40. Ghafir

40. ಅಲ್ ಮೂಮಿನ್ (ವಿಶ್ವಾಸಿ)

ವಚನಗಳು – 85, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹಾ ಮೀಮ್.

2. ಈ ಗ್ರಂಥವನ್ನು ಅಲ್ಲಾಹನ ಕಡೆಯಿಂದ ಇಳಿಸಿಕೊಡಲಾಗಿದೆ. ಅವನು ಪ್ರಬಲನೂ ಬಲ್ಲವನೂ ಆಗಿದ್ದಾನೆ.

3. ಅವನು ಪಾಪಗಳನ್ನು ಕ್ಷಮಿಸುವವನು, ಪಶ್ಚಾತ್ತಾಪ ಸ್ವೀಕರಿಸುವವನು, ತೀವ್ರವಾಗಿ ದಂಡಿಸುವವನು ಮತ್ತು ತುಂಬಾ ಸಮರ್ಥನಾಗಿದ್ದಾನೆ. ಅವನ ಹೊರತು ಬೇರಾರೂ ಪೂಜಾರ್ಹರಲ್ಲ. ಕೊನೆಗೆ (ಎಲ್ಲರೂ) ಅವನೆಡೆಗೇ ಮರಳಬೇಕಾಗಿದೆ.

4. ಧಿಕ್ಕಾರಿಗಳ ಹೊರತು ಬೇರಾರೂ ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವುದಿಲ್ಲ. ಇನ್ನು, ನಾಡುಗಳಲ್ಲಿನ ಅವರ ಮೆರೆದಾಟವು ನಿಮ್ಮನ್ನು ಮೋಸಗೊಳಿಸದಿರಲಿ.

 5. ಅವರಿಗಿಂತ ಹಿಂದೆ ನೂಹರ ಜನಾಂಗದವರು ಮತ್ತು ಅವರ ಬಳಿಕ ದಂಡುಗಳು (ಸತ್ಯವನ್ನು) ತಿರಸ್ಕರಿಸಿದ್ದಾರೆ. ಪ್ರತಿಯೊಂದು ಸಮುದಾಯದವರೂ ತಮ್ಮ ದೇವದೂತರನ್ನು ಸೆರೆ ಹಿಡಿಯಲು ನಿರ್ಧರಿಸಿದ್ದರು ಹಾಗೂ ಅನ್ಯಾಯವಾಗಿ ಅವರೊಡನೆ ಜಗಳಾಡಿ ಆಮೂಲಕ ಸತ್ಯವನ್ನು ಹತ್ತಿಕ್ಕಲು ಶ್ರಮಿಸಿದರು. ಕೊನೆಗೆ ನಾವು ಅವರನ್ನು ದಂಡಿಸಿದೆವು. ಕೊನೆಗೆ ನಮ್ಮ ಶಿಕ್ಷೆ ಹೇಗಿತ್ತೆಂದು (ನೋಡಿರಿ).

6. ಈ ರೀತಿ, ಧಿಕ್ಕಾರಿಗಳು ನರಕವಾಸಿಗಳೆಂಬ ನಿಮ್ಮ ಒಡೆಯನ ಮಾತು, ಅವರ ವಿರುದ್ಧ ಸಾಬೀತಾಗಿ ಬಿಟ್ಟಿತು.

7. ವಿಶ್ವ ಸಿಂಹಾಸನವನ್ನು ಹೊತ್ತಿರುವವರು ಮತ್ತು ಅದರ ಸುತ್ತ ಇರುವವರು (ಮಲಕ್‌ಗಳು) ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವರ ಪಾವಿತ್ರವನ್ನು ಜಪಿಸುತ್ತಿರುತ್ತಾರೆ. ಅವರು ಅವನಲ್ಲಿ ನಂಬಿಕೆ ಇಟ್ಟಿರುತ್ತಾರೆ ಮತ್ತು ವಿಶ್ವಾಸಿಗಳ ಪರವಾಗಿ ಕ್ಷಮೆಯಾಚಿಸುತ್ತಿರುತ್ತಾರೆ; ‘‘ನಮ್ಮೊಡೆಯಾ, ನಿನ್ನ ಕೃಪೆ ಹಾಗೂ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ಪಶ್ಚಾತ್ತಾಪ ಪಡುವವರನ್ನು ಹಾಗೂ ನಿನ್ನ ಮಾರ್ಗವನ್ನು ಅನುಸರಿಸುವವರನ್ನು ಕ್ಷಮಿಸಿಬಿಡು ಮತ್ತು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸು’’.

8. ‘‘ನಮ್ಮೊಡೆಯಾ, ಅವರನ್ನು ಹಾಗೂ ಅವರ ತಾತ ಮುತ್ತಾತಂದಿರು, ಅವರ ಪತ್ನಿಯರು ಹಾಗೂ ಅವರ ಸಂತತಿಗಳ ಪೈಕಿ ಸಜ್ಜನರಾಗಿರುವವರನ್ನು, ನೀನು ಅವರಿಗೆ ವಾಗ್ದಾನ ಮಾಡಿರುವಂತಹ ಶಾಶ್ವತ ಸ್ವರ್ಗೋದ್ಯಾನಗಳೊಳಗೆ ಸೇರಿಸು. ಖಂಡಿತವಾಗಿಯೂ ನೀನು ಪ್ರಬಲನೂ ಯುಕ್ತಿವಂತನೂ ಆಗಿರುವೆ’’.

9. ‘‘ನೀನು ಅವರನ್ನು ಕೆಡುಕುಗಳಿಂದ ಸಂರಕ್ಷಿಸು. ಇಂದಿನ ದಿನ, ಪಾಪಗಳಿಂದ ರಕ್ಷಿತನಾಗಿರುವವನು ನಿನ್ನ ಕೃಪೆಗೆ ಪಾತ್ರನಾದನು. ಇದುವೇ ಮಹಾ ಸೌಭಾಗ್ಯ’’.

10. (ಪರಲೋಕದಲ್ಲಿ) ಧಿಕ್ಕಾರಿಗಳನ್ನು ಖಂಡಿತ ಕರೆಯಲಾಗುವುದು (ಮತ್ತು ಹೇಳಲಾಗುವುದು;) ‘‘ಇಂದು ನಿಮ್ಮ ಕುರಿತು ಸ್ವತಃ ನಿಮಗೇ ಜಿಗುಪ್ಸೆ ಇದೆ. ಆದರೆ, (ಈ ಹಿಂದೆ) ವಿಶ್ವಾಸದೆಡೆಗೆ ನಿಮ್ಮನ್ನು ಕರೆಯಲಾದ ವೇಳೆ, ನೀವು ಧಿಕ್ಕರಿಸಿದಾಗ, ಇದಕ್ಕಿಂತ ಹೆಚ್ಚಿನ ಜಿಗುಪ್ಸೆ, ನಿಮ್ಮ ಕುರಿತು ಅಲ್ಲಾಹನಿಗಿತ್ತು’’.

