37. As Safat

37. ಅಸ್ಸಾಫ್ಫಾತ್ (ಸಾಲುಗಟ್ಟಿರುವವರು)

ವಚನಗಳು – 182, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಶಿಸ್ತು ಬದ್ಧವಾಗಿ ಸಾಲುಗಟ್ಟಿರುವವರ (ಮಲಕ್‌ಗಳ) ಆಣೆ.

2. ಉಗ್ರವಾಗಿ ಗದರಿಸುವವರಾಣೆ.

3. ಉಪದೇಶವನ್ನು ಓದುವವರಾಣೆ.

4. ನಿಮ್ಮ ಆರಾಧ್ಯನು ಖಂಡಿತ ಒಬ್ಬನೇ.

5. ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯ ಮತ್ತು ಪೂರ್ವಗಳ ಒಡೆಯನಾಗಿದ್ದಾನೆ.

6. ಖಂಡಿತವಾಗಿಯೂ ನಾವು ಭೂಲೋಕದ ಆಕಾಶವನ್ನು ನಕ್ಷತ್ರಗಳ ಸೊಬಗಿನಿಂದ ಅಲಂಕರಿಸಿರುವೆವು.

7. ಮತ್ತು ನಾವು ಅದನ್ನು ಪ್ರತಿಯೊಬ್ಬ ವಿದ್ರೋಹಿ ಶೈತಾನನಿಂದ ರಕ್ಷಿಸಿಟ್ಟಿರುವೆವು.

8. ಮೇಲಿನ ಲೋಕದ ಏನನ್ನೂ ಕೇಳಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಎಲ್ಲ ಕಡೆಯಿಂದಲೂ ಅವರ ಮೇಲೆ ಪ್ರಹಾರವಾಗುತ್ತದೆ.

9. ಅವರನ್ನು ಬೆನ್ನಟ್ಟಿ ಹಿಮ್ಮೆಟ್ಟಿಸಲಾಗುತ್ತದೆ. ಅಲ್ಲದೆ ಅವರಿಗೆ ಶಾಶ್ವತ ಶಿಕ್ಷೆ ಇದೆ.

10. ಇಷ್ಟಾಗಿಯೂ ಕಿತ್ತುಕೊಂಡು ಓಡಿದವನು – ಒಂದು ಉರಿಯುವ ಜ್ವಾಲೆಯು ಅವನ ಬೆನ್ನು ಹಿಡಿಯುತ್ತದೆ.

11. ನೀವು ಅವರೊಡನೆ ಕೇಳಿ ನೋಡಿರಿ; ಅವರನ್ನು ಸೃಷ್ಟಿಸುವುದು ಹೆಚ್ಚು ಕಷ್ಟವೋ ಅಥವಾ ನಮ್ಮ (ಇತರ) ಸೃಷ್ಟಿಗಳನ್ನೋ? ಅವರನ್ನಂತು ನಾವು ಅಂಟುವ ಮಣ್ಣಿನಿಂದ ಸೃಷ್ಟಿಸಿರುವೆವು.

12. (ದೂತರೇ,) ನೀವು (ಅಲ್ಲಾಹನ ಮಹಿಮೆಯ ಕುರಿತು) ಅಚ್ಚರಿ ಪಡುತ್ತೀರಿ ಮತ್ತು ಅವರು ಗೇಲಿ ಮಾಡುತ್ತಾರೆ.

13. ಅವರಿಗೆ ಉಪದೇಶಿಸಲಾದಾಗ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ.

14. ಅವರು ಯಾವುದಾದರೂ ಪುರಾವೆಯನ್ನು ಕಂಡಾಗ, ಅದನ್ನು ಗೇಲಿ ಮಾಡುತ್ತಾರೆ.

15. ಮತ್ತು ಅವರು, ಇದು ಸ್ಪಷ್ಟವಾದ ಜಾದೂಗಾರಿಕೆಯೇ ಹೊರತು ಬೇರೇನೂ ಅಲ್ಲ ಎಂದು ಬಿಡುತ್ತಾರೆ.

16. ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಪುನಃ ಜೀವಂತ ಗೊಳಿಸಲಾಗುವುದೇ?

17. ಅಥವಾ, ನಮ್ಮ ತಾತ ಮುತ್ತಾತಂದಿರನ್ನು ಕೂಡಾ (ಜೀವಂತಗೊಳಿಸಲಾಗುವುದೇ? ಎಂದು ಅವರು ಪ್ರಶ್ನಿಸುತ್ತಾರೆ).

18. ಹೇಳಿರಿ, ಹೌದು, ಮತ್ತು ನೀವು ಅಪಮಾನಿತರಾಗುವಿರಿ.

19. ಅದು (ಲೋಕಾಂತ್ಯದ ಕಹಳೆ) ಕೇವಲ ಒಂದು ಎಚ್ಚರಿಕೆಯ ಧ್ವನಿಯಾಗಿರುವುದು. ಅಷ್ಟರಲ್ಲೆ ಅವರು ದಂಗಾಗಿ ನೋಡ ತೊಡಗುವರು.

20. ಮತ್ತು ಅವರು, ‘‘ಅಯ್ಯೋ ನಮ್ಮ ದುಸ್ಥಿತಿ! ಇದುವೇ ಆ ಪ್ರತಿಫಲದ ದಿನ’’ ಎನ್ನುವರು.

