19. Maryam

19. ಮರ್ಯಮ್

ವಚನಗಳು – 98, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಕಾಫ್ ಹಾ ಯಾ ಐನ್ ಸ್ವಾದ್.

2. ಇದು ನಿಮ್ಮ ಒಡೆಯನು, ತನ್ನ ದಾಸ ಝಕರಿಯ್ಯರ ಮೇಲೆ ತೋರಿದ ಅನುಗ್ರಹದ ಪ್ರಸ್ತಾಪ.

3. ಅವರು ಮೆಲುದನಿಯಲ್ಲಿ ತಮ್ಮ ಒಡೆಯನಿಗೆ ಮೊರೆ ಇಟ್ಟರು.

4. ಅವರು ಹೇಳಿದರು; ನನ್ನೊಡೆಯಾ, ನನ್ನ ಮೂಳೆಗಳೆಲ್ಲಾ ಟೊಳ್ಳಾಗಿವೆ. ವೃದ್ಧಾಪ್ಯದಿಂದಾಗಿ ನನ್ನ ತಲೆಯೆಲ್ಲಾ ಹಣ್ಣಾಗಿದೆ. (ಆದರೂ) ನನ್ನೊಡೆಯಾ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ನಿರಾಶನಾಗಿಲ್ಲ.

5. ನನ್ನ ಬಳಿಕ ನನ್ನ ಬಂಧುಗಳ ಕುರಿತು ನನಗೆ ಆಶಂಕೆ ಇದೆ. ನನ್ನ ಪತ್ನಿ ಬಂಜೆ. ನೀನು ನಿನ್ನ ಕಡೆಯಿಂದ ನನಗೆ ಒಬ್ಬ ಉತ್ತರಾಧಿಕಾರಿಯನ್ನು ನೀಡು.

6. ಅವನು ನನ್ನ ಉತ್ತರಾಧಿಕಾರಿಯೂ ಯಾಕೂಬರ ಸಂತತಿಯ ಉತ್ತರಾಧಿಕಾರಿಯೂ ಆಗಿರಬೇಕು ಮತ್ತು ನನ್ನೊಡೆಯಾ, ಅವನನ್ನು ನೀನು ನಿನ್ನ ಪ್ರೀತಿ ಪಾತ್ರನಾಗಿ ಮಾಡು.

7. (ಅಲ್ಲಾಹನು ಹೇಳಿದನು;) ಓ ಝಕರಿಯ್ಯ! ಇದೋ ನಾವು ನಿಮಗೆ ಒಬ್ಬ ಪುತ್ರನ ಶುಭವಾರ್ತೆ ನೀಡುತ್ತೇವೆ. ಆತನ ಹೆಸರು ಯಹ್ಯಾ ಎಂದಾಗಿರುವುದು. ನಾವು ಈ ಹಿಂದೆ ಯಾರಿಗೂ ಅಂತಹ ಹೆಸರಿಟ್ಟಿಲ್ಲ.

8. ಅವರು ಹೇಳಿದರು; ನನಗೆ ಪುತ್ರನಾಗುವುದಾದರೂ ಹೇಗೆ? ನನ್ನ ಪತ್ನಿ ಬಂಜೆಯಾಗಿದ್ದಾಳೆ ಮತ್ತು ನಾನು ವೃದ್ಧಾಪ್ಯದ ಕೊನೆಯ ಹಂತದಲ್ಲಿದ್ದೇನೆ.

9. ಅವನು (ಅಲ್ಲಾಹನು) ಹೇಳಿದನು; ಹಾಗೆಯೇ ಆಗುವುದು. ಹಾಗೆಂದು ನಿನ್ನ ಒಡೆಯನೇ ಹೇಳುತ್ತಿದ್ದಾನೆ. ಇದು ನನ್ನ ಪಾಲಿಗೆ ಸುಲಭ. ಈ ಹಿಂದೆ ನೀನು ಏನೂ ಅಲ್ಲದೆ ಇದ್ದಾಗ ನಾನು ನಿನ್ನನ್ನು ಸೃಷ್ಟಿಸಿರುವೆನು.

10. ಅವರು ಹೇಳಿದರು; ನನ್ನೊಡೆಯಾ, ನನಗೊಂದು ಸೂಚನೆಯನ್ನು ಒದಗಿಸು. ಅವನು ಹೇಳಿದನು; (ಮುಂದಿನ) ಮೂರು ರಾತ್ರಿಗಳ ಮಟ್ಟಿಗೆ, ನೀನು ಆರೋಗ್ಯವಂತನಾಗಿದ್ದರೂ, ಜನರೊಡನೆ ಮಾತನಾಡಲು ನಿನಗೆ ಸಾಧ್ಯವಾಗದು. ಅದುವೇ ನಿನಗಿರುವ ಸೂಚನೆ.

11. ಕೊನೆಗೆ ಅವರು ಪೂಜೆಯ ಸ್ಥಳದಿಂದ ಹೊರಟು ತಮ್ಮ ಜನಾಂಗದವರ ಬಳಿಗೆ ಬಂದು, ಮುಂಜಾನೆಯೂ ಸಂಜೆಯೂ ಅವನ (ಅಲ್ಲಾಹನ) ಗುಣಗಾನ ಮಾಡಿರಿ ಎಂದು ಅವರಿಗೆ ಸೂಚಿಸಿದರು.

12. ಓ ಯಹ್ಯಾ! ಗ್ರಂಥವನ್ನು ಬಲವಾಗಿ ಹಿಡಿಯಿರಿ (ಎಂದು ಯಹ್ಯಾರಿಗೆ ಆದೇಶಿಸಲಾಯಿತು.) ಮತ್ತು ನಾವು ಬಾಲ್ಯದಲ್ಲೇ ಅವರಿಗೆ ತೀರ್ಮಾನದ ಸಾಮರ್ಥ್ಯವನ್ನು ನೀಡಿದ್ದೆವು.

