74. Muddathir

74. ಅಲ್ ಮುದ್ದಸ್ಸಿರ್ (ಹೊದ್ದು ಕೊಂಡವರು)

ವಚನಗಳು – 56, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹೊದ್ದುಕೊಂಡಿರುವವರೇ,

2. ಎದ್ದೇಳಿರಿ ಮತ್ತು ಎಚ್ಚರಿಸಿರಿ.

3. ನಿಮ್ಮ ಒಡೆಯನ ಹಿರಿಮೆಯನ್ನು ಕೊಂಡಾಡಿರಿ.

4. ನಿಮ್ಮ ವಸ್ತ್ರಗಳನ್ನು ಶುಚಿಯಾಗಿಡಿ

5. ಮಾಲಿನ್ಯಗಳಿಂದ ದೂರ ಉಳಿಯಿರಿ.

6. (ಉಪಕೃತನಿಂದ) ಹೆಚ್ಚಿನದನ್ನು ಪಡೆಯಲಿಕ್ಕಾಗಿ ಉಪಕಾರ ಮಾಡಬೇಡಿರಿ.

7. ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ.

8. (ಲೋಕಾಂತ್ಯದ) ಕಹಳೆಯನ್ನು ಊದಲಾದಾಗ,

9. ಆ ದಿನವು ಬಹಳ ಕಠಿಣ ದಿನವಾಗಿರುವುದು.

10. ಧಿಕ್ಕಾರಿಗಳ ಪಾಲಿಗೆ ಅದು ಸುಲಭವಾಗಿರಲಾರದು.

11. ಬಿಟ್ಟು ಬಿಡಿರಿ, ನನ್ನನ್ನು ಮತ್ತು ನಾನು ಸೃಷ್ಟಿಸುವಾಗ ಒಂಟಿಯಾಗಿದ್ದಾತನನ್ನು.

12. (ಮುಂದೆ) ನಾನು ಅವನಿಗೆ ಧಾರಾಳ ಸಂಪತ್ತನ್ನು ನೀಡಿದೆನು.

13. ಮತ್ತು ಸದಾ ಅವನ ಜೊತೆಗಿರುವ ಪುತ್ರರನ್ನು ನೀಡಿದೆನು.

14. ಮತ್ತು ಅವನಿಗೆ ಎಲ್ಲ ಬಗೆಯ ಸಾಧನಗಳನ್ನು ಒದಗಿಸಿದೆನು.

15. ಆದರೆ ಅವನು, ನಾನು ಮತ್ತಷ್ಟು ನೀಡಬೇಕೆಂದು ಆಸೆ ಪಡುತ್ತಿದ್ದಾನೆ.

16. ಹಾಗಾಗದು; ಅವನು ನಮ್ಮ ವಚನಗಳ ಶತ್ರುವಾಗಿರುವನು.

17. ನಾನು ಅವನನ್ನು (ನರಕದ) ದುರ್ಗಮ ಬೆಟ್ಟವನ್ನು ಹತ್ತಿಸಲಿರುವೆನು.

18. ಅವನು ಯೋಚಿಸಿದನು ಮತ್ತು ನಿರ್ಧರಿಸಿಕೊಂಡನು.

19. ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು.

20. ಮತ್ತೆ, ನಾಶವಾಗಲಿ ಅವನು, ಎಂತಹ ನಿರ್ಧಾರ ಅವನದು.

21. ಮತ್ತೆ ಅವನು ನೋಡಿದನು.

22. ಮತ್ತೆ ಅವನು ಹುಬ್ಬೇರಿಸಿ ಮುಖ ತಿರುಚಿಕೊಂಡನು

23. ಮತ್ತೆ ಅವನು ತಿರುಗಿ ನಿಂತನು ಮತ್ತು ಅಹಂಕಾರ ತೋರಿದನು.

