1. ಹೊಗಳಿಕೆಗಳೆಲ್ಲಾ ಅಲ್ಲಾಹನಿಗೆ. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅವನಿಗೇ ಸೇರಿವೆ. ಪರಲೋಕದಲ್ಲೂ ಎಲ್ಲ ಪ್ರಶಂಸೆಗಳು ಅವನಿಗೇ ಸಲ್ಲುವವು ಮತ್ತು ಅವನು ಅತ್ಯಂತ ಯುಕ್ತಿವಂತ ಹಾಗೂ ಅರಿವು ಉಳ್ಳವನಾಗಿದ್ದಾನೆ.
2. ಏನೆಲ್ಲಾ ಭೂಮಿಯೊಳಗೆ ಹೋಗುತ್ತದೆ ಮತ್ತು ಏನೆಲ್ಲಾ ಅದರಿಂದ ಹೊರಬರುತ್ತದೆ ಎಂಬುದನ್ನು ಹಾಗೂ ಆಕಾಶದಿಂದ ಏನೆಲ್ಲಾ ಇಳಿಯುತ್ತದೆ ಹಾಗೂ ಏನೆಲ್ಲಾ ಅದರೊಳಕ್ಕೆ ಏರಿ ಹೋಗುತ್ತದೆ ಎಂಬುದನ್ನು ಅವನು ಚೆನ್ನಾಗಿ ಬಲ್ಲನು ಮತ್ತು ಅವನು ಕರುಣಾಳುವೂ ಕ್ಷಮಾಶೀಲನೂ ಆಗಿರುವನು.
3. ಧಿಕ್ಕಾರಿಗಳು, ‘‘ನಮ್ಮ ಪಾಲಿಗೆ ಲೋಕಾಂತ್ಯದ ಕ್ಷಣ ಎಂದೂ ಬರಲಾರದು‘‘ ಎನ್ನುತ್ತಾರೆ. ನೀವು ಹೇಳಿರಿ; ಯಾಕಿಲ್ಲ ? ನನ್ನೊಡೆಯನಾಣೆ, ಅದು ಖಂಡಿತ ನಿಮ್ಮ ಮೇಲೆ ಬಂದೆರಗುವುದು. ಅವನು ಎಲ್ಲ ಗುಪ್ತ ವಿಷಯಗಳನ್ನೂ ಬಲ್ಲವನು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಇರುವ ಒಂದು ಅಣು ಗಾತ್ರದ ವಸ್ತು ಕೂಡಾ ಅವನಿಂದ ಮರೆಯಾಗಿರುವುದಿಲ್ಲ. ಇನ್ನು, ಅದಕ್ಕಿಂತ ಸಣ್ಣ ಅಥವಾ ದೊಡ್ಡ ಯಾವ ವಿಷಯವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿರುವುದಿಲ್ಲ.
4. ನಂಬಿದವರಿಗೆ ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಅವನು (ಅಲ್ಲಾಹನು) ಪ್ರತಿಫಲ ನೀಡುವನು. ಅವರಿಗೆ ಕ್ಷಮೆ ಮತ್ತು ಗೌರವಾನ್ವಿತ ಸಂಪನ್ನತೆ ಪ್ರಾಪ್ತವಾಗಲಿದೆ.
5. ನಮ್ಮ ವಚನಗಳನ್ನು ಕೀಳಾಗಿ ಕಾಣಿಸಲು ಹೆಣಗುತ್ತಿರುವವರಿಗೆ ತೀರಾ ಕಠೋರ ಶಿಕ್ಷೆ ಸಿಗಲಿದೆ.
6. ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿಕೊಡಲಾಗಿರುವ ಸಂದೇಶವೇ ಸತ್ಯ ಮತ್ತು ಅದು, ಆ ಪ್ರಬಲ ಪ್ರಶಂಸಾರ್ಹನ (ಅಲ್ಲಾಹನ) ಮಾರ್ಗದೆಡೆಗೆ ಮುನ್ನಡೆಸುತ್ತದೆ ಎಂಬುದನ್ನು ಜ್ಞಾನ ಪ್ರಾಪ್ತವಾಗಿರುವವರು ಕಾಣುತ್ತಿದ್ದಾರೆ.
7. ಧಿಕ್ಕಾರಿಗಳು (ಗೇಲಿ ಮಾಡುತ್ತಾ) ಹೇಳುತ್ತಾರೆ; ‘‘ನಾವು ನಿಮಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸಬೇಕೇ? ನೀವು ಸಂಪೂರ್ಣವಾಗಿ ಛಿದ್ರರಾದ ಬಳಿಕ ನಿಮ್ಮನ್ನು ಮತ್ತೆ ಹೊಸದಾಗಿ ಜೀವಂತಗೊಳಿಸಲಾಗುವುದು ಎಂದು ಅವನು ನಿಮ್ಮನ್ನು ಎಚ್ಚರಿಸುತ್ತಾನೆ’’.
