38. Sad

38. ಸ್ವಾದ್

ವಚನಗಳು – 88, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಸ್ವಾದ್. ಉಪದೇಶ ತುಂಬಿರುವ ಕುರ್‌ಆನಿನಾಣೆ.

2. ನಿಜವಾಗಿ ಧಿಕ್ಕಾರಿಗಳು ಅಹಂಕಾರ ಹಾಗೂ ಹಠಮಾರಿತನದಲ್ಲಿದ್ದಾರೆ.

3. ಅವರಿಗಿಂತ ಹಿಂದೆ ನಾವು ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿರುವೆವು. ಅವರು ಗೋಗರೆದರು. ಆದರೆ, ಅವರ ಬಿಡುಗಡೆಗೆ ಕಾಲಾವಧಿ ಉಳಿದಿರಲಿಲ್ಲ.

4. ಅವರ ಪೈಕಿಯೇ ಒಬ್ಬನು ಎಚ್ಚರಿಸುವವನಾಗಿ ಅವರ ಬಳಿಗೆ ಬಂದ ಕುರಿತು ಅವರು ಅಚ್ಚರಿಪಟ್ಟರು ಮತ್ತು ಧಿಕ್ಕಾರಿಗಳು ಹೇಳಿದರು; ‘‘ಅವನು ಸುಳ್ಳು ಹೇಳುತ್ತಿರುವ ಒಬ್ಬ ಮಾಟಗಾರನಾಗಿದ್ದಾನೆ’’.

5. ‘‘ಅವನು ಎಲ್ಲ ದೇವರುಗಳನ್ನು ಒಬ್ಬ ದೇವರಾಗಿಸಿ ಬಿಟ್ಟಿದ್ದಾನೆ. ಇದು ಖಂಡಿತ ವಿಚಿತ್ರವಾಗಿದೆ’’.

6. ಅವರ ಕೆಲವು ನಾಯಕರು ಹೊರಟು ಹೋಗುತ್ತಾ ಹೇಳಿದರು; ‘‘ಹೊರಡಿರಿ ಮತ್ತು ನಿಮ್ಮ ದೇವರುಗಳಿಗೇ ನಿಷ್ಠರಾಗಿರಿ. ಅದರ (ಸತ್ಯ ಸಂದೇಶದ) ಹಿಂದೆ ಖಂಡಿತ ಏನೋ ಸ್ವಾರ್ಥವಿದೆ’’.

7. ‘‘ನಾವು ಗತಕಾಲದ ಧರ್ಮದಲ್ಲಿ ಅಂತಹದೇನನ್ನೂ ಕೇಳಿಲ್ಲ. ಅದು ಖಂಡಿತ (ಅವನ) ಸ್ವಂತ ರಚನೆಯಾಗಿದೆ’’.

8. ‘‘ಉಪದೇಶವನ್ನು ನಮ್ಮ ನಡುವೆ ಇವನಿಗೇ ಇಳಿಸಿಕೊಡಲಾಗಿದೆಯೇ?’’ ನಿಜವಾಗಿ ಅವರು ನನ್ನ ಉಪದೇಶದ ಕುರಿತು ಸಂಶಯದಲ್ಲಿದ್ದಾರೆ. ಅವರಿನ್ನೂ ಶಿಕ್ಷೆಯ ರುಚಿಯನ್ನು ಕಂಡಿಲ್ಲ.

9. ಪ್ರಬಲನೂ ಉದಾರಿಯೂ ಆಗಿರುವ ನಿಮ್ಮ ಒಡೆಯನ ಅನುಗ್ರಹದ ಭಂಡಾರಗಳೇನು ಅವರ ಬಳಿ ಇವೆಯೇ?

10. ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಸರ್ವಾಧಿಕಾರವೇನು ಅವರಿಗೆ ಸೇರಿದೆಯೇ? ಹಾಗಾದರೆ ಅವರು ಏಣಿಗಳನ್ನೇರಿ ಹತ್ತಿನೋಡಲಿ.

11. ಅವರೊಂದು ಸೋತ ಸೇನೆಯಾಗಿದ್ದಾರೆ.

