72. Al Jinn

ಅಲ್ ಜಿನ್ನ್

ವಚನಗಳು – 28, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. (ದೂತರೇ,) ಹೇಳಿರಿ; ನನ್ನ ಬಳಿಗೆ ದಿವ್ಯ ಸಂದೇಶವು ಬಂದಿದೆ. (ಅದರ ಪ್ರಕಾರ,) ಜಿನ್ನ್‌ಗಳ ಒಂದು ತಂಡವು ಇದನ್ನು (ಈ ಕುರ್‌ಆನನ್ನು) ಕೇಳಿ, ಹೀಗೆಂದಿತು; ‘‘ನಾವು ಒಂದು ವಿಶಿಷ್ಟ ಕುರ್‌ಆನನ್ನು ಕೇಳಿರುವೆವು’’.

2. ‘‘ಅದು ಸನ್ಮಾರ್ಗವನ್ನು ತೋರಿಸುತ್ತದೆ. ನಾವು ಅದರಲ್ಲಿ ನಂಬಿಕೆ ಇಟ್ಟಿರುವೆವು. ನಾವಿನ್ನು ನಮ್ಮ ಒಡೆಯನ ಜೊತೆ ಯಾರನ್ನೂ ಪಾಲುದಾರರಾಗಿಸಲಾರೆವು.’’

3. ‘‘ನಮ್ಮ ಒಡೆಯನ ಸ್ಥಾನ ತುಂಬಾ ಉನ್ನತವಾದುದು. ಅವನು ಯಾರನ್ನೂ ತನ್ನ ಪತ್ನಿ ಅಥವಾ ಪುತ್ರನಾಗಿಸಿ ಕೊಂಡಿಲ್ಲ’’.

4. ‘‘ನಮ್ಮಲ್ಲಿನ ಕೆಲವು ಮೂರ್ಖರು ಅಲ್ಲಾಹನ ಕುರಿತು ಸುಳ್ಳುಗಳನ್ನು ಸೃಷ್ಟಿಸಿ ಹೇಳುತ್ತಾರೆ’’.

5. ‘‘ಜಿನ್ನ್‌ಗಳು ಮತ್ತು ಮಾನವರು ಅಲ್ಲಾಹನ ಕುರಿತು ಸುಳ್ಳು ಹೇಳುವುದಿಲ್ಲ ಎಂದು ನಾವು ನಂಬಿದ್ದೆವು.

 6. ‘‘ಕೆಲವು ಮಾನವರು ಜಿನ್ನ್‌ಗಳ ಆಶ್ರಯ ಪಡೆದುದರಿಂದ ಅವರ (ಜಿನ್ನ್‌ಗಳ) ಬಂಡಾಯವು ಮತ್ತಷ್ಟು ಹೆಚ್ಚಿತು’’.

  7. ‘‘ಅಲ್ಲಾಹನು ಯಾರನ್ನೂ ಮತ್ತೆ ಜೀವಂತಗೊಳಿಸಲಾರನೆಂದು ನೀವು ನಂಬಿರುವಂತೆ ಅವರೂ (ಆ ಜಿನ್ನ್‌ಗಳೂ) ನಂಬಿದ್ದರು’’.

8. ‘‘ನಾವು ಆಕಾಶವನ್ನು ಸಮೀಕ್ಷಿಸಿ ನೋಡಿದೆವು. ಅದನ್ನು ಬಲಿಷ್ಠ ಕಾವಲುಗಾರರು ರಕ್ಷಿಸುತ್ತಿರುವುದನ್ನು ಹಾಗೂ ಅದು ಬೆಂಕಿಯಿಂದ ತುಂಬಿರುವುದನ್ನು ಕಂಡೆವು’’.

 9. ‘‘ಹಿಂದೆ ನಾವು ಸುದ್ದಿ ಕೇಳಲಿಕ್ಕಾಗಿ ಅಲ್ಲಿ ಹಲವೆಡೆ ಕೂರುತ್ತಿದ್ದೆವು. ಆದರೆ ಈಗ, ಹಾಗೆ ಕೇಳ ಹೊರಟವನು, ತನ್ನ ಮೇಲೆ ಬೆಂಕಿಯ ದಾಳಿಯನ್ನು ಎದುರಿಸ ಬೇಕಾಗುತ್ತದೆ.