8. ‘‘ಅವನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿದ್ದಾನೆ. ಅಥವಾ ಅವನಿಗೆ ಹುಚ್ಚು ಹಿಡಿದಿದೆ’’. ನಿಜವಾಗಿ, ಪರಲೋಕದಲ್ಲಿ ನಂಬಿಕೆ ಇಲ್ಲದವರು ಶಿಕ್ಷೆಗೆ ಗುರಿಯಾಗುವರು ಮತ್ತು ಅವರು ಸಂಪೂರ್ಣ ದಾರಿಗೆಟ್ಟಿರುವರು.
9. ಅವರೇನು, ಅವರ ಮುಂದೆಯೂ ಅವರ ಹಿಂದೆಯೂ ಇರುವ ಆಕಾಶವನ್ನು ಹಾಗೂ ಭೂಮಿಯನ್ನು ನೋಡುವುದಿಲ್ಲವೇ? ನಾವು ಬಯಸಿದರೆ ಅವರನ್ನು ಭೂಮಿಯೊಳಗೆ ಹೂತು ಬಿಡಬಲ್ಲೆವು ಅಥವಾ ಆಕಾಶದ ಒಂದು ತುಂಡನ್ನು ಅವರ ಮೇಲೆ ಬೀಳಿಸಬಲ್ಲೆವು. ಖಂಡಿತವಾಗಿಯೂ ಇದರಲ್ಲಿ, (ದೇವರೆಡೆಗೆ) ಒಲವು ತೋರುವ ಪ್ರತಿಯೊಬ್ಬ ದಾಸನಿಗೆ ಪಾಠವಿದೆ.
10. ನಾವು ದಾವೂದರಿಗೆ ನಮ್ಮ ಕಡೆಯಿಂದ ವಿಶೇಷ ಅನುಗ್ರಹವನ್ನು ಕರುಣಿಸಿದ್ದೆವು. ಪರ್ವತಗಳೇ, ಅವನ ಜೊತೆಗೂಡಿ ಕೀರ್ತನೆ ಮಾಡಿರಿ (ಎಂದು ಆದೇಶಿಸಲಾಗಿತ್ತು) ಮತ್ತು ಪಕ್ಷಿಗಳಿಗೂ (ಹಾಗೆಂದು ಆದೇಶಿಸಲಾಗಿತ್ತು) ಮತ್ತು ನಾವು ಉಕ್ಕನ್ನು ಅವರ ಪಾಲಿಗೆ ಮೃದುವಾಗಿಸಿದ್ದೆವು.
11. ವಿಶಾಲ ಕವಚಗಳನ್ನು ರಚಿಸಿರಿ ಹಾಗೂ ಕುಣಿಕೆಗಳನ್ನು ಸಂತುಲಿತವಾಗಿ ಜೋಡಿಸಿರಿ ಮತ್ತು ನೀವು ಸತ್ಕರ್ಮಗಳನ್ನು ಮಾಡಿರಿ. ನೀವು ಮಾಡುವ ಎಲ್ಲವನ್ನೂ ನಾನು ಖಂಡಿತ ನೋಡುತ್ತಿರುತ್ತೇನೆ (ಎಂದು ಅವರೊಡನೆ ಹೇಳಲಾಗಿತ್ತು).
12. ಹಾಗೆಯೇ, ನಾವು ಸುಲೈಮಾನರ ಪಾಲಿಗೆ ಗಾಳಿಯನ್ನು ವಿಧೇಯಗೊಳಿಸಿದೆವು – ಅದರ ಬೆಳಗ್ಗಿನ ಗುರಿ ಒಂದು ತಿಂಗಳಷ್ಟು ದೂರ ಮತ್ತು ಸಂಜೆಯ ಗುರಿ ಒಂದು ತಿಂಗಳಷ್ಟು ದೂರವಿತ್ತು. ನಾವು ಅವರಿಗಾಗಿ ತಾಮ್ರದ ಧಾರೆಯನ್ನು ಹರಿಸಿದೆವು ಮತ್ತು ಕೆಲವು ಜಿನ್ನ್ಗಳು ಅವರ ಒಡೆಯನ (ಅಲ್ಲಾಹನ) ಆದೇಶದಂತೆ ಅವರೆದುರು ಕೆಲಸ ಮಾಡುತ್ತಿದ್ದವು. ಅವರ ಪೈಕಿ ನಮ್ಮ ಆದೇಶವನ್ನು ಮೀರಿ ನಡೆದವರಿಗೆ ನಾವು ನರಕಾಗ್ನಿಯ ರುಚಿಯನ್ನು ಉಣಿಸುವೆವು.
