3. ಇದು ಮಾರ್ಗದರ್ಶಿಯಾಗಿದೆ ಹಾಗೂ ಸಜ್ಜನರ ಪಾಲಿಗೆ ಅನುಗ್ರಹವಾಗಿದೆ.
4. ಅವರು ನಮಾಝನ್ನು ಪಾಲಿಸುವವರು, ಝಕಾತನ್ನು ಪಾವತಿಸುವವರು ಮತ್ತು ಪರಲೋಕದ ಕುರಿತು ಖಚಿತ ನಂಬಿಕೆ ಉಳ್ಳವರಾಗಿರುತ್ತಾರೆ.
5. ಅವರೇ ತಮ್ಮ ಒಡೆಯನು ತೋರಿದ ಸರಿದಾರಿಯಲ್ಲಿರುವವರು ಮತ್ತು ಅವರೇ ವಿಜಯಿಗಳು.
6. ಜನರಲ್ಲಿ ಕೆಲವರು ಜ್ಞಾನವಿಲ್ಲದೆ, ಇತರರನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಲಿಕ್ಕಾಗಿ ವ್ಯರ್ಥ ವಸ್ತುಗಳನ್ನು ಖರೀದಿಸುತ್ತಾರೆ. ಅವರು ಅದನ್ನು ಕೇವಲ ತಮಾಷೆ ಎಂದು ಭಾವಿಸುತ್ತಾರೆ. ಅವರಿಗೆ ಅಪಮಾನಕಾರಿ ಶಿಕ್ಷೆ ಕಾದಿದೆ.
7. ಅಂತಹವನಿಗೆ ನೀವು ನಮ್ಮ ವಚನಗಳನ್ನು ಓದಿ ಕೇಳಿಸಿದಾಗ ಅವನು, ತಾನು ಏನನ್ನೂ ಕೇಳಲೇ ಇಲ್ಲವೆಂಬಂತೆ ಅಥವಾ ತನ್ನ ಕಿವಿಗಳು ಕಿವುಡಾಗಿವೆ ಎಂಬಂತೆ ಅಹಂಕಾರದೊಂದಿಗೆ ಮುಖ ತಿರುಗಿಸಿಕೊಳ್ಳುತ್ತಾನೆ. ಅವನಿಗೆ ಬಹಳ ಹಿಂಸಾತ್ಮಕ ಶಿಕ್ಷೆಯ ಸುವಾರ್ತೆ ಕೊಟ್ಟು ಬಿಡಿರಿ.
8. ವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಖಂಡಿತವಾಗಿಯೂ ಕೊಡುಗೆಗಳು ತುಂಬಿರುವ ತೋಟಗಳಿವೆ.
9. ಅವರು ಸದಾಕಾಲ ಅವುಗಳಲ್ಲಿರುವರು. ಅಲ್ಲಾಹನು ಕೊಟ್ಟ ಮಾತು ಸತ್ಯವಾಗಿದೆ. ಅವನು ಬಹಳ ಪ್ರಚಂಡನು ಹಾಗೂ ಯುಕ್ತಿವಂತನು.
10. ಅವನು ನಿಮಗೆ ಕಾಣುವಂತಹ ಸ್ತಂಭಗಳಿಲ್ಲದೆಯೇ ಆಕಾಶವನ್ನು ಸೃಷ್ಟಿಸಿರುವನು – ಮತ್ತು ಭೂಮಿಯು ನಿಮ್ಮೊಂದಿಗೆ ಉರುಳಿ ಬಿಡದಂತೆ ಅವನು ಅದರಲ್ಲಿ ಬೆಟ್ಟಗಳನ್ನು ನೆಟ್ಟನು ಮತ್ತು ಅದರಲ್ಲಿ ಎಲ್ಲ ಬಗೆಯ ಜೀವಿಗಳನ್ನು ಹರಡಿದನು. ಮತ್ತು ಅವನು ಆಕಾಶದಿಂದ ನೀರನ್ನಿಳಿಸಿ, ಅದರಲ್ಲಿ (ಭೂಮಿಯಲ್ಲಿ) ಎಲ್ಲ ಬಗೆಯ (ಸಸ್ಯ) ವರ್ಗಗಳನ್ನು ಬೆಳೆಸಿದನು.
