5. ಪ್ರಬಲನೂ ಕರುಣಾಮಯಿಯೂ ಆಗಿರುವವನು ಇದನ್ನು ಇಳಿಸಿಕೊಟ್ಟಿರುವನು –
6. – ಯಾರ ಗತ ಪೀಳಿಗೆಯನ್ನು ಎಚ್ಚರಿಸಲಾಗಿರಲಿಲ್ಲವೋ ಅವರನ್ನು ಎಚ್ಚರಿಸಲಿಕ್ಕಾಗಿ. ಅವರು ಅರಿವಿಲ್ಲದವರು.
7. ಅವರಲ್ಲಿ ಹೆಚ್ಚಿನವರ ಕುರಿತು (ಅಲ್ಲಾಹನ) ಮಾತು ಈಗಾಗಲೇ ಸತ್ಯವಾಗಿದೆ. ಅವರಿನ್ನು ವಿಶ್ವಾಸಿಗಳಾಗುವುದಿಲ್ಲ.
8. ನಾವು ಅವರ ಕೊರಳುಗಳಿಗೆ, ಗಲ್ಲದವರೆಗೂ ಬಿಗಿದಿಡುವ ನೊಗಗಳನ್ನು ಹಾಕಿರುವೆವು. ಇದರಿಂದಾಗಿ ಅವರ ತಲೆಗಳು ಸೆಟೆದುಕೊಂಡಿವೆ.
9. ನಾವು ಅವರ ಮುಂದೆ ಒಂದು ಗೋಡೆಯನ್ನು ಹಾಗೂ ಅವರ ಹಿಂದೆ ಒಂದು ಗೋಡೆಯನ್ನು ನಿರ್ಮಿಸಿರುವೆವು ಮತ್ತು ಅವರನ್ನು ಮುಚ್ಚಿ ಬಿಟ್ಟಿರುವೆವು. ಆದ್ದರಿಂದ ಅವರಿಗೆ ಏನೂ ಕಾಣಿಸುತ್ತಿಲ್ಲ.
10. ನೀವು ಅವರನ್ನು ಎಚ್ಚರಿಸಿದರೂ ಒಂದೇ, ಎಚ್ಚರಿಸದೆ ಬಿಟ್ಟರೂ ಒಂದೇ. ಅವರಂತು ನಂಬುವವರಲ್ಲ.
11. ಉಪದೇಶವನ್ನು ಅನುಸರಿಸುವ ಹಾಗೂ ಕಣ್ಣಾರೆ ಕಾಣದೆಯೇ ಆ ಅಪಾರ ದಯಾಳುವಿಗೆ (ಅಲ್ಲಾಹನಿಗೆ) ಅಂಜುತ್ತಿರುವ ವ್ಯಕ್ತಿಯನ್ನು ಮಾತ್ರ ನೀವು ಎಚ್ಚರಿಸಬಲ್ಲಿರಿ. ಅಂಥವನಿಗೆ ನೀವು ಕ್ಷಮೆ ಹಾಗೂ ಉದಾರ ಪ್ರತಿಫಲದ ಶುಭವಾರ್ತೆ ನೀಡಿರಿ.
12. ಖಂಡಿತವಾಗಿಯೂ ನಾವೇ ಸತ್ತವರನ್ನು ಜೀವಂತಗೊಳಿಸುತ್ತೇವೆ ಮತ್ತು ಅವರು ಮುಂದಕ್ಕೆ ಕಳಿಸಿರುವ ಹಾಗೂ ತಮ್ಮ ಹಿಂದೆ ಬಿಟ್ಟು ಹೋಗಿರುವ ಎಲ್ಲವನ್ನೂ ನಾವು ಒಂದು ಸ್ಪಷ್ಟ ಗ್ರಂಥದಲ್ಲಿ ಎಣಿಸಿಟ್ಟಿರುವೆವು.
13. ನೀವು ಅವರಿಗೆ ಆ ನಾಡಿನವರ ಸಮಾಚಾರವನ್ನು ತಿಳಿಸಿರಿ; ಅವರ ಬಳಿಗೆ ದೂತರು ಬಂದಿದ್ದರು.
