51. Adh Dhariyat

51. ಝ್ಝಾರಿಯಾತ್ (ಮಾರುತಗಳು)

ವಚನಗಳು – 60, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಧೂಳೆಬ್ಬಿಸುವ ಸುಳಿಗಾಳಿಗಳಾಣೆ,

2. ಅವು (ಮೋಡಗಳ) ಹೊರೆಯನ್ನು ಹೊತ್ತಿರುತ್ತವೆ.

3. ತರುವಾಯ ಅವು, ಸೌಮ್ಯವಾಗಿ ಚಲಿಸತೊಡಗುತ್ತವೆ.

4. ಮತ್ತು ಆದೇಶಾನುಸಾರ (ಮಳೆಯನ್ನು) ವಿತರಿಸುತ್ತವೆ.

5. ನಿಮಗೆ ನೀಡಲಾಗಿರುವ ವಾಗ್ದಾನವು ಖಂಡಿತ ಸತ್ಯವಾಗಿದೆ.

6. ಪ್ರತಿಫಲದ ದಿನವು ಖಂಡಿತ ಬರಲಿದೆ.

7. ದಾರಿಗಳಿರುವ ಆಕಾಶದಾಣೆ.

8. ನೀವು ವಿವಿಧ ವಾದಗಳಲ್ಲಿ ತಲ್ಲೀನರಾಗಿರುವಿರಿ.

9. ದೂರಗೊಳಿಸಲ್ಪಟ್ಟವನು ಮಾತ್ರ ಇದರಿಂದ (ಸತ್ಯದಿಂದ) ದೂರವಾಗುತ್ತಾನೆ.

10. ನಾಶವಾದರು, ಊಹಾಪೋಹಗಳನ್ನು ನೆಚ್ಚಿ ಕೊಂಡವರು.

11. ಅವರು ಎಚ್ಚರವಿಲ್ಲದೆ, ಮೈ ಮರೆತ ಸ್ಥಿತಿಯಲ್ಲಿದ್ದಾರೆ.

12. ಪ್ರತಿಫಲದ ದಿನ ಯಾವಾಗ ಬಂದೀತೆಂದು ಅವರು ಕೇಳುತ್ತಾರೆ.

13. ಅಂದು ಅವರು ಬೆಂಕಿಯ ಮೇಲೆ ಹೊರಳಾಡಿಸಲ್ಪಡುವರು.

14. (ಅವರೊಡನೆ ಹೇಳಲಾಗುವುದು;) ಸವಿಯಿರಿ ನಿಮ್ಮ ಕಿಡಿಗೇಡಿತನವನ್ನು, ನೀವು ಆತುರ ಪಡುತ್ತಿದ್ದ ವಸ್ತು ಇದುವೇ.

15. ಖಂಡಿತ (ಸ್ವರ್ಗದ) ತೋಟಗಳಲ್ಲಿ ಹಾಗೂ ಚಿಲುಮೆಗಳಲ್ಲಿರುವರು.

16. ತಮ್ಮ ಒಡೆಯನು ನೀಡಿದ್ದನ್ನು ಸ್ವೀಕರಿಸುತ್ತಿರುವರು. ಈ ಹಿಂದೆ (ಇಹಲೋಕದಲ್ಲಿ) ಅವರು ಸತ್ಕರ್ಮಿಗಳಾಗಿದ್ದರು.

17. ಅವರು ರಾತ್ರಿಯಲ್ಲಿ ತುಸು ಹೊತ್ತು ಮಾತ್ರ ನಿದ್ರಿಸುತ್ತಿದ್ದರು.

18. ಮುಂಜಾವಿನಲ್ಲಿ ಅವರು (ಅಲ್ಲಾಹನೊಡನೆ) ಕ್ಷಮೆಯಾಚಿಸುತ್ತಿದ್ದರು.

19. ಅವರ ಸಂಪತ್ತಿನಲ್ಲಿ, ಬೇಡುವವರಿಗೆ ಹಾಗೂ ವಂಚಿತರಿಗೆ ಹಕ್ಕಿತ್ತು.

20. ಅಚಲ ನಂಬಿಕೆ ಉಳ್ಳವರಿಗೆ ಭೂಮಿಯಲ್ಲಿ (ಪಾಠದಾಯಕ) ಪುರಾವೆಗಳಿವೆ.

