43. Az Zukhruf

43. ಅಝ್ಝುಖ್ರುಫ್ (ಆಭರಣ)

ವಚನಗಳು – 89, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಹಾ ಮೀಮ್.

2. ಸುಸ್ಪಷ್ಟವಾಗಿರುವ ಗ್ರಂಥದಾಣೆ

3. ನಾವಿದನ್ನು ಅರಬೀ ಭಾಷೆಯ ಕುರ್‌ಆನ್ ಆಗಿ ಕಳಿಸಿರುವೆವು, ನೀವು ಅರಿಯಬೇಕೆಂದು.

4. ಅದು ಖಂಡಿತ ನಮ್ಮ ಬಳಿ ಮೂಲ ಗ್ರಂಥದಲ್ಲಿದೆ. ಅದು ಉನ್ನತ ಹಾಗೂ ಯುಕ್ತಿ ಪೂರ್ಣವಾಗಿದೆ.

5. ನೀವು ಅತಿಕ್ರಮಿಗಳೆಂಬ ಕಾರಣಕ್ಕೆ ನಾವು ಈ ಉಪದೇಶವನ್ನು ನಿಮ್ಮಿಂದ ಕಿತ್ತುಕೊಳ್ಳಬೇಕೇ?

6. ನಾವು ಹಿಂದಿನವರಲ್ಲಿ ಅದೆಷ್ಟೋ ಪ್ರವಾದಿಗಳನ್ನು ಕಳಿಸಿದ್ದೆವು.

7. ಆದರೆ ಅವರು ತಮ್ಮ ಬಳಿಗೆ ಬಂದ ಯಾವ ಪ್ರವಾದಿಯನ್ನೂ ಗೇಲಿ ಮಾಡದೆ ಬಿಟ್ಟಿರಲಿಲ್ಲ.

8. ನಾವು ಅವರಿಗಿಂತ (ಮಕ್ಕಃದವರಿಗಿಂತ) ಬಲಿಷ್ಠರಾಗಿದ್ದವರನ್ನು ನಾಶ ಮಾಡಿರುವೆವು. (ಹೀಗೆ), ಗತಿಸಿಹೋದವು, ಗತ ಕಾಲದವರ ಸಮಾಚಾರಗಳು.

9. ನೀವು ಅವರೊಡನೆ, ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರೆಂದು ಕೇಳಿದರೆ, ಪ್ರಬಲನಾಗಿರುವ, ಎಲ್ಲವನ್ನೂ ಬಲ್ಲವನು ಅವುಗಳನ್ನು ಸೃಷ್ಟಿಸಿರುವನೆಂದು ಅವರು ಖಂಡಿತ ಹೇಳುವರು.

10. ಅವನೇ ಭೂಮಿಯನ್ನು ನಿಮ್ಮ ಪಾಲಿಗೆ ಸಮತಟ್ಟಾಗಿಸಿದವನು ಮತ್ತು ನಿಮಗೆ ದಿಕ್ಕು ಸಿಗಲೆಂದು ಅದರಲ್ಲಿ ನಿಮಗಾಗಿ ದಾರಿಗಳನ್ನು ನಿರ್ಮಿಸಿದವನು.

11. ಅವನೇ ನಿರ್ದಿಷ್ಟ ಪ್ರಮಾಣದಲ್ಲಿ ಆಕಾಶದಿಂದ ನೀರನ್ನು ಸುರಿಸಿದವನು. ಆ ಮೂಲಕ ನಾವು ಮೃತವಾಗಿದ್ದ ನಾಡನ್ನು ಜೀವಂತಗೊಳಿಸಿದೆವು. ಇದೇ ರೀತಿ ನಿಮ್ಮನ್ನು (ಮೃತ ಸ್ಥಿತಿಯಿಂದ) ಹೊರತೆಗೆಯಲಾಗುವುದು.

12. ಅವನೇ ಎಲ್ಲ ವಿಧಗಳನ್ನು ಸೃಷ್ಟಿಸಿದವನು ಹಾಗೂ ನಿಮಗಾಗಿ, ನೀವು ಪ್ರಯಾಣಕ್ಕೆ ಬಳಸುವ ನಾವೆಗಳನ್ನು ಹಾಗೂ ಜಾನುವಾರುಗಳನ್ನು ಒದಗಿಸಿದವನು –

13. – ಮತ್ತು ನೀವು ಅವುಗಳ ಮೇಲೆ ಸವಾರರಾಗಬೇಕೆಂದು. ನೀವು ಅವುಗಳ ಮೇಲೆ ಸವಾರರಾಗುವಾಗ ಅಲ್ಲಾಹನ ಅನುಗ್ರಹವನ್ನು ಸ್ಮರಿಸುತ್ತಾ ಹೇಳಿರಿ; ‘‘ಇದನ್ನು ನಮಗೆ ಅಧೀನಗೊಳಿಸಿಕೊಟ್ಟವನು ಪಾವನನು. ಅನ್ಯಥಾ ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಿರಲಿಲ್ಲ’’.