12. ಅವರಿಗಿಂತ ಹಿಂದಿನವರೂ ತಿರಸ್ಕರಿಸಿದ್ದರು. ನೂಹರ ಜನಾಂಗದವರು, ಆದ್ (ಜನಾಂಗದವರು) ಹಾಗೂ ಮೊಳೆಯವನಾದ ಫಿರ್‌ಔನ್‌ನ ಜನರು.

13. ಹಾಗೆಯೇ ಸಮೂದರು ಹಾಗೂ ಲೂತ್‌ರ ಜನಾಂಗದವರು ಮತ್ತು ಐಕಃದವರು. ಅವರೆಲ್ಲಾ (ಸತ್ಯವಿರೋಧಿ) ಪಡೆಗಳಾಗಿದ್ದರು. ಅವರೆಲ್ಲರೂ ದೂತರುಗಳನ್ನು ತಿರಸ್ಕರಿಸಿದರು. ಕೊನೆಗೆ, ಅವರ ಮೇಲೆ ನನ್ನ ಶಿಕ್ಷೆಯು ಬಂದೆರಗಿತು.

15. ಅವರು ಕಾಯುತ್ತಿರುವ ಘಟನೆಯು, ಕೇವಲ ಒಂದು ಆರ್ಭಟವಾಗಿರುವುದು. ಆಬಳಿಕ ಯಾವ ರಿಯಾಯ್ತಿಯೂ ಸಿಗದು.

16. ಅವರು (ವ್ಯಂಗ್ಯವಾಗಿ) ಹೇಳಿದರು; ನಮ್ಮೊಡೆಯಾ, ನಮಗೆ ನಮ್ಮ ಪಾಲನ್ನು ವಿಚಾರಣೆಯ ದಿನಕ್ಕಿಂತ ಮೊದಲೇ ತುರ್ತಾಗಿ ಕೊಟ್ಟುಬಿಡು.

17. (ದೂತರೇ,) ಅವರು ಆಡುವ ಮಾತುಗಳ ಕುರಿತು ನೀವು ಸಹನಶೀಲರಾಗಿರಿ ಮತ್ತು ನಮ್ಮ ಶಕ್ತಿಶಾಲಿ ದಾಸರಾಗಿದ್ದ ದಾವೂದರನ್ನು ಸ್ಮರಿಸಿರಿ. ಅವರು ಖಂಡಿತ ಪದೇ ಪದೇ (ಅಲ್ಲಾಹನೆಡೆಗೆ) ಮರಳುವವರಾಗಿದ್ದರು.

18. ನಾವು ಅವರ ಜೊತೆಗೆ ಪರ್ವತಗಳನ್ನು ವಿಧೇಯಗೊಳಿಸಿದ್ದೆವು. ಅವು ಸಂಜೆ ಹಾಗೂ ಮುಂಜಾನೆ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿದ್ದವು.

19. ಹಾಗೆಯೇ, ಪಕ್ಷಿಗಳು ಅವರ ಬಳಿ ಬಂದು ಸೇರುತ್ತಿದ್ದವು. ಅವೆಲ್ಲವೂ ಅವರೆಡೆಗೆ ಮರಳುತ್ತಿದ್ದವು.

20. ನಾವು ಅವರ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿದ್ದೆವು ಮತ್ತು ಅವರಿಗೆ ಯುಕ್ತಿಯನ್ನು ಹಾಗೂ ನಿರ್ಣಾಯಕ ತೀರ್ಪು ನೀಡುವ ಸಾಮರ್ಥ್ಯವನ್ನು ನೀಡಿದ್ದೆವು.

21. ಆ ಜಗಳ ನಿರತರ ವೃತ್ತಾಂತವು ನಿಮಗೆ ತಲುಪಿದೆಯೇ? ಅವರು ಗೋಡೆ ಹಾರಿ ಮಸೀದಿಯೊಳಗೆ ಬಂದು ಬಿಟ್ಟಿದ್ದರು.