21. ಮತ್ತು ನೀವೇನು ಸ್ವತಃ ನಿಮ್ಮನ್ನೇ ನೋಡುವುದಿಲ್ಲವೇ?

22. ಮತ್ತು ಆಕಾಶದಲ್ಲಿ ನಿಮ್ಮ ಆಹಾರವಿದೆ ಮತ್ತು ನಿಮಗೆ ವಾಗ್ದಾನ ಮಾಡಲಾಗಿರುವ ವಸ್ತುವೂ ಇದೆ.

23. ಆಕಾಶ ಮತ್ತು ಭೂಮಿಯ ಒಡೆಯನಾಣೆ, ಅದು (ಪರಲೋಕ) ಸತ್ಯ. ನೀವು ಮಾತನಾಡಬಲ್ಲಿರೆಂಬುದು ಸತ್ಯವಾಗಿರುವಂತೆ.

24. ಇಬ್ರಾಹೀಮರ ಆದರಣೀಯ ಅತಿಥಿಗಳ ಸಮಾಚಾರ ನಿಮಗೆ ತಲುಪಿದೆಯೇ?

25. ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ‘ಸಲಾಮ್’ ಎಂದರು. ಅವರು, ‘‘ಸಲಾಮ್, ಅಪರಿಚಿತರೇ’’ ಎಂದರು.

26. ಆ ಬಳಿಕ ಅವರು, ತಮ್ಮ ಮನೆಯವರ ಬಳಿಗೆ ಹೋಗಿ ಒಂದು ದಷ್ಟಪುಷ್ಟವಾದ (ಹುರಿದ) ಕರುವನ್ನು ತಂದರು.

27. ಅವರು (ಇಬ್ರಾಹೀಮರು), ಅವರ (ಅತಿಥಿಗಳ) ಬಳಿಗೆ ಹೋಗಿ, ನೀವು ಉಣ್ಣುವುದಿಲ್ಲವೇ? ಎಂದರು.

28. ಅವರಿಗೆ (ಇಬ್ರಾಹೀಮರಿಗೆ) ಅವರ ಕುರಿತು ಭಯವಾಯಿತು. ಅವರು (ಅತಿಥಿಗಳು), ‘‘ನೀವು ಅಂಜಬೇಡಿ’’ ಎಂದರು ಮತ್ತು ಅವರಿಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡಿದರು.

29. ಅವರ ಪತ್ನಿಯು ಮುಂದೆ ಬಂದು ಅಚ್ಚರಿಯಿಂದ ತನ್ನ ಮುಖಕ್ಕೆ ಕೈ ಇಟ್ಟು, ‘‘ಬಂಜೆಯಾಗಿರುವ ವೃದ್ಧೆಗೆ (ಮಗುವಾಗುವುದೇ)?’’ ಎಂದರು.

30. ಅವರು (ಅತಿಥಿಗಳು) ಹೇಳಿದರು; ‘‘ಹಾಗೆಯೇ ಆಗುವುದು. (ಹಾಗೆಂದು) ನಿಮ್ಮ ಒಡೆಯನು ಹೇಳಿರುವನು. ಅವನು ಖಂಡಿತ ಯುಕ್ತಿವಂತನೂ ಜ್ಞಾನಿಯೂ ಆಗಿರುವನು’’.

ಕಾಂಡ – 27

31. ಅವರು (ಇಬ್ರಾಹೀಮ್) ಕೇಳಿದರು; ದೂತರೇ, ನಿಮ್ಮ ಗುರಿ ಏನು?

32. ಅವರು (ಮಲಕ್‌ಗಳು) ಹೇಳಿದರು; ‘‘ಒಂದು ಅಪರಾಧಿ ಜನಾಂಗದೆಡೆಗೆ ನಮ್ಮನ್ನು ಕಳಿಸಲಾಗಿದೆ’’.

33. ‘‘ಅವರ ಮೇಲೆ ಮಣ್ಣಿನ ಕಲ್ಲುಗಳನ್ನು ಸುರಿಸಬೇಕೆಂದು ನಮಗೆ ಆದೇಶಿಸಲಾಗಿದೆ’’.