21. ಇದುವೇ, ನೀವು ನಿರಾಕರಿಸುತ್ತಿದ್ದ ತೀರ್ಮಾನದ ದಿನ .

22. (ಅಂದು ಮಲಕ್‌ಗಳೊಡನೆ ಹೇಳಲಾಗುವುದು;) ‘‘ಅಕ್ರಮಿಗಳನ್ನು, ಅವರ ಜೊತೆಗಾರರನ್ನು ಮತ್ತು ಅವರು (ಅಲ್ಲಾಹನ ಹೊರತು) ಯಾರನ್ನೆಲ್ಲಾ ಆರಾಧಿಸುತ್ತಿದ್ದರೋ ಅವರನ್ನೆಲ್ಲಾ ಒಟ್ಟು ಸೇರಿಸಿರಿ‘‘ –

23. ‘‘ – ಅಲ್ಲಾಹನ ಹೊರತು. ಮತ್ತು ನೀವು ಅವರಿಗೆ ನರಕದ ದಾರಿ ತೋರಿಸಿರಿ.

24. ಮತ್ತು ಅವರನ್ನು ತಡೆಯಿರಿ. ಖಂಡಿತವಾಗಿಯೂ ಅವರ ವಿಚಾರಣೆ ನಡೆಯಬೇಕಾಗಿದೆ.

25. ನಿಮಗೇನಾಗಿದೆ? ನೀವೇಕೆ ಪರಸ್ಪರ ನೆರವಾಗುತ್ತಿಲ್ಲ?

26. ನಿಜವಾಗಿ, ಇಂದು ಅವರು ಸಂಪೂರ್ಣ ಶರಣಾಗಿ ಬಿಟ್ಟಿದ್ದಾರೆ.

27. (ಅಂದು) ಅವರಲ್ಲಿ ಕೆಲವರು ಮತ್ತೆ ಕೆಲವರೆಡೆಗೆ ತಿರುಗಿ ಪ್ರಶ್ನೆಗಳನ್ನು ಕೇಳುವರು.

28. (ಅವರು ತಮ್ಮ ನಾಯಕರೊಡನೆ) ‘‘ನೀವು ಬಲ ಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ (ಸತ್ಯದಿಂದ ನಮ್ಮನ್ನು ತಡೆಯುತ್ತಿದ್ದಿರಿ)’’ ಎನ್ನುವರು.

29. ಅವರು (ನಾಯಕರು) ಹೇಳುವರು; ‘‘ನಿಜವಾಗಿ, ನೀವು ಸತ್ಯವನ್ನು ನಂಬುವವರೇ ಆಗಿರಲಿಲ್ಲ’’.

30. ‘‘ನಿಮ್ಮ ಮೇಲೆ ನಮಗೆ ಅಧಿಕಾರವೇನೂ ಇರಲಿಲ್ಲ. ನಿಜವಾಗಿ ನೀವೇ ವಿದ್ರೋಹಿ ಪಂಗಡವಾಗಿದ್ದಿರಿ’’.

31. ‘‘ಇದೀಗ ನಮ್ಮ ಕುರಿತು ನಮ್ಮ ಒಡೆಯನ ಮಾತು ಸತ್ಯವಾಗಿ ಬಿಟ್ಟಿದೆ. ನಾವೀಗ (ಶಿಕ್ಷೆಯನ್ನು) ಖಂಡಿತ ಸವಿಯಲಿದ್ದೇವೆ’’.

32. ‘‘ನಾವು ನಿಮ್ಮನ್ನು ದಾರಿಗೆಡಿಸಿದ್ದು ಮಾತ್ರವಲ್ಲ, ಸ್ವತಃ ನಾವೇ ದಾರಿಗೆಟ್ಟಿದ್ದೆವು’’.

33. ಕೊನೆಗೆ, ಅವರೆಲ್ಲರೂ ಜೊತೆಯಾಗಿಯೇ ಶಿಕ್ಷೆ ಅನುಭವಿಸುವರು.

34. ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ.

35. ಅಲ್ಲಾಹನ ಹೊರತು ಬೇರಾರೂ ಪೂಜಾರ್ಹರಲ್ಲ ಎಂದು ಅವರೊಡನೆ ಹೇಳಲಾದಾಗ ಅವರು ಅಹಂಕಾರ ತೋರಿದ್ದರು.

36. ಮತ್ತು ‘‘ನಾವೇನು ಒಬ್ಬ ಹುಚ್ಚು ಪೀಡಿತ ಕವಿಗಾಗಿ ನಮ್ಮ ದೇವರುಗಳನ್ನು ಬಿಟ್ಟು ಬಿಡಬೇಕೇ?’’ ಎಂದು ಅವರು ಕೆೇಳುತ್ತಿದ್ದರು.

37. ನಿಜವಾಗಿ ಅವರು (ದೇವದೂತರು), ಸತ್ಯದೊಂದಿಗೆ ಬಂದಿರುತ್ತಾರೆ ಮತ್ತು ಅವರು (ಹಿಂದಿನ) ದೇವದೂತರುಗಳನ್ನು ಸಮರ್ಥಿಸುತ್ತಾರೆ.

38. ನೀವು ಖಂಡಿತ ಯಾತನಾಮಯ ಶಿಕ್ಷೆಯನ್ನು ಸವಿಯುವಿರಿ.

39. ಮತ್ತು ನಿಮಗೆ ನೀವೆಸಗುತ್ತಿದ್ದ ಕರ್ಮಗಳ ಫಲವಷ್ಟೇ ಸಿಗಲಿದೆ.

