41. Fussilat

41. ಫುಸ್ಸಿಲತ್ (ಸವಿಸ್ತಾರ)

ವಚನಗಳು – 54, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹಾ ಮೀಮ್

2. ಅಪಾರ ದಯಾಳುವೂ ಕರುಣಾಮಯಿಯೂ ಆಗಿರುವವನು ಇಳಿಸಿಕೊಟ್ಟಿರುವ ಸಂದೇಶವಿದು.

 3. ಇದು, ಸವಿಸ್ತಾರವಾಗಿ ವಿವರಿಸಿದ ವಚನಗಳಿರುವ ಗ್ರಂಥ – ಬುದ್ಧಿವಂತರಿಗಾಗಿ, ಅರಬೀ ಭಾಷೆಯಲ್ಲಿರುವ ಕುರ್‌ಆನ್‌.

4. ಶುಭವಾರ್ತೆ ನೀಡುವ ಹಾಗೂ ಎಚ್ಚರಿಸುವ (ಗ್ರಂಥ). ಅವರಲ್ಲಿ ಹೆಚ್ಚಿನವರು ಇದನ್ನು ಕಡೆಗಣಿಸುತ್ತಿದ್ದಾರೆ. ಅವರು ಆಲಿಸುವುದಿಲ್ಲ.

5. ‘‘ನೀವು ನಮ್ಮನ್ನು ಯಾವುದರೆಡೆಗೆ ಕರೆಯುತ್ತಿರುವಿರೋ ಅದರ ಪಾಲಿಗೆ ನಮ್ಮ ಮನಸ್ಸುಗಳು ಮುಚ್ಚಿವೆ ಹಾಗೂ ನಮ್ಮ ಕಿವಿಗಳಲ್ಲಿ ಕಿವುಡಿದೆ ಮತ್ತು ನಮ್ಮ ಹಾಗೂ ನಿಮ್ಮ ನಡುವೆ ಒಂದು ತೆರೆ ಇದೆ. ನೀವು ನಿಮ್ಮ ಕೆಲಸ ಮಾಡಿರಿ ನಾವು ನಮ್ಮ ಕೆಲಸ ಮಾಡುವೆವು’’ ಎಂದು ಅವರು ಹೇಳುತ್ತಾರೆ.

 

6. ಹೇಳಿರಿ; ನಾನು ಕೇವಲ ನಿಮ್ಮಂತಹ ಮಾನವ. ಏಕ ಮಾತ್ರ ದೇವರೇ ನಿಮ್ಮ ದೇವರೆಂದು ನನಗೆ ದಿವ್ಯವಾಣಿಯನ್ನು ಕಳಿಸಲಾಗಿದೆ. ನೀವು ಸ್ಥಿರವಾಗಿ ಅವನಿಗೆ ನಿಷ್ಠರಾಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ. ಬಹುದೇವಾರಾಧಕರಿಗೆ ವಿನಾಶ ಕಾದಿದೆ.

7. ಅವರು ಝಕಾತ್‌ಅನ್ನು ಪಾವತಿಸುವುದಿಲ್ಲ ಮತ್ತು ಪರಲೋಕವನ್ನು ಧಿಕ್ಕರಿಸುತ್ತಾರೆ.

8. ಸತ್ಯವನ್ನು ನಂಬುವವರಿಗೆ ಮತ್ತು ಸತ್ಕರ್ಮಗಳನ್ನು ಮಾಡುವವರಿಗೆ ಖಂಡಿತ ಎಂದೂ ಮುಗಿಯದ ಪ್ರತಿಫಲವಿದೆ.

9. ಹೇಳಿರಿ; ನೀವೇನು, ಎರಡು ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದವನನ್ನು ಧಿಕ್ಕರಿಸುವಿರಾ? ಮತ್ತು ನೀವು ಅವನಿಗೆ ಪ್ರತಿಸ್ಪರ್ಧಿಗಳನ್ನು ನೇಮಿಸುವಿರಾ? ಅವನು ಸರ್ವಲೋಕಗಳ ಒಡೆಯನು.