13. ಅವು (ಆ ಜಿನ್ನ್ಗಳು) ಅವರು (ಸುಲೈಮಾನರು) ಬಯಸಿದಂತೆ ಅವರಿಗಾಗಿ, ಬೃಹತ್ ಕಟ್ಟಡಗಳನ್ನೂ ಪ್ರತಿಮೆಗಳನ್ನೂ, ಕೊಳಗಳಂತಹ ಹರಿವಾಣಗಳನ್ನೂ ಸ್ಥಿರವಾಗಿರುವ ಬೃಹತ್ ಪಾಕಪಾತ್ರೆಗಳನ್ನೂ ನಿರ್ಮಿಸಿ ಕೊಡುತ್ತಿದ್ದವು. ದಾವೂದರ ಸಂತತಿಗಳೇ, ನೀವು ಕೃತಜ್ಞರಾಗಿ, ಸತ್ಕರ್ಮಗಳನ್ನು ಮಾಡಿರಿ. ನನ್ನ ದಾಸರಲ್ಲಿ ಕೆಲವರು ಮಾತ್ರ ಕೃತಜ್ಞರು.
14. ಕೊನೆಗೆ ನಾವು ಅವರಿಗೆ (ಸುಲೈಮಾನರಿಗೆ) ಮರಣವನ್ನು ವಿಧಿಸಿದೆವು. ಗೆದ್ದಲುಗಳು ಅವರ ದಂಡವನ್ನು ತಿಂದು ಬಿಡುವವರೆಗೂ ಅವುಗಳಿಗೆ (ಜಿನ್ನ್ಗಳಿಗೆ), ಅವರ ಮರಣದ ಕುರಿತು ತಿಳಿದೇ ಇರಲಿಲ್ಲ. ಅದು ಬಿದ್ದು ಬಿಟ್ಟಾಗ, ಅವುಗಳಿಗೆ ವಿಷಯ ತಿಳಿಯಿತು. ಒಂದು ವೇಳೆ ಅವುಗಳಿಗೆ ಅಜ್ಞಾತ ವಿಷಯಗಳ ಜ್ಞಾನ ಇದ್ದಿದ್ದರೆ, ಅವು ಆ ರೀತಿ ಅಪಮಾನಕಾರಿ ಶಿಕ್ಷೆಗೆ ತುತ್ತಾಗುತ್ತಿರಲಿಲ್ಲ.
15. ಸಬಾ ಜನಾಂಗದವರಿಗಾಗಿ ಅವರ ನಾಡಿನಲ್ಲೇ ಒಂದು ಪಾಠವಿತ್ತು. ಅಲ್ಲಿ ಎರಡು ತೋಟಗಳಿದ್ದುವು. ಒಂದು ಬಲಭಾಗದಲ್ಲಿ ಮತ್ತು ಇನ್ನೊಂದು ಎಡಭಾಗದಲ್ಲಿ. ನಿಮ್ಮ ಒಡೆಯನ ಕಡೆಯಿಂದ ದಯಪಾಲಿಸಲಾಗಿರುವ ಆಹಾರವನ್ನು ಉಣ್ಣಿರಿ ಮತ್ತು ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಪಾವನ ನಗರ ಮತ್ತು ಕ್ಷಮಾಶೀಲ ಒಡೆಯ!
16. ಆದರೆ ಅವರು ಕಡೆಗಣಿಸಿದರು. ಆಗ ನಾವು ಅವರ ಮೇಲೆ ಪ್ರವಾಹವನ್ನು ಎರಗಿಸಿದೆವು ಮತ್ತು ನಾವು ಅವರ ಎರಡೂ ತೋಟಗಳನ್ನು ಕಹಿಯಾದ ಫಲಗಳು, ಮುಳ್ಳು ಗಿಡಗಳು ಮತ್ತು ತೀರಾ ಕಡಿಮೆ ಫಲ ನೀಡುವ ಕೆಲವು ಮರಗಳು ಮಾತ್ರ ಇರುವ ತೋಟಗಳಾಗಿ ಮಾರ್ಪಡಿಸಿ ಬಿಟ್ಟೆವು.
17. ಅದು ಅವರ ಕೃತಘ್ನತೆಯ ಕಾರಣ ನಾವು ಅವರಿಗೆ ನೀಡಿದ ಶಿಕ್ಷೆ. ನಾವೇನು ಕೃತಘ್ನರ ಹೊತರು ಬೇರೆ ಯಾರನ್ನಾದರೂ (ಈರೀತಿ) ಶಿಕ್ಷಿಸುತ್ತೇವೆಯೇ?
18. ಮುಂದೆ ನಾವು, ಅವರ ಹಾಗೂ ನಾವು ಸಮೃದ್ಧಗೊಳಿಸಿರುವ ನಾಡುಗಳ ನಡುವೆ, ಎದ್ದು ಕಾಣುವಂತಹ (ಸುಂದರ, ಸಂಪನ್ನ) ನಾಡುಗಳನ್ನು ನೆಲೆಸಿದೆವು ಮತ್ತು ಅವುಗಳನ್ನು ಸಂಚಾರದ ಹಾದಿಯಾಗಿಸಿದೆವು. (ಇಲ್ಲಿ) ನೀವು ಇರುಳಲ್ಲೂ ಹಗಲಲ್ಲೂ ನಿರ್ಭಯವಾಗಿ ಸಂಚರಿಸಿರಿ (ಎಂದು ಅವರಿಗೆ ಸೂಚಿಸಲಾಗಿತ್ತು).