40. ಅಲ್ಲಾಹನ ಆಯ್ದ ದಾಸರ ಹೊರತು.

41. ಅವರಿಗಾಗಿ ನಿರ್ದಿಷ್ಟ ಆಹಾರವಿದೆ,

42. ಹಣ್ಣುಗಳೂ ಇವೆ ಮತ್ತು ಅವರು ಗೌರವಾನ್ವಿತರಾಗಿರುವರು,

43. ಕೊಡುಗೆಗಳು ತುಂಬಿರುವ ಸ್ವರ್ಗ ತೋಟಗಳಲ್ಲಿ,

44. ಎದುರು ಬದಿರಾಗಿರುವ ಆಸನಗಳಲ್ಲಿ,

45. ಹರಿಯುವ ಚಿಲುಮೆಗಳ ಪಾನೀಯಗಳನ್ನು ಅವರ ಸುತ್ತ ಒಯ್ಯಲಾಗುವುದು.

46. ಅವು ಶುಭ್ರವಾಗಿದ್ದು, ಕುಡಿಯುವವರಿಗೆ ರುಚಿಕರವಾಗಿರುವವು.

47. ಅದರಿಂದ, ಯಾವುದೇ ಸಂಕಟವಾಗದು ಮತ್ತು ಅವರು ಮದ ಮತ್ತರಾಗಲಾರರು.

48. ಅವರ ಬಳಿ ದೃಷ್ಟಿ ತಗ್ಗಿಸಿರುವ, ವಿಶಾಲ ಕಣ್ಣಿನವರು (ಸೇವಕಿಯರು) ಇರುವರು.

49. ಅವರು, ಅಡಗಿಸಿಟ್ಟ ಮೊಟ್ಟೆಗಳಂತೆ (ಶುಭ್ರ ಹಾಗೂ ನಿರ್ಮಲರಾಗಿ) ಇರುವರು.

50. ಅವರು (ಸ್ವರ್ಗವಾಸಿಗಳು) ಎದುರು ಬದುರಾಗಿ ಪರಸ್ಪರರೊಡನೆ ವಿಚಾರಿಸುವರು.

51. ಅವರಲ್ಲೊಬ್ಬನು ಹೇಳುವನು; ನನಗೊಬ್ಬ ಸಂಗಾತಿ ಇದ್ದನು.

52. ಅವನು ನನ್ನೊಡನೆ ಹೇಳುತ್ತಿದ್ದನು; ‘‘ನೀನೇನು (ಪರಲೋಕವನ್ನು) ನಂಬುವವನಾಗಿರುವೆಯಾ?’’

53. ‘‘ನಾವು ಸತ್ತು ಕೇವಲ ಮಣ್ಣು ಹಾಗೂ ಎಲುಬುಗಳಾಗಿ ಬಿಟ್ಟ ಬಳಿಕ ನಮಗೆ ಪ್ರತಿಫಲ ಸಿಗಲಿಕ್ಕಿದೆಯೇ?’’

54. ಅವನು (ಮತ್ತೆ) ‘‘ನೀವೀಗ (ಆತ ಎಲ್ಲಿದ್ದಾನೆಂದು) ಇಣುಕಿ ನೋಡಲು ಬಯಸುತ್ತೀರಾ?’’ ಎಂದು ಕೇಳುವನು.

55. ತರುವಾಯ ಅವನು (ಸ್ವತಃ) ಇಣುಕಿ ನೋಡುವನು ಹಾಗೂ ತನ್ನ ಸಂಗಾತಿಯನ್ನು ನರಕದ ಮಧ್ಯದಲ್ಲಿ ಕಾಣುವನು.

56. ಮತ್ತು ಅವನು ಹೇಳುವನು; ‘‘ಅಲ್ಲಾಹನಾಣೆ! ನೀನಂತು ನನ್ನನ್ನು ನಾಶ ಮಾಡಿಯೇ ಬಿಡುತ್ತಿದ್ದೆ’’.

57. ನನ್ನ ಒಡೆಯನ ಅನುಗ್ರಹವಿಲ್ಲದೆ ಹೋಗಿದ್ದರೆ, ನಾನೂ (ಬಂಧಿಗಳಾಗಿ) ಹಾಜರುಗೊಳಿಸಲಾದವರ ಸಾಲಿಗೆ ಸೇರಿರುತ್ತಿದ್ದೆ.

58. (ಸ್ವರ್ಗವಾಸಿಗಳು ಹೇಳುವರು;) ಇನ್ನು ನಮಗೇನು ಮರಣವಿಲ್ಲವೇ?

59. – ನಮ್ಮ ಪ್ರಥಮ ಮರಣದ ಹೊರತು? ಮತ್ತು ನಾವು ಶಿಕ್ಷೆಗೂ ಗುರಿಯಾಗಲಾರೆವು!

60. ಖಂಡಿತವಾಗಿಯೂ ಇದುವೇ ಮಹಾ ಸೌಭಾಗ್ಯವಾಗಿದೆ.

61. ಶ್ರಮಿಸುವವರೆಲ್ಲಾ ಇದಕ್ಕಾಗಿಯೇ ಶ್ರಮಿಸಬೇಕು.

62. ಈ ಆತಿಥ್ಯ ಉತ್ತಮವೋ ಅಥವಾ ‘ಝಕ್ಕೂಮ್’ ಮರವೋ ?