14. ‘‘ಮತ್ತು ನಾವು ಖಂಡಿತ ನಮ್ಮ ಒಡೆಯನ ಕಡೆಗೇ ಮರಳಲಿದ್ದೇವೆ’’.

15. ಅವರು ಅವನ ದಾಸರಲ್ಲಿ ಕೆಲವರನ್ನು ಅವನ ಭಾಗಗಳೆಂದು ಪರಿಗಣಿಸಿದ್ದಾರೆ. ಖಂಡಿತವಾಗಿಯೂ ಮಾನವನು ಸ್ಪಷ್ಟ ಕೃತಘ್ನನಾಗಿದ್ದಾನೆ.

16. ಅವನೇನು, ತನ್ನ ಸೃಷ್ಟಿಗಳ ಪೈಕಿ ಪುತ್ರಿಯರನ್ನು ತನಗಾಗಿ ಆಯ್ದುಕೊಂಡು ಪುತ್ರರನ್ನು ನಿಮಗೆ ಮೀಸಲಾಗಿಟ್ಟಿರುವನೇ?

17. ಅವರು ಆ ಪರಮ ದಯಾಳುವಿಗೆ ಏನನ್ನು ಆರೋಪಿಸುತ್ತಾರೋ (ಪುತ್ರಿಯರು) ಅದನ್ನೇ ಅವರಲ್ಲಿ ಯಾರಿಗಾದರೂ ಶುಭವಾರ್ತೆಯಾಗಿ (ನಿಮಗೆ ಪುತ್ರಿ ಹುಟ್ಟಿದ್ದಾಳೆಂದಾಗ) ತಿಳಿಸಿದಾಗ ಅವನ ಮುಖವು ಕಪ್ಪಾಗಿ ಬಿಡುತ್ತದೆ ಮತ್ತು ಅವನು ತುಂಬಾ ದುಃಖಿತನಾಗುತ್ತಾನೆ.

 18. (ಅವರ ಪ್ರಕಾರ ಪುತ್ರಿಯರೆಂದರೆ) ಆಭರಣಗಳಲ್ಲಿ ಬೆಳೆಯುವವರಾಗಿರುತ್ತಾರೆ ಹಾಗೂ ಜಗಳವಾದಾಗ ಸ್ಪಷ್ಟವಾಗಿ ಮಾತನಾಡಲು ಅಸಮರ್ಥರಾಗಿರುತ್ತಾರೆ.

19. ಅವರು ಆ ಪರಮ ದಯಾಳುವಿನ ದಾಸರಾದ ಮಲಕ್‌ಗಳನ್ನು ಸ್ತ್ರೀಯರೆಂದು ಪರಿಗಣಿಸುತ್ತಾರೆ. ಅವರನ್ನು (ಮಲಕ್‌ಗಳನ್ನು) ಸೃಷ್ಟಿಸುವಾಗ ಇವರೇನು ನೋಡಿದ್ದರೇ? ಅವರ ಹೇಳಿಕೆಯನ್ನು ಬರೆದಿಡಲಾಗುವುದು ಮತ್ತು ಅವರನ್ನು ಪ್ರಶ್ನಿಸಲಾಗುವುದು.

20. ಆ ಪರಮ ದಯಾಳುವು ಬಯಸಿದ್ದರೆ, ನಾವು (ಅನ್ಯರನ್ನು) ಪೂಜಿಸುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ನಿಜವಾಗಿ ಅವರಿಗೆ ಅದರ ಅರಿವಿಲ್ಲ. ಅವರು ಕೇವಲ ಊಹಿಸುತ್ತಿದ್ದಾರೆ.

21. ಅವರೇನು, ಈ ಹಿಂದೆ ತಮ್ಮ ಬಳಿಗೆ ಬಂದ ಯಾವುದಾದರೂ ಗ್ರಂಥವನ್ನು ಅವಲಂಬಿಸಿಕೊಂಡಿರುವರೇ?

22. ಅವರು ಹೇಳುತ್ತಾರೆ; ನಾವು ನಮ್ಮ ಪೂರ್ವಜರನ್ನು ಒಂದು ನಿರ್ದಿಷ್ಟ ಹಾದಿಯಲ್ಲಿ ಕಂಡಿದ್ದೆವು. ನಾವು ಖಂಡಿತ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತಿದ್ದೇವೆ.

23. ಇದೇ ರೀತಿ ನಾವು ನಿಮಗಿಂತ ಹಿಂದೆ ಯಾವುದೇ ನಾಡಿಗೆ ಎಚ್ಚರಿಸುವವರನ್ನು ಕಳಿಸಿದ್ದಾಗಲೆಲ್ಲಾ ಅಲ್ಲಿನ ಸ್ಥಿತಿವಂತರು, ‘‘ನಾವು ನಮ್ಮ ಪೂರ್ವಜರನ್ನು ಒಂದು ನಿರ್ದಿಷ್ಟ ಹಾದಿಯಲ್ಲಿ ಕಂಡಿದ್ದೆವು. ನಾವು ಖಂಡಿತ ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸುತ್ತಿದ್ದೇವೆ’’ ಎಂದು ಹೇಳಿದ್ದರು.