34. ‘‘ನಿಮ್ಮ ಒಡೆಯನ ಬಳಿ ಅವುಗಳನ್ನು (ಆ ಕಲ್ಲುಗಳನ್ನು), ಅತಿರೇಕ ಎಸಗುವವರಿಗೆಂದೇ ಗುರುತಿಸಿಡಲಾಗಿದೆ’’.

35. ಕೊನೆಗೆ ನಾವು, ಅಲ್ಲಿದ್ದ ವಿಶ್ವಾಸಿಗಳನ್ನು ಹೊರತೆಗೆದೆವು.

36. ಅಲ್ಲಿ (ಆ ನಾಡಿನಲ್ಲಿ) ನಾವು ಮುಸ್ಲಿಮರ ಒಂದು ಮನೆಯನ್ನು ಮಾತ್ರ ಕಂಡೆವು.

37. ಮತ್ತು ಕಠಿಣ ಶಿಕ್ಷೆಯನ್ನು ಅಂಜುವವರಿಗಾಗಿ ಅಲ್ಲಿ ನಾವು ಒಂದು ಪಾಠದಾಯಕ ಸೂಚನೆಯನ್ನು ಬಿಟ್ಟಿರುವೆವು.

38. ಮತ್ತು ಮೂಸಾರಲ್ಲೂ (ಪಾಠವಿದೆ). ಅವರನ್ನು ನಾವು ಸ್ಪಷ್ಟವಾದ ಆಧಾರದೊಂದಿಗೆ ಫಿರ್‌ಔನನ ಕಡೆಗೆ ಕಳಿಸಿದಾಗ,

39. ಅವನು (ಫಿರ್‌ಔನನು) ತನ್ನ ಶಕ್ತಿಯ ಗುಂಗಿನಲ್ಲಿ ಬಂಡಾಯವೆದ್ದನು ಮತ್ತು (ಮೂಸಾರನ್ನು) ಜಾದೂಗಾರ ಹಾಗೂ ಹುಚ್ಚನೆಂದು ಕರೆದನು.

40. ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದೆವು ಹಾಗೂ ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅವನು ನಿಂದನೆಗೆ ಅರ್ಹನಾಗಿದ್ದನು.

41. ಮತ್ತು ಆದ್ ಜನಾಂಗದಲ್ಲೂ (ಪಾಠವಿದೆ). ನಾವು ಅವರ ಮೇಲೆ ಒಂದು ಮಾರಕ ಚಂಡಮಾರುತವನ್ನು ಹೇರಿದೆವು.

42. ಅದು ತನ್ನೆದುರು ಬಂದ ಪ್ರತಿಯೊಂದು ವಸ್ತುವನ್ನೂ ಕೊಳೆತ ಮೂಳೆಯಂತಾಗಿಸಿ ಬಿಡುತ್ತಿತ್ತು.

43. ಮತ್ತು ಸಮೂದ್ ಜನಾಂಗದಲ್ಲೂ (ಪಾಠವಿದೆ). ಒಂದು ನಿರ್ದಿಷ್ಟ ಅವಧಿಯ ತನಕ ಸುಖ ಅನುಭವಿಸಿರಿ ಎಂದು ಅವರೊಡನೆ ಹೇಳಲಾದಾಗ.

44. ಅವರು ತಮ್ಮ ಒಡೆಯನ ಆದೇಶದೆದುರು ಬಂಡಾಯವೆದ್ದರು. ಕೊನೆಗೆ, ಅವರು ನೋಡುತ್ತಿದ್ದಂತೆಯೇ ಸಿಡಿಲೊಂದು ಅವರ ಮೇಲೆರಗಿತು.

45. ಕೊನೆಗೆ ಅವರು ಎದ್ದು ನಿಲ್ಲಲಿಕ್ಕೂ ಅಶಕ್ತರಾದರು ಮತ್ತು ಪ್ರತೀಕಾರವೆಸಗಲಿಕ್ಕೂ ಅಸಮರ್ಥರಾದರು.

46. ಅವರಿಗಿಂತ ಹಿಂದಿನ ನೂಹರ ಜನಾಂಗದಲ್ಲೂ (ಪಾಠವಿದೆ). ಅವರು ಅವಿಧೇಯರಾಗಿದ್ದರು.