11. ಅವರು ಹೇಳುವರು; ‘‘ನೀನು ಎರಡು ಬಾರಿ ನಮ್ಮನ್ನು ಸಾಯಿಸಿದೆ ಮತ್ತು ಎರಡು ಬಾರಿ ನಮ್ಮನ್ನು ಜೀವಂತಗೊಳಿಸಿದೆ. ನಾವಿದೋ (ನಮ್ಮ ತಪ್ಪನ್ನು) ಒಪ್ಪಿಕೊಂಡೆವು. ಇದೀಗ (ನಮಗೆ) ಇಲ್ಲಿಂದ ಹೊರಟು ಹೋಗಲು ಏನಾದರೂ ದಾರಿ ಇದೆಯೇ?’’

12. (ಅವರೊಡನೆ ಹೇಳಲಾಗುವುದು;) ‘‘ನಿಮಗೆ ಹೀಗಾಗಿರುವುದು ಏಕೆಂದರೆ, ಒಬ್ಬ ಅಲ್ಲಾಹನನ್ನು ಪ್ರಾರ್ಥಿಸುವಾಗ ನೀವು ಧಿಕ್ಕರಿಸುತ್ತಿದ್ದಿರಿ ಮತ್ತು (ಯಾರನ್ನಾದರೂ) ಅವನ ಜೊತೆ ಪಾಲುಗೊಳಿಸಲಾದಾಗ ನೀವು ನಂಬುತ್ತಿದ್ದಿರಿ. ಅಧಿಕಾರವು, ಉನ್ನತನೂ ಮಹಾನನೂ ಆಗಿರುವ ಅಲ್ಲಾಹನಿಗೇ ಸೇರಿದೆ’’.

13. ಅವನೇ ನಿಮಗೆ ತನ್ನ ಪುರಾವೆಗಳನ್ನು ತೋರಿಸುತ್ತಿರುವವನು ಮತ್ತು ನಿಮಗಾಗಿ ಆಕಾಶದಿಂದ ಆಹಾರವನ್ನು ಇಳಿಸಿಕೊಡುವವನು. (ಅಲ್ಲಾಹನೆಡೆಗೆ) ಒಲವು ತೋರುವವರು ಮಾತ್ರವೇ ಉಪದೇಶವನ್ನು ಸ್ವೀಕರಿಸುತ್ತಾರೆ.

14. ನೀವು ನಿಷ್ಠೆಯನ್ನು ಅಲ್ಲಾಹನಿಗೇ ಮೀಸಲಾಗಿಟ್ಟು, ಅವನನ್ನು ಪ್ರಾರ್ಥಿಸಿರಿ – ಧಿಕ್ಕಾರಿಗಳಿಗೆ ಅದೆಷ್ಟು ಅಪ್ರಿಯವಾಗಿದ್ದರೂ ಸರಿ.

 15. (ಅವನು) ಉನ್ನತ ಸ್ಥಾನಗಳುಳ್ಳವನು. ವಿಶ್ವ ಸಿಂಹಾಸನದ ಮಾಲಕನು. ಅವನು ದಿವ್ಯ ಸಂದೇಶವನ್ನು ತಾನಿಚ್ಛಿಸಿದವರಿಗೆ ದಯ ಪಾಲಿಸುತ್ತಾನೆ – ಅವರು ಭೇಟಿಯ ದಿನದ (ಪುನರುತ್ಥಾನದ) ಕುರಿತು ಎಚ್ಚರಿಸಲೆಂದು.

16. ಅವರು ಹಾಜರಾಗುವ ದಿನ, ಅವರ ಕುರಿತಾದ ಯಾವ ವಿಷಯವೂ ಅಲ್ಲಾಹನಿಂದ ಗುಪ್ತವಾಗಿರದು. ‘‘ಇಂದು ಆಧಿಪತ್ಯವು ಯಾರಿಗೆ ಸೇರಿದೆ?‘‘ ‘‘ಭಾರೀ ಪ್ರಚಂಡನಾದ ಅಲ್ಲಾಹನಿಗೆ ಮಾತ್ರ‘‘ (ಎಂಬ ಘೋಷಣೆಯೇ ಅಂದು ಎಲ್ಲೆಲ್ಲೂ ಮೊಳಗುತ್ತಿರುವುದು)!

17. ಇಂದು ಪ್ರತಿಯೊಬ್ಬನಿಗೂ ಆತನ ಕರ್ಮಗಳ ಫಲವನ್ನು ನೀಡಲಾಗುವುದು. ಇಂದು ಯಾವುದೇ ಅನ್ಯಾಯ ನಡೆಯದು. ಖಂಡಿತವಾಗಿಯೂ ಅಲ್ಲಾಹನು ವೇಗವಾಗಿ ವಿಚಾರಣೆ ಮುಗಿಸುವವನಾಗಿದ್ದಾನೆ.

18. ಶೀಘ್ರವೇ ಬರಲಿರುವ ಆ ದಿನದ ಕುರಿತು ನೀವು ಅವರನ್ನು ಎಚ್ಚರಿಸಿರಿ. ಅಂದು ಸಂಕಟ ತುಂಬಿ, ಹೃದಯಗಳು ಕೊರಳಿಗೆ ಬರುವವು. ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರನಾಗಲಿ, ಅನುಸರಣಾರ್ಹ ಶಿಫಾರಸ್ಸುದಾರನಾಗಲಿ ಇರಲಾರನು.

19. ಅವನು (ಅಲ್ಲಾಹನು), ಕಣ್ಣುಗಳು ಮಾಡುವ ಮೋಸವನ್ನೂ ಮನಸ್ಸುಗಳಲ್ಲಿ ಅಡಗಿರುವ ವಿಷಯಗಳನ್ನೂ ಬಲ್ಲನು.

20. ಅಲ್ಲಾಹನು ನ್ಯಾಯೋಚಿತವಾಗಿಯೇ ತೀರ್ಪು ನೀಡುವನು. ಜನರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರು ಯಾವ ತೀರ್ಪನ್ನೂ ನೀಡಲಾರರು. ಅಲ್ಲಾಹನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ.

 21. ಅವರೇನು ಭೂಮಿಯಲ್ಲಿ ನಡೆದಾಡಿ, ತಮಗಿಂತ ಹಿಂದೆ ಇದ್ದವರ ಗತಿ ಏನಾಯಿತೆಂಬುದನ್ನು ನೋಡುವುದಿಲ್ಲವೇ? ಅವರು ಇವರಿಗಿಂತ ಹೆಚ್ಚು ಶಕ್ತಿ ಶಾಲಿಗಳಾಗಿದ್ದರು ಮತ್ತು ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟು ಹೋಗಿದ್ದರು. ಕೊನೆಗೆ ಅಲ್ಲಾಹನು ಅವರ ಪಾಪಗಳ ಕಾರಣ ಅವರನ್ನು ದಂಡಿಸಿದನು ಮತ್ತು ಅವರನ್ನು ಅಲ್ಲಾಹನಿಂದ ರಕ್ಷಿಸ ಬಲ್ಲವರು ಯಾರೂ ಇರಲಿಲ್ಲ.