24. ‘‘ನಿಮ್ಮ ಪೂರ್ವಜರನ್ನು ನೀವು ಯಾವ ಹಾದಿಯಲ್ಲಿ ಕಂಡಿದ್ದಿರೋ ಅದಕ್ಕಿಂತ ಉತ್ತಮ ಹಾದಿಯನ್ನು ನಾನು ನಿಮ್ಮ ಬಳಿಗೆ ತಂದಿದ್ದರೆ?’’ ಎಂದು ಅವರು (ಪ್ರವಾದಿ) ಕೇಳಿದಾಗ, ಅವರು ‘‘ನಿಮ್ಮಿಂದಿಗೆ ಕಳಿಸಲಾಗಿರುವುದನ್ನು ನಾವು ಧಿಕ್ಕರಿಸುತ್ತೇವೆ’’ ಎಂದರು.

25. ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು. ಇದೀಗ (ಸತ್ಯವನ್ನು) ತಿರಸ್ಕರಿಸಿದವರ ಗತಿ ಏನಾಯಿತೆಂದು ನೋಡಿರಿ.

26. ಇಬ್ರಾಹೀಮರು ತಮ್ಮ ತಂದೆಯೊಡನೆ ಹಾಗೂ ತಮ್ಮ ಜನಾಂಗದವರೊಡನೆ ಹೇಳಿದರು;‘‘ನೀವು ಪೂಜಿಸುವ ಎಲ್ಲವುಗಳಿಂದ ನಾನು ಸಂಪೂರ್ಣ ಮುಕ್ತನಾಗಿದ್ದೇನೆ -’’

27. ‘‘ – ನನ್ನನ್ನು ಸೃಷ್ಟಿಸಿದವನ ಹೊರತು. ಅವನು ಖಂಡಿತ ನನಗೆ ಸರಿದಾರಿಯನ್ನು ತೋರಿಸುವನು’’.

28. ಅವರು ಇದನ್ನು ( ಈ ಧೋರಣೆಯನ್ನು) ಶಾಶ್ವತ ವಚನದ ರೂಪದಲ್ಲಿ ತಮ್ಮ ಮುಂದಿನವರಲ್ಲಿ ಉಳಿಸಿದರು – ಅವರು (ಸತ್ಯದೆಡೆಗೆ) ಮರಳಬೇಕೆಂದು.

29. ನಾನು ಅವರಿಗೂ ಅವರ ಪೂರ್ವಜರಿಗೂ ಸಾಕಷ್ಟು ಸಂಪತ್ತನ್ನು ನೀಡಿದೆನು. ಕೊನೆಗೆ ಅವರ ಬಳಿಗೆ ಸತ್ಯವು ಬಂದಿತು ಹಾಗೂ ಸುಸ್ಪಷ್ಟ ದೂತರೂ ಬಂದರು.

30. ಆದರೆ ಸತ್ಯವು ಅವರ ಬಳಿಗೆ ಬಂದಾಗ ಅವರು, ‘‘ಇದು ಕೇವಲ ಮಾಟಗಾರಿಕೆಯಾಗಿದೆ ಮತ್ತು ನಾವು ಇದನ್ನು ಧಿಕ್ಕರಿಸುತ್ತೇವೆ’’ ಎಂದು ಬಿಟ್ಟರು.

31. ಮತ್ತು ಅವರು, ‘‘ಈ ಕುರ್‌ಆನನ್ನು ಎರಡು ನಗರ (ಮಕ್ಕಃ ಮತ್ತು ತಾಯಿಫ್)ಗಳ ಯಾರಾದರೊಬ್ಬ ದೊಡ್ಡ ವ್ಯಕ್ತಿಗೆ ಯಾಕೆ ಇಳಿಸಿಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ.

32. ನಿಮ್ಮ ಒಡೆಯನ ಅನುಗ್ರಹಗಳನ್ನು ವಿತರಿಸುವವರು ಅವರೇನು? ನಿಜವಾಗಿ ಇಹಲೋಕದ ಜೀವನದಲ್ಲಿ ಅವರ ಆದಾಯವನ್ನು ಅವರ ನಡುವೆ ನಾವೇ ವಿತರಿಸುತ್ತೇವೆ ಮತ್ತು ನಾವೇ ಅವರಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಹೆಚ್ಚಿನ ಸ್ಥಾನಮಾನವನ್ನು ನೀಡಿರುತ್ತೇವೆ – ಅವರು ಪರಸ್ಪರರಿಂದ ಸೇವೆಯನ್ನು ಪಡೆಯಲೆಂದು. ನಿಜವಾಗಿ ನಿಮ್ಮ ಒಡೆಯನ ಕೃಪೆಯು ಅವರು ಸಂಗ್ರಹಿಸುವ ಎಲ್ಲವುಗಳಿಗಿಂತ ಉತ್ತಮವಾಗಿದೆ.