19. ಆದರೆ ಅವರು, ‘‘ನಮ್ಮೊಡೆಯಾ, ನಮ್ಮ ಪ್ರಯಾಣದ ಗುರಿಗಳ ನಡುವಣ ಅಂತರವನ್ನು ಹೆಚ್ಚಿಸು’’ ಎಂದು ಪ್ರಾರ್ಥಿಸಿದರು. ಹೀಗೆ ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗಿದರು. ಕೊನೆಗೆ ನಾವು ಅವರನ್ನು ಕಥೆಗಳಾಗಿಸಿ ಬಿಟ್ಟೆವು ಮತ್ತು ನಾವು ಅವರನ್ನು ಸಂಪೂರ್ಣ ವಿಚ್ಛಿದ್ರಗೊಳಿಸಿ ಬಿಟ್ಟೆವು. ಪ್ರತಿಯೊಬ್ಬ ಸಹನಶೀಲ, ಕೃತಜ್ಞನಿಗೆ ಇದರಲ್ಲಿ ಖಂಡಿತ ಪಾಠವಿದೆ.
20. ಶೈತಾನನು ಅವರ ಕುರಿತಂತೆ ತನ್ನ ನಿರೀಕ್ಷೆ ನಿಜವಾದುದನ್ನು ಕಂಡನು. ವಿಶ್ವಾಸಿಗಳ ಒಂದು ಗುಂಪಿನ ಹೊರತು ಉಳಿದೆಲ್ಲರೂ ಅವನನ್ನು ಹಿಂಬಾಲಿಸಿದರು.
21. ನಿಜವಾಗಿ ಅವನಿಗೆ (ಶೈತಾನನಿಗೆ) ಅವರ ಮೇಲೆ ನಿಯಂತ್ರಣವೇನೂ ಇರಲಿಲ್ಲ. ನಾವಂತು ಪರಲೋಕದಲ್ಲಿ ನಂಬಿಕೆ ಉಳ್ಳವರು ಯಾರು ಮತ್ತು ಆ ಕುರಿತು ಸಂದೇಹ ಉಳ್ಳವರು ಯಾರು ಎಂಬುದನ್ನು ಮಾತ್ರ ತಿಳಿಯ ಬಯಸಿದ್ದೆವು. ನಿಮ್ಮ ಒಡೆಯನೇ ಎಲ್ಲ ವಸ್ತುಗಳ ರಕ್ಷಕನು.
22. ಹೇಳಿರಿ; ಅಲ್ಲಾಹನ ಹೊರತು ನೀವು (ದೇವರೆಂದು) ನಂಬಿಕೊಂಡಿರುವವರನ್ನೆಲ್ಲಾ ಪ್ರಾರ್ಥಿಸಿ ನೋಡಿರಿ. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಒಂದು ಅಣುಗಾತ್ರದ ವಸ್ತುವಿಗೂ ಅವರು ಮಾಲಕರಲ್ಲ. ಅವೆರಡರಲ್ಲೂ ಅವರಿಗೆ ಯಾವ ಪಾಲೂ ಇಲ್ಲ ಮತ್ತು ಅವರಲ್ಲಿ ಯಾರೂ ಸಹಾಯಕರಲ್ಲ.
23. ಅವನು ಅನುಮತಿಸಿದವರ ಹೊರತು ಬೇರೆ ಯಾರ ಶಿಫಾರಸ್ಸೂ ಅವನ ಬಳಿ ಉಪಯುಕ್ತವಾಗದು. ಎಷ್ಟೆಂದರೆ, (ಮಲಕ್ಗಳು ಕೂಡಾ) ತಮ್ಮ ಮನದ ಆತಂಕವು ತೊಲಗಿದಾಗ, ‘‘ನಿಮ್ಮೊಡೆಯನು ಏನಂದನು?’’ ಎಂದು ಕೇಳುವರು. ಅವರು (ಇತರ ಮಲಕ್ಗಳು), ‘‘ಅವನು ಸತ್ಯವನ್ನೇ ಹೇಳಿರುವನು ಮತ್ತು ಅವನು ಶ್ರೇಷ್ಠನೂ ಉನ್ನತನೂ ಆಗಿರುವನು’’ ಎನ್ನುವರು.
24. ‘‘ಆಕಾಶಗಳಿಂದಲೂ ಭೂಮಿಯಿಂದಲೂ ನಿಮಗೆ ಆಹಾರವನ್ನು ಒದಗಿಸುವವನು ಯಾರು?’’ ಎಂದು ಕೇಳಿರಿ. ಮತ್ತು ಹೇಳಿರಿ: ‘‘ಅಲ್ಲಾಹನು. ಇನ್ನು, ಒಂದೋ ನಾವು ಮಾತ್ರ ಅಥವಾ ನೀವು ಮಾತ್ರ (ನಮ್ಮಿಬ್ಬರಲ್ಲಿ ಒಬ್ಬರು ಮಾತ್ರ) ಸನ್ಮಾರ್ಗದಲ್ಲಿರುವರು ಅಥವಾ (ನಮ್ಮಿಬ್ಬರಲ್ಲಿ ಒಬ್ಬರು ಮಾತ್ರ) ಸ್ಪಷ್ಟವಾಗಿ ದಾರಿಗೆಟ್ಟಿರುವರು’’.
