70. AL Maarij

70. ಅಲ್ ಮಆರಿಜ್ (ಔನ್ನತ್ಯಗಳು)

ವಚನಗಳು – 44, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಪ್ರಶ್ನಿಸುವವನೊಬ್ಬನು, (ಧಿಕ್ಕಾರಿಗಳ ಮೇಲೆ) ಖಂಡಿತ ಬಂದೆರಗಲಿರುವ ಶಿಕ್ಷೆಯ ಕುರಿತು ಪ್ರಶ್ನಿಸಿದ್ದಾನೆ.

2. ಧಿಕ್ಕಾರಿಗಳ ಮೇಲೆ ಅದು ಬಂದೆರಗುವುದನ್ನು ನಿವಾರಿಸಲು ಯಾರಿಂದಲೂ ಸಾಧ್ಯವಾಗದು.

3. ಅತ್ಯುನ್ನತ ಸ್ಥಾನಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಬರಲಿದೆ).

4. ಐವತ್ತು ಸಾವಿರ ವರ್ಷಗಳಷ್ಟು ಧೀರ್ಘವಾಗಿರುವ ಒಂದು ದಿನ, ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ಅವನೆಡೆಗೆ ಏರಿ ಹೋಗುತ್ತಾರೆ.

5. (ದೂತರೇ,) ಸದ್ಯ ನೀವು ಸಂಯಮ ತೋರಿರಿ. ಸಭ್ಯವಾದ ಸಂಯಮ.

6. ಅವರು ಅದನ್ನು (ವಿಚಾರಣೆಯ ದಿನವನ್ನು) ತುಂಬಾ ದೂರದಲ್ಲಿ ಕಾಣುತ್ತಿದ್ದಾರೆ.

7. ಆದರೆ ನಾವು ಅದನ್ನು ತೀರಾ ಹತ್ತಿರದಲ್ಲಿ ಕಾಣುತ್ತಿದ್ದೇವೆ.

8. ಆಕಾಶವು ಕರಗಿದ ತಾಮ್ರದಂತಾಗುವ ಆ ದಿನ,

9. ಪರ್ವತಗಳೆಲ್ಲಾ ಉಣ್ಣೆಯ ಚೂರುಗಳಂತಾಗಿ ಬಿಡುವವು.

10. (ಅಂದು) ಯಾವ ಮಿತ್ರನೂ ತನ್ನ ಮಿತ್ರನ ಕುರಿತು ವಿಚಾರಿಸಲಾರನು.

11. ನಿಜವಾಗಿ, ಅವರು ಪರಸ್ಪರರನ್ನು ನೋಡುತ್ತಿರುವರು.

12. ಅಂದು ಅಪರಾಧಿಯು ಶಿಕ್ಷೆಗೆ ಪರಿಹಾರವಾಗಿ ತನ್ನ ಪುತ್ರರನ್ನು ನೀಡಲು ಸಿದ್ದನಾಗುವನು.

13. (ಮಾತ್ರವಲ್ಲ,) ತನ್ನ ಪತ್ನಿ ಮತ್ತು ತನ್ನ ಸಹೋದರರನ್ನೂ ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನೂ,

14. ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ (ಪರಿಹಾರವಾಗಿ ಕೊಟ್ಟು) ಶಿಕ್ಷೆಯಿಂದ ಪಾರಾಗಲು ಬಯಸುವನು.

15. ಖಂಡಿತ ಇಲ್ಲ. ಅದು, ಭುಗಿದೇಳುವ ಬೆಂಕಿಯಾಗಿರುವುದು.

16. ಚರ್ಮವನ್ನು ಸುಲಿದು ಬಿಡುವ ಬೆಂಕಿ

17. ಸತ್ಯವನ್ನು ಕಡೆಗಣಿಸಿ ದೊಡ್ಡಸ್ತಿಕೆ ಮೆರೆದವನನ್ನು ಅದು (ನರಕವು) ಕರೆಯುವುದು.

18. ಸಂಪತ್ತನ್ನು ಸಂಗ್ರಹಿಸಿ ಮುಚ್ಚಿಟ್ಟವನನ್ನೂ (ಅದು ಕರೆಯುವುದು.)

19. ಖಂಡಿತವಾಗಿಯೂ ಮಾನವನನ್ನು ಚಂಚಲನಾಗಿ ಸೃಷ್ಟಿಸಲಾಗಿದೆ.

20. ಸಂಕಷ್ಟವೇನಾದರೂ ಎದುರಾದೊಡನೆ ಅವನು ಗಾಬರಿಗೊಳ್ಳುತ್ತಾನೆ.

21. ಸುಖ ಪ್ರಾಪ್ತವಾದಾಗ ಜಿಪುಣನಾಗಿ ಬಿಡುತ್ತಾನೆ.

22. ಆದರೆ ನಮಾಝ್ ಸಲ್ಲಿಸುವವರು ಮಾತ್ರ (ಹಾಗಿರುವುದಿಲ್ಲ).

23. ಅವರು ಸದಾ ಕಟ್ಟುನಿಟ್ಟಾಗಿ ನಮಾಝನ್ನು ಪಾಲಿಸುತ್ತಾರೆ.

