಅ್ (ಕವಿಗಳು)

ವಚನಗಳು – 227, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ತ್ವಾ ಸೀನ್ ಮ್ಮೀಮ್.

2. ಇವು ಸುಷ್ಪಷ್ಟ ಗ್ರಂಥದ ವಚನಗಳು.

3. ಅವರು ನಂಬುತ್ತಿಲ್ಲ ಎಂಬ ಚಿಂತೆಯಲ್ಲಿ ನೀವು ನಿಮ್ಮನ್ನೇ ನಾಶ ಪಡಿಸುವಂತಿದೆ.

4. ನಾವು ಬಯಸಿದರೆ, ಅವರಿಗಾಗಿ ಆಕಾಶದಿಂದ ಒಂದು ಪುರಾವೆಯನ್ನು ಇಳಿಸಿ ಅದರ ಮುಂದೆ ಅವರ ಕೊರಳುಗಳು ಬಾಗುವಂತೆ ಮಾಡಬಹುದು.

  5. ಅವರು, ಆ ಪರಮ ದಯಾಳುವಿನ ಕಡೆಯಿಂದ ತಮ್ಮ ಬಳಿಗೆ ಬಂದ ಪ್ರತಿಯೊಂದು ಉಪದೇಶವನ್ನೂ ಸಂಪೂರ್ಣ ಕಡೆಗಣಿಸುತ್ತಾರೆ.

6. ಹೀಗೆ ಅವರು (ಸತ್ಯವನ್ನು) ಸುಳ್ಳೆಂದು ತಿರಸ್ಕರಿಸಿ ಬಿಟ್ಟಿದ್ದಾರೆ. ಅವರು ಗೇಲಿ ಮಾಡುತ್ತಿದ್ದ ವಾಸ್ತವವು (ಶಿಕ್ಷೆಯು) ಬಹು ಬೇಗನೇ ಅವರ ಬಳಿಗೆ ಬಂದು ಬಿಡುವುದು.

 7. ಅವರೇನು, ಭೂಮಿಯನ್ನು ನೋಡುವುದಿಲ್ಲವೇ? ನಾವು ಅದರೊಳಗೆ ಎಷ್ಟೊಂದು ಬಗೆಯ ಶ್ರೇಷ್ಠ ಸಸ್ಯವರ್ಗಗಳನ್ನು ಬೆಳೆಸಿರುವೆವು!

8. ಇದರಲ್ಲಿ ಖಂಡಿತ ಪುರಾವೆ ಇದೆ. ಆದರೆ ಅವರಲ್ಲಿ ಹೆಚ್ಚಿನವರು ನಂಬುವವರಲ್ಲ.

 9. ನಿಮ್ಮ ಒಡೆಯನು ಖಂಡಿತ ಪ್ರಬಲನೂ ಕರುಣಾಳುವೂ ಆಗಿದ್ದಾನೆ.

10. ನಿಮ್ಮ ಒಡೆಯನು ಮೂಸಾರನ್ನು ಕರೆದು ಹೇಳಿದನು; ಅಕ್ರಮಿ ಜನಾಂಗದ ಬಳಿಗೆ ಹೋಗಿರಿ.

11. ಫಿರ್‌ಔನನ ಜನಾಂಗದ ಬಳಿಗೆ. ಅವರೇನು ಅಂಜುವುದಿಲ್ಲವೇ?

12. ಅವರು (ಮೂಸಾ) ಹೇಳಿದರು; ನನ್ನೊಡೆಯಾ, ಅವರು ನನ್ನನ್ನು ತಿರಸ್ಕರಿಸುವರೆಂಬ ಭಯ ನನಗಿದೆ.

13. ನನ್ನ ಮನಸ್ಸು ಕುಗ್ಗುತ್ತಿದೆ. ನನ್ನ ನಾಲಿಗೆ ಚಲಿಸುತ್ತಿಲ್ಲ. ನೀನು (ಈ ಹೊಣೆಯನ್ನು) ಹಾರೂನರೆಡೆಗೆ ಕಳಿಸು.

14. ಅವರ ಬಳಿ ನನ್ನ ವಿರುದ್ಧ ಒಂದು ಆರೋಪವಿದೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂಬ ಆತಂಕ ನನಗಿದೆ.

15. ಅವನು (ಅಲ್ಲಾಹನು) ಹೇಳಿದನು; ಖಂಡಿತ ಹಾಗಾಗದು. ಇದೀಗ ನೀವಿಬ್ಬರೂ ನಮ್ಮ ಪುರಾವೆಗಳೊಂದಿಗೆ ಹೋಗಿರಿ. ನಾವು ಎಲ್ಲವನ್ನೂ ಕೇಳುವವರಾಗಿ ನಿಮ್ಮ ಜೊತೆಗೇ ಇರುವೆವು.

16. ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿ ಹೇಳಿರಿ; ನಾವು ಎಲ್ಲ ಜಗತ್ತುಗಳ ಒಡೆಯನ ದೂತರು.

17. ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿ ಬಿಡು.

18. ಅವನು (ಫಿರ್‌ಔನ್) ಹೇಳಿದನು; ನಾವು ನಿನ್ನ ಬಾಲ್ಯದಲ್ಲಿ ನಿನ್ನನ್ನು ನಮ್ಮ ನಡುವೆ ಪೋಷಿಸಿರಲಿಲ್ಲವೇ ಮತ್ತು ನಿನ್ನ ಬದುಕಿನ ಹಲವು ವರ್ಷಗಳನ್ನು ನೀನು ನಮ್ಮ ಜೊತೆಗೆ ಕಳೆದಿರಲಿಲ್ಲವೇ?

19. ಆದರೂ ನೀನು ಆ ನಿನ್ನ ಕೃತ್ಯವನ್ನು ಮಾಡಿಬಿಟ್ಟೆ. ನೀನು ಖಂಡಿತ ಕೃತಘ್ನನು.

20. ಅವರು (ಮೂಸಾ) ಹೇಳಿದರು; ನಾನು ಅಜ್ಞಾನದ ಸ್ಥಿತಿಯಲ್ಲಿ ಆ ಕೃತ್ಯವನ್ನು ಎಸಗಿದ್ದೆ.

 21. ಆ ಬಳಿಕ ನಾನು ನಿಮಗೆ ಅಂಜಿ ನಿಮ್ಮ ಬಳಿಯಿಂದ ಓಡಿ ಹೋದೆ. ಆ ಬಳಿಕ ನನ್ನ ಒಡೆಯನು ನನಗೆ ಹೊಣೆಗಾರಿಕೆಯನ್ನು ನೀಡಿದನು ಮತ್ತು ನನ್ನನ್ನು ದೂತನಾಗಿ ನೇಮಿಸಿದನು.

22. ಇನ್ನು, ನೀನು ನನ್ನ ಮೇಲೆ ಋಣ ಹೊರಿಸುವ ಆ ಉಪಕಾರಗಳು. ನಿಜವಾಗಿ, ನೀನು ಇಸ್ರಾಈಲರ ಸಂತತಿಯನ್ನು ದಾಸ್ಯಕ್ಕೆ ಒಳಪಡಿಸಿರುವೆ.

