56. Al Waqiah

56. ಅಲ್ ವಾಕಿಅಃ (ಸಂಭವ),

ವಚನಗಳು – 96, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಸಂಭವಿಸಬೇಕಾದುದು ಸಂಭವಿಸಿ ಬಿಟ್ಟಾಗ.

2. ಅದರ ಸಂಭವ ಸುಳ್ಳಾಗಿರದು.

3. ಅದು (ಕೆಲವರನ್ನು) ಕೀಳಾಗಿಸುವುದು ಮತ್ತು (ಕೆಲವರನ್ನು) ಮೇಲಾಗಿಸುವುದು.

4. ಭೂಮಿಯು ತೀವ್ರ ಕಂಪನದಿಂದ ತತ್ತರಿಸಿ ಬಿಡುವುದು.

5. ಮತ್ತು ಪರ್ವತಗಳು ನುಚ್ಚು ನೂರಾಗಿ ಬಿಡುವವು.

6. ಮತ್ತು ಅವು ಧೂಳಾಗಿ ಹಾರಾಡ ತೊಡಗುವವು.

7. ಮತ್ತು ನೀವು ಮೂರು ವರ್ಗಗಳಾಗುವಿರಿ.

8. ಬಲ ಭಾಗದವರು. ಎಂತಹ (ಭಾಗ್ಯವಂತರು) ಆ ಬಲಭಾಗದವರು!

9. ಮತ್ತು ಎಡ ಭಾಗದವರು. ಎಂತಹ (ಭಾಗ್ಯಹೀನರು) ಆ ಎಡ ಭಾಗದವರು!

10. ಮತ್ತು ಮುಂದೆ ಹೋದವರು ಮುಂದೆಯೇ ಇರುವರು.

11. ಅವರು (ಅಲ್ಲಾಹನ) ಸಮೀಪ ವರ್ತಿಗಳಾಗಿರುವರು.

12. (ಅವರು) ಅನುಗ್ರಹಗಳು ತುಂಬಿದ ಉದ್ಯಾನಗಳಲ್ಲಿರುವರು.

13. (ಅವರಲ್ಲಿ) ಹೆಚ್ಚಿನವರು ಹಿಂದಿನ ಕಾಲದವರಾಗಿರುವರು.

14. ಮತ್ತು ಕಡಿಮೆ ಮಂದಿ ಅನಂತರದವರಾಗಿರುವರು.

15. ಅವರು ಸ್ವರ್ಣಾಲಂಕೃತ ಪೀಠಗಳಲ್ಲಿರುವರು.

16. ಅವುಗಳಲ್ಲಿ ದಿಂಬುಗಳಿಗೊರಗಿ ಎದುರು ಬದುರಾಗಿರುವರು.

17. ಶಾಶ್ವತ ಬಾಲಕರು ಅವರ ಸುತ್ತ ಚಲಿಸುತ್ತಿರುವರು –

18. – ಲೋಟೆ ಹಾಗೂ ಹೂಜಿಗಳಲ್ಲಿ ಶುದ್ಧವಾದ ಪಾನೀಯಗಳನ್ನು ಹೊತ್ತು.

19. ಅದರಿಂದ ಅವರಿಗೆ ತಲೆ ನೋವಾಗದು ಮತ್ತು ಬುದ್ಧಿಯೂ ಮಂದವಾಗದು.

20. (ಅಲ್ಲಿ) ಅವರ ಆಯ್ಕೆಯ ಹಣ್ಣು ಹಂಪಲುಗಳಿರುವವು.

21. ಅವರು ಅಪೇಕ್ಷಿಸುವ ಪಕ್ಷಿಯ ಮಾಂಸವಿರುವುದು.

22. ಮತ್ತು ವಿಶಾಲ ಕಣ್ಣಿನ ಸ್ವರ್ಗ ಕನ್ಯೆಯರಿರುವರು.

23. ಅವರು ಜೋಪಾನವಾಗಿ ಮುಚ್ಚಿಟ್ಟ ಮುತ್ತಿನಂತಿರುವರು.

24. (ಇದು) ಅವರು ಮಾಡಿದ ಕರ್ಮಗಳ ಪ್ರತಿಫಲ.

25. ಅಲ್ಲಿ ಅವರು ಯಾವುದೇ ಅನಗತ್ಯ ಮಾತನ್ನಾಗಲಿ ಕೆಟ್ಟ ಸಂಭಾಷಣೆಯನ್ನಾಗಲಿ ಕೇಳಲಾರರು.

26. ‘ಸಲಾಮ್, ಸಲಾಮ್’ (ಶಾಂತಿ, ಶಾಂತಿ) ಎಂಬ ಹಾರೈಕೆಯ ಹೊರತು.