10. ‘‘ಭೂವಾಸಿಗಳ ಒಡೆಯನು ಅವರಿಗೆ ಏನಾದರೂ ಅಹಿತವನ್ನು ಮಾಡಬಯಸುತ್ತಾನೋ ಅಥವಾ ಹಿತವನ್ನು ಮಾಡಬಯಸುತ್ತಾನೋ ಎಂಬುದು ನಮಗೆ ತಿಳಿಯದು’’.

11. ‘‘ನಮ್ಮಲ್ಲಿ ಕೆಲವರು ಸಜ್ಜನರಿದ್ದಾರೆ ಮತ್ತು ಇತರ ಬಗೆಯವರೂ ಇದ್ದಾರೆ. ನಮ್ಮಲ್ಲಿ ವಿಭಿನ್ನ ಪಂಥಗಳಿವೆ’’.

12. ‘‘ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲು ನಮ್ಮಿಂದ ಸಾಧ್ಯವಿಲ್ಲ ಮತ್ತು ಅವನಿಂದ ತಪ್ಪಿಸಿಕೊಳ್ಳುವ ಮೂಲಕ ಅವನನ್ನು ಮಣಿಸಲಿಕ್ಕೂ ನಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ನಾವು ಮನಗಂಡಿದ್ದೇವೆ.

 13. ‘‘ಮಾರ್ಗದರ್ಶಿ ಸಂದೇಶವನ್ನು (ಕುರ್‌ಆನನ್ನು) ಕೇಳಿದೊಡನೆ ನಾವು ಅದನ್ನು ನಂಬಿದೆವು. ತನ್ನ ಒಡೆಯನನ್ನು ನಂಬಿದವನಿಗೆ ಯಾವುದೇ ನಷ್ಟದ ಅಥವಾ ಅಕ್ರಮದ ಭಯ ಇರುವುದಿಲ್ಲ’’.

14. ‘‘ನಮ್ಮಲ್ಲಿ ಕೆಲವರು ಶರಣಾದವರಿದ್ದಾರೆ (ಮುಸ್ಲಿಮರಿದ್ದಾರೆ) ಮತ್ತು ಕೆಲವರು ದಾರಿಗೆಟ್ಟವರಿದ್ದಾರೆ. ಶರಣಾದವರು ಸನ್ಮಾರ್ಗವನ್ನು ಪಡೆದರು’’.

15. ‘‘ಇನ್ನು ಪಾಪಿಗಳು, ಅವರಂತು ನರಕದ ಇಂಧನವಾಗಿಬಿಟ್ಟರು’’.

 16. (ದೂತರೇ,) ಒಂದು ವೇಳೆ ಅವರು (ಮಕ್ಕಃದ ಬರ ಪೀಡಿತರು) ನೇರ ಮಾರ್ಗದಲ್ಲೇ ಇದ್ದಿದ್ದರೆ ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಒದಗಿಸುತ್ತಿದ್ದೆವು –

17. – ಆ ಮೂಲಕ ಅವರನ್ನು ಪರೀಕ್ಷಿಸಲಿಕ್ಕಾಗಿ. ತನ್ನ ಒಡೆಯನ ಸ್ಮರಣೆಯನ್ನು ಕಡೆಗಣಿಸುವಾತನನ್ನು ಅವನು (ಅಲ್ಲಾಹನು) ಕಠಿಣ ಶಿಕ್ಷೆಗೆ ಒಳಪಡಿಸುವನು.

18. ಮಸ್ಜಿದ್ (ಮಸೀದಿ)ಗಳೆಲ್ಲಾ ಅಲ್ಲಾಹನಿಗೇ ಸೇರಿವೆ. ಅವುಗಳಲ್ಲಿ ಅಲ್ಲಾಹನ ಜೊತೆ ಬೇರೆ ಯಾರನ್ನೂ ಪ್ರಾರ್ಥಿಸಬೇಡಿ.

19. ಅಲ್ಲಾಹನ ದಾಸನು (ದೂತರು, ಕಅ್ಬ:ದಲ್ಲಿ) ಅವನನ್ನು ಪ್ರಾರ್ಥಿಸಲಿಕ್ಕೆಂದು ನಿಂತಾಗ ಅವರು (ಮಕ್ಕಃದ ವಿಗ್ರಹಾರಾಧಕರು) ಆತನ ಮೇಲೆ ಮುಗಿದು ಬೀಳಲು ಹೊರಡುತ್ತಾರೆ.

 20. ಹೇಳಿರಿ; ನಾನಂತು ನನ್ನ ಒಡೆಯನನ್ನು ಮಾತ್ರ ಪ್ರಾರ್ಥಿಸುತ್ತೇನೆ ಮತ್ತು ನಾನು ಅವನ ಜೊತೆ ಯಾರನ್ನೂ ಪಾಲುಗೊಳಿಸುವುದಿಲ್ಲ.