24. ಮತ್ತೆ ಅವನು ಹೇಳಿದನು; ‘‘ಇದು ಪರಂಪರಾಗತ ಮಾಟಗಾರಿಕೆಯೇ ಹೊರತು ಬೇರೇನಲ್ಲ’’.

25. ‘‘ಇದು ಕೇವಲ ಮನುಷ್ಯನ ಮಾತೇ ಹೊರತು ಬೇರೇನಲ್ಲ’’.

26. ನಾವು ಅವನನ್ನು ‘ಸಕರ್’ಗೆ (ನರಕಕ್ಕೆ) ಎಸಯಲಿರುವೆವು.

27. ಸಕರ್ ಏನೆಂದು ನಿಮಗೇನು ಗೊತ್ತು ?

28. ಅದು ಉಳಿಯಲೂ ಬಿಡದು ಅಳಿಯಲೂ ಬಿಡದು.

29. ಅದು ಮನುಷ್ಯನನ್ನು ಸುಟ್ಟು ಕರ್ರಗಾಗಿಸುವುದು.

30. ಅದರ ಮೇಲೆ ಹತ್ತೊಂಭತ್ತು ಮಂದಿ (ಕಾವಲುಗಾರರು) ಇರುವರು.

31. ನಾವು ಮಲಕ್‌ಗಳನ್ನೇ ನರಕದ ಕಾವಲುಗಾರರಾಗಿಸಿರುವೆವು ಮತ್ತು ಅವರ ಸಂಖ್ಯೆಯನ್ನು ಧಿಕ್ಕಾರಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು – ಗ್ರಂಥದವರು ನಂಬಲೆಂದು ಹಾಗೂ ವಿಶ್ವಾಸಿಗಳ ವಿಶ್ವಾಸವು ಹೆಚ್ಚಲೆಂದು ಮತ್ತು ಗ್ರಂಥದವರಾಗಲಿ ವಿಶ್ವಾಸಿಗಳಾಗಲಿ ಸಂಶಯಕ್ಕೆ ತುತ್ತಾಗಬಾರದೆಂದು ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಧಿಕ್ಕಾರಿಗಳು ‘‘ಈ ಉದಾಹರಣೆಯ ಮೂಲಕ ಅಲ್ಲಾಹನು ಬಯಸುವುದೇನನ್ನು?’’ ಎಂದು ಕೇಳಲೆಂದು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿಗೆಡಿಸುತ್ತಾನೆ. ಹಾಗೂ ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ನಿಮ್ಮ ಒಡೆಯನ ಪಡೆಗಳ ಕುರಿತು ಅವನ ಹೊರತು ಬೇರೆ ಯಾರಿಗೂ ತಿಳಿಯದು. ಇದು ಮಾನವರಿಗಾಗಿರುವ ಉಪದೇಶ ಮಾತ್ರವಾಗಿದೆ.

32. ಹಾಗೇನೂ ಅಲ್ಲ, ಚಂದ್ರನಾಣೆ.

33. ಮತ್ತು ಇರುಳು ಮರಳುವಾಗಿನ ಆಣೆ.

34. ಮತ್ತು ಮುಂಜಾವು ಬೆಳಗುವಾಗಿನಾಣೆ.

35. ಅದು (ನರಕವು) ಒಂದು ಮಹಾ ವಿಪತ್ತಾಗಿದೆ.

36. ಜನರು ಅಂಜ ಬೇಕಾದ ವಸ್ತುವಾಗಿದೆ.

37. ನಿಮ್ಮ ಪೈಕಿ ಇಷ್ಟ ಉಳ್ಳವನು ಮುಂದೆ ಹೋಗಲಿ ಅಥವಾ ಹಿಂದೆ ಉಳಿಯಲಿ.

38. ಪ್ರತಿಯೊಬ್ಬನೂ ತನ್ನ ಕರ್ಮಗಳ ಬದಲಿಗೆ ಒತ್ತೆಯಾಳಾಗಿರುವನು.

39. ಬಲಭಾಗದವರ ಹೊರತು.