13. ಹಾಗೆಯೇ ನಾವು ನಮ್ಮ ಕಡೆಯಿಂದ ಅವರಿಗೆ ಸ್ಪಂದಿಸುವ ಮನಸ್ಸನ್ನೂ, ಪಾವಿತ್ರವನ್ನೂ ನೀಡಿದ್ದೆವು. ಮತ್ತು ಅವರು ತುಂಬಾ ಭಕ್ತಿಭಾವ ಉಳ್ಳವರಾಗಿದ್ದರು.

14. ಅವರು ತಮ್ಮ ಹೆತ್ತವರಿಗೆ ವಿಧೇಯರಾಗಿದ್ದರು. ದರ್ಪ ತೋರುವವನಾಗಲಿ. ಅವಿಧೇಯನಾಗಲಿ ಆಗಿರಲಿಲ್ಲ.

 15. ಅವರಿಗೆ ಶಾಂತಿ ಸಿಗಲಿ – ಅವರು ಹುಟ್ಟಿದ ದಿನ, ಅವರು ಸಾಯುವ ದಿನ ಮತ್ತು ಅವರನ್ನು ಮತ್ತೆ ಜೀವಂತಗೊಳಿಸಿ ಎಬ್ಬಿಸಲಾಗುವ ದಿನ.

16. ಮತ್ತು ನೀವು ಈ ಗ್ರಂಥದಲ್ಲಿ ಮರ್ಯಮ್‌ರನ್ನು ಪ್ರಸ್ತಾಪಿಸಿರಿ – ಆಕೆ ತನ್ನ ಮನೆಯವರಿಂದ ಬೇರ್ಪಟ್ಟು, ಪೂರ್ವ ದಿಕ್ಕಿಗಿದ್ದ ಸ್ಥಳವೊಂದರಲ್ಲಿ ತಂಗಿದ್ದರು.

 17. ಆಕೆ ತನ್ನನ್ನು ಅವರಿಂದ ಮರೆಯಾಗಿಟ್ಟಿದ್ದರು. ನಾವು ಆಕೆಯ ಬಳಿಗೆ ನಮ್ಮ ಒಬ್ಬ ರೂಹ್ ಅನ್ನು (ವಿಶೇಷ ಮಲಕ್‌ಅನ್ನು) ಕಳಿಸಿದೆವು. ಅವನು ಒಬ್ಬ ಪರಿಪೂರ್ಣ ಮಾನವನ ರೂಪದಲ್ಲಿ ಆಕೆಯ ಮುಂದೆ ಕಾಣಿಸಿಕೊಂಡನು.

  18. ಆಕೆ ಹೇಳಿದರು; ನೀನು ಭಯಭಕ್ತಿ ಉಳ್ಳವನಾಗಿದ್ದರೆ, ನಾನು ನಿನ್ನ ವಿರುದ್ಧ ಪರಮ ದಯಾಳುವಿನ ರಕ್ಷಣೆ ಕೋರುತ್ತೇನೆ.

19. ಅವನು ಹೇಳಿದನು; ನಾನು ನಿನ್ನ ಒಡೆಯನ ದೂತ. ಮತ್ತು ನಾನು ನಿನಗೆ ಒಬ್ಬ ಪಾವನ ಪುತ್ರನನ್ನು ನೀಡಲು ಬಂದಿದ್ದೇನೆ.

20. ಆಕೆ ಹೇಳಿದರು; ನನಗೆ ಪುತ್ರನಾಗುವುದಾದರೂ ಹೇಗೆ? ನನ್ನನ್ನು ಯಾವ ಮನುಷ್ಯನೂ ಮುಟ್ಟಿದ್ದಿಲ್ಲ ಮತ್ತು ನಾನು ಅನಾಚಾರ ಎಸಗುವವಳೂ ಅಲ್ಲ.

21. ಅವನು ಹೇಳಿದನು; ಹಾಗೆಯೇ ಆಗುವುದು. ಇದು ನನಗೆ ತೀರಾ ಸುಲಭವೆಂದು ಹಾಗೂ ನಾವು ಆತನನ್ನು ಮಾನವರ ಪಾಲಿಗೆ ಪುರಾವೆಯಾಗಿಸುವೆವು ಮತ್ತು ನನ್ನ ಕಡೆಯಿಂದ ಬಂದ ಅನುಗ್ರಹವಾಗಿಸುವೆವು ಎಂದು ನಿನ್ನ ಒಡೆಯನೇ ಹೇಳುತ್ತಾನೆ. ಇದೊಂದು ಪೂರ್ವ ನಿಶ್ಚಿತ ತೀರ್ಮಾನವಾಗಿದೆ.

22. ಮುಂದೆ ಆಕೆ ಗರ್ಭಿಣಿಯಾದರು. ಆಕೆ ಅದನ್ನು ಹೊತ್ತು ದೂರದ ಒಂದೆಡೆಗೆ ಹೋದರು.

23. ಹೆರಿಗೆಯ ನೋವು ಆಕೆಯನ್ನು ಖರ್ಜೂರ ಗಿಡದ ಬುಡದೆಡೆಗೆ ಕೊಂಡೊಯ್ಯಿತು. ಆಕೆ ಹೇಳಿದರು; ನಾನು ಇದಕ್ಕೆ ಮುನ್ನವೇ ಸತ್ತಿದ್ದರೆ ಅಥವಾ ಸಂಪೂರ್ಣ ಮರೆಯಲ್ಪಟ್ಟವಳಾಗಿದ್ದರೆ ಎಷ್ಟು ಚೆನ್ನಾಗಿತ್ತು!