10. ಮತ್ತು ಅವನು ನಾಲ್ಕು ದಿನಗಳಲ್ಲಿ, ಅದರ (ಭೂಮಿಯ) ಮೇಲೆ ಪರ್ವತಗಳನ್ನು ನಿರ್ಮಿಸಿದನು ಹಾಗೂ ಅದನ್ನು ಸಮೃದ್ಧಗೊಳಿಸಿದನು ಮತ್ತು ಅದರಲ್ಲಿ ಅವರ (ಎಲ್ಲ ಜೀವಿಗಳ) ಆಹಾರವನ್ನು ನಿರ್ಮಿಸಿದನು. ಸಮಾನವಾಗಿ, ಎಲ್ಲ ಅಪೇಕ್ಷರಿಗಾಗಿ.

11. ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿದನು. ಅದು ಹೊಗೆಯಾಗಿತ್ತು. ಅವನು ಅದರೊಡನೆ (ಆಕಾಶದೊಡನೆ) ಹಾಗೂ ಭೂಮಿಯೊಡನೆ, ಇಷ್ಟವಿದ್ದರೂ, ಇಲ್ಲದಿದ್ದರೂ ನೀವಿಬ್ಬರೂ ಮುಂದೆ ಬನ್ನಿ ಎಂದನು. ಅವೆರಡೂ, ‘‘ನಾವು ಸಂತೋಷದಿಂದ ಬಂದಿರುವೆವು’’ ಎಂದವು.

 12. ತರುವಾಯ ಅವನು ಎರಡು ದಿನಗಳಲ್ಲಿ, ಏಳು-ಆಕಾಶಗಳನ್ನು ನಿರ್ಮಿಸಿದನು ಹಾಗೂ ಪ್ರತಿಯೊಂದು ಆಕಾಶಕ್ಕೂ ಸೂಕ್ತ ಆದೇಶಗಳನ್ನು ನೀಡಿದನು ಮತ್ತು ನಾವು ಭೂಮಿಯ ಆಕಾಶವನ್ನು ದೀಪ (ನಕ್ಷತ್ರ) ಗಳಿಂದ ಅಲಂಕರಿಸಿದೆವು ಹಾಗೂ ಅದನ್ನು ರಕ್ಷಾಕವಚವಾಗಿ ಮಾಡಿದೆವು.

13. (ದೂತರೇ,) ಅವರು (ಸತ್ಯಸಂದೇಶವನ್ನು) ಕಡೆಗಣಿಸಿದರೆ ಹೇಳಿರಿ; ನಾನು ನಿಮಗೆ ಒಂದು ಭೀಕರ ಚಂಡಮಾರುತದ ಮುನ್ನೆಚ್ಚರಿಕೆ ನೀಡುತ್ತಿದ್ದೇನೆ. ಆದ್ ಮತ್ತು ಸಮೂದ್ ಜನಾಂಗದವರ ಮೇಲೆ ಬಂದೆರಗಿದಂತಹ ಚಂಡಮಾರುತ.

14. ಅವರ ಬಳಿಗೆ ದೂತರು ಬಂದು, ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಡಿ ಎಂದು ಅವರ ಮುಂದೆಯೂ ಹಿಂದೆಯೂ ಮನವಿ ಮಾಡಿದ್ದರು. ಆಗ ಅವರು, ನಮ್ಮ ಒಡೆಯನು ಬಯಸಿದ್ದರೆ ಖಂಡಿತ ಮಲಕ್‌ಗಳನ್ನು (ದೂತರಾಗಿ) ಕಳಿಸುತ್ತಿದ್ದನು. ನೀವು ತಂದಿರುವ ಸಂದೇಶವನ್ನು ನಾವು ಧಿಕ್ಕರಿಸುತ್ತೇವೆ ಎಂದಿದ್ದರು.

 15. ಅತ್ತ, ಆದ್ ಜನಾಂಗದವರು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ಮೆರೆಯ ತೊಡಗಿದ್ದರು. ಯಾರಿದ್ದಾರೆ, ನಮಗಿಂತ ಬಲಿಷ್ಠರು? ಎಂದು ಅವರು ಕೇಳುತ್ತಿದ್ದರು. ಅವರನ್ನು ಸೃಷ್ಟಿಸಿರುವ ಅಲ್ಲಾಹನು ಅವರಿಗಿಂತ ಬಲಿಷ್ಠನೆಂಬುದನ್ನು ಅವರು ಕಾಣುತ್ತಿಲ್ಲವೇ? ಅವರು ನಮ್ಮ ವಚನಗಳನ್ನು ತಿರಸ್ಕರಿಸಿದ್ದರು.