33. ಎಲ್ಲ ಮಾನವರೂ ಒಂದೇ ಪಂಥದವರಾಗಿ ಬಿಡುವ ಸಾಧ್ಯತೆ ಇಲ್ಲದಿರುತ್ತಿದ್ದರೆ ನಾವು, ಪರಮ ದಯಾಳುವನ್ನು ಧಿಕ್ಕರಿಸುವವರ ಮನೆಗಳ ಚಪ್ಪರಗಳನ್ನೂ ಅವರು (ಮಾಳಿಗೆಗಳಿಗೆ) ಏರುವ ಏಣಿಗಳನ್ನೂ ಬೆಳ್ಳಿಯದ್ದಾಗಿಸಿ ಬಿಡುತ್ತಿದ್ದೆವು.

34. (ಮಾತ್ರವಲ್ಲ), ಅವರ ಮನೆಗಳ ಬಾಗಿಲುಗಳನ್ನೂ ಅವರು ಒರಗಿ ಕೂರುವ ಪೀಠಗಳನ್ನೂ –

35. – ಚಿನ್ನದ್ದಾಗಿಸಿ ಬಿಡುತ್ತಿದ್ದೆವು. ಇವೆಲ್ಲಾ ಕೇವಲ ಇಹಲೋಕ ಜೀವನದ ಸೊತ್ತುಗಳು. ಪರಲೋಕವು ನಿಮ್ಮ ಒಡೆಯನ ಬಳಿ ಧರ್ಮ ಮೀಸಲಾಗಿದೆ.

36. ಪರಮ ದಯಾಳುವನ್ನು ನೆನಪಿಸುವ ವಿಷಯದಲ್ಲಿ ಆಲಸ್ಯ ತೋರುವಾತನ ಮೇಲೆ ನಾವು ಶೈತಾನನನ್ನು ಹೇರಿ ಬಿಡುತ್ತೇವೆ. ಆ ಬಳಿಕ ಅವನೇ ಆತನ ಸಂಗಾತಿಯಾಗಿರುತ್ತಾನೆ.

37. ಮತ್ತು ಅವರು (ಶೈತಾನರು) ಅವರನ್ನು ಸರಿದಾರಿಯಿಂದ ತಡೆದು ದೂರವಿಡುತ್ತಾರೆ. ಆದರೆ, ಅವರು ತಾವು ಸನ್ಮಾರ್ಗದಲ್ಲಿದ್ದೇವೆ ಎಂದು ಭಾವಿಸಿ ಕೊಂಡಿರುತ್ತಾರೆ.

38. ಕೊನೆಗೆ ಅವರು ನಮ್ಮ ಬಳಿಗೆ ಬಂದಾಗ ಅವನು, ‘‘ಅಯ್ಯೋ, ನನ್ನ ಹಾಗೂ ನಿನ್ನ (ಶೈತಾನನ) ನಡುವೆ ಎರಡು ಪೂರ್ವಗಳಷ್ಟು ಅಂತರ ಇದ್ದಿದ್ದರೆ ಚೆನ್ನಾಗಿತ್ತು’’ ಎನ್ನುವನು. ಅವನು ಬಹಳ ಕೆಟ್ಟ ಸಂಗಾತಿ.

39. ನೀವು ಅಕ್ರಮಿಗಳಾಗಿದ್ದರೆ ಇದಾವುದೂ ನಿಮಗೆ ಉಪಯುಕ್ತವಾಗದು. ಶಿಕ್ಷೆಯಲ್ಲಿ ನೀವು ಸಮಾನ ಪಾಲುದಾರರಾಗಿರುವಿರಿ.

40. ನೀವೇನು ಕಿವುಡರಿಗೆ ಕೇಳಿಸಬಲ್ಲಿರಾ? ಅಥವಾ ಕುರುಡರಿಗೆ ಮತ್ತು ಸ್ಪಷ್ಟವಾಗಿ ತಪ್ಪು ದಾರಿಯಲ್ಲಿರುವವರಿಗೆ ಸರಿದಾರಿಯನ್ನು ತೋರಿಸಲು ನಿಮ್ಮಿಂದ ಸಾಧ್ಯವೇ?

41. (ದೂತರೇ,) ನಾನು ನಿಮ್ಮನ್ನು ಕರೆಸಿಕೊಂಡರೂ (ಸಾಯಿಸಿದರೂ) ಅವರ ವಿರುದ್ಧ ಮಾತ್ರ ನಾವು ಖಂಡಿತ ಪ್ರತೀಕಾರ ತೀರಿಸುವೆವು.

42. ಅಥವಾ ನಾವು ಅವರಿಗೆ ವಾಗ್ದಾನ ಮಾಡಿರುವುದನ್ನು ನಿಮಗೆ (ನಿಮ್ಮ ಬದುಕಿನ ಅವಧಿಯಲ್ಲೇ) ತೋರಿಸುವೆವು. ಅವರ ಮೇಲೆ ನಮಗೆ ಸಂಪೂರ್ಣ ಹತೋಟಿ ಇದೆ.

