53. An Najm

53. ಅನ್ನಜ್ಮ್ (ತಾರೆಗಳು)

ವಚನಗಳು – 62, ಮಕ್ಕಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ನಕ್ಷತ್ರವು ಕಣ್ಮರೆಯಾಗುವ ಸಮಯದ ಆಣೆ.

2. ನಿಮ್ಮ ಸಂಗಾತಿ (ದೂತರು) ದಾರಿತಪ್ಪಿಲ್ಲ ಮತ್ತು ಅವರು ತಪ್ಪು ದಾರಿಯಲ್ಲಿ ನಡೆಯುತ್ತಿಲ್ಲ.

3. ಅವರು ತಮ್ಮ ಅಪೇಕ್ಷೆಯಿಂದ ಮಾತನಾಡುವುದಿಲ್ಲ.

4. ಇದು, (ಕುರ್‌ಆನ್) – ಅವರಿಗೆ ನೀಡಲಾಗಿರುವ ದಿವ್ಯ ಸಂದೇಶವಲ್ಲದೆ ಬೇರೇನಲ್ಲ.

5. ಇದನ್ನು ಅವರಿಗೆ ಶಕ್ತಿಶಾಲಿಯಾಗಿರುವವನು (ಮಲಕ್) ಕಲಿಸಿ ಕೊಟ್ಟಿರುವನು.

6. ಅವನು ತುಂಬಾ ಬಲಿಷ್ಠನು. ಅವನು (ನಿಜರೂಪದಲ್ಲಿ) ಮುಂದೆ ಬಂದನು.

7. ಅವನು ಬಾನಿನ ಎತ್ತರದ ಅಂಚಿನಲ್ಲಿದ್ದನು.

8. ಮತ್ತೆ ಅವನು ಹತ್ತಿರ ಬಂದನು ಮತ್ತು ಇನ್ನಷ್ಟು ನಿಕಟನಾದನು.

9. ಕೊನೆಗೆ ಅವನು ಬಿಲ್ಲಿನ ಎರಡು ತುದಿಗಳಷ್ಟು ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿದ್ದನು.

10. ಆಬಳಿಕ, ಅವನು (ಅಲ್ಲಾಹನು) ತನ್ನ ದಾಸನಿಗೆ ನೀಡಬೇಕಾದ ಸಂದೇಶವನ್ನು ನೀಡಿದನು.

11. ತಾನು ಕಂಡದ್ದು ಸುಳ್ಳೆಂದು ಅವರ (ದೂತರ) ಮನಸ್ಸು ಹೇಳಲಿಲ್ಲ.

12. ನೀವೀಗ, ಅವರು ಕಂಡದ್ದರ ಕುರಿತು ಅವರೊಡನೆ ಜಗಳಾಡುವಿರಾ?

13. ಅವರು ಆತನನ್ನು ಎರಡನೇ ಬಾರಿಯೂ ಕಂಡರು.

14. ‘ಸಿದ್ರತುಲ್ ಮುನ್‌ತಹಾ’ದ ಬಳಿ

15. ಅದರ ಬಳಿಯೇ ಇದೆ, ಸ್ವರ್ಗದ ವಿಶ್ರಾಂತಿ ನಿಲಯ.

16. ಸಿದ್ರಃವನ್ನು ಏನು ಆವರಿಸಿತೋ ಅದು ಆವರಿಸಿದಾಗ,

17. ದೃಷ್ಟಿಯು ಎಡವಲೂ ಇಲ್ಲ, ಮಿತಿಮೀರಲೂ ಇಲ್ಲ.

18. ಖಚಿತವಾಗಿ ಅವರು ತಮ್ಮ ಒಡೆಯನ ಕೆಲವು ದೊಡ್ಡ ಪ್ರಮಾಣಗಳನ್ನು ಕಂಡರು.

19. ನೀವು ಕಂಡಿರಾ ‘ಲಾತ್’ ಹಾಗೂ ‘ಉಝ್ಝಾ’ ಗಳನ್ನು?

20. ಮತ್ತು ‘ಮನಾತ್’ ಎಂಬ ಮೂರನೆಯದೊಂದನ್ನು?