24. ಅವರ ಸಂಪತ್ತುಗಳಲ್ಲಿ ನಿರ್ದಿಷ್ಟವಾದ ಹಕ್ಕು ಇದೆ.

25. ಬೇಡುವವನಿಗೆ ಮತ್ತು ವಂಚಿತನಿಗೆ.

26. ಪ್ರತಿಫಲದ ದಿನವಿರುವುದು ಸತ್ಯ ಎಂದು ಅವರು ನಂಬುತ್ತಾರೆ.

27. ಅವರು ತಮ್ಮೊಡೆಯನ ಶಿಕ್ಷೆಗೆ ಅಂಜುತ್ತಾರೆ.

28. ಅವರ ಒಡೆಯನ ಶಿಕ್ಷೆ ಎಂತಹದ್ದೆಂದರೆ, ಆ ಕುರಿತು ನಿಶ್ಚಿಂತರಾಗಿರಲು ಸಾಧ್ಯವೇ ಇಲ್ಲ.

29. ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳುತ್ತಾರೆ.

30. ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ಖಂಡನಾರ್ಹರಲ್ಲ.

31. ಅದರ ಆಚಿನದನ್ನು ಅಪೇಕ್ಷಿಸುವವರು – ಅವರೇ ಎಲ್ಲೆ ಮೀರುವವರು.

32. ಅವರು (ಸ್ವರ್ಗಕ್ಕೆ ಅರ್ಹರಾದ ಸಜ್ಜನರು) ತಮ್ಮನ್ನು ನಂಬಿ ಒಪ್ಪಿಸಲಾದ ಹೊಣೆಗಳನ್ನು ನಿಭಾಯಿಸುತ್ತಾರೆ ಮತ್ತು ತಮ್ಮ ಕರಾರುಗಳನ್ನು ಪಾಲಿಸುತ್ತಾರೆ.

33. ಅವರು ತಮ್ಮ ಸಾಕ್ಷಗಳಲ್ಲಿ ಸ್ಥಿರರಾಗಿರುತ್ತಾರೆ.

34. ಅವರು ತಮ್ಮ ನಮಾಝ್‌ಗಳ ಕುರಿತು ಎಚ್ಚರ ವಹಿಸುತ್ತಾರೆ.

35. ಅವರೇ, ಗೌರವಾನ್ವಿತರಾಗಿ ಸ್ವರ್ಗ ತೋಟಗಳಲ್ಲಿ ಇರುವವರು.

36. ಇದೇನಾಗಿದೆ ಧಿಕ್ಕಾರಿಗಳಿಗೆ? ಅವರೇಕೆ ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ?

37. ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪು ಗುಂಪಾಗಿ ಬರುತ್ತಿದ್ದಾರೆ.

38. ಅವರ ಪೈಕಿ ಪ್ರತಿಯೊಬ್ಬರೂ ಅನುಗ್ರಹ ತುಂಬಿದ ಸ್ವರ್ಗದೊಳಗೆ ಪ್ರವೇಶಿಸಲು ಆಶಿಸುತ್ತಿದ್ದಾರೆ.

39. ಖಂಡಿತ ಸಾಧ್ಯವಿಲ್ಲ. ಅವರಿಗೆ ತಿಳಿದಿರುವ ಒಂದು ವಸ್ತುವಿನಿಂದ ನಾವೇ ಅವರನ್ನು ಸೃಷ್ಟಿಸಿರುವೆವು.

40. ಖಂಡಿತ ಇಲ್ಲ. ನಾನು ಪೂರ್ವಗಳ ಮತ್ತು ಪಶ್ಚಿಮಗಳ ಒಡೆಯನ ಆಣೆ ಹಾಕಿ ಹೇಳುತ್ತಿದ್ದೇನೆ, ನಾವು ಖಂಡಿತ ಅದನ್ನು ಮಾಡಬಲ್ಲೆವು.

41. ಅವರ ಸ್ಥಾನದಲ್ಲಿ ನಾವು ಅವರಿಗಿಂತ ಉತ್ತಮರನ್ನು ತರಬಲ್ಲೆವು. ಯಾರೂ ನಮ್ಮನ್ನು ಸೋಲಿಸಲಾರರು.

42. ಅವರನ್ನು ಬಿಟ್ಟು ಬಿಡಿರಿ. ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ನಿರರ್ಥಕ ಕೆಲಸಗಳಲ್ಲಿ ಮತ್ತು ಆಟ ವಿನೋದಗಳಲ್ಲಿ ನಿರತರಾಗಿರಲಿ.

43. ಅವರು, ತಮ್ಮ ಗೋರಿಗಳಿಂದ ಎದ್ದು ಹೊರ ಬರುವ ದಿನ, ಒಂದು ನಿರ್ದಿಷ್ಟ ಗುರಿಯೆಡೆಗೋ ಎಂಬಂತೆ ಆತುರರಾಗಿ ಧಾವಿಸುತ್ತಿರುವರು.

44. ಅವರ ದೃಷ್ಟಿಗಳು ಭೀತವಾಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿ ಕೊಂಡಿರುವುದು. ಅದುವೇ ಅವರಿಗೆ ವಾಗ್ದಾನ ಮಾಡಲಾಗಿದ್ದ ದಿನ.