25. ಹೇಳಿರಿ; ನಾವು ಮಾಡಿದ ಅಪರಾಧಗಳ ಕುರಿತು ನಿಮ್ಮನ್ನು ಪ್ರಶ್ನಿಸಲಾಗದು ಮತ್ತು ನಿಮ್ಮ ಕರ್ಮಗಳ ಕುರಿತು ನಮ್ಮನ್ನು ವಿಚಾರಿಸಲಾಗದು.
26. ಹೇಳಿರಿ; ನಮ್ಮೊಡೆಯನು ನಮ್ಮನ್ನು ಒಂದೆಡೆ ಸೇರಿಸುವನು ಮತ್ತು ನಮ್ಮ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಮಾಡುವನು. ಅವನು ಅರಿವುಳ್ಳ ತೀರ್ಪುಗಾರ ನಾಗಿದ್ದಾನೆ.
27. ಹೇಳಿರಿ; ನೀವು ಅವನ (ಅಲ್ಲಾಹನ) ಜೊತೆ ಸೇರಿಸಿ, ಅವನ ಪಾಲುದಾರರಾಗಿಸಿ ಬಿಟ್ಟವರನ್ನು ನನಗೆ ತೋರಿಸಿರಿ. ಇಲ್ಲ! (ಅವರು ಯಾರೂ ಅವನ ಪಾಲುದಾರರಲ್ಲ). ನಿಜವಾಗಿ, ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.
28. (ದೂತರೇ,) ಖಂಡಿತವಾಗಿಯೂ ನಾವು ನಿಮ್ಮನ್ನು ಶುಭವಾರ್ತೆ ನೀಡುವವರಾಗಿ ಹಾಗೂ ಎಚ್ಚರಿಸುವವರಾಗಿ, ಸಂಪೂರ್ಣ ಮಾನವ ಕುಲದೆಡೆಗೆ ಕಳುಹಿಸಿರುವೆವು. ಆದರೆ ಮಾನವರಲ್ಲಿ ಹೆಚ್ಚಿನವರು ತಿಳಿದಿಲ್ಲ.
29. ಮತ್ತು ಅವರು, ‘‘ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನಿತ ದಿನವು ಬರುವುದು ಯಾವಾಗ?’’ ಎಂದು ಕೇಳುತ್ತಾರೆ.
30. ಹೇಳಿರಿ; ನಿಮಗೆ ವಾಗ್ದಾನ ಮಾಡಲಾಗಿರುವ ದಿನವು ನಿಶ್ಚಿತವಾಗಿದೆ. ಅದನ್ನು ಒಂದು ಕ್ಷಣದ ಮಟ್ಟಿಗೂ ಮುಂದೂಡಲು ಅಥವಾ ಹಿಂದೂಡಲು ನಿಮಗೆ ಸಾಧ್ಯವಿಲ್ಲ.
31. ಮತ್ತು ಧಿಕ್ಕಾರಿಗಳು, ನಾವು ಈ ಕುರ್ಆನನ್ನಾಗಲಿ ಇದಕ್ಕಿಂತ ಹಿಂದಿನ ಗ್ರಂಥಗಳನ್ನಾಗಲಿ ನಂಬುವುದಿಲ್ಲ ಎನ್ನುತ್ತಾರೆ. ಆ ಅಕ್ರಮಿಗಳನ್ನು ಅವರ ಒಡೆಯನ ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! (ಅಂದು) ಅವರಲ್ಲಿ ಪ್ರತಿಯೊಬ್ಬನೂ ತನ್ನ ಮಾತನ್ನು ಇನ್ನೊಬ್ಬರ ಮೇಲೆ ಆರೋಪಿಸುವನು. ಅಂದು ಮರ್ದಿತರು ಅಹಂಕಾರಿಗಳೊಡನೆ, ‘‘ನೀವು ಇಲ್ಲದೆ ಇದ್ದಿದ್ದರೆ ನಾವು ವಿಶ್ವಾಸಿಗಳಾಗಿರುತ್ತಿದ್ದೆವು’’ ಎನ್ನುವರು.
32. ಆಗ ಅಹಂಕಾರಿಗಳು ಮರ್ದಿತರೊಡನೆ, ‘‘ನಿಮ್ಮ ಬಳಿಗೆ ಮಾರ್ಗದರ್ಶನವು ಬಂದಿದ್ದಾಗ, ನಾವೇನು ನಿಮ್ಮನ್ನು ಅದರಿಂದ ತಡೆದು ನಿಲ್ಲಿಸಿದ್ದೆವೇ? ನಿಜವಾಗಿ, ನೀವೇ ಅಪರಾಧಿಗಳಾಗಿದ್ದಿರಿ’’ ಎನ್ನುವರು.