 

27. ಮತ್ತು ಬಲ ಭಾಗದವರು, (ಎಂತಹ ಭಾಗ್ಯವಂತರು) ಆ ಬಲ ಭಾಗದವರು!

28. (ಅವರಿರುವಲ್ಲಿ ಲಭ್ಯವಿರುವವು;) ಮುಳ್ಳಿಲ್ಲದ ಬುಗರಿಗಳು,

29. ಗೊನೆ ಗೊನೆಯಾಗಿರುವ ಬಾಳೆ ಹಣ್ಣುಗಳು,

30. ವ್ಯಾಪಕ ನೆರಳು,

31. ಹರಿಯುವ ನೀರು,

32. ಮತ್ತು ಧಾರಾಳ ಹಣ್ಣು ಹಂಪಲುಗಳು.

33. ಅವು ಎಂದೂ ಮುಗಿದು ಹೋಗಲಾರವು ಮತ್ತು (ಅವುಗಳ ಬಳಕೆಗೆ) ಯಾವುದೇ ಅಡೆತಡೆಯೂ ಇರಲಾರದು.

34. (ಅವರು) ಎತ್ತರದ ಆಸನಗಳಲ್ಲಿರುವರು.

35. ನಾವೇ ಅವರನ್ನು (ಸ್ವರ್ಗ ಕನ್ಯೆಯರನ್ನು ) ಸೃಷ್ಟಿಸಿರುವೆವು.

36. ನಾವು ಅವರನ್ನು ಕನ್ಯೆಯರಾಗಿಸಿರುವೆವು.

37. ಪ್ರೀತಿಪಾತ್ರರಾಗಿ, ಸಹವಯಸ್ಕರಾಗಿ ಮಾಡಿರುವೆವು –

38. – ಬಲಭಾಗದವರಿಗಾಗಿ.

39. (ಅವರಲ್ಲಿ) ಹಿಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು.

40. ಮತ್ತು ಮುಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು.

 41. ಇನ್ನು ಎಡಭಾಗದವರು. (ಎಂತಹ ಭಾಗ್ಯಹೀನರು) ಆ ಎಡಭಾಗದವರು.

42. ಅವರು ಉರಿಯುವ ಗಾಳಿ ಹಾಗೂ ಕುದಿಯುವ ನೀರಿನಲ್ಲಿರುವರು.

43. ಕರಾಳ ಹೊಗೆಯ ನೆರಳಲ್ಲಿರುವರು.

44. ಅದರಲ್ಲಿ ತಂಪೂ ಇರದು, ಹಿತವೂ ಇರದು.

45. ಈ ಹಿಂದೆ ಅವರು ಭಾರೀ ಸುಖ ಭೋಗದಲ್ಲಿದ್ದರು.

46. ಮಹಾ ಪಾಪ ಕೃತ್ಯಗಳಲ್ಲಿ ತಲ್ಲೀನರಾಗಿ ಉದ್ಧಟರಾಗಿದ್ದರು.

47. ಮತ್ತು ಅವರು ಹೇಳುತ್ತಿದ್ದರು; ನಾವು ಸತ್ತು ಮಣ್ಣಾಗಿ ಹಾಗೂ ಎಲುಬುಗಳಾಗಿ ಮಾರ್ಪಟ್ಟ ಬಳಿಕ, ನಮ್ಮನ್ನೇನು ಮತ್ತೆ ಜೀವಂತ ಗೊಳಿಸಲಾಗುವುದೇ?

48. ನಮ್ಮ ತಾತ ಮುತ್ತಾತಂದಿರನ್ನೂ (ಜೀವಂತಗೊಳಿಸಲಾಗುವುದೇ)?

 49. ಹೇಳಿರಿ; ಖಂಡಿತವಾಗಿಯೂ ಹಿಂದಿನವರನ್ನೂ ಮುಂದಿನವರನ್ನೂ,

50. ಒಂದು ನಿರ್ದಿಷ್ಟ ದಿನದ ವೇಳೆ ಒಟ್ಟು ಸೇರಿಸಲಾಗುವುದು.

51. ಆ ಬಳಿಕ ಓ ದಾರಿಗೆಟ್ಟ ಧಿಕ್ಕಾರಿಗಳೇ, ನೀವು,

52. ‘ಝಕ್ಕೂಮ್’ ಮರದ ಭಾಗವನ್ನು ತಿನ್ನಬೇಕಾಗುವುದು.

53. ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುವುದು.

54. ಅದರ ಜೊತೆಗೆ ಕುದಿಯುವ ನೀರನ್ನೂ ಕುಡಿಯಬೇಕಾಗುವುದು.

55. ಬಾಯಾರಿದ ಒಂಟೆಯಂತೆ ಅದನ್ನು ನೀವು ಕುಡಿಯುವಿರಿ.

