76. Al Insan

76. ಅಲ್ ಇನ್ಸಾನ್ (ಮಾನವ),

ವಚನಗಳು – 31, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಮನುಷ್ಯನು, ತಾನೊಂದು ಪ್ರಸ್ತಾಪ ಯೋಗ್ಯ ವಸ್ತುವೇ ಅಲ್ಲವಾಗಿದ್ದ ಕಾಲವೊಂದನ್ನು ಕಳೆದಿಲ್ಲವೇ?

2. ನಾವು ಮನುಷ್ಯನನ್ನು ಪರೀಕ್ಷಿಸಲಿಕ್ಕಾಗಿ, ಅವನನ್ನು ಮಿಶ್ರಿತ ವೀರ್ಯದಿಂದ ಸೃಷ್ಟಿಸಿರುವೆವು. ಮತ್ತು ನಾವು ಅವನನ್ನು ಕೇಳ ಬಲ್ಲವನಾಗಿಯೂ ನೋಡ ಬಲ್ಲವನಾಗಿಯೂ ಮಾಡಿರುವೆವು.

3. ನಾವೇ ಅವನಿಗೆ ದಾರಿಯನ್ನು ತೋರಿಸಿದೆವು. ಇನ್ನವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ.

4. ನಾವು ಧಿಕ್ಕಾರಿಗಳಿಗಾಗಿ ಸರಪಣಿಗಳನ್ನೂ ನೊಗಗಳನ್ನೂ ಭುಗಿಲೇಳುವ ಬೆಂಕಿಯನ್ನೂ ಸಿದ್ಧಪಡಿಸಿಟ್ಟಿರುವೆವು.

5. ಸಜ್ಜನರು (ಸ್ವರ್ಗದಲ್ಲಿ) ಪಾನ ಪಾತ್ರೆಯಿಂದ ಕರ್ಪೂರ ಮಿಶ್ರಿತ ಪಾನೀಯವೊಂದನ್ನು ಸೇವಿಸುತ್ತಿರುವರು.

6. ಆ ಚಿಲುಮೆಯಿಂದ ಅಲ್ಲಾಹನ ದಾಸರು ಕುಡಿಯುವರು ಮತ್ತು ಅದರಿಂದ ಹಲವು ಕಾಲುವೆಗಳನ್ನು ಹೊರಡಿಸುವರು.

7. (ಇಹಲೋಕದಲ್ಲಿ) ಅವರು, ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಮತ್ತು ಸರ್ವವ್ಯಾಪಿ ಸಂಕಟದ ದಿನವನ್ನು ಅಂಜುತ್ತಿರುತ್ತಾರೆ.

8. ಅವರು ಅವನ (ಅಲ್ಲಾಹನ) ಮೆಚ್ಚುಗೆಗಾಗಿ ನಿರ್ಗತಿಕರಿಗೆ, ಅನಾಥರಿಗೆ ಮತ್ತು ಕೈದಿಗಳಿಗೆ ಉಣ ಬಡಿಸುತ್ತಾರೆ.

9. (ಮತ್ತು ಅವರು ಹೇಳುತ್ತಾರೆ;) ‘‘ನಾವು ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ನಿಮಗೆ ಉಣಿಸುತ್ತಿದ್ದೇವೆ. ನಿಮ್ಮಿಂದ ನಾವು ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ’’.

10. ‘‘ನಮಗೆ ನಮ್ಮೊಡೆಯನ ಕಡೆಯಿಂದ ಬರಲಿರುವ ಕರಾಳ ಹಾಗೂ ಕಠೋರ (ಪುನರುತ್ಥಾನ) ದಿನದ ಭಯವಿದೆ’’.

11. ಅಲ್ಲಾಹನು ಅವರನ್ನು ಆ ದಿನದ ಹಾನಿಯಿಂದ ರಕ್ಷಿಸುವನು. ಮತ್ತು ಅವರಿಗೆ ಉಲ್ಲಾಸ ಹಾಗೂ ಸಂತೋಷವನ್ನು ನೀಡುವನು.

12. ಅವರ ಸಹನೆಯ ಫಲವಾಗಿ ಅವರಿಗೆ ಸ್ವರ್ಗ ಹಾಗೂ ರೇಶ್ಮೆಯ ಉಡುಗೆಯನ್ನು ದಯಪಾಲಿಸುವನು.

13. ಅಲ್ಲಿ ಅವರು ಆಸನಗಳ ಮೇಲೆ ದಿಂಬುಗಳಿಗೆ ಒರಗಿ ಕೊಂಡಿರುವರು. ಅಲ್ಲಿ ಅವರು ತೀಕ್ಷ್ಣ ಬಿಸಿಲನ್ನಾಗಲಿ ತೀವ್ರ ಚಳಿಯನ್ನಾಗಲೀ ಕಾಣಲಾರರು.

14. ಅದರ (ಸ್ವರ್ಗ ತೋಟದ) ನೆರಳು ಅವರನ್ನು ಆವರಿಸಿರುವುದು. ಅದರಲ್ಲಿನ ಹಣ್ಣಿನ ಗೊಂಚಲುಗಳು ಅವರಿಗೆ ಎಟುಕುತ್ತಿರುವವು.

15. ಬೆಳ್ಳಿಯ ಪಾತ್ರೆಗಳನ್ನೂ ಶುಭ್ರವಾದ ಗಾಜಿನ ಪಾನ ಪಾತ್ರೆಗಳನ್ನೂ ಅವರ ಸುತ್ತ ಒಯ್ಯಲಾಗುವುದು.

