28. Al Qasas

28. ಅಲ್ಕಸಸ್ (ಕಥೆಗಳು)

ವಚನಗಳು – 88, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ತ್ವಾ ಸೀನ್ ಮ್ಮೀಮ್.

2. ಇವು ಬಹಳ ಸ್ಪಷ್ಟವಾಗಿರುವ ಗ್ರಂಥದ ವಚನಗಳು.

3. ನಾವು ನಿಮಗೆ, ಮೂಸಾ ಮತ್ತು ಫಿರ್‌ಔನರ ಕೆಲವು ಸಂಗತಿಗಳನ್ನು ನಿಜರೂಪದಲ್ಲಿ ಓದಿ ಕೇಳಿಸುತ್ತಿದ್ದೇವೆ – ನಂಬುವವರಿಗಾಗಿ.

4. ಖಂಡಿತವಾಗಿಯೂ ಫಿರ್‌ಔನನು ಭೂಮಿಯಲ್ಲಿ ವಿದ್ರೋಹ ಮೆರೆದಿದ್ದನು ಮತ್ತು ಭೂವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿದ್ದನು. ಅವನು ಅವರಲ್ಲಿನ ಒಂದು ಪಂಗಡವನ್ನು ದುರ್ಬಲಗೊಳಿಸಿ ಅವರ ಪುತ್ರರ ಕೊರಳು ಕೊಯ್ದು ಬಿಡುತ್ತಿದ್ದನು ಹಾಗೂ ಅವರ ಮಹಿಳೆಯರನ್ನು ಮಾತ್ರ ಜೀವಂತವಿಡುತ್ತಿದ್ದನು. ಖಂಡಿತವಾಗಿಯೂ ಅವನು ಅಶಾಂತಿ ಹಬ್ಬುವವನಾಗಿದ್ದನು.

 5. ಇತ್ತ ನಾವು, ಭೂಮಿಯಲ್ಲಿ ಮರ್ದಿತರಾಗಿದ್ದವರಿಗೆ ಉಪಕರಿಸಲು ಮತ್ತು ಅವರನ್ನು ನಾಯಕರಾಗಿಯೂ ಉತ್ತರಾಧಿಕಾರಿಗಳಾಗಿಯೂ ಮಾಡಲು ನಿರ್ಧರಿಸಿದ್ದೆವು.

6. ಮತ್ತು ನಾವು ಅವರನ್ನು ಭೂಮಿಯಲ್ಲಿ ಅಧಿಕಾರಸ್ಥರಾಗಿಸಿ ಫಿರ್‌ಔನ್, ಹಾಮಾನ್ ಮತ್ತು ಅವರ ಪಡೆಗಳಿಗೆ, ಅವರು ಏನನ್ನು ಅಂಜುತ್ತಿದ್ದರೋ ಅದನ್ನು ತೋರಿಸಬಯಸಿದ್ದೆವು.

 7. ಮತ್ತು ನಾವು ಮೂಸಾರ ತಾಯಿಗೆ (ಹೀಗೆಂದು) ದಿವ್ಯ ಸಂದೇಶವನ್ನು ಕಳಿಸಿದೆವು; ನೀನು ಅವನಿಗೆ ಹಾಲುಣ್ಣಿಸುತ್ತಲಿರು, ಅವನ (ಜೀವದ) ಕುರಿತು ನಿನಗೆ ಭಯವಾದರೆ ಅವನನ್ನು ನದಿಯಲ್ಲಿ ಹಾಕಿಬಿಡು. ನೀನು ಅಂಜಬೇಡ ಮತ್ತು ದುಃಖಿಸಬೇಡ. ನಾವು ಅವನನ್ನು ನಿನ್ನ ಬಳಿಗೇ ಮರಳಿಸುವೆವು ಮತ್ತು ಅವನನ್ನು ನಾವು ದೂತನಾಗಿಸುವೆವು.

8. ಮುಂದೆ, ಫಿರ್‌ಔನನ ಕಡೆಯವರು ಅವರನ್ನು (ಮೂಸಾರನ್ನು) ಎತ್ತಿಕೊಂಡರು, ತಮ್ಮ ಪಾಲಿಗೆ ಶತ್ರು ಹಾಗೂ ದುರಂತವಾಗಲಿಕ್ಕಾಗಿ. ಖಂಡಿತವಾಗಿಯೂ ಫಿರ್‌ಔನ್, ಹಾಮಾನ್ ಮತ್ತು ಅವರ ಪಡೆಗಳು ತಪ್ಪಿತಸ್ಥರಾಗಿದ್ದರು.

 9. ಫಿರ್‌ಔನನ ಪತ್ನಿ ಹೇಳಿದಳು; ‘‘ಅವನು ನನಗೂ ನಿನಗೂ ಕಣ್ಣಿಗೆ ತಂಪಾಗಿದ್ದಾನೆ. ಅವನನ್ನು ಕೊಲ್ಲಬೇಡ. ಅವನಿಂದ ನಮಗೇನಾದರೂ ಲಾಭವಾಗಬಹುದು ಅಥವಾ ನಾವು ಅವನನ್ನು ಪುತ್ರನಾಗಿಸಿಕೊಳ್ಳಬಹುದು’’. ಅವರಿಗೆ (ವಾಸ್ತವದ) ಅರಿವಿರಲಿಲ್ಲ.

10. ಅತ್ತ ಮೂಸಾರ ತಾಯಿಯ ಮನಸ್ಸು ಕಸಿವಿಸಿಗೊಂಡಿತ್ತು. ಆಕೆ ದೃಢ ವಿಶ್ವಾಸ ಉಳ್ಳವಳಾಗಿ ಉಳಿಯಬೇಕೆಂದು ನಾವು ಆಕೆಯ ಮನಸ್ಸಿಗೆ ಸ್ಥಿರತೆಯನ್ನು ಒದಗಿಸದೆ ಇದ್ದಿದ್ದರೆ, ಆಕೆ ಈ ವಿಷಯವನ್ನು ಬಹಿರಂಗ ಪಡಿಸಿ ಬಿಡುತ್ತಿದ್ದಳು.

11. ಆಕೆ ಅವರ (ಮೂಸಾರ) ಸಹೋದರಿಗೆ ಹೇಳಿದಳು; ನೀನು ಅದನ್ನು (ಮಗುವನ್ನು) ಹಿಂಬಾಲಿಸುತ್ತಾ ನಡೆ ಮತ್ತು ಅವರಿಗೆ (ಫಿರ್‌ಔನನ ಪಾಳಯದವರಿಗೆ) ಅರಿವಾಗದಂತೆ ದೂರದಿಂದ ಅದರ ಮೇಲೆ ಕಣ್ಣಿಟ್ಟಿರು.

12. ನಾವು ಆಗಲೇ, ಹಾಲುಣಿಸುವವರನ್ನು ಆತನಿಂದ ತಡೆದಿಟ್ಟಿದ್ದೆವು. ಆಗ ಆಕೆ (ಮೂಸಾರ ಸಹೋದರಿ) ಹೇಳಿದಳು; ಆತನ ಪೋಷಣೆ ಮಾಡಬಲ್ಲ ಒಂದು ಕುಟುಂಬವನ್ನು ನಾನು ನಿಮಗೆ ತೋರಿಸಿಕೊಡಲೇ? ಅವರು ಆತನ ಪಾಲಿಗೆ ಹಿತೈಷಿಗಳಾಗಿರುವರು.

13. ಹೀಗೆ ನಾವು, ಆತನ ತಾಯಿಯ ಕಣ್ಣು ತಂಪಾಗಲೆಂದು, ಆಕೆ ದುಃಖಿಸಬಾರದೆಂದು ಮತ್ತು ಅಲ್ಲಾಹನು ಕೊಟ್ಟ ಮಾತು ಸತ್ಯವೆಂಬುದನ್ನು ಆಕೆ ಅರಿಯಲೆಂದು ಆತನನ್ನು ಆಕೆಯ ಬಳಿಗೆ ಮರಳಿಸಿದೆವು, ಆದರೆ ಹೆಚ್ಚಿನವರು ಇದನ್ನು ಅರಿತಿಲ್ಲ.

