52. At Tur

52. ಅತ್ತೂರ್ (ಪರ್ವತ)

ವಚನಗಳು – 49, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ತೂರ್ ಪರ್ವತದಾಣೆ.

2. ಲಿಖಿತ ಗ್ರಂಥದಾಣೆ.

3. ಅದು ತೆರೆದ ಪುಟದಲ್ಲಿದೆ.

4. ಮತ್ತು ಜನ ಸಂಪನ್ನ ಆಲಯದಾಣೆ.

5. ಎತ್ತರಗೊಳಿಸಲಾಗಿರುವ ಚಪ್ಪರದಾಣೆ.

6. ಮತ್ತು ಭೋರ್ಗರೆಯುವ ಸಮುದ್ರದಾಣೆ.

7. ನಿಮ್ಮ ಒಡೆಯನ ಶಿಕ್ಷೆಯು ಖಂಡಿತ ಬರಲಿದೆ.

8. ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ.

9. ಆಕಾಶವು ಭೀಕರವಾಗಿ ತಲ್ಲಣಿಸುವ ದಿನ.

10. ಮತ್ತು ಪರ್ವತಗಳು ಛಿದ್ರವಾಗುವ ದಿನ.

11. (ಸತ್ಯವನ್ನು) ತಿರಸ್ಕರಿಸಿದವರಿಗೆ ಆ ದಿನ ವಿನಾಶವಿದೆ.

12. (ಇಂದು) ಅವರು ಮೋಜಾಟಗಳಲ್ಲಿ ತಲ್ಲೀನರಾಗಿದ್ದಾರೆ.

13. ಆ ದಿನ ಅವರನ್ನು ತಳ್ಳುತ್ತಾ ನರಕದೆಡೆಗೆ ಒಯ್ಯಲಾಗುವುದು.

14. (ಮತ್ತು ಹೇಳಲಾಗುವುದು;) ಇದುವೇ, ನೀವು ತಿರಸ್ಕರಿಸುತ್ತಿದ್ದ ನರಕಾಗ್ನಿ.

15. ಇದೇನು ಇಂದ್ರಜಾಲವೇ? ಅಥವಾ ನಿಮಗೇನೂ ಕಾಣಿಸುತ್ತಿಲ್ಲವೇ?

16. ಇದರೊಳಗೆ ಪ್ರವೇಶಿಸಿರಿ. ನೀವಿನ್ನು ಸಹನೆ ತೋರಿದರೂ ಸಹನೆ ತೋರದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿರುತ್ತದೆ. ನಿಮಗಂತು, ನೀವು ಮಾಡುತ್ತಿದ್ದ ಕೃತ್ಯಗಳ ಪ್ರತಿಫಲವನ್ನಷ್ಟೇ ನೀಡಲಾಗುತ್ತಿದೆ.

17. (ಅಂದು) ಧರ್ಮ ನಿಷ್ಠರು ಉದ್ಯಾನಗಳಲ್ಲಿ ಹಾಗೂ ಅನುಗ್ರಹದಲ್ಲಿರುವರು.

18. ತಮಗೆ ತಮ್ಮ ಒಡೆಯನು ನೀಡಿದ್ದರಲ್ಲಿ ಸಂತುಷ್ಟರಾಗಿರುವರು. ಮತ್ತು ಅವರನ್ನು ಅವರ ಒಡೆಯನು ನರಕದ ಹಿಂಸೆಯಿಂದ ಸುರಕ್ಷಿತರಾಗಿಟ್ಟಿರುವನು.

19. ನೀವು ಮಾಡಿದ್ದ ಕರ್ಮಗಳ ಫಲವಾಗಿ, (ಇಂದು) ಮನ ತುಂಬಾ ಉಣ್ಣಿರಿ ಮತ್ತು ಕುಡಿಯಿರಿ (ಎಂದು ಅವರೊಡನೆ ಹೇಳಲಾಗುವುದು).

20. ಅವರು ಸಾಲು ಸಾಲಾಗಿ ದಿಂಬುಗಳಿಗೆ ಒರಗಿ ವಿರಮಿಸುತ್ತಿರುವರು ಮತ್ತು ನಾವು ವಿಶಾಲ ಕಣ್ಣಿನ ‘ಹೂರ್’ಗಳನ್ನು ಅವರ ಜೊತೆಗಳಾಗಿಸಿರುವೆವು.

 21. ವಿಶ್ವಾಸಿಗಳಾಗಿದ್ದವರು ಮತ್ತು ವಿಶ್ವಾಸಿಗಳಾಗಿ ಅವರನ್ನು ಅನುಸರಿಸಿದ, ಅವರ ಸಂತತಿಗಳು – ಅವರನ್ನು ನಾವು ಅವರ ಸಂತತಿಗಳೊಂದಿಗೆ ಸೇರಿಸಿರುವೆವು – ಮತ್ತು ನಾವು ಅವರ ಕರ್ಮಗಳಲ್ಲಿ ಏನನ್ನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಕರ್ಮಗಳಿಗೆ ಪ್ರತಿಯಾಗಿ ಒತ್ತೆಯಾಳಾಗಿದ್ದಾನೆ.