43. ನಿಮಗೆ ದಿವ್ಯವಾಣಿಯ ಮೂಲಕ ನೀಡಲಾಗಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ನೀವು ಖಂಡಿತ ಸ್ಥಿರವಾದ ಸನ್ಮಾರ್ಗದಲ್ಲಿರುವಿರಿ.

44. ಇದು ನಿಸ್ಸಂದೇಹವಾಗಿಯೂ ನಿಮಗೆ ಹಾಗೂ ನಿಮ್ಮ ಜನಾಂಗದವರಿಗೆ ಒಂದು ಉಪದೇಶವಾಗಿದೆ. ಬೇಗನೇ ನಿಮ್ಮನ್ನು ವಿಚಾರಿಸಲಾಗುವುದು.

45. ನಿಮಗಿಂತ ಹಿಂದೆ ನಾವು ಕಳಿಸಿದ್ದ ದೂತರನ್ನು ಕೇಳಿ ನೋಡಿರಿ. ನಾವು ಪರಮ ದಯಾಳುವಿನ (ಅಲ್ಲಾಹನ) ಹೊರತು ಬೇರೆ ಯಾರನ್ನಾದರೂ ಪೂಜಾರ್ಹ ದೇವರಾಗಿ ನೇಮಿಸಿದ್ದೇವೆಯೇ?

46. ನಾವು ಮೂಸಾರನ್ನು ನಮ್ಮ ಪುರಾವೆಗಳೊಂದಿಗೆ ಫಿರ್‌ಔನ್ ಮತ್ತು ಅವನ ಸರದಾರರೆಡೆಗೆ ಕಳಿಸಿದ್ದೆವು. ಅವರು, ನಿಸ್ಸಂದೇಹವಾಗಿ ನಾನು ಎಲ್ಲ ಲೋಕಗಳ ಒಡೆಯನ ದೂತನಾಗಿದ್ದೇನೆ ಎಂದರು.

47. ಹೀಗೆ ಅವರು ನಮ್ಮ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು (ಗೇಲಿ ಮಾಡಿ) ನಕ್ಕು ಬಿಟ್ಟರು.

48. ನಾವು ಅವರಿಗೆ ತೋರಿಸಿದ ಪ್ರತಿಯೊಂದು ಪುರಾವೆಯೂ ತನಗಿಂತ ಮೊದಲು ಬಂದ ಪುರಾವೆಗಿಂತ ದೊಡ್ಡದಾಗಿತ್ತು ಮತ್ತು ಅವರು (ಸತ್ಯದೆಡೆಗೆ) ಮರಳಬಹುದೆಂದು ನಾವು ಅವರನ್ನು ಶಿಕ್ಷೆಗೆ ಒಳಪಡಿಸಿದೆವು

49. ಅವರು ಹೇಳಿದರು; ‘‘ಓ ಜಾದೂಗಾರನೇ, ನಿನಗೆ ನೀಡಲಾಗಿರುವ ವಾಗ್ದಾನದ ಅನುಷ್ಠಾನಕ್ಕಾಗಿ ನೀನು ನಮಗಾಗಿ ನಿನ್ನ ಒಡೆಯನೊಡನೆ ಪ್ರಾರ್ಥಿಸು. ನಾವು ಖಂಡಿತ ಸನ್ಮಾರ್ಗದಲ್ಲಿ ನಡೆಯುವೆವು’’.

50. ಕೊನೆಗೆ ನಾವು ಅವರ ಮೇಲಿಂದ ಶಿಕ್ಷೆಯನ್ನು ನಿವಾರಿಸಿದಾಗ ಅವರು ವಚನ ಭಂಗ ಮಾಡಿದರು.

51. ಫಿರ್‌ಔನನು ತನ್ನ ಜನಾಂಗಕ್ಕೊಂದು ಕರೆ ನೀಡಿದನು. ಅವನು ಹೇಳಿದನು; ನನ್ನ ಜನಾಂಗದವರೇ, ಈಜಿಪ್ತ್‌ನ ಆಧಿಪತ್ಯ ನನಗೆ ಸೇರಿದ್ದಲ್ಲವೇ? ಮತ್ತು ಈ ನದಿಗಳು ನನಗೆ ಅಧೀನವಾಗಿ ಹರಿಯುತ್ತಿವೆಯಲ್ಲವೇ? ನೀವೇನು ನೋಡುತ್ತಿಲ್ಲವೇ?

52. ಕೀಳು ವರ್ಗದ ಹಾಗೂ ಸ್ಪಷ್ಟವಾಗಿ ಮಾತನಾಡಲಾಗದ ಆ ವ್ಯಕ್ತಿಗಿಂತ (ಮೂಸಾರಿಗಿಂತ) ನಾನು ಶ್ರೇಷ್ಠನಲ್ಲವೇ?

53. (ಅತನು ನಿಜಕ್ಕೂ ದೇವ ದೂತನಾಗಿದ್ದರೆ) ಅವನಿಗೆ ಚಿನ್ನದ ಬಳೆಗಳನ್ನೇಕೆ ನೀಡಲಾಗಿಲ್ಲ? ಅಥವಾ ಅವನ ಜೊತೆ ಸಾಲುಗಟ್ಟಿರುವ ಮಲಕ್‌ಗಳೇಕೆ ಬಂದಿಲ್ಲ?