16. ಕೊನೆಗೆ ನಾವು ಇಹಲೋಕದಲ್ಲೇ ಅವರಿಗೆ ಅಪಮಾನದ ಶಿಕ್ಷೆಯನ್ನು ಉಣಿಸಲಿಕ್ಕಾಗಿ ಕೆಲವು ಕೆಟ್ಟ ದಿನಗಳಲ್ಲಿ ಅವರ ಮೇಲೆ ಭಾರೀ ವೇಗದ ಚಂಡಮಾರುತವನ್ನು ಎರಗಿಸಿದೆವು. ಪರಲೋಕದ ಶಿಕ್ಷೆಯು ಇದಕ್ಕಿಂತಲೂ ಹೆಚ್ಚು ಅಪಮಾನಕಾರಿಯಾಗಿರುವುದು ಮತ್ತು ಅವರಿಗೆ ಯಾವ ನೆರವೂ ಸಿಗದು.

17. ಸಮೂದ್ ಜನಾಂಗದವರಿಗೆ ನಾವು ಸರಿದಾರಿಯನ್ನು ತೋರಿಸಿದೆವು. ಆದರೆ, ಅವರು ಸರಿದಾರಿಯನ್ನು ಕಾಣುವ ಬದಲು ಕುರುಡರಾಗಿರಲು ಇಷ್ಟಪಟ್ಟರು. ಕೊನೆಗೆ ಅವರ ಕೃತ್ಯಗಳ ಫಲವಾಗಿ ಒಂದು ಭೀಕರ ಚಂಡ ಮಾರುತವು, ಅಪಮಾನಕಾರಿ ಶಿಕ್ಷೆಯಾಗಿ ಅವರನ್ನು ಆವರಿಸಿಕೊಂಡಿತು.

18. ಮತ್ತು ನಾವು ವಿಶ್ವಾಸಿಗಳಾಗಿದ್ದವರನ್ನು ಹಾಗೂ ಧರ್ಮನಿಷ್ಠರಾಗಿದ್ದವರನ್ನು ರಕ್ಷಿಸಿದೆವು.

19. ಅಲ್ಲಾಹನ ಎಲ್ಲ ಶತ್ರುಗಳನ್ನು ನರಕದೆಡೆಗೆ ಅಟ್ಟಲಾಗುವ ದಿನ, ಅವರನ್ನು ಪ್ರತ್ಯೇಕಿಸಲಾಗುವುದು.

20. ಅವರು ಅದರ ಬಳಿಗೆ ತಲುಪಿದಾಗ, ಹಿಂದೆ ಅವರು ಏನೆಲ್ಲಾ ಮಾಡಿದ್ದರೆಂಬ ಕುರಿತು ಅವರ ಕಿವಿಗಳು, ಕಣ್ಣುಗಳು ಮತ್ತು ಅವರ ಚರ್ಮಗಳು ಅವರ ವಿರುದ್ಧ ಸಾಕ್ಷ ಹೇಳುವವು.

21. ಅವರು ತಮ್ಮ ಚರ್ಮಗಳೊಡನೆ, ನೀವೇಕೆ ನಮ್ಮ ವಿರುದ್ಧ ಸಾಕ್ಷ ಹೇಳಿದಿರಿ? ಎಂದು ಕೇಳುವರು. ಆಗ ಅವು ಹೇಳುವವು; ಎಲ್ಲ ವಸ್ತುಗಳನ್ನು ಮಾತನಾಡಿಸಿರುವ ಅಲ್ಲಾಹನೇ ನಮ್ಮನ್ನೂ ಮಾತನಾಡಿಸಿರುವನು. ಅವನೇ ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದವನು ಮತ್ತು ಅವನ ಕಡೆಗೇ ನಿಮ್ಮನ್ನು ಮರಳಿಸಲಾಗಿದೆ.

22. ನೀವು ಗುಟ್ಟಾಗಿ ಕೆಲವು (ಪಾಪ) ಕೃತ್ಯ ಗಳನ್ನು ಮಾಡುತ್ತಿದ್ದಾಗ, ನಿಮ್ಮ ಕಿವಿಗಳಾಗಲಿ, ನಿಮ್ಮ ಕಣ್ಣುಗಳಾಗಲಿ, ನಿಮ್ಮ ಚರ್ಮಗಳಾಗಲಿ ನಿಮ್ಮ ವಿರುದ್ಧ ಸಾಕ್ಷ ಹೇಳಲಾರವು ಎಂದು ನೀವು ಭಾವಿಸಿದ್ದಿರಿ. ಮಾತ್ರವಲ್ಲ, ನೀವಂತು, ನಿಮ್ಮ ಹೆಚ್ಚಿನ ಕರ್ಮಗಳ ಕುರಿತು ಅಲ್ಲಾಹನಿಗೂ ತಿಳಿದಿರುವುದಿಲ್ಲ ಎಂದು ಭಾವಿಸಿ ಕೊಂಡಿದ್ದಿರಿ.