22. ಅವರು ಹಠಾತ್ತನೆ ದಾವೂದರ ಬಳಿಗೆ ಬಂದಾಗ ಅವರು ಬೆಚ್ಚಿ ಬಿದ್ದರು. ಅವರು ಹೇಳಿದರು ; ಅಂಜಬೇಡಿ, ನಾವು ಎರಡು ಜಗಳ ನಿರತ ಗುಂಪುಗಳು. ನಮ್ಮಲ್ಲಿ ಒಂದು ಗುಂಪು ಇನ್ನೊಂದರ ಮೇಲೆ ಅನ್ಯಾಯವೆಸಗಿದೆ. ನೀವೀಗ ನಮ್ಮ ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಿರಿ ಮತ್ತು ಅತಿರೇಕವೆಸಗಬೇಡಿ. ಸರಿಯಾದ ಮಾರ್ಗದೆಡೆಗೆ ನೀವು ನಮಗೆ ಮಾರ್ಗದರ್ಶನ ಮಾಡಿರಿ.

23. ಇವನು ನನ್ನ ಸಹೋದರ. ಇವನ ಬಳಿ ತೊಂಭತ್ತೊಂಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದು ಕುರಿ ಮಾತ್ರ ಇದೆ. ಅವನೀಗ ‘‘ಅದನ್ನೂ ನನಗೆ ಕೊಟ್ಟು ಬಿಡು’’ ಎನ್ನುತ್ತಿದ್ದಾನೆ ಮತ್ತು ಮಾತಿನಲ್ಲಿ ಅವನು ನನ್ನನ್ನು ಸೋಲಿಸಿದ್ದಾನೆ.

24. ಅವರು (ದಾವೂದರು) ಹೇಳಿದರು ; ‘‘ನಿನ್ನ ಕುರಿಯನ್ನು ತನ್ನ ಕುರಿಗಳ ರಾಶಿಗೆ ಸೇರಿಸಲು ಆಗ್ರಹಿಸುವ ಮೂಲಕ ಅವನು ಖಂಡಿತ ನಿನ್ನ ಮೇಲೆ ಅಕ್ರಮವೆಸಗಿರುವನು. ಖಂಡಿತವಾಗಿಯೂ, ಜೊತೆಗೂಡಿ ಬದುಕುವವರಲ್ಲಿ ಹೆಚ್ಚಿನವರು ಪರಸ್ಪರ ಅನ್ಯಾಯವೆಸಗುತ್ತಾರೆ – ವಿಶ್ವಾಸಿಗಳು ಮತ್ತು ಸತ್ಕರ್ಮಿಗಳ ಹೊರತು. ಮತ್ತು ಅಂಥವರು ತುಂಬಾ ಕಡಿಮೆ‘‘. (ಈ ಮೂಲಕ) ನಾವು ತಮ್ಮನ್ನು ಪರೀಕ್ಷಿಸಿದೆವೆಂಬುದನ್ನು ದಾವೂದರು ಮನಗಂಡರು ಮತ್ತು ಅವರು ತಮ್ಮ ಒಡೆಯನ ಮುಂದೆ ಕ್ಷಮೆಯಾಚಿಸುತ್ತಾ, ಅವನಿಗೆ ಶರಣಾಗಿ, ಬಾಗುತ್ತಾ ಸಾಷ್ಟಾಂಗವೆರಗಿ ಬಿಟ್ಟರು.

25. ಕೊನೆಗೆ ನಾವು ಅವರಿಗಾಗಿ ಅದನ್ನು (ಅವರ ಪ್ರಮಾದವನ್ನು) ಕ್ಷಮಿಸಿ ಬಿಟ್ಟೆವು ಮತ್ತು ಅವರಿಗಾಗಿ ನಮ್ಮ ಬಳಿ ಸಾಮೀಪ್ಯ ಹಾಗೂ ಶ್ರೇಷ್ಠ ಫಲಿತಾಂಶವಿದೆ.

26. ದಾವೂದರೇ, ನಾವು ಖಂಡಿತ ನಿಮ್ಮನ್ನು ಭೂಮಿಯಲ್ಲಿ (ನಮ್ಮ) ಪ್ರತಿನಿಧಿಯಾಗಿಸಿರುವೆವು. ನೀವು ಜನರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಕೈಗೊಳ್ಳಿರಿ ಮತ್ತು ಸ್ವೇಚ್ಛೆಯನ್ನು ಅನುಸರಿಸಬೇಡಿ. ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಿ ಬಿಡುವುದು. ಅಲ್ಲಾಹನ ಮಾರ್ಗದಿಂದ ದೂರ ಸರಿದು ಬಿಟ್ಟವರಿಗೆ, ಅವರು ವಿಚಾರಣೆಯ ದಿನವನ್ನು ಮರೆತುದಕ್ಕಾಗಿ ಖಂಡಿತ, ತೀವ್ರ ಶಿಕ್ಷೆ ಇದೆ.