 14. ಮುಂದೆ ಅವರು (ಮೂಸಾ) ತಮ್ಮ ಯವ್ವನವನ್ನು ತಲುಪಿದಾಗ ಮತ್ತು ಶಕ್ತರಾದಾಗ ನಾವು ಅವರಿಗೆ ಯುಕ್ತಿಯನ್ನೂ ಜ್ಞಾನವನ್ನೂ ನೀಡಿದೆವು. ಸಜ್ಜನರಿಗೆ ನಾವು ಇದೇ ರೀತಿ ಸತ್ಫಲವನ್ನು ನೀಡುತ್ತೇವೆ.

15. ಒಮ್ಮೆ ನಗರದ ಜನರು ನಿದ್ದೆಯಲ್ಲಿದ್ದಾಗ ಅವರು ನಗರವನ್ನು ಪ್ರವೇಶಿಸಿದರು. ಅಲ್ಲಿ ಅವರು, ಇಬ್ಬರು ಪರಸ್ಪರ ಜಗಳಾಡುತ್ತಿರುವುದನ್ನು ಕಂಡರು. ಅವರಲ್ಲೊಬ್ಬನು ಅವರ ಪಾಳಯದವನಾಗಿದ್ದನು ಮತ್ತು ಇನ್ನೊಬ್ಬನು ಅವರ ಶತ್ರು ಪಾಳಯದವನಾಗಿದ್ದನು. ಅವರ ಪಾಳಯದವನು, ಅವರ ಶತ್ರು ಪಾಳಯದವನ ವಿರುದ್ಧ ಅವರ ನೆರವನ್ನು ಬೇಡಿದನು. ಮೂಸಾ ಆತನಿಗೆ (ಶತ್ರು ಪಾಳಯದವನಿಗೆ) ಹೊಡೆದರು ಮತ್ತು ಅದು ಆತನ ಅಂತ್ಯಕ್ಕೆ ಕಾರಣವಾಯಿತು. ಅವರು (ಮೂಸಾ) ‘‘ಇದು ಶೈತಾನನ ಕೃತ್ಯ. ಅವನು ಖಂಡಿತ ಸ್ಪಷ್ಟವಾಗಿ ದಾರಿಗೆಡಿಸುವ ಶತ್ರುವಾಗಿದ್ದಾನೆ’’ ಎಂದರು.

16. ಅವರು ‘‘ನನ್ನೊಡೆಯಾ, ನಾನು ನನ್ನ ಮೇಲೆಯೇ ಅಕ್ರಮ ವೆಸಗಿದ್ದೇನೆ. ನನ್ನನ್ನು ಕ್ಷಮಿಸಿಬಿಡು’’ ಎಂದು ಪ್ರಾರ್ಥಿಸಿದರು. ಅವನು (ಅಲ್ಲಾಹನು) ಅವರನ್ನು ಕ್ಷಮಿಸಿಬಿಟ್ಟನು. ಖಂಡಿತವಾಗಿಯೂ ಅವನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ.

17. ‘‘ನನ್ನೊಡೆಯಾ, ನೀನು ನನ್ನನ್ನು ಅನುಗ್ರಹಿಸಿರುವೆ. (ಹೀಗಿರುತ್ತಾ) ನಾನೆಂದೂ ಅಕ್ರಮಿಗಳ ಸಹಾಯಕನಾಗಲಾರೆ’’ ಎಂದು ಅವರು (ಮೂಸಾ) ಹೇಳಿದರು.

18. ಮರುದಿನ ಅವರು ಅಂಜುತ್ತಾ, ಎಚ್ಚರಿಕೆಯೊಂದಿಗೆ ನಗರವನ್ನು ಪ್ರವೇಶಿಸಿದರು. ಆಗ, ನಿನ್ನೆ ಅವರಿಂದ ನೆರವು ಬೇಡಿದ್ದವನೇ ಮತ್ತೆ ಅವರಲ್ಲಿ ಮೊರೆ ಇಡುತ್ತಿದ್ದನು. ‘‘ನೀನು ಸ್ಪಷ್ಟವಾಗಿ ದಾರಿಗೆಟ್ಟವನು’’ ಎಂದು ಮೂಸಾ ಹೇಳಿದರು.

 19. ಅವರು, ತಮ್ಮಿಬ್ಬರ ಪಾಲಿಗೂ ಶತ್ರುವಾಗಿದ್ದವನ ಮೇಲೆ ಕೈ ಮಾಡಲು ಹೊರಟಾಗ ಅವನು ಹೇಳಿದನು; ಓ ಮೂಸಾ, ನೀನು ನಿನ್ನೆ ಒಬ್ಬಾತನನ್ನು ಕೊಂದಂತೆ ನನ್ನನ್ನು ಕೊಲ್ಲ ಬಯಸುವೆಯಾ? ಭೂಮಿಯಲ್ಲಿ ದಬ್ಬಾಳಿಕೆ ನಡೆಸುವುದಷ್ಟೇ ನಿನ್ನ ಬಯಕೆಯಾಗಿದೆ. ನೀನು ಸುಧಾರಕನಾಗಲು ಬಯಸುವುದಿಲ್ಲ.

20. ಅಷ್ಟರಲ್ಲಿ, ನಗರದ ಗಡಿಭಾಗದಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದ; ಓ ಮೂಸಾ, ನಾಯಕರು ನಿಮ್ಮನ್ನು ಕೊಲ್ಲುವುದಕ್ಕಾಗಿ ನಿಮ್ಮ ಕುರಿತು ಸಮಾಲೋಚಿಸುತ್ತಿದ್ದಾರೆ. ನೀವು (ಇಲ್ಲಿಂದ) ಹೊರಟು ಹೋಗಿರಿ. ನಾನು ಖಂಡಿತ ನಿಮ್ಮ ಹಿತೈಷಿಯಾಗಿದ್ದೇನೆ.

21. ಅವರು ಭಯ ಹಾಗೂ ಕುತೂಹಲದೊಂದಿಗೆ ಅಲ್ಲಿಂದ ಹೊರಟರು. ‘‘ನನ್ನೊಡೆಯಾ, ನನ್ನನ್ನು ಅಕ್ರಮಿ ಜನಾಂಗದಿಂದ ರಕ್ಷಿಸು’’ ಎಂದು ಅವರು ಪ್ರಾರ್ಥಿಸಿದರು.

22. ಅವರು ಮದ್‌ಯನ್‌ಕಡೆಗೆ ಹೊರಟಾಗ ‘‘ನನ್ನ ಒಡೆಯನು ನನಗೆ ನೇರ ಮಾರ್ಗವನ್ನು ತೋರಿಸಬಹುದು’’ ಎಂದರು.

 23.. ಅವರು ಮದ್‌ಯನ್‌ನಲ್ಲಿ, ನೀರಿರುವ ಸ್ಥಳದಲ್ಲಿ, ಜನರ ಗುಂಪೊಂದು (ಕುರಿಗಳಿಗೆ) ನೀರು ಕುಡಿಸುವುದನ್ನು ಕಂಡರು ಮತ್ತು ಇಬ್ಬರು ಮಹಿಳೆಯರು ದೂರ ನಿಂತಿರುವುದನ್ನು ಕಂಡರು. ಅವರು ಆ ಇಬ್ಬರೊಡನೆ, ನಿಮ್ಮ ಸಮಾಚಾರವೇನು? ಎಂದು ವಿಚಾರಿಸಿದರು. ‘‘ಕುರಿ ಕಾಯುವವರು (ತಮ್ಮ ಕುರಿಗಳಿಗೆ) ನೀರು ಕುಡಿಸಿ ಮುಗಿಸುವ ತನಕ ನಾವು ನೀರು ಕುಡಿಸುವಂತಿಲ್ಲ. ಅತ್ತ, ನಮ್ಮ ತಂದೆ ತುಂಬಾ ವೃದ್ಧರು’’ ಎಂದು ಅವರು ಉತ್ತರಿಸಿದರು.