23. ನಿಮ್ಮ ಒಡೆಯನ ಕುರಿತು ನಿಮಗಿದ್ದ ಈ ನಿಮ್ಮ ಭ್ರಮೆಯೇ ನಿಮ್ಮನ್ನು ನಾಶಪಡಿಸಿತು ಮತ್ತು ನೀವು ನಷ್ಟ ಅನುಭವಿಸುವವರಾದಿರಿ.

24. ಇದೀಗ ಅವರು ಸಹಿಸಿಕೊಂಡರೂ ನರಕವೇ ಅವರ ನೆಲೆಯಾಗಿರುವುದು ಮತ್ತು ಅವರು ಕ್ಷಮೆಯಾಚಿಸಿದರೂ ಅವರಿಗೆಂದೂ ಕ್ಷಮೆ ದೊರೆಯದು.

 25. (ಇಹಲೋಕದಲ್ಲಿ) ನಾವು ಅವರಿಗೆ ಕೆಲವು ಸಂಗಾತಿಗಳನ್ನು ನೇಮಿಸಿರುವೆವು. ಅವರು, ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಅವರಿಗೆ ಚಂದಗಾಣಿಸಿಕೊಡುತ್ತಾರೆ. ಅವರ ವಿರುದ್ಧ ಹಾಗೂ ಅವರಿಗಿಂತ ಹಿಂದೆ ಬದುಕಿದ್ದ ಜಿನ್ನ್ ಹಾಗೂ ಮಾನವ ಸಮುದಾಯಗಳ ವಿರುದ್ಧ (ಅಲ್ಲಾಹನ) ಮಾತು ಅನುಷ್ಠಾನವಾಗಿ ಬಿಟ್ಟಿತು. ಅವರು ಖಂಡಿತ ನಷ್ಟ ಅನುಭವಿಸುವವರಾಗಿದ್ದರು.

26. ಧಿಕ್ಕಾರಿಗಳು ಹೇಳಿದರು; ‘‘ನೀವು ವಿಜಯಿಗಳಾಗಬೇಕಿದ್ದರೆ, ಆ ಕುರ್‌ಆನನ್ನು ಆಲಿಸಬೇಡಿ, ಅದರಲ್ಲಿ (ಅದರ ಪಠಣ ನಡೆಯುವಲ್ಲಿ) ಗದ್ದಲವೆಬ್ಬಿಸಿರಿ’’.

27. ಧಿಕ್ಕಾರಿಗಳಿಗೆ ನಾವು ಖಂಡಿತ ಕಠೋರ ಶಿಕ್ಷೆಯ ರುಚಿ ಉಣಿಸುವೆವು ಮತ್ತು ನಾವು ಅವರ ಅತ್ಯಂತ ದುಷ್ಟ ಕರ್ಮಗಳಿಗನುಸಾರ ಅವರಿಗೆ ಪ್ರತಿಫಲ ನೀಡುವೆವು.

 28. ಈ ನರಕವೇ ಅಲ್ಲಾಹನ ಶತ್ರುಗಳಿಗಿರುವ ಪ್ರತಿಫಲ. ಅವರಿಗಾಗಿ ಅದರೊಳಗೇ ಶಾಶ್ವತ ನೆಲೆ ಇದೆ. ಇದು, ಅವರು ನಮ್ಮ ವಚನಗಳನ್ನು ತಿರಸ್ಕರಿಸಿದ್ದರ ಪ್ರತಿಫಲ.

29. (ಅಲ್ಲಿ) ಧಿಕ್ಕಾರಿಗಳು ಹೇಳುವರು; ನಮ್ಮೊಡೆಯಾ, ಜಿನ್ನ್ ಮತ್ತು ಮಾನವರ ಪೈಕಿ ನಮ್ಮನ್ನು ದಾರಿಗೆಡಿಸಿದವರನ್ನು ನಮಗೆ ತೋರಿಸು. ಅವರು ತೀರಾ ಅಪಮಾನಿತರಾಗುವಂತೆ ನಾವು ಅವರನ್ನು ನಮ್ಮ ಪಾದಗಳ ಕೆಳಗಿಡುವೆವು.

