67. Al Malik

67. ಅಲ್ ಮುಲ್ಕ್, (ಆಧಿಪತ್ಯ)

ವಚನಗಳು – 30, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅವನು ಸಮೃದ್ಧನು. ಆಧಿಪತ್ಯವು ಅವನ ಕೈಯಲ್ಲಿದೆ ಮತ್ತು ಅವನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

2. ನಿಮ್ಮಲ್ಲಿ ಯಾರು ಸತ್ಕರ್ಮಗಳನ್ನು ಮಾಡುವರೆಂದು ಪರೀಕ್ಷಿಸಲು, ಅವನು ಮರಣ ಮತ್ತು ಜೀವನವನ್ನು ಸೃಷ್ಟಿಸಿರುವನು. ಅವನು ಬಹಳ ಪ್ರಬಲನೂ ಕ್ಷಮಾಶೀಲನೂ ಆಗಿರುವನು.

3. ಅವನು ಏಳು ಆಕಾಶಗಳನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಆ ಪರಮ ದಯಾಳುವಿನ ಸೃಷ್ಟಿಯಲ್ಲಿ ಯಾವ ಕುಂದೂ ನಿನಗೆ ಕಾಣಿಸದು. ಇನ್ನೊಮ್ಮೆ ನೋಡು, ನಿನಗೆ ದೋಷವೇನಾದರೂ ಕಾಣಿಸುತ್ತಿದೆಯೇ?

4. ಮತ್ತೊಮ್ಮೆ ತಿರುಗಿ, ಎರಡೆರಡು ಬಾರಿ ನೋಡು, ನಿನ್ನ ದೃಷ್ಟಿಯು ಸೋತು, ದಣಿದು ನಿನ್ನತ್ತಲೇ ಮರಳಿ ಬರುವುದು.

5. ನಾವು ಇಹಲೋಕದ ಆಕಾಶವನ್ನು (ನಕ್ಷತ್ರಗಳೆಂಬ) ದೀಪಗಳಿಂದ ಅಲಂಕರಿಸಿರುವೆವು ಮತ್ತು ಅವುಗಳನ್ನು ಶೈತಾನರಿಗೆ ಹೊಡೆಯುವ ಸಾಧನಗಳಾಗಿಸಿರುವೆವು. ಮತ್ತು ನಾವು ಅವರಿಗಾಗಿ ಭುಗಿಲೇಳುವ ಬೆಂಕಿಯನ್ನು ಸಿದ್ದಪಡಿಸಿಟ್ಟಿರುವೆವು.

6. ತಮ್ಮಡೆಯನನ್ನು ಧಿಕ್ಕರಿಸಿದವರಿಗೆ ನರಕದ ಶಿಕ್ಷೆ ಸಿಗಲಿದೆ ಮತ್ತು ಅದು ತುಂಬಾ ಹೀನ ನೆಲೆಯಾಗಿದೆ.

7. ಅವರನ್ನು ಅದರೊಳಗೆ ಹಾಕಲಾದಾಗ ಅವರು ಅದರ ಆರ್ಭಟವನ್ನು ಕೇಳುವರು ಮತ್ತು ಅದು ಕುದಿಯುತ್ತಿರುವುದು.

8. ಅದು ಆವೇಶದಿಂದ ಇನ್ನೇನು ಸ್ಫೋಟಗೊಳ್ಳುವುದೋ, ಎಂಬಂತಿರುವುದು. ಅವರಲ್ಲಿನ ಯಾವುದಾದರೂ ತಂಡವನ್ನು ಅದರೊಳಗೆ ಹಾಕಲಾದಾಗ ಅದರ ದ್ವಾರಪಾಲಕರು ಅವರೊಡನೆ ‘‘ಎಚ್ಚರಿಸುವವರು ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು.

9. ಅವರು ಹೇಳುವರು; ‘‘ಯಾಕಿಲ್ಲ? ಎಚ್ಚರಿಸುವವರು ನಮ್ಮ ಬಳಿಗೆ ಖಂಡಿತ ಬಂದಿದ್ದರು. ಆದರೆ ನಾವು ಅವರನ್ನು ತಿರಸ್ಕರಿಸಿದೆವು ಮತ್ತು ಅಲ್ಲಾಹನು ಏನನ್ನೂ ಕಳುಹಿಸಿಕೊಟ್ಟಿಲ್ಲ, ನೀವು ಮಹಾ ಮೋಸಕ್ಕೆ ಸಿಲುಕಿರುವಿರೆಂದು ಹೇಳಿದ್ದೆವು’’ ಎನ್ನುವರು.

10. ಮತ್ತು ಅವರು ಹೇಳುವರು; ‘‘ಒಂದು ವೇಳೆ ನಾವು (ದೂತರ ಸಂದೇಶವನ್ನು) ಕೇಳಿದ್ದರೆ ಮತ್ತು ಅದನ್ನು ಅರ್ಥ ಮಾಡಿಕೊಂಡಿದ್ದರೆ (ಇಂದು) ನಾವು ನರಕದವರ ಸಾಲಲ್ಲಿರುತ್ತಿರಲಿಲ್ಲ.