16. ಅದು ಕಲಾತ್ಮಕವಾಗಿ ಅಲಂಕರಿಸಿದ ಬೆಳ್ಳಿಯ ಗಾಜಾಗಿರುವುದು ಮತ್ತು ಅವುಗಳನ್ನು ತುಂಬುವವರು ಸರಿಯಾದ ಪ್ರಮಾಣದಲ್ಲಿ ತುಂಬಿರುವರು.

17. ಅಲ್ಲಿ ಅವರಿಗೆ ಶುಂಠಿಯ ಮಿಶ್ರಣವಿರುವ ಪಾನೀಯಗಳನ್ನು ಕುಡಿಸಲಾಗುವುದು.

18. ಅಲ್ಲಿ ಸಲ್ ಸಬೀಲ್ ಎಂಬ ಹೆಸರಿನ ಒಂದು ಚಿಲುಮೆ ಇರುವುದು.

19. ಸದಾ ಬಾಲಕರಾಗಿರುವವರು ಅಲ್ಲಿ ಸಂಚರಿಸುತ್ತಿರುವರು. ನೀವು ಅವರನ್ನು ಕಂಡರೆ, ಅವರು ಚದುರಿದ ಮುತ್ತುಗಳೆಂದು ಭಾವಿಸುವಿರಿ.

20. ಅಲ್ಲಿ ನೀವು ಎಲ್ಲಿ ನೋಡಿದರೂ ಧಾರಾಳ ಅನುಗ್ರಹಗಳನ್ನು ಮತ್ತು ಒಂದು ಬೃಹತ್ ಸಾಮ್ರಾಜ್ಯವನ್ನೇ ಕಾಣುವಿರಿ.

21. ಅವರ ಮೇಲುಡುಪು ನುಣ್ಣಗೆಯ ಹಸಿರು ರೇಷ್ಮೆ ಹಾಗೂ ಉಣ್ಣೆಯದ್ದಾಗಿರುವುದು ಮತ್ತು ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರ ಒಡೆಯನು ಅವರಿಗೆ ಒಂದು ನಿರ್ಮಲ ಪಾನೀಯವನ್ನು ಕುಡಿಸುವನು.

22. ‘‘ಇದು ನಿಮ್ಮ ಪ್ರತಿಫಲ. ನಿಮ್ಮ ಶ್ರಮವು ಸ್ವೀಕೃತವಾಗಿದೆ’’ (ಎಂದು ಅವರೊಡನೆ ಹೇಳಲಾಗುವುದು).

23. ದೂತರೇ, ನಾವು ಈ ಕುರ್‌ಆನನ್ನು ಹಂತ ಹಂತವಾಗಿ ನಿಮಗೆ ಇಳಿಸಿ ಕೊಟ್ಟಿರುವೆವು.

24. ನೀವು ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ ಮತ್ತು ಅವರ (ಧಿಕ್ಕಾರಿಗಳ) ಪೈಕಿ ಯಾವುದೇ ಪಾಪಿಯ ಅಥವಾ ಕೃತಘ್ನನ ಮಾತನ್ನು ಅನುಸರಿಸಬೇಡಿರಿ.

25. ಸಂಜೆ ಮತ್ತು ಮುಂಜಾನೆಯ ವೇಳೆ ನೀವು ನಿಮ್ಮ ಒಡೆಯನ ನಾಮ ಸ್ಮರಣೆ ಮಾಡಿರಿ.

26. ಮತ್ತು ಇರುಳಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಹಾಗೂ ಇರುಳಿನ ಧೀರ್ಘ ಭಾಗದಲ್ಲಿ ಅವನ ಪಾವಿತ್ರವನ್ನು ಜಪಿಸಿರಿ.

27. ಅವರು ಬೇಗನೆ ಸಿಗುವುದನ್ನು (ಇಹಲೋಕವನ್ನು) ಪ್ರೀತಿಸುತ್ತಾರೆ ಮತ್ತು ತಮ್ಮ ಮುಂದಿರುವ (ಲೋಕಾಂತ್ಯದ) ಮಹಾ ದಿನವನ್ನು ಕಡೆಗಣಿಸಿ ಬಿಡುತ್ತಾರೆ.

28. ನಾವೇ ಅವರನ್ನು ಸೃಷ್ಟಿಸಿರುವೆವು ಮತ್ತು ಅವರ ಶರೀರದ ಗಂಟುಗಳನ್ನು ಬಲ ಪಡಿಸಿರುವೆವು ಮತ್ತು ನಾವು ಬಯಸಿದರೆ ಅವರ ಬದಲಿಗೆ ಅವರಂತಹ ಇತರರನ್ನು ತರಬಲ್ಲೆವು.

29. ಇದೊಂದು ಉಪದೇಶವಾಗಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ.

30. ಅಲ್ಲಾಹನು ಇಚ್ಛಿಸುವ ತನಕ ನಿಮ್ಮ ಯಾವ ಇಚ್ಛೆಯೂ ನಡೆಯದು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುತ್ತಾನೆ.

31. ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹದೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗಾಗಿ ಅವನು ಕಠಿಣ ಶಿಕ್ಷೆಯನ್ನು ಸಿದ್ದವಾಗಿಟ್ಟಿದ್ದಾನೆ.