30. ಅಲ್ಲಾಹನೇ ನಮ್ಮ ಒಡೆಯನೆಂದು ಘೋಷಿಸಿದವರು ಮತ್ತು ಸ್ಥಿರವಾಗಿ ನಿಂತವರು – ಅವರಿಗಾಗಿ ಖಂಡಿತ ನಾವು ಮಲಕ್‌ಗಳನ್ನು ಇಳಿಸಿ ಕೊಡುವೆವು. (ಅವರು ಸಾಂತ್ವನ ಹೇಳುವರು;) ನೀವು ಅಂಜಬೇಡಿ ಮತ್ತು ದುಃಖಿಸಬೇಡಿ. ನಿಮಗೆ ಸ್ವರ್ಗದ ವಾಗ್ದಾನ ನೀಡಲಾಗುತ್ತಿದೆ. ಆ ಕುರಿತು ಸಂತೋಷ ಪಡಿರಿ.

31. ಇಹಲೋಕದ ಬದುಕಿನಲ್ಲೂ ಪರಲೋಕದಲ್ಲೂ ನಾವೇ ನಿಮ್ಮ ಸಂಗಾತಿಗಳು. ಅಲ್ಲಿ ನಿಮಗಾಗಿ, ನಿಮ್ಮ ಚಿತ್ತಗಳು ಆಶೆ ಪಡುವ ಮತ್ತು ನೀವು ಅಪೇಕ್ಷಿಸುವ ಎಲ್ಲವೂ ಇರುವುದು.

32. ಇದು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುವಾತನ (ಅಲ್ಲಾಹನ) ಆತಿಥ್ಯ.

33. (ಜನರನ್ನು) ಅಲ್ಲಾಹನೆಡೆಗೆ ಕರೆಯುತ್ತಿರುವ ಹಾಗೂ (ಸ್ವತಃ) ಸತ್ಕರ್ಮಗಳನ್ನು ಮಾಡುತ್ತಿರುವ ಮತ್ತು ನಾನು ಖಂಡಿತ ಒಬ್ಬ ಮುಸ್ಲಿಮ್ (ಶರಣಾದವನು) ಆಗಿದ್ದೇನೆ ಎಂದು ಹೇಳುವಾತನಿಗಿಂತ ಉತ್ತಮ ಮಾತು ಯಾರದು?

34. ಒಳಿತು ಮತ್ತು ಕೆಡುಕುಗಳು ಸಮಾನವಲ್ಲ. ನೀವು ಕೆಡಕನ್ನು ಒಳಿತಿನಿಂದ ಎದುರಿಸಿರಿ – ಆಗ ನಿಮ್ಮ ವಿರುಧ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಂತಾಗಿ ಬಿಡುವನು.

35. ಸಹನಶೀಲರ ಹೊರತು ಇತರರಿಗೆ ಇದು (ಈ ಸಾಮರ್ಥ್ಯ) ಪ್ರಾಪ್ತವಾಗುವುದಿಲ್ಲ. ಮತ್ತು ಮಹಾ ಸೌಭಾಗ್ಯವಂತರ ಹೊರತು ಇತರರಿಗೆ ಇದು ಪ್ರಾಪ್ತವಾಗುವುದಿಲ್ಲ.

36. ಒಂದು ವೇಳೆ ನೀವು ಶೈತಾನನಿಂದ ಪ್ರಚೋದಿತರಾದರೆ, ಅಲ್ಲಾಹನ ಆಶ್ರಯ ಕೋರಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ.

37. ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ (ಇವೆಲ್ಲಾ) ಅವನ (ಅಲ್ಲಾಹನ) ಪುರಾವೆಗಳ ಸಾಲಿಗೆ ಸೇರಿವೆ. ನೀವು ನಿಜಕ್ಕೂ ಅವನನ್ನೇ ಪೂಜಿಸುವವರಾಗಿದ್ದರೆ, ಸೂರ್ಯನಿಗಾಗಲಿ ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಸಾಷ್ಟಾಂಗವೆರಗಿರಿ.