33. ಮತ್ತು (ಇದಕ್ಕುತ್ತರವಾಗಿ) ಮರ್ದಿತರು, ಅಹಂಕಾರಿಗಳೊಡನೆ, ‘‘(ನೀವು) ಇರುಳಲ್ಲೂ ಹಗಲಲ್ಲೂ ಸಂಚುಗಳನ್ನು ಹೂಡುತ್ತಾ, ನಾವು ಅಲ್ಲಾಹನನ್ನು ಧಿಕ್ಕರಿಸಬೇಕೆಂದೂ ಇತರರನ್ನು ಅವನ ಜೊತೆ ಪಾಲುಗೊಳಿಸಬೇಕೆಂದೂ ನಮಗೆ ಆದೇಶಿಸುತ್ತಿದ್ದಿರಿ’’ ಎನ್ನುವರು. ಶಿಕ್ಷೆಯನ್ನು ಕಂಡಾಗ ಅವರೆಲ್ಲಾ ತಮ್ಮ ಪರಿತಾಪವನ್ನು ಬಚ್ಚಿಡುವರು ಮತ್ತು ನಾವು, ಧಿಕ್ಕಾರಿಗಳ ಕೊರಳಿಗೆ ಸರಪಣಿಗಳನ್ನು ಹಾಕಿ ಬಿಡುವೆವು. ಅವರಿಗೆ ಅವರ ಕರ್ಮಗಳ ಪ್ರತಿಫಲವಲ್ಲದೆ ಬೇರೇನಾದರೂ ಸಿಗಲುಂಟೇ?
34. ನಾವು ಎಚ್ಚರಿಸುವವರನ್ನು ಕಳಿಸಿರುವ ಪ್ರತಿಯೊಂದು ನಾಡಿನಲ್ಲೂ ಅಲ್ಲಿನ ಶ್ರೀಮಂತರು, ‘‘ನಿಮ್ಮ ಜೊತೆ ಕಳಿಸಲಾಗಿರುವುದನ್ನು (ಸತ್ಯ ಸಂದೇಶವನ್ನು) ನಾವು ತಿರಸ್ಕರಿಸುತ್ತೇವೆ’’ ಎಂದೇ ಹೇಳಿರುವರು.
35. ಹಾಗೆಯೇ ಅವರು, ‘‘ನಾವು (ನಿಮಗಿಂತ) ಹೆಚ್ಚಿನ ಸಂಪತ್ತು ಹಾಗೂ ಸಂತಾನ ಉಳ್ಳವರು. ನಾವು ಖಂಡಿತ ಶಿಕ್ಷೆಗೆ ಗುರಿಯಾಗಲಾರೆವು’’ ಎಂದಿರುವರು.
36. ಹೇಳಿರಿ; ನನ್ನೊಡೆಯನು ತಾನಿಚ್ಛಿಸಿದವರಿಗೆ ಆದಾಯವನ್ನು ವಿಸ್ತಾರಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತ ಗೊಳಿಸಿ ಬಿಡುತ್ತಾನೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿದಿಲ್ಲ.
37. ನಮ್ಮ ದೃಷ್ಟಿಯಲ್ಲಿ ನಿಮ್ಮ ಸಂಪತ್ತಾಗಲಿ ನಿಮ್ಮ ಸಂತಾನಗಳಾಗಲಿ ಸ್ಥಾನಮಾನದಲ್ಲಿ ನಿಮ್ಮನ್ನು ನಮಗೆ ಹತ್ತಿರಗೊಳಿಸಿ ಬಿಡುವುದಿಲ್ಲ. ವಿಶ್ವಾಸಿಗಳು ಮತ್ತು ಸತ್ಕಾರ್ಯಗಳನ್ನು ಮಾಡಿದವರು ಮಾತ್ರ (ನಮಗೆ ಹತ್ತಿರವಿರುತ್ತಾರೆ). ಅವರಿಗೆ, ಅವರು ಮಾಡಿದ್ದ ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲ ಸಿಗಲಿದೆ ಮತ್ತು ಅವರು (ಸ್ವರ್ಗದಲ್ಲಿ) ಮೇಲಂತಸ್ತುಗಳಲ್ಲಿ ನೆಮ್ಮದಿಯಾಗಿರುವರು.
38. ನಮ್ಮ ವಚನಗಳನ್ನು ಸೋಲಿಸಲು ಶ್ರಮಿಸುವವರೇ ಶಿಕ್ಷೆಗೆ ತುತ್ತಾಗುವವರಾಗಿದ್ದಾರೆ.