22. ಇದೇಕೆಂದರೆ, ಅವರ ದೂತರು ಅವರ ಬಳಿಗೆ ಬಹಳ ಸ್ಪಷ್ಟ ಪುರಾವೆಗಳನ್ನು ತಂದಿದ್ದರು. ಆದರೂ ಅವರು ಧಿಕ್ಕರಿಸಿದ್ದರು ಮತ್ತು ಅಲ್ಲಾಹನು ಅವರನ್ನು ದಂಡಿಸಿದನು. ಅವನು ಖಂಡಿತ ಬಹಳ ಶಕ್ತಿಶಾಲಿಯಾಗಿದ್ದಾನೆ ಹಾಗೂ ಕಠೋರ ಶಿಕ್ಷೆ ನೀಡುವವನಾಗಿದ್ದಾನೆ.

 23. ಮೂಸಾರನ್ನು ನಾವು ನಮ್ಮ ಪುರಾವೆಗಳೊಂದಿಗೆ ಹಾಗೂ ಸ್ಪಷ್ಟ ಪ್ರಮಾಣದೊಂದಿಗೆ ಕಳಿಸಿದ್ದೆವು

24. ಫಿರ್‌ಔನ್, ಹಾಮಾನ್ ಹಾಗೂ ಕಾರೂನರ ಕಡೆಗೆ. ಆದರೆ ಅವರೆಲ್ಲ ಅವರನ್ನು ಮಾಟಗಾರನೆಂದೂ ಸುಳ್ಳುಗಾರನೆಂದೂ ಕರೆದರು.

25. ಅವರು ನಮ್ಮ ಕಡೆಯಿಂದ ಸತ್ಯದೊಂದಿಗೆ ಅವರ ಬಳಿಗೆ ತಲುಪಿದಾಗ ಅವರು, ‘‘ಅವನ ಜೊತೆ ವಿಶ್ವಾಸಿಗಳಾಗಿರುವವರ ಪುತ್ರರನ್ನೆಲ್ಲಾ ಕೊಂದು ಬಿಡಿ ಮತ್ತು ಅವರ ಪುತ್ರಿಯರನ್ನು ಮಾತ್ರ ಜೀವಂತ ಬಿಟ್ಟು ಬಿಡಿ’’ ಎಂದರು. ಆದರೆ, ಧಿಕ್ಕಾರಿಗಳ ಸಂಚು ವಿಫಲವಾಗಿಬಿಟ್ಟಿತು.

26. ಮತ್ತು ಫಿರ್‌ಔನ್ ಹೇಳಿದನು; ‘‘ನನ್ನನ್ನು ಬಿಟ್ಟು ಬಿಡಿ, ನಾನು ಮೂಸಾನನ್ನು ಕೊಂದು ಬಿಡುವೆನು, ಅವನು ತನ್ನ ದೇವರನ್ನು ಕರೆಯಲಿ. ಅವನು ನಿಮ್ಮನ್ನು ಮತಾಂತರಿಸಬಹುದು ಅಥವಾ ಭೂಮಿಯಲ್ಲಿ ಅಶಾಂತಿ ಹರಡಬಹುದೆಂಬ ಆತಂಕ ನನಗಿದೆ’’.

27. ಮತ್ತು ಮೂಸಾ ಹೇಳಿದರು; ‘‘ವಿಚಾರಣೆಯ ದಿನದಲ್ಲಿ ನಂಬಿಕೆ ಇಲ್ಲದ ಪ್ರತಿಯೊಬ್ಬ ಅಹಂಕಾರಿಯ ವಿರುದ್ಧ ನಾನು, ನನ್ನೊಡೆಯನೂ ನಿನ್ನೊಡೆಯನೂ ಆಗಿರುವಾತನ ರಕ್ಷಣೆಯನ್ನು ಕೋರುತ್ತೇನೆ’’.

28. ಮತ್ತು ಫಿರ್‌ಔನ್‌ನ ಬಳಗದಲ್ಲಿದ್ದ ಹಾಗೂ ತನ್ನ ನಂಬಿಕೆಯನ್ನು ಗುಪ್ತವಾಗಿಟ್ಟಿದ್ದ ವಿಶ್ವಾಸಿಯೊಬ್ಬನು ಹೇಳಿದನು; ‘‘ನೀವೇನು, ಅಲ್ಲಾಹನೇ ನನ್ನೊಡೆಯನೆಂದು ಹೇಳಿದ ಮಾತ್ರಕ್ಕೆ, ನಿಮ್ಮೆಡೆಯನ ಕಡೆಯಿಂದ ಸ್ಪಷ್ಟ ನಿದರ್ಶನಗಳನ್ನು ತಂದಿರುವ ವ್ಯಕ್ತಿಯೊಬ್ಬನನ್ನು ಕೊಂದು ಬಿಡುವಿರಾ? ಒಂದು ವೇಳೆ ಅವನು ಸುಳ್ಳುಗಾರನಾಗಿದ್ದರೆ, ಅವನ ಸುಳ್ಳಿನ ಹೊಣೆಯು ಅವನ ಮೇಲೆಯೇ ಇರುವುದು. ಇನ್ನು, ಅವನು ಸತ್ಯವಂತನಾಗಿದ್ದರೆ, ಅವನು ನಿಮಗೆ ವಾಗ್ದಾನ ಮಾಡಿರುವ ಶಿಕ್ಷೆಯ ಒಂದಷ್ಟು ಭಾಗವಂತು ನಿಮಗೆ ಖಂಡಿತ ಸಿಗಲಿದೆ. ಅಲ್ಲಾಹನು ಅತಿಕ್ರಮಿಯಾಗಿರುವ ಸುಳ್ಳುಗಾರನಿಗೆ ಖಂಡಿತ ಸರಿದಾರಿಯನ್ನು ತೋರಿಸುವುದಿಲ್ಲ’’.

29. ‘‘ನನ್ನ ಜನಾಂಗದವರೇ, ಇಂದು ಆಧಿಪತ್ಯವು ನಿಮಗೆ ಸೇರಿದೆ. ನೀವು ಭೂಮಿಯಲ್ಲಿ ಪ್ರಭಾವಶಾಲಿಗಳಾಗಿರುವಿರಿ. ಆದರೆ, ಅಲ್ಲಾಹನ ಪ್ರಕೋಪವು ನಮ್ಮ ಮೇಲೆ ಬಂದೆರಗಿದರೆ, ಯಾರು ತಾನೇ ನಮಗೆ ನೆರವಾಗಬಲ್ಲರು?’’ ಫಿರ್‌ಔನ್ ಹೇಳಿದನು; ನಾನು ನನಗೆ ತೋಚಿದ್ದನ್ನೇ ನಿಮಗೆ ಹೇಳುತ್ತಿದ್ದೇನೆ ಮತ್ತು ನಾನು ನಿಮಗೆ ಒಳಿತಿನ ದಾರಿಯನ್ನೇ ತೋರಿಸುತ್ತಿದ್ದೇನೆ’’.