38. ಇನ್ನು ಅವರು ಅಹಂಕಾರ ತೋರಿದರೆ, ನಿಮ್ಮ ಒಡೆಯನ ಬಳಿಯಲ್ಲಂತೂ ಇರುಳಲ್ಲೂ ಹಗಲಲ್ಲೂ ಅವನ ಪಾವಿತ್ರವನ್ನು ಜಪಿಸುತ್ತಿರುವವರಿದ್ದಾರೆ ಮತ್ತು ಅವರು ದಣಿಯುವುದೂ ಇಲ್ಲ.

39. ಇದು ಅವನ (ಅಲ್ಲಾಹನ) ಪುರಾವೆಗಳಲ್ಲೊಂದು; ಭೂಮಿಯು ತೀರಾ ಒಣಗಿರುವುದನ್ನು ನೀವು ಕಾಣುತ್ತೀರಿ. ಆದರೆ, ನಾವು ಅದರ ಮೇಲೆ ನೀರನ್ನು ಇಳಿಸಿದಾಗ ಅದು ನಳನಳಿಸತೊಡಗುತ್ತದೆ ಹಾಗೂ ಅರಳಿ ಬಿಡುತ್ತದೆ. ಖಂಡಿತವಾಗಿಯೂ ಅದನ್ನು ಜೀವಂತಗೊಳಿಸಿದವನೇ, ಸತ್ತವರನ್ನು ಜೀವಂತಗೊಳಿಸುವನು. ಅವನು ಖಂಡಿತ ಎಲ್ಲವನ್ನೂ ಮಾಡ ಬಲ್ಲವನಾಗಿದ್ದಾನೆ.

40. ನಮ್ಮ ವಚನಗಳನ್ನು ತಿರುಚುವವರು ನಮ್ಮಿಂದ ಕಣ್ಮರೆಯಾಗಿಲ್ಲ. ಪುನರುತ್ಥಾನ ದಿನ ಬೆಂಕಿಗೆ ಎಸೆಯಲ್ಪಡುವವನು ಉತ್ತಮನೋ ಅಥವಾ ಅಂದು ಸುರಕ್ಷಿತ ಸ್ಥಿತಿಯಲ್ಲಿ ಹಾಜರಾಗುವವನು ಉತ್ತಮನೋ? ಸದ್ಯ ನೀವು ನಿಮಗಿಷ್ಟವಿರುವುದನ್ನು ಮಾಡಿರಿ. ಖಂಡಿತವಾಗಿಯೂ ಅವನು (ಅಲ್ಲಾಹನು) ನೀವು ಮಾಡುವ ಎಲ್ಲವನ್ನೂ ನೋಡುತ್ತಿದ್ದಾನೆ.

41. ನಮ್ಮ ಉಪದೇಶವು ತಮ್ಮ ಬಳಿಗೆ ಬಂದಾಗ ಅದನ್ನು ಧಿಕ್ಕರಿಸಿದವರು (ತಿಳಿದಿರಲಿ); ಇದೊಂದು ಗೌರವಾನ್ವಿತ ಗ್ರಂಥವಾಗಿದೆ.

42. ಮಿಥ್ಯವು ಇದರ ಮುಂದಿನಿಂದಾಗಲಿ ಹಿಂದಿನಿಂದಾಗಲಿ ಇದನ್ನು ಸಮೀಪಿಸುವುದಿಲ್ಲ. ಇದನ್ನು, ಯುಕ್ತಿವಂತನೂ ಪ್ರಶಂಸಾರ್ಹನೂ ಆಗಿರುವಾತನ ಕಡೆಯಿಂದ ಇಳಿಸಿ ಕೊಡಲಾಗಿದೆ.

43. (ದೂತರೇ,) ನಿಮಗಿಂತ ಹಿಂದಿನ ದೇವದೂತರಿಗೆ ಹೇಳಲಾಗಿದ್ದ ಮಾತುಗಳನ್ನೇ ನಿಮಗೆ ಹೇಳಲಾಗುತ್ತಿದೆ. ಖಂಡಿತವಾಗಿಯೂ ನಿಮ್ಮೊಡೆಯನು ತುಂಬಾ ಕ್ಷಮಿಸುವವನು ಮತ್ತು ಯಾತನಾಮಯ ಶಿಕ್ಷೆ ನೀಡುವವನಾಗಿದ್ದಾನೆ.