24. ಅವರು ಆ ಇಬ್ಬರು ಮಹಿಳೆಯರಿಗೆ (ಅವರ ಕುರಿಗಳಿಗೆ) ನೀರು ಕುಡಿಸಿ (ವಿಶ್ರಾಂತಿಗಾಗಿ) ನೆರಳಿನೆಡೆಗೆ ಹೊರಟರು ಮತ್ತು ಹೇಳಿದರು; ನನ್ನೊಡೆಯಾ, ನೀನು ಕರುಣಿಸುವ ಯಾವ ಹಿತಕ್ಕೂ ನಾನು ಅರ್ಹನಾಗಿದ್ದೇನೆ.

  25. ಆಗ ಆ ಮಹಿಳೆಯರಲ್ಲೊಬ್ಬಳು ನಾಚುತ್ತಾ ಅವರ ಬಳಿಗೆ ನಡೆದು ಬಂದಳು. ನೀವು ನಮಗೆ ನೀರನ್ನು ಒದಗಿಸಿದ್ದಕ್ಕಾಗಿ ನಿಮಗೆ ಪುರಸ್ಕಾರ ನೀಡಲು ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಆಕೆ ಹೇಳಿದಳು. ತರುವಾಯ ಅವರು (ಮೂಸಾ) ಅವರ (ಶುಐಬರ) ಬಳಿಗೆ ಬಂದರು ಮತ್ತು ಸಮಾಚಾರವನ್ನೆಲ್ಲಾ ತಿಳಿಸಿದರು. ಅವರು (ಶುಐಬ್) ಹೇಳಿದರು; ನೀವೇನೂ ಅಂಜಬೇಡಿ. ನೀವೀಗ ಅಕ್ರಮಿ ಜನಾಂಗದಿಂದ ಸುರಕ್ಷಿತರಾಗಿರುವಿರಿ.

 26. ಅವರಲ್ಲಿ ಒಬ್ಬಾಕೆ ಹೇಳಿದಳು; ನನ್ನಪ್ಪಾ, ಈತನನ್ನು ಸೇವಕನಾಗಿ ನೇಮಿಸಿಕೊಳ್ಳಿರಿ. ನೀವು ಸೇವಕನಾಗಿ ನೇಮಿಸುವುದಕ್ಕೆ ಶಕ್ತಿವಂತ ಹಾಗೂ ನಂಬಲರ್ಹನಾಗಿರುವಾತನೇ ಹೆಚ್ಚು ಯೋಗ್ಯನಾಗಿರುತ್ತಾನೆ.

 27. ಅವರು (ಶುಐಬ್) ಹೇಳಿದರು; ನೀವು ಎಂಟು ವರ್ಷ ನನ್ನ ಬಳಿ ಸೇವೆ ಸಲ್ಲಿಸುವುದಾದರೆ ನಾನು ಈ ನನ್ನ ಇಬ್ಬರು ಪುತ್ರಿಯರ ಪೈಕಿ ಒಬ್ಬಳನ್ನು ನಿಮಗೆ ವಿವಾಹ ಮಾಡಿಕೊಡುವೆನು. ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಔದಾರ್ಯವಾಗಿರುವುದು. ನಾನು ನಿಮ್ಮನ್ನು ಯಾವುದೇ ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಲ್ಲಾಹನು ಇಚ್ಛಿಸಿದರೆ ನೀವು ನನ್ನನ್ನು ಸಜ್ಜನನಾಗಿ ಕಾಣುವಿರಿ.

28. ಅವರು (ಮೂಸಾ) ಹೇಳಿದರು; ಇದು ನನ್ನ ಹಾಗೂ ನಿಮ್ಮ ನಡುವಣ ಒಪ್ಪಂದ. ನಾನು ಈ ಎರಡು ಅವಧಿಗಳ ಪೈಕಿ ಯಾವುದನ್ನು ಪೂರ್ತಿಗೊಳಿಸಿದರೂ ನನ್ನ ಮೇಲೆ ಯಾವುದೇ ಋಣ ಉಳಿಯದು. ನಮ್ಮ ಮಾತುಗಳಿಗೆ ಅಲ್ಲಾಹನೇ ಸಾಕ್ಷಿ.

29. ಹೀಗೆ, ಮೂಸಾ ಅವಧಿ ಪೂರ್ತಿಗೊಳಿಸಿ ತಮ್ಮ ಮನೆಯವರೊಂದಿಗೆ ಹೊರಟರು. ಅವರು ತೂರ್ ಬೆಟ್ಟದ ಕಡೆ ಒಂದು ಬೆಂಕಿಯನ್ನು ಕಂಡರು. ನೀವು ಇಲ್ಲೇ ಉಳಿಯಿರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ನಿಮಗಾಗಿ ಅಲ್ಲಿಂದೇನಾದರೂ ಮಾಹಿತಿಯನ್ನು ತರಲು ಅಥವಾ ನೀವು ಚಳಿಕಾಯಿಸಿಕೊಳ್ಳುವುದಕ್ಕಾಗಿ ಬೆಂಕಿಯ ಕೆಂಡವನ್ನಾದರೂ ತರಲು ನನಗೆ ಸಾಧ್ಯವಾದೀತು – ಎಂದು ಅವರು ತಮ್ಮ ಮನೆಯವರೊಡನೆ ಹೇಳಿದರು.

 30. ಅವರು ಅಲ್ಲಿಗೆ ತಲುಪಿದಾಗ, ಸಮೃದ್ಧ ಸ್ಥಳದಲ್ಲಿದ್ದ ಬಯಲಿನ ಬಲ ಮಗ್ಗುಲಲ್ಲಿದ್ದ ಒಂದು ಮರದಿಂದ ಅವರಿಗೆ ಕರೆ ನೀಡಲಾಯಿತು; ಓ ಮೂಸಾ, ನಾನೇ ಸರ್ವಲೋಕಗಳ ಒಡೆಯನಾದ ಅಲ್ಲಾಹ್.

31. ನೀವೀಗ ನಿಮ್ಮ ಊರುಗೋಲನ್ನು ಕೆಳಕ್ಕೆಸೆಯಿರಿ – ಎನ್ನಲಾಯಿತು. ಅದು ಹೆಬ್ಬಾವಿನಂತೆ ಚಲಿಸುವುದನ್ನು ಕಂಡು ಅವರು ಬೆನ್ನು ತಿರುಗಿಸಿ ಮರಳಿ ಹೊರಟರು ಮತ್ತು ಹಿಂದಿರುಗಿಯೂ ನೋಡಲಿಲ್ಲ. (ಅವರೊಡನೆ ಹೇಳಲಾಯಿತು;) ಓ ಮೂಸಾ, ನೀವು ಮುಂದೆ ಬನ್ನಿ ಮತ್ತು ಅಂಜಬೇಡಿ. ನೀವು ಸುರಕ್ಷಿತರಾಗಿರುವಿರಿ.

32. ನೀವು ನಿಮ್ಮ ಕೈಯನ್ನು ನಿಮ್ಮ ಬಗಲಿಗೆ ಹಾಕಿರಿ. ಅದು ಸುಲಭವಾಗಿ, ಹೊಳೆಯುತ್ತಾ ಹೊರಬರುವುದು. ಮತ್ತು ನೀವು ಭಯಮುಕ್ತರಾಗಲಿಕ್ಕಾಗಿ, ನಿಮ್ಮ ತೋಳುಗಳನ್ನು ನಿಮ್ಮೆಡೆಗೆ ಎಳೆದುಕೊಳ್ಳಿರಿ. ಇವು, ಫಿರ್‌ಔನ್ ಮತ್ತು ಅವನ ಸರದಾರರಿಗಾಗಿ ನಿಮ್ಮೊಡೆಯನ ಕಡೆಯಿಂದ ನೀಡಲಾಗುತ್ತಿರುವ ಎರಡು ಪುರಾವೆಗಳು. ಅವರು ತೀರಾ ಅವಿಧೇಯರಾಗಿ ಬಿಟ್ಟಿದ್ದಾರೆ.

