71. Nuh

71. ನೂಹ್

ವಚನಗಳು – 28, ಮಕ್ಕಃ

ಅಲ್ಲಾಹನ ನಾಮದಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ‘‘ನಿಮ್ಮ ಜನಾಂಗದವರ ಮೇಲೆ ಕಠಿಣ ಶಿಕ್ಷೆಯು ಬಂದೆರಗುವ ಮುನ್ನ ಅವರನ್ನು ಎಚ್ಚರಿಸಿರಿ’’ ಎನ್ನುತ್ತಾ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು.

2. ಅವರು (ನೂಹ್) ಹೇಳಿದರು; ‘‘ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ’’.

3. ‘‘ನೀವು ಅಲ್ಲಾಹನನ್ನು ಆರಾಧಿಸಿರಿ, ಅವನಿಗೆ ಅಂಜಿರಿ ಮತ್ತು ನನ್ನ ಆದೇಶ ಪಾಲಿಸಿರಿ’’.

4. ‘‘ಅವನು (ಅಲ್ಲಾಹನು) ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನು ನಿಶ್ಚಯಿಸಿರುವ ಸಮಯ ಬಂದು ಬಿಟ್ಟರೆ ಅದನ್ನು ನಿವಾರಿಸಲಾಗುವುದಿಲ್ಲ. ನೀವು ಇದನ್ನು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು!

5. ಅವರು (ನೂಹ್) ಹೇಳಿದರು; ‘‘ನನ್ನೊಡೆಯಾ, ನಾನು ಹಗಳಿರುಳೂ ನನ್ನ ಜನಾಂಗದವರನ್ನು (ಸತ್ಯದೆಡೆಗೆ) ಕರೆದಿದ್ದೇನೆ’’.

6. ‘‘ಆದರೆ ನನ್ನ ಕರೆಯು (ಸತ್ಯದಿಂದ) ಅವರ ಪಲಾಯನವನ್ನಷ್ಟೇ ಹೆಚ್ಚಿಸಿದೆ’’.

7. ‘‘ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಆಮಂತ್ರಿಸಿದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತುರುಕಿ ಕೊಂಡರು ಹಾಗೂ ತಮ್ಮ ವಸ್ತ್ರಗಳನ್ನು ತಮ್ಮ ಮೇಲೆ ಎಳೆದು ಕೊಂಡರು ಮತ್ತು ಅವರು ಉದ್ಧಟತನ ತೋರಿದರು ಹಾಗೂ ಭಾರೀ ಅಹಂಕಾರ ಪ್ರದರ್ಶಿಸಿದರು’’.

8. ‘‘ನಾನು ಅವರನ್ನು ಕೂಗಿ ಕರೆದೆನು’’.

9. ‘‘ಬಹಿರಂಗವಾಗಿಯೂ ಗುಪ್ತವಾಗಿಯೂ ನಾನು ಅವರಿಗೆ ಉಪದೇಶಿಸಿದೆನು’’.

10. ‘‘ನಾನು ಅವರೊಡನೆ ಹೇಳಿದೆನು; ನೀವು ನಿಮ್ಮ ಒಡೆಯನ ಬಳಿ ಕ್ಷಮೆ ಕೇಳಿರಿ. ಅವನು ಖಂಡಿತ ಕ್ಷಮಿಸುವವನಾಗಿದ್ದಾನೆ’’.

11. ‘‘ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಳ ಮಳೆಯನ್ನು ಸುರಿಸುವನು’’.

12. ‘‘ಸಂಪತ್ತು ಹಾಗೂ ಸಂತತಿಗಳ ಮೂಲಕ ಅವನು ನಿಮಗೆ ನೆರವಾಗುವನು ಮತ್ತು ನಿಮಗಾಗಿ ತೋಟಗಳನ್ನು ರಚಿಸುವನು ಹಾಗೂ ನಿಮಗಾಗಿ ನದಿಗಳನ್ನೂ ಹರಿಸುವನು’’.

13. ‘‘ನಿಮಗೇನಾಗಿದೆ? ನೀವು ಅಲ್ಲಾಹನಿಂದ ಯಾವುದೇ ಗೌರವವನ್ನೇಕೆ ನಿರೀಕ್ಷಿಸುವುದಿಲ್ಲ?’’

14. ‘‘ಅವನು ವಿವಿಧ ಹಂತಗಳಲ್ಲಿ ನಿಮ್ಮನ್ನು ಸೃಷ್ಟಿಸಿರುವನು’’.

15. ‘‘ನೀವು ನೋಡಿಲ್ಲವೇ, ಅಲ್ಲಾಹನು ಯಾವ ರೀತಿ ಕ್ರಮಬದ್ಧವಾಗಿ ಏಳು ಆಕಾಶಗಳನ್ನು ಸೃಷ್ಟಿಸಿರುವನೆಂದು?’’