63. ಖಂಡಿತವಾಗಿಯೂ ನಾವು ಅದನ್ನು ಅಕ್ರಮಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು.

64. ಅದು ನರಕದ ತಳದಿಂದ ಬೆಳೆಯುವ ಮರ.

65. ಅದರ ಗೆಲ್ಲುಗಳು ಶೈತಾನರ ತಲೆಗಳಂತಿರುವವು.

66. ಅವರು (ನರಕವಾಸಿಗಳು) ಖಂಡಿತ ಅದನ್ನೇ ತಿನ್ನುವರು ಮತ್ತು ಅದರಿಂದಲೇ ತಮ್ಮ ಹೊಟ್ಟೆ ತುಂಬುವರು.

67. ಹಾಗೆಯೇ, ಅಲ್ಲಿ ಅವರಿಗಾಗಿ ಮಾಲಿನ್ಯ ಬೆರೆತ, ಕುದಿಯುತ್ತಿರುವ ಪಾನೀಯವಿರುವುದು.

68. ಕೊನೆಗೆ, ನರಕವೇ ಅವರು ಮರಳುವ ನೆಲೆಯಾಗಿರುವುದು.

69. ಅವರು, ತಮ್ಮ ಪೂರ್ವಜರು ದಾರಿಗೆಟ್ಟಿದ್ದನ್ನು ಕಂಡಿದ್ದರು.

70. ಆದರೂ, ಅವರು ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸಿದರು.

71. ನಿಜವಾಗಿ, ಅವರಿಗಿಂತ ಹಿಂದಿನ, ಅವರ ಪೂರ್ವಜರಲ್ಲಿ ಹೆಚ್ಚಿನವರು ದಾರಿಗೆಟ್ಟಿದ್ದರು.

72. ನಾವು ಅವರ ನಡುವೆ ದೂತರನ್ನು ಕಳಿಸಿದ್ದೆವು.

73. ಹೀಗೆ ಎಚ್ಚರಿಕೆ ಪಡೆದವರ ಗತಿ ಏನಾಯಿತೆಂಬುದನ್ನು ನೋಡಿರಿ.

74. ಅಲ್ಲಾಹನ ಆಯ್ದ ದಾಸರ ಸ್ಥಿತಿ ಮಾತ್ರ ಭಿನ್ನವಾಗಿದೆ.

75. ನೂಹರು ನಮಗೆ ಮೊರೆ ಇಟ್ಟರು. ನಾವು (ಮೊರೆಗಳಿಗೆ) ಅತ್ಯುತ್ತಮ ಉತ್ತರ ನೀಡುವವರಾಗಿದ್ದೇವೆ.

76. ನಾವು ಅವರನ್ನೂ ಅವರ ಮನೆಯವರನ್ನೂ ಮಹಾ ವಿಪತ್ತಿನಿಂದ ರಕ್ಷಿಸಿದೆವು.

77. ಮತ್ತು ನಾವು ಅವರ ಸಂತತಿಯನ್ನು ಬಹುಕಾಲ ಉಳಿಸಿದೆವು.

78. ಮತ್ತು ನಾವು ಮುಂದಿನವರಲ್ಲಿ ಅವರ ನೆನಪನ್ನು ಸಂರಕ್ಷಿಸಿದೆವು.

79. ನೂಹರಿಗೆ ಶಾಂತಿ, ಸರ್ವಲೋಕಗಳಲ್ಲಿ.

80. ಖಂಡಿತವಾಗಿಯೂ ನಾವು ಇದೇ ರೀತಿ ಸತ್ಕರ್ಮಿಗಳನ್ನು ಪುರಸ್ಕರಿಸುತ್ತೇವೆ.

81. ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಾಗಿದ್ದರು.

82. ತರುವಾಯ ನಾವು ಇತರರನ್ನು ಮುಳುಗಿಸಿ ಬಿಟ್ಟೆವು.

83. ಇನ್ನು, ಇಬ್ರಾಹೀಮರಂತು ಅವರ (ನೂಹರ) ಹಾದಿಯಲ್ಲೇ ನಡೆಯುವವರಾಗಿದ್ದರು.

84. ಅವರು ನಿರ್ಮಲ ಮನಸ್ಸಿನೊಂದಿಗೆ ತಮ್ಮ ಒಡೆಯನ ಸನ್ನಿಧಿಗೆ ಬಂದರು.

85. ಮತ್ತು ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗದವರೊಡನೆ ಕೇಳಿದರು; ‘‘ನೀವು ಅದೇನನ್ನು ಪೂಜಿಸುತ್ತಿರುವಿರಿ?’’

86. ‘‘ನೀವೇನು, ಅಲ್ಲಾಹನ ಜೊತೆ ಮಿಥ್ಯ ಶಕ್ತಿಗಳನ್ನು ದೇವರಾಗಿಸಲು ಬಯಸುವಿರಾ?’’

87. ‘‘ಎಲ್ಲ ಲೋಕಗಳ ಒಡೆಯನ ಕುರಿತು ನಿಮ್ಮ ಅಭಿಪ್ರಾಯವೇನು?’’

88. ಆ ಬಳಿಕ ಅವರು ನಕ್ಷತ್ರಗಳೆಡೆಗೆ ದೃಷ್ಟಿ ಬೀರಿದರು.