44. ನಾವು ಅರಬೇತರ ಭಾಷೆಯಲ್ಲಿ ಕುರ್‌ಆನನ್ನು ಕಳಿಸಿದ್ದರೆ, ಅವರು, ಇದರ ವಚನಗಳೇಕೆ ಸ್ಪಷ್ಟವಾಗಿಲ್ಲ? ಅರಬೇತರ ಗ್ರಂಥ ಮತ್ತು ಅರಬೀ ದೂತನೇ? ಎನ್ನುತ್ತಿದ್ದರು. ಹೇಳಿರಿ; ಇದು ನಂಬುವವರ ಪಾಲಿಗೆ ಮಾರ್ಗದರ್ಶಿ ಹಾಗೂ ಗುಣಕಾರಿಯಾಗಿದೆ. ನಂಬದವರ ಕಿವಿಗಳು ಕಿವುಡಾಗಿವೆ ಮತ್ತು ಇದು ಅವರ ಪಾಲಿನ ಕುರುಡುತನವಾಗಿದೆ. ಅವರ ಸ್ಥಿತಿಯು ಬಹು ದೂರದಿಂದ ಕರೆಯಲ್ಪಡುವವರಂತಿದೆ.

45. ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು. ಆ ಕುರಿತು ಭಿನ್ನತೆಗಳು ಎದುರಾದವು. ನಿಮ್ಮ ಒಡೆಯನ ಕಡೆಯಿಂದ ಒಂದು ವಿಷಯವು ಮೊದಲೇ ನಿಗದಿಯಾಗದೆ ಇದ್ದಿದ್ದರೆ, ಅವರ ವಿಷಯದಲ್ಲಿ ತೀರ್ಪು ಬಂದು ಬಿಡುತ್ತಿತ್ತು. ಅವರು ಖಂಡಿತ ಈ ಕುರಿತು ಸಂಶಯದಲ್ಲಿದ್ದಾರೆ.

46. ಸತ್ಕಾರ್ಯವನ್ನು ಮಾಡುವವನು ಸ್ವತಃ ತನ್ನ ಹಿತಕ್ಕಾಗಿ ಅದನ್ನು ಮಾಡುತ್ತಾನೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವಾತನ ಕೆಡುಕಿನ ಹೊಣೆಯು ಅವನ ಮೇಲೆಯೇ ಇರುತ್ತದೆ. ನಿಮ್ಮ ಒಡೆಯನಂತು ದಾಸರ ಮೇಲೆ ಅನ್ಯಾಯ ಎಸಗುವವನಲ್ಲ.

ಕಾಂಡ – 25

47. ಅಂತಿಮ ಘಳಿಗೆಯ ಕುರಿತಾದ ಜ್ಞಾನವು ಅವನ (ಅಲ್ಲಾಹನ) ವಶದಲ್ಲೇ ಇದೆ. ಅವನಿಗೆ ಅರಿವಿಲ್ಲದೆ ಯಾವ ಹಣ್ಣೂ ತನ್ನ ಗೊನೆಯಿಂದ ಹೊರ ಹೊಮ್ಮಲಾರದು, ಯಾವ ಹೆಣ್ಣೂ ಗರ್ಭ ಧರಿಸಲಾರಳು ಮತ್ತು ಪ್ರಸವಿಸಲಾರಳು. ‘‘ಎಲ್ಲಿದ್ದಾರೆ ನನ್ನ ಪಾಲುದಾರರು?’’ ಎಂದು ಆ ದಿನ ಅವನು ಅವರೊಡನೆ ಕೂಗಿ ಕೇಳುವನು. ಅವರು ಹೇಳುವರು; ‘‘ನಾವು ನಿನಗೆ ತಿಳಿಸಿರುವೆವು, ನಮ್ಮಲ್ಲೊಬ್ಬರೂ ಅದರ ಸಮರ್ಥಕರಲ್ಲ’’.

48. ಅವರು ಈ ಹಿಂದೆ ಪ್ರಾರ್ಥಿಸುತ್ತಿದ್ದವರೆಲ್ಲಾ ಅವರಿಂದ ಕಳೆದು ಹೋಗಿರುವರು ಮತ್ತು ತಮಗಿನ್ನು ಬಿಡುಗಡೆಯೇ ಇಲ್ಲ ಎಂಬುದು ಅವರಿಗೆ ಮನವರಿಕೆಯಾಗುವುದು.

49. ಮನುಷ್ಯನು ಹಿತವನ್ನು ಬೇಡಿ ದಣಿಯುವುದಿಲ್ಲ. ಆದರೆ, ತನಗೆ ಅಹಿತವೇನಾದರೂ ತಟ್ಟಿದೊಡನೆ ಅವನು ನಿರಾಶನಾಗಿ, ಹತಾಶನಾಗಿ ಬಿಡುತ್ತಾನೆ.