11. ಹೀಗೆ, ಅವರು ತಮ್ಮ ಪಾಪವನ್ನು ಒಪ್ಪಿಕೊಳ್ಳುವರು. ಆದರೆ ನರಕದವರು ಶಾಪಗ್ರಸ್ತರಾಗಿರುವರು.

12. ತಮ್ಮ ಒಡೆಯನನ್ನು ಕಣ್ಣಾರೆ ಕಾಣದೆಯೇ ಅವನಿಗೆ ಅಂಜಿಕೊಂಡಿದ್ದವರಿಗೆ ಕ್ಷಮೆ ಇದೆ ಮತ್ತು ಮಹಾ ಪ್ರತಿಫಲವಿದೆ.

13. ನೀವು ನಿಮ್ಮ ಮಾತನ್ನು ಗುಟ್ಟಾಗಿಡಿರಿ ಅಥವಾ ಅದನ್ನು ಬಹಿರಂಗಪಡಿಸಿರಿ. ಅವನಂತು ಮನಸ್ಸುಗಳೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ.

14. ಸೃಷ್ಟಿಸಿದವನೇನು ಅರಿಯದಿರುತ್ತಾನೆಯೇ? ಅವನು ತೀರಾ ಸೂಕ್ಷ್ಮ ವಿಷಯಗಳನ್ನೂ ಬಲ್ಲವನು ಮತ್ತು ಅರಿವುಳ್ಳವನಾಗಿದ್ದಾನೆ.

15. ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಸಮತಟ್ಟಾಗಿಸಿದವನು. ನೀವು ಅದರಲ್ಲಿನ ದಾರಿಗಳಲ್ಲಿ ನಡೆಯಿರಿ ಮತ್ತು ಅವನು ಒದಗಿಸಿರುವ ಆಹಾರವನ್ನು ಸೇವಿಸಿರಿ. ಕೊನೆಗೆ ಅವನ ಬಳಿಯೇ ಮತ್ತೆ ಜೀವಂತಗೊಳ್ಳಬೇಕಾಗಿದೆ.

16. ನೀವೇನು, ಆಕಾಶದಲ್ಲಿರುವವನು ನಿಮ್ಮನ್ನು ಭೂಮಿಯಲ್ಲಿ ಹೂತುಬಿಡುವ ಹಾಗೂ ಅದು (ಭೂಮಿಯು) ಹಠಾತ್ತನೆ ನಡುಗಲಾರಂಭಿಸುವ (ಸಾಧ್ಯತೆಯ) ಕುರಿತು ನಿಶ್ಚಿಂತರಾಗಿರುವಿರಾ?

17. ಅಥವಾ ಆಕಾಶದಲ್ಲಿರುವವನು ನಿಮ್ಮ ಮೇಲೆ, ಕಲ್ಲು ತುಂಬಿದ ಬಿರುಗಾಳಿಯನ್ನು ಬೀಸಿ ಬಿಡುವ (ಸಾಧ್ಯತೆಯ) ಕುರಿತು ನೀವು ನಿಶ್ಚಿಂತರಾಗಿರುವಿರಾ? ನನ್ನ ಎಚ್ಚರಿಕೆ ಎಂತಹದೆಂಬುದು ನಿಮಗೆ ಬೇಗನೇ ತಿಳಿಯಲಿದೆ.

18. ಅವರ ಹಿಂದಿನವರು (ಸತ್ಯವನ್ನು) ತಿರಸ್ಕರಿಸಿದ್ದರು. ಹೇಗಿತ್ತು ನನ್ನ ಶಿಕ್ಷೆ?

19. ತಮ್ಮ ಮೇಲೆ ಹಾರಾಡುತ್ತಿರುವ ಪಕ್ಷಿಗಳನ್ನು ಅವರು ನೋಡಲಿಲ್ಲವೇ? ಅವುಗಳು ತಮ್ಮ ರೆಕ್ಕೆಗಳನ್ನು ಹರಡಿಕೊಂಡೂ ಇರುತ್ತವೆ, ಅವುಗಳನ್ನು ಮಡಚಿಕೊಂಡೂ ಇರುತ್ತವೆ. ಅವುಗಳನ್ನು ಆಧರಿಸಿ ಕೊಂಡಿರುವವನು, ಆ ಪರಮ ದಯಾಳುವಿನ ಹೊರತು ಬೇರಾರೂ ಅಲ್ಲ. ಅವನು ಖಂಡಿತ ಎಲ್ಲವನ್ನೂ ನೋಡುತ್ತಿರುತ್ತಾನೆ.

20. ಆ ಪರಮ ದಯಾಳುವಿನ ವಿರುದ್ಧ ನಿಮಗೆ ನೆರವಾಗಬಲ್ಲ ಯಾವ ಪಡೆ ತಾನೇ ನಿಮ್ಮ ಬಳಿ ಇದೆ? ಧಿಕ್ಕಾರಿಗಳು ನಿಜಕ್ಕೂ ಮೋಸಕ್ಕೊಳಗಾಗಿದ್ದಾರೆ.