33. ಅವರು (ಮೂಸಾ) ಹೇಳಿದರು; ನನ್ನೊಡೆಯಾ, ನಾನು ಅವರಲ್ಲಿನ ಒಬ್ಬ ವ್ಯಕ್ತಿಯ ಹತ್ಯೆ ನಡೆಸಿದ್ದೇನೆ. ಆದ್ದರಿಂದ ಅವರು ನನ್ನನ್ನು ಕೊಲ್ಲುವರೆಂಬ ಆಶಂಕೆ ನನಗಿದೆ.

 34. ನನ್ನ ಸಹೋದರ ಹಾರೂನ್ ನನಗಿಂತ ಸ್ಪಷ್ಟವಾಗಿ ಮಾತನಾಡಬಲ್ಲರು. ಸಹಾಯಕರಾಗಿ ಅವರನ್ನು ನನ್ನ ಜೊತೆ ಕಳಿಸು. ಅವರು ನನ್ನನ್ನು ಸಮರ್ಥಿಸಲಿ. ಅವರು (ಫಿರ್‌ಔನ್ ಮತ್ತು ಅವನ ಕಡೆಯವರು) ನನ್ನನ್ನು ತಿರಸ್ಕರಿಸುವರೆಂಬ ಭಯ ನನಗಿದೆ.

35. ಅವನು (ಅಲ್ಲಾಹ್) ಹೇಳಿದನು; ನಾವು ಈಗಲೇ ನಿಮ್ಮ ಸಹೋದರನ ಮೂಲಕ ನಿಮ್ಮ ಕೈಗಳನ್ನು ಬಲಪಡಿಸುವೆವು ಮತ್ತು ನಿಮ್ಮ ವಿರುದ್ಧ ಪ್ರಾಬಲ್ಯ ಸಾಧಿಸಲು ಅವರಿಗೆ ಸಾಧ್ಯವಾಗದಂತೆ, ನಾವು ನಮ್ಮ ಪುರಾವೆಗಳ ಮೂಲಕ ನಿಮ್ಮಿಬ್ಬರಿಗೂ ವಿಶೇಷ ಶಕ್ತಿಯನ್ನು ನೀಡುವೆವು. ನಿಮ್ಮಿಬ್ಬರಿಗೂ ನಿಮ್ಮ ಅನುಯಾಯಿಗಳಿಗೂ ವಿಜಯ ಪ್ರಾಪ್ತವಾಗುವುದು.

36. ಮೂಸಾ, ನಾವು ಒದಗಿಸಿದ ಸ್ಪಷ್ಟ ಪುರಾವೆಗಳೊಂದಿಗೆ ಅವರ (ಫಿರ್‌ಔನ್ ಮತ್ತವನ ಜನರ) ಬಳಿಗೆ ಬಂದಾಗ ಅವರು ಹೇಳಿದರು; ಇದೆಲ್ಲಾ ಕೃತಕ ಇಂದ್ರಜಾಲವೇ ಹೊರತು ಬೇರೇನೂ ಇಲ್ಲ. ನಾವು ನಮ್ಮ ಪೂರ್ವಜರಿಂದ ಇಂತಹದೇನನ್ನೂ ಕೇಳಿಲ್ಲ.

 37. ಮೂಸಾ ಹೇಳಿದರು; ಅವನ ಕಡೆಯಿಂದ ಮಾರ್ಗದರ್ಶನವನ್ನು ತಂದವನು ಯಾರು ಮತ್ತು ಪರಲೋಕದ ಶ್ರೇಷ್ಠ ನೆಲೆಯು ಯಾರಿಗೆ ಸಿಗಲಿದೆ ಎಂಬುದನ್ನು ನನ್ನ ಒಡೆಯನು ಚೆನ್ನಾಗಿ ಬಲ್ಲನು. ಅಕ್ರಮಿಗಳು ಖಂಡಿತ ವಿಜಯಿಗಳಾಗುವುದಿಲ್ಲ.

  38. ಫಿರ್‌ಔನನು ಹೇಳಿದನು; ಸರದಾರರೇ, ನಿಮಗೆ ನನ್ನ ಹೊರತು ಬೇರೊಬ್ಬ ದೇವರಿರುವುದು ನನಗಂತು ತಿಳಿಯದು. ಸದ್ಯ, ಓ ಹಾಮಾನ್, ನೀನು ನನಗಾಗಿ ಆವೆ ಮಣ್ಣನ್ನು ಬೆಂಕಿಯಲ್ಲಿ ಉರಿಸು ಮತ್ತು ನನಗಾಗಿ ಒಂದು ಎತ್ತರದ ಗೋಪುರವನ್ನು ನಿರ್ಮಿಸು. ಆ ಮೂಲಕ ನಾನು ಮೂಸಾನ ದೇವರ ಕಡೆಗೊಮ್ಮೆ ಇಣುಕಿ ನೋಡುತ್ತೇನೆ. ನಾನಂತೂ ಅವನನ್ನು (ಮೂಸಾರನ್ನು) ಸುಳ್ಳುಗಾರನೆಂದೇ ಭಾವಿಸುತ್ತೇನೆ.

 39. ಹೀಗೆ ಅವನು (ಫಿರ್‌ಔನ್) ಮತ್ತು ಅವನ ಯೋಧರು, ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಮೆರೆದರು ಮತ್ತು ತಮಗೆ ನಮ್ಮೆಡೆಗೆ ಮರಳಿಬರಲಿಕ್ಕಿಲ್ಲ ಎಂದು ಭಾವಿಸಿಕೊಂಡಿದ್ದರು.

40. ಕೊನೆಗೆ ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದುಕೊಂಡೆವು ಮತ್ತು ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅಕ್ರಮಿಗಳ ಅಂತಿಮ ಗತಿ ಹೇಗಿರುತ್ತದೆಂದು ನೋಡಿರಿ!

41. ನಾವು ಅವರನ್ನು ನಾಯಕರಾಗಿಸಿದ್ದೆವು. ಆದರೆ ಅವರು (ಜನರನ್ನು) ನರಕದೆಡೆಗೆ ಆಮಂತ್ರಿಸುತ್ತಿದ್ದರು. ಪುನರುತ್ಥಾನ ದಿನ ಅವರಿಗೆ ಯಾವ ನೆರವೂ ಸಿಗದು.

42. ಈ ಲೋಕದಲ್ಲಿ ನಾವು ಶಾಪವನ್ನು ಅವರ ಬೆನ್ನು ಹಿಡಿಸಿದ್ದೆವು ಮತ್ತು ಪುನರುತ್ಥಾನ ದಿನ ಅವರು ತೀರಾ ದುಸ್ಥಿತಿಯಲ್ಲಿರುವರು.

 43. ನಾವು ಗತಕಾಲದ ಕೆಲವು ಜನಾಂಗಗಳನ್ನು ನಾಶಪಡಿಸಿದ ಬಳಿಕ, ಮೂಸಾರಿಗೆ ಗ್ರಂಥವನ್ನು ನೀಡಿದೆವು. ಜನರ ಕಣ್ಣು ತೆರೆಸುವ, ದಾರಿ ತೋರುವ ಮತ್ತು ಅನುಗ್ರಹವಾಗಿರುವ ಗ್ರಂಥ – ಅವರು (ಜನರು) ಉಪದೇಶ ಸ್ವೀಕರಿಸಲೆಂದು.

44. (ದೂತರೇ,) ನಾವು ಮೂಸಾರಿಗೆ ಆದೇಶ ನೀಡುತ್ತಿದ್ದಾಗ ನೀವು (ತೂರ್ ಬೆಟ್ಟದ) ಪಶ್ಚಿಮದಲ್ಲಿ ಇರಲಿಲ್ಲ ಮತ್ತು ನೀವು ಅದಕ್ಕೆ ಸಾಕ್ಷಿಯಾಗಿರಲಿಲ್ಲ.

