78. An Naba

78. ಅನ್ನಬಅ್ (ವಾರ್ತೆ)

ವಚನಗಳು – 40, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅವರು ಯಾವುದರ ಕುರಿತು ವಿಚಾರಿಸುತ್ತಿದ್ದಾರೆ?

2. ಆ ಮಹಾ ವಾರ್ತೆಯ ಕುರಿತೇ?

3. ಆ ವಿಷಯದಲ್ಲಿ ಅವರ ನಿಲುವುಗಳು ತೀರಾ ಭಿನ್ನವಾಗಿವೆ.

4. ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ.

5. ಮತ್ತೆ, ಹಾಗಲ್ಲ, ಅವರಿಗೆ ಬೇಗನೆ ತಿಳಿಯಲಿದೆ.

6. ಭೂಮಿಯನ್ನು ನಾವು ಹಾಸಿಗೆಯಾಗಿಸಿಲ್ಲವೇ?

7. ಮತ್ತು ಪರ್ವತಗಳನ್ನು ಮೊಳೆಗಳಾಗಿಸಿಲ್ಲವೇ?

8. ಮತ್ತು ನಾವು ನಿಮ್ಮನ್ನು ಜೋಡಿಗಳಾಗಿ ಸೃಷ್ಟಿಸಿರುವೆವು.

9. ಮತ್ತು ನಾವು ನಿಮ್ಮ ನಿದ್ರೆಯನ್ನು (ನಿಮ್ಮ ಪಾಲಿಗೆ) ವಿಶ್ರಾಂತಿಯಾಗಿಸಿರುವೆವು

10. ಮತ್ತು ನಾವು ರಾತ್ರಿಯನ್ನು ಮರೆಯಾಗಿಸಿರುವೆವು.

11. ಮತ್ತು ನಾವು ಹಗಲನ್ನು ಸಂಪಾದನೆಯ ಸಮಯವಾಗಿಸಿರುವೆವು.

12. ಮತ್ತು ನಿಮ್ಮ ಮೇಲೆ ಬಲಿಷ್ಠವಾದ ಏಳು ವಸ್ತು (ಆಕಾಶ)ಗಳನ್ನು ನಿರ್ಮಿಸಿರುವೆವು.

13. ಮತ್ತು ನಾವು ಸೂರ್ಯನನ್ನು ಒಂದು ಉಜ್ವಲ ಜ್ಯೋತಿಯಾಗಿಸಿರುವೆವು.

14. ಮತ್ತು ನಾವು ಮೋಡಗಳಿಂದ ಧಾರಾಕಾರ ನೀರನ್ನು ಸುರಿಸಿರುವೆವು.

15. ಆ ಮೂಲಕ ವಿವಿಧ ಬೆಳೆ ಹಾಗೂ ತರಕಾರಿಗಳನ್ನು ಬೆಳೆಸಲಿಕ್ಕಾಗಿ.

16. ಮತ್ತು ದಟ್ಟವಾದ ತೋಟಗಳನ್ನು ಬೆಳೆಸಲಿಕ್ಕಾಗಿ.

17. ತೀರ್ಪಿನ ದಿನವು ಈಗಾಗಲೇ ನಿಶ್ಚಿತವಾಗಿದೆ.

18. ಕಹಳೆಯನ್ನು ಊದುವ ದಿನ ನೀವು ದಂಡು ದಂಡುಗಳಾಗಿ ಬರುವಿರಿ.

19. ಆಕಾಶವನ್ನು ತೆರೆದು ಬಿಡಲಾಗುವುದು ಮತ್ತು ಅದರಲ್ಲಿ (ಎಲ್ಲೆಲ್ಲೂ) ಬಾಗಿಲುಗಳೇ ಇರುವವು.

20. ಮತ್ತು ಪರ್ವತಗಳನ್ನು ನಡೆಸಲಾಗುವುದು, ಅವು ಮರಳಿನಂತಾಗಿ ಬಿಡುವವು.

21. ಖಂಡಿತವಾಗಿಯೂ ನರಕವು ಹೊಂಚು ಹಾಕುತ್ತಿದೆ.

22. ಅದುವೇ ವಿದ್ರೋಹಿಗಳ ನೆಲೆಯಾಗುವುದು.

23. ಯುಗ ಯುಗಾಂತರ ಕಾಲ ಅವರು ಅದರಲ್ಲಿ ಬಿದ್ದು ಕೊಂಡಿರುವರು.