30. ಮತ್ತು ವಿಶ್ವಾಸಿಯಾಗಿದ್ದವನು ಹೇಳಿದನು; ‘‘ನನ್ನ ಜನಾಂಗದವರೇ, (ಗತಕಾಲದ) ದಂಡುಗಳು ಕಂಡ (ವಿನಾಶದ) ದಿನವು ನಿಮ್ಮ ಪಾಲಿಗೂ ಬಂದು ಬಿಡುವುದೆಂಬ ಆಶಂಕೆ ನನಗಿದೆ’’.

31. ‘‘ನೂಹ್, ಆದ್ ಮತ್ತು ಸಮೂದ್‌ರ ಜನಾಂಗದವರು ಹಾಗೂ ಅವರ ಅನಂತರದವರು ಎದುರಿಸಿದ ಗತಿಯೇ (ನಿಮಗೂ ಒದಗೀತು). ಅಲ್ಲಾಹನಂತು ತನ್ನ ದಾಸರ ಮೇಲೆ ಅಕ್ರಮವೆಸಗ ಬಯಸುವುದಿಲ್ಲ’’.

32. ‘‘ನನ್ನ ಜನಾಂಗದವರೇ, ಹಾಹಾಕಾರದ ದಿನವೊಂದನ್ನು ನೀವು ಎದುರಿಸಬೇಕಾದೀತೆಂಬ ಆಶಂಕೆ ನನಗಿದೆ’’.

33. ‘‘ಅಂದು ನೀವು ಬೆನ್ನು ತಿರುಗಿಸಿ ಓಡುವಿರಿ (ಮತ್ತು) ಅಲ್ಲಾಹನಿಂದ ನಿಮ್ಮನ್ನು ರಕ್ಷಿಸಬಲ್ಲವರು ಯಾರೂ ಇರಲಾರರು. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವನಿಗೆ ಯಾರೂ ಸರಿದಾರಿಯನ್ನು ತೋರಲಾರರು’’.

  34. ಈ ಹಿಂದೆ ನಿಮ್ಮ ಬಳಿಗೆ ಯೂಸುಫರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ, ಅವರು ನಿಮ್ಮ ಬಳಿಗೆ ತಂದಿದ್ದ ಸಂದೇಶದ ಕುರಿತು ನೀವು ಸಂಶಯಗ್ರಸ್ತರಾಗಿದ್ದಿರಿ. ಕೊನೆಗೆ ಅವರು ಮೃತರಾದಾಗ ನೀವು, ಅವರ ಬಳಿಕ ಅಲ್ಲಾಹನು ಇನ್ನಾರನ್ನೂ ದೂತರಾಗಿ ಕಳಿಸಲಾರನೆಂದು ಹೇಳಿದಿರಿ. ಅತಿಕ್ರಮಿಯಾಗಿರುವ ಸಂಶಯಗ್ರಸ್ತನನ್ನು ಅಲ್ಲಾಹನು ಇದೇ ರೀತಿ ದಾರಿಗೆಡಿಸುತ್ತಾನೆ.

 35. ಅವರು ತಮ್ಮ ಬಳಿಗೆ ಯಾವುದೇ ಪ್ರಮಾಣ ಬಂದಿಲ್ಲದಿದ್ದರೂ, ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುತ್ತಾರೆ. ಇದು ಅಲ್ಲಾಹನ ಬಳಿಯಲ್ಲೂ, ಸತ್ಯವಿಶ್ವಾಸಿಗಳ ಬಳಿಯಲ್ಲೂ ತೀರಾ ಅಪ್ರಿಯ ವಿಷಯವಾಗಿದೆ. ಅಹಂಕಾರಿ ಹಾಗೂ ವಿದ್ರೋಹಿಯಾಗಿರುವ ಪ್ರತಿಯೊಬ್ಬನ ಹೃದಯದ ಮೇಲೂ ಅಲ್ಲಾಹನು ಇದೇ ರೀತಿ ಮುದ್ರೆಯೊತ್ತಿ ಬಿಟ್ಟಿರುತ್ತಾನೆ.

36. ಫಿರ್‌ಔನ್ ಹೇಳಿದನು; ‘‘ಓ (ಸಚಿವ) ಹಾಮಾನ್, ನನಗೊಂದು ಎತ್ತರದ ಗೋಪುರವನ್ನು ರಚಿಸಿಕೊಡು. ಆ ಮೂಲಕ ಕೆಲವು ದಾರಿಗಳನ್ನು ತಲುಪಲು ನನಗೆ ಸಾಧ್ಯವಾದೀತು’’.

37. ‘‘ಆಕಾಶದ ಆ ದಾರಿಗಳ ಮೂಲಕ ನಾನು ಮೂಸಾರ ದೇವರೆಡೆಗೆ ಇಣುಕಿ ನೋಡುವೆನು. ನಾನಂತು ಆತ (ಮೂಸಾ)ನನ್ನು ಸುಳ್ಳುಗಾರನೆಂದೇ ಭಾವಿಸುತ್ತೇನೆ’’. ಈ ರೀತಿ ಫಿರ್‌ಔನ್‌ನ ಪಾಲಿಗೆ ಆತನ ದುಷ್ಟ ಕೃತ್ಯಗಳನ್ನು ಚಂದಗಾಣಿಸಿ ಬಿಡಲಾಯಿತು ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಯಿತು. ಕೊನೆಗೆ ಫಿರ್‌ಔನನ ಎಲ್ಲ ಸಂಚುಗಳೂ ವಿಫಲವಾಗಿಬಿಟ್ಟವು.

38. ವಿಶ್ವಾಸಿಯಾಗಿದ್ದವನು ಹೇಳಿದನು; ‘‘ನನ್ನ ಜನಾಂಗದವರೇ, ನೀವು ನನ್ನನ್ನು ಅನುಸರಿಸಿರಿ. ನಾನು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುವೆನು’’.

39. ‘‘ನನ್ನ ಜನಾಂಗದವರೇ, ಇಹಲೋಕದ ಈ ಬದುಕು ಕೇವಲ ತಾತ್ಕಾಲಿಕ. ನಿಜವಾಗಿ, ಪರಲೋಕವೇ ಶಾಶ್ವತ ನೆಲೆಯಾಗಿದೆ’’.

40. ‘‘ದುಷ್ಟ ಕರ್ಮಗಳನ್ನು ಮಾಡಿದವನಿಗೆ ಅಂತಹದೇ ಪ್ರತಿಫಲ ಸಿಗುವುದು ಮತ್ತು ಸತ್ಕರ್ಮಗಳನ್ನು ಮಾಡಿದ ವ್ಯಕ್ತಿ, ಪುರುಷನಿರಲಿ, ಸ್ತ್ರೀ ಇರಲಿ, ವಿಶ್ವಾಸಿಯಾಗಿದ್ದರೆ, ಅವರೇ ಸ್ವರ್ಗವನ್ನು ಸೇರುವರು. ಅಲ್ಲಿ ಅವರಿಗೆ ಅಪಾರ ಸಂಪನ್ನತೆಯನ್ನು ನೀಡಲಾಗುವುದು’’.

