88. Al Ghashiyah

88. ಅಲ್ಗಾಶಿಯ (ಆವರಿಸುವ ವಸ್ತು)

ವಚನಗಳು – 26, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಎಲ್ಲವನ್ನೂ ಆವರಿಸುವ (ಲೋಕಾಂತ್ಯ) ದಿನದ ವಾರ್ತೆಯು ನಿಮಗೆ ತಲುಪಿದೆಯೇ?

2. ಅಂದು ಕೆಲವು ಮುಖಗಳು ಭೀತವಾಗಿರುವವು.

3. ತೀವ್ರವಾಗಿ ದಣಿದು ಸೋತಿರುವವು.

4. ಅವರು ಉರಿಯುವ ಬೆಂಕಿಯನ್ನು ಸೇರುವರು.

5. ಕುದಿಯುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.

6. ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ ಸಿಗದು.

7. ಅದರಿಂದ ಅವರಿಗೆ ಪುಷ್ಟತೆಯೂ ಸಿಗದು ಮತ್ತು ಅವರ ಹಸಿವೂ ನೀಗದು.

8. ಕೆಲವು ಮುಖಗಳು ಅಂದು ಸಂಭ್ರಮಿಸುತ್ತಿರುವವು.

9. ತಮ್ಮ ಗಳಿಕೆಯಿಂದ ಅವರು ಸಂತೃಪ್ತರಾಗಿರುವರು.

10. ಅವರು ಉನ್ನತವಾದ ತೋಟಗಳಲ್ಲಿರುವರು.

11. ವ್ಯರ್ಥವಾದ ಯಾವುದನ್ನೂ ಅವರು ಅಲ್ಲಿ ಕೇಳಲಾರರು.

12. ಅಲ್ಲಿ ಚಿಲುಮೆಗಳು ಹರಿಯುತ್ತಿರುವವು.

13. ಅಲ್ಲಿ ಎತ್ತರದಲ್ಲಿ ಹಾಸಿರುವ ಪೀಠಗಳಿರುವವು.

14. ಸಾಲಾಗಿಟ್ಟ ಪಾನ ಪಾತ್ರೆಗಳಿರುವವು.

15. ಸಾಲುಸಾಲಾಗಿ ದಿಂಬುಗಳಿರುವವು.

16. ಮತ್ತು ನುಣುಪಾದ ಹಾಸುಗಳು ಇರುವವು.

17. ಅವರು ಹೆಣ್ಣೊಂಟೆಯತ್ತ ನೋಡುವುದಿಲ್ಲವೇ – ಅವುಗಳನ್ನು ಯಾವ ರೀತಿ ಸೃಷ್ಟಿಸಲಾಗಿದೆ ಎಂದು?

18. ಮತ್ತು ಆಕಾಶದೆಡೆಗೆ, (ನೋಡುವುದಿಲ್ಲವೇ,) ಅದನ್ನು ಯಾವ ರೀತಿ ಎತ್ತರಿಸಲಾಗಿದೆ ಎಂದು?.

19. ಮತ್ತು ಪರ್ವತಗಳೆಡೆಗೆ, (ನೋಡುವುದಿಲ್ಲವೇ) ಅವುಗಳನ್ನು ಯಾವ ರೀತಿ ನೆಡಲಾಗಿದೆ ಎಂದು?

20. ಮತ್ತು ಭೂಮಿಯೆಡೆಗೆ, (ನೋಡುವುದಿಲ್ಲವೇ) ಅದನ್ನು ಯಾವ ರೀತಿ ಹಾಸಲಾಗಿದೆ ಎಂದು?

21. (ದೂತರೇ,) ನೀವು ಬೋಧಿಸಿರಿ, ಏಕೆಂದರೆ ನೀವು ಬೋಧಕರೇ ಆಗಿದ್ದೀರಿ.

22. ನೀವು ಅವರ ಕಾವಲುಗಾರರೇನಲ್ಲ.

23. ಇನ್ನು ಕಡೆಗಣಿಸಿದವನ ಮತ್ತು ಧಿಕ್ಕರಿಸಿದವನ ವಿಚಾರ –

24. ಅಲ್ಲಾಹನು ಅವನನ್ನು ದೊಡ್ಡ ಶಿಕ್ಷೆಗೆ ಗುರಿಪಡಿಸುವನು.

25. ಅವರು ಖಂಡಿತ ನಮ್ಮೆಡೆಗೇ ಮರಳಿ ಬರಬೇಕಾಗಿದೆ.

26. ಮತ್ತು ಅವರ ವಿಚಾರಣೆಯ ಹೊಣೆಯು ನಮ್ಮ ಮೇಲಿದೆ.