27. ನಾವು ಆಕಾಶವನ್ನಾಗಲಿ, ಭೂಮಿಯನ್ನಾಗಲಿ ಅವೆರಡರ ನಡುವೆ ಇರುವ ಯಾವುದನ್ನೇ ಆಗಲಿ ವ್ಯರ್ಥವಾಗಿ ಸೃಷ್ಟಿಸಿಲ್ಲ. ಅದು ಕೇವಲ ಧಿಕ್ಕಾರಿಗಳ ಭ್ರಮೆಯಾಗಿದೆ. ಧಿಕ್ಕಾರಿಗಳಿಗೆ ವಿನಾಶವಿದೆ, ಅಗ್ನಿಯ ಮೂಲಕ.

28. ನಾವೇನು, ವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು, ಭೂಮಿಯಲ್ಲಿ ಅಶಾಂತಿ ಹಬ್ಬುವವರಂತೆ ಮಾಡುವೆವೇ? ನಾವೇನು ಧರ್ಮ ನಿಷ್ಠರನ್ನು ದುಷ್ಕರ್ಮಿಗಳಂತೆ ಮಾಡುವೆವೇ?

29. ನಾವು ನಿಮ್ಮೆಡೆಗೆ ಒಂದು ಸಮೃದ್ಧ ಗ್ರಂಥವನ್ನು ಇಳಿಸಿರುವೆವು, ಜನರು ಅದರ ವಚನಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿ ಉಳ್ಳವರು ಪಾಠ ಕಲಿಯಲೆಂದು.

30. ಮತ್ತು ನಾವು ದಾವೂದರಿಗೆ ಸುಲೈಮಾನರನ್ನು ದಯಪಾಲಿಸಿದೆವು. ಅವರೊಬ್ಬ ಶ್ರೇಷ್ಠ ದಾಸರಾಗಿದ್ದರು. ಅವರು ಖಂಡಿತ ಪದೇ ಪದೇ (ಅಲ್ಲಾಹನೆಡೆಗೆ) ಮರಳುವವರಾಗಿದ್ದರು.

31. ಒಂದು ಸಂಜೆ ಭಾರೀ ಬಲಿಷ್ಠ ಕುದುರೆಗಳನ್ನು ಅವರ ಮುಂದೆ ಹಾಜರು ಪಡಿಸಲಾಯಿತು.

32. ಅವರು ಹೇಳಿದರು; ‘‘ನಾನು ನನ್ನ ಒಡೆಯನ ನೆನಪಿಗಿಂತ, ಸಂಪತ್ತಿನ ಪ್ರೇಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿಬಿಟ್ಟೆನು. ಎಷ್ಟೆಂದರೆ (ವಾಸ್ತವವು) ತೆರೆಯ ಮರೆಗೆ ಸರಿದು ಬಿಟ್ಟಿತು’’.

33. ‘‘ಅವುಗಳನ್ನು (ಆ ಕುದುರೆಗಳನ್ನು) ಮತ್ತೆ ನನ್ನ ಮುಂದೆ ತನ್ನಿರಿ’’. ಆ ಬಳಿಕ ಅವರು ಅವುಗಳ ಪಾದಗಳನ್ನು ಹಾಗೂ ಕೊರಳುಗಳನ್ನು ನೇವರಿಸಿದರು.

34. ಮತ್ತು ನಾವು ಸುಲೈಮಾನರನ್ನು ಪರೀಕ್ಷಿಸಿದೆವು ಹಾಗೂ ಅವರ ಸಿಂಹಾಸನದ ಮೇಲೆ ಒಂದು ಶರೀರವನ್ನು ಹಾಕಿ ಬಿಟ್ಟೆವು. ಆ ಬಳಿಕ ಅವರು (ಅಲ್ಲಾಹನ ಬಳಿಗೆ) ಮರಳಿದರು.