41. ‘‘ಮತ್ತು, ನನ್ನ ಜನಾಂಗದವರೇ, ಇದೇನು, ನಾನು ನಿಮ್ಮನ್ನು ವಿಮೋಚನೆಯೆಡೆಗೆ ಕರೆಯುತ್ತಿದ್ದೇನೆ. ಆದರೆ, ನೀವು ನನ್ನನ್ನು ನರಕದೆಡೆಗೆ ಆಮಂತ್ರಿಸುತ್ತಿರುವಿರಿ’’.

42. ‘‘ಅಲ್ಲಾಹನನ್ನು ನಾನು ಧಿಕ್ಕರಿಸಬೇಕು ಹಾಗೂ ನನಗೆ ಅರಿವೇ ಇಲ್ಲದವುಗಳನ್ನು ಅವನ ಜೊತೆ ಪಾಲುಗೊಳಿಸಬೇಕೆಂದು ನೀವು ನನಗೆ ಕರೆ ನೀಡುತ್ತಿರುವಿರಿ. ಇತ್ತ ನಾನು ನಿಮ್ಮನ್ನು ಅತ್ಯಂತ ಪ್ರಬಲನೂ ಕ್ಷಮಾಶೀಲನೂ ಆಗಿರುವಾತನ (ಅಲ್ಲಾಹನ) ಕಡೆಗೆ ಆಮಂತ್ರಿಸುತ್ತಿದ್ದೇನೆ’’.

 43. ‘‘ನೀವು ಯಾರೆಡೆಗೆ ನನ್ನನ್ನು ಆಮಂತ್ರಿಸುತ್ತಿರುವಿರೋ ಆತನಿಗೆ ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಖಂಡಿತ ಯಾವ ಸ್ಥಾನವೂ ಇಲ್ಲ. ಕೊನೆಗೆ ನಾವೆಲ್ಲರೂ ಅಲ್ಲಾಹನೆಡೆಗೆ ಮರಳಬೇಕಾಗಿದೆ. ಮತ್ತು ಅತಿಕ್ರಮಿಗಳೇ ನರಕ ವಾಸಿಗಳಾಗುವರು’’.

44. ‘‘ನಾನೀಗ ನಿಮಗೆ ಹೇಳುತ್ತಿರುವುದನ್ನು ಬಹು ಬೇಗನೇ ನೀವು ನೆನಪಿಸಿಕೊಳ್ಳುವಿರಿ. ನಾನು ನನ್ನ ವಿಷಯವನ್ನು ಅಲ್ಲಾಹನಿಗೆ ಒಪ್ಪಿಸಿರುವೆನು. ಖಂಡಿತವಾಗಿಯೂ ಅಲ್ಲಾಹನು ದಾಸರ ಮೇಲೆ ಕಣ್ಣಿಟ್ಟಿತ್ತಿರುತ್ತಾನೆ’’.

 45. ಕೊನೆಗೆ ಅಲ್ಲಾಹನು ಆತನನ್ನು ಅವರ ದುಷ್ಟ ಸಂಚುಗಳಿಂದ ರಕ್ಷಿಸಿದನು ಮತ್ತು ಹೀನಾಯ ಶಿಕ್ಷೆಯೊಂದು ಫಿರ್‌ಔನ್‌ನ ಬಳಗವನ್ನು ಆವರಿಸಿಕೊಂಡಿತು.

46. ಮುಂಜಾನೆಯೂ ಸಂಜೆಯೂ ಅವರನ್ನು ಬೆಂಕಿಯ ಮುಂದೆ ಹಾಜರು ಪಡಿಸಲಾಗುತ್ತದೆ. (ಪುನರುತ್ಥಾನದ) ನಿರ್ಣಾಯಕ ಘಳಿಗೆಯು ಬಂದುಬಿಟ್ಟಾಗ, ‘‘ಫಿರ್‌ಔನನ ಬಳಗವನ್ನು ಅತ್ಯಂತ ಘೋರ ಶಿಕ್ಷೆಯೊಳಕ್ಕೆ ತಳ್ಳಿರಿ’’ (ಎಂದು ಆದೇಶಿಸಲಾಗುವುದು)

47. ಮತ್ತು ಅವರು ನರಕದೊಳಗೆ ಪರಸ್ಪರ ಜಗಳಾಡುವರು. (ಇಹಲೋಕದಲ್ಲಿ) ದುರ್ಬಲರಾಗಿದ್ದವರು, ದೊಡ್ಡಸ್ತಿಕೆ ಮೆರೆಯುತ್ತಿದ್ದವರೊಡನೆ ಹೇಳುವರು; ‘‘(ಅಲ್ಲಿ) ನಾವು ನಿಮಗೆ ಅಧೀನರಾಗಿದ್ದೆವು. ನೀವೀಗ ಈ ಬೆಂಕಿಯನ್ನು ಸ್ವಲ್ಪ ಮಟ್ಟಿಗಾದರೂ ನಮ್ಮಿಂದ ನಿವಾರಿಸಬಲ್ಲಿರಾ?’’

48. (ಇಹದಲ್ಲಿ) ದೊಡ್ಡಸ್ತಿಕೆ ಮೆರೆಯುತ್ತಿದ್ದವರು ಹೇಳುವರು; ‘‘ಇದೀಗ ನಾವೆಲ್ಲರೂ ಇದರೊಳಗಿದ್ದೇವೆ. ಅಲ್ಲಾಹನು ಈಗಾಗಲೆ ದಾಸರ ನಡುವೆ ತೀರ್ಪು ನೀಡಿ ಬಿಟ್ಟಿದ್ದಾನೆ’’.

49. ನರಕದೊಳಗಿರುವವರು, ಅದರ ಕಾವಲುಗಾರರೊಡನೆ, ‘‘ಒಂದು ದಿನದ ಮಟ್ಟಿಗಾದರೂ ನಮ್ಮ ಪಾಲಿಗೆ ಶಿಕ್ಷೆಯನ್ನು ತುಸು ಹಗುರಗೊಳಿಸಬೇಕೆಂದು ನಿಮ್ಮ ಒಡೆಯನನ್ನು ಪ್ರಾರ್ಥಿಸಿರಿ’’ ಎನ್ನುವರು.