22. ನಾವು ಹಣ್ಣು ಹಂಪಲುಗಳನ್ನು ಮತ್ತು ಅವರು ಮೆಚ್ಚುವ ಮಾಂಸಾಹಾರವನ್ನು ಅವರಿಗೆ ಒದಗಿಸುತ್ತಿರುವೆವು.

23. ಅಲ್ಲಿ ಅವರು (ಮೋಜಿಗಾಗಿ) ಪಾನಪಾತ್ರೆಗಳನ್ನು ಎಳೆದಾಡುವರು. ಯಾವುದೇ ಅನಗತ್ಯದ ಸಂಭಾಷಣೆಯಾಗಲಿ, ಪಾಪದ ಮಾತಾಗಲಿ ಅಲ್ಲಿ ಇರಲಾರದು.

24. ಅವರ ಸೇವೆಗಾಗಿ, ಸುರಕ್ಷಿತ ಮುತ್ತುಗಳೋ ಎಂಬಂತಿರುವ ಬಾಲಕರು ಅವರ ಸುತ್ತ ತಿರುಗಾಡುತ್ತಿರುವರು.

25. ಅವರು (ಸ್ವರ್ಗವಾಸಿಗಳು) ಪರಸ್ಪರರನ್ನು ಉದ್ದೇಶಿಸಿ ವಿಚಾರಿಸುವರು;

26. ಅವರು ಹೇಳುವರು; ಹಿಂದೆ ನಾವು ನಮ್ಮವರ ನಡುವೆ ಭೀತರಾಗಿದ್ದೆವು.

27. ಕೊನೆಗೆ, ಅಲ್ಲಾಹನು ನಮ್ಮ ಮೇಲೆ ದಯೆ ತೋರಿದನು ಮತ್ತು ನಮ್ಮನ್ನು ನರಕಾಗ್ನಿಯ ಶಿಕ್ಷೆಯಿಂದ ರಕ್ಷಿಸಿದನು.

28. ನಾವು ಈ ಹಿಂದೆ ಅವನನ್ನೇ ಕರೆದು ಪ್ರಾರ್ಥಿಸುತ್ತಿದ್ದೆವು. ಖಂಡಿತವಾಗಿಯೂ ಅವನು ಮಹಾ ಉಪಕಾರಿ ಹಾಗೂ ಕರುಣಾಮಯಿಯಾಗಿದ್ದಾನೆ.

29. (ದೂತರೇ,) ನೀವು ಉಪದೇಶಿಸಿರಿ. ನಿಮ್ಮ ಒಡೆಯನ ಅನುಗ್ರಹದಿಂದ ನೀವು ಮಾಂತ್ರಿಕರೂ ಅಲ್ಲ, ಮನೋರೋಗಿಯೂ ಅಲ್ಲ.

30. ‘‘ಅವನೊಬ್ಬ ಕವಿ. ಅವನು ಕಾಲದ ಪ್ರಹಾರಕ್ಕೆ ತುತ್ತಾಗುವುದನ್ನು ಕಾಣಲು ನಾವು ಕಾಯುತ್ತಿದ್ದೇವೆ’’ ಎಂದು ಅವರು ಹೇಳುತ್ತಿದ್ದಾರೆಯೇ?

31. ನೀವು ಹೇಳಿರಿ; ನೀವು ಕಾಯುತ್ತಲೇ ಇರಿ. ನಿಮ್ಮ ಜೊತೆ ನಾನೂ ಕಾದಿರುತ್ತೇನೆ.

32. ಅವರ ಬುದ್ಧಿಗಳು ಅವರಿಗೆ ಇದನ್ನೇ ಕಲಿಸುತ್ತಿವೆಯೇ? ಅಥವಾ ಅವರೇನು ವಿದ್ರೋಹಿಗಳಾಗಿ ಬಿಟ್ಟಿರುವರೇ?

33. ‘‘ಅವನು ಇದನ್ನು (ಕುರ್‌ಆನನ್ನು) ತಾನೇ ರಚಿಸಿಕೊಂಡಿದ್ದಾನೆ’’ ಎಂದವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು ನಂಬುತ್ತಿಲ್ಲ.

34. ಅವರು ಸತ್ಯವಂತರಾಗಿದ್ದರೆ, ಇಂತಹ ಒಂದು ವಚನವನ್ನು ಅವರು ರಚಿಸಿ ತರಲಿ.

35. ಅವರೇನು ಶೂನ್ಯದಿಂದ ಸೃಷ್ಟಿಸಲ್ಪಟ್ಟಿರುವರೇ ಅಥವಾ ಸ್ವತಃ ಅವರು ಸೃಷ್ಟಿಕರ್ತರಾಗಿರುವರೇ?

36. ಆಕಾಶಗಳನ್ನು ಹಾಗೂ ಭೂಮಿಯನ್ನೇನು ಅವರು ಸೃಷ್ಟಿಸಿರುವರೇ? ನಿಜವಾಗಿ ಅವರಿಗೆ ದೃಢ ನಂಬಿಕೆ ಇಲ್ಲ.