35. ಅವರು ಹೇಳಿದರು; ‘‘ನನ್ನೊಡೆಯಾ, ನನ್ನನ್ನು ಕ್ಷಮಿಸು ಮತ್ತು ನನ್ನ ಬಳಿಕ ಯಾರಿಗೂ ಸಿಗದಂತಹ ಸಾಮ್ರಾಜ್ಯವನ್ನು ನನಗೆ ನೀಡು. ನೀನು ಖಂಡಿತ ಉದಾರಿಯಾಗಿರುವೆ’’.

36. ಹೀಗೆ ನಾವು ಗಾಳಿಯನ್ನು ಅವರಿಗೆ ವಿಧೇಯಗೊಳಿಸಿದೆವು. ಅದು ಅವರ ಆದೇಶದಂತೆ, ಅವರು ಬಯಸುವಲ್ಲಿಗೆ ನಿಧಾನವಾಗಿ ಚಲಿಸುತ್ತಿತ್ತು.

 

37. ಕಟ್ಟಡಗಳನ್ನು ಕಟ್ಟುವ ಹಾಗೂ ನೀರಿನ ಆಳಕ್ಕಿಳಿಯುವ ಶೈತಾನರನ್ನು (ವಿದ್ರೋಹಿ ಜಿನ್ನ್‌ಗಳನ್ನು),

38. ಮತ್ತು ಸರಪಣಿಗಳಲ್ಲಿ ಬಂಧಿತವಾಗಿದ್ದ ಇತರ ಕೆಲವು ಜೀವಿಗಳನ್ನು (ಅವರಿಗೆ ವಿಧೇಯಗೊಳಿಸಲಾಗಿತ್ತು).

39. ಇದು ನಮ್ಮ ಕೊಡುಗೆ. (ಇದರಿಂದ) ಇತರರಿಗೆ ಕೊಡಿರಿ ಅಥವಾ ಎಣಿಕೆ ಮಾಡದೆ ನೀವೇ ಇಟ್ಟು ಕೊಳ್ಳಿರಿ.

40. ಅವರಿಗಾಗಿ ಖಂಡಿತ ನಮ್ಮ ಬಳಿ ಸಾಮೀಪ್ಯ ಹಾಗೂ ಶ್ರೇಷ್ಠ ಫಲಿತಾಂಶವಿದೆ.

41. ನೀವು ನಮ್ಮ ದಾಸ ಅಯ್ಯೂಬರನ್ನು ಸ್ಮರಿಸಿರಿ. ಅವರು ತಮ್ಮ ಒಡೆಯನಿಗೆ ಮೊರೆ ಇಟ್ಟರು; ‘‘ಶೈತಾನನು ನನ್ನನ್ನು ಸಂಕಟಕ್ಕೀಡು ಮಾಡಿದ್ದಾನೆ ಮತ್ತು ನನ್ನನ್ನು ತುಂಬಾ ಹಿಂಸಿಸಿದ್ದಾನೆ’’.

42. ನಾವು ಹೇಳಿದೆವು; ‘‘ನೀವು ಕಾಲಿನಿಂದ (ನೆಲಕ್ಕೆ) ಒದೆಯಿರಿ. ಇದೋ, ಸ್ನಾನಕ್ಕೆ ಹಾಗೂ ಕುಡಿಯುವುದಕ್ಕೆ, ಹಿತವಾದ ತಣ್ಣೀರು’’.

43. ನಾವು ಅವರಿಗೆ, ಅವರ ಮನೆಯವರಿಗೆ ಹಾಗೂ ಅವರ ಜೊತೆಗಿದ್ದ ಅವರಂತಹ ಇತರರಿಗೆ ನಮ್ಮ ಕಡೆಯಿಂದ ಅನುಗ್ರಹವನ್ನು ದಯಪಾಲಿಸಿದೆವು. ಬುದ್ಧಿ ಯುಳ್ಳವರಿಗೆ ಅದರಲ್ಲಿ ಉಪದೇಶವಿದೆ.

44. ‘‘ನೀವು ಪೊರಕೆಯನ್ನು ಕೈಗೆತ್ತಿಕೊಂಡು ಹೊಡೆಯಿರಿ. ಮತ್ತು ನೀವು ನಿಮ್ಮ ಪ್ರತಿಜ್ಞೆಯನ್ನು ಮುರಿಯಬೇಡಿ’’ (ಎಂದು ನಾವು ಹೇಳಿದೆವು). ನಾವು ಅವರನ್ನು ಸಹನಶೀಲರಾಗಿ ಕಂಡೆವು. ಅವರು ಶ್ರೇಷ್ಠ ದಾಸರಾಗಿದ್ದರು ಮತ್ತು ಅವರು ಖಂಡಿತ ಮರಳುವವರಾಗಿದ್ದರು.

