59. Al Hashr

59. ಅಲ್ ಹಶ್ರ್ (ಜಮಾವಣೆ),

ವಚನಗಳು – 24, ಮದೀನಃ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ. 

1. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿದ್ದಾನೆ.

2. ಅವನೇ, ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು ಪ್ರಥಮ ಉಚ್ಚಾಟನೆಯ ವೇಳೆ ಅವರ ಮನೆಗಳಿಂದ ಹೊರಡಿಸಿದವನು. ಅವರು ಹೊರಡುವರೆಂದು ನೀವೆಂದೂ ಭಾವಿಸಿರಲಿಲ್ಲ. ಅತ್ತ ಅವರು, ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ರಕ್ಷಿಸಬಲ್ಲವೆಂದು ಭಾವಿಸಿ ಕೊಂಡಿದ್ದರು. ಆದರೆ ಅಲ್ಲಾಹನು ಅವರೆಂದೂ ಊಹಿಸಿಲ್ಲದ ಕಡೆಯಿಂದ ಅವರ ಬಳಿಗೆ ಬಂದನು – ಮತ್ತು ಅವರ ಮನಸ್ಸುಗಳಲ್ಲಿ ಭೀತಿಯನ್ನು ಬಿತ್ತಿದನು. (ಇದರ ಫಲವಾಗಿ) ಅವರು ಸ್ವತಃ ತಮ್ಮ ಕೈಗಳಿಂದ ತಮ್ಮ ನಿವಾಸಗಳನ್ನು ಕೆಡವಿ ಹಾಕ ತೊಡಗಿದರು. ವಿಶ್ವಾಸಿಗಳ ಕೈಗಳಿಂದಲೂ (ಅದನ್ನೇ ಮಾಡಿಸಲಾಯಿತು). ದೃಷ್ಟಿಯುಳ್ಳವರೇ, ಪಾಠ ಕಲಿಯಿರಿ.

3. ಒಂದು ವೇಳೆ ಅವರು ನಾಡು ಬಿಟ್ಟು ಹೋಗ ಬೇಕೆಂದು ಅಲ್ಲಾಹನು ಮೊದಲೇ ಬರೆದಿಲ್ಲದಿರುತ್ತಿದ್ದರೆ ಅವನು ಇಹ ಲೋಕದಲ್ಲೇ ಅವರನ್ನು ಖಂಡಿತ ಶಿಕ್ಷಿಸುತ್ತಿದ್ದನು. ಪರಲೋಕದಲ್ಲಂತು ಅವರಿಗೆ ನರಕಾಗ್ನಿಯ ಶಿಕ್ಷೆ ಇದ್ದೇ ಇದೆ.

4. ಇದೇಕೆಂದರೆ, ಅವರು ಅಲ್ಲಾಹ್ ಮತ್ತವನ ದೂತರನ್ನು ವಿರೋಧಿಸಿದ್ದರು. ಅಲ್ಲಾಹನನ್ನು ವಿರೋಧಿಸಿದವರಿಗೆ ಅಲ್ಲಾಹನು ಖಂಡಿತ ಕಠಿಣ ಶಿಕ್ಷೆ ನೀಡುವನು.

5. (ವಿಶ್ವಾಸಿಗಳೇ,) ನೀವು ಖರ್ಜೂರದ ಕೆಲವು ಗಿಡಗಳನ್ನು ಕಡಿದು ಹಾಕಿದ್ದು ಅಥವಾ ಕೆಲವನ್ನು ಅವುಗಳ ಕಾಂಡದಲ್ಲಿ ನಿಂತಿರಲು ಬಿಟ್ಟದ್ದು (ಇವೆರಡೂ) ಅಲ್ಲಾಹನ ಆದೇಶಕ್ಕನುಸಾರವಾಗಿತ್ತು ಹಾಗೂ ಅವಿಧೇಯರನ್ನು ಅಪಮಾನಿಸುವುದಕ್ಕಾಗಿತ್ತು.

6. ಅಲ್ಲಾಹನು ಅವರಿಂದ ತನ್ನ ದೂತರಿಗೆ ಕೊಡಿಸಿದ ಸಂಪತ್ತಿಗಾಗಿ ನೀವು ನಿಮ್ಮ ಕುದುರೆಗಳನ್ನಾಗಲೀ ಒಂಟೆಗಳನ್ನಾಗಲೀ ಓಡಿಸಿಲ್ಲ. ನಿಜವಾಗಿ ಅಲ್ಲಾಹನೇ ತನ್ನ ದೂತರಿಗೆ ತಾನಿಚ್ಛಿಸಿದವರ ಮೇಲೆ ನಿಯಂತ್ರಣವನ್ನು ಕೊಟ್ಟು ಬಿಡುತ್ತಾನೆ ಮತ್ತು ಅಲ್ಲಾಹನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದಾನೆ.