23. ಫಿರ್‌ಔನನು ಕೇಳಿದನು; ಎಲ್ಲ ಲೋಕಗಳ ಒಡೆಯ ಅಂದರೆ ಏನದು?

24. ಅವರು (ಮೂಸಾ) ಹೇಳಿದರು; ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ನಂಬುವವರಾಗಿದ್ದರೆ (ಚೆನ್ನಾಗಿತ್ತು).

25. ಅವನು (ಫಿರ್‌ಔನ್) ತನ್ನ ಅಕ್ಕಪಕ್ಕದವರೊಡನೆ ಕೇಳಿದನು; ನೀವು ಕೇಳುತ್ತಿಲ್ಲವೇ?

26. ಅವರು (ಮೂಸಾ) ಹೇಳಿದರು; ಅವನು ನಿಮ್ಮ ಒಡೆಯನೂ ಹೌದು, ನಿಮ್ಮ ಹಿಂದಿನ ನಿಮ್ಮ ತಾತ ಮುತ್ತಾತಂದಿರ ಒಡೆಯನೂ ಹೌದು.

27. ಅವನು (ಫಿರ್‌ಔನ್) ಹೇಳಿದನು; ನಿಮ್ಮ ಕಡೆಗೆ ಕಳಿಸಲಾಗಿರುವ ಈ ನಿಮ್ಮ ದೇವದೂತನು ಹುಚ್ಚನೇ ಸರಿ.

28. ಅವರು (ಮೂಸಾ) ಹೇಳಿದರು; ಅವನು ಪೂರ್ವದ ಹಾಗೂ ಪಶ್ಚಿಮದ ಹಾಗೂ ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ಬುದ್ಧಿ ಉಳ್ಳವರಾಗಿದ್ದರೆ (ಚೆನ್ನಾಗಿತ್ತು).

29. ಅವನು (ಫಿರ್‌ಔನ್) ಹೇಳಿದನು; ನೀನು ನನ್ನ ಹೊರತು ಬೇರೆ ಯಾರನ್ನಾದರೂ ದೇವರಾಗಿಸಿಕೊಂಡರೆ ನಾನು ಖಂಡಿತ ನಿನ್ನನ್ನು ಕೈದಿಗಳ ಸಾಲಿಗೆ ಸೇರಿಸುವೆನು.

30. ಅವರು (ಮೂಸಾ) ಹೇಳಿದರು; ನಾನು ನಿನ್ನ ಬಳಿಗೆ ಒಂದು ಸ್ಪಷ್ಟ ಪುರಾವೆಯನ್ನು ತಂದರೂ? (ಹಾಗೆ ಮಾಡುವೆಯಾ?)

31. ಅವನು (ಫಿರ್‌ಔನ್) ಹೇಳಿದನು; ನೀನು ಸತ್ಯವಂತನಾಗಿದ್ದರೆ ಅದನ್ನು ತಂದು ಬಿಡು.

  32. ಆಗ ಅವರು (ಮೂಸಾ) ತಮ್ಮ ಊರುಗೋಲನ್ನು ಕೆಳಕ್ಕೆ ಎಸೆದು ಬಿಟ್ಟರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಿನ ರೂಪ ತಾಳಿತು.

33. ಮತ್ತು ಅವರು ತಮ್ಮ ಕೈಯನ್ನು ಹೊರ ತೆಗೆದಾಗ, ನೋಡುವವರ ಮುಂದೆ ಅದು ಉಜ್ವಲವಾಗಿ ಹೊಳೆಯುತ್ತಿತ್ತು.

34. ಅವನು (ಫಿರ್‌ಔನ್) ತನ್ನ ಅಕ್ಕ ಪಕ್ಕ ಇದ್ದ ಸರದಾರರೊಡನೆ ಹೇಳಿದನು; ಅವನು ಖಂಡಿತ ಒಬ್ಬ ತಜ್ಞ ಮಾಂತ್ರಿಕನು.

35. ಅವನು ತನ್ನ ಜಾದುವಿನ ಮೂಲಕ ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ನೀವೇನು ಸೂಚಿಸುತ್ತೀರಿ?

36. ಅವರು (ಆಸ್ಥಾನಿಗರು ) ಹೇಳಿದರು; ಅವನಿಗೆ ಹಾಗೂ ಅವನ ಸಹೋದರನಿಗೆ ಕಾಲಾವಕಾಶ ಕೊಡಿರಿ ಮತ್ತು ಜನರನ್ನು ಒಟ್ಟು ಸೇರಿಸುವವರನ್ನು ವಿವಿಧ ನಗರಗಳಿಗೆ ರವಾನಿಸಿರಿ.

37. ಅವರು, ಎಲ್ಲ ಪರಿಣತ ಜಾದೂಗಾರರನ್ನು ನಿಮ್ಮ ಬಳಿಗೆ ತರಲಿ.

38. ಹೀಗೆ, ಒಂದು ನಿಶ್ಚಿತ ದಿನ, ನಿರ್ದಿಷ್ಟ ಸಮಯದಲ್ಲಿ ಜಾದೂಗಾರರೆಲ್ಲಾ ಒಟ್ಟು ಸೇರಿದರು.

39. ಜನರೊಡನೆ ಹೇಳಲಾಯಿತು; ನೀವು ಒಟ್ಟು ಸೇರಿರುವಿರಾ?

40. ಜಾದೂಗಾರರು ವಿಜಯಿಗಳಾದರೆ ನಾವೆಲ್ಲಾ ಅವರನ್ನೇ ಅನುಸರಿಸೋಣ.

41. ಜಾದೂಗಾರರೆಲ್ಲಾ ಬಂದು ಸೇರಿದಾಗ ಅವರು ಫಿರ್‌ಔನನೊಡನೆ ಕೇಳಿದರು; ನಾವು ಗೆದ್ದರೆ ನಮಗೆ ಬಹುಮಾನವೇನಾದರೂ ಸಿಕ್ಕೀತೇ?  

42. ಅವನು (ಫಿರ್‌ಔನ್) ಹೇಳಿದನು; ಹೌದು, ಆಗ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ.

43. ಅವರೊಡನೆ (ಜಾದೂಗಾರರೊಡನೆ) ಮೂಸಾ, ‘‘ನೀವು ಎಸೆಯ ಬಯಸುವುದನ್ನು ಎಸೆದು ಬಿಡಿರಿ’’ ಎಂದರು.

44. ಅವರು, ತಮ್ಮ ಹಗ್ಗಗಳನ್ನೂ ದಂಡಗಳನ್ನೂ ಎಸೆದರು ಮತ್ತು ‘‘ಫಿರ್‌ಔನನ ಗೌರವದಾಣೆ! ನಾವು ಖಂಡಿತ ಗೆಲ್ಲುವೆವು’’ ಎಂದರು.

45. ಕೊನೆಗೆ ಮೂಸಾ ತಮ್ಮ ಊರುಗೋಲನ್ನು ಎಸೆದರು. ಅದು ಅವರ (ಜಾದೂಗಾರರ) ಎಲ್ಲ ಕೃತಕ ಸೃಷ್ಟಿಗಳನ್ನು ನುಂಗತೊಡಗಿತು.