56. ಇದುವೇ, ಪ್ರತಿಫಲದ ದಿನ ಅವರಿಗೆ ಸಿಗಲಿರುವ ಆತಿಥ್ಯ.

57. ನಾವು ನಿಮ್ಮನ್ನು ಸೃಷ್ಟಿಸಿರುವೆವು. ಇಷ್ಟಾಗಿಯೂ ನೀವೇಕೆ (ಅದನ್ನು) ಅಂಗೀಕರಿಸುವುದಿಲ್ಲ?

58. ನೀವು (ಗರ್ಭದೊಳಕ್ಕೆ) ಹರಿಸಿ ಬಿಡುವ ವಸ್ತುವನ್ನು (ವೀರ್ಯವನ್ನು) ನೀವು ನೋಡಿದಿರಾ?

59. ಅದನ್ನು (ಶಿಶುವಾಗಿ) ಸೃಷ್ಟಿಸುವವರು ನೀವೋ, ಅಥವಾ ನಾವು ಅದರ ಸೃಷ್ಟಿಕರ್ತರೋ?

60. ನಾವು ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿ ಬಿಟ್ಟಿರುವೆವು. ಮತ್ತು ನಾವು ಖಂಡಿತ ಅಶಕ್ತರಲ್ಲ,

61. – ನಿಮ್ಮ ಬದಲಿಗೆ ನಿಮ್ಮಂತಹ ಇತರರನ್ನು ತರುವುದಕ್ಕೆ. ಮತ್ತು ನಿಮಗೆ ಅರಿವೇ ಇಲ್ಲದ ಸ್ಥಳದಲ್ಲಿ ನಿಮ್ಮನ್ನು ಜೀವಂತಗೊಳಿಸುವುದಕ್ಕೆ.

62. (ನಿಮ್ಮ) ಪ್ರಥಮ ಜನನದ ಕುರಿತು ನಿಮಗೆ ಖಂಡಿತ ತಿಳಿದಿದೆ. ಹೀಗಿರುತ್ತಾ ನೀವೇಕೆ ಚಿಂತನೆ ನಡೆಸುವುದಿಲ್ಲ?

63. ನೀವು ಬಿತ್ತುವ ವಸ್ತುವನ್ನು ನೀವು ನೋಡಿದಿರಾ?

64. ಅದನ್ನು (ಆ ಬೀಜವನ್ನು, ಬೆಳೆಯಾಗಿ) ಬೆಳೆಸುವವರು ನೀವೋ ಅಥವಾ ನಾವು ಅದರ ಬೆಳೆಗಾರರೋ?

65. ನಾವು ಬಯಸಿದರೆ ಅದನ್ನು ಕೇವಲ ಹೊಟ್ಟಾಗಿಸಿ ಬಿಡಬಲ್ಲೆವು ಮತ್ತು ನೀವು ಏನೇನೋ ಹತಾಶ ಮಾತುಗಳನ್ನಾಡುತ್ತಾ ಉಳಿಯ ಬೇಕಾಗುವುದು –

66. – ನಾವು ಸಂಪೂರ್ಣವಾಗಿ ದಂಡನೆಗೆ ತುತ್ತಾದೆವೆಂದು,

67. ಮತ್ತು ನಾವು ಸಂಪೂರ್ಣ ವಂಚಿತರಾಗಿ ಬಿಟ್ಟೆವೆಂದು.

68. ನೀವು ಕುಡಿಯುವ ನೀರನ್ನು ನೀವು ನೋಡಿದಿರಾ?

69. ಅದನ್ನು ಮೋಡಗಳ ಮೂಲಕ ಸುರಿಸುವವರು ನೀವೋ ಅಥವಾ ಸುರಿಸುವವರು ನಾವೋ?

70. ನಾವು ಬಯಸಿದರೆ ಅದನ್ನು ಉಪ್ಪು ನೀರಾಗಿಸ ಬಲ್ಲೆವು. ಇಷ್ಟಾಗಿಯೂ ನೀವೇಕೆ ಕೃತಜ್ಞರಾಗುವುದಿಲ್ಲ?

71. ನೀವು ಉರಿಸುವ ಬೆಂಕಿಯನ್ನು ನೀವು ನೋಡಿದಿರಾ?

72. ಅದರ ಮರವನ್ನು ಹುಟ್ಟಿಸುವವರು ನೀವೋ ಅಥವಾ ಹುಟ್ಟಿಸುವವರು ನಾವೋ?

73. ಅದನ್ನು ನಾವು, (ನರಕವನ್ನು) ನೆನಪಿಸುವ ಸಾಧನವಾಗಿಸಿರುವೆವು ಮತ್ತು ಪ್ರಯಾಣಿಕರ ಪಾಲಿಗೆ ಲಾಭದಾಯಕವಾಗಿಸಿರುವೆವು.