24. ಕೊನೆಗೆ ಅವನು (ಮಲಕ್) ಅದರ (ಖರ್ಜೂರ ಗಿಡದ) ಒಳಗಿಂದ ಆಕೆಯನ್ನು ಕರೆದು ಹೇಳಿದನು; ನೀನು ದುಃಖಿಸಬೇಡ. ನಿನ್ನ ಒಡೆಯನು ನಿನ್ನ ಕಾಲ ತಳದಲ್ಲಿ ಒಂದು ಚಿಲುಮೆಯನ್ನು ಹೊರಡಿಸಿರುವನು.

25. ನೀನು ಖರ್ಜೂರದ ಕಾಂಡವನ್ನು ನಿನ್ನೆಡೆಗೆ ಎಳೆ. ಖರ್ಜೂರದ ತಾಜಾ ಹಣ್ಣುಗಳು ನಿನ್ನ ಮೇಲೆ ಉದುರಿ ಬೀಳುವವು.

26. ನೀನು ತಿನ್ನು, ಕುಡಿ ಮತ್ತು ನಿನ್ನ ಕಣ್ಣುಗಳನ್ನು ತಣಿಸಿಕೋ. ಇನ್ನು ನೀನು ಯಾರಾದರೊಬ್ಬ ವ್ಯಕ್ತಿಯನ್ನು ಕಂಡರೆ, ನಾನು ಆ ಪರಮ ದಯಾಮಯನಿಗಾಗಿ ಉಪವಾಸ ಆಚರಿಸುವ ಹರಕೆ ಹೊತ್ತಿದ್ದೇನೆ. ಇಂದು ನಾನು ಯಾವ ವ್ಯಕ್ತಿಯ ಜೊತೆಗೂ ಖಂಡಿತ ಮಾತನಾಡಲಾರೆ – ಎಂದು ಹೇಳು.

27. ಮುಂದೆ ಆಕೆ ಅದನ್ನು (ಮಗುವನ್ನು) ಹೊತ್ತು ತನ್ನ ಜನಾಂಗದವರ ಬಳಿಗೆ ಬಂದರು. ಅವರು (ಜನಾಂಗದವರು) ಹೇಳಿದರು; ಓ ಮರ್ಯಮ್, ನೀನು ಬಹಳ ಕೆಟ್ಟ ವಸ್ತುವನ್ನು ತಂದಿರುವೆ.

28. ಓ ಹಾರೂನನ ಸಹೋದರಿಯೇ, ನಿನ್ನ ತಂದೆ ದುಷ್ಟನಾಗಿರಲಿಲ್ಲ ಮತ್ತು ನಿನ್ನ ತಾಯಿಯೂ ದುರಾಚಾರಿಯಾಗಿರಲಿಲ್ಲ.

29. ಆಕೆ ಅದರೆಡೆಗೆ (ಮಗುವಿನೆಡೆಗೆ) ಸನ್ನೆ ಮಾಡಿದರು. ಆಗ ಅವರು; ತೊಟ್ಟಿಲಲ್ಲಿರುವ ಪುಟ್ಟ ಮಗುವಿನ ಜೊತೆ ನಾವು ಮಾತನಾಡುವುದಾದರೂ ಹೇಗೆ? ಎಂದರು.

 30. ಆಗ ಅದು(ಮಗು) ಹೇಳಿತು; ನಾನು ಖಂಡಿತ, ಅಲ್ಲಾಹನ ದಾಸನು. ಅವನು ನನಗೆ ಗ್ರಂಥವನ್ನು ನೀಡಿರುವನು ಹಾಗೂ ನನ್ನನ್ನು ಪ್ರವಾದಿಯಾಗಿ ನೇಮಿಸಿರುವನು.

31. ಮತ್ತು ನಾನೆಲ್ಲೇ ಇರಲಿ, ಅವನು ನನ್ನನ್ನು ಸಮೃದ್ಧನಾಗಿಸಿರುವನು ಮತ್ತು ನಾನು ಬದುಕಿರುವಷ್ಟು ಕಾಲ ನಮಾಝ್ ಸಲ್ಲಿಸುತ್ತಿರಬೇಕು ಹಾಗೂ ಝಕಾತ್ ಪಾವತಿಸುತ್ತಿರಬೇಕು ಎಂದು ಅವನು ಆದೇಶಿಸಿರುವನು.

32. ಹಾಗೆಯೇ, ಅವನು ನನ್ನನ್ನು ನನ್ನ ತಾಯಿಗೆ ವಿಧೇಯನಾಗಿಸಿರುವನು ಮತ್ತು ನನ್ನನ್ನು ಅವನು ಅಹಂಕಾರಿ ಹಾಗೂ ದುಷ್ಟನಾಗಿ ಮಾಡಿಲ್ಲ.

 33. ನಾನು ಜನಿಸಿದ ದಿನ, ನಾನು ಸಾಯುವ ದಿನ ಮತ್ತು ನನ್ನನ್ನು ಪುನಃ ಜೀವಂತಗೊಳಿಸಲಾಗುವ ದಿನ ನನಗೆ ಶಾಂತಿ ಇದೆ.

34. ಇದು, ಮರ್ಯಮ್‌ರ ಪುತ್ರ ಈಸಾ ಅವರ ಕುರಿತಂತೆ ಜನರು ಜಗಳಾಡುತ್ತಿರುವ ವಿಷಯಗಳ ಸತ್ಯಾಂಶ.

35. ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳುವುದು ಅಲ್ಲಾಹನಿಗೆ ಭೂಷಣವಲ್ಲ. ಅವನು ಪಾವನನು. ಅವನು ಏನನ್ನಾದರೂ ನಿರ್ಧರಿಸಿದರೆ, ಅದರೊಡನೆ ‘ಆಗು’ ಎಂದಷ್ಟೇ ಹೇಳುತ್ತಾನೆ ಮತ್ತು ಅದು ಆಗಿ ಬಿಡುತ್ತದೆ.

36. ಖಂಡಿತವಾಗಿಯೂ ಅಲ್ಲಾಹನೇ ನನ್ನ ಒಡೆಯನೂ ನಿಮ್ಮ ಒಡೆಯನೂ ಆಗಿದ್ದಾನೆ. ಆದ್ದರಿಂದ ನೀವು ಅವನನ್ನೇ ಪೂಜಿಸಿರಿ. ಇದುವೇ ನೇರ ಮಾರ್ಗ.

