11. ಬಿಟ್ಟು ಬಿಡಿರಿ, ನನ್ನನ್ನು ಮತ್ತು ನಾನು ಸೃಷ್ಟಿಸುವಾಗ ಒಂಟಿಯಾಗಿದ್ದಾತನನ್ನು.
12. (ಮುಂದೆ) ನಾನು ಅವನಿಗೆ ಧಾರಾಳ ಸಂಪತ್ತನ್ನು ನೀಡಿದೆನು.
13. ಮತ್ತು ಸದಾ ಅವನ ಜೊತೆಗಿರುವ ಪುತ್ರರನ್ನು ನೀಡಿದೆನು.
14. ಮತ್ತು ಅವನಿಗೆ ಎಲ್ಲ ಬಗೆಯ ಸಾಧನಗಳನ್ನು ಒದಗಿಸಿದೆನು.
15. ಆದರೆ ಅವನು, ನಾನು ಮತ್ತಷ್ಟು ನೀಡಬೇಕೆಂದು ಆಸೆ ಪಡುತ್ತಿದ್ದಾನೆ.
16. ಹಾಗಾಗದು; ಅವನು ನಮ್ಮ ವಚನಗಳ ಶತ್ರುವಾಗಿರುವನು.
17. ನಾನು ಅವನನ್ನು (ನರಕದ) ದುರ್ಗಮ ಬೆಟ್ಟವನ್ನು ಹತ್ತಿಸಲಿರುವೆನು.
18. ಅವನು ಯೋಚಿಸಿದನು ಮತ್ತು ನಿರ್ಧರಿಸಿಕೊಂಡನು.
19. ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು.
20. ಮತ್ತೆ, ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು.
21. ಮತ್ತೆ ಅವನು ನೋಡಿದನು.
22. ಮತ್ತೆ ಅವನು ಹುಬ್ಬೇರಿಸಿ ಮುಖ ತಿರುಚಿಕೊಂಡನು
23. ಮತ್ತೆ ಅವನು ತಿರುಗಿ ನಿಂತನು ಮತ್ತು ಅಹಂಕಾರ ತೋರಿದನು.
24. ಮತ್ತೆ ಅವನು ಹೇಳಿದನು; ‘‘ಇದು ಪರಂಪರಾಗತ ಮಾಟಗಾರಿಕೆಯೇ ಹೊರತು ಬೇರೇನಲ್ಲ’’.
25. ‘‘ಇದು ಕೇವಲ ಮನುಷ್ಯನ ಮಾತೇ ಹೊರತು ಬೇರೇನಲ್ಲ’’.
26. ನಾವು ಅವನನ್ನು ‘ಸಕರ್’ಗೆ (ನರಕಕ್ಕೆ) ಎಸಯಲಿರುವೆವು.
27. ಸಕರ್ ಏನೆಂದು ನಿಮಗೇನು ಗೊತ್ತು ?
28. ಅದು ಉಳಿಯಲೂ ಬಿಡದು ಅಳಿಯಲೂ ಬಿಡದು.
29. ಅದು ಮನುಷ್ಯನನ್ನು ಸುಟ್ಟು ಕರ್ರಗಾಗಿಸುವುದು.
30. ಅದರ ಮೇಲೆ ಹತ್ತೊಂಭತ್ತು ಮಂದಿ (ಕಾವಲುಗಾರರು) ಇರುವರು.
31. ನಾವು ಮಲಕ್ಗಳನ್ನೇ ನರಕದ ಕಾವಲುಗಾರರಾಗಿಸಿರುವೆವು ಮತ್ತು ಅವರ ಸಂಖ್ಯೆಯನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು – ಗ್ರಂಥದವರು ನಂಬಲೆಂದು ಹಾಗೂ ವಿಶ್ವಾಸಿಗಳ ವಿಶ್ವಾಸವು ಹೆಚ್ಚಲೆಂದು ಮತ್ತು ಗ್ರಂಥದವರಾಗಲಿ ವಿಶ್ವಾಸಿಗಳಾಗಲಿ ಸಂಶಯಕ್ಕೆ ತುತ್ತಾಗಬಾರದೆಂದು ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಧಿಕ್ಕಾರಿಗಳು ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎಂದು ಕೇಳಲೆಂದು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ನಿಮ್ಮ ಒಡೆಯನ ಪಡೆಗಳ ಕುರಿತು ಅವನ ಹೊರತು ಬೇರೆ ಯಾರಿಗೂ ತಿಳಿಯದು. ಇದು ಮಾನವರಿಗಾಗಿರುವ ಉಪದೇಶ ಮಾತ್ರವಾಗಿದೆ.
32. ಹಾಗೇನೂ ಅಲ್ಲ, ಚಂದ್ರನಾಣೆ.
33. ಮತ್ತು ಇರುಳು ಮರಳುವಾಗಿನ ಆಣೆ.
34. ಮತ್ತು ಮುಂಜಾವು ಬೆಳಗುವಾಗಿನಾಣೆ.
35. ಅದು (ನರಕವು) ಒಂದು ಮಹಾ ವಿಪತ್ತಾಗಿದೆ.
36. ಜನರು ಅಂಜ ಬೇಕಾದ ವಸ್ತುವಾಗಿದೆ.
37. ನಿಮ್ಮ ಪೈಕಿ ಇಷ್ಟ ಉಳ್ಳವನು ಮುಂದೆ ಹೋಗಲಿ ಅಥವಾ ಹಿಂದೆ ಉಳಿಯಲಿ.
38. ಪ್ರತಿಯೊಬ್ಬನೂ ತನ್ನ ಕರ್ಮಗಳ ಬದಲಿಗೆ ಒತ್ತೆಯಾಳಾಗಿರುವನು.
39. ಬಲಭಾಗದವರ ಹೊರತು.
40. ಅವರು ಸ್ವರ್ಗ ತೋಟಗಳಲ್ಲಿ ಇರುವರು ಮತ್ತು ಪ್ರಶ್ನಿಸುವರು,
41. ಅಪರಾಧಿಗಳೊಡನೆ,
42. ‘‘ನೀವೇಕೆ ನರಕಕ್ಕೆ ಹೋದಿರಿ?’’
43. ಅವರು ಹೇಳುವರು; ‘‘ನಾವು ನಮಾಝ್ ಸಲ್ಲಿಸುವವರಾಗಿರಲಿಲ್ಲ’’.