45. ನಿಜವಾಗಿ ನಾವು ಹಲವು ಸಮುದಾಯಗಳನ್ನು ಸೃಷ್ಟಿಸಿದೆವು. ಕೊನೆಗೆ ಅವರ ಕಾಲಾವಧಿಯು ಮೀರಿಹೋಯಿತು. ಮದ್‌ಯನ್‌ನವರಿಗೆ ನಮ್ಮ ವಚನಗಳನ್ನು ಕೇಳಿಸಲು ನೀವೇನೂ ಅಲ್ಲಿಯ ನಿವಾಸಿಯಾಗಿರಲಿಲ್ಲ. ನಿಜವಾಗಿ ನಾವೇ (ಆ ಕುರಿತು ನಿಮಗೆ) ಸಂದೇಶವನ್ನು ಕಳಿಸಿದ್ದೆವು.

46. ನಾವು (ಮೂಸಾರನ್ನು) ಕೂಗಿ ಕರೆದಾಗ ನೀವು ತೂರ್‌ನ ಪಕ್ಕದಲ್ಲೇನೂ ಇರಲಿಲ್ಲ. ನಿಜವಾಗಿ (ಇದು) ನಿಮ್ಮ ಒಡೆಯನ ಅನುಗ್ರಹವಾಗಿದೆ. ನಿಮಗಿಂತ ಮುನ್ನ ಎಚ್ಚರಿಸುವವರು ಬಂದಿಲ್ಲದ ಜನಾಂಗದವರು ಉಪದೇಶ ಸ್ವೀಕರಿಸಬಹುದೆಂದು, ಅವರನ್ನು ಎಚ್ಚರಿಸಲಿಕ್ಕಾಗಿ (ನಿಮ್ಮನ್ನು ನೇಮಿಸಲಾಯಿತು).

47. (ನಾವು ದೂತರನ್ನು ಕಳಿಸದೆ ಇದ್ದಿದ್ದರೆ) ಅವರ ಸ್ವಂತ ಕೈಗಳ ದುಡಿಮೆಯ (ಪಾಪಗಳ) ಫಲವಾಗಿ ಅವರ ಮೇಲೆ ವಿಪತ್ತೇನಾದರೂ ಬಂದಾಗ, ಅವರು; ‘‘ನಮ್ಮಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು ನಿನ್ನ ವಚನಗಳನ್ನು ಅನುಸರಿಸುತ್ತಿದ್ದೆವು ಮತ್ತು ವಿಶ್ವಾಸಿಗಳಾಗಿ ಬಿಡುತ್ತಿದ್ದೆವು ’’ ಎನ್ನುತ್ತಿದ್ದರು.

48. ನಮ್ಮ ಕಡೆಯಿಂದ ಸತ್ಯವು ತಮ್ಮ ಬಳಿಗೆ ಬಂದಾಗ, ಅವರು, ‘‘ಮೂಸಾರಿಗೆ ನೀಡಲಾದುದನ್ನು ನಮಗೇಕೆ ನೀಡಲಾಗಿಲ್ಲ?’’ ಎಂದರು. ಈ ಹಿಂದೆ ಅವರು, ಮೂಸಾರಿಗೆ ನೀಡಲಾದುದನ್ನು ಧಿಕ್ಕರಿಸಿರಲಿಲ್ಲವೇ? ಆಗ ಅವರು, ಇವೆರಡೂ ಪರಸ್ಪರ ಪೂರಕವಾಗಿರುವ ಮಾಟಗಾರಿಕೆಗಳು ಎಂದಿದ್ದರು ಮತ್ತು ನಾವು ಎಲ್ಲವನ್ನೂ ಧಿಕ್ಕರಿಸುತ್ತೇವೆ ಎಂದಿದ್ದರು.

49. ಹೇಳಿರಿ; ನೀವು ಸತ್ಯವಂತರಾಗಿದ್ದರೆ, ಇವೆರಡಕ್ಕಿಂತ (ಕುರ್‌ಆನ್ ಮತ್ತು ತೌರಾತ್‌ಗಿಂತ) ಹೆಚ್ಚು ಮಾರ್ಗದರ್ಶಿಯಾದ ಒಂದು ಗ್ರಂಥವನ್ನು ಅಲ್ಲಾಹನ ಕಡೆಯಿಂದ ತಂದು ಕೊಡಿರಿ. ನಾನೂ ಅದನ್ನೇ ಅನುಸರಿಸುವೆನು.

50. ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ.

 51. ಅವರು ಉಪದೇಶ ಸ್ವೀಕರಿಸಬೇಕೆಂದು ನಾವು ಸತತವಾಗಿ (ನಮ್ಮ) ಸಂದೇಶವನ್ನು ಅವರಿಗೆ ಕಳಿಸಿದೆವು.

52. ನಾವು ಇದಕ್ಕಿಂತ (ಕುರ್‌ಆನ್‌ಗಿಂತ) ಮುಂಚೆ ಯಾರಿಗೆ ಗ್ರಂಥ ನೀಡಿದ್ದೆವೋ ಅವರು ಇದರಲ್ಲಿ ನಂಬಿಕೆ ಇಡುತ್ತಾರೆ.

53. ಅವರ ಮುಂದೆ ಇದನ್ನು ಓದಲಾದಾಗ ಅವರು, ‘’ನಾವು ಇದನ್ನು ನಂಬಿದೆವು. ಖಂಡಿತವಾಗಿಯೂ ಇದು ನಮ್ಮೊಡೆಯನ ಕಡೆಯಿಂದ ಬಂದಿರುವ ಸತ್ಯವಾಗಿದೆ. ನಾವಂತು ಈ ಹಿಂದೆಯೇ ಶರಣಾಗಿದ್ದೆವು’’ ಎನ್ನುತ್ತಾರೆ.

54. ಅವರೇ, ದುಪ್ಪಟ್ಟು ಪ್ರತಿಫಲ ಪಡೆಯುವವರು. ಏಕೆಂದರೆ, ಅವರು ಸಹನಶೀಲರಾಗಿದ್ದಾರೆ, ಕೆಡುಕನ್ನು ಒಳಿತಿನಿಂದ ನಿವಾರಿಸುತ್ತಾರೆ ಮತ್ತು ಅವರಿಗೆ ನಾವು ಏನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡುತ್ತಾರೆ.

55. ವ್ಯರ್ಥವಾದ ಏನನ್ನಾದರೂ ಕೇಳಿಸಿಕೊಂಡಾಗ ಅವರು ಅದರಿಂದ ದೂರ ಉಳಿಯುತ್ತಾರೆ ಮತ್ತು ‘‘ನಮ್ಮ ಕರ್ಮ ನಮಗೆ, ನಿಮ್ಮ ಕರ್ಮ ನಿಮಗೆ. ನಿಮಗಿದೋ ‘ಸಲಾಮ್’ (ಶಾಂತಿ). ನಾವು ಅಜ್ಞಾನಿಗಳೊಂದಿಗೆ ಜಗಳಕ್ಕಿಳಿಯುವುದಿಲ್ಲ’’ ಎನ್ನುತ್ತಾರೆ.

 56.(ದೂತರೇ,) ನಿಮ್ಮ ಪ್ರೀತಿ ಪಾತ್ರರನ್ನೆಲ್ಲಾ ಸರಿದಾರಿಗೆ ತರಲು ನಿಮ್ಮಿಂದ ಖಂಡಿತ ಸಾಧ್ಯವಿಲ್ಲ. ನಿಜವಾಗಿ, ಅಲ್ಲಾಹನೇ ತಾನಿಚ್ಛಿಸಿದವರನ್ನು ಸರಿದಾರಿಗೆ ತರುತ್ತಾನೆ. ಸರಿದಾರಿಗೆ ಬರುವವರು ಯಾರು ಎಂಬುದನ್ನು ಅವನೇ ಹೆಚ್ಚು ಬಲ್ಲವನು.