46. ಅಷ್ಟರಲ್ಲೇ ಜಾದೂಗಾರರೆಲ್ಲಾ ಸಾಷ್ಟಾಂಗವೆರಗಿಬಿಟ್ಟರು.

47. ಅವರು ಹೇಳಿದರು; ನಾವು ನಂಬಿದೆವು, ಸರ್ವಲೋಕಗಳ ಒಡೆಯನನ್ನು,

48. ಮೂಸಾ ಮತ್ತು ಹಾರೂನರ ಒಡೆಯನನ್ನು.

49. ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ಅವನನ್ನು ನಂಬಿ ಬಿಟ್ಟಿರಿ. ಅವನೇ (ಮೂಸಾ) ನಿಮಗೆ ಜಾದೂ ಕಲಿಸಿದ ನಿಮ್ಮ ಮಹಾ ನಾಯಕನಾಗಿರಬೇಕು. ನಿಮಗೆ ಬಹುಬೇಗನೇ ತಿಳಿಯಲಿದೆ. ನಾನು ಖಂಡಿತ ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆಗೇರಿಸಿ ಬಿಡುವೆನು.

50. ಅವರು ಹೇಳಿದರು; ಪರವಾಗಿಲ್ಲ. ನಾವಂತು ನಮ್ಮ ಒಡೆಯನ ಕಡೆಗೆ ಮರಳಿ ಹೋಗುವವರು.

51. ನಾವು, (ಸತ್ಯವನ್ನು) ನಂಬಿದವರಲ್ಲಿ ಮೊದಲಿಗರಾದ್ದರಿಂದ ನಮ್ಮೊಡೆಯನು ನಮ್ಮ ತಪ್ಪುಗಳನ್ನೆಲ್ಲಾ ಖಂಡಿತ ಕ್ಷಮಿಸಿ ಬಿಡುವನೆಂದು ನಿರೀಕ್ಷಿಸುತ್ತೇವೆ.

52. ಮತ್ತು (ಮುಂದೆ) ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನನ್ನ ದಾಸರೊಂದಿಗೆ ಹೊರಟು ಬಿಡಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು.

53. ಫಿರ್‌ಔನನು (ಈ ಸಂದೇಶದೊಂದಿಗೆ) ಎಲ್ಲ ನಗರಗಳಿಗೆ ಸುದ್ದಿಗಾರರನ್ನು ರವಾನಿಸಿದನು;

54. ‘‘ಅವರು (ಇಸ್ರಾಈಲರ ಸಂತತಿ) ಕೇವಲ ಒಂದು ಸಣ್ಣ ಪಂಗಡ ಮಾತ್ರವಾಗಿದ್ದಾರೆ.

55. ಅವರು ನಮ್ಮನ್ನು ಬಹಳಷ್ಟು ಕೆರಳಿಸಿದ್ದಾರೆ.

56. ನಾವು ಒಂದು ಜಾಗೃತ ಪಡೆಯಾಗಿದ್ದೇವೆ’’.

57. ಕೊನೆಗೆ ನಾವು ಅವರನ್ನು ಹೊರಗಟ್ಟಿಬಿಟ್ಟೆವು, ತೋಟಗಳಿಂದ ಹಾಗೂ ಝರಿಗಳಿಂದ.

58. ಬೊಕ್ಕಸಗಳಿಂದ ಹಾಗೂ ಪ್ರತಿಷ್ಠಿತ ಭವನಗಳಿಂದ.

59. ಈ ರೀತಿ, ನಾವು ಇಸ್ರಾಈಲರ ಸಂತತಿಯನ್ನು ಅವರ ಉತ್ತರಾಧಿಕಾರಿಗಳಾಗಿಸಿದೆವು.

60. ಸೂರ್ಯೋದಯದ ಹೊತ್ತಿಗೆ ಅವರು (ಫಿರ್‌ಔನನ ಪಡೆಗಳು) ಅವರನ್ನು (ಮೂಸಾರನ್ನು) ಹಿಂಬಾಲಿಸಿದರು.

61. ಎರಡೂ ತಂಡಗಳು ಪರಸ್ಪರರನ್ನು ಕಂಡಾಗ ಮೂಸಾರ ಜೊತೆಗಾರರು ಹೇಳಿದರು; ನಾವು ಸಿಕ್ಕಿ ಬಿದ್ದೆವು.

62. ಅವರು (ಮೂಸಾ) ಹೇಳಿದರು; ಖಂಡಿತ ಇಲ್ಲ. ನನ್ನ ಜೊತೆ ನನ್ನ ಒಡೆಯನಿದ್ದಾನೆ. ಅವನು ಖಂಡಿತ ನನಗೆ ದಾರಿ ತೋರುತ್ತಾನೆ.

63. ನಾವು ಮೂಸಾರಿಗೆ, ‘‘ನಿಮ್ಮ ಊರುಗೋಲಿನಿಂದ ಕಡಲಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳಿಸಿದೆವು. (ಅವರು ಹೊಡೆದಾಗ,) ಅದು (ಸಮುದ್ರವು) ಇಬ್ಭಾಗವಾಗಿ ಬಿಟ್ಟಿತು ಮತ್ತು ಪ್ರತಿಯೊಂದು ಭಾಗವೂ ಒಂದು ಬೃಹತ್ ಪರ್ವತದಂತಿತ್ತು.

64. ಮತ್ತು ನಾವು ಇನ್ನೊಂದು ಗುಂಪನ್ನು (ಫಿರ್‌ಔನನ ಪಡೆಯನ್ನು) ಅದರ ಬಳಿಗೆ ತಂದೆವು.

65. ಕೊನೆಗೆ ನಾವು ಮೂಸಾರನ್ನು ಹಾಗೂ ಅವರ ಜೊತೆಗಿದ್ದ ಎಲ್ಲರನ್ನೂ ರಕ್ಷಿಸಿದೆವು.

66. ಮತ್ತು ಇನ್ನೊಂದು ಗುಂಪನ್ನು ನಾವು ಮುಳುಗಿಸಿ ಬಿಟ್ಟೆವು.

67. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.

68. ಮತ್ತು (ದೂತರೇ,) ನಿಮ್ಮ ಒಡೆಯನು ಖಂಡಿತ, ಪ್ರಬಲನು ಹಾಗೂ ಕರುಣಾಳುವಾಗಿದ್ದಾನೆ.

69. ನೀವು ಅವರಿಗೆ ಇಬ್ರಾಹೀಮರ ವೃತ್ತಾಂತವನ್ನು ಓದಿ ಕೇಳಿಸಿರಿ;

70. ಅವರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ, ‘‘ನೀವು ಇದೇನನ್ನು ಪೂಜಿಸುತ್ತಿರುವಿರಿ?’’ ಎಂದು ಕೇಳಿದರು.

71. ಅವರು ಹೇಳಿದರು; ನಾವು ಮೂರ್ತಿಗಳನ್ನು ಪೂಜಿಸುತ್ತೇವೆ ಮತ್ತು ನಾವು ಸದಾ ಅವರಿಗೇ ನಿಷ್ಠರಾಗಿರುತ್ತೇವೆ.