37. ಮುಂದೆ, ವಿವಿಧ ಗುಂಪುಗಳು ಪರಸ್ಪರ ಭಿನ್ನತೆ ತಾಳಿದವು. ಧಿಕ್ಕಾರಿಗಳ ಪಾಲಿಗೆ, ಅವರು ಕಾಣಲಿರುವ ಮಹಾನ್ ದಿನವು ವಿನಾಶಕಾರಿಯಾಗಿರುವುದು.

38. ನಮ್ಮ ಬಳಿಗೆ ಬರುವಂದು ಅವರು ತುಂಬಾ ಸಮರ್ಥವಾಗಿ ಕೇಳಬಲ್ಲವರೂ ನೋಡಬಲ್ಲವರೂ ಆಗಿರುವರು. ಇಂದು ಮಾತ್ರ ಆ ಅಕ್ರಮಿಗಳು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ.

39. (ದೂತರೇ,) ಅಂತಿಮ ತೀರ್ಪು ನೀಡಿ ಬಿಡಲಾಗುವ, ಆ ಹತಾಶೆಯ ದಿನದ ಕುರಿತು ಅವರನ್ನು ಎಚ್ಚರಿಸಿರಿ – ಸದ್ಯ ಅವರು ನಿರ್ಲಕ್ಷ ತೋರುತ್ತಿದ್ದಾರೆ ಮತ್ತು ಅವರು ನಂಬುತ್ತಿಲ್ಲ.

 40. ಖಂಡಿತವಾಗಿಯೂ ನಾವೇ ಈ ಭೂಮಿ ಮತ್ತು ಇದರಲ್ಲಿರುವ ಎಲ್ಲರ ವಾರಸುದಾರರು ಮತ್ತು ಕೊನೆಗೆ ಎಲ್ಲರನ್ನೂ ನಮ್ಮೆಡೆಗೇ ಮರಳಿಸಲಾಗುವುದು.

41. ಮತ್ತು (ದೂತರೇ), ನೀವು ಈ ಗ್ರಂಥದಲ್ಲಿ ಇಬ್ರಾಹೀಮರ ಕುರಿತು ಪ್ರಸ್ತಾಪಿಸಿರಿ. ಖಂಡಿತವಾಗಿಯೂ ಅವರು ಪರಮ ಸತ್ಯವಂತ ದೂತರಾಗಿದ್ದರು.

 42. ಅವರು ತಮ್ಮ ತಂದೆಯೊಡನೆ ಹೇಳಿದ್ದರು; ನನ್ನ ಅಪ್ಪಾ, ಏನನ್ನೂ ಕೇಳಲಾಗದ, ಏನನ್ನೂ ಕಾಣಲಾಗದ ಮತ್ತು ನಿಮಗೆ ಯಾವುದೇ ಉಪಕಾರ ಮಾಡಲಾಗದ ವಸ್ತುಗಳನ್ನು ನೀವೇಕೆ ಪೂಜಿಸುತ್ತೀರಿ?

43. ನನ್ನ ಅಪ್ಪಾ, ಇದೀಗ ನಿಮ್ಮ ಬಳಿ ಇಲ್ಲದ ಜ್ಞಾನವೊಂದು ನನ್ನ ಬಳಿಗೆ ಬಂದಿದೆ. ನೀವು ನನ್ನನ್ನು ಅನುಸರಿಸಿರಿ, ನಾನು ನಿಮಗೆ ನೇರ ಮಾರ್ಗವನ್ನು ತೋರಿಸುವೆನು.

44. ನನ್ನ ಅಪ್ಪಾ, ನೀವು ಶೈತಾನನನ್ನು ಪೂಜಿಸಬೇಡಿ. ಖಂಡಿತವಾಗಿಯೂ ಶೈತಾನನು ಆ ಪರಮ ದಯಾಮಯನಿಗೆ ಅವಿಧೇಯನಾಗಿದ್ದಾನೆ.

45. ನನ್ನ ಅಪ್ಪಾ, ಆ ಪರಮ ದಯಾಮಯನ ಶಿಕ್ಷೆಯು ನಿಮ್ಮ ಮೇಲೆ ಬಂದೆರಗೀತು ಮತ್ತು (ಆವರೆಗೂ) ನೀವು ಶೈತಾನನ ಮಿತ್ರರಾಗಿಯೇ ಉಳಿಯುವಿರಿ ಎಂಬ ಭಯ ನನಗಿದೆ.

46. ಅವನು (ಅವರ ತಂದೆ) ಹೇಳಿದನು; ಓ ಇಬ್ರಾಹೀಮ್, ನೀನೇನು ನನ್ನ ದೇವರುಗಳಿಂದ ದೂರವಾಗಿ ಬಿಟ್ಟೆಯಾ? ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಲ್ಲುವೆನು. ನೀನು ಶಾಶ್ವತವಾಗಿ ನನ್ನನ್ನು ಬಿಟ್ಟು ತೊಲಗು.

 47. ಇಬ್ರಾಹೀಮರು ಹೇಳಿದರು; ನಿಮಗೆ ಸಲಾಮ್ (ಶಾಂತಿ). ನಾನು ನನ್ನ ಒಡೆಯನೊಡನೆ ನಿಮ್ಮ ಕ್ಷಮೆಗಾಗಿ ಪ್ರಾರ್ಥಿಸುವೆನು. ಅವನಂತೂ ನನ್ನ ಪಾಲಿಗೆ ತುಂಬಾ ಉದಾರಿಯಾಗಿದ್ದಾನೆ.