57. ‘‘ನಾವು ನಿಮ್ಮ ಜೊತೆಗೆ ಸೇರಿ ಸರಿದಾರಿಯನ್ನು ಅನುಸರಿಸಿದರೆ, ನಮ್ಮನ್ನು ನಮ್ಮ ನಾಡಿನಿಂದ ಹೊರ ಹಾಕಲಾದೀತು’’ಎಂದು ಅವರು ಹೇಳುತ್ತಾರೆ. ನಾವೇನು ಅವರನ್ನು, ಪವಿತ್ರವಾದ ಸುರಕ್ಷಿತ ಸ್ಥಳದಲ್ಲಿ ನೆಲೆಸಲಿಲ್ಲವೇ? ಅದು ನಮ್ಮ ಕಡೆಯಿಂದ, ಎಲ್ಲ ಫಲಗಳೂ ಆಹಾರ ರೂಪದಲ್ಲಿ ಬಂದು ತಲುಪುವ ಸ್ಥಳ. ಆದರೆ ಅವರಲ್ಲಿ ಹೆಚ್ಚಿನವರಿಗೆ ಏನೂ ತಿಳಿದಿಲ್ಲ.

58. ತಮ್ಮ ಸಂಪನ್ನತೆಯ ಬಗ್ಗೆ ಅಹಂಕಾರ ಪಡುತ್ತಿದ್ದ ಅದೆಷ್ಟು ನಾಡುಗಳನ್ನು ನಾವು ನಾಶಪಡಿಸಿದ್ದೇವೆ! ಅದೋ ಅವರು ನೆಲೆಸಿದ್ದ ಭವನಗಳು! ಅವರ ಬಳಿಕ (ಅವುಗಳಲ್ಲಿ) ಕೇವಲ ಕೆಲವರ ಹೊರತು ಬೇರೆ ಯಾರೂ ನೆಲೆಸಲಿಲ್ಲ. ನಿಜವಾಗಿ ನಾವೇ (ಅವೆಲ್ಲವುಗಳ) ಉತ್ತರಾಧಿಕಾರಿಗಳಾದೆವು.

 

59. ನಿಮ್ಮ ಒಡೆಯನು ಯಾವುದೇ ನಾಡಿನ ಕೇಂದ್ರ ಸ್ಥಾನಕ್ಕೆ, ಅವರಿಗೆ ನಮ್ಮ ವಚನಗಳನ್ನು ಓದಿ ಕೇಳಿಸುವ ಒಬ್ಬ ದೂತನನ್ನು ಕಳಿಸುವ ತನಕ ಆ ನಾಡನ್ನು ನಾಶಪಡಿಸುವುದಿಲ್ಲ. ಮತ್ತು ನಾವು, ಯಾವುದೇ ನಾಡಿನ ಜನರು ಅಕ್ರಮಿಗಳಾಗದೆ ಆ ನಾಡನ್ನು ನಾಶಪಡಿಸುವುದಿಲ್ಲ.

60. ನಿಮಗೆ ನೀಡಲಾಗಿರುವ ಪ್ರತಿಯೊಂದು ವಸ್ತುವೂ ಕೇವಲ ಇಹಲೋಕದ ಬದುಕಿನ ಸೊತ್ತಾಗಿದೆ ಮತ್ತು ಇಲ್ಲಿಗಷ್ಟೇ ಭೂಷಣವಾಗಿದೆ. ಅಲ್ಲಾಹನ ಬಳಿ ಏನಿದೆಯೋ ಅದು ಉತ್ತಮವಾಗಿದೆ ಹಾಗೂ ಅದು ಹೆಚ್ಚು ಕಾಲ ಉಳಿಯುತ್ತದೆ. ನೀವೇನು ಅರ್ಥಮಾಡಿಕೊಳ್ಳುವುದಿಲ್ಲವೇ?

 61. ನಾವು ಹಿತದ ವಾಗ್ದಾನ ಮಾಡಿದ್ದು, ಅದನ್ನು ಪಡೆಯಲಿರುವ ವ್ಯಕ್ತಿಯು, ನಾವು ಇಹಲೋಕದ ಬದುಕಿನಲ್ಲಿ ಸಂಪನ್ನಗೊಳಿಸಿದ್ದು ಆ ಬಳಿಕ ಪುನರುತ್ಥಾನದಿನ (ಬಂಧಿತನಾಗಿ) ಹಾಜರುಗೊಳಿಸಲಿರುವ ವ್ಯಕ್ತಿಗೆ ಸಮಾನನಾಗಬಲ್ಲನೇ?

62. ಅಂದು ಅವನು (ಅಲ್ಲಾಹನು) ಅವರನ್ನು ಕರೆದು, ‘‘ನೀವು ಅವಲಂಬಿಸಿಕೊಂಡಿದ್ದ ಆ ನಿಮ್ಮ ಪಾಲುದಾರರು ಎಲ್ಲಿದ್ದಾರೆ?’’ ಎಂದು ಕೇಳುವನು.

63. ಅದಾಗಲೇ ತೀರ್ಪು ವಿಧಿಸಲ್ಪಟ್ಟವರು ಹೇಳುವರು; ನಮ್ಮೊಡೆಯಾ, ಅವರೇ ನಮ್ಮನ್ನು ದಾರಿಗೆಡಿಸಿದವರು. ನಾವು ಸ್ವತಃ ದಾರಿಗೆಟ್ಟಂತೆ ಅವರನ್ನು ದಾರಿಗೆಡಿಸಿದೆವು. ಅವರು ನಮ್ಮನ್ನು ಪೂಜಿಸುತ್ತಿರಲಿಲ್ಲ ಎಂದು ನಿನ್ನ ಮುಂದೆ ನಾವು ದೋಷಮುಕ್ತಿ ಪ್ರಕಟಿಸುತ್ತಿದ್ದೇವೆ.

 64. ನಿಮ್ಮ ಪಾಲುದಾರರನ್ನು (ಉಪದೇವತೆಗಳನ್ನು) ಕರೆಯಿರಿ ಎಂದು ಅವರೊಡನೆ ಹೇಳಲಾಗುವುದು. ಅವರು ಅವುಗಳನ್ನು ಕರೆಯುವರು. ಆದರೆ ಅವುಗಳು ಅವರಿಗೆ ಯಾವುದೇ ಉತ್ತರ ನೀಡಲಾರವು. ಕೊನೆಗೆ ಅವರು ಶಿಕ್ಷೆಯನ್ನು ಕಾಣುವರು. ಅವರು ಸರಿದಾರಿಯನ್ನು ಅನುಸರಿಸಿದ್ದರೆ ಎಷ್ಟು ಚೆನ್ನಾಗಿತ್ತು!

65. ಅವನು ಅವರನ್ನು ಕರೆಯುವ ದಿನ, ‘‘ದೂತರುಗಳಿಗೆ ನೀವು ಅದೇನು ಉತ್ತರ ನೀಡಿದಿರಿ?’’ ಎಂದು ಕೇಳುವನು.

66. ಆದರೆ ಆ ದಿನ ಅವರಿಗೆ ಏನೇನೂ ತೋಚದು ಮತ್ತು ಪರಸ್ಪರ ವಿಚಾರಿಸಲಿಕ್ಕೂ ಅವರಿಗೆ ಸಾಧ್ಯವಾಗದು.

67. (ಇಹದಲ್ಲಿ) ಪಶ್ಚಾತ್ತಾಪ ಪಟ್ಟು, ಸತ್ಯವನ್ನು ನಂಬಿ, ಸತ್ಕರ್ಮಗಳನ್ನು ಮಾಡಿದವನು ಮಾತ್ರ ಅಂದು ವಿಜಯಿಗಳ ಸಾಲಿಗೆ ಸೇರಬಹುದು.