50. ಅವರು (ಕಾವಲುಗಾರರು), ‘‘ನಿಮ್ಮ ಬಳಿಗೆ ನಿಮ್ಮ ದೂತರು ಸ್ಪಷ್ಟ ಪುರಾವೆಗಳೊಂದಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು, ‘‘ಹೌದು ಬಂದಿದ್ದರು’’ ಎನ್ನುವರು. ಆಗ ಅವರು (ಕಾವಲುಗಾರರು) ಹೇಳುವರು; ‘‘ಹಾಗಾದರೆ ನೀವೇ ಪ್ರಾರ್ಥಿಸಿರಿ. ಧಿಕ್ಕಾರಿಗಳ ಪ್ರಾರ್ಥನೆಯು ಸದಾ ನಿಷ್ಫಲವಾಗಿರುತ್ತದೆ’’.

51. ನಾವು ನಮ್ಮ ದೂತರಿಗೆ ಹಾಗೂ ವಿಶ್ವಾಸಿಗಳಿಗೆ ಈ ಲೋಕದಲ್ಲೂ, (ಮುಂದೆ ಪರಲೋಕದಲ್ಲಿ) ಸಾಕ್ಷಿಗಳು ನಿಲ್ಲುವ ದಿನವೂ ಖಂಡಿತ ನೆರವಾಗುವೆವು.

52. ಅಂದು ಅಕ್ರಮಿಗಳಿಗೆ, ಅವರು ಹೂಡುವ ನೆಪಗಳಿಂದ ಯಾವ ಲಾಭವೂ ಆಗದು. ಅವರು ನಿಂದಿತರಾಗಿರುವರು ಮತ್ತು ಅತ್ಯಂತ ನಿಕೃಷ್ಟ ನೆಲೆಯು ಅವರದಾಗಿರುವುದು.

53. ನಾವು ಮೂಸಾರಿಗೆ ಮಾರ್ಗದರ್ಶನ ನೀಡಿದ್ದೆವು ಮತ್ತು ಇಸ್ರಾಈಲರ ಸಂತತಿಗಳನ್ನು ಗ್ರಂಥದ (ತೌರಾತ್‌ನ) ಉತ್ತರಾಧಿಕಾರಿಗಳಾಗಿ ಮಾಡಿದೆವು.

54. ಅದು (ತೌರಾತ್) ಬುದ್ಧಿಯುಳ್ಳವರ ಪಾಲಿಗೆ ಮಾರ್ಗದರ್ಶಿ ಹಾಗೂ ಸದುಪದೇಶವಾಗಿದೆ.

55. (ದೂತರೇ,) ನೀವು ಸಹನಶೀಲರಾಗಿರಿ. ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯವಾಗಿದೆ. ಮತ್ತು ನೀವು ನಿಮ್ಮ ಪಾಪಗಳಿಗಾಗಿ ಕ್ಷಮೆಯನ್ನು ಬೇಡಿರಿ. ಹಾಗೂ ಸಂಜೆ, ಮುಂಜಾನೆಗಳಲ್ಲಿ ನಿಮ್ಮೊಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ.

56. ಖಂಡಿತವಾಗಿಯೂ, ತಮ್ಮ ಬಳಿಗೆ (ಅಲ್ಲಾಹನ ಕಡೆಯಿಂದ) ಯಾವುದೇ ಪ್ರಮಾಣ ಬಂದಿಲ್ಲದಿದ್ದರೂ, ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರ ಮನಸ್ಸುಗಳಲ್ಲಿ (ತಾವೇ ಮಾಹಾನರೆಂಬ) ಅಹಂಕಾರ ತುಂಬಿದೆ. ಆದರೆ, ಅವರೆಂದೂ ಅದನ್ನು (ಮಹಾನತೆಯನ್ನು) ಸಾಧಿಸಲಾರರು. ನೀವು ಅಲ್ಲಾಹನ ರಕ್ಷಣೆಯನ್ನು ಕೋರಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಹಾಗೂ ನೋಡುವವನಾಗಿದ್ದಾನೆ.

57. ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯು ಮಾನವರ ಸೃಷ್ಟಿಗಿಂತ ದೊಡ್ಡ ಸಾಧನೆಯಾಗಿದೆ. ಆದರೆ, ಹೆಚ್ಚಿನ ಮಾನವರು ಇದನ್ನು ಅರಿತಿಲ್ಲ.

58. ಕುರುಡನು ಮತ್ತು ಕಾಣುವವನು ಸಮಾನರಲ್ಲ. ನಂಬಿಕೆಯುಳ್ಳವರು, ಸತ್ಕರ್ಮಗಳನ್ನು ಮಾಡುವವರು ಮತ್ತು ದುರಾಚಾರಗಳಿಂದ ದೂರ ಉಳಿಯುವವರು (ಇತರರಂತಲ್ಲ). ನೀವು ಉಪದೇಶ ಸ್ವೀಕರಿಸುವುದು ತೀರಾ ಕಡಿಮೆ.

59. (ಲೋಕಾಂತ್ಯದ) ಆ ಕ್ಷಣವು ಖಂಡಿತ ಬರಲಿದೆ. ಅದರಲ್ಲಿ ಸಂದೇಹವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ನಂಬುವುದಿಲ್ಲ.

60. ನಿಮ್ಮ ಒಡೆಯನು ಹೇಳಿರುವನು; ನೀವು ನನ್ನನ್ನು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುವೆನು. ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಭಾವ ತೋರುವವರು ಖಂಡಿತವಾಗಿಯೂ ಅಪಮಾನಿತರಾಗಿ ನರಕವನ್ನು ಪ್ರವೇಶಿಸುವರು.

61. ನೀವು ವಿಶ್ರಾಂತಿ ಪಡುವುದಕ್ಕಾಗಿ ನಿಮಗಾಗಿ ರಾತ್ರಿಯನ್ನು ರೂಪಿಸಿದವನು ಹಾಗೂ ಹಗಲನ್ನು ಬೆಳಗಿಸಿದವನು ಅಲ್ಲಾಹನು. ಅಲ್ಲಾಹನು ತನ್ನ ದಾಸರ ಪಾಲಿಗೆ ಖಂಡಿತ ಉದಾರಿಯಾಗಿದ್ದಾನೆ. ಆದರೆ, ಜನರಲ್ಲಿ ಹೆಚ್ಚಿನವರು ಕೃತಜ್ಞತೆ ಸಲ್ಲಿಸುವುದಿಲ್ಲ.

62. ಅವನೇ ನಿಮ್ಮ ಒಡೆಯನಾದ ಅಲ್ಲಾಹ್. ಅವನು ಎಲ್ಲ ವಸ್ತುಗಳ ಸೃಷ್ಟಿಕರ್ತ. ಅವನ ಹೊರತು ಬೇರೆ ದೇವರಿಲ್ಲ. ಹೀಗಿರುತ್ತಾ ನೀವು ಅದೆಲ್ಲಿ ಅಲೆಯುತ್ತಿರುವಿರಿ?

63. ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರು ಇದೇ ರೀತಿ ಅಲೆಯುತ್ತಿರುತ್ತಾರೆ.

