82. Al Infitar

82. ಅಲ್ ಇನ್ಫಿತಾರ್ (ಬಿರಿದು ಬೀಳು)

ವಚನಗಳು – 19 (ಮಕ್ಕಃ)

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಆಕಾಶವು ಬಿರಿದು ಬೀಳುವಾಗ.

2. ಮತ್ತು ನಕ್ಷತ್ರಗಳು ಉದುರುವಾಗ.

3. ಸಮುದ್ರಗಳು ವಿಲೀನವಾದಾಗ.

4. ಗೋರಿಗಳನ್ನು ಬಿಚ್ಚಲಾದಾಗ.

5. ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ ಕಳಿಸಿದ್ದನ್ನು ಮತ್ತು ಹಿಂದೆ ಬಿಟ್ಟು ಬಂದುದನ್ನು.

6. ಮಾನವನೇ, ಆ ನಿನ್ನ ಉದಾರಿ ಒಡೆಯನ ವಿಷಯದಲ್ಲಿ ನಿನ್ನನ್ನು ಮೋಸಗೊಳಿಸಿದ ವಸ್ತು ಯಾವುದು?

7. ಅವನೇ ನಿನ್ನನ್ನು ಸೃಷ್ಟಿಸಿದನು (ನಿನ್ನ ಅಂಗಾಂಗಗಳನ್ನು) ಸರಿಪಡಿಸಿದನು, ಸಂತುಲಿತವಾಗಿ ನಿನ್ನನ್ನು ರಚಿಸಿದನು.

8. ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.

9. ಹಾಗಲ್ಲ – ನಿಜವಾಗಿ, ನೀವು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತೀರಿ.

10. ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿದ್ದಾರೆ.

11. (ನಿಮ್ಮ ಕರ್ಮಗಳನ್ನು) ಬರೆದಿಡುವ ಗೌರವಾನ್ವಿತರು.

12. ನೀವು ಮಾಡುವುದನ್ನೆಲ್ಲಾ ಅವರು ಬಲ್ಲರು.

13. ಸಜ್ಜನರು ಸ್ವರ್ಗದಲ್ಲಿ ಖಂಡಿತ ಐಶಾರಾಮದಲ್ಲಿರುವರು.

14. ದುಷ್ಟರು ನರಕಾಗ್ನಿಯಲ್ಲಿರುವರು.

15. ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಶಿಸುವರು.

16. ಅದರಿಂದ ಅವಿತಿರಲು ಅವರಿಗೆ ಸಾಧ್ಯವಾಗದು.

17. ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು ?

18. ಹೌದು – ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು ?

19. ಅಂದು ಯಾರಿಂದಲೂ ಯಾರಿಗೂ ಕಿಂಚಿತ್ತೂ ಪ್ರಯೋಜನವಾಗದು. ಅಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹನದ್ದಾಗಿರುವುದು.