21. ನಿಮಗೆ ಪುತ್ರರು ಮತ್ತು ಅವನಿಗೆ ಪುತ್ರಿಯರೇ?

22. ಇದು ತೀರಾ ಅಸಮರ್ಪಕ ವಿತರಣೆಯಾಗಿದೆ.

23. ನಿಜವಾಗಿ ಅವೆಲ್ಲಾ ಕೇವಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟು ಬಿಟ್ಟಿರುವ ಕೆಲವು ಹೆಸರುಗಳು ಮಾತ್ರ. ಅದರ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿ ಕೊಟ್ಟಿಲ್ಲ. ಅವರು ಕೇವಲ ತಮ್ಮ ಊಹೆಯನ್ನು ಹಾಗೂ ಸ್ವೇಚ್ಛೆಯನ್ನು ಮಾತ್ರವೇ ಅನುಸರಿಸುತ್ತಿದ್ದಾರೆ. ಇದೀಗ ಅವರ ಬಳಿಗೆ ಅವರ ಒಡೆಯನ ಕಡೆಯಿಂದ ಮಾರ್ಗದರ್ಶನವು ಬಂದಿದೆ.

24. ಮನುಷ್ಯನಿಗೇನು, ಅವನು ಬಯಸಿದ್ದೆಲ್ಲವೂ ಸಿಕ್ಕಿ ಬಿಡುತ್ತದೆಯೇ?

25. ನಿಜವಾಗಿ, ಅಂತ್ಯವೂ ಆದಿಯೂ ಅಲ್ಲಾಹನಿಗೇ ಸೇರಿದೆ.

26. ಆಕಾಶಗಳಲ್ಲಿ ಅದೆಷ್ಟೋ ‘ಮಲಕ್’ಗಳಿದ್ದಾರೆ. ಅವರ ಶಿಫಾರಸ್ಸಿನಿಂದ ಯಾವ ಲಾಭವೂ ಆಗುವುದಿಲ್ಲ – ತಾನಿಚ್ಛಿಸುವವನ ಪರವಾಗಿ ಅಲ್ಲಾಹನು ಅನುಮತಿ ನೀಡುವ ಹಾಗೂ ಅವನು ಇಷ್ಟ ಪಡುವ ಮುನ್ನ.

27. ಪರಲೋಕದಲ್ಲಿ ನಂಬಿಕೆ ಇಲ್ಲದವರು ಮಲಕ್‌ಗಳಿಗೆ ಹೆಣ್ಮಕ್ಕಳ ಹೆಸರುಗಳನ್ನಿಡುತ್ತಾರೆ.

28. ಅವರಿಗೆ ಆ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಮತ್ತು ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಲ್ಲ.

29. ನಮ್ಮ ಉಪದೇಶದಿಂದ ಮುಖ ತಿರುಗಿಸಿ ಕೊಂಡಿರುವವನನ್ನು ಕಡೆಗಣಿಸಿರಿ – ಅವನು ಬಯಸುವುದು ಕೇವಲ ಇಹಲೋಕದ ಬದುಕನ್ನು ಮಾತ್ರ.

30. ಅದುವೇ ಅವರ ಜ್ಞಾನದ ಮಿತಿಯಾಗಿದೆ. ಖಂಡಿತವಾಗಿಯೂ ನಿಮ್ಮ ಒಡೆಯನು – ತನ್ನ ಮಾರ್ಗದಿಂದ ದೂರ ಸರಿದಿರುವವನು ಯಾರೆಂಬುದನ್ನು ಚೆನ್ನಾಗಿ ಬಲ್ಲನು ಮತ್ತು ಸರಿದಾರಿಯಲ್ಲಿರುವವನು ಯಾರೆಂಬುದನ್ನೂ ಅವನು ಚೆನ್ನಾಗಿ ಬಲ್ಲನು.

31. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಅವನು ಅವರ ಕರ್ಮಕ್ಕನುಸಾರವಾದ ಪ್ರತಿಫಲವನ್ನು ನೀಡುವನು ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಸತ್ಫಲವನ್ನು ನೀಡುವನು.