74. ನೀವೀಗ ನಿಮ್ಮ ಮಹಾನ್ ಒಡೆಯನ ಹೆಸರಿನ ಪಾವಿತ್ರವನ್ನು ಜಪಿಸಿರಿ.

 75. ನಾನಿದೋ, ನಕ್ಷತ್ರಗಳು ಪತನವಾಗುವ ನೆಲೆಯ ಆಣೆ ಹಾಕುತ್ತೇನೆ.

76. ನೀವು ಅರ್ಥ ಮಾಡಿಕೊಳ್ಳುವುದಾದರೆ ಇದು ನಿಜಕ್ಕೂ ಒಂದು ಮಹಾನ್ ಪ್ರಮಾಣವಾಗಿದೆ.

77. ಈ ಕುರ್‌ಆನ್, ಖಂಡಿತ ಗೌರವಾನ್ವಿತವಾಗಿದೆ.

78. ಇದೊಂದು ಸುರಕ್ಷಿತ ಗ್ರಂಥದಲ್ಲಿದೆ.

79. ಪಾವನರಲ್ಲದವರು ಅದನ್ನು ಮುಟ್ಟುವುದಿಲ್ಲ.

80. ಸಕಲ ಲೋಕಗಳ ಒಡೆಯನು ಇದನ್ನು ಇಳಿಸಿ ಕೊಟ್ಟಿರುವನು.

81. ನೀವೇನು ಈ ಸಂದೇಶವನ್ನು ಕಡೆಗಣಿಸುತ್ತಿರುವಿರಾ?

82. ಮತ್ತು ನಿಮಗೆ ನೀಡಲಾಗಿರುವ ಕೊಡುಗೆಯನ್ನು ಅಲ್ಲಗಳೆಯುತ್ತಿರುವಿರಾ?

83. ಹಾಗಾದರೆ, (ನಿಮ್ಮ ಆಪ್ತನ) ಜೀವವು ಕೊರಳಿಗೆ ಮುಟ್ಟಿದಾಗ,

84. ಆಗ ನೀವು ಕೇವಲ ನೋಡುತ್ತಿರುತ್ತೀರಿ.

85. ಮತ್ತು ಆಗ ನಾವು ಆತನಿಗೆ, ನಿಮಗಿಂತ ಸಮೀಪವಿರುತ್ತೇವೆ – ಆದರೆ ನಿಮಗೆ ಕಾಣಿಸುವುದಿಲ್ಲ.

86. ನೀವು ಸ್ವತಂತ್ರರಾಗಿದ್ದರೆ, ಹೀಗೇಕೆ?

87. ನೀವು ಸತ್ಯವಂತರಾಗಿದ್ದರೆ, ಅದನ್ನು (ಆತನ ಆತ್ಮವನ್ನು) ಮರಳಿಸಿರಿ –

88. ಅವನು (ಅಲ್ಲಾಹನ) ಆಪ್ತನಾಗಿದ್ದರೆ –

89. (ಅವನಿಗಾಗಿ) ಕಂಪು ತುಂಬಿದ ಪುಷ್ಪಗಳು ಹಾಗೂ ಅನುಗ್ರಹ ತುಂಬಿದ ಸ್ವರ್ಗೋದ್ಯಾನಗಳಿವೆ.

90. ಇನ್ನು ಅವನು, ಬಲಭಾಗದವನಾಗಿದ್ದರೆ, –

91. ’’ಬಲಭಾಗದವರ ಕಡೆಯಿಂದ ನಿನಗೆ ಸಲಾಮ್ (ಶಾಂತಿ)’’ (ಎಂದು ಹಾರೈಸಲಾಗುವುದು).

92. ಅವನು ಸತ್ಯವನ್ನು ತಿರಸ್ಕರಿಸಿ, ದಾರಿಗೆಟ್ಟವನಾಗಿದ್ದರೆ –

93. ಅವನ ಆತಿಥ್ಯಕ್ಕೆ ಕುದಿಯುವ ನೀರು ಇರುವುದು.

94. ಮತ್ತು ಅವನನ್ನು ನರಕಾಗ್ನಿಗೆ ಎಸೆಯಲಾಗುವುದು.

95. ಇದು ಖಚಿತ ಸಂಭವವಾಗಿದೆ.

96. (ದೂತರೇ,) ನೀವು ನಿಮ್ಮ ಮಹಾನ್ ಒಡೆಯನ ನಾಮದೊಂದಿಗೆ, ಅವನ ಪಾವಿತ್ರವನ್ನು ಜಪಿಸಿರಿ.