11. ಇವು ಅಲ್ಲಾಹನ ಸೃಷ್ಟಿಗಳು. ಅವನ ಹೊರತು ಇತರರು ಏನನ್ನು ಸೃಷ್ಟಿಸಿದ್ದಾರೆಂಬುದನ್ನು ನನಗೆ ತೋರಿಸಿರಿ. ನಿಜವಾಗಿ ಅಕ್ರಮಿಗಳು ಸ್ಪಷ್ಟವಾಗಿ ದಾರಿಗೆಟ್ಟಿರುವರು.
12. ನಾವು ಲುಕ್ಮಾನರಿಗೆ ಜಾಣ್ಮೆಯನ್ನು ನೀಡಿದ್ದೆವು – ಅವರು ಕೃತಜ್ಞರಾಗಬೇಕೆಂದು. ನಿಜವಾಗಿ ಕೃತಜ್ಞತೆ ಸಲ್ಲಿಸುವವನು ಸ್ವತಃ ತನ್ನ ಹಿತಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾನೆ. ಇನ್ನು ಕೃತಘ್ನತೆ ತೋರುವವನು (ತಿಳಿದಿರಲಿ); ಅಲ್ಲಾಹನಂತು ಸರ್ವ ಅಪೇಕ್ಷೆಗಳಿಂದ ಮುಕ್ತನೂ, ಹೊಗಳಿಕೆಗೆ ಅರ್ಹನೂ ಆಗಿದ್ದಾನೆ.
13. ಲುಕ್ಮಾನರು ತಮ್ಮ ಪುತ್ರನಿಗೆ ಬೋಧಿಸುತ್ತಾ ಹೇಳಿದರು; ನನ್ನ ಪುತ್ರಾ! ಅಲ್ಲಾಹನ ಜೊತೆ ಯಾರನ್ನೂ ಪಾಲುಗೊಳಿಸಬೇಡ. ಖಂಡಿತವಾಗಿಯೂ (ಅಲ್ಲಾಹನ ಜೊತೆ) ಪಾಲುದಾರಿಕೆಯು ಮಹಾ ಅಕ್ರಮವಾಗಿದೆ.
14. ಮತ್ತು ನಾವು ಮಾನವರಿಗೆ ಅವನ ಹೆತ್ತವರ ಕುರಿತು ಉಪದೇಶಿಸಿರುವೆವು. ಅವನ ತಾಯಿಯು ಬೆನ್ನು ಬೆನ್ನಿಗೆ ಸಂಕಷ್ಟಗಳನ್ನು ಸಹಿಸಿ ಅವನನ್ನು ತನ್ನ ಹೊಟ್ಟೆಯಲ್ಲಿ ಹೊತ್ತಿದ್ದಳು. ಅವನಿಗೆ ಎದೆಹಾಲು ಬಿಡಿಸಲು ಎರಡು ವರ್ಷಗಳು ತಗುಲಿದವು – ಆದ್ದರಿಂದ ನನಗೂ ನಿನ್ನ ತಾಯಿ – ತಂದೆಗೂ ಕೃತಜ್ಞನಾಗಿರು. ಕೊನೆಗೆ ನೀನು ನನ್ನೆಡೆಗೇ ಮರಳಿ ಬರಬೇಕಾಗಿದೆ.