  32. ಅವರು (ಸತ್ಕರ್ಮಿಗಳು), ಸಣ್ಣ ಪುಟ್ಟ ಪ್ರಮಾದಗಳ ಹೊರತು, ಎಲ್ಲ ದೊಡ್ಡ ಪಾಪಕೃತ್ಯಗಳಿಂದ ಹಾಗೂ ಅಶ್ಲೀಲ ಕಾರ್ಯಗಳಿಂದ ದೂರ ಉಳಿಯುತ್ತಾರೆ. ಖಂಡಿತವಾಗಿಯೂ ನಿಮ್ಮೊಡೆಯನು ವಿಶಾಲ ಕ್ಷಮಾ ಗುಣ ಉಳ್ಳವನಾಗಿದ್ದಾನೆ. ಅವನಂತೂ, ತಾನು ನಿಮ್ಮನ್ನು ಭೂಮಿಯಿಂದ ಹುಟ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಹೊಟ್ಟೆಗಳೊಳಗೆ ಪುಟ್ಟ ಮಕ್ಕಳಾಗಿದ್ದಾಗಲೂ ನಿಮ್ಮನ್ನು ಚೆನ್ನಾಗಿ ಬಲ್ಲನು. ನೀವು ನಿಮ್ಮ ಪಾವಿತ್ರದ ಕುರಿತು ಕೊಚ್ಚಿಕೊಳ್ಳಬೇಡಿ. ಧರ್ಮನಿಷ್ಠನು ಯಾರೆಂಬುದನ್ನು ಅವನು ಚೆನ್ನಾಗಿ ಬಲ್ಲನು.

33. ನೀವು ನೋಡಿದಿರಾ, ಮುಖ ತಿರುಗಿಸಿ ಕೊಂಡವನನ್ನು?

34. ಅವನು ಸ್ವಲ್ಪವನ್ನು ಮಾತ್ರ (ದಾನವಾಗಿ) ಕೊಟ್ಟನು ಮತ್ತು (ಉಳಿದುದನ್ನು) ತಡೆದಿಟ್ಟುಕೊಂಡನು.

35. ಅವನ ಬಳಿ ಕಾಣದ ಲೋಕದ ಜ್ಞಾನವಿದೆಯೇ ಮತ್ತು ಅವನು ಅದನ್ನು (ಕಾಣದ ಲೋಕವನ್ನು) ಕಾಣುತ್ತಿದ್ದಾನೆಯೇ?

36. ಅವನಿಗೆ ತಿಳಿಸಲಾಗಿಲ್ಲವೇ, ಮೂಸಾರ ಹೊತ್ತಗೆಗಳಲ್ಲಿರುವ ವಿಷಯವನ್ನು?

37. ಮತ್ತು (ದಿವ್ಯಾದೇಶಗಳನ್ನು) ಪಾಲಿಸಿದ ಇಬ್ರಾಹೀಮರ (ಸಮಾಚಾರವನ್ನು)?

38. (ಪರಲೋಕದಲ್ಲಿ) ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು.

39. ಮತ್ತು ಮಾನವನಿಗೆ, ಅವನು ಶ್ರಮಿಸಿದಷ್ಟಲ್ಲದೆ ಬೇರೇನೂ ಸಿಗದು.

40. ಮತ್ತು ಅವನ ಶ್ರಮವು (ಪ್ರತಿಫಲದ ರೂಪದಲ್ಲಿ) ಬೇಗನೇ ಕಾಣಲು ಸಿಗುವುದು.

41. ಆ ಬಳಿಕ ಅವನಿಗೆ ಪೂರ್ಣ ಪ್ರತಿಫಲ ನೀಡಲಾಗುವುದು.

42. ಮತ್ತು (ಎಲ್ಲವೂ ತೆರಳುವ) ಅಂತಿಮ ನೆಲೆಯು ನಿಮ್ಮ ಒಡೆಯನ ಕಡೆಗೇ ಇದೆ.

43. ಖಂಡಿತವಾಗಿಯೂ ಅವನೇ (ಅಲ್ಲಾಹನೇ) ನಗಿಸುತ್ತಾನೆ ಮತ್ತು ಅಳಿಸುತ್ತಾನೆ.

