63. Al Munafiqun

63. ಅಲ್ ಮುನಾಫಿಕೂನ್ (ಕಪಟಿಗಳು),

ವಚನಗಳು – 11, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ದೂತರೇ,) ಕಪಟಿಗಳು ನಿಮ್ಮ ಬಳಿಗೆ ಬಂದಾಗ, ‘‘ನೀವು ಖಂಡಿತ ಅಲ್ಲಾಹನ ದೂತರೆಂದು ನಾವು ಸಾಕ್ಷಿ ಹೇಳುತ್ತೇವೆ’’ ಎನ್ನುತ್ತಾರೆ. ನೀವು ತನ್ನ ದೂತರೆಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಮತ್ತು, ಈ ಕಪಟಿಗಳು ಖಂಡಿತ ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.

2. ಅವರು ತಮ್ಮ ಪ್ರತಿಜ್ಞೆಗಳನ್ನು ಗುರಾಣಿಗಳಾಗಿ ಬಳಸಿಕೊಳ್ಳುತ್ತಾರೆ. ಮತ್ತು ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಅವರು ಮಾಡುತ್ತಿರುವ ಕೃತ್ಯಗಳು ತೀರಾ ಕೆಟ್ಟವು.

3. ಇದೇಕೆಂದರೆ ಅವರು ವಿಶ್ವಾಸಿಗಳಾದ ಬಳಿಕ ಮತ್ತೆ ಧಿಕ್ಕಾರಿಗಳಾದರು. ಆದ್ದರಿಂದ ಅವರ ಮನಸ್ಸುಗಳಿಗೆ ಮುದ್ರೆ ಜಡಿಯಲಾಯಿತು. ಈಗ ಅವರಿಗೆ ಏನೂ ಅರ್ಥವಾಗುವುದಿಲ್ಲ.

4. ನೀವು ಅವರನ್ನು ಕಂಡಾಗ ಅವರ ಶರೀರಗಳು ನಿಮಗೆ ಚಂದಗಾಣುತ್ತವೆ. ಅವರು ಮಾತನಾಡಿದರೆಂದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುತ್ತೀರಿ. ಆದರೆ ಅವರ ಸ್ಥಿತಿಯು ಗೋಡೆಗೆ ಒರಗಿಸಿದ ಹಲಗೆಯಂತೆ, ತೀರಾ ಬರಡಾಗಿದೆ. ಯಾವುದಾದರೂ ದೊಡ್ಡ ಶಬ್ದವು ಕೇಳಿಸಿದೊಡನೆ, ಅವರು ಅದನ್ನು, ತಮ್ಮ ವಿರುದ್ಧ (ಏನೋ ಆಪತ್ತು ಎರಗಲಿದೆ) ಎಂದು ಭಾವಿಸುತ್ತಾರೆ. ಅವರು ಶತ್ರುಗಳು. ಅವರ ಕುರಿತು ಎಚ್ಚರವಾಗಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರು ಅದೆಲ್ಲಿ ಅಲೆಯುತ್ತಿದ್ದಾರೆ?

5. (ದೂತರೇ,) ‘‘ಬನ್ನಿ, ಅಲ್ಲಾಹನ ದೂತರು ನಿಮಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಲಿ’’ ಎಂದು ಹೇಳಿದಾಗ ಅವರು ಮುಖ ತಿರುಗಿಸಿ ಕೊಳ್ಳುತ್ತಾರೆ ಮತ್ತು ಅವರು ಅಹಂಕಾರ ಮೆರೆಯುತ್ತಾ, ತಪ್ಪಿಸಿಕೊಳ್ಳುವುದನ್ನು ನೀವು ಕಾಣುತ್ತೀರಿ.

6. ನೀವು ಅವರ ಕ್ಷಮೆಗಾಗಿ ಪ್ರಾರ್ಥಿಸಿದರೂ ಒಂದೇ ಪ್ರಾರ್ಥಿಸದಿದ್ದರೂ ಒಂದೇ. ಅಲ್ಲಾಹನಂತು ಅವರನ್ನು ಕ್ಷಮಿಸಲಾರನು. ಅಲ್ಲಾಹನು ಅವಿಧೇಯರಿಗೆ ಸನ್ಮಾರ್ಗವನ್ನು ತೋರುವುದಿಲ್ಲ.

7. ‘‘ದೇವ ದೂತರ ಜೊತೆ ಇರುವವರಿಗಾಗಿ ಏನನ್ನೂ ಖರ್ಚು ಮಾಡಬೇಡಿ. ಅವರು (ತಾವಾಗಿಯೇ) ಹೊರಟು ಹೋಗುವರು’’ ಎಂದವರು ಅವರೇ. ಆಕಾಶಗಳ ಮತ್ತು ಭೂಮಿಯ ಭಂಡಾರಗಳೆಲ್ಲವೂ ಅಲ್ಲಾಹನಿಗೇ ಸೇರಿವೆ. ಆದರೆ ಕಪಟಿಗಳಿಗೆ ಇದು ಅರ್ಥವಾಗುವುದಿಲ್ಲ.

8. ‘‘ನಾವು ಮದೀನಾದೆಡೆಗೆ ಮರಳಿದಾಗ, ನಮ್ಮಲ್ಲಿನ ಗೌರವಾನ್ವಿತರು ಹೀನರನ್ನು ಅಲ್ಲಿಂದ ಹೊರ ಹಾಕುವರು’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಗೌರವವೆಲ್ಲವೂ ಅಲ್ಲಾಹನಿಗೆ, ಅವನ ದೂತರಿಗೆ ಮತ್ತು ವಿಶ್ವಾಸಿಗಳಿಗೆ ಸೇರಿದೆ. ಆದರೆ ಕಪಟಿಗಳಿಗೆ ಇದು ತಿಳಿದಿಲ್ಲ.

9. ವಿಶ್ವಾಸಿಗಳೇ, ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತಾನಗಳು ನಿಮ್ಮನ್ನು ಅಲ್ಲಾಹನ ನೆನಪಿನಿಂದ ದೂರ ಗೊಳಿಸದಿರಲಿ. ಹಾಗೆ ಮಾಡಿದವರೇ ನಿಜವಾಗಿ ನಷ್ಟ ಅನುಭವಿಸುವವರು.

10. ನಿಮ್ಮಲ್ಲಿ ಯಾರಿಗಾದರೂ ಮರಣವು ಬರುವ ಮನ್ನವೇ, ನಾವು ನಿಮಗೇನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡಿರಿ. (ಮರಣವು ಒಂದು ಬಿಟ್ಟಾಗ) ಅವನು, ‘‘ನನ್ನೊಡೆಯಾ, ನೀನು ನನಗೆ ಒಂದಿಷ್ಟು ಹೆಚ್ಚು ಕಾಲಾವಕಾಶವನ್ನೇಕೆ ಕೊಟ್ಟಿಲ್ಲ? (ಕೊಟ್ಟಿದ್ದರೆ) ನಾನು ದಾನ ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಸಾಲಿಗೆ ಸೇರುತ್ತಿದ್ದೆ’’ ಎನ್ನುವನು.

11. ಒಬ್ಬ ವ್ಯಕ್ತಿಯ ಮರಣದ ಸಮಯವು ಬಂದು ಬಿಟ್ಟರೆ, ಅಲ್ಲಾಹನು ಅದನ್ನು ಕಿಂಚಿತ್ತೂ ಮುಂದೂಡುವುದಿಲ್ಲ. ನೀವು ಮಾಡುವ ಎಲ್ಲ ಕೃತ್ಯಗಳ ಅರಿವು ಅಲ್ಲಾಹನಿಗಿದೆ.