64. ಅಲ್ಲಾಹನೇ ನಿಮ್ಮ ಪಾಲಿಗೆ ಭೂಮಿಯನ್ನು ವಾಸದ ನೆಲೆಯಾಗಿಸಿದವನು ಮತ್ತು ಆಕಾಶವನ್ನು ಚಪ್ಪರವಾಗಿಸಿದವನು ಮತ್ತು ನಿಮಗೆ ರೂಪವನ್ನು ನೀಡಿದವನು ಹಾಗೂ ನಿಮ್ಮ ರೂಪವನ್ನು ಅಂದಗೊಳಿಸಿದವನು ಮತ್ತು ನಿರ್ಮಲ ವಸ್ತುಗಳ ಮೂಲಕ ನಿಮಗೆ ಆಹಾರವನ್ನು ಒದಗಿಸಿದವನು. ಅವನೇ ನಿಮ್ಮ ಒಡೆಯನಾದ ಅಲ್ಲಾಹ್. ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು.

65. ಅವನು (ಅಲ್ಲಾಹನು) ಸದಾ ಜೀವಂತನು. ಅವನ ಹೊರತು ಬೇರೆ ದೇವರಿಲ್ಲ. ನಿಷ್ಠೆಯನ್ನು ಅವನೊಬ್ಬನಿಗೇ ಮೀಸಲಾಗಿಟ್ಟು, ಅವನನ್ನು ಪ್ರಾರ್ಥಿಸಿರಿ. ಎಲ್ಲ ಪ್ರಶಂಸೆಗಳು, ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.

66. (ದೂತರೇ,) ಹೇಳಿರಿ; ನನ್ನ ಬಳಿಗೆ ನನ್ನ ಒಡೆಯನ ಕಡೆಯಿಂದ ಸ್ಪಷ್ಟವಾದ ಪ್ರಮಾಣಗಳು ಬಂದಿರುವಾಗ, ಅಲ್ಲಾಹನ ಹೊರತು ನೀವು ಪ್ರಾರ್ಥಿಸುವವುಗಳನ್ನು ನಾನು ಪೂಜಿಸಬಾರದೆಂದು ನನ್ನನ್ನು ತಡೆಯಲಾಗಿದೆ. ಮತ್ತು ನಾನು ಎಲ್ಲ ಲೋಕಗಳ ಒಡೆಯನಿಗೆ ಶರಣಾಗಬೇಕೆಂದು ನನಗೆ ಆದೇಶಿಸಲಾಗಿದೆ.

67. ಅವನೇ ನಿಮ್ಮನ್ನು (ಮೊದಲು) ಮಣ್ಣಿನಿಂದ, ಆ ಬಳಿಕ ವೀರ್ಯದಿಂದ ಮತ್ತು ಆ ಬಳಿಕ ಮಾಂಸ ಪಿಂಡದಿಂದ ಸೃಷ್ಟಿಸಿದವನು. ತರುವಾಯ ಅವನು ನಿಮ್ಮನ್ನು (ತಾಯಿಯ ಗರ್ಭದಿಂದ) ಶಿಶುವಾಗಿ ಹೊರತೆಗೆಯುತ್ತಾನೆ – ನೀವು ಯವ್ವನವನ್ನು ತಲುಪಲು ಹಾಗೂ ಆ ಬಳಿಕ ವೃದ್ಧರಾಗಿ ಬಿಡಲು. ನಿಮ್ಮಲ್ಲಿ ಕೆಲವರು ಅದಕ್ಕೆ ಮುನ್ನವೇ ಮೃತರಾಗಿ ಬಿಡುತ್ತಾರೆ ಮತ್ತು (ಇತರರು ಉಳಿದಿರುತ್ತಾರೆ) – ನೀವು ಒಂದು ನಿರ್ದಿಷ್ಟ ಅವಧಿಯನ್ನು ತಲುಪಬೇಕು ಹಾಗೂ ಬುದ್ಧಿವಂತರಾಗಬೇಕೆಂದು.

68. ಅವನೇ ಜೀವನ ನೀಡುವವನು ಹಾಗೂ ಮರಣವನ್ನು ನೀಡುವವನು. ಅವನು ಏನನ್ನಾದರೂ ನಿರ್ಧರಿಸಿದರೆ ಅದಕ್ಕೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ.

69. ಅಲ್ಲಾಹನ ವಚನಗಳ ವಿಷಯದಲ್ಲಿ ಜಗಳಾಡುವವರನ್ನು ನೀವು ಕಂಡಿರಾ? ಅವರು ಅದೆಲ್ಲಿ ಅಲೆಯುತ್ತಿದ್ದಾರೆ?

70. ಅವರು ದಿವ್ಯ ಗ್ರಂಥವನ್ನು ಮತ್ತು ನಮ್ಮ ದೂತರ ಜೊತೆ ನಾವು ಕಳಿಸಿದ್ದನ್ನು ತಿರಸ್ಕರಿಸಿದರು. (ಇದರ ಪರಿಣಾಮವನ್ನು) ಅವರು ಬಹು ಬೇಗನೇ ಅರಿಯುವರು.

71. ಅವರ ಕೊರಳುಗಳಲ್ಲಿ ನೊಗ ಹಾಗೂ ಸರಪಳಿಗಳಿರುವವು ಮತ್ತು ಅವರನ್ನು ಎಳೆದೊಯ್ಯಲಾಗುವುದು.

72. ಕುದಿಯುವ ನೀರಿಗೆ ಮತ್ತು ಆ ಬಳಿಕ ಬೆಂಕಿಗೆ ಅವರನ್ನು ಎಸೆದು ಬಿಡಲಾಗುವುದು.

73. ಆ ಬಳಿಕ ಅವರೊಡನೆ ಕೇಳಲಾಗುವುದು; ‘‘ಎಲ್ಲಿದ್ದಾರೆ ನೀವು (ದೇವತ್ವದಲ್ಲಿ) ಪಾಲುಗೊಳಿಸಿದ್ದವರು?’’

74. ‘‘- ಅಲ್ಲಾಹನ ಹೊರತು?’’. ಅವರು ಹೇಳುವರು; ‘‘ಅವರೆಲ್ಲಾ ನಮ್ಮಿಂದ ಕಳೆದು ಹೋಗಿದ್ದಾರೆ. ನಾವು ಈ ಹಿಂದೆ ಯಾರನ್ನೂ ಪ್ರಾರ್ಥಿಸುತ್ತಿರಲಿಲ್ಲ’’. ಇದೇ ರೀತಿ ಅಲ್ಲಾಹನು ಧಿಕ್ಕಾರಿಗಳನ್ನು ದಾರಿಗೆಡಿಸಿ ಬಿಡುತ್ತಾನೆ.

75. ಇದು, ನೀವು ಅನ್ಯಾಯವಾಗಿ ಭೂಮಿಯಲ್ಲಿ ಆಚರಿಸುತ್ತಿದ್ದ ಸಂಭ್ರಮ ಹಾಗೂ ನೀವು ಮೆರೆಯುತ್ತಿದ್ದ ದೊಡ್ಡಸ್ತಿಕೆಯ ಪ್ರತಿಫಲವಾಗಿದೆ.