14. ನಾವು ಅವರ ಬಳಿಗೆ ಇಬ್ಬರು ದೂತರನ್ನು ಕಳಿಸಿದಾಗ ಅವರಿಬ್ಬರನ್ನೂ ಅವರು ತಿರಸ್ಕರಿಸಿದರು. ಕೊನೆಗೆ ನಾವು ಮೂರನೆಯ ದೂತನ ಮೂಲಕ ಅವರಿಗೆ ಬಲ ಒದಗಿಸಿದೆವು. ‘‘ನಮ್ಮನ್ನು ಖಚಿತವಾಗಿ ನಿಮ್ಮೆಡೆಗೇ ರವಾನಿಸಲಾಗಿದೆ’’ ಎಂದು ಅವರು ಹೇಳಿದರು.
15. ಆಗ ಅವರು (ನಾಡಿನವರು) ಹೇಳಿದರು; ನೀವು ನಮ್ಮಂತಹ ಮಾನವರು ಮಾತ್ರ. ಆ ಪರಮ ದಯಾಮಯನು (ಅಲ್ಲಾಹನು) ಏನನ್ನೂ ಇಳಿಸಿಕೊಟ್ಟಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.
16. ಅವರು (ದೂತರು) ಹೇಳಿದರು; ನಾವು ನಿಮ್ಮೆಡೆಗೆ ಕಳಿಸಲ್ಪಟ್ಟವರು ಎಂಬುದನ್ನು ನಮ್ಮೊಡೆಯನು ಖಚಿತವಾಗಿ ಬಲ್ಲನು.
17. ನಮ್ಮ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ.
18. ಅವರು (ನಾಡಿನವರು) ಹೇಳಿದರು; ನಾವು ನಿಮ್ಮನ್ನು ಕೇವಲ ಅಪಶಕುನಗಳಾಗಿ ಕಂಡಿರುವೆವು. ನೀವು ದೂರ ನಿಲ್ಲದಿದ್ದರೆ (ಸತ್ಯಪ್ರಚಾರವನ್ನು ನಿಲ್ಲಿಸದಿದ್ದರೆ) ನಾವು ನಿಮ್ಮನ್ನು ಕಲ್ಲೆಸೆದು ಕೊಲ್ಲುವೆವು ಮತ್ತು ಖಂಡಿತವಾಗಿಯೂ ನಮ್ಮ ಕಡೆಯಿಂದ ನಿಮಗೆ ಕಠಿಣ ಶಿಕ್ಷೆ ಸಿಗುವುದು.
19. ಆಗ ಅವರು (ದೂತರು) ಹೇಳಿದರು; ನಿಮ್ಮ ಅಪಶಕುನವೆಲ್ಲಾ ನಿಮ್ಮ ಜೊತೆಗೇ ಇದೆ. ನಿಮಗೆ ಬೋಧನೆ ತಲುಪಿದೆಯಲ್ಲವೇ? ನಿಜವಾಗಿ ನೀವು ಎಲ್ಲೆ ಮೀರುವವರಾಗಿದ್ದೀರಿ.
20. ನಗರದ ಮೂಲೆಯಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದನು; ನನ್ನ ಜನಾಂಗದವರೇ, ದೇವದೂತರನ್ನು ಅನುಸರಿಸಿರಿ.
21. ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸದ ಹಾಗೂ ಮಾರ್ಗದರ್ಶನ ಪಡೆದಿರುವ, ಅವರನ್ನು ಅನುಸರಿಸಿರಿ.
ಕಾಂಡ – 23
22. ನನ್ನನ್ನು ರೂಪಿಸಿದಾತನನ್ನು ನಾನೇಕೆ ಪೂಜಿಸಬಾರದು? ಕೊನೆಗಂತು, ನಿಮ್ಮೆಲ್ಲರನ್ನೂ ಅವನ ಕಡೆಗೇ ಮರಳಿಸಲಾಗುವುದು.