54. ಹೀಗೆ ಅವನು ತನ್ನ ಜನಾಂಗದವರನ್ನು ಮಣಿಸಿದನು ಮತ್ತು ಅವರು ಆತನನ್ನು ಅನುಸರಿಸಿದರು. ಅವರು ಖಂಡಿತ ಒಂದು ಅವಿಧೇಯ ಜನಾಂಗವಾಗಿದ್ದರು.

55. ಕೊನೆಗೆ ಅವರು ನಮ್ಮನ್ನು ಉದ್ರೇಕಿಸಿದಾಗ ನಾವು ಅವರೆಲ್ಲರನ್ನೂ ಮುಳುಗಿಸಿ ಬಿಟ್ಟೆವು.

56. ಮತ್ತು ನಾವು ಅವರನ್ನು ಗತಕಾಲದವರಾಗಿ ಹಾಗೂ ಮುಂದಿನವರ ಪಾಲಿಗೆ ಒಂದು ಕತೆಯಾಗಿ ಮಾರ್ಪಡಿಸಿ ಬಿಟ್ಟೆವು.

57. (ದೂತರೇ,) ಮರ್ಯಮರ ಪುತ್ರ (ಈಸಾ)ರ ಉದಾಹರಣೆಯನ್ನು ಮುಂದಿಟ್ಟಾಗ ನಿಮ್ಮ ಜನಾಂಗದವರು ನಕ್ಕು ಬಿಡುತ್ತಾರೆ.

58. ನಮ್ಮ ದೇವರುಗಳು ಉತ್ತಮರೋ ಅಥವಾ ಆತನೋ? ಎಂದವರು ಕೇಳುತ್ತಾರೆ. ಅವರು ನಿಮ್ಮ ಮುಂದೆ ಅದನ್ನು ಪ್ರಸ್ತಾಪಿಸುವುದು ಕೇವಲ ಜಗಳಾಡುವುದಕ್ಕೆ ಮಾತ್ರ. ನಿಜವಾಗಿ ಅವರು ಒಂದು ಜಗಳಗಂಟ ಜನಾಂಗವಾಗಿದ್ದಾರೆ.

59. ಅವರು (ಈಸಾ) ನಮ್ಮಿಂದ ಬಹುಮಾನಿತರಾಗಿದ್ದ ಒಬ್ಬ ದಾಸರಾಗಿದ್ದರು. ನಾವು ಅವರನ್ನು ಇಸ್ರಾಈಲರ ಸಂತತಿಗಳಿಗೆ ಆದರ್ಶವಾಗಿಸಿದ್ದೆವು.

60. ನಾವು ಬಯಸಿದ್ದರೆ ಭೂಮಿಯಲ್ಲಿ ನಿಮ್ಮ ಮೂಲಕ ಮಲಕ್‌ಗಳನ್ನು ಸೃಷ್ಟಿಸುತ್ತಿದ್ದೆವು ಮತ್ತು ಅವರು ನಿಮ್ಮ ಉತ್ತರಾಧಿಕಾರಿಗಳಾಗುತ್ತಿದ್ದರು.

61. ಅವರು ಖಂಡಿತ ಅಂತಿಮ ಘಳಿಗೆಯ ಒಂದು ಸೂಚನೆಯಾಗಿದ್ದಾರೆ. ನೀವು ಆ ಕುರಿತು ಸಂಶಯಿಸಬೇಡಿ ಮತ್ತು ನನ್ನನ್ನು ಅನುಸರಿಸಿರಿ. ಇದುವೇ ನೇರಮಾರ್ಗವಾಗಿದೆ.

62. ಶೈತಾನನು ನಿಮ್ಮನ್ನು (ಸತ್ಯದಿಂದ) ತಡೆಯದಿರಲಿ. ಅವನು ನಿಮ್ಮ ಸ್ಪಷ್ಟ ಶತ್ರುವಾಗಿದ್ದಾನೆ.

63. ಈಸಾ, ಸ್ಪಷ್ಟ ಪುರಾವೆಗಳೊಂದಿಗೆ ಬಂದು ಹೇಳಿದರು; ನಾನು ನಿಮ್ಮ ಬಳಿಗೆ ಯುಕ್ತಿಯನ್ನು ತಂದಿರುವೆನು ಹಾಗೂ ನೀವು ಪರಸ್ಪರ ಭಿನ್ನತೆ ತಾಳಿರುವ ವಿಷಯಗಳ ವಾಸ್ತವವನ್ನು ನಿಮಗೆ ವಿವರಿಸಲಿಕ್ಕಾಗಿ (ಬಂದಿರುವೆನು). ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನ ಆದೇಶವನ್ನು ಪಾಲಿಸಿರಿ.