76. ಪ್ರವೇಶಿಸಿರಿ, ನರಕದ ಬಾಗಿಲುಗಳೊಳಗೆ ಮತ್ತು ಸದಾಕಾಲ ಅಲ್ಲೇ ವಾಸಿಸಿರಿ. ಎಷ್ಟೊಂದು ಕೆಟ್ಟದು, ಅಹಂಕಾರಿಗಳ ಅಂತಿಮ ನೆಲೆ!

77. (ದೂತರೇ,) ನೀವು ಸಹನಶೀಲರಾಗಿರಿ. ಅಲ್ಲಾಹನು ಕೊಟ್ಟ ಮಾತು ಖಂಡಿತ ಸತ್ಯ. ನಾವು ಅವರಿಗೆ ವಾಗ್ದಾನ ಮಾಡಿರುವುದರ (ಆ ಶಿಕ್ಷೆಯ) ಒಂದಂಶವನ್ನು ನಿಮಗೆ ತೋರಿಸಿದರೂ ಅಥವಾ (ಅದಕ್ಕೆ ಮುನ್ನ) ನಿಮಗೆ ಮರಣವನ್ನು ನೀಡಿದರೂ ಅವರಂತು ನಮ್ಮ ಕಡೆಗೇ ಮರಳಿ ಬರಬೇಕಾಗಿದೆ.

78. ನಾವು ನಿಮಗಿಂತ ಹಿಂದೆಯೂ ದೂತರನ್ನು ಕಳಿಸಿರುವೆವು. ಅವರಲ್ಲಿ ಕೆಲವರ ಸಮಾಚಾರವನ್ನು ನಾವು ನಿಮಗೆ ತಿಳಿಸಿರುವೆವು ಮತ್ತು ಇತರ ಕೆಲವರ ಸಮಾಚಾರವನ್ನು ನಿಮಗೆ ತಿಳಿಸಿಲ್ಲ. ಅಲ್ಲಾಹನ ಅನುಮತಿ ಇಲ್ಲದೆ ಯಾವುದೇ ದೂತನ ಬಳಿಗೆ ಒಂದು ವಚನವೂ ಬರುವುದಿಲ್ಲ. ಕೊನೆಗೆ, ಅಲ್ಲಾಹನ ಆದೇಶವು ಬಂದು ಬಿಟ್ಟಾಗ, ನ್ಯಾಯೋಚಿತವಾಗಿ ತೀರ್ಪು ನೀಡಿ ಬಿಡಲಾಗುತ್ತದೆ. ಆಗ ಮಿಥ್ಯವಾದಿಗಳು ನಷ್ಟದಲ್ಲಿರುತ್ತಾರೆ.

79. ಅಲ್ಲಾಹನೇ ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದನು. ನೀವು ಆ ಪೈಕಿ ಕೆಲವನ್ನು ಸವಾರಿಗಾಗಿ ಬಳಸುತ್ತೀರಿ ಮತ್ತು ಕೆಲವನ್ನು ತಿನ್ನುತ್ತೀರಿ.

80. ನಿಮಗೆ ಅವುಗಳಲ್ಲಿ ಹಲವಾರು ಪ್ರಯೋಜನಗಳಿವೆ ನಿಮ್ಮ ಮನಸ್ಸು ಬಯಸುವಲ್ಲಿಗೆ ನಿಮ್ಮನ್ನು ತಲುಪಿಸಲು (ಅವು ನೆರವಾಗುತ್ತವೆ). ಮತ್ತು ಅವುಗಳ ಮೇಲೂ ನಾವೆಗಳಲ್ಲೂ ನೀವು ಪ್ರಯಾಣಿಸುತ್ತೀರಿ.

81. ಅವನು ನಿಮಗೆ ತನ್ನ ಪುರಾವೆಗಳನ್ನು ತೋರಿಸುತ್ತಲಿರುತ್ತಾನೆ. ನೀವು ಅಲ್ಲಾಹನ ಯಾವೆಲ್ಲ ಪುರಾವೆಗಳನ್ನು ನಿರಾಕರಿಸುವಿರಿ?

82. ಅವರೇನು, ತಮಗಿಂತ ಹಿಂದಿನವರ ಗತಿ ಏನಾಯಿತೆಂಬುದನ್ನು ನೋಡಲು ಭೂಮಿಯಲ್ಲಿ ತಿರುಗಾಡುವುದಿಲ್ಲವೇ? ಅವರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಇವರಿಗಿಂತ ಬಲಿಷ್ಠರಾಗಿದ್ದರು ಮತ್ತು ಭೂಮಿಯಲ್ಲಿ ಭಾರೀ ಸ್ಮಾರಕಗಳನ್ನು ನಿರ್ಮಿಸಿದ್ದರು. ಆದರೆ, ಅವರ ಯಾವ ಗಳಿಕೆಯೂ ಅವರ ಪಾಲಿಗೆ ಉಪಯುಕ್ತವಾಗಲಿಲ್ಲ.

83. ಅವರ ದೇವದೂತರು ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ಬಂದಾಗ, ಅವರು ತಮ್ಮ ಬಳಿ ಇದ್ದ ತಿಳುವಳಿಕೆಯ ಕುರಿತು ಸಂತೃಪ್ತರಾಗಿದ್ದರು. ಆದರೆ ಅವರು ಏನನ್ನು ಲೇವಡಿ ಮಾಡುತ್ತಿದ್ದರೋ ಅದುವೇ (ಸತ್ಯವೇ) ಅವರನ್ನು ಆವರಿಸಿಕೊಂಡಿತು.

84. ಕೊನೆಗೆ ಅವರು ನಮ್ಮ ಶಿಕ್ಷೆಯನ್ನು ಕಂಡಾಗ, ‘‘ನಾವು ಏಕ ಮಾತ್ರನಾದ ಅಲ್ಲಾಹನನ್ನು ನಂಬಿದೆವು ಮತ್ತು ಅವನ ಜೊತೆ ನಾವು ಯಾರನ್ನೆಲ್ಲಾ ಪಾಲುಗೊಳಿಸುತ್ತಿದ್ದೆವೋ ಅವರನ್ನೆಲ್ಲಾ ತಿರಸ್ಕರಿಸಿದೆವು’’ ಎಂದು ಬಿಟ್ಟರು.

 85. ಆದರೆ, ನಮ್ಮ ಶಿಕ್ಷೆಯನ್ನು ಕಂಡ ಬಳಿಕ ಅವರಿಟ್ಟ ನಂಬಿಕೆಯಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ. ಗತಕಾಲಗಳಲ್ಲೂ ತನ್ನ ದಾಸರ ವಿಷಯದಲ್ಲಿ ಇದುವೇ ಅಲ್ಲಾಹನ ನಿಯಮವಾಗಿತ್ತು ಮತ್ತು ಧಿಕ್ಕಾರಿಗಳು ನಷ್ಟದಲ್ಲೇ ಉಳಿದರು.