23. ನಾನೇನು, ಅವನ ಹೊರತು ಇತರ ಯಾರನ್ನಾದರೂ ದೇವರಾಗಿಸಿಕೊಳ್ಳಬೇಕೆ? ನಿಜವಾಗಿ, ಆ ಪರಮ ದಯಾಳು ನನಗೇನಾದರೂ ಹಾನಿಯನ್ನುಂಟು ಮಾಡ ಬಯಸಿದರೆ, ಅವರ (ಅನ್ಯರ) ಶಿಫಾರಸ್ಸು ನನ್ನ ಯಾವ ಕೆಲಸಕ್ಕೂ ಬಾರದು ಮತ್ತು ನನ್ನನ್ನು ರಕ್ಷಿಸಲು ಅವರಿಗೆ ಸಾಧ್ಯವಾಗದು.
24. ಹಾಗೆ ಮಾಡಿದರೆ (ಅನ್ಯರನ್ನು ಪೂಜಿಸಿದರೆ), ನಾನು ಸ್ಪಷ್ಟ ದಾರಿಗೇಡಿತನದಲ್ಲಿ ಇದ್ದಂತಾಗುವುದು.
25. ನೀವು ನನ್ನ ಮಾತನ್ನು ಕೇಳಿರಿ ನಾನು ನಿಮ್ಮ ನೈಜ ಒಡೆಯನನ್ನು ನಂಬಿದ್ದೇನೆ.
26. (ಅವರು ಆತನನ್ನು ಕೊಂದಾಗ) ‘ಸ್ವರ್ಗವನ್ನು ಪ್ರವೇಶಿಸು’ ಎಂದು ಅವನೊಡನೆ ಹೇಳಲಾಯಿತು. ಅವನು ಹೇಳಿದನು; ‘‘ಅಯ್ಯೋ, ನನ್ನ ಜನಾಂಗದವರಿಗೆ (ಇದು) ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!’’
27. ‘‘ನನ್ನ ಒಡೆಯನು ನನ್ನನ್ನು ಕ್ಷಮಿಸಿರುವನು ಮತ್ತು ನನ್ನನ್ನು ಗೌರವಾನ್ವಿತರ ಸಾಲಿಗೆ ಸೇರಿಸಿರುವನೆಂಬುದು (ಅವರಿಗೆ ತಿಳಿದಿರಬೇಕಿತ್ತು)’’.
28. ಆತನ (ಮರಣದ ಬಳಿಕ) ನಾವೇನೂ ಅವನ ಜನಾಂಗದ ವಿರುದ್ಧ ಆಕಾಶದಿಂದ ಯಾವುದೇ ಪಡೆಯನ್ನು ಇಳಿಸಲಿಲ್ಲ. ಇಳಿಸುವ ಅಗತ್ಯವೂ ನಮಗಿರಲಿಲ್ಲ.
29. ಅದು (ಅವರ ಶಿಕ್ಷೆ) ಕೇವಲ ಒಂದು ಭೀಕರ ಬಿರುಗಾಳಿಯಾಗಿತ್ತು. ಅಷ್ಟಕ್ಕೇ ಅವರು ಆರಿ ಹೋದರು.
30. ಎಷ್ಟೊಂದು ಶೋಚನೀಯವಾಗಿದೆ, ದಾಸರ ಸ್ಥಿತಿ! ಅವರ ಬಳಿಗೆ ಬಂದ ಯಾವ ದೂತನನ್ನೂ ಅವರು ಗೇಲಿ ಮಾಡದೆ ಬಿಟ್ಟದ್ದಿಲ್ಲ.
31. ಅವರೇನು ನೋಡಿಲ್ಲವೇ, ಅವರಿಗಿಂತ ಹಿಂದೆ ಅದೆಷ್ಟು ನಾಡುಗಳನ್ನು ನಾವು ನಾಶಗೊಳಿಸಿ ಬಿಟ್ಟಿದ್ದೇವೆಂದು? ಅವರೆಂದೂ ಅವರ ಬಳಿಗೆ ಮರಳಿ ಬರಲಾರರು.
32. ಅವರಲ್ಲಿನ ಪ್ರತಿಯೊಬ್ಬರನ್ನೂ ನಮ್ಮ ಬಳಿ ಒಟ್ಟಾಗಿ ಹಾಜರುಪಡಿಸಲಾಗುವುದು.
33. ನಿರ್ಜೀವ ಭೂಮಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದನ್ನು ಜೀವಂತಗೊಳಿಸಿದೆವು ಹಾಗೂ ಅದರಿಂದ ಧಾನ್ಯಗಳನ್ನು ಉತ್ಪಾದಿಸಿದೆವು. ಅವುಗಳನ್ನೇ ಅವರು ತಿನ್ನುತ್ತಾರೆ.
34. ಮತ್ತು ನಾವು ಅದರಲ್ಲಿ ಖರ್ಜೂರದ ಹಾಗೂ ದ್ರಾಕ್ಷಿಯ ತೋಟಗಳನ್ನು ಬೆಳೆಸಿದೆವು ಮತ್ತು ಅದರಲ್ಲಿ ನದಿಗಳನ್ನು ಹರಿಸಿದೆವು.
35. ಅವರು ಅದರ ಫಲಗಳನ್ನು ಉಣ್ಣಲೆಂದು (ನಾವು ಇದನ್ನೆಲ್ಲಾ ಮಾಡಿರುವೆವು). ಇದಾವುದನ್ನೂ ಅವರ ಕೈಗಳು ನಿರ್ಮಿಸಿಲ್ಲ. ಇಷ್ಟಾಗಿಯೂ ಅವರೇನು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
36. ಭೂಮಿಯು ಬೆಳೆಯುವ ಎಲ್ಲ ವಸ್ತುಗಳನ್ನೂ, ಸ್ವತಃ ಅವರನ್ನೂ, ಅವರಿಗೆ ತಿಳಿದಿಲ್ಲದ (ಹಲವು) ಜೀವಿಗಳನ್ನೂ – ಎಲ್ಲವನ್ನೂ ಜೋಡಿಗಳಾಗಿ ಸೃಷ್ಟಿಸಿದವನು (ಅಲ್ಲಾಹನು), ಪಾವನನು.
37. ರಾತ್ರಿಯು ಅವರ ಪಾಲಿಗೆ ಪುರಾವೆಯಾಗಿದೆ. ನಾವು ಅದರಿಂದ ಹಗಲನ್ನು ಇಳಿಸಿಬಿಟ್ಟಾಗ, ಅವರು ಕತ್ತಲನ್ನು ಪಡೆಯುತ್ತಾರೆ.
38. ಮತ್ತು ಸೂರ್ಯನು, ತನಗೆ ನಿಗದಿ ಪಡಿಸಲಾಗಿರುವ ದಾರಿಯಲ್ಲಿ ಚಲಿಸುತ್ತಿರುತ್ತಾನೆ. ಇದು ಆ ಪ್ರಚಂಡ, ಸರ್ವಜ್ಞನು (ಅಲ್ಲಾಹನು) ಸ್ಥಾಪಿಸಿರುವ ವ್ಯವಸ್ಥೆ.
39. ಇನ್ನು ಚಂದ್ರನಿಗೆ ನಾವು ಕೆಲವು ಹಂತಗಳನ್ನು ನಿಗದಿ ಪಡಿಸಿರುವೆವು. ಎಷ್ಟೆಂದರೆ ಅದು (ಬಾಲಚಂದ್ರ) ಖರ್ಜೂರದ ಹಳೆಯ ಗೆಲ್ಲಿನಂತಾಗಿ ಬಿಡುತ್ತದೆ.
40. ಚಂದ್ರನನ್ನು ಹಿಡಿಯಲು ಸೂರ್ಯನಿಗೆ ಸಾಧ್ಯವಿಲ್ಲ, ಹಗಲನ್ನು ಮೀರಿ ಬರಲು ರಾತ್ರಿಗೂ ಸಾಧ್ಯವಿಲ್ಲ. ಎಲ್ಲವೂ ಒಂದು ವೃತ್ತದಲ್ಲಿ ಚಲಿಸುತ್ತಿವೆ.