72. ಅವರು (ಇಬ್ರಾಹೀಮ್) ಕೇಳಿದರು; ನೀವು ಪ್ರಾರ್ಥಿಸುವಾಗ ಅವುಗಳು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತವೆಯೇ?

73. ಅಥವಾ ಅವು ನಿಮಗೇನಾದರೂ ಲಾಭವನ್ನುಂಟು ಮಾಡುತ್ತವೆಯೇ? ಅಥವಾ ಅವು ನಿಮಗೇನಾದರೂ ನಷ್ಟ ಉಂಟು ಮಾಡಬಲ್ಲವೇ?

74. ಅವರು (ಜನರು) ಹೇಳಿದರು; ನಿಜವಾಗಿ ನಮ್ಮ ತಾತ ಮುತ್ತಾತಂದಿರು ಹೀಗೆಯೇ ಮಾಡುತ್ತಿದ್ದುದನ್ನು ನಾವು ಕಂಡಿರುತ್ತೇವೆ.

75. ಅವರು (ಇಬ್ರಾಹೀಮ್) ಹೇಳಿದರು; ನೀವು ಪೂಜಿಸುತ್ತಿರುವುದು ಏನನ್ನು ಎಂಬುದನ್ನು ನೀವು ನೋಡಿದಿರಾ?

76. ಹಾಗೆಯೇ, ನೀವು ಮತ್ತು ನಿಮ್ಮ ಗತಕಾಲದ ತಾತ ಮುತ್ತಾತಂದಿರು ಪೂಜಿಸುತ್ತಿದ್ದುದು (ಏನೆಂಬುದನ್ನು ನೋಡಿರುವಿರಾ?)

77. ಅವರೆಲ್ಲರೂ ಖಂಡಿತ ನನ್ನ ಶತ್ರುಗಳು. ಸರ್ವ ಲೋಕಗಳ ಒಡೆಯನ ಹೊರತು.

78. ಅವನೇ ನನ್ನನ್ನು ಸೃಷ್ಟಿಸಿದವನು ಮತ್ತು ನನಗೆ ಸರಿದಾರಿ ತೋರುವವನು.

79. ಅವನೇ ನನಗೆ ತಿನಿಸುವವನು ಹಾಗೂ ಕುಡಿಸುವವನು.

80. ನಾನು ರೋಗಿಯಾದಾಗ ಅವನೇ ನನ್ನನ್ನು ಗುಣಪಡಿಸುವವನು.

81. ಅವನೇ ನನಗೆ ಮರಣ ನೀಡುವವನು ಮತ್ತು ನನ್ನನ್ನು (ಮತ್ತೆ) ಜೀವಂತ ಗೊಳಿಸುವವನು.

82. (ಅಂತಿಮ) ಪ್ರತಿಫಲದ ದಿನ ನನ್ನ ತಪ್ಪುಗಳನ್ನು ಅವನೇ ಕ್ಷಮಿಸುವನೆಂದು ನಾನು ನಿರೀಕ್ಷಿಸುತ್ತೇನೆ.

83. ನನ್ನೊಡೆಯಾ, ನನಗೆ ಜಾಣ್ಮೆಯನ್ನು ನೀಡು ಮತ್ತು ನನ್ನನ್ನು ಸಜ್ಜನರ ಸಾಲಿಗೆ ಸೇರಿಸು.

84. ಮುಂದಿನ ಜನರಲ್ಲಿ ನನ್ನ ಉತ್ತಮ ಪ್ರಸ್ತಾಪವನ್ನು ಮುಂದುವರಿಸು.

85. ನೀನು ನನ್ನನ್ನು ಅನುಗ್ರಹಗಳು ತುಂಬಿದ ಸ್ವರ್ಗದ ಉತ್ತರಾಧಿಕಾರಿಯಾಗಿಸು.

86. ನನ್ನ ತಂದೆಯನ್ನು ಕ್ಷಮಿಸಿಬಿಡು. ಅವರು ಖಂಡಿತ, ದಾರಿಗೆಟ್ಟವರ ಸಾಲಿಗೆ ಸೇರಿದ್ದರು.

87. ಎಲ್ಲರನ್ನೂ ಮತ್ತೆ ಜೀವಂತಗೊಳಿಸಲಾಗುವ ದಿನ, ನನ್ನನ್ನು ಅಪಮಾನಿಸಬೇಡ.

88. ಅದು, ಸಂಪತ್ತಿನಿಂದಾಗಲಿ, ಸಂತಾನಗಳಿಂದಾಗಲಿ ಯಾರಿಗೂ ಲಾಭವಾಗದ ದಿನವಾಗಿರುವುದು.

89. ನಿರ್ಮಲ ಮನಸ್ಸಿನೊಂದಿಗೆ ಅಲ್ಲಾಹನ ಬಳಿಗೆ ಬಂದವನು ಮಾತ್ರ (ಅಂದು ಸುರಕ್ಷಿತನಾಗಿರುವನು).

90. ಅಂದು ಸ್ವರ್ಗವನ್ನು ಧರ್ಮನಿಷ್ಠರಿಗೆ ಹತ್ತಿರಗೊಳಿಸಲಾಗುವುದು.

91. ಮತ್ತು ನರಕವನ್ನು ದಾರಿಗೆಟ್ಟವರ ಮುಂದೆ ತರಲಾಗುವುದು.

92. (ಅಂದು) ಅವರೊಡನೆ ಕೇಳಲಾಗುವುದು; ನೀವು ಯಾರನ್ನೆಲ್ಲಾ ಪೊಜಿಸುತ್ತಿದ್ದಿರೋ ಅವರೆಲ್ಲಾ ಎಲ್ಲಿದ್ದಾರೆ?

93. ಅಲ್ಲಾಹನ ಹೊರತು. ಇಂದು ಅವರು ನಿಮಗೆ ನೆರವಾಗಬಲ್ಲರೇ? ಅಥವಾ ಅವರು ಸ್ವತಃ ತಮಗೆ ತಾವೇ ನೆರವಾಗಬಲ್ಲರೇ?

94. ಅವರನ್ನೂ ದಾರಿಗೆಟ್ಟವರನ್ನೂ ಮುಖ ಕೆಳಗಾಗಿಸಿ ಅದರೊಳಗೆ (ನರಕದೊಳಗೆ) ಹಾಕಿ ಬಿಡಲಾಗುವುದು.

95. ಶೈತಾನನ ಪಡೆಯ ಎಲ್ಲರಿಗೂ (ಇದೇ ಗತಿ ಒದಗುವುದು).

96. ಅದರಲ್ಲಿ ಅವರು ಪರಸ್ಪರ ಜಗಳಾಡುತ್ತಾ ಹೇಳುವರು;

97. ಅಲ್ಲಾಹನಾಣೆ! ನಾವಂತು ಸ್ಪಷ್ಟವಾಗಿ ದಾರಿಗೆಟ್ಟಿದ್ದೆವು –

98. – ಎಲ್ಲ ಲೋಕಗಳ ಒಡೆಯನಿಗೆ ಸರಿಸಾಟಿಗಳಿದ್ದಾರೆ ಎಂದು ನಾವು ಹೇಳಿದಾಗ.

99. ನಮ್ಮನ್ನು ದಾರಿಗೆಡಿಸಿದವರು ಖಂಡಿತ ಅಪರಾಧಿಗಳು.