24. ಅಲ್ಲಿ ಅವರು ಯಾವುದೇ ತಂಪು ವಸ್ತುವಿನ ಅಥವಾ ಯಾವುದೇ ಪಾನೀಯದ ರುಚಿ ಕಾಣಲಾರರು.

25. ಅಲ್ಲಿ ಅವರಿಗೆ ಸಿಗುವುದು, ಕುದಿಯುವ ನೀರು ಮತ್ತು ಹರಿಯುವ ಕೀವು ಮಾತ್ರ.

26. ಇದು ಸೂಕ್ತ ಪ್ರತಿಫಲವಾಗಿದೆ.

27. ಅವರು (ಪರಲೋಕದ) ವಿಚಾರಣೆಯನ್ನು ನಿರೀಕ್ಷಿಸಿಯೇ ಇರಲಿಲ್ಲ.

28. ಅವರು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸುತ್ತಿದ್ದರು.

29. ನಾವು ಎಲ್ಲವನ್ನೂ ಬರೆದು ಭದ್ರವಾಗಿಟ್ಟಿರುವೆವು

30. ಇದೀಗ ಸವಿಯಿರಿ. ಇನ್ನು ನಿಮ್ಮ ಪಾಲಿಗೆ ಶಿಕ್ಷೆಯ ಹೊರತು ಬೇರೇನೂ ಹೆಚ್ಚದು.

31. ಧರ್ಮ ನಿಷ್ಠರಿಗೆ ಖಂಡಿತ ವಿಜಯ ಸಿಗಲಿದೆ.

32. ತೋಟಗಳು ಮತ್ತು ದ್ರಾಕ್ಷಿಗಳು,

33. ಮತ್ತು ಸಹ ವಯಸ್ಕ ಯುವತಿಯರು,

34. ತುಂಬಿ ತುಳುಕುವ ಪಾನ ಪಾತ್ರೆಗಳು (ಅವರಿಗಾಗಿ ಕಾದಿವೆ).

35. ಅಲ್ಲಿ ಅವರು ಯಾವುದೇ ಅಸಭ್ಯ ಮಾತನ್ನಾಗಲೀ ಸುಳ್ಳನ್ನಾಗಲೀ ಕೇಳಲಾರರು.

36. ಇದು ಸತ್ಫಲವಾಗಿದೆ, ನಿಮ್ಮ ಒಡೆಯನ ಕಡೆಯಿಂದ. (ಅಲ್ಲದೆ ನಿಮಗಾಗಿ) ಧಾರಾಳ ಉಡುಗೊರೆಗಳಿವೆ.

37. ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು, ಅವನು ಪರಮ ದಯಾಮಯನು. ಅವನೊಡನೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ.

38. ರೂಹ್ (ಜಿಬ್‌ರೀಲ್) ಮತ್ತು ಇತರ ಮಲಕ್‌ಗಳು ಸಾಲಾಗಿ ನಿಲ್ಲುವ ಆ ದಿನ, ಆ ಪರಮ ದಯಾಮಯನ ಅಪ್ಪಣೆ ಪಡೆದವರು ಹಾಗೂ ಸರಿಯಾದುದನ್ನು ಹೇಳುವವರ ಹೊರತು ಯಾರಿಗೂ ಮಾತನಾಡಲು ಸಾಧ್ಯವಾಗದು.

39. ಆ ದಿನವು ನಿಜಕ್ಕೂ ಬರಲಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಬಳಿ ಆಶ್ರಯವನ್ನು ಪಡೆದು ಕೊಳ್ಳಲಿ.

40. ನಾನಂತೂ ನಿಮ್ಮನ್ನು, ಶೀಘ್ರವೇ ಬರಲಿರುವ ಶಿಕ್ಷೆಯ ಕುರಿತು ಎಚ್ಚರಿಸುತ್ತಿರುವೆನು. ಅಂದು ಪ್ರತಿಯೊಬ್ಬನೂ ತನ್ನ ಕೈಗಳು ಮುಂದೆ ಕಳಿಸಿರುವುದನ್ನು (ಕರ್ಮವನ್ನು) ಕಾಣುವನು ಮತ್ತು ಧಿಕ್ಕಾರಿಯು, ‘‘ಅಯ್ಯೋ, ನಾನು ಮಣ್ಣಾಗಿದ್ದರೆ ಚೆನ್ನಾಗಿತ್ತು’’ ಎನ್ನುವನು.