41. ನಾವು ಅವರ ಸಂತತಿಯನ್ನು ತುಂಬಿದ ಹಡಗಿಗೆ ಹತ್ತಿಸಿದ್ದು, ಅವರ ಪಾಲಿಗೆ ಪುರಾವೆಯಾಗಿದೆ.
42. ಮತ್ತು ನಾವು ಅವರಿಗಾಗಿ, ಅವರು ಸವಾರಿ ಮಾಡುವ ಇನ್ನೂ ಹಲವು ವಸ್ತುಗಳನ್ನು ಸೃಷ್ಟಿಸಿರುವುದು (ಪುರಾವೆಯಾಗಿದೆ).
43. ನಾವು ಬಯಸಿದ್ದರೆ ಅವರನ್ನು ಮುಳುಗಿಸಿ ಬಿಡಬಹುದು. ಆಗ ಅವರ ಮೊರೆ ಕೇಳುವವರು ಯಾರೂ ಇರಲಾರರು ಮತ್ತು ಅವರು ರಕ್ಷಣೆ ಪಡೆಯಲಾರರು.
44. ಆದರೆ, ಕೇವಲ ಒಂದು ನಿರ್ದಿಷ್ಟ ಕಾಲದವರೆಗೆ ಅವರು ನಮ್ಮ ಅನುಗ್ರಹದ ಫಲಾನುಭವಿಗಳಾಗಿರುತ್ತಾರೆ.
45. ನೀವು (ಅಲ್ಲಾಹನ) ಕೃಪೆಗೆ ಪಾತ್ರರಾಗಲು, ನಿಮ್ಮ ಮುಂದಿನ ಹಾಗೂ ನಿಮ್ಮ ಹಿಂದಿನ (ಕರ್ಮಗಳ) ಕುರಿತು ಎಚ್ಚರವಾಗಿರಿ ಎಂದು ಅವರೊಡನೆ ಹೇಳಿದಾಗಲೆಲ್ಲಾ,
46. ಮತ್ತು ತಮ್ಮ ಒಡೆಯನ ಪುರಾವೆಗಳ ಪೈಕಿ ಯಾವುದೇ ಪುರಾವೆ ಅವರ ಬಳಿಗೆ ಬಂದಾಗಲೆಲ್ಲಾ, ಅವರು ಅದನ್ನು ಕಡೆಗಣಿಸಿದ್ದಾರೆ.
47. ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ, (ಸತ್ಕಾರ್ಯಕ್ಕೆ) ಖರ್ಚು ಮಾಡಿರಿ ಎಂದು ತಮ್ಮೊಡನೆ ಹೇಳಿದಾಗಲೆಲ್ಲಾ (ಅವರು ಕಡೆಗಣಿಸಿದ್ದಾರೆ). ಧಿಕ್ಕಾರಿಗಳು, ವಿಶ್ವಾಸಿಗಳೊಡನೆ ಹೇಳುತ್ತಾರೆ: ಅಲ್ಲಾಹನು ಇಚ್ಛಿಸಿದ್ದರೆ ಸ್ವತಃ ಅವನೇ ಯಾರಿಗೆ ಉಣಿಸಿ ಬಿಡುತ್ತಿದ್ದನೋ, ಅಂಥವನಿಗೇನು ನಾವು ಉಣಿಸಬೇಕೇ? ನೀವಂತು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದೀರಿ.
48. ಮತ್ತು ಅವರು, ನೀವು ಸತ್ಯವಂತರಾಗಿದ್ದರೆ, ಆ ವಾಗ್ದಾನ (ಪುನರುತ್ಥಾನ) ಈಡೇರುವುದು ಯಾವಾಗ (ಎಂಬುದನ್ನು ತಿಳಿಸಿ)? ಎಂದು ಕೇಳುತ್ತಾರೆ.
49. ನಿಜವಾಗಿ ಅವರು ಯಾವುದಕ್ಕಾಗಿ ಕಾಯುತ್ತಿರುವರೋ ಅದು ಹಠಾತ್ತನೆ ಬಂದೆರಗುವ ಒಂದು ಸಿಡಿಲು ಮಾತ್ರವಾಗಿರುವುದು – ಅವರು ಜಗಳಾಡುತ್ತಿರುವಾಗಲೇ ಅದು ಅವರನ್ನು ಹಿಡಿದುಕೊಳ್ಳುವುದು.