 68. ನಿಮ್ಮ ಒಡೆಯನು ತಾನಿಚ್ಛಿಸಿದವರನ್ನು ಸೃಷ್ಟಿಸುತ್ತಾನೆ ಹಾಗೂ ಆಯ್ದುಕೊಳ್ಳುತ್ತಾನೆ. ಅವರಿಗೆ ಆಯ್ಕೆಯ ಅಧಿಕಾರವೇನಿಲ್ಲ. ಅಲ್ಲಾಹನು ಪಾವನನು ಮತ್ತು ಅವರು ಪಾಲುಗೊಳಿಸುವ ಎಲ್ಲವುಗಳಿಗಿಂತ ಉನ್ನತನು.

69. ಅವರ ಮನಸ್ಸುಗಳಲ್ಲಿ ಅಡಗಿರುವ ಮತ್ತು ಅವರು ಬಹಿರಂಗಪಡಿಸುತ್ತಿರುವ ಎಲ್ಲವನ್ನೂ ನಿಮ್ಮ ಒಡೆಯನು ಬಲ್ಲನು.

70. ಮತ್ತು ಅವನೇ ಅಲ್ಲಾಹ್. ಅವನ ಹೊರತು ಬೇರೆ ದೇವರಿಲ್ಲ. ಮೊದಲೂ (ಇಹ ಲೋಕದಲ್ಲೂ) ಅನಂತರವೂ (ಪರಲೋಕದಲ್ಲೂ) ಹೊಗಳಿಕೆಗಳೆಲ್ಲಾ ಅವನಿಗೇ ಮೀಸಲು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು.

71. ಹೇಳಿರಿ; ನೀವು ಕಂಡಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಮೇಲೆ ಲೋಕಾಂತ್ಯದವರೆಗೆ, ಶಾಶ್ವತವಾಗಿ ರಾತ್ರಿಯನ್ನೇ ಹೇರಿ ಬಿಟ್ಟರೆ, ಅಲ್ಲಾಹನ ಹೊರತು ಬೇರಾವ ದೇವರಿದ್ದಾರೆ, ನಿಮಗೆ ಬೆಳಕನ್ನು ತಂದು ಕೊಡಬಲ್ಲವರು? ನೀವೇನು ಆಲಿಸುವುದಿಲ್ಲವೇ?

72. ಹೇಳಿರಿ; ನೀವು ಕಂಡಿರಾ? ಒಂದು ವೇಳೆ ಅಲ್ಲಾಹನು ನಿಮ್ಮ ಮೇಲೆ ಲೋಕಾಂತ್ಯದವರೆಗೆ ಶಾಶ್ವತವಾಗಿ ಹಗಲನ್ನೇ ಹೇರಿಬಿಟ್ಟರೆ, ಅಲ್ಲಾಹನ ಹೊರತು ಬೇರಾವ ದೇವರಿದ್ದಾರೆ, ನೀವು ವಿಶ್ರಾಂತಿ ಪಡೆಯುವಂತಾಗಲು ನಿಮಗೆ ರಾತ್ರಿಯನ್ನು ತಂದು ಕೊಡಬಲ್ಲವರು? ನೀವೇನು ನೋಡುವುದಿಲ್ಲವೇ?

73. ನಿಜವಾಗಿ, ನೀವು ವಿಶ್ರಾಂತಿ ಪಡೆಯುವಂತಾಗಲು ಹಾಗೂ ಅವನ ಅನುಗ್ರಹವನ್ನು ಅರಸುವಂತಾಗಲು ಮತ್ತು ನೀವು ಕೃತಜ್ಞರಾಗಬೇಕೆಂದು ತನ್ನ ಅನುಗ್ರಹದಿಂದ ನಿಮಗಾಗಿ ರಾತ್ರಿ ಮತ್ತು ಹಗಲನ್ನು ನಿರ್ಮಿಸಿರುವವನು ಅವನೇ.

74. ಅಂದು ಅವನು (ಅಲ್ಲಾಹನು) ಅವರನ್ನು ಕರೆದು, ‘‘ನೀವು ಅವಲಂಬಿಸಿಕೊಂಡಿದ್ದ ಆ ನಿಮ್ಮ ಪಾಲುದಾರರು ಎಲ್ಲಿದ್ದಾರೆ?’’ ಎಂದು ಕೇಳುವನು.

75. ಮತ್ತು ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಮುಂದೆ ತರುವೆವು ಹಾಗೂ ‘‘ನಿಮ್ಮ ಪುರಾವೆಯನ್ನು ಮುಂದಿಡಿರಿ’’ ಎನ್ನುವೆವು. ಆಗ ಅಲ್ಲಾಹನ ಮಾತು ಮಾತ್ರ ಸತ್ಯವೆಂಬುದನ್ನು ಅವರು ಮನಗಾಣುವರು ಮತ್ತು ಅವರು ರಚಿಸಿಕೊಂಡಿದ್ದ ಎಲ್ಲವೂ (ಎಲ್ಲ ಮಿಥ್ಯಗಳೂ) ಅವರಿಂದ ಮರೆಯಾಗಿ ಬಿಡುವವು.

76. ಕಾರೂನನು ಮೂಸಾರ ಜನಾಂಗದವನೇ ಆಗಿದ್ದನು ಮತ್ತು ಅವನು ಅವರ ವಿರುದ್ಧ ವಿದ್ರೋಹಿಯಾದನು. ನಾವು ಅವನಿಗೆ ಅನೇಕ ಖಜಾನೆಗಳನ್ನು ನೀಡಿದ್ದೆವು. ಎಷ್ಟೆಂದರೆ, ಅವುಗಳ ಚಾವಿಗಳು ಒಂದು ಶಕ್ತಿಶಾಲಿ ತಂಡದ ಪಾಲಿಗೂ ಭಾರವೆನಿಸುತ್ತಿದ್ದವು. ಅವನ ಜನಾಂಗವು ಅವನೊಡನೆ ಹೇಳಿತು; ನೀನು ದೊಡ್ಡಸ್ತಿಕೆ ಮೆರೆಯಬೇಡ. ದೊಡ್ಡಸ್ತಿಕೆ ಮೆರೆಯುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ.

77. ಅಲ್ಲಾಹನು ನಿನಗೆ ಏನೆಲ್ಲವನ್ನು ನೀಡಿರುವನೋ ಆ ಮೂಲಕ ನೀನು ಪರಲೋಕದ ನೆಲೆಯನ್ನು ಅರಸು ಮತ್ತು (ಅದೇವೇಳೆ) ನೀನು ಇಹಲೋಕದಲ್ಲಿನ ನಿನ್ನ ಪಾಲನ್ನು ಮರೆಯದಿರು ಮತ್ತು ಅಲ್ಲಾಹನು ನಿನಗೆ ಹಿತವನ್ನು ಮಾಡಿರುವಂತೆ ನೀನು (ಜನರಿಗೆ) ಹಿತವನ್ನು ಮಾಡು. ನೀನು ಭೂಮಿಯಲ್ಲಿ ಅಶಾಂತಿಯನ್ನು ಹರಡದಿರು. ಅಶಾಂತಿ ಹರಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ.

78. ಆಗ ಅವನು ಹೇಳಿದನು; ‘‘ಇದನ್ನೆಲ್ಲಾ ನನ್ನಲ್ಲಿರುವ ಒಂದು (ವಿಶೇಷ) ಜ್ಞಾನದ ಕಾರಣ ನನಗೆ ನೀಡಲಾಗಿದೆ.’’ ಅಲ್ಲಾಹನು ಅವನಿಗಿಂತ ಮುಂಚೆ ಅವನಿಗಿಂತ ಹೆಚ್ಚು ಶಕ್ತರಾಗಿದ್ದ ಮತ್ತು ಹೆಚ್ಚು ಜನಬಲಹೊಂದಿದ್ದ ಗುಂಪುಗಳನ್ನು ನಾಶಪಡಿಸಿದ್ದಾನೆ ಎಂಬುದು ಅವನಿಗೆ ತಿಳಿಯದೇ? (ಹಾಗೆ ನಾಶಪಡಿಸುವಾಗ) ಅಪರಾಧಿಗಳೊಡನೆ, ಅವರ ಪಾಪಗಳ ಕುರಿತು ಪ್ರಶ್ನಿಸಲಾಗುವುದಿಲ್ಲ.’’