45. ನಮ್ಮ ದಾಸರಾದ ಇಬ್ರಾಹೀಮರನ್ನು, ಇಸ್‌ಹಾಕರನ್ನು ಮತ್ತು ಯಅ್ಕೂಬ್‌ರನ್ನು ಸ್ಮರಿಸಿರಿ. ಅವರು ಶಕ್ತಿವಂತರೂ ದೂರದೃಷ್ಟಿ ಉಳ್ಳವರೂ ಆಗಿದ್ದರು.

46. ನಾವು ಅವರಲ್ಲಿ ಒಂದು ವಿಶೇಷ ಗುಣವನ್ನು ಮೈಗೂಡಿಸಿದ್ದೆವು – ಪರಲೋಕದ ಸ್ಮರಣೆ (ಎಂಬ ಗುಣ).

47. ನಮ್ಮ ಬಳಿ ಅವರು, ಆಯ್ದ, ಅತ್ಯುತ್ತಮ ವ್ಯಕ್ತಿಗಳಾಗಿದ್ದರು.

48. ನೀವು ಇಸ್ಮಾಈಲ್‌ರನ್ನು ಅಲ್‌ಯಸಅರನ್ನು ಹಾಗೂ ಝುಲ್‌ಕಿಫ್ಲ್‌ರನ್ನು ಸ್ಮರಿಸಿರಿ. ಅವರೆಲ್ಲರೂ ಅತ್ಯುತ್ತಮರಾಗಿದ್ದರು.

49. ಇದು ಒಂದು ಉಪದೇಶವಾಗಿದೆ. ಧರ್ಮನಿಷ್ಠರಿಗೆ ಖಂಡಿತ, ಅತ್ಯುತ್ತಮ ನೆಲೆ ಸಿಗಲಿದೆ.

50. ಶಾಶ್ವತವಾದ ಉದ್ಯಾನಗಳ ಬಾಗಿಲುಗಳು ಅವರಿಗಾಗಿ ತೆರೆದಿರುವವು.

51. ಅವರು ಅವುಗಳಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು. ಧಾರಾಳ ಹಣ್ಣು ಹಂಪಲುಗಳನ್ನು ಹಾಗೂ ಪಾನೀಯಗಳನ್ನು ತರಿಸುವರು.

52. ಸದಾ ದೃಷ್ಟಿ ತಗ್ಗಿಸಿಕೊಂಡಿರುವ (ಮಾನವಂತ) ಸಹವಯಸ್ಕ ಸ್ತ್ರೀಯರು ಅವರ ಜೊತೆಗಿರುವರು.

53. ಇವು ವಿಚಾರಣೆಯ ದಿನದ ಕುರಿತಂತೆ ನಿಮಗೆ ನೀಡಲಾಗುತ್ತಿರುವ ಆಶ್ವಾಸನೆಗಳು.

54. ಇವು ಖಂಡಿತ ಕೊಡುಗೆಗಳಾಗಿವೆ. ಇವುಗಳಿಗೆ ಅಂತ್ಯವಿಲ್ಲ.

55. ಇದು (ಸಜ್ಜನರ ಪ್ರತಿಫಲ). ಅತ್ತ, ವಿದ್ರೋಹಿಗಳಿಗೆ ಅತ್ಯಂತ ನಿಕೃಷ್ಟ ನೆಲೆ ಇದೆ.

56. ಅವರು ನರಕವನ್ನು ಪ್ರವೇಶಿಸುವರು. ಅದು ತೀರಾ ಕೆಟ್ಟ ನೆಲೆ.

57. ಇದು (ಅವರ ಗತಿ). ಸವಿಯಿರಿ ಕುದಿಯುವ ನೀರನ್ನು ಹಾಗೂ ತೀರಾ ಕೊಳಕು ದ್ರವ್ಯವನ್ನು.

58. ಮತ್ತು ಅಲ್ಲಿ, ಇದೇ ತರದ ಇನ್ನೂ ಅನೇಕ ವಸ್ತುಗಳಿರುವವು.