  50. ಸಂಕಟದ ಬಳಿಕ ನಾವು ಅವನಿಗೆ ನಮ್ಮ ಅನುಗ್ರಹದ ರುಚಿ ಉಣಿಸಿದರೆ, ಅವನು ಖಂಡಿತ ಹೀಗೆನ್ನುತ್ತಾನೆ; ‘‘ಇದಂತು ನನಗೆ ಸಿಗಲೇ ಬೇಕಾದದ್ದು. ಅಂತಿಮ ಘಳಿಗೆಯೊಂದು ಬರಲಿದೆಯೆಂದು ನಾನು ಭಾವಿಸುವುದಿಲ್ಲ. ಒಂದು ವೇಳೆ ನನ್ನನ್ನು ನನ್ನೊಡೆಯನ ಕಡೆಗೆ ಮರಳಿಸಲಾದರೂ ಅವನ ಬಳಿಯೂ ನನಗೆ ಹಿತವೇ ಸಿಗುವುದು‘‘. ನಿಜವಾಗಿ ನಾವು ಧಿಕ್ಕಾರಿಗಳಿಗೆ, ಅವರು ಏನೆಲ್ಲಾ ಮಾಡಿದ್ದರೆಂಬುದನ್ನು ತಿಳಿಸುವೆವು ಮತ್ತು ಅವರಿಗೆ ಬಹಳ ಕಠೋರ ಶಿಕ್ಷೆಯ ರುಚಿಯನ್ನು ಉಣಿಸುವೆವು.

51. ನಾವು ಮನುಷ್ಯನಿಗೆ ನಮ್ಮ ಕೊಡುಗೆಗಳನ್ನು ದಯಪಾಲಿಸಿದಾಗ ಅವನು ಮುಖ ತಿರುಗಿಸಿಕೊಂಡು, ನಿರ್ಲಕ್ಷ ತೋರುತ್ತಾನೆ. ಆದರೆ ಅವನಿಗೆ ಕೆಟ್ಟದೇನಾದರೂ ಸಂಭವಿಸಿದರೆ ಅವನು ಭಾರೀ ಉದ್ದುದ್ದ ಪ್ರಾರ್ಥನೆಗಳನ್ನು ಸಲ್ಲಿಸುವವನಾಗಿ ಬಿಡುತ್ತಾನೆ.

52. ಹೇಳಿರಿ; ನೀವು (ಚಿಂತಿಸಿ) ನೋಡಿದಿರಾ, ಒಂದು ವೇಳೆ ಇದು (ಕುರ್‌ಆನ್) ನಿಜಕ್ಕೂ ಅಲ್ಲಾಹನ ಕಡೆಯಿಂದ ಬಂದಿದ್ದು, ನೀವು ಇದನ್ನು ಧಿಕ್ಕರಿಸಿದರೆ, ಅಂತಹ ಪರಮ ಹಠಮಾರಿಗಿಂತ ಹೆಚ್ಚು ದಾರಿಗೆಟ್ಟವರು ಯಾರಿದ್ದಾರೆ?

53. ಇದು (ಕುರ್‌ಆನ್) ಸತ್ಯವೆಂಬುದು ಅವರಿಗೆ ಸ್ಪಷ್ಟವಾಗುವಂತಹ ಪುರಾವೆಗಳನ್ನು ನಾವು ಅವರಿಗೆ ಹೊರ ಜಗತ್ತಿನಲ್ಲೂ ಸ್ವತಃ ಅವರೊಳಗೂ ತೋರಿಸಿ ಕೊಡುವೆವು. ನಿಮ್ಮ ಒಡೆಯನೇ ಎಲ್ಲದಕ್ಕೂ ಸಾಕ್ಷಿಯಾಗಿರುವನೆಂಬುದು ಸಾಲದೇ?

54. ಅವರೇನು, ತಮ್ಮ ಒಡೆಯನನ್ನು ಭೇಟಿಯಾಗಲಿರುವ ಕುರಿತು ಸಂಶಯದಲ್ಲಿದ್ದಾರೆಯೇ? ತಿಳಿದಿರಲಿ. ಅವನು ಖಂಡಿತ ಎಲ್ಲವನ್ನೂ ಆವರಿಸಿಕೊಂಡಿರುವನು.