89. ಮತ್ತು ನಾನು ಅಸ್ವಸ್ಥನಾಗಿ ಬಿಟ್ಟಿದ್ದೇನೆ ಎಂದರು.

90. ಅವರೆಲ್ಲಾ (ಜನಾಂಗದವರೆಲ್ಲಾ) ಅವರನ್ನು (ಇಬ್ರಾಹೀಮರನ್ನು) ಬಿಟ್ಟು ಹೊರಟು ಹೋದರು.

91. ಅವರು (ಇಬ್ರಾಹೀಮರು) ಅವರ (ತಮ್ಮ ಜನಾಂಗದವರ) ದೇವರುಗಳೆಡೆಗೆ (ವಿಗ್ರಹಗಳೆಡೆಗೆ) ಗಮನ ಹರಿಸಿದರು ಮತ್ತು ಕೇಳಿದರು; ‘‘ನೀವು ಏನನ್ನೂ ತಿನ್ನುವುದಿಲ್ಲವೇ?’’

92. ‘‘ನಿಮಗೇನಾಗಿದೆ? ನೀವೇಕೆ ಮಾತನಾಡುತ್ತಿಲ್ಲ?’’

93. ಕೊನೆಗೆ ಅವರು ಅವುಗಳ ಮೇಲೆ ಮುಗಿಬಿದ್ದು ಬಲವಾಗಿ ಹೊಡೆದರು.

94. ಅವರೆಲ್ಲಾ (ಜನಾಂಗದವರೆಲ್ಲಾ) ಅವರೆಡೆಗೆ ಧಾವಿಸಿ ಬಂದರು.

95. ಅವರು (ಇಬ್ರಾಹೀಮರು ಹೇಳಿದರು;) ‘‘ನೀವೇನು, ಸ್ವತಃ ನೀವೇ ಕೆತ್ತಿ ನಿರ್ಮಿಸಿದವುಗಳನ್ನು ಪೂಜಿಸುತ್ತೀರಾ?’’

96. ‘‘ನಿಮ್ಮನ್ನು ಮತ್ತು ನೀವು ರಚಿಸುವವುಗಳನ್ನೆಲ್ಲಾ ಅಲ್ಲಾಹನೇ ಸೃಷ್ಟಿಸಿರುವನು’’.

97. ಅವರು (ಜನಾಂಗದವರು, ಪರಸ್ಪರರೊಡನೆ) ‘‘ಅವನಿಗಾಗಿ ಒಂದು ಅಗ್ನಿ ಕುಂಡವನ್ನು ರಚಿಸಿರಿ ಮತ್ತು ಅವನನ್ನು ಬೆಂಕಿಗೆಸೆದು ಬಿಡಿರಿ’’ ಎಂದರು.

98. ಅವರು (ಜನಾಂಗದವರು), ಅವರಿಗೆ ಹಾನಿ ಮಾಡ ಬಯಸಿದ್ದರು. ಆದರೆ ನಾವು ಅವರನ್ನು ಕೀಳಾಗಿಸಿಬಿಟ್ಟೆವು.

99. ಅವರು (ಇಬ್ರಾಹೀಮ್) ಹೇಳಿದರು; ನಾನು ನನ್ನ ಒಡೆಯನೆಡೆಗೆ ತೆರಳುತ್ತೇನೆ. ಅವನು ನನಗೆ ಸರಿದಾರಿಯನ್ನು ತೋರಬಹುದು.

100. ‘‘ನನ್ನೊಡೆಯಾ, ನನಗೆ ಶ್ರೇಷ್ಠ ಸಂತತಿಗಳನ್ನು ದಯ ಪಾಲಿಸು’’ (ಎಂದು ಅವರು ಪ್ರಾರ್ಥಿಸಿದರು).

101. ಕೊನೆಗೆ ನಾವು ಅವರಿಗೆ ಒಬ್ಬ ವಿವೇಕವಂತ ಪುತ್ರನ (ಇಸ್ಮಾಈಲರ) ಶುಭವಾರ್ತೆ ನೀಡಿದೆವು.

102. ಅವರು (ಇಸ್ಮಾಈಲರು) ಅವರ ಜೊತೆ ಓಡಾಡಬಲ್ಲವರಾದಾಗ ಅವರು ಹೇಳಿದರು; ‘‘ನಾನು ನಿನ್ನ ಕೊರಳು ಕೊಯ್ಯುತ್ತಿರುವುದಾಗಿ ಸ್ವಪ್ನದಲ್ಲಿ ಕಂಡಿದ್ದೇನೆ. ಈ ಕುರಿತು ನಿನ್ನ ಅನಿಸಿಕೆ ಏನು?’’ ಅವರು (ಇಸ್ಮಾಈಲ್) ಹೇಳಿದರು ; ‘‘ಅಪ್ಪಾ, ನಿಮಗೆ ಆದೇಶಿಸಲಾಗಿರುವುದನ್ನು ನೀವು ಮಾಡಿಬಿಡಿ. ಅಲ್ಲಾಹನಿಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ ಕಾಣುವಿರಿ’’.

103. ಹೀಗೆ ಅವರಿಬ್ಬರೂ ವಿಧೇಯತೆ ತೋರಿದರು ಮತ್ತು ಅವರು (ಇಬ್ರಾಹೀಮರು) ಅವರನ್ನು (ಪುತ್ರನನ್ನು), ಮುಖ ಕೆಳಗಾಗಿಸಿ ಮಲಗಿಸಿದರು.