100. (ಇಂದು) ನಮ್ಮ ಪರವಾಗಿ ಶಿಫಾರಸು ಮಾಡುವವರು ಯಾರೂ ಇಲ್ಲ.

101. (ನಮಗಿಂದು) ನೈಜ ಮಿತ್ರನೊಬ್ಬನೂ ಇಲ್ಲ.

102. ನಮಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾವು ಖಂಡಿತ ನಂಬಿದವರಾಗಿರುತ್ತಿದ್ದೆವು.

103. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.

104. ಮತ್ತು ನಿಮ್ಮೊಡೆಯನು ಖಂಡಿತ, ಪ್ರಬಲ ಹಾಗೂ ಕರುಣಾಮಯಿಯಾಗಿದ್ದಾನೆ.

105. ನೂಹರ ಜನಾಂಗದವರು (ಹಲವು) ದೂತರನ್ನು ತಿರಸ್ಕರಿಸಿದರು.

106. ಅವರ ಸಹೋದರ ನೂಹರು ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ?

107. ನಾನು ನಿಮ್ಮೆಡೆಗೆ ಬಂದಿರುವ ನಂಬಲರ್ಹ ದೂತನಾಗಿದ್ದೇನೆ.

108. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

109. ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಎಲ್ಲ ಲೋಕಗಳ ಒಡೆಯನು ಮಾತ್ರ.

110. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

111. ಅವರು (ನಾಡಿನವರು) ಹೇಳಿದರು; ನಿಮ್ಮನ್ನು ಅನುಸರಿಸುತ್ತಿರುವವರು ಕೀಳು ವರ್ಗದವರು. ಹೀಗಿರುತ್ತಾ ನಾವು ನಿಮ್ಮನ್ನು ನಂಬಬೇಕೇ?

112. ಅವರು (ನೂಹ್) ಹೇಳಿದರು; ಅವರ ಕಸುಬುಗಳ ಕುರಿತು ನನಗೆ ತಿಳಿಯದು.

113. ಅವರ ವಿಚಾರಣೆಯ ಹೊಣೆ ಇರುವುದು ನನ್ನ ಒಡೆಯನಿಗೆ ಮಾತ್ರ. ನಿಮಗೆ ಇದರ ಅರಿವಿದ್ದಿದ್ದರೆ ಚೆನ್ನಾಗಿತ್ತು.

114. ನಾನಂತು ವಿಶ್ವಾಸಿಗಳನ್ನು ದೂರ ಓಡಿಸಲಾರೆ.

115. ನಾನು ಕೇವಲ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ.

116. ಅವರು (ನಾಡಿನವರು) ಹೇಳಿದರು; ಓ ನೂಹ್, ನೀನು (ಇದನ್ನೆಲ್ಲಾ) ನಿಲ್ಲಿಸದಿದ್ದರೆ ಖಂಡಿತ, ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು.

117. ಅವರು (ನೂಹ್) ಹೇಳಿದರು; ನನ್ನೊಡೆಯಾ, ನನ್ನ ಜನಾಂಗದವರು ನನ್ನನ್ನು ತಿರಸ್ಕರಿಸಿದ್ದಾರೆ.

118. ನೀನು ನನ್ನ ಹಾಗೂ ಅವರ ನಡುವೆ ಒಂದು ಸ್ಪಷ್ಟ ತೀರ್ಮಾನ ಮಾಡಿಬಿಡು ಮತ್ತು ನನ್ನನ್ನೂ ನನ್ನ ಜೊತೆಗಿರುವ ವಿಶ್ವಾಸಿಗಳನ್ನೂ ರಕ್ಷಿಸು.

119. ಕೊನೆಗೆ, ನಾವು ಅವರನ್ನೂ, ತುಂಬಿದ ಹಡಗಿನಲ್ಲಿ ಅವರ ಜೊತಗಿದ್ದವರನ್ನೂ ರಕ್ಷಿಸಿದೆವು.

120. ಆ ಬಳಿಕ ನಾವು ಇತರರನ್ನು ಮುಳುಗಿಸಿ ಬಿಟ್ಟೆವು.

121. ಖಂಡಿತವಾಗಿಯೂ ಇದರಲ್ಲಿ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.

122. ನಿಮ್ಮೊಡೆಯನು ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ.

123. ಆದ್ ಜನಾಂಗದವರೂ (ಹಲವು) ದೂತರನ್ನು ತಿರಸ್ಕರಿಸಿದ್ದರು.

124. ಅವರೊಡನೆ ಅವರ ಸಹೋದರ ಹೂದ್ ಹೇಳಿದ್ದರು; ನೀವೇನು ಅಂಜುವುದಿಲ್ಲವೇ?

125. ನಾನು ನಿಮ್ಮೆಡೆಗೆ ಬಂದಿರುವ ನಂಬಲರ್ಹ ದೇವದೂತನಾಗಿದ್ದೇನೆ.

126. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

127. ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಂತು ಎಲ್ಲ ಲೋಕಗಳ ಒಡೆಯನ ಬಳಿಯಲ್ಲೇ ಇದೆ.

128. ನೀವೇನು, ಕೇವಲ ವ್ಯರ್ಥ ಮೋಜಿಗಾಗಿ ಪ್ರತಿಯೊಂದು ಎತ್ತರದ ಸ್ಥಳದಲ್ಲೂ ಒಂದು ಸ್ಮಾರಕವನ್ನು ನಿರ್ಮಿಸುತ್ತೀರಾ?

129. ಮತ್ತು ಇಲ್ಲೇ ಶಾಶ್ವತವಾಗಿ ಇರಲಿಕ್ಕಾಗಿ ನೀವು ಭವ್ಯ ಭವನಗಳನ್ನು ನಿರ್ಮಿಸುತ್ತೀರಾ?

130. ಮತ್ತು ನೀವು ಆಕ್ರಮಿಸುವಾಗ ಬಹಳ ಕ್ರೂರಿಗಳಾಗಿ ಆಕ್ರಮಿಸುತ್ತೀರಿ.

131. (ಇದನ್ನೆಲ್ಲಾ ಬಿಟ್ಟು) ನೀವೀಗ ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

132. ನಿಮಗೆ ತಿಳಿದಿರುವ ವಸ್ತುಗಳ ಮೂಲಕ ನಿಮಗೆ ನೆರವಾದವನಿಗೆ ಅಂಜಿರಿ.

133. ಅವನು ನಿಮಗೆ ನೆರವಾಗಿರುವನು, ಜಾನುವಾರುಗಳ ಮೂಲಕ ಹಾಗೂ ಸಂತತಿಗಳ ಮೂಲಕ.

134. ತೋಟಗಳ ಹಾಗೂ ಚಿಲುಮೆಗಳ ಮೂಲಕ.

135. ನೀವು ಒಂದು ಮಹಾದಿನದ ಶಿಕ್ಷೆಗೆ ಗುರಿಯಾಗುವಿರೆಂಬ ಭಯ ನನಗಿದೆ.

136. ಅವರು (ಜನಾಂಗದವರು) ಹೇಳಿದರು; ನಮ್ಮ ಮಟ್ಟಿಗೆ ನೀವು ಬೋಧಿಸಿದರೂ ಒಂದೇ, ಬೋಧಿಸದೆ ಇದ್ದರೂ ಒಂದೇ.