59. ಇದೋ ಈ ಗುಂಪೂ ನಿಮ್ಮ ಜೊತೆ ನರಕಕ್ಕೆ ನುಸುಳುತ್ತಿದೆ. ಅವರನ್ನು ಸ್ವಾಗತಿಸುವವರು ಯಾರೂ ಇಲ್ಲ. ಅವರು ಖಂಡಿತ ನರಕಾಗ್ನಿಯಲ್ಲಿ ಸುಟ್ಟು ಹೋಗುವರು.

60. ಅವರು (ತಮಗಿಂತ ಮೊದಲು ಬಂದವರೊಡನೆ) ಹೇಳುವರು; ನಿಮಗೂ ಇಲ್ಲಿ ಸ್ವಾಗತವೇನಿಲ್ಲ. ನೀವೇ ನಮ್ಮನ್ನು ಇಲ್ಲಿಗೆ ಮುನ್ನಡೆಸಿದವರು. ಬಹಳ ಕೆಟ್ಟ ನೆಲೆ ಇದು.

61. ಅವರು ಹೇಳುವರು; ನಮ್ಮೊಡೆಯಾ, ನಮ್ಮನ್ನು ಇಲ್ಲಿಗೆ ಮುನ್ನಡೆಸಿದವರಿಗೆ ನರಕದಲ್ಲಿನ ಶಿಕ್ಷೆಯನ್ನು ಹೆಚ್ಚಿಸಿ ದುಪ್ಪಟ್ಟುಗೊಳಿಸಿಬಿಡು.

62. ಮತ್ತು ಅವರು ಹೇಳುವರು; ನಮಗೆ ಇದೇನಾಗಿದೆ? ದುಷ್ಟರೆಂದು ನಾವು ಪರಿಗಣಿಸಿದ್ದ ಜನರು (ಇಲ್ಲಿ) ನಮಗೆ ಕಾಣಿಸುತ್ತಿಲ್ಲವಲ್ಲಾ?

63. ನಾವು ಅವರನ್ನು ಗೇಲಿ ಮಾಡುತ್ತಿದ್ದೆವು. (ನಮ್ಮ) ಕಣ್ಣುಗಳೇನು ಅವರನ್ನು ಕಾಣಲು ಅಸಮರ್ಥವಾಗಿವೆಯೇ?

64. ಖಂಡಿತವಾಗಿಯೂ ಇದು ಸತ್ಯ. ನರಕದವರು (ಹೀಗೆಯೇ) ಜಗಳಾಡುವರು.

65. (ದೂತರೇ,) ಹೇಳಿರಿ; ನಾನು ಕೇವಲ ಎಚ್ಚರಿಸುವವನು. ಏಕ ಮಾತ್ರನೂ ಬಲಿಷ್ಠನೂ ಆಗಿರುವ ಅಲ್ಲಾಹನ ಹೊರತು ಬೇರೆ ದೇವರಿಲ್ಲ.

66. ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನೂ, ಭಾರೀ ಪ್ರಚಂಡನೂ ಮಹಾ ಕ್ಷಮಾಶೀಲನೂ ಆಗಿರುವನು.

67. ಹೇಳಿರಿ; ಇದೊಂದು ದೊಡ್ಡ (ಮಹತ್ವದ) ಸುದ್ದಿ.

68. ಆದರೆ, ನೀವು ಇದನ್ನು ಕಡೆಗಣಿಸುತ್ತಿರುವಿರಿ.

69. ಮೇಲಿನ ಲೋಕದಲ್ಲಿ ಅವರು ಜಗಳಾಡಿದ ಕುರಿತು ನನಗೆ ಯಾವ ಮಾಹಿತಿಯೂ ಇರಲಿಲ್ಲ.

70. ಇದೆಲ್ಲಾ ನನಗೆ ನೀಡಲಾಗಿರುವ ದಿವ್ಯ ಸಂದೇಶವಾಗಿದೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ.

71. ನಿಮ್ಮೊಡೆಯನು ಮಲಕ್‌ಗಳೊಡನೆ ಹೇಳಿದನು; ‘‘ನಾನು ಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ’’.

72. ‘‘ನಾನು ಆತನನ್ನು ರಚಿಸಿ ಅವನೊಳಗೆ ನನ್ನ ಆತ್ಮದಿಂದ ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ’’.