104. ಆಗ ನಾವು ಅವರನ್ನು ಕರೆದೆವು ; ‘‘ಇಬ್ರಾಹೀಮರೇ,’’

105. ‘‘ನೀವು ಸ್ವಪ್ನವನ್ನು ಸಾಕಾರಗೊಳಿಸಿದಿರಿ’’. ನಾವು ಸಜ್ಜನರನ್ನು ಖಂಡಿತ ಇದೇ ರೀತಿ ಪುರಸ್ಕರಿಸುತ್ತೇವೆ.

106. ಅದು ಖಂಡಿತ ಒಂದು ಸ್ಪಷ್ಟ ಪರೀಕ್ಷೆಯಾಗಿತ್ತು.

107. ನಾವು ಅವರಿಗೆ (ಬಲಿದಾನಕ್ಕಾಗಿ) ಒಂದು ಮಹಾ ಬಲಿಪಶುವನ್ನು ನೀಡಿದೆವು.

108. ಮತ್ತು ನಾವು ಅದರ (ಆ ಘಟನೆಯ) ನೆನಪನ್ನು ಮುಂದಿನವರಲ್ಲಿ ಉಳಿಸಿದೆವು.

109. ಇಬ್ರಾಹೀಮರಿಗೆ ಶಾಂತಿ.

110. ನಾವು ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ.

111. ಅವರು ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು.

112. ಮುಂದೆ ನಾವು ಅವರಿಗೆ ಇಸ್‌ಹಾಕ್‌ರ ಶುಭ ವಾರ್ತೆಯನ್ನು ನೀಡಿದೆವು. ಅವರೊಬ್ಬ ಸಜ್ಜನ ದೇವದೂತರಾಗಿದ್ದರು.

 113. ನಾವು ಅವರಿಗೂ ಇಸ್‌ಹಾಕರಿಗೂ ಸಮೃದ್ಧಿಯನ್ನು ನೀಡಿದೆವು. ಅವರಿಬ್ಬರ ಸಂತತಿಗಳಲ್ಲಿ ಸಜ್ಜನರೂ ಇದ್ದರು, ಸ್ವತಃ ತಮ್ಮ ಮೇಲೆ ಸ್ಪಷ್ಟ ಅಕ್ರಮವೆಸಗಿದವರೂ ಇದ್ದಾರೆ.

114. ನಾವು ಮೂಸಾ ಮತ್ತು ಹಾರೂನರ ಮೇಲೆ ಕೃಪೆ ತೋರಿದೆವು.

115. ಮತ್ತು ನಾವು ಅವರಿಬ್ಬರನ್ನೂ ಅವರ ಜನಾಂಗದವರನ್ನೂ ಮಹಾ ಸಂಕಟದಿಂದ ವಿಮೋಚಿಸಿದೆವು.

116. ನಾವು ಅವರಿಗೆ ನೆರವಾದೆವು. ಆದ್ದರಿಂದ ಅವರು ವಿಜಯಿಗಳಾದರು.

117. ನಾವು ಅವರಿಬ್ಬರಿಗೂ ಸವಿಸ್ತಾರವಾದ ಗ್ರಂಥವನ್ನು ನೀಡಿದ್ದೆವು.

118. ಮತ್ತು ನಾವು ಅವರಿಗೆ ನೇರ ಮಾರ್ಗವನ್ನು ತೋರಿಸಿದ್ದೆವು.

119. ಮುಂದಿನವರಲ್ಲಿ ನಾವು ಅವರ ನೆನಪನ್ನು ಉಳಿಸಿದೆವು.

120. ಮೂಸಾ ಮತ್ತು ಹಾರೂನರಿಗೆ ಶಾಂತಿ ಸಿಗಲಿ.

121. ನಾವು ಸಜ್ಜನರನ್ನು ಖಂಡಿತ ಇದೇರೀತಿ ಪುರಸ್ಕರಿಸುತ್ತೇವೆ.

122. ಅವರಿಬ್ಬರೂ ನಮ್ಮ ವಿಶ್ವಾಸಿ ದಾಸರಾಗಿದ್ದರು.

123. ಮತ್ತು ಇಲ್ಯಾಸ್ ಖಂಡಿತ ದೇವದೂತರಲ್ಲೊಬ್ಬರಾಗಿದ್ದರು.

124. ಅವರು ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು (ಅಲ್ಲಾಹನಿಗೆ) ಅಂಜುವುದಿಲ್ಲವೇ?’’

125. ‘‘ನೀವೇನು ‘ಬಅ್ಲ್‌’ ದೇವಿಗೆ ಮೊರೆ ಇಡುತ್ತೀರಾ? ಮತ್ತು ಸರ್ವ ಶ್ರೇಷ್ಠ ಸೃಷ್ಟಿಕರ್ತನನ್ನು ಬಿಟ್ಟು ಬಿಡುತ್ತೀರಾ?’’

126. ‘‘ಅಲ್ಲಾಹನೇ ನಿಮ್ಮ ಒಡೆಯನೂ ಹೌದು ನಿಮ್ಮ ಪೂರ್ವಜರ ಒಡೆಯನೂ ಹೌದು’’.

127. ಅವರು (ಜನಾಂಗದವರು) ಅವರನ್ನು ತಿರಸ್ಕರಿಸಿದರು. ಅವರನ್ನು ಖಂಡಿತ (ಶಿಕ್ಷೆಗಾಗಿ) ಹಾಜರು ಪಡಿಸಲಾಗುವುದು.

