80. ಅಬಸ (ಅವರು ಅತೃಪ್ತರಾದರು)
ವಚನಗಳು – 42,
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ
1. ಅವರು (ದೂತರು) ಅತೃಪ್ತರಾದರು ಮತ್ತು ಮುಖ ತಿರುಗಿಸಿಕೊಂಡರು –
2. – ತಮ್ಮ ಬಳಿಗೆ ಕುರುಡನೊಬ್ಬನು ಬಂದನೆಂದು.
3. (ದೂತರೇ,) ನಿಮಗೇನು ಗೊತ್ತು – ಅವನು ಸಂಸ್ಕಾರವಂತನಾಗಲೂ ಬಹುದು.
4. ಅಥವಾ ಉಪದೇಶದ ಕುರಿತು ಅವನು ಚಿಂತಿಸ ಬಹುದು ಮತ್ತು ಅವನಿಗೆ
ಉಪದೇಶದಿಂದ ಲಾಭವಾಗ ಬಹುದು.
5. (ನಿಮ್ಮನ್ನು) ಕಡೆಗಣಿಸುವವನು-
6. ಅವನೆಡೆಗೆ ನೀವು ಗಮನ ಹರಿಸುತ್ತೀರಿ.
7. ಅವನು ಸುಧಾರಿಸದಿದ್ದರೆ ನಿಮ್ಮ ಮೇಲೆ ದೋಷವೇನಿಲ್ಲ.
8. ಆದರೆ ನಿಮ್ಮೆಡೆಗೆ ಧಾವಿಸಿ ಬಂದ ವ್ಯಕ್ತಿ-
9. ಅವನು ಭಯಭಕ್ತಿ ಉಳ್ಳವನು
10. ನೀವು ಅವನನ್ನು ನಿರ್ಲಕ್ಷಿಸುತ್ತೀರಿ.
11. ಹಾಗಲ್ಲ, ಇದು (ಕುರ್‌ಆನ್) ಒಂದು ಉಪದೇಶವಾಗಿದೆ.
12. ಇಷ್ಟ ಉಳ್ಳವನು ಇದರಿಂದ ಉಪದೇಶ ಪಡೆಯಲಿ.
13. ಇದು ಗೌರವಾರ್ಹ ಹಾಳೆಗಳಲ್ಲಿ ಲಿಖಿತವಾಗಿದೆ.
14. ಉನ್ನತ ಸ್ಥಾನದಲ್ಲಿದ್ದು, ಪಾವನವಾಗಿದೆ.
15. ಅದು ಬರೆಯುವವರ ಕೈಯಲ್ಲಿದೆ.
16. ಅವರು ಗೌರವಾನ್ವಿತರು ಮತ್ತು ಶ್ರೇಷ್ಠರು.
17. ಮಾನವನಿಗೆ ಛೀಮಾರಿ. ಅವನು ಅದೆಷ್ಟು ಕೃತಘ್ನನು!
18. ಅವನನ್ನು ಸೃಷ್ಟಿಸಲಾಗಿರುವುದು ಯಾವುದರಿಂದ?
19. ವೀರ್ಯದಿಂದ. ಅವನು (ಅಲ್ಲಾಹನು) ಆತನನ್ನು ಸೃಷ್ಟಿಸಿದನು ಹಾಗೂ ಆತನ ವಿಧಿಯನ್ನು ನಿಶ್ಚಯಿಸಿದನು.
20. ಆ ಬಳಿಕ ಅವನಿಗೆ ಬದುಕಿನ ದಾರಿಯನ್ನು ಸುಗಮಗೊಳಿಸಿದನು.
21. ಆ ಬಳಿಕ ಅವನನ್ನು ಸಾಯಿಸಿ ಅವನನ್ನು ಗೋರಿಗೆ ತಲುಪಿಸಿದನು.
22. ಆ ಬಳಿಕ ಅವನು, ತಾನಿಚ್ಛಿಸಿದಾಗ ಅವನನ್ನು ಪುನಃ ಜೀವಂತಗೊಳಿಸುವನು.
23. ಹಾಗಲ್ಲ, ಅವನು (ಮಾನವನು) ತನಗೆ ನೀಡಲಾದ ಆದೇಶವನ್ನು ಪಾಲಿಸಲಿಲ್ಲ.
24. ಮನುಷ್ಯನು ತನ್ನ ಆಹಾರದ ಕಡೆಗೊಮ್ಮೆ ನೋಡಲಿ.
25. ನೀರು ಸುರಿಸಿದವರು ನಾವು.
26. ಭೂಮಿಯನ್ನು ಸೀಳಿದವರು ನಾವು.
27. ಅದರಲ್ಲಿ ಬೆಳೆಗಳನ್ನು ಬೆಳೆದವರು ನಾವು.
28. ದ್ರಾಕ್ಷಿಗಳು ಹಾಗೂ ತರಕಾರಿಗಳು.
29. ಝೈತೂನ್ ಹಾಗೂ ಖರ್ಜೂರಗಳು.
30. ದಟ್ಟವಾದ ತೋಟಗಳು.
31. ಹಣ್ಣುಗಳು ಹಾಗೂ ಮೇವು.
32. ನಿಮಗಾಗಿ ಹಾಗೂ ನಿಮ್ಮ ಜಾನುವಾರುಗಳಿಗಾಗಿ ಇದನ್ನೆಲ್ಲಾ ಮಾಡಲಾಯಿತು.
33. ಕೊನೆಗೆ ಪುನರುತ್ಥಾನದ ಕೋಲಾಹಲವು ಮೊಳಗಿದಾಗ.
34. ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು.
35. ತನ್ನ ತಂದೆಯಿಂದಲೂ ತಾಯಿಯಿಂದಲೂ.
36. ಪತ್ನಿಯಿಂದಲೂ ಪುತ್ರರಿಂದಲೂ (ದೂರ ಓಡುವನು)
37. ಅಂದು ಪ್ರತಿಯೊಬ್ಬನೂ ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು.
38. ಅಂದು ಕೆಲವು ಮುಖಗಳು ಉಜ್ವಲವಾಗಿರುವವು
39. ನಗುತ್ತಾ ಸಂಭ್ರಮಿಸುತ್ತಿರುವವು.
40. ಮತ್ತೆ ಕೆಲವು ಮುಖಗಳ ಮೇಲೆ ಅಂದು ಧೂಳು ತುಂಬಿರುವುದು.
41. (ಮತ್ತು ) ಕರಾಳತೆ ಕವಿದಿರುವುದು.
42. ಅವರು ಧಿಕ್ಕಾರಿ ದುಷ್ಕರ್ಮಿಗಳಾಗಿರುವರು.