48. ನಾನೀಗ ನಿಮ್ಮನ್ನೂ, ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಿದ್ದಿರೋ ಅವರೆಲ್ಲರನ್ನೂ ಬಿಟ್ಟು ಹೊರಡುತ್ತಿದ್ದೇನೆ. ಮತ್ತು ನಾನು ನನ್ನ ಒಡೆಯನನ್ನು ಮಾತ್ರ ಪ್ರಾರ್ಥಿಸುತ್ತೇನೆ. ನನ್ನ ಒಡೆಯನನ್ನು ಪ್ರಾರ್ಥಿಸಿದರೆ ನಾನೆಂದೂ ನಿರಾಶನಾಗಬೇಕಾಗಿಲ್ಲ.

49. ಕೊನೆಗೆ ಅವರು, ಅವರನ್ನೂ, ಅಲ್ಲಾಹನ ಹೊರತು ಅವರು ಏನನ್ನೆಲ್ಲಾ ಪೂಜಿಸುತ್ತಿದ್ದರೋ ಅವೆಲ್ಲವನ್ನೂ ಬಿಟ್ಟುಬಿಟ್ಟಾಗ ನಾವು ಅವರಿಗೆ ಇಸ್ಹಾಕ್ ಮತ್ತು ಯಾಕೂಬ್‌ರನ್ನು ನೀಡಿದೆವು. ಅವರಿಬ್ಬರನ್ನೂ ನಾವು ದೂತರಾಗಿಸಿದೆವು.

50. ನಾವು ಅವರಿಗೆ ನಮ್ಮ ಅನುಗ್ರಹವನ್ನು ದಯಪಾಲಿಸಿದೆವು ಮತ್ತು ಅವರಿಗೆ ನಿಜಕ್ಕೂ ಉನ್ನತವಾದ ಖ್ಯಾತಿಯನ್ನು ಕರುಣಿಸಿದೆವು.

  51. (ದೂತರೇ,) ಈ ಗ್ರಂಥದಲ್ಲಿ ನೀವು ಮೂಸಾರನ್ನು ಪ್ರಸ್ತಾಪಿಸಿರಿ. ಅವರು ಖಂಡಿತ ಆಯ್ದ ವ್ಯಕ್ತಿಯಾಗಿದ್ದರು ಮತ್ತು ದೂತರೂ ಪ್ರವಾದಿಯೂ ಆಗಿದ್ದರು.

52. ನಾವು ‘ತೂರ್’ ಪರ್ವತದ ಬಲಭಾಗದಿಂದ ಅವರನ್ನು ಕರೆದೆವು ಮತ್ತು ಆತ್ಮೀಯ ಮಾತುಕತೆಗಾಗಿ ಅವರನ್ನು ನಾವು ಹತ್ತಿರ ತಂದೆವು.

53. ಮತ್ತು ನಾವು ನಮ್ಮ ಅನುಗ್ರಹದಿಂದ ಅವರ ಸಹೋದರ ಹಾರೂನ್‌ರನ್ನು ಪ್ರವಾದಿಯಾಗಿಸಿ, ಅವರಿಗೆ (ಸಹಾಯಕರಾಗಿ) ಒದಗಿಸಿದೆವು.

54. ಇನ್ನು (ದೂತರೇ), ನೀವು ಈ ಗ್ರಂಥದಲ್ಲಿ ಇಸ್ಮಾಈಲ್‌ರನ್ನು ಪ್ರಸ್ತಾಪಿಸಿರಿ. ಅವರು ತಾನು ಕೊಟ್ಟ ಮಾತನ್ನು ಪಾಲಿಸುವವರಾಗಿದ್ದರು ಮತ್ತು ದೂತರೂ ಪ್ರವಾದಿಯೂ ಆಗಿದ್ದರು.

55. ಅವರು ತಮ್ಮ ಜನರಿಗೆ ನಮಾಝ್ ಹಾಗೂ ಝಕಾತ್ ಅನ್ನು ಆದೇಶಿಸುತ್ತಿದ್ದರು ಮತ್ತು ಅವರು ತಮ್ಮ ಒಡೆಯನ ಬಳಿ ಪ್ರೀತಿಪಾತ್ರರಾಗಿದ್ದರು.

56. (ದೂತರೇ), ನೀವಿನ್ನು ಈ ಗ್ರಂಥದಲ್ಲಿ ಇದ್ರೀಸ್‌ರನ್ನು ಪ್ರಸ್ತಾಪಿಸಿರಿ. ಅವರು ತುಂಬಾ ಸತ್ಯವಂತ ಪ್ರವಾದಿಯಾಗಿದ್ದರು.

57. ನಾವು ಅವರನ್ನು ಬಹಳ ಉನ್ನತ ಸ್ಥಾನಕ್ಕೆ ಏರಿಸಿದ್ದೆವು.

58. ಅವರೆಲ್ಲಾ ಅಲ್ಲಾಹನ ಪುರಸ್ಕಾರಕ್ಕೆ ಪಾತ್ರರಾದ ಪ್ರವಾದಿಗಳು, ಆದಮ್‌ರ ಸಂತತಿಗೆ ಸೇರಿದವರು, ನಾವು ನೂಹ್ರ ಜೊತೆ (ಹಡಗಿನೊಳಕ್ಕೆ) ಹತ್ತಿಸಿದವರು ಮತ್ತು ಇಬ್ರಾಹೀಮ್ ಹಾಗೂ ಇಸ್ರಾಈಲರ ಸಂತತಿಯವರಾಗಿದ್ದರು. ನಾವು ಅವರಿಗೆ ಸರಿದಾರಿಯನ್ನು ತೋರಿದ್ದೆವು ಮತ್ತು ಅವರನ್ನು ಆಯ್ದುಕೊಂಡಿದ್ದೆವು. ಅವರ ಮುಂದೆ ಪರಮ ದಯಾಮಯನ ವಚನಗಳನ್ನು ಓದಿದಾಗಲೆಲ್ಲಾ ಅವರು ಬಿದ್ದು, ಸಾಷ್ಟಾಂಗವೆರಗಿ, ಅತ್ತು ಬಿಡುತ್ತಿದ್ದರು.