21. ಹೇಳಿರಿ; ನಿಮಗೆ ಯಾವುದೇ ನಷ್ಟ ಅಥವಾ ಲಾಭವನ್ನುಂಟು ಮಾಡುವ ಅಧಿಕಾರ ನನಗೆ ಖಂಡಿತ ಇಲ್ಲ.

22. ಹೇಳಿರಿ; ಅಲ್ಲಾಹನಿಗೆದುರಾಗಿ ನನಗೆ ಆಶ್ರಯ ನೀಡಬಲ್ಲವರು ಯಾರೂ ಇಲ್ಲ, ಮತ್ತು ನಾನು ಅವನ ಹೊರತು ಬೇರೆಲ್ಲೂ ಆಶ್ರಯವನ್ನು ಕಾಣುವುದಿಲ್ಲ.

23. ಅಲ್ಲಾಹನ ಕಡೆಯಿಂದ (ಸಿಕ್ಕಿದ್ದನ್ನು) ಮತ್ತು ಅವನ ಸಂದೇಶಗಳನ್ನು ತಲುಪಿಸುವುದು (ಇಷ್ಟೇ ನನ್ನ ಕೆಲಸ). ಅಲ್ಲಾಹ್ ಮತ್ತವನ ದೂತರ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ ಖಂಡಿತ ನರಕಾಗ್ನಿಯೇ ಗತಿ. ಅವರು ಅದರಲ್ಲಿ ಸದಾ ಕಾಲ ಇರುವರು.

24. ಅವರು, ತಮಗೆ ವಾಗ್ದಾನ ಮಾಡಲಾಗಿರುವ ಘಟನೆಯನ್ನು ಕಂಡಾಗ, ಯಾರ ಸಹಾಯಕನು ಅತ್ಯಂತ ದುರ್ಬಲನೆಂಬುದು, ಹಾಗೂ ಯಾರ ಸಹಾಯಕರ ಸಂಖ್ಯೆ ತೀರಾ ನಗಣ್ಯಎಂಬುದು ಅವರಿಗೆ ಮನವರಿಕೆಯಾಗಲಿದೆ. 25. ಹೇಳಿರಿ; ನಿಮಗೆ ವಾಗ್ದಾನ ಮಾಡಲಾಗುತ್ತಿರುವ ದಿನವು ತೀರಾ ಸಮೀಪವಿದೆಯೋ ಅಥವಾ ನನ್ನೊಡೆಯನು ಅದರ ಅವಧಿಯನ್ನು ವಿಸ್ತರಿಸಿರುವನೋ ಎಂಬುದು ನನಗೆ ತಿಳಿಯದು.

26. ಅವನೇ ಎಲ್ಲಾ ಗುಪ್ತ ವಿಷಯಗಳನ್ನು ಬಲ್ಲವನು. ಅವನು ಆ ತನ್ನ ಗುಪ್ತ ವಿಷಯಗಳನ್ನು ಯಾರೊಬ್ಬರಿಗೂ ತಿಳಿಸುವುದಿಲ್ಲ.

27. ದೂತರ ಪೈಕಿ ಅವನ ಮೆಚ್ಚುಗೆಗೆ ಪಾತ್ರರಾದವರ ಹೊರತು. (ಅವರಿಗೆ ಅವನು ಗುಪ್ತ ವಿಷಯಗಳನ್ನು ತಿಳಿಸುತ್ತಾನೆ.) ಮತ್ತು ಅವರ ಮುಂದೆಯೂ ಹಿಂದೆಯೂ ಕಾವಲುಗಾರರನ್ನು ನೇಮಿಸುತ್ತಾನೆ –

28. – ಅವರು ತಮ್ಮ ಒಡೆಯನ ಸಂದೇಶವನ್ನು ತಲುಪಿಸಿರುವರೆಂಬುದನ್ನು ಅರಿಯಲಿಕ್ಕಾಗಿ. ಮತ್ತು ಅವನು, ಅವರ ಬಳಿ ಇರುವ ಎಲ್ಲವನ್ನೂ ಆವರಿಸಿಕೊಂಡಿರುತ್ತಾನೆ. ಮತ್ತು ಅವನು ಪ್ರತಿಯೊಂದು ವಸ್ತುವನ್ನೂ ಎಣಿಸಿಟ್ಟಿರುತ್ತಾನೆ.