37. ನಿಮ್ಮೊಡೆಯನ ಭಂಡಾರಗಳೇನು ಅವರ ಬಳಿ ಇವೆಯೇ? ಅಥವಾ ಅವರೇನು (ನಾಡಿನ) ಕಾವಲುಗಾರರೇ?

 38. ಅವರ ಬಳಿಯೇನು ಏಣಿ ಇದೆಯೇ? ಅವರೇನು ಅದರ ಮೇಲೇರಿ (ಆಕಾಶ ಲೋಕದ ಸಮಾಚಾರಗಳಿಗೆ) ಕಿವಿ ಗೊಡುತ್ತಿದ್ದಾರೆಯೇ? ಹಾಗಾದರೆ (ಆ ರೀತಿ) ಕಿವಿ ಗೊಡುವ ಅವರ ವ್ಯಕ್ತಿಯು ಸ್ಪಷ್ಟವಾದ ಪುರಾವೆಯನ್ನು ತರಲಿ.

39. ಅವನಿಗೆ (ಅಲ್ಲಾಹನಿಗೆ) ಪುತ್ರಿಯರು ಮತ್ತು ಅವರಿಗೆ ಪುತ್ರರೇ?

40. (ದೂತರೇ,) ನೀವೇನು ಅವರಿಂದ ಏನಾದರೂ ಪ್ರತಿಫಲವನ್ನು ಅಪೇಕ್ಷಿಸಿರುವಿರಾ ಮತ್ತು ಅವರು ತಲೆದಂಡದ ಭಾರದಡಿ ನರಳುತ್ತಿರುವರೇ?

41. ಅಥವಾ ಅವರ ಬಳಿ, ಅವರು ಬರೆದಿಡುತ್ತಿರುವ ಗುಪ್ತಲೋಕದ ಜ್ಞಾನವೇನಾದರೂ ಇದೆಯೇ?

42. ಅವರೇನು, ಯಾವುದಾದರೂ ಸಂಚು ಹೂಡ ಬಯಸುತ್ತಾರೆಯೇ? ಕೊನೆಗೆ ಧಿಕ್ಕಾರಿಗಳೇ ಸಂಚಿಗೆ ತುತ್ತಾಗುವರು.

43. ಅವರಿಗೇನು ಅಲ್ಲಾಹನ ಹೊರತು ಬೇರೆ ದೇವರಿದ್ದಾನೆಯೇ? ಅಲ್ಲಾಹನಂತು, ಅವರು ಪಾಲುಗೊಳಿಸುವ ಎಲ್ಲವುಗಳಿಂದ ಮುಕ್ತನಾಗಿದ್ದಾನೆ.

44. ಅವರು, ಆಕಾಶದ ಒಂದು ತುಂಡು ಮುರಿದು ಬೀಳುವುದನ್ನು ಕಂಡರೂ, ಅದು ಗಟ್ಟಿಯಾಗಿದ್ದ ಮೋಡ ಎಂದಷ್ಟೇ ಹೇಳುವರು.

45. ಅವರು ತಮ್ಮನ್ನು ಮೂರ್ಛೆ ಹೋಗಿಸುವ ದಿನವನ್ನು ಕಾಣುವ ತನಕ, ನೀವು ಅವರನ್ನು ಬಿಟ್ಟು ಬಿಡಿರಿ.

46. ಆ ದಿನ ಅವರ ಸಂಚು ಅವರ ಯಾವ ಕೆಲಸಕ್ಕೂ ಬಾರದು ಮತ್ತು ಅವರಿಗೆ ಯಾವ ನೆರವೂ ಸಿಗದು.

47. ಮತ್ತು ಅಕ್ರಮಿಗಳಿಗೆ ಇದಲ್ಲದೆ ಇನ್ನೂ ಹೆಚ್ಚಿನ ಶಿಕ್ಷೆಯೂ ಖಂಡಿತ ಸಿಗುವುದು. ಅದರೆ ಅವರಲ್ಲಿ ಹೆಚ್ಚಿನವರು ತಿಳಿದಿಲ್ಲ.

 48. (ದೂತರೇ,) ನೀವು ನಿಮ್ಮ ಪ್ರಭುವಿನ ಆದೇಶದಂತೆ ಸಹನಶೀಲರಾಗಿರಿ. ನೀವು ಖಂಡಿತ ನಮ್ಮ ಕಣ್ಣ ಮುಂದಿರುವಿರಿ. ನೀವು ಎದ್ದೇಳುವಾಗ, ನಿಮ್ಮ ಒಡೆಯನ ಪಾವಿತ್ರವನ್ನು ಜಪಿಸಿರಿ.

49. ಹಾಗೆಯೇ, ಇರುಳಲ್ಲೂ, ನಕ್ಷತ್ರಗಳು ಕಣ್ಮರೆಯಾಗುವ ವೇಳೆಯೂ ನೀವು ಅವನ ಪಾವಿತ್ರವನ್ನು ಜಪಿಸಿರಿ.