15. ಒಂದು ವೇಳೆ, ನಿನಗೆ ತಿಳಿದಿಲ್ಲದವರನ್ನು ನನ್ನ ಜೊತೆ ಪಾಲುಗೊಳಿಸಲು ಅವರು ನಿನ್ನನ್ನು ಒತ್ತಾಯಿಸಿದರೆ ಅವರಿಬ್ಬರನ್ನೂ ಅನುಸರಿಸಬೇಡ. ಆದರೂ ಈ ಲೋಕದಲ್ಲಿ ಅವರ ಜೊತೆ ಅತ್ಯುತ್ತಮವಾಗಿ ವರ್ತಿಸು. ಮತ್ತು ನನ್ನೆಡೆಗೆ ಒಲಿಯುತ್ತಲಿರುವವನ ದಾರಿಯನ್ನು ಅನುಸರಿಸು. ಕೊನೆಗೆ ನೀವೆಲ್ಲರೂ ನನ್ನೆಡೆಗೇ ಮರಳಿ ಬರುವಿರಿ ಮತ್ತು ಆಗ, ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ನಾನು ನಿಮಗೆ ತಿಳಿಸುವೆನು.
16. ಓ ನನ್ನ ಪುತ್ರ! ಕೇವಲ ಒಂದು ಸಾಸಿವೆ ಕಾಳಿನಷ್ಟು ಭಾರದ ಒಂದು ವಸ್ತು ಕೂಡಾ, ಅದು ಬಂಡೆಯೊಳಗಿರಲಿ ಅಥವಾ ಆಕಾಶಗಳಲ್ಲಿರಲಿ ಅಥವಾ ಭೂಮಿಯಲ್ಲಿರಲಿ, ಅಲ್ಲಾಹನು ಅದನ್ನು ಹೊರತರುವನು. ಖಂಡಿತವಾಗಿಯೂ ಅಲ್ಲಾಹನು ತುಂಬಾ ಸೂಕ್ಷ್ಮ ಜ್ಞಾನಿಯೂ ಸದಾ ಜಾಗೃತನೂ ಆಗಿದ್ದಾನೆ.
17. ಓ ನನ್ನ ಪುತ್ರ! ನಮಾಝನ್ನು ಪಾಲಿಸು. ಒಳಿತನ್ನು ಆದೇಶಿಸು, ಕೆಡುಕಿನಿಂದ ತಡೆ ಮತ್ತು ನಿನಗೆ ಸಂಕಷ್ಟ ಬಂದಾಗ ಸಹನಶೀಲನಾಗಿರು. ಖಂಡಿತವಾಗಿಯೂ ಇವು ಭಾರೀ ಸಾಹಸದ ಕೆಲಸಗಳಾಗಿವೆ.
18. ಇನ್ನು ನೀನು, ಜನರ ಮುಂದೆ ಮುಖ ಊದಿಸಿಕೊಂಡಿರಬೇಡ. ಮತ್ತು ಭೂಮಿಯಲ್ಲಿ ದರ್ಪದ ನಡಿಗೆ ನಡೆಯಬೇಡ. ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ.
19. ನಿನ್ನ ನಡಿಗೆಯಲ್ಲಿ ವಿನಯವನ್ನು ಪಾಲಿಸು ಮತ್ತು ನಿನ್ನ ಧ್ವನಿಯನ್ನು ತಗ್ಗಿಸಿಡು. ಖಂಡಿತವಾಗಿಯೂ ಧ್ವನಿಗಳಲ್ಲಿ ಕತ್ತೆಯ ಧ್ವನಿಯು ಅತ್ಯಂತ ಕೆಟ್ಟದಾಗಿರುತ್ತದೆ.
20. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ಮತ್ತು ಅವನು ವ್ಯಕ್ತ ಹಾಗೂ ಅವ್ಯಕ್ತವಾದ ತನ್ನ ಅನುಗ್ರಹಗಳನ್ನು ನಿಮಗೆ ಧಾರಾಳವಾಗಿ ನೀಡಿರುವುದನ್ನು ನೀವು ನೋಡುತ್ತಿಲ್ಲವೇ? ಆದರೂ ಜನರಲ್ಲಿ ಕೆಲವರು ಜ್ಞಾನವಾಗಲಿ, ಮಾರ್ಗದರ್ಶನವಾಗಲಿ, ಉಜ್ವಲ ಗ್ರಂಥವಾಗಲಿ ಯಾವುದೂ ಇಲ್ಲದೆಯೇ ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ.