47. ನಾವು ಆಕಾಶವನ್ನು ಕೈಯಾರೆ ನಿರ್ಮಿಸಿರುವೆವು. ನಾವು ಖಂಡಿತ ವಿಶಾಲ ಸಾಮರ್ಥ್ಯ ಉಳ್ಳವರಾಗಿರುವೆವು.

48. ಮತ್ತು ಭೂಮಿಯನ್ನು ನಾವು ಹಾಸಿನಂತಾಗಿಸಿರುವೆವು. ನಾವಂತೂ ಅತ್ಯುತ್ತಮವಾಗಿ ಹಾಸುವವರಾಗಿರುವೆವು.

49. ನಾವು ಪ್ರತಿಯೊಂದು ವಸ್ತುವಿನಿಂದಲೂ ಎರಡು ಬಗೆಗಳನ್ನು (ಜೊತೆಗಳನ್ನು ) ಸೃಷ್ಟಿಸಿರುವೆವು. ನೀವು ಪಾಠ ಕಲಿಯಬೇಕೆಂದು.

50. ನೀವು ಅಲ್ಲಾಹನೆಡೆಗೆ ಧಾವಿಸಿರಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ.

51. ಮತ್ತು ನೀವು ಅಲ್ಲಾಹನ ಜೊತೆ ಬೇರೊಬ್ಬರನ್ನು ದೇವರಾಗಿಸಿಕೊಳ್ಳಬೇಡಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ.

52. ಇದೇ ರೀತಿ, ಅವರಿಗಿಂತ ಹಿಂದಿನವರು ತಮ್ಮ ಬಳಿಗೆ ಬಂದಿದ್ದ ಯಾವ ದೂತರನ್ನೂ ಜಾದೂಗಾರ ಅಥವಾ ಹುಚ್ಚ ಎಂದು ಕರೆಯದೆ ಬಿಟ್ಟಿರಲಿಲ್ಲ.

53. ಅವರೇನು ಪರಸ್ಪರರಿಗೆ ಇದನ್ನೇ ಬೋಧಿಸಿರುವರೇ? ನಿಜವಾಗಿ ಅವರು ವಿದ್ರೋಹಿಗಳಾಗಿದ್ದಾರೆ.

54. ನೀವು ಅವರನ್ನು ಕಡೆಗಣಿಸಿರಿ. ನಿಮ್ಮ ಮೇಲೆ ಯಾವ ದೋಷವೂ ಇಲ್ಲ.

55. ನೀವು ಉಪದೇಶಿಸಿರಿ. ಖಂಡಿತವಾಗಿಯೂ ಉಪದೇಶವು ವಿಶ್ವಾಸಿಗಳ ಪಾಲಿಗೆ ಲಾಭದಾಯಕವಾಗಿರುತ್ತದೆ.

56. ನಾನು ಜಿನ್ನ್‌ಗಳನ್ನು ಹಾಗೂ ಮಾನವರನ್ನು ನನ್ನ ಆರಾಧನೆಗೆಂದೇ ಸೃಷ್ಟಿಸಿರುವೆನು.

57. ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ನಾನು ಅಪೇಕ್ಷಿಸುವುದಿಲ್ಲ.

58. ಖಂಡಿತವಾಗಿಯೂ ಅಲ್ಲಾಹನೇ ಎಲ್ಲರ ಅನ್ನದಾತನೂ ಭಾರೀ ಶಕ್ತಿ ಶಾಲಿಯೂ ಪರಮ ಸಮರ್ಥನೂ ಆಗಿದ್ದಾನೆ.

59. ಅಕ್ರಮವೆಸಗಿದವರಿಗಾಗಿ (ಅವರ ಶಿಕ್ಷೆಗಾಗಿ), ಅವರ ಸಂಗಾತಿಗಳಿಗೆ ನಿಶ್ಚಿತವಾಗಿದ್ದಂತಹದೇ ಕಾಲವೊಂದು ನಿಶ್ಚಿತವಾಗಿದೆ. ಆದ್ದರಿಂದ ಅವರು ಆತುರ ಪಡದಿರಲಿ.

60. ತಮಗೆ ವಾಗ್ದಾನ ಮಾಡಲಾದ (ಪುನರುತ್ಥಾನ) ದಿನವನ್ನು ಧಿಕ್ಕರಿಸಿದವರಿಗೆ ವಿನಾಶ ಕಾದಿದೆ.