21. ಅವನು ನಿಮಗೆ ತನ್ನ ಕಡೆಯಿಂದ ಆಹಾರ ಒದಗಿಸುವುದನ್ನು ನಿಲ್ಲಿಸಿ ಬಿಟ್ಟರೆ ಯಾರಿದ್ದಾನೆ ನಿಮಗೆ ಆಹಾರ ಒದಗಿಸುವವನು? ನಿಜವಾಗಿ ಅವರು (ಧಿಕ್ಕಾರಿಗಳು) ವಿದ್ರೋಹ ಮತ್ತು ವಿದ್ವೇಷದ ಧೋರಣೆಗೆ ಅಂಟಿಕೊಂಡಿದ್ದಾರೆ.

22. ತನ್ನ ಮುಖವನ್ನು ನೆಲಕ್ಕೊರಗಿಸಿಕೊಂಡು ಏಳುತ್ತಾ ಬೀಳುತ್ತಾ ನಡೆಯುವವನು ಹೆಚ್ಚು ಸನ್ಮಾರ್ಗದಲ್ಲಿರುವನೋ ಅಥವಾ ನೇರ ಮಾರ್ಗದಲ್ಲಿ ನೆಟ್ಟಗೆ ನಡೆಯುವವನೋ?

23. ಹೇಳಿರಿ; ಅವನೇ ನಿಮ್ಮನ್ನು ಸೃಷ್ಟಿಸಿದವನು, ನಿಮಗೆ ಕಿವಿಗಳನ್ನೂ, ಕಣ್ಣುಗಳನ್ನೂ, ಮನಸ್ಸುಗಳನ್ನೂ ನೀಡಿದವನು. ಆದರೆ ನೀವು ಕೃತಜ್ಞತೆ ಸಲ್ಲಿಸುವುದು ಮಾತ್ರ ತೀರಾ ಕಡಿಮೆ.

24. ಹೇಳಿರಿ; ಅವನೇ ನಿಮ್ಮನ್ನು ಭೂಮಿಯಲ್ಲಿ ಹರಡಿದವನು ಮತ್ತು ಅವನ ಬಳಿಯೇ ನಿಮ್ಮನ್ನು ಒಟ್ಟು ಸೇರಿಸಲಾಗುವುದು.

25. ‘‘ನೀವು ಸತ್ಯವಂತರಾಗಿದ್ದರೆ, (ಲೋಕಾಂತ್ಯದ) ಆ ವಾಗ್ದಾನ ಈಡೇರುವುದು ಯಾವಾಗ?’’ ಎಂದು ಅವರು ಕೇಳುತ್ತಾರೆ.

26. ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಇದೆ. ಮತ್ತು ನಾನು ಕೇವಲ ಸ್ಪಷ್ಟವಾಗಿ ಎಚ್ಚರಿಸುವವನು ಮಾತ್ರ.

27. ನಿಜವಾಗಿ ಅದು (ಲೋಕಾಂತ್ಯದ ಸಮಯವು) ಹತ್ತಿರ ಬರುವುದನ್ನು ಕಂಡಾಗ ಧಿಕ್ಕಾರಿಗಳ ಮುಖಗಳು ವಿಕಾರ ಗೊಳ್ಳುವವು. ಆಗ ಅವರೊಡನೆ, ‘‘ನಿಮಗೆ ವಾಗ್ದಾನ ಮಾಡಲಾಗಿದ್ದುದು ಇದನ್ನೇ’’ ಎಂದು ಹೇಳಲಾಗುವುದು.

28. (ದೂತರೇ,) ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ಅಲ್ಲಾಹನು ನನ್ನನ್ನು ಹಾಗೂ ನನ್ನ ಜೊತೆಗೆ ಇರುವವರನ್ನು ನಾಶ ಮಾಡಿದರೂ ನಮ್ಮ ಮೇಲೆ ಕರುಣೆ ತೋರಿದರೂ, ಧಿಕ್ಕಾರಿಗಳನ್ನು ಕಠಿಣ ಶಿಕ್ಷೆಯಿಂದ ಯಾರು ತಾನೇ ರಕ್ಷಿಸ ಬಲ್ಲರು?

29. ಹೇಳಿರಿ; ನಾವು ಆ ಪರಮ ದಯಾಳುವನ್ನು ನಂಬಿರುವೆವು ಮತ್ತು ಅವನಲ್ಲಿಯೇ ಭರವಸೆ ಇಟ್ಟಿರುವೆವು. ಯಾರು ಸ್ಪಷ್ಟವಾಗಿ ದಾರಿ ಗೆಟ್ಟವನೆಂಬುದು ನಿಮಗೆ ಬೇಗನೇ ತಿಳಿಯಲಿದೆ.

30. ಹೇಳಿರಿ; ನೀವು ಚಿಂತಿಸಿ ನೋಡಿದಿರಾ? ನೀವು ಬಳಸುವ ನೀರು ಇಂಗಿ ಹೋದರೆ ಯಾರಿದ್ದಾರೆ, ನಿಮಗೆ ಸಿಹಿ ನೀರಿನ ಚಿಲುಮೆಗಳನ್ನು ತಂದು ಕೊಡುವವರು?