40. ಅವರು ಸ್ವರ್ಗ ತೋಟಗಳಲ್ಲಿ ಇರುವರು ಮತ್ತು ಪ್ರಶ್ನಿಸುವರು,

41. ಅಪರಾಧಿಗಳೊಡನೆ,

42. ‘‘ನೀವೇಕೆ ನರಕಕ್ಕೆ ಹೋದಿರಿ?’’

43. ಅವರು ಹೇಳುವರು; ‘‘ನಾವು ನಮಾಝ್ ಸಲ್ಲಿಸುವವರಾಗಿರಲಿಲ್ಲ’’.

44. ‘‘ಮತ್ತು ನಾವು ಬಡವರಿಗೆ ಉಣಿಸುತ್ತಿರಲಿಲ್ಲ’’.

45. ‘‘ನಿರರ್ಥಕ ಮಾತುಗಳನ್ನಾಡುವವರ ಜೊತೆಗಿದ್ದು ನಾವೂ ನಿರರ್ಥಕ ಮಾತುಗಳನ್ನಾಡುತ್ತಿದ್ದೆವು’’.

46. ‘‘ಮತ್ತು ನಾವು ಅಂತಿಮ ವಿಚಾರಣೆಯ ದಿನವನ್ನು ಅಲ್ಲಗಳೆಯುತ್ತಿದ್ದೆವು’’.

47. ‘‘ಕೊನೆಗೆ ಖಚಿತವಾದ ಆ ಸಂಭವವು (ಮರಣ) ನಮ್ಮ ಬಳಿಗೆ ಬಂದು ಬಿಟ್ಟಿತು’’.

48. ಶಿಫಾರಸುದಾರರ ಶಿಫಾರಸಿನಿಂದ ಅವರಿಗೆ ಯಾವ ಲಾಭವೂ ಆಗದು.

49. ಅವರಿಗೇನಾಗಿದೆ? ಉಪದೇಶವನ್ನು ಅವರೇಕೆ ಕಡೆಗಣಿಸುತ್ತಿದ್ದಾರೆ?

50. ಅವರು (ಸತ್ಯದ ಮುಂದೆ) ಕತ್ತೆಗಳಂತೆ ಬೆಚ್ಚಿ ಬೀಳುತ್ತಿದ್ದಾರೆ.

51. ಸಿಂಹಕ್ಕೆ ಅಂಜಿ ಓಡುತ್ತಿರುವ (ಕತ್ತೆಗಳಂತೆ).

52. ನಿಜವಾಗಿ ಅವರ ಪೈಕಿ ಪ್ರತಿಯೊಬ್ಬರೂ, ತಮ್ಮ ಬಳಿಗೆ ತೆರೆದ ಗ್ರಂಥವೊಂದು (ಆಕಾಶದಿಂದ ಇಳಿದು) ಬರಬೇಕೆಂದು ಅಪೇಕ್ಷಿಸುತ್ತಿದ್ದಾರೆ.

53. ಹಾಗೇನೂ ಅಲ್ಲ. ನಿಜವಾಗಿ ಅವರಿಗೆ ಪರಲೋಕದ ಭಯವಿಲ್ಲ.

54. ಹಾಗೇನೂ ಅಲ್ಲ. ಇದು ಖಂಡಿತ ಒಂದು ಉಪದೇಶವಾಗಿದೆ.

55. ಇಷ್ಟವುಳ್ಳವನು ಇದನ್ನು ನೆನಪಿಡಲಿ.

56. ಅಲ್ಲಾಹನು ಇಚ್ಛಿಸುವವನು ಮಾತ್ರ ಇದನ್ನು ನೆನಪಿಡುವನು. ಅವನು (ಅಲ್ಲಾಹನು) ಭಕ್ತಿಗೆ ಅರ್ಹನು ಹಾಗೂ ಕ್ಷಮಿಸುವವನಾಗಿದ್ದಾನೆ.