7. ಹಳ್ಳಿಯವರಿಂದ ಅಲ್ಲಾಹನು ತನ್ನ ದೂತರಿಗೆ ಕೊಡಿಸಿದ ಸಂಪತ್ತು ಅಲ್ಲಾಹನಿಗೆ, ದೂತರಿಗೆ, ಬಂಧುಗಳಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಸೇರಿದೆ. ಸಂಪತ್ತು ಕೇವಲ ನಿಮ್ಮ ಶ್ರೀಮಂತರ ನಡುವೆ ಸೀಮಿತವಾಗಿ ಉಳಿಯಬಾರದೆಂದು (ಇದನ್ನು ವಿಧಿಸಲಾಗಿದೆ). ದೂತರು ನಿಮಗೆ ನೀಡಿದ್ದನ್ನು ಸ್ವೀಕರಿಸಿ ಕೊಳ್ಳಿರಿ ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ.

8. (ಮತ್ತು ಈ ಸಂಪತ್ತು), ತಮ್ಮ ಮನೆ ಮತ್ತು ಸೊತ್ತುಗಳಿಂದ ದೂರಗೊಳಿಸಲಾದ ಬಡ ಮುಹಾಜಿರ್‌ಗಳಿಗೆ (ವಲಸಿಗರಿಗೆ) ಸೇರಿದೆ. ಅವರು ಅಲ್ಲಾಹನ ಅನುಗ್ರಹವನ್ನು ಮತ್ತು ಅವನ ಮೆಚ್ಚುಗೆಯನ್ನು ಅರಸುತ್ತಿರುತ್ತಾರೆ ಮತ್ತು ಅವರು ಅಲ್ಲಾಹ್ ಮತ್ತವನ ದೂತರ ಸಹಾಯಕರಾಗಿರುತ್ತಾರೆ. ಅವರೇ ಸತ್ಯವಂತರು.

9. ಹಾಗೆಯೇ (ಈ ಸಂಪತ್ತು) ಅವರಿಗಿಂತ (ವಲಸಿಗರಿಗಿಂತ) ಮುನ್ನ, ವಲಸೆಯ ಸ್ಥಾನ (ಮದೀನ)ದಲ್ಲಿ ನೆಲೆಸಿದ್ದ ಹಾಗೂ ವಿಶ್ವಾಸಿಗಳಾಗಿದ್ದವರಿಗೆ (ಅನ್ಸಾರ್‌ಗಳಿಗೆ) ಸೇರಿದೆ. ಅವರು ತಮ್ಮ ಬಳಿಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ, ಅವರಿಗೆ ಏನನ್ನು ನೀಡಲಾಯಿತೋ ಆ ಕುರಿತು ಅವರು ತಮ್ಮ ಮನದಲ್ಲಿ ಆಸೆ ಪಡುವುದಿಲ್ಲ ಮತ್ತು ಸ್ವತಃ ತಾವು ಕಷ್ಟದಲ್ಲಿದ್ದರೂ ಅವರಿಗೆ (ವಲಸಿಗರಿಗೆ) ಪ್ರಾಶಸ್ತ್ಯ ನೀಡುತ್ತಾರೆ. ಮನಸ್ಸಿನ ಸಣ್ಣ ತನದಿಂದ ರಕ್ಷಿಸಲ್ಪಟ್ಟವರೇ ವಿಜಯಿಗಳು.

10. ಹಾಗೆಯೇ ಅದು, ಅವರ ನಂತರ ಬಂದವರಿಗೂ (ಸೇರಿದೆ). ‘‘ ನಮ್ಮೊಡೆಯಾ, ನಮ್ಮನ್ನು ಹಾಗೂ ನಮಗಿಂತ ಮುನ್ನ ವಿಶ್ವಾಸಿಗಳಾಗಿದ್ದ ನಮ್ಮ ಸಹೋದರರನ್ನು ಕ್ಷಮಿಸು. ವಿಶ್ವಾಸಿಗಳ ಕುರಿತು ನಮ್ಮ ಮನಸ್ಸುಗಳಲ್ಲಿ ಯಾವುದೇ ದುರ್ಭಾವನೆಯನ್ನು ಬೆಳೆಸಬೇಡ. ನಮ್ಮೊಡೆಯಾ ನೀನು ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವೆ’’ ಎಂದು ಅವರು ಪ್ರಾರ್ಥಿಸುತ್ತಾರೆ.