128. ಅಲ್ಲಾಹನ ಆಯ್ದ ದಾಸರ ಹೊರತು.

129. ಅವರ (ಇಲ್ಯಾಸರ) ನೆನಪನ್ನು ನಾವು ಮುಂದಿನವರಲ್ಲಿ ಉಳಿಸಿರುವೆವು. .

130. ಇಲ್ಯಾಸ್‌ರಿಗೆ ಶಾಂತಿ ಸಿಗಲಿ.

131. ನಾವು ಖಂಡಿತ ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ.

132. ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು.

133. ಇನ್ನು ಲೂತರು ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು.

134. ನಾವು ಅವರನ್ನು ಹಾಗೂ ಅವರ ಮನೆಯವರನ್ನೆಲ್ಲಾ ರಕ್ಷಿಸಿದೆವು.

135. ಹಿಂದೆ ಉಳಿದುಕೊಂಡ ಒಬ್ಬ ವೃದ್ಧೆಯ ಹೊರತು.

136. (ಅವರ ಜನಾಂಗದ) ಇತರರನ್ನು ನಾವು ನಾಶ ಮಾಡಿಬಿಟ್ಟೆವು.

 137. ನೀವಂತು ಅವರ (ನಾಡುಗಳ) ಮೇಲಿಂದಲೇ ಹಾದು ಹೋಗುತ್ತೀರಿ – ಹಗಲಲ್ಲಿ –

138. ಮತ್ತು ಇರುಳಲ್ಲಿ. ನೀವೇನು ಆಲೋಚಿಸುವುದಿಲ್ಲವೇ?

139. ಯೂನುಸ್ ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು.

140. ಅವರು ತಮ್ಮ ತುಂಬಿದ ಹಡಗಿನೆಡೆಗೆ ಧಾವಿಸಿದರು.

141. (ಹಡಗು ಮುಳುಗುವ ಹಂತದಲ್ಲಿ) ಅವರು (ಅದೃಷ್ಟದ) ಚೀಟಿ ಎತ್ತುವುದಕ್ಕೆ ಒಪ್ಪಿದರು ಮತ್ತು ಸೋತು ಹೋದರು.

142. ಕೊನೆಗೆ (ಸಮುದ್ರಕ್ಕೆಸೆಯಲಾದ) ಅವರನ್ನು ಮೀನು ನುಂಗಿತು. ಆಗ ಅವರು ತಮ್ಮನ್ನೇ ದೂಷಿಸಿಕೊಂಡರು.

143. ಒಂದು ವೇಳೆ ಅವರು ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿರುವವರಾಗದೆ ಇದ್ದಿದ್ದರೆ,

144. ಪುನರುತ್ಥಾನದ ದಿನದವರೆಗೂ ಅವರು ಅದರ (ಮೀನಿನ) ಹೊಟ್ಟೆಯಲ್ಲೇ ಉಳಿಯುತ್ತಿದ್ದರು.

145. ಕೊನೆಗೆ ನಾವು ಅವರನ್ನು ಬಯಲಿಗೆ ಎಸೆದು ಬಿಟ್ಟೆವು. ಆಗ ಅವರು ತುಂಬಾ ಕ್ಷೀಣರಾಗಿದ್ದರು.

146. ನಾವು ಅವರ ಬಳಿ ಬಳ್ಳಿಗಳಿರುವ ಗಿಡವನ್ನು ಬೆಳೆಸಿದೆವು.

147. ಮತ್ತು ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನರಿದ್ದಲ್ಲಿಗೆ ಕಳಿಸಿದೆವು.

 148. ಅವರು (ಆ ನಾಡಿನವರು) ನಂಬಿದರು ಮತ್ತು ಒಂದು ನಿರ್ದಿಷ್ಟ ಕಾಲದ ತನಕ ನಾವು ಅವರಿಗೆ ಧಾರಾಳ ಸಂಪನ್ನತೆ ನೀಡಿದೆವು.

149. ಇದೀಗ ಅವರೊಡನೆ ಕೇಳಿರಿ. ನಿಮ್ಮ ಒಡೆಯನಿಗೆ ಪುತ್ರಿಯರು ಮತ್ತು ಅವರಿಗೆ ಪುತ್ರರೇ ?

150. ನಾವೇನು ಮಲಕ್‌ಗಳನ್ನು ಸ್ತ್ರೀಯರಾಗಿ ಸೃಷ್ಟಿಸಿರುವೆವೇ ? ಅದಕ್ಕೇನು ಅವರು ಸಾಕ್ಷಿಗಳಾಗಿದ್ದರೇ ?

151. ನಿಮಗೆ ತಿಳಿದಿರಲಿ. ಅವರು ಖಂಡಿತ ತಾವೇ ರಚಿಸಿಕೊಂಡ ಸುಳ್ಳುಗಳನ್ನು ಹೇಳುತ್ತಿದ್ದಾರೆ.

152. ಅಲ್ಲಾಹನಿಗೆ ಸಂತತಿಗಳಿದ್ದಾರೆಂದು (ಅವರು ಹೇಳುತ್ತಾರೆ). ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ.

153. ಅವನೇನು ಪುತ್ರರಿಗಿಂತ ಪುತ್ರಿಯರಿಗೆ ಪ್ರಾಶಸ್ತ್ಯ ನೀಡಿದನೇ?

154. ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ?

155. ನೀವು ಪಾಠ ಕಲಿಯುವುದಿಲ್ಲವೇ?

156. ಅಥವಾ ನಿಮ್ಮ ಬಳಿ ಸ್ಪಷ್ಟ ಪುರಾವೆಯೇನಾದರೂ ಇದೆಯೇ?

157. ನೀವು ಸತ್ಯವಂತರಾಗಿದ್ದರೆ ತನ್ನಿರಿ, ನಿಮ್ಮ ಗ್ರಂಥವನ್ನು.

158. ಅವರು ಅವನ (ಅಲ್ಲಾಹನ) ಹಾಗೂ ಜಿನ್ನ್‌ಗಳ ನಡುವೆ ಸಂಬಂಧ ಕಲ್ಪಿಸುತ್ತಾರೆ. ತಮ್ಮನ್ನು (ನರಕದೆದುರು) ಹಾಜರುಗೊಳಿಸಲಾಗುವುದೆಂದು (ಧಿಕ್ಕಾರಿ) ಜಿನ್ನ್‌ಗಳಿಗೆ ಖಂಡಿತ ತಿಳಿದಿದೆ.

159. ಅಲ್ಲಾಹನು ಅವರ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದಾನೆ.

160. ಅಲ್ಲಾಹನು ಆಯ್ದುಕೊಂಡ ದಾಸರು ಮಾತ್ರ ಭಿನ್ನರಾಗಿರುತ್ತಾರೆ.

161. ಖಂಡಿತವಾಗಿಯೂ ನೀವು ಮತ್ತು ನೀವು ಪೂಜಿಸುವ ವಸ್ತುಗಳು –

162. ಅವನ (ಅಲ್ಲಾಹನ) ವಿಷಯದಲ್ಲಿ ಯಾರನ್ನೂ ಮೋಸಗೊಳಿಸುವಂತಿಲ್ಲ –

163. ನರಕಕ್ಕೆ ಹೋಗುವವನೆಂದು ವಿಧಿಸಲ್ಪಟ್ಟವನ ಹೊರತು.

164. (ಮಲಕ್‌ಗಳು ಹೇಳುತ್ತಾರೆ:) ‘‘ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವು ನಿಶ್ಚಿತವಾಗಿದೆ.

165. ಮತ್ತು ನಾವು (ಅಲ್ಲಾಹನ ಮಂದೆ) ಸಾಲುಗಟ್ಟಿ ನಿಂತಿರುತ್ತೇವೆ.

166. ಮತ್ತು ನಾವು ಖಂಡಿತ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿರುತ್ತೇವೆ‘‘.

167. ಈ ಹಿಂದೆ ಅವರು (ಧಿಕ್ಕಾರಿಗಳು) ಹೇಳುತ್ತಿದ್ದರು;

168. ‘‘ನಮ್ಮ ಬಳಿ ಗತ ಕಾಲದವರ ಬೋಧನೆಗಳು (ದಿವ್ಯ ಗ್ರಂಥ) ಇದ್ದಿದ್ದರೆ,

169. ನಾವು ಖಂಡಿತ ಆಯ್ದ ದಾಸರ ಸಾಲಿಗೆ ಸೇರಿರುತ್ತಿದ್ದೆವು’’.

170. ಆದರೆ (ದಿವ್ಯ ಗ್ರಂಥವು ಬಂದಾಗ) ಅವರು ಅದನ್ನು ಧಿಕ್ಕರಿಸಿದರು. ಇದೀಗ ಅದರ ಪರಿಣಾಮವು ಅವರಿಗೆ ತಿಳಿಯಲಿದೆ.

171. ದೂತರಾಗಿರುವ ನಮ್ಮ ದಾಸರ ವಿಷಯದಲ್ಲಿ ನಮ್ಮ ಹೇಳಿಕೆಯು ಈಗಾಗಲೇ ವಿಧಿತವಾಗಿದೆ.

172. (ಅದೇನೆಂದರೆ), ಅವರಿಗೆ ಖಂಡಿತ ಸಹಾಯ ಸಿಗಲಿದೆ.

173. ಮತ್ತು ಖಂಡಿತವಾಗಿಯೂ ನಮ್ಮ ಪಡೆಗಳೇ ಗೆಲ್ಲುವವು.

174. (ದೂತರೇ,) ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು (ಧಿಕ್ಕಾರಿಗಳನ್ನು) ಕಡೆಗಣಿಸಿರಿ.

175. ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು.

176. ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿದ್ದಾರೆಯೇ ?

177. ಅದು ಅವರ ಅಂಗಳಕ್ಕೆ ಬಂದಿಳಿದಾಗ, ಈಗಾಗಲೆ ಎಚ್ಚರಿಸಲ್ಪಟ್ಟವರ ಪಾಲಿಗೆ ಅದು ಬಹಳ ಕೆಟ್ಟ ಮುಂಜಾನೆಯಾಗಿರುವುದು.

178. ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು ಕಡೆಗಣಿಸಿರಿ.

179. ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು.

180. ನಿಮ್ಮ ಪಾವನ (ಗೌರವಾನ್ವಿತ) ಒಡೆಯನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನಾಗಿದ್ದಾನೆ.

181. ದೂತರಿಗೆ ಶಾಂತಿ ಸಿಗಲಿ.

182. ಮತ್ತು ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.