64. ಅಲ್ಲಾಹನು ಖಂಡಿತ ನನ್ನ ಒಡೆಯನೂ ಹೌದು, ನಿಮ್ಮ ಒಡೆಯನೂ ಹೌದು. ನೀವು ಅವನನ್ನೇ ಪೂಜಿಸಿರಿ. ಅದುವೇ ನೇರ ಮಾರ್ಗ.

65. ಆ ಬಳಿಕ ವಿವಿಧ ಗುಂಪುಗಳು ಪರಸ್ಪರ ಭಿನ್ನಾಭಿಪ್ರಾಯ ತಾಳಿದವು. ಅಕ್ರಮಿಗಳಿಗೆ, ಒಂದು ಕಠಿಣ ದಿನದ ಶಿಕ್ಷೆಯ ಮೂಲಕ ವಿನಾಶವಿದೆ.

66. ಅವರು ಕಾಯುತ್ತಿರುವುದು ಅಂತಿಮ ಘಳಿಗೆಯನ್ನೇ ತಾನೇ? ಅದು, ಅವರಿಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ ಹಠಾತ್ತನೆ ಅವರ ಮೇಲೆ ಬಂದೆರಗಲಿದೆ.

67. ಧರ್ಮನಿಷ್ಠರ ಹೊರತು ಇತರೆಲ್ಲ ಮಿತ್ರರೂ ಅಂದು ಪರಸ್ಪರ ಶತ್ರುಗಳಾಗಿ ಬಿಡುವರು.

68. (ಅವರೊಡನೆ ಹೇಳಲಾಗುವುದು;) ನನ್ನ ದಾಸರೇ, ಇಂದು ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ.

69. ನಮ್ಮ ವಚನಗಳನ್ನು ನಂಬಿದ್ದವರು ಮತ್ತು ಶರಣಾಗಿದ್ದವರು.

70. (ಅವರೊಡನೆ ಹೇಳಲಾಗುವುದು;) ‘‘ನೀವು ಮತ್ತು ನಿಮ್ಮ ಜೀವನ ಸಂಗಾತಿಗಳು ಸ್ವರ್ಗದೊಳಗೆ ಪ್ರವೇಶಿಸಿರಿ. ನಿಮ್ಮನ್ನು ಸಂತೋಷ ಪಡಿಸಲಾಗುವುದು’’.

71. ಚಿನ್ನದ ತಟ್ಟೆ ಹಾಗೂ ಲೋಟೆಗಳನ್ನು ಅವರ ಮುಂದಿಡಲಾಗುವುದು. ಮನಸ್ಸುಗಳು ಅಪೇಕ್ಷಿಸುವ ಹಾಗೂ ಕಣ್ಣುಗಳಿಗೆ ರುಚಿಸುವ ಎಲ್ಲವೂ ಅಲ್ಲಿರುವುದು ಮತ್ತು ಅಲ್ಲಿ ನೀವು ಸದಾಕಾಲ ಇರುವಿರಿ.

72. ಇದುವೇ, ನೀವು ಮಾಡುತ್ತಿದ್ದ ಕರ್ಮಗಳ ಫಲವಾಗಿ ನೀವು ಉತ್ತರಾಧಿಕಾರಿಗಳಾಗಿರುವ ಸ್ವರ್ಗ.

73. ಇಲ್ಲಿ ನಿಮಗಾಗಿ, ನೀವು ತಿನ್ನುವ ಹಲವು ಬಗೆಯ ಹಣ್ಣು ಹಂಪಲುಗಳಿವೆ.

74. ಅಪರಾಧಿಗಳು ಖಂಡಿತ ನರಕದ ಶಿಕ್ಷೆಯಲ್ಲಿ ಸದಾಕಾಲ ಇರುವರು.

75. (ಶಿಕ್ಷೆಯನ್ನು) ಅವರ ಪಾಲಿಗೆ ಸ್ವಲ್ಪವೂ ಹಗುರಗೊಳಿಸಲಾಗದು ಮತ್ತು ಅಲ್ಲಿ ಅವರು ನಿರಾಶರಾಗಿ ಬಿದ್ದಿರುವರು.

76. ನಾವೇನೂ ಅವರ ಮೇಲೆ ಅಕ್ರಮವೆಸಗಲಿಲ್ಲ. ಅವರು ಸ್ವತಃ ಅಕ್ರಮಿಗಳಾಗಿದ್ದರು.

77. ‘‘ಓ ಮಾಲಿಕ್ (ನರಕದ ಕಾವಲುಗಾರ), ನಿಮ್ಮ ಒಡೆಯನು ನಮ್ಮನ್ನು ಮುಗಿಸಿ ಬಿಡಲಿ’’ ಎಂದು ಅವರು ಮೊರೆ ಇಡುವರು. ಅವನು, ‘‘ನೀವು ಸದಾ ಇಲ್ಲೇ ಇರ ಬೇಕಾದವರು’’ ಎನ್ನುವನು.

78. ನಾವು ನಿಮ್ಮ ಬಳಿಗೆ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಿದ್ದರು.