11. ನೀವು ಕಪಟಿಗಳನ್ನು ನೋಡಲಿಲ್ಲವೇ? ಅವರು, ಗ್ರಂಥದವರ ಪೈಕಿ ತಮ್ಮ ಧಿಕ್ಕಾರಿ ಸಹೋದರರೊಡನೆ ‘‘ಒಂದು ವೇಳೆ ನಿಮ್ಮನ್ನು (ನಾಡಿನಿಂದ) ಹೊರ ಹಾಕಲಾದರೆ ನಾವು ಕೂಡಾ ನಿಮ್ಮ ಜೊತೆ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವೆಂದೂ ಯಾರನ್ನೂ ಅನುಸರಿಸಲಾರೆವು – ಮತ್ತು ನಿಮ್ಮ ವಿರುದ್ಧ ಯುದ್ಧ ನಡೆದರೆ ನಾವು ನಿಮಗೆ ನೆರವಾಗುವೆವು ’’ ಎಂದು ಹೇಳುತ್ತಾರೆ. ಅವರು ಸುಳ್ಳು ಹೇಳುತ್ತಿದ್ದಾರೆಂಬುದಕ್ಕೆ ಅಲ್ಲಾಹನೇ ಸಾಕ್ಷಿಯಾಗಿದ್ದಾನೆ.

12. ಒಂದು ವೇಳೆ ಅವರನ್ನು (ಗ್ರಂಥದವರಲ್ಲಿನ ಧಿಕ್ಕಾರಿಗಳನ್ನು) ಹೊರಹಾಕಲಾದರೆ ಇವರೇನೂ ಅವರ ಜೊತೆ ಹೊರಡಲಾರರು ಮತ್ತು ಒಂದು ವೇಳೆ ಅವರ ವಿರುದ್ಧ ಯುದ್ಧ ನಡೆದರೆ ಇವರೇನೂ ಅವರಿಗೆ ನೆರವಾಗಲಾರರು. ಒಂದು ವೇಳೆ ನೆರವಾದರೂ (ಬಹು ಬೇಗನೆ) ಬೆನ್ನು ತಿರುಗಿಸಿ ಓಡುವರು ಮತ್ತು ಅವರಿಗೆ ಎಲ್ಲಿಂದಲೂ ನೆರವು ದೊರಯದು.

13. (ವಿಶ್ವಾಸಿಗಳೇ,) ಇದೀಗ ಅವರ ಮನಗಳಲ್ಲಿ ಅಲ್ಲಾಹನಿಗಿಂತ ಹೆಚ್ಚಾಗಿ ನಿಮ್ಮ ಭಯವು ನೆಲೆಸಿದೆ. ಇದೇಕೆಂದರೆ ಅವರು ವಿವೇಚನೆ ಇಲ್ಲದವರಾಗಿದ್ದಾರೆ.

14. ಅವರೆಲ್ಲರೂ ಒಂದಾದರೂ ನಿಮ್ಮ ವಿರುದ್ಧ ನೇರ ಯುದ್ಧಕ್ಕೆ ಇಳಿಯಲಾರರು. ಹೆಚ್ಚೆಂದರೆ ಅವರು ಭದ್ರ ಕೋಟೆಗಳಲ್ಲಿ ಅವಿತು ಕೊಂಡು ಅಥವಾ ಗೋಡೆಗಳ ಮರೆಯಿಂದ ಮಾತ್ರ ಹೋರಾಡ ಬಲ್ಲರು. ಅವರ ಪರಸ್ಪರ ವೈಷಮ್ಯವು ತೀವ್ರವಾಗಿದೆ. ಅವರು ಒಗ್ಗಟ್ಟಾಗಿರುವರೆಂದು ನೀವು ಭಾವಿಸುತ್ತೀರಿ. ಆದರೆ ಅವರ ಮನಸ್ಸುಗಳು ಛಿದ್ರವಾಗಿವೆ. ಇದೇಕೆಂದರೆ, ಅವರು ಬುದ್ಧಿ ಉಳ್ಳವರಲ್ಲ.

15. ಅವರ ಸ್ಥಿತಿಯು ಇತ್ತೀಚೆಗಷ್ಟೇ ತಮ್ಮ ಕೃತ್ಯಗಳ ಫಲವನ್ನು ಅನುಭವಿಸಿದ ಅವರ ಹಿಂದಿನವರಂತಿದೆ. ಅವರಿಗಾಗಿ ಕಠಿಣ ಶಿಕ್ಷೆಯು ಸಿದ್ಧವಾಗಿದೆ.

16. (ಕಪಟಿಗಳ) ಸ್ಥಿತಿಯು ಶೈತಾನನಂತಿದೆ. ಅವನು ಮಾನವನೊಡನೆ ‘‘(ಸತ್ಯವನ್ನು) ದಿಕ್ಕರಿಸು’’ ಎನ್ನುತ್ತಾನೆ. ಮುಂದೆ ಅವನು ಧಿಕ್ಕರಿಸಿದಾಗ, ‘‘ನನಗೆ ನಿನ್ನೊಂದಿಗೆ ಯಾವ ಸಂಬಂಧವೂ ಇಲ್ಲ. ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಅಂಜುತ್ತೇನೆ’’ ಎಂದು ಬಿಡುತ್ತಾನೆ.

17. ಅವರಿಬ್ಬರ ಪಾಲಿಗೂ ನರಕಾಗ್ನಿಯೇ ಅಂತಿಮ ನೆಲೆಯಾಗಿರುವುದು ಮತ್ತು ಅವರು ಸದಾ ಕಾಲ ಅಲ್ಲೇ ಇರುವರು. ಅಕ್ರಮಿಗಳಿಗಿರುವ ಪ್ರತಿಫಲವಿದು.

18. ವಿಶ್ವಾಸಿಗಳೇ, ಅಲ್ಲಾಹನಿಗೆ ಅಂಜಿರಿ. ಮತ್ತು ಪ್ರತಿಯೊಬ್ಬನೂ ತಾನು ನಾಳೆಗಾಗಿ (ಪರಲೋಕಕ್ಕಾಗಿ) ಏನನ್ನು ಮುಂದೆ ಕಳಿಸಿರುವೆನೆಂದು ನೋಡಲಿ. ನೀವು ಅಲ್ಲಾಹನಿಗೆ ಅಂಜಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮೆಲ್ಲ ಕರ್ಮಗಳ ಅರಿವುಳ್ಳವನಾಗಿದ್ದಾನೆ.

19. ನೀವು ಅಲ್ಲಾಹನನ್ನು ಮರೆತವರಂತಾಗಬೇಡಿ. ನಿಜವಾಗಿ ಅವರು ಸ್ವತಃ ತಮ್ಮನ್ನೇ ಮರೆತಿರುವರು. ಅವರೇ ಅವಿಧೇಯರು.

20. ನರಕದವರು ಮತ್ತು ಸ್ವರ್ಗದವರು ಸಮಾನರಲ್ಲ. ಸ್ವರ್ಗದವರೇ ವಿಜಯಿಗಳು.

21. ಒಂದು ವೇಳೆ ನಾವು ಈ ಕುರ್‌ಆನನ್ನು ಒಂದು ಪರ್ವತದ ಮೇಲೆ ಇಳಿಸಿದ್ದರೆ, ಅದು ಅಲ್ಲಾಹನಿಗೆ ಅಂಜಿ ಅವನ ಭಯದಿಂದ ಕಂಪಿಸಿ ನುಚ್ಚುನೂರಾಗುವುದನ್ನು ನೀವು ಕಾಣುತ್ತಿದ್ದಿರಿ. ಇವು, ಅವರು ಚಿಂತನೆ ನಡೆಸಲೆಂದು, ನಾವು ಜನರ ಮುಂದಿಡುತ್ತಿರುವ ಉದಾಹರಣೆಗಳು.

22. ಅವನೇ ಅಲ್ಲಾಹು, ಅವನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಅವನು ಗುಪ್ತವನ್ನೂ ಬಹಿರಂಗವನ್ನೂ ಬಲ್ಲವನು. ಅವನು ಪರಮ ದಯಾಳು, ಕರುಣಾಮಯಿ.

23. ಅವನೇ ಅಲ್ಲಾಹು, ಅವನ ಹೊರತು ಬೇರೆ ಯಾರೂ ಪೂಜಾರ್ಹರಿಲ್ಲ. ಅವನು ನೈಜ ದೊರೆಯೂ, ಪರಮ ಪಾವನನೂ, ಶಾಂತಿ ಸ್ವರೂಪನೂ, ಅಭಯದಾತನೂ, ಮೇಲ್ವಿಚಾರಕನೂ, ಪ್ರಬಲನೂ, ಬಲಿಷ್ಠನೂ, ಮಹಾನನೂ ಆಗಿರುವನು. ಅವರು (ಅವನ ದೇವತ್ವದಲ್ಲಿ) ಪಾಲುಗೊಳಿಸುವ ಎಲ್ಲವುಗಳಿಂದ ಅವನು ಮುಕ್ತನು.

24. ಅವನೇ ಸೃಷ್ಟಿಕರ್ತನೂ ಪ್ರಾರಂಭಿಸುವವನೂ, ರೂಪ ನೀಡುವವನೂ ಆಗಿದ್ದಾನೆ. ಅತ್ಯುತ್ತಮ ನಾಮಗಳು ಅವನಿಗಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನ ಪಾವಿತ್ರವನ್ನು ಜಪಿಸುತ್ತಿವೆ. ಅವನು ಪ್ರಬಲನೂ, ಯುಕ್ತಿವಂತನೂ ಆಗಿರುವನು.