59. ಅವರ ಬಳಿಕ ಅವರ ಉತ್ತರಾಧಿಕಾರಿಗಳಾದವರು, ನಮಾಝ್ ಅನ್ನು (ಪಾಲಿಸದೆ)ಕಳೆದುಕೊಂಡರು ಮತ್ತು ಸ್ವೇಚ್ಛೆಗಳ ಹಿಂದೆ ನಡೆದರು. ಅವರು ಬಹುಬೇಗನೇ ವಿನಾಶಕ್ಕೆ ತುತ್ತಾಗುವರು.

60. ಪಶ್ಚಾತ್ತಾಪ ಪಟ್ಟು, ನಂಬಿಕೆ ಇಟ್ಟು, ಸತ್ಕರ್ಮ ಮಾಡಿದವರ ಹೊರತು. ಅವರು ಸ್ವರ್ಗವನ್ನು ಪ್ರವೇಶಿಸುವರು ಮತ್ತು ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು.

61. ಪರಮ ದಯಾಮಯನು, ತನ್ನ ದಾಸರಿಗೆ ಪರೋಕ್ಷವಾಗಿ ವಾಗ್ದಾನ ಮಾಡಿರುವ ಶಾಶ್ವತ ತೋಟಗಳು (ಅವರಿಗೆ ಸಿಗಲಿವೆ.) ಅವನ ವಾಗ್ದಾನವು ಖಂಡಿತ ಪೂರ್ತಿಯಾಗುವುದು.

 62. ಅಲ್ಲಿ ಅವರು ಯಾವುದೇ ಅನಗತ್ಯ ಮಾತನ್ನು ಕೇಳಲಾರರು. ಅಲ್ಲಿ ಅವರು ಶಾಂತಿಯ ಹಾರೈಕೆಯನ್ನು ಮಾತ್ರ ಕೇಳುವರು. ಮುಂಜಾನೆ ಹಾಗೂ ಸಂಜೆ ಅವರಿಗೆ ಅವರ ಆಹಾರವು ಸಿಗುತ್ತಿರುವುದು.

63. ಇದುವೇ, ನಮ್ಮ ದಾಸರ ಪೈಕಿ ದೇವನಿಷ್ಠರಾಗಿದ್ದವರು ಉತ್ತರಾಧಿಕಾರಿಗಳಾಗಲಿರುವ ಸ್ವರ್ಗ (ಎಂದು ಅಲ್ಲಿ ಘೋಷಿಸಲಾಗುವುದು).

  64. (ಮಲಕ್‌ಗಳು ಹೇಳುತ್ತಾರೆ;) ನಾವು ನಿಮ್ಮ ಒಡೆಯನ ಆದೇಶವಿಲ್ಲದೆ ಇಳಿದು ಬರುವುದಿಲ್ಲ. ನಮ್ಮ ಮುಂದಿರುವ, ನಮ್ಮ ಹಿಂದಿರುವ ಹಾಗೂ ಅವುಗಳ ನಡುವೆ ಇರುವ ಎಲ್ಲವೂ ಅವನಿಗೇ ಸೇರಿವೆ ಮತ್ತು ನಿಮ್ಮ ಒಡೆಯನು ಯಾವ ವಿಷಯವನ್ನೂ ಮರೆಯುವುದಿಲ್ಲ.

65. ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ಅವನನ್ನು ಪೂಜಿಸಿರಿ ಮತ್ತು ಅವನನ್ನು ಪೂಜಿಸುವುದರಲ್ಲೇ ಸ್ಥಿರವಾಗಿರಿ. ಅವನಿಗೆ ಸಮನಾದ ಇನ್ನೊಬ್ಬನು ನಿಮಗೆ ಗೊತ್ತೇ?

66. ಇನ್ನು ಮನುಷ್ಯನು ‘‘ನಾನು ಸತ್ತುಹೋದ ಬಳಿಕ ನನ್ನನ್ನೇನು ಮತ್ತೆ ಜೀವಂತ ಗೊಳಿಸಲಾಗುವುದೇ?’’ ಎಂದು ಪ್ರಶ್ನಿಸುತ್ತಾನೆ.

67. ಹಿಂದೊಮ್ಮೆ, ಅವನ ಅಸ್ತಿತ್ವವೇ ಇಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದೆವು ಎಂಬುದು ಅವನಿಗೆ ನೆನಪಿಲ್ಲವೇ?

68. ನಿಮ್ಮೊಡೆಯನಾಣೆ, ಅವರನ್ನು ಹಾಗೂ ಶೈತಾನನನ್ನು ನಾವು ಖಂಡಿತ ಒಂದೆಡೆ ಸೇರಿಸುವೆವು. ಮುಂದೆ ನಾವು ಅವರನ್ನು, ಮೊಣಕಾಲೂರಿ ಬಿದ್ದಿರುವ ಸ್ಥಿತಿಯಲ್ಲಿ ನರಕದ ಸುತ್ತ ಹಾಜರು ಪಡಿಸುವೆವು.

69. ಆ ಬಳಿಕ ನಾವು ಪ್ರತಿಯೊಂದು ಗುಂಪಿನಿಂದ, ಆ ಪರಮ ದಯಾಮಯನ ವಿರುದ್ಧ ಅತ್ಯಧಿಕ ವಿದ್ರೋಹಿಗಳಾಗಿದ್ದವರನ್ನು ಎಳೆದು ಪ್ರತ್ಯೇಕಿಸುವೆವು.

70. ಅದನ್ನು (ನರಕವನ್ನು) ಪ್ರವೇಶಿಸಲು ಹೆಚ್ಚು ಅರ್ಹರು ಯಾರು ಎಂಬುದನ್ನು ನಾವು ಚೆನ್ನಾಗಿ ಬಲ್ಲೆವು.