137. ಅವೆಲ್ಲಾ ಕೇವಲ ಗತಕಾಲದವರ ಆಚಾರಗಳು.

138. ನಾವು ಯಾವ ಶಿಕ್ಷೆಗೂ ಗುರಿಯಾಗಲಾರೆವು.

139. ಹೀಗೆ, ಅವರು ಅವರನ್ನು (ಹೂದ್‌ರನ್ನು) ತಿರಸ್ಕರಿಸಿದರು ಮತ್ತು ನಾವು ಅವರನ್ನು (ಹೂದ್‌ರ ಜನಾಂಗದವರನ್ನು) ನಾಶಮಾಡಿದೆವು. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.

 140. ನಿಮ್ಮ ಒಡೆಯನು ಖಂಡಿತ ಪ್ರಬಲನೂ ಕರುಣಾಳುವೂ ಆಗಿದ್ದಾನೆ.

141. ಸಮೂದ್ ಜನಾಂಗದವರೂ (ಹಲವು) ದೂತರನ್ನು ತಿರಸ್ಕರಿಸಿದ್ದರು.

142. ಅವರ ಸಹೋದರ ಸಾಲಿಹ್, ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ?

143. ನಾನು ನಿಮ್ಮೆಡೆಗೆ ಬಂದಿರುವ, ನಂಬಲರ್ಹನಾದ ದೇವದೂತನಾಗಿದ್ದೇನೆ.

144. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

145. ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನ್ನ ಪ್ರತಿಫಲವು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರವಿದೆ.

146. ನಿಮ್ಮನ್ನೇನು ಇಲ್ಲೇ ಸದಾ ನಿಶ್ಚಿಂತರಾಗಿರಲು ಬಿಟ್ಟು ಬಿಡಲಾಗುವುದೇ?

147. ಈ ಉದ್ಯಾನಗಳಲ್ಲಿ ಹಾಗೂ ಚಿಲುಮೆಗಳಲ್ಲಿ?

148. ಈ ಹೊಲಗಳಲ್ಲಿ ಹಾಗೂ ನಯ ನಾಜೂಕಿನ ಖರ್ಜೂರದ ಗೊಂಚಲುಗಳಿರುವ ಹೊಲಗಳಲ್ಲಿ?

149. ನೀವು ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸಿ ಸಂಭ್ರಮ ಪಡುತ್ತೀರಿ.

150. ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

151. ನೀವು ಅತಿಕ್ರಮಿಗಳ ಆದೇಶಗಳನ್ನು ಅನುಸರಿಸಬೇಡಿ.

152. ಅವರು ಭೂಮಿಯಲ್ಲಿ ಅಶಾಂತಿ ಹಬ್ಬುವವರೇ ಹೊರತು ಯಾವುದೇ ಸುಧಾರಣೆಯ ಕೆಲಸ ಮಾಡುವವರಲ್ಲ.

153. ಅವರು (ಜನಾಂಗದವರು) ಹೇಳಿದರು; ನೀವು ಒಬ್ಬ ಮಾಟಪೀಡಿತ ವ್ಯಕ್ತಿಯಾಗಿರುವಿರಿ.

154. ನೀವು ಕೇವಲ ನಮ್ಮಂತಹ ಒಬ್ಬ ಮನುಷ್ಯ ಮಾತ್ರ. ನೀವು ನಿಜಕ್ಕೂ ಸತ್ಯವಂತರಾಗಿದ್ದರೆ ಏನಾದರೂ ಪುರಾವೆ ತನ್ನಿರಿ.

155. ಅವರು (ಸಾಲಿಹ್) ಹೇಳಿದರು; ಈ ಹೆಣ್ಣೊಂಟೆ. ಇದು ನೀರು ಕುಡಿಯುವುದಕ್ಕೆ ಮತ್ತು ನೀವು ನೀರು ಕುಡಿಯುವುದಕ್ಕೆ (ಪ್ರತ್ಯೇಕ) ದಿನ ನಿಗದಿಯಾಗಿರುತ್ತದೆ.

156. ನೀವು ಕೆಟ್ಟ ಸಂಕಲ್ಪದೊಂದಿಗೆ ಇದನ್ನು ಮುಟ್ಟಬೇಡಿ. ಮುಟ್ಟಿದರೆ ನೀವು ಒಂದು ಮಹಾ ದಿನದ ಶಿಕ್ಷೆಗೆ ಗುರಿಯಾಗುವಿರಿ.

157. ಅವರು ಅದನ್ನು ಕಡಿದು ಬಿಟ್ಟರು ಮತ್ತು ಆ ಬಳಿಕ ಬಹಳಷ್ಟು ಪಶ್ಚಾತ್ತಾಪ ಪಟ್ಟರು.

158. ಕೊನೆಗೆ ಶಿಕ್ಷೆಯು ಅವರನ್ನು ಆವರಿಸಿತು. ಇದರಲ್ಲಿ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬಿರಲಿಲ್ಲ.

159. ಖಂಡಿತವಾಗಿಯೂ ನಿಮ್ಮ ಒಡೆಯನು ಬಹಳ ಪ್ರಬಲನೂ ಕರುಣಾಳುವೂ ಆಗಿದ್ದಾನೆ.

160. ಲೂತ್‌ರ ಜನಾಂಗದವರು (ಹಲವು) ದೂತರನ್ನು ತಿರಸ್ಕರಿಸಿದರು.

161. ಅವರ ಸಹೋದರ ಲೂತ್, ಅವರೊಡನೆ ಹೇಳಿದರು; ನೀವೇನು ಅಂಜುವುದಿಲ್ಲವೇ?

162. ನಾನು ನಿಮ್ಮ ಪಾಲಿಗೆ ನಂಬಲರ್ಹ ದೂತನಾಗಿದ್ದೇನೆ.

163. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

 164. ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ.

165. ಸರ್ವ ಜಗತ್ತಿನಲ್ಲಿ ನೀವು ಮಾತ್ರ (ಕಾಮಕ್ಕಾಗಿ) ಪುರುಷರ ಬಳಿಗೆ ಹೋಗುತ್ತೀರಾ?

166. ಮತ್ತು ನೀವು ನಿಮಗಾಗಿ ಅಲ್ಲಾಹನು ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ಬಿಟ್ಟು ಬಿಡುತ್ತೀರಾ? ನಿಜವಾಗಿ, ನೀವು ಅತಿಕ್ರಮಿಗಳಾಗಿರುವಿರಿ.

167. ಅವರು (ಜನರು) ಹೇಳಿದರು; ನೀವು (ನಿಮ್ಮ ಉಪದೇಶವನ್ನು) ನಿಲ್ಲಿಸದಿದ್ದರೆ ನಿಮ್ಮನ್ನು (ನಾಡಿನಿಂದ) ಹೊರ ಹಾಕಲಾಗುವುದು.

168. ಅವರು (ಲೂತ್) ಹೇಳಿದರು; ನಿಮ್ಮ ಕೃತ್ಯ (ಸಲಿಂಗಕಾಮ)ದ ಬಗ್ಗೆ ನನಗೆ ಜಿಗುಪ್ಸೆ ಇದೆ.