21. ಅಲ್ಲಾಹನು ಇಳಿಸಿಕೊಟ್ಟಿರುವುದನ್ನು ನೀವು ಅನುಸರಿಸಿರಿ ಎಂದು ಅವರೊಡನೆ ಹೇಳಿದಾಗ ಅವರು, ನಾವು ನಮ್ಮ ತಂದೆ-ತಾತಂದಿರನ್ನು ಯಾವ ಹಾದಿಯಲ್ಲಿ ಕಂಡಿರುವೆವೋ ಅದನ್ನು ಮಾತ್ರ ಅನುಸರಿಸುವೆವು ಎನ್ನುತ್ತಾರೆ. ಶೈತಾನನು ಅವರನ್ನು ನರಕದ ಶಿಕ್ಷೆಯೆಡೆಗೆ ಕರೆಯುತ್ತಿದ್ದರೂ (ಅವರು ಆ ಹಾದಿಯನ್ನೇ ಅನುಸರಿಸುವರೇ?)
22. ತನ್ನನ್ನು ಅಲ್ಲಾಹನ ಮುಂದೆ ಶರಣಾಗಿಸಿದವನು ಮತ್ತು ಸತ್ಕರ್ಮಿಯೂ ಆಗಿರುವವನು ಖಂಡಿತವಾಗಿಯೂ ಬಹಳ ಬಲಿಷ್ಠವಾದ ಉರುಳನ್ನು ಹಿಡಿದುಕೊಂಡನು. ಅಂತಿಮವಾಗಿ ಎಲ್ಲ ವ್ಯವಹಾರಗಳೂ ಅಲ್ಲಾಹನ ಬಳಿಗೇ ಮರಳಲಿವೆ.
23. (ದೂತರೇ, ಸತ್ಯವನ್ನು) ಧಿಕ್ಕರಿಸುವವನ ಧಿಕ್ಕಾರವು ನಿಮ್ಮನ್ನು ದುಃಖಿತರಾಗಿಸಬಾರದು. ಅವರು ನಮ್ಮೆಡೆಗೆ ಮರಳಿ ಬರಲಿದ್ದಾರೆ. ಆಗ, ಅವರು ಏನೆಲ್ಲ ಮಾಡುತ್ತಿದ್ದರೆಂಬುದನ್ನು ನಾವು ಅವರಿಗೆ ತಿಳಿಸುವೆವು. ಅಲ್ಲಾಹನು ಮನಸುಗಳೊಳಗಿನ ವಿಚಾರಗಳನ್ನೂ ಖಂಡಿತ ಬಲ್ಲವನಾಗಿದ್ದಾನೆ.
24. (ಇಹಲೋಕದಲ್ಲಿ) ನಾವು ಅವರಿಗೆ ತೀರಾ ಅಲ್ಪ (ಸುಖ)ವನ್ನು ನೀಡುವೆವು ಮತ್ತು ಆ ಬಳಿಕ ನಾವು ಅವರನ್ನು ಭಾರೀ ಕಠೋರವಾದ ಶಿಕ್ಷೆಯೆಡೆಗೆ ಎಳೆದೊಯ್ಯುವೆವು.
25. ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದ್ದು ಯಾರೆಂದು ನೀವು ಅವರೊಡನೆ ಕೇಳಿದರೆ, ಅಲ್ಲಾಹನು ಎಂದೇ ಅವರು ಉತ್ತರಿಸುವರು. ಅಲ್ಲಾಹನಿಗೆ ಸ್ತುತಿ ಎಂದು ನೀವು ಹೇಳಿರಿ. ನಿಜವಾಗಿ ಅವರಲ್ಲಿ ಹೆಚ್ಚಿನವರು ಬಲ್ಲವರಲ್ಲ.
26. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಖಂಡಿತವಾಗಿಯೂ ಅಲ್ಲಾಹನು ಸಂಪೂರ್ಣ ನಿರಪೇಕ್ಷನೂ ಪ್ರಶಂಸಿತನೂ ಆಗಿದ್ದಾನೆ.