71. ನಿಮ್ಮಲ್ಲಿ ಪ್ರತಿಯೊಬ್ಬರೂ ಅಲ್ಲಿಂದ ಹಾದು ಹೋಗಲೇಬೇಕು. ಇದು ನಿಮ್ಮ ಒಡೆಯನ ಮೇಲಿರುವ ಖಚಿತ ಬಾಧ್ಯತೆಯಾಗಿದೆ.

72. ತರುವಾಯ ನಾವು, ಧರ್ಮ ನಿಷ್ಠರಾಗಿದ್ದವರಿಗೆ ಮುಕ್ತಿ ನೀಡುವೆವು ಮತ್ತು ಅಕ್ರಮಿಗಳನ್ನು, ಮೊಣಕಾಲೂರಿ ಬಿದ್ದಿರುವ ಸ್ಥಿತಿಯಲ್ಲಿ ಅದರೊಳಗೇ ಬಿಟ್ಟು ಬಿಡುವೆವು.

73. ಧಿಕ್ಕಾರಿಗಳ ಮುಂದೆ ನಮ್ಮ ಸುಸ್ಪಷ್ಟ ವಚನಗಳನ್ನು ಓದಿ ಕೇಳಿಸಲಾದಾಗ, ಅವರು ವಿಶ್ವಾಸಿಗಳೊಡನೆ, ‘‘ನಮ್ಮಿಬ್ಬರ ಪೈಕಿ ಯಾವ ಗುಂಪು ಹೆಚ್ಚು ಉತ್ತಮ ಸ್ಥಾನದಲ್ಲಿದೆ ಮತ್ತು ಯಾರ ಸಭೆ ಹೆಚ್ಚು ಸಂಪನ್ನವಾಗಿದೆ?’’ ಎಂದು ಕೇಳುತ್ತಾರೆ.

74. ನಿಜವಾಗಿ ಅವರಿಗಿಂತ ಮುಂಚೆ, ಸಂಪತ್-ಸಾಧನಗಳಲ್ಲೂ ವೈಭವದಲ್ಲೂ ಅವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದ ಅದೆಷ್ಟೋ ಗುಂಪುಗಳನ್ನು ನಾವು ನಾಶ ಪಡಿಸಿದ್ದೇವೆ.

 75. ಹೇಳಿರಿ; ಆ ಪರಮ ದಯಾಮಯನು, ದಾರಿಗೆಟ್ಟವರಿಗೆ ಧಾರಾಳ ಕಾಲಾವಕಾಶವನ್ನು ನೀಡುತ್ತಾನೆ. ಕೊನೆಗೆ, ಅವರಿಗೆ ವಾಗ್ದಾನ ಮಾಡಲಾಗಿದ್ದ ಶಿಕ್ಷೆಯನ್ನು ಅಥವಾ ಆ ಅಂತಿಮ ಘಳಿಗೆಯನ್ನು ಅವರು ಕಣ್ಣಾರೆ ಕಾಣುತ್ತಾರೆ. ಯಾರ ನೆಲೆ ಹೆಚ್ಚು ಕೆಟ್ಟದು ಮತ್ತು ಯಾರ ಪಡೆ ಹೆಚ್ಚು ದುರ್ಬಲ ಎಂಬುದನ್ನು ಆಗ ಅವರು ಮನಗಾಣುವರು.

76. ಸನ್ಮಾರ್ಗವನ್ನು ಅನುಸರಿಸುವವರಿಗೆ ಅಲ್ಲಾಹನು ಇನ್ನಷ್ಟು (ಸ್ಪಷ್ಟ) ಮಾರ್ಗದರ್ಶನವನ್ನು ನೀಡುತ್ತಿರುತ್ತಾನೆ. ಪ್ರತಿಫಲದ ದೃಷ್ಟಿಯಿಂದಲೂ, ಶ್ರೇಷ್ಠ ಫಲಿತಾಂಶದ ದೃಷ್ಟಿಯಿಂದಲೂ ಬಹುಕಾಲ ಉಳಿದಿರುವ ಸತ್ಕಾರ್ಯಗಳೇ ನಿಮ್ಮ ಒಡೆಯನ ಬಳಿ ಶ್ರೇಷ್ಠವಾಗಿವೆ.

77. ನಮ್ಮ ವಚನಗಳನ್ನು ಧಿಕ್ಕರಿಸುವ ಹಾಗೂ ನನಗೆ ಖಂಡಿತ ಮತ್ತಷ್ಟು ಸಂಪತ್ತು ಹಾಗೂ ಸಂತಾನ ಸಿಗಲಿದೆ ಎನ್ನುವಾತನನ್ನು ನೀವು ಕಂಡಿರಾ?

78. ಅವನಿಗೇನು, ಕಾಣದ ಲೋಕದ ಮಾಹಿತಿ ಸಿಕ್ಕಿದೆಯೇ, ಅಥವಾ ಆ ಪರಮ ದಯಾಳುವಿನ ಜೊತೆ ಅವನೇನಾದರೂ ಕರಾರು ಮಾಡಿಕೊಂಡಿರುವನೇ?

79. ಖಂಡಿತ ಇಲ್ಲ. ಅವನು ಹೇಳುತ್ತಿರುವುದನ್ನು ನಾವು ಬರೆದಿಡುವೆವು ಮತ್ತು ನಾವು ಅವನ ಶಿಕ್ಷೆಯನ್ನು ಮತ್ತಷ್ಟು ಹೆಚ್ಚಿಸುವೆವು.

 80. ಅವನು ಕೊಚ್ಚಿಕೊಳ್ಳುತ್ತಿರುವ ಎಲ್ಲವುಗಳಿಗೂ ನಾವೇ ಉತ್ತರಾಧಿಕಾರಿಗಳಾಗುವೆವು ಮತ್ತು ಅವನು ಒಬ್ಬಂಟಿಯಾಗಿ ನಮ್ಮ ಬಳಿಗೆ ಬರುವನು.