169. ನನ್ನೊಡೆಯಾ, ನನ್ನನ್ನೂ, ನನ್ನ ಪಾಳಯವರನ್ನೂ, ಅವರ ಕೃತ್ಯಗಳಿಂದ ರಕ್ಷಿಸು.

170. ಕೊನೆಗೆ ನಾವು ಅವರನ್ನೂ ಅವರ ಪಾಳಯದ ಎಲ್ಲರನ್ನೂ ರಕ್ಷಿಸಿದೆವು.

171. ಹಿಂದೆ ಉಳಿದುಕೊಂಡ ಒಬ್ಬ ವೃದ್ದೆಯ ಹೊರತು.

172. ಆ ಬಳಿಕ ನಾವು ಇತರೆಲ್ಲರನ್ನೂ ನಾಶ ಮಾಡಿಬಿಟ್ಟೆವು.

173. ನಾವು ಅವರ ಮೇಲೆ (ಕಲ್ಲಿನ) ಮಳೆಯನ್ನು ಸುರಿಸಿದೆವು. ಎಚ್ಚರಿಸಲಾಗಿದ್ದವರ ಪಾಲಿಗೆ ಅದು ಬಹಳ ಕೆಟ್ಟ ಮಳೆಯಾಗಿತ್ತು .

174. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ.

175. ನಿಮ್ಮ ಒಡೆಯನಂತು ತುಂಬಾ ಪ್ರಬಲನೂ ಕರುಣಾಳುವೂ ಆಗಿದ್ದಾನೆ.

176. ‘ಐಕಃ’ದವರು (ಹಲವು) ದೂತರನ್ನು ತಿರಸ್ಕರಿಸಿದರು.

177. ಅವರೊಡನೆ (ದೂತ) ಶುಐಬ್ ಹೇಳಿದರು; ನೀವೇನು ಅಂಜುವುದಿಲ್ಲವೇ?

178. ನಾನು ನಿಮ್ಮ ಪಾಲಿಗೆ ನಂಬಲರ್ಹ ದೂತನಾಗಿರುವೆನು.

179. ನೀವು ಅಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ.

 180. ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ.

181. ಪೂರ್ಣವಾಗಿ ಅಳತೆಮಾಡಿರಿ ಮತ್ತು ಅಳತೆಯಲ್ಲಿ ಕಡಿತಗೊಳಿಸಬೇಡಿ.

182. ನೇರವಾಗಿರುವ ತಕ್ಕಡಿಯಲ್ಲೇ ತೂಗಿರಿ.

183. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿ ಕೊಡಬೇಡಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುತ್ತಾ ತಿರುಗಬೇಡಿ.

184. ಮತ್ತು ನೀವು, ನಿಮ್ಮನ್ನು ಹಾಗೂ ನಿಮಗಿಂತ ಮೊದಲಿನವರನ್ನು ಸೃಷ್ಟಿಸಿದವನಿಗೆ ಅಂಜಿರಿ.

185. ಅವರು ಹೇಳಿದರು; ನೀನು ಖಂಡಿತ ಮಾಟಪೀಡಿತನಾಗಿರುವೆ.

186. ನೀನು ನಮ್ಮಂತಹ ಒಬ್ಬ ಮನುಷ್ಯ ಮಾತ್ರ. ನಾವು ನಿನ್ನನ್ನು ಸುಳ್ಳುಗಾರನೆಂದು ಭಾವಿಸುತ್ತೇವೆ.

  187. ನೀನು ನಿಜಕ್ಕೂ ಸತ್ಯವಂತನಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.

188. ಅವರು (ಶುಐಬ್) ಹೇಳಿದರು; ನನ್ನೊಡೆಯಾ, ಅವರೇನು ಮಾಡುತ್ತಿರುವರೆಂಬುದು ನಿನಗೆ ತಿಳಿದಿದೆ.

 189. ಅವರು (ಐಕಃದವರು) ಅವರನ್ನು (ಶುಐಬ್‌ರನ್ನು) ತಿರಸ್ಕರಿಸಿದರು. ಕೊನೆಗೆ ನೆರಳಿನ ದಿನದ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು. ಅದು ನಿಜಕ್ಕೂ ಒಂದು ಮಹಾ ದಿನದ ಶಿಕ್ಷೆಯಾಗಿತ್ತು.

190. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬಿರಲಿಲ್ಲ.

191. ಮತ್ತು ಖಂಡಿತವಾಗಿಯೂ ನಿಮ್ಮ ಒಡೆಯನು ಅತ್ಯಂತ ಪ್ರಬಲನೂ ಕರುಣಾಮಯಿಯೂ ಆಗಿದ್ದಾನೆ.

192. ಇದು (ಕುರ್‌ಆನ್) ಎಲ್ಲ ಲೋಕಗಳ ಒಡೆಯನಿಂದಲೇ ಇಳಿಸಲ್ಪಟ್ಟಿದೆ.

193. ನಂಬಲರ್ಹನಾದ ಆತ್ಮನು (ಜಿಬ್ರೀಲ್) ಇದನ್ನು ಹೊತ್ತು ಇಳಿದಿರುವನು –

194. – ನಿಮ್ಮ (ದೂತರ) ಮನದ ಮೇಲೆ, ನೀವು ಎಚ್ಚರಿಸುವವರಾಗಬೇಕೆಂದು –

195. – ಸ್ಪಷ್ಟವಾದ ಅರಬೀ ಭಾಷೆಯಲ್ಲಿ.

196. ಖಂಡಿತವಾಗಿಯೂ ಇದು (ಈ ಮಾಹಿತಿ) ಗತಕಾಲದವರ ಗ್ರಂಥಗಳಲ್ಲೂ ಇದೆ.

197. ಇದನ್ನೆಲ್ಲಾ ಇಸ್ರಾಈಲರ ಸಂತತಿಯ ವಿದ್ವಾಂಸರು ಬಲ್ಲರು ಎಂಬುದು ಅವರ ಪಾಲಿಗೆ ಒಂದು ಪುರಾವೆಯಲ್ಲವೇ?

198. ಒಂದು ವೇಳೆ ನಾವು ಇದನ್ನು ಅರಬರಲ್ಲದ ಯಾರಿಗಾದರೂ ಇಳಿಸಿಕೊಟ್ಟಿದ್ದರೆ.

199. ಮತ್ತು ಆತನು ಅವರಿಗೆ ಅದನ್ನು ಓದಿ ಕೇಳಿಸಿದ್ದರೆ, ಆಗಲೂ ಅವರು ಇದನ್ನು ನಂಬುತ್ತಿರಲಿಲ್ಲ.

200. ಈ ರೀತಿ ನಾವು ಅದನ್ನು (ನಿರಾಕರಣೆಯನ್ನು) ಅಪರಾಧಿಗಳ ಮನಸ್ಸುಗಳೊಳಗೆ ನಾಟಿ ಬಿಟ್ಟಿರುವೆವು.

201. ನಿಜವಾಗಿ ಅವರು, ಯಾತನಾಮಯ ಶಿಕ್ಷೆಯನ್ನು ಕಾಣುವವರೆಗೂ ಇದನ್ನು ನಂಬಲಾರರು.