27. ಭೂಮಿಯಲ್ಲಿನ ಎಲ್ಲ ಸಸ್ಯಗಳೂ ಲೇಖನಿಗಳಾಗಿ, ಸಾಗರವು ಅವುಗಳ ಮಸಿಯಾಗಿ ಬಿಟ್ಟರೂ, ಆ ಬಳಿಕ ಮತ್ತೆ ಏಳು ಸಾಗರಗಳು (ಮಸಿಯಾಗಿ) ಸೇರಿಕೊಂಡರೂ ಅಲ್ಲಾಹನ ವಚನಗಳು ಮುಗಿಯಲಾರವು. ಖಂಡಿತವಾಗಿಯೂ ಅಲ್ಲಾಹನು ಪ್ರಚಂಡನೂ ಯುಕ್ತಿವಂತನೂ ಆಗಿದ್ದಾನೆ.
28. (ಅಲ್ಲಾಹನ ಮಟ್ಟಿಗೆ) ನಿಮ್ಮೆಲ್ಲರನ್ನೂ ಒಮ್ಮೆ ಸೃಷ್ಟಿಸುವ ಹಾಗೂ ನಿಮ್ಮನ್ನೆಲ್ಲಾ ಮತ್ತೊಮ್ಮೆ ಜೀವಂತಗೊಳಿಸುವ ಕಾರ್ಯವು ಕೇವಲ ಒಂದು ಜೀವಕ್ಕೆ (ಒಂದು ಜೀವದ ಸೃಷ್ಟಿ ಹಾಗೂ ಮರು ಸೃಷ್ಟಿಗೆ) ಸಮಾನವಾಗಿದೆ. ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ಕೇಳುವವನೂ ನೋಡುವವನೂ ಆಗಿದ್ದಾನೆ.
29. ಅಲ್ಲಾಹನು ಹಗಲೊಳಕ್ಕೆ ರಾತ್ರಿಯನ್ನು ಪೋಣಿಸುವುದನ್ನು ಹಾಗೂ ರಾತ್ರಿಯೊಳಗೆ ಹಗಲನ್ನು ಪೋಣಿಸುವುದನ್ನು ಮತ್ತು ಅವನು ಸೂರ್ಯನನ್ನು ಹಾಗೂ ಚಂದ್ರನನ್ನು ನಿಯಂತ್ರಿಸಿಟ್ಟಿರುವುದನ್ನು ನೀವು ಕಾಣುವುದಿಲ್ಲವೇ? ಎಲ್ಲವೂ ಒಂದು ನಿರ್ದಿಷ್ಟ ಕಾಲದವರೆಗೆ ಚಲಿಸುತ್ತಿರುವುದು. ಅಲ್ಲಾಹನು ನೀವು ಮಾಡುತ್ತಿರುವ ಎಲ್ಲವನ್ನೂ ಅರಿತಿರುತ್ತಾನೆ.
30. ಏಕೆಂದರೆ ಅಲ್ಲಾಹನೇ ಸತ್ಯವಾಗಿದ್ದಾನೆ ಮತ್ತು ಅವನ ಹೊರತು ನೀವು ಪ್ರಾರ್ಥಿಸುವ ಬೇರೆಲ್ಲವೂ ಮಿಥ್ಯಗಳಾಗಿವೆ ಮತ್ತು ಅಲ್ಲಾಹನೇ ಉನ್ನತನೂ ಮಹಾನನೂ ಆಗಿದ್ದಾನೆ.
31. ಅಲ್ಲಾಹನ ಕೊಡಗೆಗಳನ್ನು ಹೊತ್ತ ಹಡಗುಗಳು ಕಡಲಲ್ಲಿ ಚಲಿಸುವುದನ್ನು ನೀವು ಕಂಡಿಲ್ಲವೇ? ಪ್ರತಿಯೊಬ್ಬ ಸಹನಶೀಲ, ಕೃತಜ್ಞನಿಗೆ ಅದರಲ್ಲಿ ಖಂಡಿತವಾಗಿಯೂ ಪುರಾವೆಗಳಿವೆ. ಈ ಮೂಲಕ ಅವನು (ಅಲ್ಲಾಹನು) ನಿಮಗೆ ತನ್ನ ಪುರಾವೆಗಳನ್ನು ತೋರಿಸುತ್ತಾನೆ.
32. ಅಲೆಗಳು, ಚಪ್ಪರಗಳಂತೆ ಅವುಗಳನ್ನು (ಹಡಗುಗಳನ್ನು) ಆವರಿಸಿಕೊಂಡಾಗ, ಅವರು ಭಕ್ತಿಯನ್ನು ಅಲ್ಲಾಹನೊಬ್ಬನಿಗೇ ಮೀಸಲಾಗಿಟ್ಟು ಅವನನ್ನು ಪ್ರಾರ್ಥಿಸುತ್ತಾರೆ. ಕೊನೆಗೆ ಅವನು ಅವರನ್ನು ರಕ್ಷಿಸಿ ದಡ ಸೇರಿಸಿದಾಗ ಅವರಲ್ಲೊಬ್ಬನು ತಟಸ್ಥನಾಗಿ ಬಿಡುತ್ತಾನೆ. ವಚನಭ್ರಷ್ಟ ಕೃತಘ್ನರ ಹೊರತು ಬೇರಾರೂ ನಮ್ಮ ಪುರಾವೆಗಳ ಕುರಿತು ಜಗಳಾಡುವುದಿಲ್ಲ.
33. ಮಾನವರೇ, ನಿಮ್ಮ ಒಡೆಯನಿಗೆ ಅಂಜಿರಿ ಮತ್ತು ಯಾವ ತಂದೆಯೂ ತನ್ನ ಮಗನಿಗೆ ಕಿಂಚಿತ್ತೂ ಉಪಕರಿಸಲಾಗದ ಹಾಗೂ ಯಾವ ಮಗನೂ ತನ್ನ ತಂದೆಗೆ ಕಿಂಚಿತ್ತೂ ಉಪಕರಿಸಲಾಗದ ದಿನದ ಭಯ ನಿಮಗಿರಲಿ. ಖಂಡಿತವಾಗಿಯೂ ಅಲ್ಲಾಹನು ಕೊಟ್ಟ ಮಾತು ಸತ್ಯವಾಗಿದೆ. ಇನ್ನು, ಈ ಲೋಕದ ಬದುಕು ನಿಮ್ಮನ್ನು ವಂಚಿಸದಿರಲಿ ಮತ್ತು ವಂಚಕನು ನಿಮ್ಮನ್ನು ಅಲ್ಲಾಹನ ವಿಷಯದಲ್ಲಿ ವಂಚಿಸದಿರಲಿ.
34. (ಪುನರುತ್ಥಾನ ದಿನದ) ಆ ಘಳಿಗೆಯ ಜ್ಞಾನವು ಇರುವುದು ಅಲ್ಲಾಹನ ಬಳಿ ಮಾತ್ರ. ಅವನೇ ಮಳೆಯನ್ನು ಸುರಿಸುತ್ತಾನೆ. ಗರ್ಭಗಳೊಳಗೆ ಏನಿದೆ ಎಂಬುದನ್ನು ಅವನೇ ಬಲ್ಲನು. ನಾಳೆ ತಾನೇನು ಮಾಡಲಿರುವೆನೆಂಬುದು ಯಾರಿಗೂ ತಿಳಿಯದು. ತಾನು ಯಾವ ಭೂಮಿಯಲ್ಲಿ ಸಾಯುವೆನೆಂಬುದೂ ಯಾರಿಗೂ ತಿಳಿಯದು. ಖಂಡಿತವಾಗಿಯೂ ಅಲ್ಲಾಹನೇ ಎಲ್ಲವನ್ನೂ ಬಲ್ಲವನು ಹಾಗೂ ಅತ್ಯಂತ ಜಾಗೃತನಾಗಿದ್ದಾನೆ.