79. ಒಮ್ಮೆ ಅವನು (ಕಾರೂನ್) ತನ್ನ ವೈಭವದೊಂದಿಗೆ ತನ್ನ ಜನಾಂಗದವರ ಮುಂದೆ ಹೊರಟನು. ಆಗ, ಕೇವಲ ಈ ಲೋಕದ ಬದುಕನ್ನು ಬಯಸಿದ್ದವರು ‘‘ಕಾರೂನನಿಗೆ ನೀಡಲಾಗಿರುವುದೆಲ್ಲವೂ ನಮ್ಮ ಬಳಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು! ಅವನು ಖಂಡಿತ ಮಹಾ ಭಾಗ್ಯವಂತ!’’ ಎನ್ನತೊಡಗಿದರು.

80. ಆದರೆ ಜ್ಞಾನವಂತರು ಹೇಳಿದರು; ‘‘ನಿಮ್ಮ ಸ್ಥಿತಿಯು ಶೋಚನೀಯವಾಗಿದೆ. ಸತ್ಯವನ್ನು ನಂಬಿದ ಹಾಗೂ ಸತ್ಕರ್ಮ ಮಾಡಿದವನ ಪಾಲಿಗೆ, ಅಲ್ಲಾಹನು ನೀಡುವ ಪ್ರತಿಫಲವೇ (ಇದೆಲ್ಲಕ್ಕಿಂತ) ಶ್ರೇಷ್ಠವಾಗಿದೆ ಮತ್ತು ಅದು ಸಹನಶೀಲರಿಗೆ ಮಾತ್ರ ಸಿಗುತ್ತದೆ.’’

81. ಕೊನೆಗೆ ನಾವು ಆತ (ಕಾರೂನ್)ನನ್ನು ಮತ್ತು ಅವನ ನಿವಾಸವನ್ನು ಭೂಮಿಯಲ್ಲಿ ಅದುಮಿ ಬಿಟ್ಟೆವು. ಆಗ ಅಲ್ಲಾಹನ ಹೊರತು ಬೇರೆ ಯಾವ ಪಡೆಯೂ ಅವನ ನೆರವಿಗೆ ಲಭ್ಯವಿರಲಿಲ್ಲ ಮತ್ತ್ತು ತನಗೆ ತಾನೇ ನೆರವಾಗಲಿಕ್ಕೂ ಅವನಿಗೆ ಸಾಧ್ಯವಾಗಲಿಲ್ಲ.

 82. ನಿನ್ನೆಯವರೆಗೂ ಅವನ ಸ್ಥಾನಮಾನಕ್ಕಾಗಿ ಆಶೆಪಡುತ್ತಿದ್ದವರು ಬೆಳಗಾದಾಗ ಹೇಳ ತೊಡಗಿದರು; ಅಯ್ಯೋ ಅಲ್ಲಾಹನು ಸಂಪತ್ತನ್ನು ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಮತ್ತು ಸೀಮಿತಗೊಳಿಸಿಬಿಡುತ್ತಾನೆ. ನಮ್ಮ ಮೇಲೆ ಅಲ್ಲಾಹನು ಕೃಪೆ ತೋರದೆ ಇದ್ದಿದ್ದರೆ, ಅವನು ನಮ್ಮನ್ನೂ (ಭೂಮಿಯೊಳಗೆ) ಅದುಮಿ ಬಿಡುತ್ತಿದ್ದನು. ಎಷ್ಟೊಂದು ಸತ್ಯ! ಕೃತಘ್ನರು ಎಂದೂ ವಿಜಯಿಗಳಾಗುವುದಿಲ್ಲ.

 

83. ಇದು ಪರಲೋಕದ ನೆಲೆ. ಭೂಮಿಯಲ್ಲಿ ದೊಡ್ಡಸ್ತಿಕೆ ಮೆರೆಯಲು ಮತ್ತು ಅಶಾಂತಿ ಹಬ್ಬಲು ಬಯಸದವರಿಗಾಗಿ ನಾವಿದನ್ನು ಮೀಸಲಾಗಿಟ್ಟಿರುವೆವು. ಅಂತಿಮ ಸಾಫಲ್ಯವು ಧರ್ಮನಿಷ್ಠರಿಗೇ ಸೇರಿದೆ.

84. ಸತ್ಕಾರ್ಯಗಳನ್ನು ತಂದವನಿಗೆ ಅದಕ್ಕಿಂತ ಶ್ರೇಷ್ಠವಾದುದು ಸಿಗಲಿದೆ. ಇನ್ನು, ಪಾಪಕೃತ್ಯಗಳನ್ನು ತಂದವನು – ಇಂತಹ ಪಾಪಕೃತ್ಯಗಳನ್ನು ಮಾಡುವವರಿಗೆ ಅವರು ಮಾಡುತ್ತಿದ್ದ ಕೃತ್ಯಗಳಿಗನುಸಾರವಾದ ಪ್ರತಿಫಲವೇ ಸಿಗಲಿದೆ.

85. (ದೂತರೇ,) ಕುರ್‌ಆನನ್ನು ನಿಮಗೆ ಕಡ್ಡಾಯಗೊಳಿಸಿದವನು ಖಂಡಿತವಾಗಿಯೂ ನಿಮ್ಮನ್ನು ಸೂಕ್ತ ನೆಲೆಗೆ ಮರಳಿಸುವನು. ಹೇಳಿರಿ; ಮಾರ್ಗದರ್ಶನವನ್ನು ತಂದಿರುವವನು ಯಾರು ಮತ್ತು ಯಾರು ಸ್ಪಷ್ಟವಾಗಿ ದಾರಿತಪ್ಪಿರುವವನೆಂಬುದನ್ನು ನನ್ನ ಒಡೆಯನು ಚೆನ್ನಾಗಿ ಬಲ್ಲನು.

86. (ದೂತರೇ,) ನಿಮ್ಮೆಡೆಗೆ ಈ ಗ್ರಂಥವನ್ನು ಇಳಿಸಿಕೊಡಲಾಗುವುದೆಂದು ನೀವೆಂದೂ ನಿರೀಕ್ಷಿಸಿರಲಿಲ್ಲ. ಅದು ಕೇವಲ ನಿಮ್ಮ ಒಡೆಯನ ಅನುಗ್ರಹವಾಗಿದೆ. ನೀವಿನ್ನು ಯಾವ ಕಾರಣಕ್ಕೂ ಧಿಕ್ಕಾರಿಗಳ ಸಹಾಯಕರಾಗಬೇಡಿ.

87. ಅಲ್ಲಾಹನ ವಚನಗಳನ್ನು ನಿಮಗೆ ಇಳಿಸಿಕೊಡಲಾದ ಬಳಿಕ, ಅವರು ನಿಮ್ಮನ್ನು ಅವುಗಳಿಂದ ತಡೆದಿಡಬಾರದು. ನೀವು (ಜನರನ್ನು) ನಿಮ್ಮ ಒಡೆಯನ ಕಡೆಗೆ ಆಮಂತ್ರಿಸಿರಿ ಮತ್ತು ನೀವೆಂದೂ ಬಹುದೇವಾರಾಧಕರಾಗಬೇಡಿ.

88. ಅಲ್ಲಾಹನ ಜೊತೆ ಬೇರಾವ ದೇವರನ್ನೂ ಪ್ರಾರ್ಥಿಸಬೇಡಿ. ಅವನ ಹೊರತು ಬೇರೆ ದೇವರಿಲ್ಲ. ಅವನೊಬ್ಬನ ಹೊರತು ಎಲ್ಲವೂ ನಾಶವಾಗಲಿದೆ. ಅಧಿಕಾರವೆಲ್ಲವೂ ಅವನಿಗೇ ಸೇರಿದೆ ಮತ್ತು ನೀವು ಅವನ ಬಳಿಗೇ ಮರಳುವಿರಿ.