202. ಅದು (ಆ ಶಿಕ್ಷೆಯು) ಹಠಾತ್ತನೆ ಅವರ ಮೇಲೆ ಬಂದೆರಗುವುದು ಮತ್ತು ಅವರಿಗೆ ಅದರ ಅರಿವೂ ಇರಲಾರದು.

203. ಆಗ ಅವರು, ನಮಗೆ ಒಂದಿಷ್ಟು ಕಾಲಾವಕಾಶ ಸಿಕ್ಕೀತೇ? ಎಂದು ಕೇಳುವರು.

204. ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿರುವರೇ?

205. ನೀವು ಕಂಡಿರಾ? ನಾವು ಅವರನ್ನು ಸುಖಭೋಗದಲ್ಲಿರಲು ವರ್ಷಗಟ್ಟಲೆ ಅವಕಾಶ ನೀಡಿದರೆ,

206. ಮತ್ತು ಆ ಬಳಿಕ, ಅವರಿಗೆ ಏನನ್ನು ವಾಗ್ದಾನ ಮಾಡಲಾಗಿತ್ತೋ ಅದು (ಶಿಕ್ಷೆಯು) ಬಂದುಬಿಟ್ಟರೆ,

207. ಅವರು ಭೋಗಿಸುತ್ತಿದ್ದ ವಸ್ತುಗಳಿಂದ ಅವರಿಗೆ ಯಾವ ಲಾಭವೂ ಆಗದು.

208. ಎಚ್ಚರಿಸುವವರನ್ನು ಕಳಿಸದೆ ನಾವು ಯಾವುದೇ ನಾಡನ್ನು ನಾಶಮಾಡಿಲ್ಲ.

209. ಇದು ಉಪದೇಶ. ನಾವೆಂದೂ ಅಕ್ರಮಿಗಳಾಗಿರಲಿಲ್ಲ.

210. ಇದನ್ನು (ಕುರ್‌ಆನ್‌ಅನ್ನು) ತರುವವರು ಶೈತಾನರಲ್ಲ.

211. ಅವರು ಅದಕ್ಕೆ ಅರ್ಹರೂ ಅಲ್ಲ ಮತ್ತು ಅದು ಅವರಿಗೆ ಸಾಧ್ಯವೂ ಇಲ್ಲ.

212. ಇದನ್ನು ಕೇಳದಂತೆ ಅವರನ್ನು ತಡೆಯಲಾಗಿದೆ.

213. ಅಲ್ಲಾಹನ ಜೊತೆಗೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸಬೇಡಿ. ಅನ್ಯಥಾ ನೀವು ಶಿಕ್ಷೆಗೊಳಗಾಗುವಿರಿ.

214. ನೀವು ನಿಮ್ಮ ಹತ್ತಿರದ ಬಂಧುಗಳನ್ನು (ಮೊದಲು) ಎಚ್ಚರಿಸಿರಿ.

215. ಮತ್ತು ನಂಬಿಕೆ ಇಟ್ಟವರ ಪೈಕಿ ನಿಮ್ಮನ್ನು ಅನುಸರಿಸುವವರ ಪಾಲಿಗೆ ನೀವು ವಿಶೇಷ ವಿನಯ ಉಳ್ಳವರಾಗಿರಿ.

216. ಇನ್ನು ಅವರು ನಿಮಗೆ ಅವಿಧೇಯರಾದರೆ, ನಿಮ್ಮ ಕರ್ಮಗಳಿಗೆ ನಾನು ಹೊಣೆಯಲ್ಲ ಎಂದು ಹೇಳಿಬಿಡಿರಿ.

217. (ದೂತರೇ,) ನೀವು ಆ ಪ್ರಬಲನಾದ ಕರುಣಾಮಯಿಯಲ್ಲಿ ಭರವಸೆ ಇಡಿರಿ.

218. ಅವನು ನಿಮ್ಮನ್ನು ಕಾಣುತ್ತಿರುತ್ತಾನೆ, ನೀವು ನಿಂತಿರುವಾಗ,

219. ಮತ್ತು ಸಾಷ್ಟಾಂಗವೆರಗುವವರ (ನಮಾಝ್ ಸಲ್ಲಿಸುವವರ) ಜೊತೆಗೆ ನೀವು ತಿರುಗಾಡುತ್ತಿರುವಾಗ (ಅವನು ನಿಮ್ಮನ್ನು ಕಾಣುತ್ತಿರುತ್ತಾನೆ).

220. ಅವನು ಖಂಡಿತ ಎಲ್ಲವನ್ನೂ ಕೇಳುವವನೂ ಬಲ್ಲವನೂ ಆಗಿದ್ದಾನೆ.

221. ಶೈತಾನನು ಯಾರ ಬಳಿಗೆ ಇಳಿದು ಬರುತ್ತಾರೆಂದು ನಾನು ನಿಮಗೆ ತಿಳಿಸಲೇ?

222. ಸುಳ್ಳಾರೋಪಗಳನ್ನು ಹೊರಿಸುವ ಪ್ರತಿಯೊಬ್ಬ ಪಾಪಿಯ ಬಳಿಗೆ ಅವರು ಇಳಿದು ಬರುತ್ತಾರೆ.

223. ಅವರು, ಅವರಿಗೆ ವದಂತಿಗಳನ್ನು ತಲುಪಿಸುತ್ತಾರೆ ಮತ್ತು ಅವುಗಳಲ್ಲಿ ಹೆಚ್ಚಿನವು ಸುಳ್ಳಾಗಿರುತ್ತವೆ.

224. ಮತ್ತು ಕವಿಗಳನ್ನು ದಾರಿಗೆಟ್ಟವರು ಮಾತ್ರ ಅನುಸರಿಸುತ್ತಾರೆ.

225. ನೀವು ಕಾಣುತ್ತಿಲ್ಲವೇ, ಅವರು (ಕವಿಗಳು) ಪ್ರತಿಯೊಂದು ಕಣಿವೆಯಲ್ಲೂ ಅಲೆಯುವುದನ್ನು?

226. ಮತ್ತು ಅವರು ತಾವು ಮಾಡಿಲ್ಲದ್ದನ್ನು ಹೇಳುತ್ತಿರುವುದನ್ನು?

 227. ಸತ್ಯವನ್ನು ನಂಬಿದವರು ಮತ್ತು ಸತ್ಕರ್ಮಿಗಳು ಇದಕ್ಕೆ ಹೊರತಾಗಿರುತ್ತಾರೆ. ಅವರು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುತ್ತಾರೆ ಮತ್ತು ತಮ್ಮ ಮೇಲೆ ಅನ್ಯಾಯವಾದ ಬಳಿಕವಷ್ಟೇ ಅದಕ್ಕೆ ಪ್ರತೀಕಾರವೆಸಗುತ್ತಾರೆ. ಅನ್ಯಾಯ ಎಸಗಿದವರು, ತಮ್ಮನ್ನು ಎಂತಹ ನೆಲೆಗೆ ಮರಳಿಸಲಾಗುವುದು ಎಂಬುದನ್ನು ಅರಿಯಲಿದ್ದಾರೆ.