44. ಮತ್ತು ಅವನೇ ಸಾಯಿಸುತ್ತಾನೆ ಮತ್ತು ಬದುಕಿಸುತ್ತಾನೆ.

45. ಅವನೇ, ಗಂಡು ಮತ್ತು ಹೆಣ್ಣೆಂಬ ಜೊತೆಗಳನ್ನು ಸೃಷ್ಟಿಸಿದವನು –

46. – ಸುರಿಸಲಾದ ವೀರ್ಯದಿಂದ.

47. ಪುನಃ ಜೀವಂತಗೊಳಿಸುವ ಹೊಣೆಯೂ ಅವನ ಮೇಲೆಯೇ ಇದೆ.

48. ಅವನೇ, ಸ್ವಾಯತ್ತಗೊಳಿಸಿದವನು ಹಾಗೂ ಸಂಪನ್ನಗೊಳಿಸಿದವನು.

49. ಅವನೇ ‘ಶಿಅ್ರಾ’ದ (ತಾರೆಯ) ಒಡೆಯನು.

50. ಅವನೇ, ಪ್ರಥಮ ‘ಆದ್’ರನ್ನು ನಾಶ ಮಾಡಿದವನು.

51. ಮತ್ತು ಸಮೂದರನ್ನೂ ಅಷ್ಟೇ. ಅವನು (ಅವರಲ್ಲಿ) ಯಾರನ್ನೂ ಉಳಿಸಲಿಲ್ಲ.

52. ಈ ಹಿಂದೆ ನೂಹರ ಜನಾಂಗವನ್ನು (ಅವನು ನಾಶಮಾಡಿದ್ದನು). ಖಂಡಿತವಾಗಿಯೂ ಅವರು ತುಂಬಾ ಅಕ್ರಮಿಗಳಾಗಿದ್ದರು ಹಾಗೂ ವಿದ್ರೋಹಿಗಳಾಗಿದ್ದರು.

53. ಮತ್ತು ಅವನು ಮಗುಚಿ ಬಿದ್ದ (ಲೂತ್‌ರ ಜನಾಂಗದ) ನಾಡನ್ನು ನುಚ್ಚು ನೂರು ಮಾಡಿದನು.

54. ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು.

55. (ಮಾನವಾ,) ನೀನಿನ್ನು ನಿನ್ನೊಡೆಯನ ಯಾವೆಲ್ಲ ಕೊಡುಗೆಗಳ ಕುರಿತು ಸಂಶಯಿಸುವೆ?

56. ಅವರು (ದೂತರು) ಈ ಹಿಂದೆ ಎಚ್ಚರಿಸಲು ಬಂದವರ ಸಾಲಿನ, ಒಬ್ಬ ಎಚ್ಚರಿಸುವವರಾಗಿದ್ದಾರೆ.

57. ಹತ್ತಿರ ಬರಬೇಕಾದುದು (ಲೋಕಾಂತ್ಯದ ಘಳಿಗೆ) ಹತ್ತಿರ ಬಂದು ಬಿಟ್ಟಿದೆ.

58. ಅಲ್ಲಾಹನ ಹೊರತು ಬೇರಾರೂ ಅದನ್ನು ನಿವಾರಿಸಲಾರರು.

59. ನೀವೇನು ಈ ಮಾತಿನ ಕುರಿತು ಅಚ್ಚರಿ ಪಡುತ್ತಿದ್ದೀರಾ?

60. ಮತ್ತು ನೀವು ನಗುತ್ತೀರಿ, ಅಳುವುದಿಲ್ಲ.

61. ನೀವು ಭಾರೀ ದೊಡ್ಡಸ್ತಿಕೆ ಮೆರೆಯುತ್ತೀರಿ.

62. ಇನ್ನಾದರೂ, ನೀವು ಅಲ್ಲಾಹನಿಗೆ ಸಾಷ್ಟಾಂಗ ವಂದಿಸಿರಿ ಮತ್ತು ಅವನನ್ನೇ ಆರಾಧಿಸಿರಿ.