50. ಉಯಿಲನ್ನು ಉಪದೇಶಿಸಲಿಕ್ಕಾಗಲಿ, ತಮ್ಮ ಮನೆಯವರ ಬಳಿಗೆ ಮರಳಿ ಹೋಗಲಿಕ್ಕಾಗಲಿ ಅವರಿಗೆ ಸಾಧ್ಯವಾಗದು.
51. ಮತ್ತು (ಇನ್ನೊಮ್ಮೆ) ಕಹಳೆಯನ್ನು ಊದಲಾದಾಗ ಅವರೆಲ್ಲರೂ ಗೋರಿಗಳಿಂದ ಹಠಾತ್ತನೆ ಎದ್ದು ತಮ್ಮ ಒಡೆಯನೆಡೆಗೆ ಧಾವಿಸುವರು.
52. ಅವರು ಹೇಳುವರು: ಅಯ್ಯೋ ನಮ್ಮ ದುಸ್ಥಿತಿ! ನಮ್ಮನ್ನು ನಮ್ಮ ಗೋರಿಗಳಿಂದ ಎಬ್ಬಿಸಿದವರು ಯಾರು? ನಿಜವಾಗಿ, ಆ ಪರಮ ದಯಾಮಯನು ವಾಗ್ದಾನ ಮಾಡಿದ್ದು ಇದನ್ನೇ. ದೇವದೂತರು ಸತ್ಯವನ್ನೆ ಹೇಳಿದ್ದರು.
53. ಅದು ಕೇವಲ ಒಂದು ಸಿಡಿಲಾಗಿರುವುದು. ಅಷ್ಟರಲ್ಲೇ ಅವರೆಲ್ಲರನ್ನೂ ನಮ್ಮ ಮುಂದೆ ಹಾಜರು ಪಡಿಸಲಾಗುವುದು.
54. ಇಂದು ಯಾರ ಮೇಲೂ ಕಿಂಚಿತ್ತೂ ಅನ್ಯಾಯವಾಗದು ಮತ್ತು ನಿಮಗೆ, ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲದ ಹೊರತು ಬೇರೇನೂ ಸಿಗದು.
55. ಸ್ವರ್ಗವಾಸಿಗಳು ಅಂದು ಖಂಡಿತ ಮೋಜಿನಲ್ಲಿ ನಿರತರಾಗಿರುವರು.
56. ಅವರು ಮತ್ತವರ ಜೀವನ ಸಂಗಾತಿಗಳು ನೆರಳುಗಳಲ್ಲಿ ಸುಖವಾಗಿ ಒರಗಿ ಕೊಂಡಿರುವರು.
57. ಅಲ್ಲಿ ಅವರಿಗಾಗಿ ವಿವಿಧ ಬಗೆಯ ಹಣ್ಣು ಹಂಪಲುಗಳಿರುವವು ಮತ್ತು ಅವರು ಅಪೇಕ್ಷಿಸಿದ್ದೆಲ್ಲವೂ ಅವರಿಗೆ ಸಿಗುವುದು.
58. ಸಲಾಮ್ (ಶಾಂತಿ) ಎಂಬ, ಕರುಣಾಳು ಒಡೆಯನ ಮಾತು (ಅಲ್ಲಿ ಮೊಳಗುತ್ತಿರುವುದು).
59. ಅಪರಾಧಿಗಳೇ, ಇಂದು ನೀವು ಪ್ರತ್ಯೇಕವಾಗಿರಿ.
60. ಆದಮರ ಸಂತತಿಗಳೇ, ನಾನು ನಿಮಗೆ ಆದೇಶಿಸಿರಲಿಲ್ಲವೇ, ನೀವು ಶೈತಾನನ ಆರಾಧಕರಾಗಬೇಡಿ, ಅವನು ಖಂಡಿತ ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆಂದು?