16. ‘‘ಮತ್ತು ಯಾವ ರೀತಿ ಅವನು ಅವುಗಳಲ್ಲಿ ಬೆಳಕಾಗಿ ಚಂದ್ರನನ್ನು ಹಾಗೂ ದೀಪವಾಗಿ ಸೂರ್ಯನನ್ನು ನಿರ್ಮಿಸಿರುವನೆಂದು?’’

17. ‘‘ಅಲ್ಲಾಹನೇ ನಿಮ್ಮನ್ನು ಭೂಮಿಯಿಂದ ಬೆಳೆಸಿದನು’’.

18. ‘‘ಅವನು ಮತ್ತೆ ನಿಮ್ಮನ್ನು ಅದರೊಳಕ್ಕೆ ಮರಳಿಸುವನು ಮತ್ತು ಅದರಿಂದಲೇ ನಿಮ್ಮನ್ನು ಹೊರ ತೆಗೆಯುವನು’’.

19. ‘‘ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸಿನಂತಾಗಿಸಿರುವನು’’,

20. ‘‘- ನೀವು ಅದರಲ್ಲಿನ ವಿಶಾಲ ದಾರಿಗಳಲ್ಲಿ ಸಂಚರಿಸುವಂತಾಗಲು’’.

 21. ನೂಹರು ಹೇಳಿದರು; ‘‘ನನ್ನೊಡೆಯಾ, ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಯಾರಿಗೆ ತಮ್ಮ ಸಂಪತ್ತು ಮತ್ತು ಸಂತಾನಗಳಿಂದ ನಷ್ಟ ಮಾತ್ರ ಆಗಿದೆಯೋ, ಅಂಥವರನ್ನು ಅವರು ಅನುಸರಿಸುತ್ತಿದ್ದಾರೆ’’.

22. ‘‘ಅವರು ಭಾರೀ ಸಂಚುಗಳನ್ನು ಹೂಡಿದ್ದಾರೆ’’.

23. ‘‘ಮತ್ತು ಅವರು – ನಿಮ್ಮ ದೇವರುಗಳನ್ನು ಖಂಡಿತ ಕೈ ಬಿಡಬೇಡಿ. ವದ್ದ್ ಅನ್ನಾಗಲೀ ಸುವಾಅ್ ಅನ್ನಾಗಲೀ ಯಗೂಸ್, ಯಊಕ್ ಮತ್ತು ನಸ್ರ್‌ರನ್ನಾಗಲೀ ಕೈ ಬಿಡಬೇಡಿ – ಎನ್ನುತ್ತಿದ್ದಾರೆ’’.

24. ‘‘ನನ್ನೊಡೆಯಾ, ಅವರು ಅನೇಕರನ್ನು ದಾರಿಗೆಡಿಸಿರುವರು. ನೀನು ಈ ಆಕ್ರಮಿಗಳನ್ನು ಮತ್ತಷ್ಟು ದಿಕ್ಕುಗೆಡಿಸಿ ಬಿಡು.’’

25. ಕೊನೆಗೆ, ಅವರ ಅಪರಾಧಗಳ ಕಾರಣ, ಅವರನ್ನು ನೀರಲ್ಲಿ ಮುಳುಗಿಸಲಾಯಿತು ಮತ್ತು ಬೆಂಕಿಯೊಳಗೆ ಎಸೆಯಲಾಯಿತು. ಆಗ ಅಲ್ಲಾಹನ ಹೊರತು ಅವರಿಗೆ ಯಾವ ಸಹಾಯಕರೂ ಸಿಗಲಿಲ್ಲ.

26. ಮತ್ತು ನೂಹರು ಹೇಳಿದರು; ‘‘ನನ್ನೊಡೆಯಾ, ಧಿಕ್ಕಾರಿಗಳ ಪೈಕಿ ಒಬ್ಬನನ್ನೂ ಭೂಮಿಯಲ್ಲಿ ಜೀವಂತ ಬಿಟ್ಟು ಬಿಡಬೇಡ’’.

27. ‘‘ನೀನು ಅವರನ್ನು ಬಿಟ್ಟು ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮತ್ತು ಅವರ ಸಂತತಿಗಳೂ ಕೇವಲ ದುಷ್ಟರೂ ಕೃತಘ್ನರೂ ಆಗಿರುವರು’’.

28. ‘‘ನನ್ನೊಡೆಯಾ, ನನಗೂ ನನ್ನ ಹೆತ್ತವರಿಗೂ ವಿಶ್ವಾಸಿಗಳಾಗಿ ನನ್ನ ಮನೆಯೊಳಗೆ ಬಂದಿರುವವರಿಗೂ ಎಲ್ಲ ವಿಶ್ವಾಸಿ ಪುರುಷರಿಗೂ ಸ್ತ್ರೀಯರಿಗೂ ಕ್ಷಮೆಯನ್ನು ನೀಡು ಮತ್ತು ಅಕ್ರಮಿಗಳಿಗೆ ವಿನಾಶದ ಹೊರತು ಬೇರೇನನ್ನೂ ಹೆಚ್ಚಿಸಬೇಡ’’.