79. ಅವರೊಂದು ನಿರ್ಧಾರ ಕೈಗೊಂಡಿರುವರೇ? ನಾವೂ ಒಂದು ನಿರ್ಧಾರ ಕೈಗೊಂಡಿರುವೆವು.

80. ಅವರೇನು, ನಾವು ಅವರ ಪಿಸುಮಾತುಗಳನ್ನು ಹಾಗೂ ಗುಟ್ಟಿನ ಸಂಭಾಷಣೆಗಳನ್ನು ಆಲಿಸುತ್ತಿಲ್ಲವೆಂದು ಭಾವಿಸಿದ್ದಾರೆಯೇ? ಯಾಕಿಲ್ಲ? ಅವರ ಬಳಿಯಲ್ಲೇ ಇರುವ ನಮ್ಮ ದೂತರು (ಮಲಕ್‌ಗಳು) ಅದನ್ನು ಬರೆದಿಡುತ್ತಾರೆ.

81. (ದೂತರೇ,) ಹೇಳಿರಿ; ಒಂದು ವೇಳೆ ಆ ಪರಮ ದಯಾಳುವಿಗೆ ಒಬ್ಬ ಪುತ್ರನು ಇದ್ದಿದ್ದರೆ, (ಅವನನ್ನು) ಪೂಜಿಸುವವರಲ್ಲಿ ನಾನೇ ಮೊದಲಿಗನಾಗಿರುತ್ತಿದ್ದೆ.

82. ಆಕಾಶಗಳ ಮತ್ತು ಭೂಮಿಯ ಒಡೆಯನು ಹಾಗೂ ವಿಶ್ವ ಸಿಂಹಾಸನದ ಒಡೆಯನು ಅವರು ಆರೋಪಿಸುವ ಎಲ್ಲ ಗುಣಗಳಿಂದ ಮುಕ್ತನಾಗಿದ್ದು ಪಾವನನಾಗಿದ್ದಾನೆ.

 83. ನೀವು ಅವರನ್ನು ಬಿಟ್ಟು ಬಿಡಿ, ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ವ್ಯರ್ಥ ಮಾತುಗಳನ್ನಾಡುತ್ತಾ ಮೋಜು ಮಾಡುತ್ತಿರಲಿ.

84. ಆಕಾಶದಲ್ಲೂ ಅವನೇ (ಅಲ್ಲಾಹನೇ) ದೇವರು ಮತ್ತು ಭೂಮಿಯಲ್ಲೂ ಅವನೇ ದೇವರು. ಅವನು ತುಂಬಾ ಯುಕ್ತಿವಂತನೂ ಜ್ಞಾನವುಳ್ಳವನೂ ಆಗಿದ್ದಾನೆ.

85. ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಆಧಿಪತ್ಯವು ಯಾರಿಗೆ ಸೇರಿದೆಯೋ ಅವನು (ಅಲ್ಲಾಹನು) ತುಂಬಾ ಸಮೃದ್ಧನು. ಅಂತಿಮ ಘಳಿಗೆಯ ಜ್ಞಾನವು ಅವನ ಬಳಿಯಲ್ಲೇ ಇದೆ. (ಕೊನೆಗೆ) ನೀವು ಅವನೆಡೆಗೇ ಮರಳುವಿರಿ.

 86. ಅವರು ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಾರೋ ಅವರಿಗೆ ಶಿಫಾರಸ್ಸಿನ ಅಧಿಕಾರವಿರುವುದಿಲ್ಲ – ಸತ್ಯದ ಪರವಾಗಿ ಸಾಕ್ಷಿ ಹೇಳುವವರ ಹೊರತು. ಮತ್ತು ಅವರು (ಆ ಸಾಕ್ಷಿಗಳು) ಬಲ್ಲವರಾಗಿರುವರು.

87. ಅವರನ್ನು ಸೃಷ್ಟಿಸಿದವನು ಯಾರೆಂದು ನೀವು ಅವರೊಡನೆ ಕೇಳಿದರೆ, ಖಂಡಿತವಾಗಿಯೂ ಅವರು ಅಲ್ಲಾಹನೆಂದೇ ಉತ್ತರಿಸುತ್ತಾರೆ. ಹಾಗಾದರೆ ಮತ್ತೆ ಅವರು ಅದೆಲ್ಲಿ ಅಲೆಯುತ್ತಿದ್ದಾರೆ?

88. ‘‘ನನ್ನೊಡೆಯಾ, ಈ ಜನರು ಖಂಡಿತ ನಂಬುವವರಲ್ಲ’’ ಎಂಬ ಅವರ (ದೂತರ) ಮಾತು (ಅಲ್ಲಾಹನಿಗೆ ತಿಳಿದಿದೆ).

89. (ದೂತರೇ,) ನೀವು ಅವರನ್ನು ಕಡೆಗಣಿಸಿರಿ ಮತ್ತು ‘ಸಲಾಮ್’ (ನಿಮಗೆ ಶಾಂತಿ ಸಿಗಲಿ) ಎಂದು ಹೇಳಿರಿ. ಬೇಗನೇ ಅವರು ಅರಿಯುವರು.