73. ಮಲಕ್‌ಗಳೆಲ್ಲರೂ ಜೊತೆಯಾಗಿ ಸಾಷ್ಟಾಂಗವೆರಗಿದರು.

74. ಆದರೆ ಇಬ್ಲೀಸನ ಹೊರತು. ಅವನು ಅಹಂಕಾರ ತೋರಿದನು ಮತ್ತು ಅವನು ಧಿಕ್ಕಾರಿಯಾಗಿದ್ದನು.

75. ಅವನು (ಅಲ್ಲಾಹನು) ಹೇಳಿದನು; ಇಬ್ಲೀಸನೇ, ನಾನು ನನ್ನ ಕೈಯ್ಯರೆ ಸೃಷ್ಟಿಸಿ ದವನ ಮುಂದೆ ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದ ಅಂಶ ಯಾವುದು? ನೀನು ಅಹಂಕಾರ ತೋರಿದೆಯಾ? ಅಥವಾ ನೀನೇನು ತುಂಬಾ ಉನ್ನತ ಸ್ಥಾನದವನೇ?

76. ಅವನು(ಶೈತಾನನು) ಹೇಳಿದನು; ನಾನು ಅವನಿಗಿಂತ (ಮಾನವನಿಗಿಂತ) ಶ್ರೇಷ್ಠನು. ನೀನು ನನ್ನನ್ನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ನೀನು ಮಣ್ಣಿನಿಂದ ಸೃಷ್ಟಿಸಿರುವೆ.

77. ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ತೊಲಗು. ನೀನು ನಿಂದ್ಯನಾಗಿರುವೆ.

78. ಖಂಡಿತವಾಗಿಯೂ ಅಂತಿಮ ಪ್ರತಿಫಲದ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿರುವುದು.

79. ಅವನು (ಶೈತಾನನು) ಹೇಳಿದನು; ನನ್ನೊಡೆಯಾ ಎಲ್ಲರನ್ನೂ ಮತ್ತೆ ಜೀವಂತಗೊಳಿಸುವ ದಿನದ ತನಕ ನನಗೆ ಕಾಲಾವಕಾಶ ನೀಡು.

80. ಅವನು (ಅಲ್ಲಾಹನು) ಹೇಳಿದನು; ಸರಿ, ನಿನಗೆ ಅವಕಾಶ ನೀಡಲಾಗಿದೆ.

81. ಒಂದು ನಿರ್ದಿಷ್ಟ ಕಾಲದ ತನಕ

82. ಅವನು (ಶೈತಾನ್) ಹೇಳಿದನು; ನಿನ್ನ ಗೌರವದಾಣೆ! ನಾನು ಅವರೆಲ್ಲರನ್ನೂ ದಾರಿಗೆಡಿಸಿ ಬಿಡುವೆನು

83. ಅವರ ಪೈಕಿ ನೀನು ಆರಿಸಿಕೊಂಡ ದಾಸರ ಹೊರತು.

84. ಅವನು (ಅಲ್ಲಾಹನು) ಹೇಳಿದನು; ಇದು ಸತ್ಯ, ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.

85. ನಾನು ನರಕವನ್ನು ನಿನ್ನಿಂದ ಹಾಗೂ ಅವರ ಪೈಕಿ ನಿನ್ನನ್ನು ಅನುಸರಿಸುವವರಿಂದ ತುಂಬಿ ಬಿಡಲಿದ್ದೇನೆ.

86. (ದೂತರೇ,) ಹೇಳಿರಿ; ನಾನು ಇದಕ್ಕಾಗಿ (ಸತ್ಯ ಪ್ರಸಾರಕ್ಕಾಗಿ) ನಿಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸುವುದಿಲ್ಲ ಮತ್ತು ನಾನು ವಂಚಕನಲ್ಲ.

87. ಇದು (ಕುರ್‌ಆನ್) ಸರ್ವ ಲೋಕಗಳಿಗಿರುವ ಉಪದೇಶವಾಗಿದೆ.

88. ಇದರ ವಾಸ್ತವವು ತುಸುಕಾಲದ ಬಳಿಕ ನಿಮಗೆ ಖಂಡಿತ ತಿಳಿಯಲಿದೆ.