61. ಮತ್ತು ನೀವು ನನ್ನೊಬ್ಬನನ್ನೇ ಆರಾಧಿಸಬೇಕು, ಅದುವೇ ನೇರ ಮಾರ್ಗವೆಂದು?
62. ಅವನು ನಿಮ್ಮಲ್ಲಿ ಬಹು ಮಂದಿಯನ್ನು ದಾರಿಗೆಡಿಸಿದ್ದಾನೆ. ನೀವೇನು ಬುದ್ಧಿಯನ್ನು ಬಳಸಿರಲಿಲ್ಲವೇ ?
63. ಇದುವೇ ನಿಮಗೆ ವಾಗ್ದಾನ ಮಾಡಲಾಗಿದ್ದ ನರಕ.
64. ನೀವು (ಸತ್ಯವನ್ನು) ಧಿಕ್ಕರಿಸಿದ್ದರ ಪ್ರತಿಫಲವಾಗಿ ಇಂದು ಇದರೊಳಗೆ ಪ್ರವೇಶಿಸಿರಿ.
65. ಇಂದು ನಾವು ಅವರ (ಧಿಕ್ಕಾರಿಗಳ) ಬಾಯಿಗಳಿಗೆ ಮುದ್ರೆ ಜಡಿದಿರುವೆವು. ನಮ್ಮೊಡನೆ ಅವರ ಕೈಗಳು ಮಾತನಾಡುವವು ಮತ್ತು ಅವರು ಏನೆಲ್ಲಾ ಮಾಡಿದ್ದರೆಂದು ಅವರ ಕಾಲುಗಳು ಸಾಕ್ಷಿ ಹೇಳುವವು.
66. ನಾವು ಬಯಸಿದರೆ ಅವರ ಕಣ್ಣುಗಳನ್ನು ನುಚ್ಚು ನೂರುಗೊಳಿಸಿ ಬಿಡಬಲ್ಲೆವು. ಆ ಬಳಿಕ ಅವರು ದಾರಿಯೆಡೆಗೆ ಧಾವಿಸಲಿ. ಅವರು ಏನನ್ನು ತಾನೇ ಕಾಣಬಲ್ಲರು?
67. ನಾವು ಬಯಸಿದರೆ, ಅವರು ಇರುವಲ್ಲೇ ಅವರ ರೂಪಗಳನ್ನು ವಿಕೃತಗೊಳಿಸಿ ಬಿಡಬಲ್ಲೆವು – ಆ ಬಳಿಕ ಅವರಿಗೆ ಮುಂದೆ ಹೋಗಲಿಕ್ಕೂ ಸಾಧ್ಯವಾಗದು, ಮರಳಲಿಕ್ಕೂ ಆಗದು.
68. ನಾವು ಯಾರಿಗೆ ಧೀರ್ಘ ಆಯುಷ್ಯವನ್ನು ಕೊಡುತ್ತೇವೋ, ಅವರನ್ನು ರಚನೆಯಲ್ಲಿ (ದುರ್ಬಲ ಸ್ಥಿತಿಗೆ) ಮರಳಿಸಿ ಬಿಡುತ್ತೇವೆ. ಅವರೇನು ಬುದ್ದಿಯನ್ನು ಬಳಸುವುದಿಲ್ಲವೇ?
69. ನಾವು ಅವರಿಗೆ (ದೂತರಿಗೆ) ಕಾವ್ಯವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶವಾಗಿದೆ ಮತ್ತು ಸ್ಪಷ್ಟವಾದ ಕುರ್ಆನ್ ಆಗಿದೆ.
70. ಜೀವಂತವಿರುವ ಎಲ್ಲರನ್ನೂ ಅವರು (ದೂತರು) ಎಚ್ಚರಿಸಬೇಕೆಂದು ಹಾಗೂ ಧಿಕ್ಕಾರಿಗಳ ವಿರುದ್ಧ ಸಾಕ್ಷವು ಪೂರ್ತಿಯಾಗಲೆಂದು (ನಾವು ಇದನ್ನು ಕಳಿಸಿರುವೆವು)
71. ಅವರು ನೋಡುತ್ತಿಲ್ಲವೇ, ಅವರು ಮಾಲಕರಾಗಿರುವ ಜಾನುವಾರುಗಳನ್ನು ನಾವು ಅವರಿಗಾಗಿ ನಮ್ಮ ಕೈಯಾರೆ ಸೃಷ್ಟಿಸಿರುವೆವು.