39. ಹೇಳಿರಿ; ನನ್ನೊಡೆಯನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಆದಾಯವನ್ನು ವಿಸ್ತಾರಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಅದನ್ನು ಸೀಮಿತ ಗೊಳಿಸಿ ಬಿಡುತ್ತಾನೆ. ನೀವು ಸತ್ಕಾರ್ಯದಲ್ಲಿ ಮಾಡುವ ಪ್ರತಿಯೊಂದು ಖರ್ಚಿಗೂ ಅವನು ಪ್ರತಿಫಲ ನೀಡುವನು. ಅವನು ಅತ್ಯುತ್ತಮ ಅನ್ನದಾತನಾಗಿದ್ದಾನೆ.
40. ಒಂದು ದಿನ, ಅವನು ಅವರೆಲ್ಲರನ್ನೂ ಒಂದೆಡೆ ಸೇರಿಸುವನು ಮತ್ತು ‘‘ಅವರು ಆರಾಧಿಸುತ್ತಿದ್ದುದು ನಿಮ್ಮನ್ನೇ?’’ ಎಂದು ಮಲಕ್ಗಳೊಡನೆ ಕೇಳುವನು.
41. ಅವರು ಹೇಳುವರು; ‘‘ನೀನು ಪಾವನನು ಮತ್ತು ನಮ್ಮ ಪೋಷಕನು ನೀನೇ ಹೊರತು, ಅವರೇನಲ್ಲ. ನಿಜವಾಗಿ ಅವರು ಜಿನ್ನ್ಗಳನ್ನು ಪೂಜಿಸುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಅವುಗಳನ್ನೇ ನಂಬಿಕೊಂಡಿದ್ದರು’’.
42. ಹೀಗೆ, ಇಂದು ನಿಮ್ಮಲ್ಲಿ ಯಾರಿಗೂ ಪರಸ್ಪರರಿಗೆ ಯಾವುದೇ ಲಾಭವನ್ನಾಗಲಿ ಹಾನಿಯನ್ನಾಗಲಿ ಮಾಡುವ ಸಾಮರ್ಥ್ಯವಿಲ್ಲ. ಅಕ್ರಮ ವೆಸಗಿದವರೊಡನೆ ನಾವು, ‘‘ನೀವು ಧಿಕ್ಕರಿಸಿದ್ದರ ಫಲವಾಗಿ ಇಂದು ಬೆಂಕಿಯ ಶಿಕ್ಷೆಯನ್ನು ಸವಿಯಿರಿ’’ ಎನ್ನುವೆವು.
43. ಅವರಿಗೆ, ಬಹಳ ಸ್ಪಷ್ಟವಾಗಿರುವ ನಮ್ಮ ವಚನಗಳನ್ನು ಓದಿ ಕೇಳಿಸಲಾದಾಗ ಅವರು, ‘‘ಈ ವ್ಯಕ್ತಿ ನಿಮ್ಮನ್ನು, ನಿಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳಿಂದ ತಡೆದು ದೂರವಿಡಲು ಬಯಸುತ್ತಾನೆ’’ ಎನ್ನುತ್ತಾರೆ. ಮತ್ತು ಅವರು ‘‘ಇದು ಕೇವಲ ಕಟ್ಟುಕತೆಯಲ್ಲದೆ ಬೇರೇನೂ ಅಲ್ಲ’’ ಎನ್ನುತ್ತಾರೆ. ಇನ್ನು ಸತ್ಯವು ತಮ್ಮ ಬಳಿಗೆ ಬಂದಾಗ, ಧಿಕ್ಕಾರಿಗಳು ಅದರ ಕುರಿತು ‘‘ಇದು ಸ್ಪಷ್ಟವಾದ ಇಂದ್ರಜಾಲವೇ ಹೊರತು ಬೇರೇನೂ ಅಲ್ಲ’’ ಎನ್ನುತ್ತಾರೆ.
44. (ದೂತರೇ,) ನಾವು ಅವರಿಗೆ, ಅವರು ಓದುವಂತಹ ಯಾವುದೇ ಗ್ರಂಥವನ್ನು ನೀಡಿಲ್ಲ ಮತ್ತು ನಿಮಗಿಂತ ಮುಂಚೆ ಅವರೆಡೆಗೆ ಯಾವುದೇ ಎಚ್ಚರಿಸುವವನನ್ನೂ ಕಳುಹಿಸಿಲ್ಲ.
45. ಇವರ ಹಿಂದಿನವರೂ ಧಿಕ್ಕರಿಸಿದ್ದರು ಮತ್ತು ಅವರಿಗೆ ನಾವು ನೀಡಿದ್ದಕ್ಕೆ ಹೋಲಿಸಿದರೆ ಇವರು ಅದರ ಹತ್ತರಲ್ಲೊಂದಂಶವನ್ನೂ ಪಡೆದಿಲ್ಲ. ಅವರು ನನ್ನ ದೂತರನ್ನು ತಿರಸ್ಕರಿಸಿದರು. ಕೊನೆಗೆ, ಹೇಗಿತ್ತು ನನ್ನ ಶಿಕ್ಷೆ?
