86. At Tariq

86. ಅತ್ವಾರಿಕ್ (ಮಿನುಗು ತಾರೆ)

ವಚನಗಳು – 17, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ

2. ‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು?

3. ಅದು ಮಿನುಗುವ ತಾರೆ.

4. ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ.

5. ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ.

6. ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ.

7. ಅದು ಬೆನ್ನು ಹಾಗೂ ಎದೆಯ ಮಧ್ಯದಿಂದ ಹೊರಡುತ್ತದೆ.

8. ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ.

9. ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ.

10. ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು.

11. ಮಳೆ ಸುರಿಸುವ ಆಕಾಶದಾಣೆ.

12. ಬಿರಿಯುವ ಭೂಮಿಯಾಣೆ.

13. ಇದು ನಿರ್ಣಾಯಕ ಸಂದೇಶ.

14. ಇದು ತಮಾಷೆಯಲ್ಲ.

15. ಅವರು ಸಂಚುಗಳನ್ನು ಹೂಡುತ್ತಿದ್ದಾರೆ.

16. ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ.

17. ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ.