55. Ar Rahman

55. ಅರ್ರಹ್ಮಾನ್ (ಅಪಾರ ದಯಾಳು),

ವಚನಗಳು – 78, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ.

1. ಅಪಾರ ದಯಾಳು.

2. (ಅವನೇ) ಕುರ್‌ಆನನ್ನು ಕಲಿಸಿರುವನು.

3. ಮನುಷ್ಯನನ್ನು ಸೃಷ್ಟಿಸಿರುವನು.

4. ಅವನಿಗೆ ಮಾತನಾಡಲು ಕಲಿಸಿರುವನು.

5. ಸೂರ್ಯ ಮತ್ತು ಚಂದ್ರ ಒಂದು ನಿರ್ದಿಷ್ಟ ಸೂತ್ರಕ್ಕೆ ಬದ್ಧವಾಗಿವೆ.

6. ಗಿಡಗಳು ಹಾಗೂ ಮರಗಳು ಸಾಷ್ಟಾಂಗವೆರಗುತ್ತವೆ.

7. ಅವನು ಆಕಾಶಗಳನ್ನು ಎತ್ತರಿಸಿರುವನು ಹಾಗೂ ಸಮತೋಲನವನ್ನು ಸ್ಥಾಪಿಸಿರುವನು –

8. – ನೀವು ಸಮತೋಲನವನ್ನು ಮೀರಬಾರದೆಂದು.

9. ಮತ್ತು ನೀವು ನ್ಯಾಯೋಚಿತವಾಗಿ ತೂಗಿರಿ ಮತ್ತು ತೂಕದಲ್ಲಿ ಕಡಿತ ಮಾಡಬೇಡಿ.

10. ಮತ್ತು ಅವನು ಭೂಮಿಯನ್ನು ಜೀವಿಗಳಿಗಾಗಿ ಹಾಸಿರುವನು.

11. ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗೂ ಕವಚವಿರುವ ಖರ್ಜೂರಗಳಿವೆ.

12. ಹೊಟ್ಟು ಹಾಗೂ ಪರಿಮಳದ ಪುಷ್ಪವಿರುವ ಧಾನ್ಯಗಳಿವೆ.

13. ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ?

14. ಅವನು ಮನುಷ್ಯನನ್ನು ಹಂಚಿನಂತಹ ಗಾರೆಮಣ್ಣಿನಿಂದ ಸೃಷ್ಟಿಸಿರುವನು.

15. ಮತ್ತು ಅವನು ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿರುವನು.

16. ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ?

17. ಅವನು ಎರಡು ಪೂರ್ವಗಳ ಹಾಗೂ ಎರಡು ಪಶ್ಚಿಮಗಳ ಒಡೆಯನು.

18. ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲಾ ಕೊಡುಗೆಗಳನ್ನು ಅಲ್ಲಗಳೆಯುವಿರಿ.

19. ಅವನು ಎರಡು ಸಮುದ್ರಗಳನ್ನು ಪರಸ್ಪರ ಒಂದು ಗೂಡಿಸಿರುವನು.

20. ಅವುಗಳ ನಡುವೆ ಒಂದು ತೆರೆ ಇದೆ. ಅವು ಅದನ್ನು ಮೀರುವುದಿಲ್ಲ.

21. ಹೀಗಿರುತ್ತಾ, ನೀವು ನಿಮ್ಮ ಒಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

22. ಅವೆರಡರಿಂದಲೂ ಮುತ್ತು ಹಾಗೂ ಹವಳಗಳು ಹೊರಡುತ್ತವೆ.

23. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

24. ಕಡಲಲ್ಲಿ ಪರ್ವತಗಳಂತೆ ಚಲಿಸುವ ಹಡಗುಗಳ ನಿಯಂತ್ರಣವು ಅವನಿಗೇ ಸೇರಿವೆ.

25. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

26. ಅದರಲ್ಲಿ (ಭೂಮಿಯಲ್ಲಿ) ಇರುವ ಎಲ್ಲವೂ ನಾಶವಾಗಲಿದೆ.

27. ಮತ್ತು ವೈಭವಪೂರ್ಣ ಹಾಗೂ ಮಾನ್ಯನಾದ ನಿಮ್ಮ ಒಡೆಯನು ಮಾತ್ರ ಉಳಿಯುವನು.

28. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

29. ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನೊಡನೆಯೇ ಬೇಡುತ್ತಾರೆ. ಅವನು ನಿತ್ಯವೂ ಸಕ್ರಿಯನಾಗಿರುತ್ತಾನೆ.

30. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲಾ ಅನುಗ್ರಹಗಳನ್ನು ಅಲ್ಲಗಳೆಯುವಿರಿ?

31. ಎರಡು ಭಾರಗಳೇ (ಮಾನವರೇ ಹಾಗೂ ಜಿನ್ನ್‌ಗಳೇ), ಬಹು ಬೇಗನೇ ನಾವು ನಿಮ್ಮತ್ತ ಗಮನ ಹರಿಸಲಿದ್ದೇವೆ.

32. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

33. ಜಿನ್ನ್‌ಗಳೇ ಮತ್ತು ಮಾನವರೇ, ಆಕಾಶಗಳ ಹಾಗೂ ಭೂಮಿಯ ಗಡಿಗಳನ್ನು ಮೀರಿ ಹೋಗಲು ನಿಮಗೆ ಸಾಧ್ಯವಿದ್ದರೆ ಮೀರಿ ಹೋಗಿರಿ. (ಅಲ್ಲಾಹನ) ಆದೇಶವಿಲ್ಲದೆ ಮೀರಿ ಹೋಗಲು ನಿಮಗೆ ಸಾಧ್ಯವಾಗದು.

34. ಹೀಗಿರುತ್ತಾ, ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ನೀವು ಅಲ್ಲಗಳೆಯುವಿರಿ?

35. ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಹಾಗೂ ಹೊಗೆಯನ್ನು ಎರಗಿಸಲಾಗುವುದು ಮತ್ತು (ಅವುಗಳನ್ನು) ಎದುರಿಸಲು ನಿಮಗೆ ಸಾಧ್ಯವಾಗದು.

36. ಹೀಗಿರುತ್ತಾ, ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ನೀವು ಅಲ್ಲಗಳೆಯುವಿರಿ?

37. ಮತ್ತು ಆಕಾಶವು ಬಿರಿದು ಬಿಡುವಾಗ, ಅದು ಬೆಂದ ಚರ್ಮದಂತೆ ಕೆಂಪಾಗಿ ಬಿಡುವುದು.

38.ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

39. ಆ ದಿನ ಯಾವ ಮಾನವನೊಡನೆಯೂ ಯಾವ ಜಿನ್ನಿನೊಡನೆಯೂ ಅವನ ಪಾಪಗಳ ಕುರಿತು ಪ್ರಶ್ನಿಸಲಾಗುವುದು.

40. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

41. (ಅಂದು) ಅಪರಾಧಿಗಳು ತಮ್ಮ ಮುಖಗಳಿಂದಲೇ ಗುರುತಿಸಲ್ಪಡುವರು ಮತ್ತು ಅವರನ್ನು (ಎಳೆದೊಯ್ಯಲು) ಅವರ ಹಣೆ ಹಾಗೂ ಕಾಲುಗಳಿಂದಲೇ ಹಿಡಿಯಲಾಗುವುದು.

42. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

43. ಇದುವೇ, ಅಪರಾಧಿಗಳು ಅಲ್ಲಗಳೆಯುತ್ತಿದ್ದ ನರಕ.

44. (ಅಂದು) ಅವರು ಅದರ (ನರಕಾಗ್ನಿಯ) ಹಾಗೂ ಕುದಿಯುವ ನೀರಿನ ನಡುವೆ ಅಲೆದಾಡುತ್ತಿರುವರು.

45. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

46. ತನ್ನೊಡೆಯನ ಮುಂದೆ ನಿಲ್ಲಲಿಕ್ಕಿದೆ ಎಂದು ಅಂಜುತ್ತಿದ್ದವನಿಗೆ (ಅಂದು) ಎರಡೆರಡು ತೋಟಗಳಿರುವವು.

47. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

48. ಅವು ಧಾರಾಳ ಶಾಖೆಗಳಿರುವ (ತೋಟಗಳಾಗಿರುವವು)

49. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

50. ಅವುಗಳಲ್ಲಿ ಎರಡೆರಡು ಝರಿಗಳು ಹರಿಯುತ್ತಿರುವವು.

51. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

52. ಅವುಗಳಲ್ಲಿ ಎಲ್ಲ ಜಾತಿಯ ಹಣ್ಣುಗಳ ಎರಡೆರಡು ಬಗೆಗಳಿರುವವು.

53. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

54. ಅವರು ರೇಶ್ಮೆ ಹೊದಿಸಿದ ನೆಲದಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು ಮತ್ತು ಎರಡೂ ತೋಟಗಳ ಹಣ್ಣುಗಳು ಅವರಿಗೆ ಸಮೀಪವಾಗಿರುವವು.

55. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

 56. ಅವುಗಳಲ್ಲಿ, ದೃಷ್ಟಿ ತಗ್ಗಿಸಿರುವ ಸ್ತ್ರೀಯರಿರುವರು. ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು.

57. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

58. ಅವರೆಲ್ಲ ಮಾಣಿಕ್ಯ ಹಾಗೂ ಹವಳಗಳೋ ಎಂಬಂತಿರುವರು.

59. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

60. ಸೌಜನ್ಯದ ಪ್ರತಿಫಲ ಸೌಜನ್ಯವಲ್ಲದೆ ಮತ್ತೇನು. ?

 61. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

62. ಅವೆರಡಲ್ಲದೆ ಇನ್ನೂ ಎರಡು ತೋಟಗಳಿವೆ.

 63. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡೆಗೆಗಳನ್ನು ಅಲ್ಲಗಳೆಯುವಿರಿ?

64. ಹಚ್ಚ ಹಸಿರು ವರ್ಣದವುಗಳು.

65. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

66. ಅವುಗಳಲ್ಲಿ ಉತ್ಸಾಹದಿಂದ ಉಕ್ಕಿ ಹರಿಯುವ ಎರಡು ಚಿಲುಮೆಗಳಿವೆ.

67. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

68. ಅವುಗಳಲ್ಲಿ, ಹಣ್ಣು ಹಂಪಲುಗಳು, ಖರ್ಜೂರದ ಗಿಡಗಳು ಹಾಗೂ ದಾಳಿಂಬೆ ಹಣ್ಣುಗಳಿವೆ.

 69. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಅನುಗ್ರಹಗಳನ್ನು ಅಲ್ಲಗಳೆಯುವಿರಿ?

70. ಅವುಗಳಲ್ಲಿ ಸುಶೀಲೆಯರಾದ ಸುಂದರಿಯರಿರುವರು.

 71. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

72. ಆ ಸ್ವರ್ಗ ಕನ್ಯೆಯರು ಶಿಬಿರಗಳಲ್ಲಿ ಅವಿತಿರುವರು.

73. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

74. ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್‌ಗಳಾಗಲಿ ಮುಟ್ಟಿರಲಾರರು.

75. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

76. ಅವರು ಹಸಿರು ಹೊದಿಕೆ ಹಾಗೂ ನುಣುಪಾದ ದಿಂಬುಗಳ ಮೇಲೆ ಒರಗಿರುವರು.

77. ಹೀಗಿರುತ್ತಾ, ನೀವು ನಿಮ್ಮೊಡೆಯನ ಯಾವೆಲ್ಲ ಕೊಡುಗೆಗಳನ್ನು ಅಲ್ಲಗಳೆಯುವಿರಿ?

78. ವೈಭವಪೂರ್ಣ ಹಾಗೂ ಗೌರವಾನ್ವಿತನಾದ ನಿಮ್ಮ ಒಡೆಯನ ಹೆಸರು ಸಮೃದ್ಧಿದಾಯಕವಾಗಿದೆ.