72. ನಾವು ಅವುಗಳನ್ನು ಅವರಿಗೆ ವಿಧೇಯಗೊಳಿಸಿರುವೆವು. ಅವರು ಆ ಪೈಕಿ ಕೆಲವನ್ನು ಸವಾರಿಗಾಗಿ ಬಳಸಿದರೆ, ಕೆಲವನ್ನು ಆಹಾರವಾಗಿ ಬಳಸುತ್ತಾರೆ.
73. ಅವುಗಳಲ್ಲಿ ಅವರಿಗೆ ಹಲವು ಲಾಭಗಳಿವೆ, ಕುಡಿಯುವ ವಸ್ತುಗಳೂ ಇವೆ. ಇಷ್ಟಿದ್ದೂ ಅವರು ಕೃತಜ್ಞತೆ ತೋರುವುದಿಲ್ಲವೇ?
74. ಅವರು ಅಲ್ಲಾಹನ ಹೊರತು ಇತರರಿಂದ ತಮಗೆ ನೆರವು ದೊರಕೀತೆಂದು ಅವರನ್ನು ತಮ್ಮ ದೇವರಾಗಿಸಿಕೊಂಡಿದ್ದಾರೆ.
75. ಅವರು ಇವರಿಗೆ ನೆರವಾಗಲು ಶಕ್ತರಲ್ಲ. ಆದರೂ, ಇವರು ಅವರ ಮುಂದೆ ದಂಡುಗಳಂತೆ ಹಾಜರಾಗುತ್ತಾರೆ.
76. (ದೂತರೇ,) ಅವರ ಮಾತುಗಳಿಂದ ನೀವು ದುಃಖಿತರಾಗಬೇಡಿ. ಅವರು ಬಚ್ಚಿಡುವ ಹಾಗೂ ಪ್ರಕಟ ಪಡಿಸುವ ಎಲ್ಲವನ್ನೂ ನಾವು ಬಲ್ಲೆವು.
77. ಮನುಷ್ಯನು ಕಂಡಿಲ್ಲವೇ, ನಾವು ಅವನನ್ನು ವೀರ್ಯದಿಂದ ಸೃಷ್ಟಿಸಿರುವುದನ್ನು? ಇಷ್ಟಾಗಿಯೂ ಅವನು ಸ್ಪಷ್ಟ ಜಗಳಗಂಟನಾಗಿ ಬಿಟ್ಟಿರುವನು.
78. ಅವನು ನಮ್ಮ ಕುರಿತು (ಏನೇನೋ) ಹೋಲಿಕೆಗಳನ್ನು ಕಟ್ಟುತ್ತಾನೆ. ನಿಜವಾಗಿ ಅವನು ತನ್ನ ಜನನವನ್ನು ಮರೆತಿದ್ದಾನೆ. ಎಲುಬುಗಳು ಕರಗಿ ಹೋದ ಬಳಿಕ ಅವುಗಳನ್ನು ಯಾರು ತಾನೆ ಜೀವಂತಗೊಳಿಸಬಲ್ಲರು? ಎಂದು ಅವನು ಪ್ರಶ್ನಿಸುತ್ತಾನೆ.
79. ಹೇಳಿರಿ; ಅವುಗಳನ್ನು ಮೊದಲ ಬಾರಿ ಸೃಷ್ಟಿಸಿದವನೇ ಅವುಗಳನ್ನು ಮತ್ತೆ ಸೃಷ್ಟಿಸುವನು. ಅವನು ಎಲ್ಲ ಬಗೆಯ ಸೃಷ್ಟಿ ಕಾರ್ಯವನ್ನು ಬಲ್ಲವನಾಗಿದ್ದಾನೆ.