81. ಅತ್ತಕ್ವೀರ್ (ಮಕ್ಕಃ)
ವಚನಗಳು – 29
ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ
1. ಸೂರ್ಯನನ್ನು ಮಡಚಿ ಬಿಡಲಾದಾಗ
2. ನಕ್ಷತ್ರಗಳು ನಿಸ್ತೇಜವಾದಾಗ
3. ಪರ್ವತಗಳನ್ನು ಚಲಾಯಿಸಲಾದಾಗ
4. ತುಂಬು ಗರ್ಭಿಣಿಯಾಗಿರುವ ಒಂಟೆಗಳನ್ನು ಬಿಟ್ಟು ಬಿಡಲಾದಾಗ
5. ಕಾಡು ಪ್ರಾಣಿಗಳನ್ನೆಲ್ಲಾ ಒಟ್ಟು ಸೇರಿಸಲಾದಾಗ
6. ಸಮುದ್ರಗಳನ್ನು ಉಕ್ಕೇರಿಸಲಾದಾಗ
7. ಜೀವಗಳನ್ನು (ಶರೀರಗಳೊಂದಿಗೆ) ಜೋಡಿಸಲಾದಾಗ
8. ಜೀವಂತ ಹೂಳಲ್ಪಟ್ಟವಳೊಡನೆ ಪ್ರಶ್ನಿಸಲಾದಾಗ –
9. ಯಾವ ಪಾಪಕ್ಕಾಗಿ ಆಕೆಯನ್ನು ಕೊಲ್ಲಲಾಯಿತೆಂದು.
10. ಕರ್ಮ ಪತ್ರಗಳನ್ನು ತೆರೆಯಲಾದಾಗ
11. ಮತ್ತು ಆಕಾಶದ ಕವಚವನ್ನು ಸರಿಸಲಾದಾಗ
12. ನರಕದ ಅಗ್ನಿಯನ್ನು ಭುಗಿಲೆಬ್ಬಿಸಲಾದಾಗ
13. ಸ್ವರ್ಗವನ್ನು ಹತ್ತಿರ ತರಲಾದಾಗ
14. ಪ್ರತಿಯೊಬ್ಬನಿಗೂ ತಿಳಿದು ಬಿಡುವುದು ತಾನೇನು ತಂದಿರುವೆನೆಂದು.
15. ಹಾಗಲ್ಲ – ನಾನು, ಹಿನ್ನಡೆಯುವ ನಕ್ಷತ್ರಗಳ ಆಣೆ ಹಾಕುತ್ತೇನೆ.
16. ಅವು ಸಂಚರಿಸುತ್ತವೆ ಮತ್ತು ಕಣ್ಮರೆಯಾಗುತ್ತವೆ.
17. ಮತ್ತು ಇರುಳು ಕಣ್ಮರೆಯಾಗುವ ಹೊತ್ತಿನ ಆಣೆ
18. ಮತ್ತು ಮುಂಜಾವು ಉಸಿರಾಡ ತೊಡಗುವಾಗಿನಾಣೆ.
19. ಇದು (ಕುರ್ಆನ್) ಗೌರವಾನ್ವಿತ ದೂತನೊಬ್ಬನು ತಲುಪಿಸಿರುವ ಸಂದೇಶವಾಗಿದೆ.
20. ಅವನು ತುಂಬಾ ಬಲಿಷ್ಠನೂ ವಿಶ್ವ ಸಿಂಹಾಸನದ ಒಡೆಯನ ಬಳಿ ಉನ್ನತ ಸ್ಥಾನ ಉಳ್ಳವನೂ ಆಗಿದ್ದಾನೆ.
21. ಅವನು ಅನುಸರಣೀಯನೂ ವಿಶ್ವಾಸಾರ್ಹನೂ ಆಗಿರುತ್ತಾನೆ.
22. ನಿಮ್ಮ ಸಂಗಾತಿ (ದೂತರು) ಹುಚ್ಚರೇನಲ್ಲ.
23. ಅವರು ತೆರೆದ ಬಾನಿನಂಚಿನಲ್ಲಿ ಆತನನ್ನು (ಜಿಬ್ರೀಲ್ರನ್ನು) ಕಂಡರು.
24. ಅವರು ಅಜ್ಞಾತ ಲೋಕದ ಮಾಹಿತಿಗಳನ್ನು ತಲುಪಿಸುವುದರಲ್ಲಿ ಜಿಪುಣರಲ್ಲ.
25. ಇದು (ಕುರ್ಆನ್) ಶಪಿತ ಶೈತಾನನ ವಚನವಲ್ಲ.
26. ನೀವು ಅದೆಲ್ಲಿ ಅಲೆಯುತ್ತಿರುವಿರಿ.
27. ಇದು ಸರ್ವ ಲೋಕಕ್ಕಾಗಿರುವ ಉಪದೇಶವಾಗಿರುತ್ತದೆ.
28. ನಿಮ್ಮ ಪೈಕಿ ಇಷ್ಟ ಉಳ್ಳವನು ನೇರ ಮಾರ್ಗವನ್ನು ಹಿಡಿಯಲಿ.
29. ನಿಮ್ಮ ಇಚ್ಛೆಯಿಂದ ಏನೂ ಆಗುವುದಿಲ್ಲ – ಸರ್ವಲೋಕಗಳ ಒಡೆಯನಾದ ಅಲ್ಲಾಹನು ಇಚ್ಛಿಸುವ ತನಕ.