81. ಅವರು ತಮಗೆ ಗೌರವ ಸಿಗಬೇಕೆಂದು, ಅಲ್ಲಾಹನನ್ನು ಬಿಟ್ಟು ಇತರರನ್ನು ತಮ್ಮ ದೇವರಾಗಿಸಿಕೊಂಡಿದ್ದಾರೆ.

82. ಖಂಡಿತ ಇಲ್ಲ. ಅವರು (ಆ ದೇವರುಗಳು) ಅವರ ಆರಾಧನೆಯನ್ನೇ ತಿರಸ್ಕರಿಸುವರು ಮತ್ತು ಅವರ ಶತ್ರುಗಳಾಗಿ ಬಿಡುವರು.

83. ನೀವು ಕಂಡಿರಾ? ನಾವು ಧಿಕ್ಕಾರಿಗಳ ಮೇಲೆ ಶೈತಾನರನ್ನು ಹೇರಿರುತ್ತೇವೆ. ಅವು ಅವರನ್ನು ಪ್ರಚೋದಿಸುತ್ತಿರುತ್ತವೆ.

84. (ದೂತರೇ,) ನೀವು ಅವರ ಕುರಿತು ಆತುರ ಪಡಬೇಡಿ. ನಾವು ಅವರ ಅವಧಿಯ ದಿನಗಳನ್ನು ಎಣಿಸುತ್ತಲೇ ಇದ್ದೇವೆ.

85. (ಪ್ರತಿಫಲದ) ಆ ದಿನ, ನಾವು ಧರ್ಮನಿಷ್ಠರನ್ನು ಆ ಪರಮ ದಯಾಮಯನ ಮುಂದೆ ಅತಿಥಿಗಳಾಗಿ ಹಾಜರು ಪಡಿಸುವೆವು.

86. ಮತ್ತು ನಾವು ಅಪರಾಧಿಗಳನ್ನು ತೀವ್ರವಾಗಿ ಬಾಯಾರಿದ ಸ್ಥಿತಿಯಲ್ಲಿ ನರಕದೆಡೆಗೆ ಅಟ್ಟಿಕೊಂಡು ಹೋಗುವೆವು.

87. ಆ ಪರಮ ದಯಾಮಯನಿಂದ ವಾಗ್ದಾನ ಪಡೆದಿರುವವರ ಹೊರತು ಬೇರಾರಿಗೂ ಅಂದು ಶಿಫಾರಸಿನ ಅಧಿಕಾರ ಇರಲಾರದು.

88. ಆ ಪರಮ ದಯಾಮಯನಿಗೆ ಪುತ್ರನಿದ್ದಾನೆ ಎಂದು ಅವರು ಹೇಳುತ್ತಾರೆ.

89. ನೀವು ಹೇಳುತ್ತಿರುವ ಈ ಮಾತು ತೀರಾ ಕೆಟ್ಟದು.

90. ಇದರಿಂದ – ಆಕಾಶಗಳು ಸ್ಫೋಟಗೊಳ್ಳಬಹುದು, ಭೂಮಿಯು ಛಿದ್ರವಾದೀತು ಮತ್ತು ಪರ್ವತಗಳು ಚೂರು ಚೂರಾಗಬಹುದು.

91. ರಹ್ಮಾನನಿಗೆ (ಅಲ್ಲಾಹನಿಗೆ) ಪುತ್ರನಿರುವನೆಂದು ಅವರು ಆರೋಪಿಸಿದ್ದರಿಂದ.

92. ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳುವುದು ಆ ಪರಮ ದಯಾಮಯನಿಗೆ ಭೂಷಣವಲ್ಲ.

93. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲರೂ ಆ ಪರಮ ದಯಾಮಯನ ಮುಂದೆ ದಾಸರಾಗಿಯೇ ಬರುವರು.

94. ಅವನು ಅವರೆಲ್ಲರನ್ನೂ ಆವರಿಸಿರುವನು ಮತ್ತು ಅವರನ್ನು ಎಣಿಸಿಟ್ಟಿರುವನು.

95. ಪುನರುತ್ಥಾನ ದಿನ ಅವರೆಲ್ಲರೂ ಒಂಟಿಯಾಗಿಯೇ ಅವನ ಬಳಿಗೆ ಬರುವರು.

96. ಆ ಪರಮ ದಯಾಮಯನು, ವಿಶ್ವಾಸಿಗಳು ಮತ್ತು ಸತ್ಕರ್ಮಿಗಳ ಪರವಾಗಿ (ಜನಮನಗಳಲ್ಲಿ) ಖಂಡಿತ ವಾತ್ಸಲ್ಯವನ್ನು ಬೆಳೆಸುವನು.

97. (ದೂತರೇ,) ನೀವು ಈ ಮೂಲಕ ಧರ್ಮನಿಷ್ಠರಿಗೆ ಶುಭವಾರ್ತೆ ನೀಡಬೇಕೆಂದು ಹಾಗೂ ಜಗಳಗಂಟರಿಗೆ ಎಚ್ಚರಿಕೆ ನೀಡಬೇಕೆಂದು ನಾವು ಇದನ್ನು (ಈ ಗ್ರಂಥವನ್ನು) ನಿಮ್ಮ ಭಾಷೆಯಲ್ಲಿ ಸರಳಗೊಳಿಸಿರುವೆವು.

98. ಅವರಿಗಿಂತ ಮುಂಚೆ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶ ಮಾಡಿರುವೆವು – ಇಂದು ಅವರಲ್ಲೊಬ್ಬರಾದರೂ ನಿಮಗೆ ಕಾಣಸಿಗುತ್ತಾರೆಯೇ? ಅಥವಾ ಅವರ ಸಪ್ಪಳವೇನಾದರೂ ನಿಮಗೆ ಕೇಳಿಸುತ್ತದೆಯೇ?