46. (ದೂತರೇ,) ಹೇಳಿರಿ; ನಾನು ನಿಮಗೆ ಕೇವಲ ಒಂದು ವಿಷಯವನ್ನು ಬೋಧಿಸುತ್ತೇನೆ. ನೀವು ಇಬ್ಬಿಬ್ಬರಾಗಿಯೂ ಒಬ್ಬೊಬ್ಬರಾಗಿಯೂ ಅಲ್ಲಾಹನಿಗಾಗಿ ನಿಂತು ಚಿಂತನೆ ನಡೆಸಿರಿ. ಈ ನಿಮ್ಮ ಸಂಗಾತಿಗೆ (ದೇವದೂತರಿಗೆ) ಹುಚ್ಚೇನೂ ಇಲ್ಲ. ಅವರು, ಘೋರ ಶಿಕ್ಷೆಯು ಬಂದು ಬಿಡುವ ಮುನ್ನ ನಿಮ್ಮನ್ನು ಎಚ್ಚರಿಸುವವರು ಮಾತ್ರ.
47. (ದೂತರೇ,) ಹೇಳಿರಿ; ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಅದು ನಿಮಗೇ ಇರಲಿ. ನನ್ನ ಪತ್ರಿಫಲವು ಕೇವಲ ಅಲ್ಲಾಹನ ಬಳಿ ಇದೆ. ಅವನು ಎಲ್ಲದಕ್ಕೂ ಸಾಕ್ಷಿಯಾಗಿದ್ದಾನೆ.
48. ಹೇಳಿರಿ; ಖಂಡಿತವಾಗಿಯೂ ನನ್ನ ಒಡೆಯನೇ ಸತ್ಯಕ್ಕೆ ಪ್ರಾಬಲ್ಯ ನೀಡುತ್ತಾನೆ. ಅವನು ಎಲ್ಲ ಗುಪ್ತ ವಿಷಯಗಳ ಜ್ಞಾನಿಯಾಗಿದ್ದಾನೆ.
49. ಹೇಳಿರಿ; ಸತ್ಯವು ಬಂದು ಬಿಟ್ಟಿದೆ. ಇನ್ನು ಮಿಥ್ಯವು ಏನನ್ನೂ ಆರಂಭಿಸಲಿಕ್ಕಾಗಲಿ, ಪುನರಾರಂಭಿಸಲಿಕ್ಕಾಗಲಿ ಅಶಕ್ತವಾಗಿದೆ.
50. ಹೇಳಿರಿ; ಒಂದು ವೇಳೆ ನಾನು ದಾರಿ ತಪ್ಪಿದ್ದರೆ, ನನ್ನ ದಾರಿಗೇಡಿತನದ ನಷ್ಟವನ್ನೂ ನಾನೇ ಅನುಭವಿಸುವೆನು. ಇನ್ನು ನಾನು ಸರಿದಾರಿಯಲ್ಲಿದ್ದರೆ, ನನ್ನ ಒಡೆಯನ ಕಡೆಯಿಂದ ನನಗೆ ನೀಡಲಾಗಿರುವ ದಿವ್ಯ ಸಂದೇಶವೇ ಅದಕ್ಕೆ ಕಾರಣವಾಗಿದೆ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ (ಎಲ್ಲರ) ಸಮೀಪ ಇರುವವನಾಗಿದ್ದಾನೆ.
51. ನೀವು ಆ ದೃಶ್ಯವನ್ನು ಕಾಣುವಂತಿರಬೇಕಿತ್ತು. ಅವರು (ಧಿಕ್ಕಾರಿಗಳು) ತೀರಾ ಭಯಗ್ರಸ್ತರಾಗಿರುವರು. ಆದರೆ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗದು. ಹತ್ತಿರದ ಒಂದು ಪ್ರದೇಶದಲ್ಲೇ ಅವರು ಸಿಕ್ಕಿ ಬೀಳುವರು.
52. ಆಗ ಅವರು, ನಾವು ಇದನ್ನು ನಂಬಿದೆವು ಎನ್ನುವರು. ಆದರೆ ಅಷ್ಟು ದೂರ ಹೋದ ಬಳಿಕ ಅವರಿಗೆಲ್ಲಿರುವುದು, ಆಶ್ರಯ?
53. ಈ ಹಿಂದೆ ಅವರು ಇದನ್ನು ಧಿಕ್ಕರಿಸಿದ್ದರು ಮತ್ತು ದೂರ ನಿಂತು ಗುಪ್ತವಾಗಿ (ಈ ಕುರಿತು) ಏನೇನೋ ಮಾತುಗಳನ್ನಾಡುತ್ತಿದ್ದರು.
54. ಗತಕಾಲದ ಅವರ ಕುಲಬಾಂಧವರಿಗೆ ಮಾಡಿದಂತೆ, ಇದೀಗ ಅವರ ಹಾಗೂ ಅವರ ಬಯಕೆಗಳ ನಡುವೆ ತೆರೆಯನ್ನು ಎಳೆದು ಬಿಡಲಾಗುವುದು. ಅವರು ಭಾರೀ ಸಂಶಯದಲ್ಲಿದ್ದರು.